ಪ್ರಬುದ್ಧ ಕರ್ಣಾಟಕ – ಸಂಪಾದಕೀಯ
ಮಹಾದೇವ ಅವರ 53 ಪುಟಗಳ ‘ದ್ಯಾವನೂರು’ (1973) ಏಳು ಸಣ್ಣ ಕಥೆಗಳ ಸಂಕಲನ. ನಡುನಡುವೆ ಇರುವ ಚಿತ್ರಗಳೂ ಸೇರಿ ಒಟ್ಟೂ 52 ಪುಟಗಳ ‘ಒಡಲಾಳ’ (1981) ಒಂದು ಕಿರುಕಾದಂಬರಿ, ‘ಕುಸುಮಬಾಲೆ ‘ ಒಟ್ಟೂ 77 ಪುಟಗಳ ಕಿರುಕಾದಂಬರಿ ಅವರು ತಮ್ಮ ಬರವಣಿಗೆಯ ಪ್ರಾರಂಭ ಕಾಲದಲ್ಲಿ ಬೆರಳೆಣಿಕೆಯಷ್ಟು ಕವನಗಳನ್ನು ಪ್ರಕಟಿಸಿದ್ದುಂಟು. ಇಷ್ಟು ಕಡಿಮೆ ಬರವಣಿಗೆಯಿಂದ ಅವರಷ್ಟು ಸಾಹಿತ್ಯಿಕ ಮಹತ್ವವನ್ನೂ ಮನ್ನಣೆಯನ್ನೂ ಪಡೆದ ಸಾಹಿತಿ ಕನ್ನಡದಲ್ಲಿ ಈವರೆಗೆ ಯಾರೂ ಇಲ್ಲ. ‘ತರುಣ ಲೇಖಕರಲ್ಲಿ ಒಂದು ವಿಶಿಷ್ಟ ಸ್ಥಾನವನ್ನು ನಿರ್ಮಿಸಿಕೊಂಡಿರುವ ಅವರು ಬರೆದಿರುವುದು ಬಹಳವಲ್ಲ… ”ಮಹಾದೇವರಷ್ಟು ಸ್ವಲ್ಪವೇ ಬರೆದು, ಅವರು ಪಡೆದಷ್ಟು ಪ್ರಸಿದ್ಧಿ ಪಡೆದ ಇನ್ನೊಬ್ಬರನ್ನು ಕನ್ನಡದಲ್ಲಿ ನಾನು ಕಾಣೆ ” ಎಂದು ಡಾ.ಹಾ.ಮಾ.ನಾಯಕರು 1985ರಲ್ಲಿ ಹೇಳಿದ ಮಾತು (ಸಂಪ್ರತಿ; ಪುಟ 39) ಇಂದಿಗೂ ಸಲ್ಲುತ್ತದೆ.
‘ದ್ಯಾವನೂರು’ ಸಂಕಲನದ ಕಥೆಗಳು ಮಹಾದೇವ ವಿದ್ಯಾರ್ಥಿಯಾಗಿರುವಾಗಲೆ ಬರೆದವು. ಅವರು ಕನ್ನಡ ದ್ವಿತೀಯ ಎಂ.ಎ. ತರಗತಿಯಲ್ಲಿ ಓದುತ್ತಿದ್ದ ವರ್ಷವೇ ಅವು ಪುಸ್ತಕ ರೂಪದಲ್ಲಿ ಪ್ರಕಟವಾದವು. ನವ್ಯ ಬರವಣಿಗೆಯ ರೀತಿ ಮತ್ತು ಪರಿಕಲ್ಪನೆಗಳಿಗೆ ಭಿನ್ನವಾದ ಅಂದರೆ ಸಾಮಾಜಿಕ ಪ್ರಜ್ಞೆ ಪ್ರಧಾನ ಲಕ್ಷ್ಯವಾಗಿ ಉಳ್ಳಂಥ ಸಾಹಿತ್ಯ ಸೃಷ್ಟಿಯ ಆಗತ್ಯವನ್ನು ತಮ್ಮ ಸೃಜನಶೀಲ ಬರವಣಿಗೆಯ ಮೂಲಕ ಅನ್ವೇಷಿಸಿದ ಮುಖ್ಯರಲ್ಲಿ ಮಾತ್ರವಲ್ಲ ಮೊದಲಿಗ ಮುಖ್ಯರಲ್ಲಿಯೂ ಮಹಾದೇವ ಒಬ್ಬರಾಗಿದ್ದಾರೆ.
ಯಶವಂತ ಚಿತ್ತಾಲರು ‘ದ್ಯಾವನೂರು’ ಸಂಕಲನದ ಕಥೆಗಳನ್ನು ಕುರಿತು ‘ಸಾಹಿತ್ಯ, ಸೃಜನಶೀಲತೆ ಮತ್ತು ನಾನು’ ಎಂಬ ಅವರ ಪುಸ್ತಕದಲ್ಲಿ ಹೇಳಿರುವ ಮಾತುಗಳು ಗಮನಾರ್ಹವಾಗಿವೆ :
‘ನನ್ನ ಮೇಲೆ ಅತಿಗಾಢವಾಗಿ ಸೃಷ್ಟ್ಯಾತ್ಮಕ ಪರಿಣಾಮ ಮಾಡಿ, ನನ್ನ ಈವರೆಗಿನ ಬರವಣಿಗೆಯ ಮಿತಿಗಳಿಗೆ ನನ್ನ ಕಣ್ತೆರೆಸಿದ ಈ ಸಂಕಲನವನ್ನು ಮೊದಲ ಬಾರಿಗೆ ಓದಿದಾಗ ಅದರ ತಾಜಾತನಕ್ಕೆ ಮನಸ್ಸು ತೆರೆಯುತ್ತಿರುವಾಗಲೇ ಅದು ಪ್ರಕಟಿಸಿದ ಸತ್ಯಗಳಿಂದಾಗಿ ಓದಿನ ಕೊನೆಯಲ್ಲಿ ಮನಸ್ಸಿನಲ್ಲಿ ಸ್ಥಾಯಿಯಾಗಿ ನಿಂತದ್ದು ಹರವಾದ ಕೃತಜ್ಞತಾಭಾವ ” (ಪು.136).
