ಪ್ರಜ್ಞೆಯನ್ನು ಸೂಕ್ಷ್ಮಗೊಳಿಸಿ, ಸಂವೇದನೆಯನ್ನು ಎಚ್ಚರಿಸುವ “ಎದೆಗೆ ಬಿದ್ದ ಅಕ್ಷರ” -ಪ್ರೊ. ರಾಜೇಂದ್ರ ಚೆನ್ನಿ 

[ಖ್ಯಾತ ವಿಮರ್ಶಕರಾದ ಪ್ರೊ.ರಾಜೇಂದ್ರ ಚೆನ್ನಿಯವರ 2014ರಲ್ಲಿ ಪ್ರಕಟವಾದ “ಎಂದಿಗೂ ಹೊಸದು” ವಿಮರ್ಶಾ ಸಂಕಲನದಲ್ಲಿ “ಎದೆಗೆ ಬಿದ್ದ ಅಕ್ಷರ” ಕುರಿತ  ಈ ಬರಹ ದಾಖಲಾಗಿದ್ದು, ನಮ್ಮ ಮರು ಓದಿಗಾಗಿ ಇಲ್ಲಿದೆ.]

 

 

ನಾನು ಮಹಾದೇವರ ಬರಹದ ಬಗ್ಗೆ ತುಂಬಾ ಬರೆದಿದ್ದೇನೆ ಎನ್ನುವ ಆಪಾದನೆಯನ್ನು ಹೊತ್ತಿದ್ದೇನೆಯಾದರೂ ‘ಎದೆಗೆ ಬಿದ್ದ ಅಕ್ಷರ’ ಕೃತಿಯನ್ನು ಓದುತ್ತಾ ಹೋದಂತೆ ಅದು ನನಗೆ ಒಂದು  discovery  ಯ ಹಾಗೆ ಯಾಕೆ ಅನ್ನಿಸಿತು ಎನ್ನುವುದನ್ನು ಅರ್ಥಮಾಡಿಕೊಳ್ಳಲು ಈ ಲೇಖನವನ್ನು ಬರೆಯುತ್ತಿದ್ದೇನೆ. ಈ ಕೃತಿಯ ಸಾವಿರಾರು ಓದುಗರಿಗೂ ಹೀಗೇ ಅನ್ನಿಸಿರಬಹುದು ಎಂದುಕೊಂಡಿದ್ದೇನೆ. ಒಂದು ತಲೆಮಾರಿನ ಕಾಲಮಾನದಲ್ಲಿ ತಾನು ಅನುಭವಿಸಿದ್ದನ್ನು ಕನ್ನಡ ಸಮುದಾಯವು ಈ ಕೃತಿಯ ಮೂಲಕ ಅರ್ಥಮಾಡಿಕೊಳ್ಳುತ್ತಿದೆ ಮತ್ತು ತನ್ನನ್ನೇ ಇನ್ನೊಮ್ಮೆ  discover ಮಾಡಿಕೊಳ್ಳುತ್ತಿದೆಯೆಂದು ನನಗೆ ಅನ್ನಿಸಿದೆ. ಹೀಗೆ ಒಂದು ಕಾಲದ ಅಂತರಂಗವನ್ನು ಜನರ ಅಂತಃಕರಣವನ್ನು ಮುಟ್ಟುವ ಭಾಷೆಯಲ್ಲಿ ಒಂದು ಕೃತಿ ಹೇಳುವಂತಾಗುವುದು ಅಪರೂಪದ ಘಟನೆ.  ಹಾಗಂತ ಭಾವುಕವಾಗಿ ಅಥವಾ ಆರಾಧಕವಾಗಿ ನಾನು ಹೇಳುತ್ತಿಲ್ಲ. ಏಕೆಂದರೆ ಈ ಕೃತಿಯ ಬರಹವು ಎದುರು ಹಾಕಿಕೊಂಡಿರುವ ಸಂಕಟವೇನೆಂದರೆ ಅದು ಯಾವ ಸಮಾಜ ಹಾಗೂ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದೆಯೋ ಅವುಗಳು ತಮ್ಮ ಸಂವೇದನೆಯನ್ನೇ ಕಳೆದುಕೊಂಡು ಬಿಟ್ಟಿವೆ. ಹೆಚ್ಚು ಕಡಿಮೆ ಪ್ರತಿಯೊಂದು