0–6 ವರ್ಷದೊಳಗಿನ ಮಗುವಿಗೆ ದಿನಕ್ಕೆ ಕನಿಷ್ಠ 500 ಕ್ಯಾಲರಿ, 12 ಗ್ರಾಂ ಪ್ರೊಟೀನ್ ಅನ್ನು ಮತ್ತು ಮಗು ತೀವ್ರ ಅಪೌಷ್ಟಿಕವಾಗಿದ್ದಲ್ಲಿ 18–25 ಗ್ರಾಂ ಪ್ರೊಟೀನ್ ಮತ್ತು 800 ಗ್ರಾಂ ಶಕ್ತಿಯ ಆಹಾರವನ್ನು ಶೇಂಗಾ, ಬೆಲ್ಲ, ಬಿಸಿಯೂಟಗಳ ಮೂಲಕ ಅಂಗನವಾಡಿಗಳಲ್ಲಿ ಕೊಡಲಾಗುತ್ತದೆ. ಬಿಸಿಯೂಟವನ್ನು ಸ್ಥಳೀಯ ಮಹಿಳಾ ಮಂಡಳ, ಸ್ವಸಹಾಯ ಗುಂಪು ಅಥವಾ ಊರಿನ ಮಹಿಳೆಯರು ಮಾಡಿಕೊಡಬೇಕೇ ಹೊರತು ಗುತ್ತಿಗೆದಾರರಿಗೆ ಕೊಡುವಂತಿಲ್ಲ ಎಂದು 2001ರಲ್ಲಿ ಸುಪ್ರೀಂ ಕೋರ್ಟು ಆದೇಶ ನೀಡಿದೆ.
ಕರ್ನಾಟಕದಲ್ಲಿ ‘ಮಹಿಳಾ ಪೌಷ್ಟಿಕ ಆಹಾರ ತಯಾರಿಕಾ ಘಟಕಗಳನ್ನು ತಾಲ್ಲೂಕಿಗೆ ಒಂದರಂತೆ ಸ್ಥಾಪಿಸಲಾಗಿದೆ. ಒಂದೊಂದು ಘಟಕದಲ್ಲೂ 20–22 ಹೆಣ್ಣುಮಕ್ಕಳು ಕೆಲಸ ಮಾಡುತ್ತಿದ್ದು ಮಕ್ಕಳಿಗಾಗಿ ಬಿಸಿ ನೀರಲ್ಲಿ ಕಲೆಸಿ ಕೊಡುವಂಥ ಪೋಷಕ ಪೌಡರನ್ನು ತಯಾರಿಸುತ್ತಾರೆ. ಆ ಮೂಲಕ ಪೌಷ್ಟಿಕತೆ, ಅಪೌಷ್ಟಿಕತೆಗಳ ಬಗ್ಗೆ ಜ್ಞಾನವನ್ನೂ ಪಡೆಯುತ್ತಿರುತ್ತಾರೆ.ಗುತ್ತಿಗೆ ಕೊಡಬಾರದು, ಸ್ಥಳೀಯ ಬೇಯಿಸಿದ ಪೌಷ್ಟಿಕ ಆಹಾರವಿರಬೇಕು ಎಂಬೆಲ್ಲ ಸುಪ್ರೀಂ ಕೋರ್ಟಿನ ಮಾರ್ಗದರ್ಶಿ ಸೂತ್ರಗಳನ್ನೂ ಗಾಳಿಗೆ ತೂರಿ ಆಗಿನ ರಾಜ್ಯ ಸರ್ಕಾರವು ತಮಿಳುನಾಡಿನಲ್ಲಿರುವ ಕ್ರಿಸ್ಟಿಫ್ರೈಡ್ ಗ್ರಾಂ ಎನ್ನುವ ಕಂಪೆನಿಗೆ ಕರ್ನಾಟಕದ ಮಕ್ಕಳ ಆಹಾರ ತಯಾರಿಸುವ ಗುತ್ತಿಗೆಯನ್ನು ಕೊಟ್ಟಿತ್ತು.