“ತಾನು ಹಿಡಿದಿಟ್ಟ ಅನುಭವ ಅದರ ಹುಟ್ಟಿಗೆ ಕಾರಣವಾದ ಸಾಮಾಜಿಕ ಸಂದರ್ಭದಲ್ಲಿ ನಿಜವಾಗುವಾಗಲೇ ಅದರ ಮಾನವೀಯ ಆಯಾಮಗಳನ್ನು ಸ್ಪಷ್ಟವಾಗಿ, ಆದರೂ ಕಲಾತ್ಮಕವಾಗಿ, ಆದ್ದರಿಂದಲೇ ನಮಗೆ ನೇರವಾಗಿ ಮುಟ್ಟುವಂತೆ ತೆರೆದು ತೋರಿಸಿ ಆ ಸಂದರ್ಭವನ್ನೇ ಹೊಸಬೆಳಕಿನಲ್ಲಿ ನೋಡುವಂತೆ ಮಾಡುವುದರಲ್ಲಿ ಇಲ್ಲಿಯ ಪ್ರತಿಯೊಂದು ಕಥೆಯೂ ಅಸಾಧಾರಣ ಯಶಸ್ಸನ್ನು ಗಳಿಸಿದೆ.’ (ಪು.140).
‘ಒಡಲಾಳ’ ಇನ್ನೂ ಹೆಚ್ಚಿನ ಪ್ರಶಂಸೆ ಮತ್ತು ಪ್ರಸಿದ್ಧಿಯನ್ನು ಪಡೆದ ಕೃತಿಯಾಗಿದೆ. ‘ಒಡಲಾಳ’ವನ್ನು ಕನ್ನಡದ ಹತ್ತು ಶ್ರೇಷ್ಠ ಕಾದಂಬರಿಗಳಲ್ಲಿ ಒಂದು ಎಂದು ಡಾ.ಜಿ.ಎಸ್.ಆಮೂರ ಅವರು ಪರಿಗಣಿಸಿದ್ದಾರೆ. (‘ಅರ್ಥಲೋಕ,1988), ಡಾ.ಯು.ಆರ್.ಅನಂತಮೂರ್ತಿಯವರು ಅದು ಬೆರಗು ಹುಟ್ಟಿಸುವ ಯಶಸ್ಸನ್ನು ಪಡೆದ ಹಾಗೂ ಭಾರತದ ಕಥಾಸಾಹಿತ್ಯದಲ್ಲಿಯೇ ಒಂದು ಅಪೂರ್ವ ಶೋಭೆಯುಳ್ಳ ಕೃತಿ’ಯೆಂದೂ ಆ ಅಪೂರ್ವಶೋಭೆ ಮಹಾದೇವ ಅವರಿಗೆ ಬರೆಯುವ ಕ್ರಮವೇ ಒಂದು ನೈತಿಕ ಕ್ರಿಯೆಯಾಗಿರುವುದರಿಂದ ಉಂಟಾಗಿರುವುದೆಂದೂ ಹೇಳಿದ್ದಾರೆ ಅವರು ಹೇಳುವ ಮುಂದಿನ ಮಾತುಗಳೂ ಉಲ್ಲೇಖಕ್ಕೆ ಅರ್ಹವಾಗಿವೆ:
“ರಿಕ್ತವಾದ ಅರ್ಥವ್ಯವಸ್ಥೆಯ ಪ್ರಪಂಚದಲ್ಲಿ ಕಳೆದ ಹುಂಜಕ್ಕಾಗಿ ನಡೆಯುವ ತಪಾಸಣೆ, ಇಲ್ಲದಿರುವ ಆಸ್ತಿ ಬಗ್ಗೆ ಅದೇನೋ ಮಹತ್ತಿನದು ಇದೆ, ಎಂಬಂತೆ ಸಾಕವ್ವ ನಡೆಸುವ ಸಂಭ್ರಮದ ಜಗಳ, ಶಿವೂನನ್ನು ಹುಂಜದ ತಪಾಸಣೆಗಾಗಿ ಎಳೆದೊಯ್ಯುವ ಅವಳು ಹೇಳುವ ಪುರಾಣದ ಶೋಭೆಯುಳ್ಳ ಕಥೆ, ಬೆಂಕಿಯೆದುರು ಕಡಲೆಕಾಯಿ ತಿನ್ನುವಾಗ ನಡೆಯುವ ಮಾತುಕಥೆ- ಈ ಎಲ್ಲ ಪ್ರಸಂಗಗಳು ಕ್ಷುದ್ರವಾಗಬಹುದಾಗಿದ್ದ ದೈನಿಕವೇ ಹೊಳೆಯಿಸುವಂಥವು. ಉಣ್ಣುವಂಥ ಒಂದು ನಿತ್ಯದ ಸಾಮಾನ್ಯ ಕ್ರಿಯೆಯೂ ಇಲ್ಲಿ ಯಜ್ಞಕ್ಕೆ ಸಮಾನವಾದ ರಿಚ್ಯುವಲ್, ಸಾಕವ್ವನ ಪಾಲನೆಯ ಪ್ರಪಂಚದಲ್ಲಿ ಹೀಗೆ ಸಾಮಾನ್ಯವಾಗಬಹುದಾದದ್ದೆಲ್ಲವೂ ವಿಶೇಷ. ಅವಳು ಪಾಲಿಸುತ್ತಿರುವ ಕಿರಿಯರಾದ ಪುಟಗೌರಿ, ಶಿವೂರಿಂದಾಗಿ ನವಿಲು ಕೂಡ ಈ ದೈನಿಕಗಳೇ ಹೊಳೆಯಿಸುತ್ತಿರುವ ಇನ್ನೊಂದು ಸಂಭ್ರಮ. ಈ ಹಟ್ಟಿಯಲ್ಲಿ ಹೀಗಾಗಿ ದೀಪ ಹಚ್ಚುವುದೂ ಅದನ್ನು ಹಂಚಿಕೊಳ್ಳುವುದೂ ಒಟ್ಟಾಗಿ ಉಣ್ಣುವುದೂ ಸಹನಾವವತು ಸಹನೌಭುನಕ್ತು ಸಹವೀರ್ಯಾಂ ಕರವಾವಹೈ’ ಎಂಬಂಥ ಉಪನಿಷತ್ತಿನ ಆದರ್ಶವಾದ ಮಾನವ ಸಾಹಚರ್ಯದ ಕ್ರಿಯೆಗಳೇ” (‘ಪೂರ್ವಾಪರ’ 1990, ಪುಟ 135-166 ಹಾಗೂ ರುಜುವಾತು 12, ಅಕ್ಟೋಬರ್-ಡಿಸೆಂಬರ್ 1983).
‘ಕುಸುಮಬಾಲೆ’ ಕಿರುಕಾದಂಬರಿಯ ಪ್ರಕಟನೆ ಇಂದಿನ ಕನ್ನಡ ಸೃಜನಶೀಲ ಸಾಹಿತ್ಯದ ಸಂದರ್ಭದಲ್ಲಿ ಒಂದು ಮಹತ್ವದ ಸಾಹಿತ್ಯಕ ಘಟನೆಯಾಗಿದೆ. ಅದರ ರಚನಾವಿಧಾನ ಭಾಷೆಯ ಬಳಕೆ, ನಿರೂಪಣೆಯ ಸ್ವರೂಪ, ದೃಷ್ಟಿ-ಧೋರಣೆ ಇತ್ಯಾದಿಗಳಲ್ಲಿ ಹೊಸತನವಿದೆ; ತಾಜಾತನವಿದೆ; ಜೊತೆಗೇ ವಿಲಕ್ಷಣ ಎನಿಸಬಹುದಾದಂಥ ಕೆಲವು ಅಂಶಗಳೂ ಇವೆ. ಆ ಕಾರಣಗಳಿಂದಾಗಿ ಕಾದಂಬರಿಯ ರೂಪ, ಸಂವಹನ, ಕೇಂದ್ರ ಪ್ರಜ್ಞೆ ಮುಂತಾದವುಗಳಿಗೆ ಸಂಬಂಧಿಸಿದ ಪ್ರಶ್ನೆಗಳು ಓದುಗರಿಗೆ, ವಿಮರ್ಶಕರಿಗೆ ಎದುರಾಗಿವೆ. ಅವು ಪ್ರಶಂಸೆ, ವಿಮರ್ಶೆ, ಟೀಕೆ ಹೀಗೆ ನಾನಾ ಬಗೆಯ ಪ್ರತಿಕ್ರಿಯೆಗಳನ್ನು ಹುಟ್ಟಿಸಿವೆ. ವಿಮರ್ಶೆಯ ಮಾನದಂಡಗಳನ್ನು ಹೊರಗಿನಿಂದ ಮಾತ್ರ ತಂದು ಅನ್ವಯಿಸಿನೋಡದೆ ಕೃತಿಯ ಒಳಗಿನಿಂದಲೂ ಪಡೆದು ವಿಸ್ತರಿಸಿಕೊಳ್ಳುವ ಆಗತ್ಯವನ್ನೂ ಕೃತಿ ಸೂಚಿಸುತ್ತಿದೆ; ಒತ್ತಾಯಿಸುತ್ತಿದೆ. ಈ ಸೂಚನೆ, ಒತ್ತಾಯಗಳಿಗೆ ಸ್ಪಂದಿಸುವ ಸಂವೇದನಶೀಲತೆ ಕೃತಿಯನ್ನು ಅನುಭವಿಸಲು, ಅರ್ಥವಿಸಲು, ವ್ಯಾಖ್ಯಾನಿಸಲು ಅಗತ್ಯವಾಗುತ್ತದೆ.
‘ಕುಸುಮಬಾಲೆ ‘ಯ ಭಾಷೆ ಕೆಲವರಿಗೆ ಸಂವಹನದ ಸಮಸ್ಯೆಯನ್ನು ಒಡ್ಡಿದೆ. ಭಾಷೆಯ ವಾಚ್ಯಾರ್ಥ ಗ್ರಹಿಕೆಯೇ (literal understanding) ತೊಡಕಿನ ಮೂಲವಾದಾಗ ಆ ಕೃತಿಯ ಬಗ್ಗೆ ಸಹಾನುಭೂತಿ ಪರವಾದ ಪ್ರತಿಕ್ರಿಯೆಯನ್ನು ಓದುಗರಿಂದ ನಿರೀಕ್ಷಿಸುವಂತಿಲ್ಲ. ಆದರೆ ಆ ಸಂವಹನದ ತೊಡಕು ಮೂಲತಃ ಬಳಕೆಯಾದ ಭಾಷೆಗೇ ಸಂಬಂಧಿಸಿದ್ದೋ ಬಳಕೆಯಾದ ಭಾಷೆಗೆ ಸಂಬಂಧಿಸಿದ ಅಪರಿಚಿತತೆಯ ಕಾರಣದಿಂದಾಗಿ ಓದುಗನಿಗೆ ಉಂಟಾದದ್ದೋ? ಇದು ಮುಖ್ಯ ಪ್ರಶ್ನೆ. ಆ ಕೃತಿಯೇ ಬಳಕೆಯಾಗಿರುವ ಭಾಷೆಯನ್ನು ಸೃಜನಶೀಲ ಸಂದರ್ಭದಲ್ಲಿ ಸಮರ್ಥಿಸಿಕೊಳ್ಳುವಷ್ಟು ಸತ್ವಶಾಲಿಯಾಗಿದ್ದರೆ ವಾಚ್ಯಾರ್ಥಗ್ರಹಿಕೆಯ ನೆಲೆಯಲ್ಲಿಯೇ ಸಂವಹನದ ಸಮಸ್ಯೆಯನ್ನು ಎದುರಿಸುತ್ತಿರುವವರಿಗೆ ಆ ಭಾಷೆಯನ್ನು ಅರ್ಥಮಾಡಿಕೊಳ್ಳುವುದಕ್ಕೆ ಮಾತ್ರವಲ್ಲ, ಅದು ಅಪೇಕ್ಷಿಸುವ ಮಟ್ಟದ ಸಂವೇದನಶೀಲತೆಯನ್ನು ಪಡೆದುಕೊಳ್ಳುವುದಕ್ಕೆ ಸಂಬಂಧಿಸಿದಂತೆ ಕೂಡ ತಮ್ಮ ಕಡೆಯಿಂದಲೂ ಅಗತ್ಯವಾದ ಪೂರ್ವಸಿದ್ಧತೆ ಮಾಡಿಕೊಳ್ಳುವ ವಿನಯ, ಪರಿಶ್ರಮ ಅಗತ್ಯವಾಗುತ್ತದೆ.