ಲೇಖನದಲ್ಲಿ ಮಹಾದೇವರು ‘ಇದರಿಂದ ನಾವು ಬೆಚ್ಚಿಬೀಳುತ್ತಿಲ್ಲ’ ‘ಇದು ನಮಗೆ ಭೀತಿ ಹುಟ್ಟಿಸುತ್ತಿಲ್ಲ’ವೆಂದು ಬರೆಯುತ್ತಾರೆ. ಇದು ಇಂದಿನ ಬರಹದ ಬಹು ದೊಡ್ಡ ತೊಡಕು ಹಾಗೂ ಸಂಕಟ. ಜಡವಾದ ಮನಸ್ಸುಗಳು, ಲಕ್ವಾ ಹೊಡೆದಿರುವ ನೈತಿಕ ಪ್ರಜ್ಞೆ  social conscience ಎಂದು ಕರೆಯಬಹುದಾದ ಸಾಮುದಾಯಿಕ ಎಚ್ಚರವೇ ಇಲ್ಲದ ಸ್ಥಿತಿ ಇವುಗಳ ಮಧ್ಯ ಬರಹ ಯಾರನ್ನು ತಲುಪುತ್ತದೆ? ತನ್ನ ಅಂತಿಮವಾದ ಸೋಲನ್ನು ಮೊದಲೇ ಒಪ್ಪಿಕೊಂಡು ಅದು ಹೊರಡಬೇಕೆ? ಸಮಸ್ಯೆಯೆಂದರೆ ಈ ಕಾಲದ ಯಾವ ದುರಂತಗಳೂ, ಅಂದರೆ ಜಡಗಟ್ಟಿದ ಜಾತಿವ್ಯವಸ್ಥೆ, ಕೊಳಕಾದ ಭ್ರಷ್ಠ ರಾಜಕೀಯ, ಕ್ರೂರವಾದ ಬಲಪಂಥೀಯ ಚಟುವಟಿಕೆಗಳು ಹಾಗೂ ಜಾಗತೀಕರಣ- ಇವುಗಳಲ್ಲಿ ಯಾವುದೂ ಅಪರಿಚಿತವಲ್ಲ; ಅಗೋಚರವೂ ಅಲ್ಲ.  ಬೇರೆ ಏನನ್ನು ಯೋಚಿಸಲಾರದಷ್ಟು ಮತ್ತು ಭಾವಿಸಲಾರದಷ್ಟು ದಟ್ಟವಾಗಿ ಇವು ನಮ್ಮನ್ನು ಆವರಿಸಿಬಿಟ್ಟಿವೆ. ರೋಸಿ ಹೋಗುವಷ್ಟು ಮೂರ್ತವಾಗಿ ಮಾಧ್ಯಮಗಳು ಇವೇ ವಿದ್ಯಮಾನಗಳನ್ನು ಬಿಂಬಿಸುತ್ತಿವೆ. ಆದರೆ ಮಹಾದೇವ ಮತ್ತೆ ಮತ್ತೆ ಕೇಳುವ ಪ್ರಶ್ನೆಯೆಂದರೆ ಈ ಯಾವ ವಿದ್ಯಮಾನವೂ ನಮ್ಮನ್ನು ವಿಚಲಿತಗೊಳಿಸುವುದಿಲ್ಲ. ಇದಕ್ಕೆ ಈ ಬರಹಗಳು ಕಂಡುಕೊಳ್ಳುವ ಕಾರಣವೆಂದರೆ ಸಾವಿರಾರು ವರ್ಷಗಳಿಂದ ಇರುವ ಜಾತಿ ಸಮಾಜ, ಅಸಮಾನತೆ ಹಾಗೂ ತಾರತಮ್ಯಗಳು ಮೊದಲೇ ನಮ್ಮ ಸಾಮುದಾಯಿಕ ಪ್ರಜ್ಞೆಯನ್ನು ನಿಷ್ಕ್ರಿಯಗೊಳಿಸಿವೆ. ಹೀಗಾಗಿ ನಮ್ಮ ಕಾಲದ (ಅಂದರೆ ಸ್ವಾತಂತ್ರ್ಯೋತ್ತರ ಕಾಲದ) ಇನ್ನೂ ಭೀಕರವಾದ ತಾರತಮ್ಯಗಳು ಈ ಪ್ರಜ್ಞೆಯನ್ನು ಕೊಂದೇ ಹಾಕಿವೆ.  ಹೀಗಿರುವಾಗ ಈ ಸನ್ನಿವೇಶದಲ್ಲಿ ಬರಹ ತನ್ನ ಉದ್ದೇಶವನ್ನು ಸಾಧಿಸುವುದು ಹೇಗೆ?