ಮಕ್ಕಳ ಆಹಾರವನ್ನು ತಯಾರಿಸುತ್ತಿದ್ದ ಸರ್ಕಾರಿ ಸ್ವಾಮ್ಯದ ಕರ್ನಾಟಕ ರಾಜ್ಯ ಆಗ್ರೊ ಕಾರ್ನ್ ಲಿಮಿಟೆಡ್ ಅನ್ನು ಕ್ರಮೇಣ ಈ ಹೊರನಾಡಿನ ಖಾಸಗಿ ಕಂಪೆನಿಯು ತನ್ನ ಹಿಡಿತಕ್ಕೆ ತೆಗೆದುಕೊಂಡು ಅದರ ಬಾಗಿಲಿಗೆ ಬೀಗ ಹಾಕಿಸಿತು.ಮಕ್ಕಳಿಗೆ ಪೌಷ್ಟಿಕವಾದ ಪೋಷಕ ಪೌಡರನ್ನು ತಯಾರಿಸುತ್ತಿದ್ದ ಹೆಣ್ಣುಮಕ್ಕಳು ಮಹಿಳಾ ಸಶಕ್ತೀಕರಣದ ಹೆಸರಲ್ಲಿ ಪೊಟ್ಟಣ ಕಟ್ಟುವ, ಲಾರಿಗೆ ಚೀಲಗಳನ್ನು ತುಂಬುವ, ಇಳಿಸುವ ಕೆಲಸ ಮಾಡಬೇಕಾಯಿತು. ಈ ರೆಡಿಮೇಡ್ ಆಹಾರವನ್ನು ರಾಜ್ಯದೆಲ್ಲೆಡೆ ಮಕ್ಕಳು ಉಣ್ಣಲಿಲ್ಲ, ತಿನ್ನಲಿಲ್ಲ.ನಾಯಿಗೆ, ನರಿಗೆ ತಿನ್ನಿಸಬೇಕಾಯಿತು. ಪೂರಕ ಪೌಷ್ಟಿಕ ಆಹಾರ ಕೊಡಬೇಕಾಗಿದ್ದ ಅಂಗನವಾಡಿಯು ತಿನ್ನಲಾಗದ ಇಂಥ ಬೂಸಾ ಕೊಟ್ಟಿದ್ದರ ಪರಿಣಾಮವಾಗಿ ರಾಜ್ಯದಲ್ಲಿ ಅಪೌಷ್ಟಿಕ ಮಕ್ಕಳ ಸಂಖ್ಯೆ ಒಮ್ಮೆಗೇ ಏರಿತು.
ರಾಯಚೂರು ಜಿಲ್ಲೆಯೊಂದರಲ್ಲಿಯೇ 77 ಸಾವಿರ ಮಕ್ಕಳು ಅಪೌಷ್ಟಿಕತೆಯಿಂದ ಸಾವಿನತ್ತ ಜಾರತೊಡಗಿದವು. ಅಪೌಷ್ಟಿಕತೆಯಿಂದ ರಾಜ್ಯದಲ್ಲಿ ದಿನಕ್ಕೆ ಎರಡು ಮೂರು ಮಕ್ಕಳು ಸಾವಿಗೀಡಾಗುತ್ತಿದ್ದ ದಿನಗಳವು. 2011ರ ಏಪ್ರಿಲ್- ಆಗಸ್ಟ್ನಲ್ಲಿ 2689 ಮಕ್ಕಳು ಅಪೌಷ್ಟಿಕತೆಯಿಂದ ಸಾವಿಗೀಡಾಗಿದ್ದವು. ವರ್ಷಕ್ಕೆ 600 ಕೋಟಿ ರೂಪಾಯಿಗಳ ಬಜೆಟ್ಟಿನ ಮಧ್ಯಾಹ್ನದ ಬಿಸಿಯೂಟವು ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ಕೊಡುವುದರ ಬದಲಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರು, ಉಪನಿರ್ದೇಶಕರಿಗೆ ಲಂಚ ತಿನ್ನಿಸುವ ಯೋಜನೆಯಾಯಿತು.ಲೋಕಾಯುಕ್ತರ ದಾಳಿಯು ಎಲ್ಲವನ್ನೂ ಬೆಳಕಿಗೆ ತರುವ ವೇಳೆಗೆ ಕಂಪೆನಿಯ ಗುತ್ತಿಗೆ ಅವಧಿಯೂ ಮುಗಿದು, ರಾಜ್ಯದಲ್ಲಿ ಹೊಸ ಸರ್ಕಾರವೂ ಬಂದಿದ್ದರ ಪರಿಣಾಮವಾಗಿ ಕೊನೆಗೂ ಗುತ್ತಿಗೆ ರದ್ದಾಯಿತು.