‘ಕುಸುಮಬಾಲೆ ‘ಯ ಭಾಷೆ ನಂಜನಗೂಡು-ಚಾಮರಾಜನಗರ ಫಾಸಲೆಯ ಆಡುನುಡಿ. ಅದು ಬಳಕೆಯಾದ ರೀತಿಯಲ್ಲಿ ಅದರ ಲಯ ಗದ್ಯದ ಸಹಜಲಯವನ್ನು ಅನುಸರಿಸುವುದಿಲ್ಲ. ಪದ್ಯಗಂಧಿಯಾದ ಗದ್ಯದ ಲಯದಲ್ಲಿ ಅದರ ಚಲನೆ ಇದೆ. ಮಂಟೇಸ್ವಾಮಿ/ಮಾದೇಶ್ವರ ಕಾವ್ಯಗಳಲ್ಲಿ ಬರುವ ಗೀತೆಗಳ ನಡುವಿನ ಗದ್ಯಭಾಗವನ್ನು ನಿರೂಪಿಸುವ ಲಯಕ್ಕೆ ಅದು ಹತ್ತಿರವಾಗಿದೆ. ಹೀಗಾಗಿ, ಇದು ಕಾದಂಬರಿಗದ್ಯದ
ಸಾಂಪ್ರದಾಯಿಕ ಲಯಗತಿಗೆ ಹೊರತಾಗಿದೆ. ನಿರೂಪಣೆಯ ಭಾಷೆಯ ಅನನ್ಯ ರೂಪಕ ಶಕ್ತಿ ಕೂಡ ಕಾವಂಬರಿಗಿಂತ ಕಾವ್ಯ ಬರವಣಿಗೆಯ ಸಂಪ್ರದಾಯಕ್ಕೆ ಹರವಾಗಿದೆ.
“ಭಾಷೆ ಮತ್ತು ಶೈಲಿಯ ಪ್ರಯೋಗಶೀಲತೆಯ ದೃಷ್ಟಿಯಿಂದ ಕುಸುಮಬಾಲೆ ಅತ್ಯಂತ ಕುತೂಹಲಕಾರಿಯಾಗಿದೆ. ಒಂದು ಪ್ರದೇಶದ ಮತ್ತು ಒಂದು ಜನಾಂಗದ ಮಾತಿನ ಎಲ್ಲ ಸಾಧ್ಯತೆಗಳನ್ನು ಮಹಾದೇವರು ಈ ಕೃತಿಯಲ್ಲಿ ದುಡಿಸಿಕೊಂಡಿದ್ದಾರೆ. ಬದುಕಿನ ಅದಮ್ಯ ಚೈತನ್ಯದ ಬಗೆಗಿರುವ ಅವರ ಪ್ರೀತಿ ಮತ್ತು ಕುತೂಹಲ ಭಾಷೆಯ ಅದಮ್ಯ ಸತ್ವಶೀಲತೆಯನ್ನು ಆವರಿಸಿಕೊಂಡಿದೆ. ಆಡುಮಾತಿನ ಲಯಗಳು, ರಚನೆಗಳು, ನುಡಿಗಟ್ಟುಗಳು, ಜೆಸ್ಚರ್ ಗಳು (gesture) ಇವೆಲ್ಲವುಗಳನ್ನು ಒಬ್ಬ ಶ್ರೇಷ್ಠ ಬರಹಗಾರನ ಸ್ವಚ್ಛಂದ ಕ್ರಿಯಾಶೀಲತೆಯಿಂದ ಮಹಾದೇವರು ಬಳಸಿಕೊಂಡಿದ್ದಾರೆ.” (ಅಧ್ಯಯನ, ಪು.127).
“ಕುಸುಮಬಾಲೆಯ ಭಾಷೆ ಎಲ್ಲಿಯೂ ವಾಹಕ ಮಾತ್ರವಾಗಿಲ್ಲ. ಕಾವ್ಯದಲ್ಲಿಯಂತೆ ಈ ಕೃತಿಯಲ್ಲಿಯೂ ಭಾಷೆ ತನ್ನ ಲಯ, ಧ್ವನಿ, ಅರ್ಥ ಇವೆಲ್ಲವುಗಳು ಸೇರಿದ ತನ್ನ ಇಡೀ ಶರೀರದೊಂದಿಗೆ ಪ್ರಕಟವಾಗುತ್ತದೆ. ಹಾಡು, ಭಾವಗೀತೆ, ದಂತಕತೆ, ಜೋಕು ಇವುಗಳಲ್ಲಿ ಬಳಕೆಯಾಗುವ ಭಾಷಾ ಪ್ರಕಾರಗಳ ವೈವಿಧ್ಯತೆಯನ್ನು ಕೃತಿ ದುಡಿಸಿಕೊಳ್ಳುತ್ತದೆ. ಶ್ರೀಮಂತವಾದ ಹಲವು ಧ್ವನಿಗಳ ನಿರೂಪಣೆಯ ಶೈಲಿ ಕುತೂಹಲ ಹುಟ್ಟಿಸುತ್ತದೆ.” (ರಾಜೇಂದ್ರ ಚೆನ್ನಿ, ಅಧ್ಯಯನ, ಪು.129).