 

ಇದಕ್ಕೆ ಒಂದು ಪರಿಹಾರವನ್ನು ಈ ಕೃತಿಯೇ ತೋರಿಸುತ್ತದೆ.  ಲೇಖಕ ಮಹಾದೇವ ತಮ್ಮನ್ನು ಒಬ್ಬ ನೈತಿಕ ಪ್ರವಾದಿ ಹಾಗೂ ಗುರುವಾಗಿ ಬಿಂಬಿಸಿಕೊಳ್ಳುವುದಿಲ್ಲ. ಎಲ್ಲ ಸಂಕಟಗಳಿಗೂ ಉತ್ತರಗಳಿರುವ ಸಿದ್ಧಾಂತದ ಪ್ರತಿಪಾದಕರಾಗಿ ಕಾಣಿಸಿಕೊಳ್ಳುವುದಿಲ್ಲ. ಬದಲಾಗಿ ಒಬ್ಬ ಸಮಾನದುಃಖಿಯಾಗಿ ಬರೆಯುತ್ತಾರೆ. ಅಲ್ಲದೆ ಇನ್ನೊಬ್ಬ ಮನುಷ್ಯ ವೃಕ್ತಿಯ ಬಗ್ಗೆ ಕಾರುಣ್ಯವೇ ಅಸಾಧ್ಯವಾಗಿರುವ ಸಮಾಜದಲ್ಲಿ ಆ ಇನ್ನೊಬ್ಬನಾಗಿ ಅನುಭವಿಸುವ ಪ್ರಯತ್ನವನ್ನು ಮಾಡುತ್ತಾರೆ. ಒಬ್ಬ ಪೌರಕಾರ್ಮಿಕ ದಲಿತನಾಗಿ, ಉಡುಪಿ ದೇವಾಲಯದ ಬಗ್ಗೆ ಭಿನ್ನವಾಗಿ ಪ್ರತಿಕ್ರಿಯಿಸಬಲ್ಲ ಬ್ರಾಹ್ಮಣ ವ್ಯಕ್ತಿ, ಕುರುಬ ವ್ಯಕ್ತಿಯಾಗಿ ಅರಿಯುವುದಲ್ಲ, ಅನುಭವಿಸುವ ಪ್ರಯತ್ನ ಮಾಡುತ್ತಾರೆ. ಇದರಲ್ಲಿ ಯಾವುದೇ  heroism  ಇಲ್ಲ. ಇದೊಂದು ಸಣ್ಣ ಪ್ರಾಮಾಣಿಕ ಪ್ರಯತ್ನ ಮಾತ್ರವೆಂದು ಹೇಳುತ್ತಾರೆ. ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳುತ್ತಾ ಒಂದೆರಡು ಗಳಿಗೆ ನೀವು ನೀವಲ್ಲದ ಜಾತಿಯವರಾಗಿ ಕಲ್ಪಿಸಿಕೊಳ್ಳಿ ಎನ್ನುತ್ತಾರೆ. ಪ್ರಾಣೇಶಾಚಾರ್ಯ ಮತ್ತು ಜಗನ್ನಾಥರು ಹೀಗೆ ಮಾಡಲಾಗದ್ದರಿಂದ ಅವರು ಬ್ರಾಹ್ಮಣ್ಯದ ಕ್ರೌರ್ಯದ ಪ್ರತಿನಿಧಿಗಳಾಗಿ ಉಳಿಯುತ್ತಾರೆ. ಇದಕ್ಕೆ ತದ್ವಿರುದ್ಧವಾದುದ್ದನ್ನು ‘ಎದೆಗೆ ಬಿದ್ದ ಅಕ್ಷರ’ ಕೃತಿ ನಮ್ಮ ಮುಂದೆ ಇಡುತ್ತದೆ. ಒಟ್ಟಾರೆಯಾಗಿ ಈ ಕೃತಿ ಒಂದು ಆರ್ತವಾದ ಮನುಷ್ಯ ಪ್ರೀತಿಯಿಂದ ಈ ಸಾಧ್ಯತೆಯನ್ನು ಶೋಧಿಸುತ್ತದೆ. ಹೀಗಾಗಿಯೇ ದಲಿತ ಸರಕಾರಿ ನೌಕರರ ಬಗ್ಗೆ, ಸವರ್ಣೀಯ ಅಧ್ಯಾಪಕರಿಂದಾಗಿ ಅಂಕಗಳು ಬರದೇ ಇದ್ದ ದಲಿತ ವಿದ್ಯಾರ್ಥಿಗಳಿಗೆ ಹಾಗೂ ದಲಿತರ ಕೊಲೆಗಳು ನಿಲ್ಲಲಿ ಎಂದು ಪ್ರತಿಭಟಿಸುತ್ತಿದ್ದ ದಲಿತರ ಮೇಲೆ ಹಲ್ಲೆ ಮಾಡಿದ ಆರ್ಮುಗಂ ಮತ್ತು ಶ್ರೀನಿವಾಸ ಪ್ರಸಾದರಿಗೆ ಕಿವಿಹಿಂಡಿ, ನಿಷ್ಠುರವಾಗಿ ಈ ಬರಹ ಮಾತನಾಡಬಲ್ಲದು.  ಅಲ್ಲದೆ ದಲಿತ ವರ್ಗಗಳು ಕೀಳರಿಮೆ ಬೆಳೆಸಿಕೊಂಡು ಮೇಲ್ಜಾತಿಯವರ ಅನುಕರಣೆಗೆ ತೊಡಗುವುದರ ಬಗ್ಗೆಯಾಗಲೀ, ತಾವೂ ಕೂಡ ತಾರತಮ್ಯಗಳನ್ನು ಬೆಳೆಸಿಕೊಂಡು “ಹುಳುಗಳ ಹಾಗೆ ಒದ್ದಾಡುವುದರ” ಬಗ್ಗೆ ಪ್ರಾಮಾಣಿಕವಾಗಿ ಸಾಚಾತನದಿಂದ ಮಾತನಾಡಬಲ್ಲದಾಗಿದೆ. ಪ್ರಗತಿಪರವಾದ ಚಿಂತನೆ, ಸಾಮಾಜಿಕ ನ್ಯಾಯ ಇವುಗಳ ಹೆಸರಿನಲ್ಲಿ ಕಳೆದುಹೋಗಿರುವ ಪ್ರಾಮಾಣಿಕ ಆತ್ಮಶೋಧನೆಯು ಈ ಬರಹದ ಶಕ್ತಿಯಾಗಿದೆ. ಅಲ್ಲದೆ ಇದು ದಲಿತ ಬರಹದ ಲಕ್ಷಣವೂ ಆಗಿದೆ. ಇನ್ನೊಂದು ಸಂದರ್ಭದಲ್ಲಿ ನಾನು ಬರೆದಂತೆ ದಲಿತ ಬರಹಗಾರರು ದಲಿತ ಅನುಭವದ ಎಲ್ಲಾ ಮಗ್ಗಲುಗಳನ್ನು ತೀವ್ರವಾದ ಪ್ರಾಮಾಣಿಕತೆಯಿಂದ ಶೋಧಿಸುವಂತೆ ಸವರ್ಣೀಯ ಬರಹಗಾರರು ಇತ್ತೀಚಿನ ಬರಹಗಳಲ್ಲಿ ತಮ್ಮ ಅನುಭವವನ್ನು ಶೋಧಿಸುತ್ತಿಲ್ಲ. ಉದಾಹರಣೆಗೆ ದಲಿತ ಬದುಕಿನ ಸೋಲು, ಅಪಮಾನ, ಬಿರುಕುಗಳು ಇವುಗಳ ಬಗ್ಗೆ ತಾದಾತ್ಮ್ಯದಿಂದ ದಲಿತ ಬರಹಗಾರರು ಬರೆದಂತೆ ಉಳಿದ ಬರಹಗಾರರು ತಮ್ಮ ಅನುಭವಲೋಕದ ಬಗ್ಗೆ ಬರೆದಿಲ್ಲ. ಇದನ್ನು ಇಲ್ಲಿ ವಿಸ್ತರಿಸುವುದಿಲ್ಲ. ಮಹಾದೇವರು ತಮ್ಮನ್ನು ಭಿನ್ನವಾದ ನೆಲೆಯಲ್ಲಿ locate ಮಾಡಿಕೊಳ್ಳುತ್ತಾರೆ.