ಮಹಿಳಾ ಪೌಷ್ಟಿಕ ಆಹಾರ ತಯಾರಿಕಾ ಘಟಕಗಳ ದುರುಪಯೋಗ, ಸರಿಯಾದ ಪ್ರಮಾಣದ ಪ್ರೊಟೀನ್ ಮತ್ತು ಶಕ್ತಿ ಇಲ್ಲದ ಆಹಾರ ಕೊಡುತ್ತಿದ್ದುದು, ಆಹಾರಕ್ಕೆ ಒಪ್ಪಿತವಲ್ಲದ ಬಣ್ಣ ಹಾಕುತ್ತಿದ್ದುದು ಇವೆಲ್ಲವನ್ನೂ ಸರ್ಕಾರವೇ ಒಪ್ಪಿಕೊಂಡು ದಾಖಲು ಮಾಡಿದೆ. ರಾಜ್ಯದ ತಾಯಿ ಮತ್ತು ಮಕ್ಕಳ ಮೊಟ್ಟ ಮೊದಲ ಪೋಷಕತ್ವದ ಜವಾಬ್ದಾರಿ ಹೊತ್ತಿರುವ ಇಲಾಖೆಯ ಅಧಿಕಾರಿಗಳು ತಮ್ಮ ನೈತಿಕ ಹೊಣೆಗಾರಿಕೆಯನ್ನೇ ಮಾರಾಟಕ್ಕಿಟ್ಟಿದ್ದರು. ಅತ್ತ ಸಾವಿರಾರು ಮಕ್ಕಳು ಸಾಯುತ್ತಿದ್ದ ಸಂದರ್ಭದಲ್ಲಿ ಲಂಚ ತಿಂದು ತಮ್ಮ ಖಜಾನೆಗಳಲ್ಲಿ ಬಂಗಾರ, ಬೆಳ್ಳಿಗಳನ್ನು ಶೇಖರಿಸುವುದರಲ್ಲಿ ನಿರತರಾಗಿದ್ದರು. ನಿರ್ಲಜ್ಜ, ಹೊಣೆಗೇಡಿತನದ ಪರಮಾವಧಿ ಅದು.
ಕೋರ್ಟು, ಸಮಾಜ ಎಲ್ಲರಿಂದಲೂ ಛೀ, ಥೂ! ಅನ್ನಿಸಿಕೊಂಡರೂ ನಮ್ಮ ಇಲಾಖೆಗೇನೂ ಬುದ್ಧಿ ಬರಲಿಲ್ಲ. ಮತ್ತೆ ಅತ್ತ ಒಡಿಶಾದಲ್ಲಿ ಗಣಿಗಾರಿಕೆ ಮಾಡಿ ಆದಿವಾಸಿಗಳ ಜೀವನದ ಮೇಲೆಯೇ ಮಣ್ಣು ತೂರುತ್ತಿರುವ ಕಂಪೆನಿಯೊಂದಕ್ಕೆ ನಾಲ್ಕು ಜಿಲ್ಲೆಗಳ 2 ಲಕ್ಷ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಒದಗಿಸುವ ಗುತ್ತಿಗೆ ಒಪ್ಪಂದಕ್ಕೆ ಸಹಿ ಹಾಕಿತು. ಇತ್ತ ಬೆಂಗಳೂರಿನಲ್ಲಿಯೇ ಕೊಳೆಗೇರಿಗಳಲ್ಲಿ ಉಚಿತವಾಗಿ ಪೌಷ್ಟಿಕ ಮಾತ್ರೆಗಳನ್ನು ಕೊಡಲು ಇನ್ನೊಂದು ಕಂಪೆನಿಯನ್ನೂ ನೇಮಿಸಿಕೊಂಡಿತು. ಬೆಂಗಳೂರಿನಲ್ಲಿ ಅಪೌಷ್ಟಿಕತೆಯಿಂದ ಮಗು ಮೇಘನಾ ಸಾವಿಗೀಡಾದಾಗ ಮತ್ತೆ ದೊಡ್ಡ ಗುಲ್ಲು.