“ಕುಸುಮಬಾಲೆ ಒಂದು ಗದ್ಯಕಾವ್ಯ, ಗದ್ಯವನ್ನು ಕಾವ್ಯಮಯವಾಗಿ ಬಳಸಿರುವ ಕಾದಂಬರಿಗಳು ಕನ್ನಡದಲ್ಲಿವೆ. ಆದರೆ ಮಹಾದೇವರು ಭಾಷೆಯನ್ನು ಇಲ್ಲಿ ಬಳಸಿರುವಂತೆ ಕನ್ನಡ ಕಾದಂಬರಿ ಸಂದರ್ಭದಲ್ಲಿ ಬಳಕೆಯಾಗಿರುವುದು ವಿರಳ. ಇಲ್ಲಿ ಬಳಕೆಯಾಗಿರುವುದು ಚಾಮರಾಜನಗರ ಮತ್ತು ಅದರ ಸುತ್ತಮುತ್ತ ರೂಢಿಯಲ್ಲಿರುವ ಭಾಷೆ (dialect). ಆದರೆ ವಾಕ್ಯರಚನೆ, ಪ್ಯಾರಗಳ ರಚನೆಯಲ್ಲಿ ಹೊಸತನವಿದೆ. ಭಾಷೆಯ ಈ ಹೊಸತನ ಒಂದು ಸಮುದಾಯದ ಸಂವೇದನೆಯನ್ನು ಹೊಸರೀತಿಯಲ್ಲಿ ಅಭಿವ್ಯಕ್ತಗೊಳಿಸುತ್ತದೆ. ಈ ಹೊಸ ಸಂವೇದನೆ ಕಾದಂಬರಿಯ ದನಿಯಲ್ಲಿ ಅಡಕವಾಗಿದೆ… ಕಾದಂಬರಿಯುದ್ದಕ್ಕೂ ಆಶ್ಚರ್ಯಕರ ರೀತಿಯಲ್ಲಿ ನಮ್ಮ ಗಮನ ಸೆಳೆಯುವುದೆಂದರೆ ಮಹಾದೇವರ ವಾಕ್ಯರಚನೆ ಮತ್ತು ಪ್ಯಾರಾಗಳ ರಚನೆ. ಇವು ಕನ್ನಡ ಭಾಷೆಯಲ್ಲಿ ನಮಗೆ ಪರಿಚಯವಿರುವಂತೆ ಕೊನೆಯಾಗುವುದಿಲ್ಲ. ಅಥವಾ ನಾವು ನಿರೀಕ್ಷೆ ಮಾಡದ ರೀತಿಯಲ್ಲಿ ಕೊನೆಯಾಗಿ ವಾಕ್ಯಗಳು ಮತ್ತು ಪ್ಯಾರಾಗಳು ಅರ್ಧಕ್ಕೆ ನಿಂತಿವೆ ಅನಿಸುತ್ತದೆ. ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಹೊಸತೆನಿಸಿರುವ ಭಾಷೆಯನ್ನು ಕಾದಂಬರಿಕಾರರು ಅತ್ಯಂತ ಸೃಜನಾತ್ಮಕವಾಗಿ ಬಳಸಿಕೊಂಡಿದ್ದಾರೆ.” (ಎನ್.ಎಸ್.ರಘುನಾಥ, ಸಂಕ್ರಮಣ, ಸಂಪುಟ-26, ಸಂಚಿಕೆ:3).
“ಕುಸುಮಬಾಲೆ”ಯ ಭಾಷೆ ಮಾತ್ರವಲ್ಲ ನಿರೂಪಣಾವಿಧಾನವೂ ವಿಶಿಷ್ಟವಾಗಿದೆ. ಒಂದು ನಿರ್ದಿಷ್ಟ ಕ್ರಮದಲ್ಲಿ ಒಂದು ಕಾಲಾನುಕ್ರಮಣಿಕೆಯಲ್ಲಿ ಬೆಳೆಯುವ ಕಥೆ ಇಲ್ಲಿಲ್ಲ. ಬಿಡಿಬಿಡಿ ಘಟನೆ, ಸನ್ನಿವೇಶ, ದಂತಕಥೆ-ಪುರಾಣ ಹಾಗೂ ಕಥಾ ವಿವರಗಳು ಇಲ್ಲಿವೆ. ಅವು ಭೂತದಿಂದ ವರ್ತಮಾನಕ್ಕೆ ವರ್ತಮಾನದಿಂದ ಭೂತ ಕಾಲಕ್ಕೆ ಸಲೀಸಾಗಿ ಹೊರಳಿಕೊಳ್ಳುತ್ತ, ತುಯ್ಯುತ್ತ ಸಾಗುವ ಬಗೆಯೂ ವಿಶಿಷ್ಟವಾಗಿದೆ. ಅವುಗಳಿಂದಾಗಿ ಕೃತಿಯಲ್ಲಿ ಒಂದು ಸಂಕೀರ್ಣ ಅನುಭವ ಪ್ರಪಂಚದ ಸೃಷ್ಟಿಯಾಗಿದೆ. ಆ ಅನುಭವ ಪ್ರಪಂಚ ಒಂದು ಸಂಸ್ಕೃತಿ ಸಂದರ್ಭವನ್ನು ವಿಶಿಷ್ಟ ಬಗೆಯ ಕಲಾತ್ಮಕ ತರ್ಕದಲ್ಲಿ ಹಿಡಿದುಕೊಡಲು ಪ್ರಯತ್ನಿಸುತ್ತಿರುವುದು ಅನುಭವಕ್ಕೆ ಬರುತ್ತದೆ. ಸೃಜನಶೀಲತೆಯ ಸ್ವೋಪಜ್ಞವಾದ ಜಾಡೊಂದನ್ನು ಹುಡುಕುವ ಪ್ರೇರಣೆ ಈ ಪ್ರಯತ್ನದ ಹಿಂದೆ ಇದೆ. ಡಾ.ಜಿ.ಎಸ್.ಆಮೂರ ಅವರು “ಇಲ್ಲಿ ಕಂಡುಬರುವ ಹಾಗೆ ಒಂದು ಸಮುದಾಯದ ಸಂಸ್ಕೃತಿಯನ್ನು ಸಮಗ್ರವಾಗಿ ಗ್ರಹಿಸಿದವರು ವಿರಳ. ಹೋಲಿಕೆಗಳನ್ನು ಹುಡುಕುವುದೇ ಆದರೆ ವೋಲೆ ಸೋಯಿಂಕಾರಂಥಾ ಆಫ್ರಿಕನ್ ಲೇಖಕರ ಕೃತಿಗಳಲ್ಲಿಯೇ ಅದು ಸಾಧ್ಯವಾಗಬಹುದು” ಎಂದಿದ್ದಾರೆ. ಜೊತೆಗೆ, ‘ಕನ್ನಡ ಕಾದಂಬರಿಯ ಪ್ರಾರಂಭದಿಂದಲೂ ಪಾಶ್ಚಾತ್ಯ ಸಾಹಿತ್ಯಗಳಿಗೂ ದೇಶೀಯ ಅನುಭವಕ್ಕೂ ನಡುವೆ ಹುಟ್ಟಿದ ಬಿಕ್ಕಟ್ಟನ್ನು ನಿವಾರಿಸುವಲ್ಲಿ ‘ಕುಸುಮಬಾಲೆ’ ಗಮನಾರ್ಹವಾದ ಯಶಸ್ಸನ್ನು ದೊರಕಿಸಿರುವುದರಿಂದ ಈ ದೃಷ್ಟಿಯಿಂದಲೂ ಅದು ಕನ್ನಡ ಕಾದಂಬರಿಯ ಬೆಳವಣಿಗೆಯ ಮೇಲೆ ಪ್ರಭಾವ ಬೀರಬಹುದು.” (‘ಪ್ರಜಾವಾಣಿ’ ಪುಸ್ತಕ ವಿಮರ್ಶೆ, ಸೆಪ್ಟೆಂಬರ್ 1988) ಎಂದೂ ಅವರು ಹೇಳಿದ್ದಾರೆ. ‘ಕುಸುಮಬಾಲೆ’ ಕುರಿತ ವಿಮರ್ಶೆ ಹೆಚ್ಚಿನ ಹೊಣೆಗಾರಿಕೆಯಿಂದ ನಡೆಯಬೇಕಾದದ್ದೆಂಬುದನ್ನಂತೂ ಈ ಮಾತುಗಳು ಸೂಚಿಸುತ್ತವೆ.