 

ಇದನ್ನು ನಾನು ಇನ್ನೂ ಸ್ಪಷ್ಟವಾಗಿ ವಿವರಿಸಬೇಕಾಗಿದೆ. ದಲಿತ ಬರಹವು ದಲಿತ ಸಮುದಾಯಗಳ ಶೋಷಣೆಯನ್ನು, ಅವಮಾನಗಳನ್ನು ತನ್ನ ಮುಖ್ಯ ವಸ್ತುವನ್ನಾಗಿಸಿಕೊಂಡು ಇವುಗಳಿಗೆ ಕಾರಣವಾದ ಮೇಲ್ಜಾತಿ, ಮೇಲ್ವರ್ಗಗಳ ಸಂಸ್ಕೃತಿಯನ್ನು ಉಗ್ರವಾಗಿ ವಿರೋಧಿಸುವುದು ಚಾರಿತ್ರಿಕವಾದ ಅನಿವಾರ್ಯತೆಯಾಗಿತ್ತು. ನೈತಿಕ ಆಕ್ರೋಶದ ಬೆಂಬಲವಿಲ್ಲದೆ ಸ್ಥಗಿತವಾದ ಜಾತಿ ಸಮಾಜದಲ್ಲಿ ಯಾವುದೋ ಚಲನೆಯು ಸಾಧ್ಯವಿರಲಿಲ್ಲ. ಐತಿಹಾಸಿಕವಾಗಿ ಇಂಥ ಚಾಲನೆ ದೊರೆತದ್ದು ಎರಡು ಸಂದರ್ಭಗಳಲ್ಲಿ ಮಾತ್ರವೆಂದು ತೋರುತ್ತದೆ. ಒಂದು ಭಾರತದ ಉದ್ದಕ್ಕೂ ನಡೆದ ಭಕ್ತಿ ಪರಂಪರೆಯ ಚಳುವಳಿಗಳಲ್ಲಿ. ಈ ಚಳುವಳಿಗಳ ನೇತೃತ್ವವು ಬಹುಪಾಲು ಮೇಲ್ಜಾತಿಯ ಧೀಮಂತರದ್ದಾಗಿದ್ದರೂ ಕೂಡ ಅವು ಜಾತಿ ಸಮಾಜ ಹಾಗು ತಾರತಮ್ಯಗಳ ಮೂಲಭೂತವಾದ ಪ್ರತಿರೋಧವನ್ನು ವ್ಯಕ್ತಪಡಿಸಿದವು. ಅಲ್ಲದೆ ಈ ಚಳುವಳಿಗಳು ದಲಿತ ಹಾಗೂ ಹಿಂದುಳಿದ ವರ್ಗಗಳನ್ನು ಪ್ರಭಾವಿಸಿದ್ದರಿಂದಾಗಿ ಈ ವರ್ಗಗಳ ನೆಲೆಯ ಮೂಲಕವೂ ಪ್ರತಿರೋಧವು ಸಾಧ್ಯವಾಯಿತು.  ‘ಎದೆಗೆ ಬಿದ್ದ ಅಕ್ಷರ’ ಕೃತಿಯ ಉದ್ದಕ್ಕೂ ವಚನಕಾರ ಯುಗದ ಪ್ರಸ್ತಾಪವಿದೆ.  ಅದು ಮಹಾದೇವರಿಗೆ ಒಂದು ಆದರ್ಶ ಹಾಗೂ ಸಾಧ್ಯತೆಯಾಗಿ ಕಂಡಿದೆ. ಜಾತಿ ವ್ಯವಸ್ಥೆಯಲ್ಲಿ ಚಲನೆಯುಂಟಾದ ಇನ್ನೊಂದು ಸಂದರ್ಭವೆಂದರೆ ವಸಾಹತುಶಾಹಿಯು ತಂದ ಪಲ್ಲಟ. ಇದರ ಬಗ್ಗೆ ಮಹಾದೇವರ ಕೃತಿಯು ಮೌನವಾಗಿದೆ. ಚಾರಿತ್ರಿಕವಾಗಿ ವಸಾಹತುಶಾಹಿಯು ತಂದ ಪಲ್ಲಟಗಳಿಂದಾಗಿ ಜ್ಯೋತಿಬಾ ಫುಲೆ ಮತ್ತು ನಂತರ ಅಂಬೇಡ್ಕರ್ ಅವರ ಅತ್ಯಂತ ಆಳವಾದ ಜಾತಿವ್ಯವಸ್ಥೆಯ ವಿಮರ್ಶೆ ಹಾಗೂ ಪ್ರತಿರೋಧಗಳು ಸಾಧ್ಯವಾದವು. ಕಳೆದ ಇಪ್ಪತ್ತು ವರ್ಷಗಳಲ್ಲಿ ವಸಾಹತೋತ್ತರ ಚಿಂತನೆ (post-colonial-theory) ಎಂದು ಕರೆಯಲಾಗುವ ಸಿದ್ಧಾಂತಗಳು ವಸಾಹತುಶಾಹಿಯ ಏಕಮುಖವಾದ, ಸೀಮಿತವೂ ಅಚಾರಿತ್ರಿಕವೂ ಆದ ವಿವರಣೆಗಳನ್ನು ಕೊಟ್ಟಿವೆ. ಆದರೆ ಈ ಸಿದ್ಧಾಂತಗಳ ಪಡಿನೆರಳಿನಲ್ಲಿ ಸಿಕ್ಕುಹಾಕಿಕೊಳ್ಳದ ಚಾರಿತ್ರಿಕವಾಗಿ ಸಮರ್ಪಕವಾದ ಅಧ್ಯಯನಗಳು ಭಾರತದ ಸಂದರ್ಭದಲ್ಲಿ ವಸಾಹತುಶಾಹಿಯು ದಲಿತ ಸಮುದಾಯಗಳಲ್ಲಿ ತಂದ ಚಲನೆಯನ್ನು ವಿವರಿಸಿವೆ. ಇದು ಬಹು ಸಂಕೀರ್ಣವಾದ ವಿಷಯವಾಗಿದ್ದು ಅಂಬೇಡ್ಕರ್ ಅಂಥ ದಲಿತ ಚಿಂತಕರು ಬ್ರಿಟಿಷ್ ವಸಾಹತುಶಾಹಿಯ ಪರವಾಗಿದ್ದರು ಎನ್ನುವ ಕುತ್ಸಿತ ವಿವರಣೆಯನ್ನು ಮೀರಿರುವಂಥದ್ದು. ಈ ಲೇಖನದಲ್ಲಿ ಅದರ ಚರ್ಚೆಗೆ ಅವಕಾಶವಿಲ್ಲದ್ದರಿಂದ ಭಾರತದ ಸಂದರ್ಭದಲ್ಲಿ ದಲಿತ ಸಮುದಾಯಗಳು ವಸಾಹತುಶಾಹಿ, ಆಧುನಿಕತೆ ಮೊದಲಾದವುಗಳನ್ನು ಬಹಳ ಭಿನ್ನವಾಗಿ ಅನುಭವಿಸಿದವು ಮತ್ತು ಈಗ ಲಭ್ಯವಿರುವ ಪಾಶ್ಚಿಮಾತ್ಯ ಹಾಗೂ ಭಾರತೀಯ ವಿದ್ವತ್ತು (Scholarship) ಈ ವಿದ್ಯಮಾನವನ್ನು ಈವರೆಗೆ ಸರಿಯಾಗಿ ಅರ್ಥಮಾಡಿಕೊಂಡಿಲ್ಲವೆಂದು ಮಾತ್ರ ಹೇಳಬಯಸುತ್ತೇನೆ.