ಪಬ್ಲಿಕ್ ಹಿಯರಿಂಗ್ ಸಂದರ್ಭದಲ್ಲಿ ಕಂಪೆನಿಯೊಂದು ಸ್ಪಿರ್ಯುಲಿನ ಮಾತ್ರೆಗಳನ್ನು ಕೊಡುತ್ತಿರುವುದು ಪತ್ತೆಯಾಯಿತು. ಅಪೌಷ್ಟಿಕತೆ ನಿವಾರಣೆಗೆ ತಾನು ಉಚಿತವಾಗಿ ಸ್ಪಿರ್ಯುಲಿನ ಕೊಡುತ್ತೇನೆಂದು ಕಂಪೆನಿಯು ಕೇಳಿಕೊಂಡಾಗ ಹಿಂದೆ ಮುಂದೆ ವಿಚಾರ ಮಾಡದೆ ಇಲಾಖೆಯು ಒಪ್ಪಿಕೊಂಡು ತನ್ನ ಪ್ರಾಥಮಿಕ ಜವಾಬ್ದಾರಿಯನ್ನು ಖಾಸಗಿ ಕಂಪೆನಿಯೊಂದರ ಹೆಗಲಿಗೆ ದಾಟಿಸಿತ್ತು.ಸಾರ್ವಜನಿಕ ಜನಸಂವಾದದಲ್ಲಿ ಇದು ಕಟು ವಿಮರ್ಶೆಗೊಳಪಟ್ಟಾಗ ಇಲಾಖೆಯು ಕಂಪೆನಿಯೊಂದಿಗಿನ ತನ್ನ ಗೆಳೆತನವನ್ನು ಮುರಿದು ಒಪ್ಪಂದವನ್ನು ರದ್ದು ಮಾಡಿತು.
ಒಂದು ಕಂಪೆನಿಯ ಗುತ್ತಿಗೆ ರದ್ದಾಗುತ್ತಿರುವ ಹೊತ್ತಿನಲ್ಲಿಯೇ ಅತ್ತ ಇನ್ನೊಂದು ಕಂಪೆನಿಯಿಂದ ಬಳ್ಳಾರಿ ಜಿಲ್ಲೆಯಲ್ಲಿ ತೀವ್ರ ಕುಪೋಷಿತ ಮಕ್ಕಳ ಮೇಲೆ ಪ್ರಯೋಗ ಪ್ರಾರಂಭವಾಗಿತ್ತು. ನೀರಿನಲ್ಲಿ ಅತಿ ಸುಲಭವಾಗಿ ಅತಿ ತೀವ್ರವಾಗಿ ಏನೇನು ಖರ್ಚಿಲ್ಲದೆ ಬೆಳೆಯಬಹುದಾದ ಸ್ಪಿರ್ಯುಲಿನವನ್ನು ಇಲಾಖೆಯ ಒಪ್ಪಿಗೆ ಪಡೆದು ಉಚಿತವಾಗಿ ಮಕ್ಕಳಿಗೆ ನೀಡಲಾಗುತ್ತಿತ್ತು. ಅಂಗನವಾಡಿಯ ಸ್ನೇಹ ಶಿಬಿರಗಳಲ್ಲಿ ಕಂಪೆನಿಯವರನ್ನು ತಾಯಂದಿರಿಗೆ ಪರಿಚಯ ಮಾಡಲಾಗುತ್ತದೆ. ಮುಂದೆ 180 ದಿನಗಳ ಕಾಲ ಆ ಕುಟುಂಬದ ಕುಪೋಷಿತ ಮಗುವಿಗೂ, ಗರ್ಭಿಣಿ, ಬಾಣಂತಿಯರಿಗೂ ಪ್ರತಿನಿತ್ಯ 2 ಗ್ರಾಂ ಸ್ಪಿರ್ಯುಲಿನವನ್ನು ಕಂಪೆನಿಯವರೇ ಕೊಡುತ್ತಾರೆ.