‘ಕುಸುಮಬಾಲೆ’ಯಲ್ಲಿ ದಂತಕಥೆ-ಪುರಾಣಗಳ ವಿಪುಲತೆಯೂ ಎದ್ದು ಕಾಣುವ ಅಂಶಗಳಲ್ಲೊಂದಾಗಿದೆ. ಕೃತಿಯಲ್ಲಿ ಚಿತ್ರಿತವಾಗಿರುವ ಜನಸಮುದಾಯದ ಸಂಸ್ಕೃತಿಯು ಚರಿತ್ರೆಯನ್ನು ವಾಸ್ತವ ಘಟನಾವಳಿಗಳ ತರ್ಕಬದ್ಧ ಅರಿವಿನಲ್ಲಿ ಗ್ರಹಿಸುತ್ತ ಬೆಳೆದು ಬಂದದ್ದಲ್ಲ. ಅದರ ಮನೋಭೂಮಿಕೆ (Psyche) ದಂತಕಥೆ- ಪುರಾಣಗಳ ಪರಂಪರೆಯಿಂದ ಪೋಷಿತವಾಗುತ್ತ, ಪುಷ್ಟಿ ಪಡೆಯುತ್ತ ಬಂದಂಥದು. ಹೀಗೆ ಇರುವ ಸಮೂಹ ಸಂಸ್ಕೃತಿಯು ವರ್ತಮಾನದ ವಾಸ್ತವವನ್ನೂ ದಂತಕಥೆ- ಪುರಾಣಗಳ ಮೂಲಕವೇ ವ್ಯಾಖ್ಯಾನಿಸಿಕೊಳ್ಳುವಂಥವಾಗಿರುವು
ಹದಿನಾರು ಎಳನೀರು ಕದ್ದ ಗಾರಸಿದ್ಮಾವನನ್ನು ಶಿವಾಚಾರದವರು ನ್ಯಾಯಗಂಬಕ್ಕೆ ಕಟ್ಟಿಹಾಕಿ ಥಳಿಸುತ್ತಾರೆ. ಹಾಗೆ ಕಟ್ಟಿಹಾಕಿ ಥಳಿಸಿದ್ದು ತಪ್ಪು. ಅದು ಮೇಲ್ಜಾತಿಯವರು ಕಾನೂನು ಕೈಗೆತ್ತಿಕೊಂಡು ನಡೆಸಿದ ದಬ್ಬಾಳಿಕೆ, ದಲಿತನ ಮೇಲೆ ನಡೆದ ದೌರ್ಜನ್ಯ ಎಂಬ ಅಭಿಪ್ರಾಯ ದಲಿತ ಸಂಘದ ನಾಗರಾಜನದು. ಆದರೆ ದಬ್ಬಾಳಿಕೆ, ದೌರ್ಜನ್ಯಗಳಿಗೆ ಈಡಾದ ಗಾರಸಿದ್ಮಾವನಿಗೇ ದಬ್ಬಾಳಿಕೆ, ದೌರ್ಜನ್ಯಗಳ ತೀವ್ರತೆ ತಟ್ಟುವುದಿಲ್ಲ. ಅದು ಅವನಿಗೆ ಅಷ್ಟೇನೂ ಮನಸ್ಸಿಗೆ ಹಚ್ಚಿಕೊಳ್ಳಬಹುದಾದ ಸಂಗತಿಯಲ್ಲ; ಅದೊಂದು ದೈನಿಕದ ವ್ಯವಹಾರದಂಥ ಸಾಮಾನ್ಯ ಘಟನೆ. ಅದು ಅವನಿಗೆ ಶೋಷಣೆಯ, ಅವಮಾನದ ಸಂಗತಿಯಾಗಿ ಕಾಣಿಸುವುದಿಲ್ಲ. ಆ ದೌರ್ಜನ್ಯವನ್ನು ತನ್ನ ಪೌರುಷ ಕೊಚ್ಚಿಕೊಳ್ಳುವುದಕ್ಕೆ ವಸ್ತುವಾಗಿ ಅವನು ಬಳಸಿಕೊಳ್ಳುತ್ತಾನೆ. ಇಲ್ಲಿ, ಹೊಸ ಸಾಮಾಜಿಕ ಪ್ರಜ್ಞೆ ಕಾಣುವ ಶೋಷಣೆ, ದಬ್ಬಾಳಿಕೆ, ದೌರ್ಜನ್ಯಗಳು ಸ್ವತಃ ಅವುಗಳಿಗೆ ಬಲಿಯಾಗುತ್ತಿರುವ ದಲಿತರ ಸಂವೇದನ ಸೀಮೆಯೊಳಗೆ ದಾಖಲಾಗದೆ ಹೋಗುವ ವಿಸಂಗತಿ ಮತ್ತು ದುರಂತ ಇವು ಸಂವೇದನಶೀಲ ಓದುಗರ ಅನುಭವಕ್ಕೆ ಬರುತ್ತದೆ.