 

ನಾನು ಹೇಳಿದ ಮಾತಿಗೆ ಮರಳುವುದಾದರೆ ಚಾರಿತ್ರಿಕ ವಿದ್ಯಮಾನಗಳಿಂದಾಗಿ ದಲಿತ ಬರಹವು ನೈತಿಕ ಆಕ್ರೋಶ ಹಾಗೂ ಪ್ರತಿರೋಧದ ನೆಲೆಯಿಂದ ಆರಂಭವಾಗಬೇಕಾದದ್ದು ಅನಿವಾರ್ಯವಾಗಿತ್ತು.  ಆದರೆ ಈ ನೆಲೆಗಳಿಗಿಂತ ಭಿನ್ನವಾದ ಸ್ವ-ವಿಮರ್ಶೆ ಹಾಗೂ ಇತರ ಸಮುದಾಯಗಳನ್ನು ಜಾತಿ ಸಮಾಜದ ಬಲಿಪಶುಗಳಾಗಿ ನೋಡುವ ದೃಷ್ಟಿಕೋನದ ನೆಲೆಗಳೂ ಅವಶ್ಯಕವಾಗಿವೆ.  ಈ ಕೃತಿಯಲ್ಲಿ ಮಹಾದೇವರು ಈ ನೆಲೆಗಳನ್ನು ಗಟ್ಟಿಯಾಗಿ ನಮ್ಮ ಮುಂದಿಟ್ಟಿದ್ದಾರೆ. ಅವರ ಪ್ರಸಿದ್ಧವಾದ ಗಾಂಧಿ ಸಿನೇಮಾ ನೋಡಿದ ಪ್ರಕರಣವನ್ನು ಇಂಥ ಪರ್ಯಾಯ ನೆಲೆಗಳ ಹುಡುಕಾಟವನ್ನಾಗಿ ನೋಡಬಹುದಾಗಿದೆ. ಈ ಕೃತಿಯನ್ನು ಅಂಬೇಡ್ಕರ್ ಮತ್ತು ಗಾಂಧಿ ಲೋಕದೃಷ್ಟಿಗಳ ಒಗ್ಗೂಡುವಿಕೆಯ ಪ್ರಯತ್ನವಾಗಿ ನೋಡುವುದು ಸಾಧ್ಯ.  ನನಗೆ ಅತ್ಯಂತ ವಿಶಿಷ್ಟವಾಗಿ ಕಾಣುವುದೆಂದರೆ ಬಹಳ ಕಡೆಗೆ ಗಾಂಧಿವಾದಿಯ ದನಿಯಲ್ಲಿ ಮಾತನಾಡುವ ಮಹಾದೇವರು ಸನಾತನಿಗಳ ಬಗ್ಗೆ, ಬ್ರಾಹ್ಮಣ್ಯದ ಅಹಂಕಾರ ಹಾಗೂ ಕ್ರೌರ್ಯಗಳ ಬಗ್ಗೆ ಮತ್ತು ಬಲಪಂಥೀಯ ಕೋಮುವಾದಿಗಳ ಬಗ್ಗೆ ಬರೆಯುವಾಗ ಅಂಬೇಡ್ಕರ್ ಅವರ ಕಟುವಾದ ದನಿಯಲ್ಲಿಯೇ ಬರೆಯುತ್ತಾರೆ. ಈ ಕೃತಿಯ ಮುಖ್ಯ ಬರಹಗಳಾದ “ಸಂವಿಧಾನಕ್ಕೆ ಭೂತ ಚೇಷ್ಟೆ” ಹಾಗೂ “ಮಾನವೀಯತೆ ಅನ್ನುತ್ತಾರಲ್ಲ…” ಇವುಗಳನ್ನು ನೋಡಿದರೆ ಈ ಬಗ್ಗೆ ಯಾವ ಸಂಶಯವೂ ಉಳಿಯಲಾರದು. ಅತ್ಯಂತ ವಸ್ತುನಿಷ್ಟವಾಗಿ ಜಾತಿವ್ಯವಸ್ಥೆಯ ಮೌಢ್ಯ ಹಾಗೂ ಕ್ರೌರ್ಯಗಳನ್ನು ಗುರುತಿಸುತ್ತ, ಅತಿಶಯೋಕ್ತಿಯಿಲ್ಲದ ನೈತಿಕ ಆಕ್ರೋಶದಿಂದ ಬರೆಯುವ ಧಾಟಿ ಅಂಬೇಡ್ಕರ್ ಅವರದಾಗಿತ್ತು. ತನ್ನ ಒಳತೋಟಿಯನ್ನೂ, ಸೂಕ್ಷ್ಮವಾದ ನೋವುಗಳನ್ನು ಒಂಚೂರೂ ಬಿಟ್ಟು ಕೊಡದೇ ಬರೆಯುವ ಮಹಾದೇವರು ಸಮಾಜದ ಭೀಕರ ವಾಸ್ತವಗಳನ್ನು ಕುರಿತು ಬರೆಯುವಾಗ ಇದೇ ಧಾಟಿಯಲ್ಲಿ ಬರೆಯುತ್ತಾರೆ.  ಅವರ ಆಕ್ರೋಶದ ಹಿಂದೆ ಗಾಢವಾದ ವಿಷಾದವೂ ಇದೆ. ಈ ಮಾತನ್ನು ಹೇಳುವ ಅವಶ್ಯಕತೆ ಯಾಕಿದೆಯೆಂದರೆ ಅವಸರದಲ್ಲಿ ಓದುವವರು ಮಹಾದೇವರ ಬರಹವು ಕೇವಲ ಉದಾರವಾದಿ ಮಾನವತಾವಾದಿ ಧೋರಣೆಯದು ಎಂದುಕೊಳ್ಳುವ ಸಾಧ್ಯತೆ ಇದೆ. ಮಹಾದೇವರು ಪ್ರಮುಖವಾದ ಮೌಲ್ಯವೆಂದು ಗುರುತಿಸುವ ‘ಕಾರುಣ್ಯ’ದ ಪ್ರಸ್ತಾಪಗಳಿಂದಾಗಿಯೂ ಈ ಅಭಿಪ್ರಾಯ ಬರುವ ಸಾಧ್ಯತೆ ಇದೆ.  ಆದರೆ ಅವರ ಬರಹದ ಒಂದು ಗಟ್ಟಿಯಾದ ನೆಲೆಯೆಂದರೆ ಅದು ಜಾತಿ ಸಮಾಜ, ಕೋಮುವಾದ ಹಾಗೂ ಜಾಗತೀಕರಣಗಳ ಅಮಾನುಷ ಕೌರ್ಯಗಳಿಂದ ತನ್ನ ನೋಟವನ್ನು ಕದಲಿಸುವುದಿಲ್ಲ. ಇವುಗಳನ್ನು ನೆಟ್ಟಗೆ ಕಣ್ಣೆದುರಿಗಿಟ್ಟುಕೊಂಡೇ ಕಾರುಣ್ಯದ ಬಗ್ಗೆ ಮಾತನಾಡುವ ಕ್ರಿಯಾಶೀಲ ಪ್ರಯತ್ನವೇ ಈ ಕೃತಿಯ ಸಾಧನೆಯಾಗಿದೆ.

 

ಕೇವಲ ಕಾರುಣ್ಯ ಅಥವಾ ಮಾನವೀಯತೆಯ ಬಗ್ಗೆ ಮಾತನಾಡುವುದು ಭೋಳೇತನದ ತೋರುಗಾರಿಕೆಯಾದರೆ, ಕೇವಲ ಕಟುವಾದ ಪ್ರತಿರೋಧದ ಧಾಟಿಯೂ ಒಂದು ಬಗೆಯ ಬೌದ್ಧಿಕ ಅಹಂಕಾರವಾಗಿ ಬಿಡಬಹುದು. ಈ ಕೃತಿಯಲ್ಲಿ ಇವೆರಡನ್ನೂ ಮೀರಿದ ಇನ್ನೊಂದು ಮಾರ್ಗದ ಅನ್ವೇಷಣೆ ಇದೆ. ನಮ್ಮ ಸಂಪ್ರದಾಯಗಳ ಬಗ್ಗೆ ಮಹಾದೇವರ ಅಭಿಪ್ರಾಯ ನಾಲ್ಕು ದಶಕಗಳಲ್ಲಿ ಬದಲಾಗಿಲ್ಲ. ಜಾತಿ ಸಮಾಜದಲ್ಲಿರುವ ಸಾಹಿತ್ಯ ಸಂಪ್ರದಾಯದಲ್ಲಿ ಮಾನವೀಯತೆಯನ್ನು ಹುಡುಕುವುದೆಂದರೆ ಹೆಣದ ರಾಶಿಯಲ್ಲಿ ಜೀವವನ್ನು ಹುಡುಕಿದಂತೆ; ವಚನಕಾರರ ಯುಗದಲ್ಲಿ ಮಾತ್ರ ತಾರತಮ್ಯಗಳನ್ನು ಮೀರುವ ಒಂದು ಸಾಂಘಿಕ ಪ್ರಯತ್ನ ನಡೆಯಿತು; ಪ್ರಗತಿಶೀಲ ಚಳುವಳಿಯಂಥ ದಮನಿತ ಪರ ಚಳುವಳಿಗಳು ‘ಮಿದುಳಿಗೆ’ ಮಾತ್ರ ಸೀಮಿತವಾಗಿ ನಡೆಯುವ ಪಾದಗಳಾಗಲಿಲ್ಲ; ಜಾಗತೀಕರಣವು ವ್ಯಾಪಾರವಲ್ಲ- ಅದು ನರಹಂತಕ ಯುದ್ಧ- ಈ ಅಭಿಪ್ರಾಯಗಳನ್ನು ಮಹಾದೇವ ಅತ್ಯಂತ ಖಚಿತವಾಗಿ ಮುಂದಿಡುತ್ತಾರೆ.  ಹೀಗಾಗಿ ಇಡೀ ಸಾವಿರಾರು ವರ್ಷಗಳ ಪರಂಪರೆಯಲ್ಲಿ ಎಲ್ಲಾ ಮನುಷ್ಯರ ಪರವಾಗಿ ಇರುವುದು ತುಂಬಾ ಕಡಿಮೆ. ಇಂಥ ಸಂಪ್ರದಾಯದಲ್ಲಿ ಬರೆಯಲು ಆರಂಭಿಸುವ ದಲಿತ ಬರಹಗಾರನಿಗೆ ಬರಹವೇ ನೋವು ಮತ್ತು ಅಪರಾಧಿ ಭಾವನೆಗಳನ್ನು ತರುತ್ತದೆ.  ಏಕೆಂದರೆ ಅಕ್ಷರ ಹಾಗೂ ಬರಹಗಳನ್ನು ಕಲಿತು ಸಾಹಿತ್ಯರಚನೆ ಮಾಡುತ್ತಿರುವ ಅವನು ಇವೆಲ್ಲದರಿಂದ ಹೊರಗೇ ಇರುವ ತನ್ನ ಸಮುದಾಯಕ್ಕೆ ಒಳಗಿನವನು ಹೌದು, ಹೊರಗಿನವನೂ ಹೌದು.  ಇಂಥ ಒಂದು ತಿಳುವಳಿಕೆಯಿಂದ ಬರೆಯುತ್ತ ತನ್ನ ಈ ಇಬ್ಬಂದಿತನದ ನೋಟವನ್ನು ಮರೆಯುವಂತಿಲ್ಲ. ಆದರೆ ಎರಡು ಬೆರಳಿನಷ್ಟು ಅಥವಾ ಒಂದು ಅಂಗೈಯಷ್ಟು ಇರುವ ತನ್ನ ಬರಹವು ಒಂದು ಮಹತ್ತರವಾದ ಸಂಚಲನವನ್ನು ಹುಟ್ಟಿಸಬಲ್ಲದು ಎನ್ನುವ ಎಚ್ಚರವೂ ಅವರಿಗಿದೆ. ಇಂಥ ಸಂಕೀರ್ಣದವಾದ ನೆಲೆಯಿಂದ ಈ ಕೃತಿಯ ಬರಹವು ಹೊರಬಂದಿದೆ.

 