ಅಂಗನವಾಡಿಯ ಅಂಗಳದಲ್ಲೇ ನಡೆಯುವುದರಿಂದ ತಾಯಿ ಪೂರ್ತಿ ವಿಶ್ವಾಸವಿಟ್ಟು ಸ್ಪಿರ್ಯುಲಿನವನ್ನೊಯ್ದು ತನ್ನ ಮಗುವಿಗೆ ಕೊಡುತ್ತಾಳೆ, ತಾನೂ ಸೇವಿಸುತ್ತಾಳೆ. ಗರ್ಭಿಣಿಯರಿಗೆ ಕೊಡಬಾರದ ಸ್ಪಿರ್ಯುಲಿನವನ್ನು ಗರ್ಭಿಣಿಯರಿಗೂ ಕೊಡಲಾಗುತ್ತದೆ. ಕೆಲ ಕಾಲದ ನಂತರ ಈ ಕಾರ್ಯಕ್ರಮ ನಿಲ್ಲುತ್ತದೆ. 2014–2015ರಲ್ಲಿ ಬಳ್ಳಾರಿಯ ಸಂಡೂರು ಮತ್ತು 2015–2016ರಲ್ಲಿ ಬಾಗಲಕೋಟೆಯ ಬಾದಾಮಿ ತಾಲ್ಲೂಕುಗಳಲ್ಲಿ ಮಕ್ಕಳ ಮೇಲೆ ಪ್ರಯೋಗಗಳು ಸರ್ಕಾರದ ಒಪ್ಪಿಗೆಯಿಂದಲೇ ಸರ್ಕಾರದ ಅಂಗನವಾಡಿಗಳಲ್ಲಿಯೇ ನಡೆದು, ಸ್ಪಿರ್ಯುಲಿನ ಕೊಟ್ಟಿದ್ದರ ಪರಿಣಾಮವಾಗಿ ಕುಪೋಷಣೆಯು 33%ನಿಂದ 2% ವರೆಗೂ ಕಡಿಮೆಯಾಗಿದೆ ಎಂದು ದಾಖಲೆಯೂ ಆಗುತ್ತದೆ.
ಎಲ್ಲಿಯೂ ವೈಜ್ಞಾನಿಕವಾಗಿ ನಿರ್ಣಯವಾಗಿಲ್ಲದ ವಸ್ತುವೊಂದರ ಪ್ರಯೋಗ ನಮ್ಮ ಮಕ್ಕಳ ಮೇಲೆಯೇ ನಡೆದು ಯಶಸ್ಸಿನ ಕಥೆ ಸೃಷ್ಟಿಯಾಗುತ್ತದೆ (ಹೈದರಾಬಾದಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ನಲ್ಲಿ ಸ್ಪಿರ್ಯುಲಿನದ ಪ್ರಯೋಗ ನಡೆಯುತ್ತಿದ್ದುದು ಅರ್ಧಕ್ಕೇ ನಿಂತಿತ್ತು ಎಂದು ಅದರ ಹಿಂದಿನ ನಿರ್ದೇಶಕರೇ ಹೇಳುತ್ತಾರೆ).