ಗಾರಸಿದ್ಮಾವನಂಥವನು ಅನ್ಯಾಯ, ಶೋಷಣೆ, ದಬ್ಬಾಳಿಕೆಗಳನ್ನು ತನ್ನ ವೈಯಕ್ತಿಕ ಪೌರುಷ ಕೊಚ್ಚಿಕೊಳ್ಳುವುದಕ್ಕೆ ಕಾರಣವಾದ ಸಂಗತಿಗಳಾಗಿ ಬಳಸಿಕೊಂಡರೆ ಕುರಿಯಯ್ಯನಂಥವನ ನನ್ನಿಯು ತಮ್ಮವರ, ಅಂದರೆ ಶೋಷಿತ ಜನಸಮೂಹದವರ ಪೌರುಷ ಕೊಚ್ಚಿಕೊಳ್ಳುವ ಸಂಗತಿಯಾಗಿ ವ್ಯಾಖ್ಯಾನಿಸುತ್ತದೆ. ಅವುಗಳ ದುರಂತಕ್ಕೆ, ಯಾತನೆ ಅಥವಾ ಅವಮಾನದ ಅಲಗಿನ ತಿವಿತಕ್ಕೆ ಅವರು ಸಂವೇದನಾ ಜಡರಾಗುತ್ತಾರೆ. ಈ ಸಂವೇದನಾ ಜಡತೆ ಅವರಾಗಿ ತಂದುಕೊಂಡದ್ದಲ್ಲ; ಚರಿತ್ರೆ ಅವರಿಗೆ ಅಸಹಾಯಕತೆಯ ಒತ್ತಡದಲ್ಲಿ ಅನಿವಾರ್ಯವಾಗಿಸಿದ್ದು. ಹೀಗೆ ಸಂವೇದನಾ ಜಡರಾಗಿರದಿದ್ದರೆ, ತಮ್ಮ ನತದೃಷ್ಟ ಅವಸ್ಥೆಯನ್ನು ವೈಭವೀಕರಿಸಿಕೊಳ್ಳುವ ಅಪಸಾಮಾನ್ಯ ಮನಃಸ್ಥಿತಿಯನ್ನು ರೂಢಿಸಿಕೊಂಡಿರದಿದ್ದರೆ ಈಗಿರುವಂತೆ ಬದುಕಿಕೊಂಡು ಬರುವುದಕ್ಕೂ ಸಾಧ್ಯವಾಗದಂಥ ಸಾಮಾಜಿಕ ವ್ಯವಸ್ಥೆ ಈ ದೇಶದಲ್ಲಿ ಇತ್ತು; ಅದು ಈಗಲೂ ಮುಂದುವರಿಯುತ್ತಲಿದೆ. (ಸಂಗತಿಗಳನ್ನು ದಂತಕಥೆ ಪುರಾಣಗಳನ್ನಾಗಿ ಪರಿವರ್ತಿಸಿಕೊಳ್ಳುವ ಮನಃಪ್ರವೃತ್ತಿಯನ್ನೂ ಈ ಹಿನ್ನೆಲೆಯಲ್ಲಿ ಪರಿಭಾವಿಸಬಹುದು). ಈ ಬಗೆಯ ಸಂವೇದನಾ ಜಡತೆ ಹಾಗೂ ನತದೃಷ್ಟ ಅವಸ್ಥೆಯನ್ನು ವೈಭವೀಕರಿಸುವ ಪ್ರವೃತ್ತಿ-ಇವುಗಳೇ ಶತಮಾನಗಳ ಕಾಲದ ದಲಿತ ಜನಸಮೂಹದ ಜೀವನಧಾರಣೆಯ ಸತ್ಯಾಂಶಗಳೆಂಬಂತೆ ಆಗಿರುವುದೊಂದು ವ್ಯಂಗ್ಯ. ಇದು ಸಂಸ್ಕೃತಿಯ ದುರಂತ.
ದಲಿತ ಸಾಮಾನ್ಯರ ಸಂವೇದನಾ ಜಡತೆಯ ಅರಿವು ದಲಿತ ಸಂಘದ ವಿದ್ಯಾವಂತ ಯುವಕರಿಗೆ ಇದೆ. ವಿಚಾರವಾದ ಮತ್ತು ತರ್ಕದ ನೆಲೆಯಲ್ಲಿ ಮಾತ್ರ ಅದು ಅವರ ಅರಿವಿಗೆ ಬಂದಿದೆ. ಗಾರಸಿದ್ಮಾವ, ಕುರಿಯಯ್ಯ, ಚನ್ನನ ಅಪ್ಪನಂಥವರಿಗೆ ವಿದ್ಯಾವಂತ ಯುವಕರ ಈ ಅರಿವು ಗಂಭೀರವಾಗಿ ಪರಿಗಣಿಸಬೇಕಾದದ್ದೆಂದು ಅನಿಸುವುದಿಲ್ಲ. ಅಂದರೆ ಅವರ ಮತ್ತು ಇವರ ನಡುವೆ ಸಂವಹನದ ಕಂದಕ ಇದೆ. ಇದು ಹಾಲಿ ಇರುವ ಸಂಸ್ಕೃತಿ ಸಂದರ್ಭದಲ್ಲಿ ಬದುಕುತ್ತಿರುವವರ ಮನೋಭೂಮಿಕೆಗೂ, ಇರಬೇಕಾದ ಹೊಸ ಸಂಸ್ಕೃತಿ ಸಂದರ್ಭವನ್ನು ಹೋರಾಡಿ ನಿರ್ಮಿಸಲು ಹಾತೊರೆಯುತ್ತಿರುವ ವಿದ್ಯಾವಂತ ದಲಿತ ಯುವಕರು ಇತಿಹಾಸ ಪ್ರಜ್ಞೆ ಮತ್ತು ವಿಚಾರವಾದ(ideology)ಗಳ ಜ್ಞಾನ-ಇವುಗಳ ಮೂಲಕ ಪಡೆದ ಹೊಸ ಸಾಮಾಜಿಕ ಪ್ರಜ್ಞೆಯ ಮನೋಭೂಮಿಕೆಗೂ ಇರುವಂಥ ದುರಂತ ವಿಸಂಗತಿಯನ್ನು ಸೂಚಿಸುತ್ತದೆ. ಆ ಮೂಲಕ ದಲಿತ ಸಂಘದವರ ಸಾಮಾಜಿಕ ನ್ಯಾಯದ ಪರವಾದ ಹೋರಾಟದ ಯಶಸ್ಸಿನ ಗತಿಯನ್ನು ನಿಯಂತ್ರಿಸುತ್ತಿರುವಂಥ ಹಾಗೂ ದಲಿತರು ಶೋಷಣೆ, ದಬ್ಬಾಳಿಕೆ, ದೌರ್ಜನ್ಯಗಳಿಂದ ಬಿಡುಗಡೆ ಪಡೆಯುವ ಅವಕಾಶದಿಂದ ಕಾಲವಂಚಿತರಾಗುತ್ತಿರುವಂಥ ವಸ್ತುಸ್ಥಿತಿಯ ಬಿಕ್ಕಟ್ಟಿನ ಅರಿವನ್ನೂ ಮೂಡಿಸುತ್ತದೆ.