ಹೀಗಾಗಿ ಇಲ್ಲಿ ಅಂಬೇಡ್ಕರ್-ಗಾಂಧಿ ಸಿದ್ಧಾಂತಗಳ ಚರ್ಚೆ ಇಲ್ಲದಿದ್ದರೂ ಅವರ ಲೋಕದೃಷ್ಟಿಗಳನ್ನು ಸೃಜನಶೀಲ ಬರಹದೊಂದಿಗೆ ಹದಗೊಳಿಸುವ ಪ್ರಯತ್ನವಿದೆ. ಇದರ ಪರಿಣಾಮವೆಂದರೆ ಈ ಬರಹಕ್ಕೆ ಇರುವ ಅಪೂರ್ವವಾದ ರೂಪಕ ಶಕ್ತಿ, ಕಥನಗುಣ ಮತ್ತು  ಕಾವ್ಯದ ಹರಹು. ಮಹಾದೇವರು ಹೇಳುವಂತೆ ಈ ಬರಹಗಳು ಸುಮಾರು 40 ವರ್ಷಗಳ ಅವಧಿಯಲ್ಲಿ ಬರೆದಿರುವಂಥವು. ಹೀಗಾಗಿ ತಮ್ಮ ಬರಹದ ಸ್ವರೂಪವನ್ನು (form) ನಿರ್ಧರಿಸಿಕೊಂಡು ಅವರು ಬರೆದಿಲ್ಲ. ಆದರೆ ಅದು ತಾನೇ ಹರಳುಗಟ್ಟಿ ಪಡೆದುಕೊಂಡಿರುವ ಸ್ವರೂಪ ಮಾತ್ರ ಅಪರೂಪದ್ದು. ಒಂದು ಕಡೆಗೆ gnostic ಕತೆಗಳಂತೆ ಇನ್ನೊಂದು ಕಡೆಗೆ ಸೂಫಿ, ಝೆನ್ ಕತೆಗಳಂತೆ, ಬೇರೆ ಕಡೆಗೆ ಭಾವಗೀತಾತ್ಮಕ ಸ್ವಗತಗಳಂತೆ ಹೀಗೆ ವ್ಯೆವಿಧ್ಯಮಯ ಸ್ವರೂಪದಲ್ಲಿದ್ದರೂ ಮೂಲತಃ ಈ ಬರಹ ಗಾಢವಾದ ಚಿಂತನೆಗೆ ಮೂರ್ತವಾದ ರೂಪಕ, ದೃಷ್ಟಾಂತ, ಪ್ರತಿಮೆಗಳನ್ನು ಕಂಡುಕೊಳ್ಳುವ ಬಗೆಯದು. ಆದ್ದರಿಂದ ವೈಚಾರಿಕ ಬರಹವು ತರುವಂಥ ದಣಿವನ್ನೂ ಈ ಕೃತಿಯ ಓದು ತರುವುದಿಲ್ಲ. ಅದಕ್ಕಿಂತ ಮುಖ್ಯವಾಗಿ ಈ ಬರಹ ನಮ್ಮ ಪ್ರಜ್ಞೆಯೊಳಗೆ ಇಳಿದು ನಮ್ಮ ಅರಿವನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಕೃತಿ ಅಚ್ಚರಿಯಾಗುವಷ್ಟು ಪ್ರಮಾಣದಲ್ಲಿ ಅಪಾರ ಓದುಗರನ್ನು ತಲುಪಿದ್ದು ಕನ್ನಡ ಸಂಸ್ಕೃತಿಯಲ್ಲಿ ಒಂದು ಅಪೂರ್ವ ವಿದ್ಯಮಾನ. ಅದನ್ನೆ ಪ್ರತ್ಯೇಕವಾಗಿ ವಿಶ್ಲೇಷಿಸಬಹುದಾಗಿದೆ. ನನಗೆ ಮುಖ್ಯವೆನಿಸುವುದು ಈ ಕೃತಿಯನ್ನು ವಿಸ್ತರಿಸುವ ರೀತಿಯಲ್ಲಿ ಸಾಮುದಾಯಿಕವಾದ ಚರ್ಚೆಯನ್ನು ನಡೆಸುವುದಾಗಿದೆ. ಈ ಚರ್ಚೆಯು ಒಳಗೊಳ್ಳಬಹುದಾದ ಅಂಶಗಳು ಹೀಗಿವೆ:

1. ಎದೆಗೆ ಬಿದ್ದ ಅಕ್ಷರ ಕೃತಿಯ ಉದ್ದೇಶವು ನಮ್ಮ ಪ್ರಜ್ಞೆಯನ್ನು ಸೂಕ್ಷ್ಮಗೊಳಿಸಿ ನಮ್ಮ ಸಂವೇದನೆಯನ್ನು ಎಚ್ಚರಿಸುವುದಾಗಿದೆ ಹಾಗೂ ಈ ಉದ್ದೇಶದಲ್ಲಿ ಅದು ಸಫಲವಾಗಿದೆ. ಆದರೆ ಅಂತಿಮವಾಗಿ ಈ ಚಿಂತನೆ ಬಯಸುವುದು ಸಮಾಜದ ರಚನೆಗಳಲ್ಲಿ ಆಗಬೇಕಾದ ಮಹತ್ತರವಾದ ಪಲ್ಲಟಗಳನ್ನು. ಈ ಕೃತಿಯೊಂದಿಗೆ ಸಂವಾದಿಸುತ್ತಾ ಇಂಥಹ ರಚನಾತ್ಮಕ ಪಲ್ಲಟಗಳನ್ನು ತರುವ ಕ್ರಿಯೆಗಳನ್ನು ರೂಪಿಸಿಕೊಳ್ಳುವುದು ಹೇಗೆ?

2. ದಲಿತ ಬರಹ ಮತ್ತು ಚಿಂತನೆಗಳು ಒಂದು ಬಗೆಯ ಸ್ಥಗಿತ ಸ್ಥಿತಿಗೆ ತಲುಪಿದ ಹೊತ್ತಲ್ಲಿ ಈ ಕೃತಿ ಹೊರ ಬಂದಿದೆ. ಚಿಂತನೆ ಹಾಗೂ ಬರಹದ ಸ್ವರೂಪ ಇವೆರಡರಲ್ಲೂ ಹೊಸದಾದ ಜೀವಂತಿಕೆಯ ಅವಶ್ಯಕತೆ ಇದೆ.  ಇದನ್ನು ಸಾಧ್ಯವಾಗಿಸುವುದು ಹೇಗೆ?

3. ದಲಿತ ಸಮುದಾಯಗಳ ನಡುವೆ ಹಾಗೂ ಚಳುವಳಿಗಳ ನಡುವೆ ಹುಟ್ಟಿರುವ ಬಿರುಕುಗಳು ಈ ಕೃತಿಯಲ್ಲಿ ಚರ್ಚೆಯಾಗಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಬಿರುಕುಗಳು ಇನ್ನೂ ಆಳವಾಗುತ್ತಿರುವ ದುರಂತವೇ ನಿಜವಾಗುತ್ತಿದೆ. ಇವುಗಳನ್ನು ಬಗೆಹರಿಸುವುದು ಇಂದಿನ ತುರ್ತು ಸಮಸ್ಯೆಯಲ್ಲವೆ?  ಇಲ್ಲದೇ ಇದ್ದರೆ ಇನ್ನೇನು ಬರಲಿರುವ ಬಲಪಂಥೀಯ ಫ್ಯಾಸಿಜಮ್ ಈ ಬಿರುಕುಗಳ ಪ್ರಯೋಜನ ಪಡೆಯುವುದಿಲ್ಲವೆ?