ಸಂಡೂರಿನಲ್ಲಿ ಈ ಖಾಸಗಿ ಕಂಪೆನಿಗಳ ಪ್ರಯೋಗದ ಯಶಸ್ಸಿನ ನಂತರ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ತೀವ್ರ ಅಪೌಷ್ಟಿಕ ಮಕ್ಕಳಿಗೆ ಸ್ಪಿರ್ಯುಲಿನ ಕೊಡಲು ₹ 3.6 ಕೋಟಿಯನ್ನು 2016ರ ಬಜೆಟ್ನಲ್ಲಿ ಸರ್ಕಾರ ಮೀಸಲಿಟ್ಟಿದೆ. ‘ಬಾಲಪೋಷಣೆ ಕಾರ್ಯಕ್ರಮದ ಹೆಸರಿನಲ್ಲಿ 180 ದಿನಗಳ ಕಾಲ ಪ್ರತಿನಿತ್ಯ 2 ಗ್ರಾಂ ಸ್ಪಿರ್ಯುಲಿನ ಕೊಡುವುದೆಂದು ಮೂರು ಕಂಪೆನಿಗಳೊಂದಿಗೆ ಸರ್ಕಾರ ಒಡಂಬಡಿಕೆ ಮಾಡಿಕೊಂಡಿದೆ. ಈಗಾಗಲೇ ಸ್ಪಿರ್ಯುಲಿನ ಬಗ್ಗೆ ತೀವ್ರವಾದ ಪ್ರಚಾರ ನಡೆದಿದೆ. ಅಂಗನವಾಡಿಗಳಲ್ಲೆಲ್ಲ ‘ಜನನದಿಂದ ಜನನಿಯವರೆಗೆ ಸ್ಪಿರ್ಯುಲಿನ ತಿನ್ನಿಸಿ, ಅಪೌಷ್ಟಿಕತೆಯನ್ನು ಹೊಡೆದಟ್ಟಿ’ ಬ್ಯಾನರ್ಗಳು, ಮಾಹಿತಿ ಶಿಬಿರಗಳು. ಸ್ಪಿರ್ಯುಲಿನ ಬಾಟ್ಲಿಯ ಮೇಲೂ ಇಲಾಖೆಯ ಲೋಗೊ.
ಸ್ಪಿರ್ಯುಲಿನ ಬೆಳೆಯುವವರನ್ನು ‘ಅಪೌಷ್ಟಿಕತೆಯ ನಿವಾರಕರು’ ಎಂದೆಲ್ಲ ಬಿಂಬಿಸಲಾಗುತ್ತಿದೆ. ಅಂತರ್ಜಾಲದಲ್ಲಿ ಹುಡುಕಿದರೆ ಸ್ಪಿರ್ಯುಲಿನ ಪಾಚಿಯ ಬಗ್ಗೆ ಬೇಕಾದಷ್ಟು ವಿವರಗಳು ಸಿಗುತ್ತವೆ. ಅಪೌಷ್ಟಿಕತೆಗೆ ಅದು ಔಷಧವಾಗಬಲ್ಲದು ಎಂದು ವೈಜ್ಞಾನಿಕವಾಗಿ ಎಲ್ಲಿಯೂ ಸಾಬೀತಾಗಿಲ್ಲ. ಕಂಪೆನಿಗಳ ಹೇಳಿಕೆಗಳು, ವಿಶ್ವ ಆರೋಗ್ಯ ಸಂಸ್ಥೆ, ಯುನಿಸೆಫ್ಗಳ ಅಭಿಪ್ರಾಯಗಳು, ಅಮೆರಿಕದಲ್ಲಿ ಎಷ್ಟೋ ಬಾರಿ ನಿಷೇಧಗೊಂಡರೂ ಒಂದಲ್ಲಾ ಒಂದು ಕಂಪೆನಿಯ ಮೂಲಕ ಸ್ಪಿರ್ಯುಲಿನ ಚಿಗುರಿಕೊಂಡು ಮೇಲೇಳುತ್ತಿರುವ ಕತೆಗಳು. ಅಪೌಷ್ಟಿಕತೆಯನ್ನು ನಿವಾರಣೆ ಮಾಡಲೇಬೇಕು ಎಂಬುದರಲ್ಲಿ ಎರಡನೇ ಮಾತಿಲ್ಲ. ಅದನ್ನು ಹೇಗೆ ಮಾಡಬೇಕು ಎಂಬ ಬಗ್ಗೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ನೀತಿಗಳಿವೆ. ಜೊತೆಗೆ ಸುಪ್ರೀಂ ಕೋರ್ಟ್ನ ಮಾರ್ಗದರ್ಶಿ ಸೂತ್ರಗಳೇ ಇವೆ. ಅವನ್ನು ಮೀರಿ ಸ್ಪಿರ್ಯುಲಿನ ತಿನ್ನಿಸುವ ಪ್ರಯೋಗಕ್ಕೆ ಮಕ್ಕಳನ್ನು ಸರ್ಕಾರ ಒಡ್ಡಿದ್ದು ಹೇಗೆ? ಸರ್ಕಾರದ ಇಲಾಖೆಯ ಮೂಲಕ ನಮ್ಮ ಮಕ್ಕಳ ಮೇಲೆ ಪ್ರಯೋಗ ಮಾಡಲು ಖಾಸಗಿ ಕಂಪೆನಿಗಳಿಗೆ ಅನುಮತಿಯನ್ನು ಕೊಟ್ಟಿದ್ದು ಯಾರು ಮತ್ತು ಹೇಗೆ?
‘ವಾದ ವಿವಾದಗಳೇನೇ ಇರಲಿ, ಕೇವಲ 2 ಗ್ರಾಂ ಸ್ಪಿರ್ಯುಲಿನ ಕೊಟ್ಟರೆ ಮಗುವಿಗೆ ಬೇಕಾಗುವಷ್ಟು ಪ್ರೊಟೀನ್ ದೊರೆಯಲಾರದು. ಬೇಕಾಗುವಷ್ಟು ಪ್ರೊಟೀನು ಸಿಗಬೇಕೆಂದರೆ ದಿನಕ್ಕೆ 400 ಗ್ರಾಂ ಅಂದರೆ ಸನಿಹ ಸನಿಹ ಅರ್ಧ ಕೆಜಿಯಷ್ಟು ಸ್ಪಿರ್ಯುಲಿನ ಕೊಡಬೇಕಾಗುತ್ತದೆ.ದಿನಕ್ಕೆ ಒಂದು ತತ್ತಿ ಅಥವಾ ಒಂದು ಗಜ್ಜರಿ, ಹಸಿರು ಎಲೆಯನ್ನು ಊಟದಲ್ಲಿ ಕೊಟ್ಟರೆ ಅಂದಿನ ಪ್ರೊಟೀನ್ ಅವಶ್ಯಕತೆ ಪೂರ್ತಿಯಾಗುತ್ತದೆ. ಇವೆಲ್ಲವೂ ಸ್ಥಳೀಯವಾಗಿ ಸುಲಭವಾಗಿ ಸಿಗುವಂಥವು. ಸಮಗ್ರ ಶಿಶು ಅಭಿವೃದ್ಧಿಯ ಮಾರ್ಗದರ್ಶಿಕೆಯಲ್ಲಿ ಇರುವಂಥವು.ಸ್ಪಿರ್ಯುಲಿನ ಸ್ಥಳೀಯವಿರುವುದಂತಿರಲಿ, ನಮ್ಮ ದೇಶದ್ದೇ ಅಲ್ಲ, ದೂರದ ಬ್ರೆಜಿಲ್ ಮೂಲದ್ದು ಎನ್ನುತ್ತಾರೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ನ್ಯೂಟ್ರಿಷನ್ನ ಹಿಂದಿನ ನಿರ್ದೇಶಕಿ ಡಾ. ವೀಣಾ ಶತ್ರುಘ್ನ.