ಈ ಓದುಗ ವರ್ಗದವರ ಸಂವೇದನಾ ಸ್ತರ ಅಥವಾ ಸಂವೇದನಾ ತರಂಗಾಂತರಗಳೂ ಭಿನ್ನವಾಗುತ್ತವೆ. ಸಂವೇದನಾ ಭಿನ್ನತೆಯ ಪ್ರಶ್ನೆ ವ್ಯಕ್ತಿ ವ್ಯಕ್ತಿಗೆ ಸಂಬಂಧಿಸಿದಂತೆಯೂ ಇರುವಂಥದು. ಪ್ರತಿಯೊಬ್ಬ ನಿರ್ದಿಷ್ಟ (particular) ಓದುಗನ ಸಂವೇದನಾ ಭಿನ್ನತೆಯನ್ನು ಕುರಿತು ಇಲ್ಲಿ ಪ್ರಸ್ತಾಪಿಸುತ್ತಿಲ್ಲ. ನಮ್ಮ ಸಾಮಾಜಿಕ ಸಾಂಸ್ಕೃತಿಕ ಸಂದರ್ಭದಲ್ಲಿ ಮೇಲೆ ವಿಂಗಡಿಸಿದ ಭಿನ್ನ ಪಂಗಡಗಳಿಗೆ ಒಳಪಡುವವರ, ಆ ಕಾರಣದಿಂದಲೇ ಅವರಿಗೆ ಸಾಮಾನ್ಯವಾಗಿರುವ (general), ಸಂವೇದನಾ ಭಿನ್ನತೆಯನ್ನು ಕುರಿತು ಇಲ್ಲಿ ಪ್ರಸ್ತಾಪಿಸಲಾಗಿದೆ. ಈ ಭಿನ್ನತೆ ಕಾದಂಬರಿಯ ಅಭಿವ್ಯಕ್ತಿ ವಿಧಾನಕ್ಕೆ ಸಂಬಂಧಿಸಿದ ತೊಡಕಿನಿಂದ ಉಂಟಾದ ಸಂವಹನದ ಪ್ರಶ್ನೆ ಮಾತ್ರವಾಗಿರದೆ ಮೂಲತಃ ಸಂವೇದನೆಗೆ ಸಂಬಂಧಿಸಿದ ಪ್ರಶ್ನೆಯೂ ಆಗಿದೆ ಎಂಬುದು ಮುಖ್ಯ ಅಂಶವಾಗಿದೆ. ಇದು ಅವಶ್ಯವಾಗಿ ಗಮನಿಸಬೇಕಾದದ್ದು. ಸಂಸ್ಕೃತಿಯ ಈ ಸಂವೇದನಾ ವಿಘಟನೆಯ ದುರಂತವನ್ನೂ ಧ್ವನಿಸುವ ವಿವಕ್ಷೆ ಅಥವಾ ಆಶಯ ಕಾದಂಬರಿಕಾರನದಾಗಿದೆ. ಇದರಿಂದಾಗಿ ಕಾದಂಬರಿಕಾರ ಕೃತಿಯೊಳಗೆ ಏಕಮುಖಿ ದೃಷ್ಟಿಕೋನದ ಕಾಣ್ಕೆಯನ್ನು ಪೋಷಿಸುತ್ತ ಬೆಳೆಯುವ ಅಭಿವ್ಯಕ್ತಿ ಪ್ರಕ್ರಿಯೆಯನ್ನು ಬಿಟ್ಟು ದ್ವಿಮುಖೀ ದೃಷ್ಟಿಕೋನದ ಕಾಣ್ಕೆ(double vision) ಅಭಿವ್ಯಕ್ತಿ ವಿಧಾನವನ್ನು ಬಳಸಲು ಯತ್ನಿಸಿದಂತೆ ತೋರುತ್ತದೆ. ನಿರೂಪಣೆಯ ಭಾಷೆ ಮತ್ತು ವಿಧಾನದ ಧಾಟಿ ನಿಯಂತ್ರಣದ(tone controlling) ಕಠಿಣತಮ ಸವಾಲನ್ನು ಈ ಕಾರಣದಿಂದಾಗಿ ಕಾದಂಬರಿಕಾರ ಎದುರಿಸುವಂತಾಗಿದೆ. ಈ ಯತ್ನದ ಅಥವಾ ಪ್ರಯೋಗದ ಯಶಸ್ಸು/ ಅಯಶಸ್ಸಿನ ಪ್ರಶ್ನೆಯನ್ನು ವಿಮರ್ಶೆ ಕೈಗೆತ್ತಿಕೊಂಡು ಚರ್ಚಿಸಬೇಕಾಗಿದೆ, ತೀರ್ಮಾನಿಸಬೇಕಾಗಿದೆ.