ಯಾವುದೇ ಅಪೌಷ್ಟಿಕ ಮಗುವಿಗೆ ಸ್ಥಳೀಯವಾದ ಆಹಾರವನ್ನು ಮತ್ತೆ ಮತ್ತೆ ಕೊಟ್ಟಾಗಲೇ ಮಗು ಪೌಷ್ಟಿಕತೆಯತ್ತ ಅಂಬೆಗಾಲಿಡುತ್ತದೆ. ಬಿಸಿಯೂಟದ ಜೊತೆಗೆ ಹಾಲು ಮತ್ತು ತತ್ತಿಯನ್ನು ಅಂಗನವಾಡಿಗಳಲ್ಲಿ ಕೊಡಬೇಕೆಂದು ಸುಪ್ರೀಂ ಕೋರ್ಟು ತನ್ನ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದೆ. ಆದರೆ ಇನ್ನೂ ಹಾಲಿನ ಪುಡಿ ಬಂದಿಲ್ಲ ಎಂದೋ, ಗ್ಯಾಸು ಖರ್ಚಾಗಿದೆ ಎಂದೋ, ತತ್ತಿಗೆ ದುಡ್ಡಿಲ್ಲ ಎಂದೋ ಒಂದಲ್ಲ ಒಂದು ಕಾರಣದಿಂದ ಸ್ಥಳೀಯ ಆಹಾರಗಳೆಲ್ಲ ಒಮ್ಮೆ ಕೊಟ್ಟರು, ಒಮ್ಮೆ ಬಿಟ್ಟರು ಎಂದಾಗುತ್ತವೆ. ಸ್ಪಿರ್ಯುಲಿನ ಮಾತ್ರ ಎಗ್ಗಿಲ್ಲದೆ ನೇರವಾಗಿ ತಾಯಿಗೆ ಸಪ್ಲೈ ಆಗಿ ಪ್ರತಿ ನಿತ್ಯ ಮಗುವಿನ ಹೊಟ್ಟೆ ಸೇರುತ್ತದೆ. ತೀವ್ರ ಕುಪೋಷಿತ ಮಗು ‘ಪೋಷಣೆಗೊಂಡಿತು’ ಎಂಬ ಬರಹ ಸದ್ದಿಲ್ಲದೆ ಅಂಗನವಾಡಿಯ ಫೈಲುಗಳಲ್ಲಿ ಸೇರಿಕೊಳ್ಳುತ್ತದೆ.
ಗುತ್ತಿಗೆದಾರರಿಗೂ ಇಲಾಖೆಗೂ ಗಟ್ಟಿ ಮುಟ್ಟಾದ ನಂಟು ಎಂಬುದು ಎಂದೋ ಸಾಬೀತಾಗಿಹೋಗಿದೆ. ಅದೆಷ್ಟೇ ತೀವ್ರ ಟೀಕೆಗೊಳಗಾದರೂ ತನ್ನ ಹೊಣೆಗಾರಿಕೆಯನ್ನು ಇಲಾಖೆಯು ಕಂಪೆನಿಗಳಿಗೆ ದಾಟಿಸುತ್ತಲೇ ಇದೆ. ಆದರೆ ಇದು ನಮ್ಮ ಮಕ್ಕಳ ಪೋಷಣೆಯ ವಿಷಯ, ನಮ್ಮ ಸಮಾಜದ ಭವಿಷ್ಯದ ವಿಚಾರ ಎನ್ನುವುದನ್ನು ಇಲಾಖೆ ನೆನಪಿಟ್ಟುಕೊಳ್ಳಬೇಕು. ಹಾಗೆಯೇ ನಮ್ಮ ಮಕ್ಕಳು ಪ್ರಯೋಗದ ಪಶುಗಳೂ ಅಲ್ಲ ಎನ್ನುವುದನ್ನು ಮರೆಯಬಾರದು. ಇಲ್ಲವೆಂದರೆ ಹಡೆದ ತಾಯಿಗೆ, ಸಮಾಜಕ್ಕೆ, ಸುಪ್ರೀಂ ಕೋರ್ಟಿಗೆ, ಅದು ಉತ್ತರ ನೀಡಬೇಕಾಗುತ್ತದೆ.
ಲೇಖಕಿ ಆಹಾರದ ಹಕ್ಕಿಗಾಗಿ ಆಂದೋಲನದ ಸದಸ್ಯೆ