ನಿಂತರೆ ಕಷ್ಟ, ಮುನ್ನಡೆದರೆ ಇನ್ನೂ ಕಷ್ಟ -ನಾಗೇಶ್ ಹೆಗಡೆ ಅವರ ಅಂಕಣ

                                                                                        ನಾಗೇಶ್ ಹೆಗಡೆ

           ನಿಂತರೆ ಕಷ್ಟ, ಮುನ್ನಡೆದರೆ ಇನ್ನೂ ಕಷ್ಟ

 

    ಇದು ಉಲ್ಕಾಪಾತದ ಸಮಯ. ಇಂದು ರಾತ್ರಿ ಆಕಾಶದ ಕಡೆ ನೋಡುತ್ತಿದ್ದರೆ (ಮೋಡ ಇಲ್ಲದಿದ್ದರೆ) ಉರಿಯುವ ಬಾಣದಂತೆ ಅಲ್ಲೊಂದು ಇಲ್ಲೊಂದು ಉಲ್ಕೆಗಳು ಅಡ್ಡಡ್ಡ ಹಾಯ್ದು ಕಣ್ಮರೆಯಾಗುವುದನ್ನು ನೋಡಬಹುದು. ಅದೃಷ್ಟವಿದ್ದರೆ ಗಂಟೆಗೆ ಅರವತ್ತು ಉಲ್ಕೆಗಳವರೆಗೂ ಲೆಕ್ಕ ಮಾಡಬಹುದು. ಅದಕ್ಕೆ ‘ಪರ್ಸೀಡ್ ಉಲ್ಕಾಪಾತ’ ಎನ್ನುತ್ತಾರೆ. ಕಳೆದ ಎರಡು ವಾರಗಳಿಂದ ಈ ಬಾಣದ ಸುರಿಮಳೆ ಸಣ್ಣ ಪ್ರಮಾಣದಲ್ಲಿ ಇದ್ದುದು ನಿನ್ನೆ ಮತ್ತು ಇಂದು ರಾತ್ರಿ ಅತಿ ಜಾಸ್ತಿಯಾಗಿ ಕ್ರಮೇಣ ಕಡಿಮೆಯಾಗುತ್ತ ಇನ್ನೆರಡು ವಾರಗಳಲ್ಲಿ ಮುಗಿಯುತ್ತದೆ. ಪ್ರತಿ ವರ್ಷ ಆಗಸ್ಟ್ 12-13ರಂದು ಪರ್ಸೀಡ್ ಮತ್ತು ನವಂಬರ್ 17 -18ರಂದು ಲಿಯೊನಿಡ್ ಉಲ್ಕಾಪಾತ ಗರಿಷ್ಠ ಸಂಖ್ಯೆಯಲ್ಲಿ ಕಾಣುತ್ತವೆ.

ಪರ್ಸೀಡ್ ಉಲ್ಕಾಪಾತಕ್ಕೆ ಸ್ವಿಫ್ಟ್ ಟಟ್ಟ್‌ಲ್ ಎಂಬ ಧೂಮಕೇತು ಕಾರಣ. ಇದು 1997 ರಲ್ಲಿ ಸೂರ್ಯನ ಪ್ರದಕ್ಷಿಣೆ ಹಾಕಿ ಸ್ವಸ್ಥಾನಕ್ಕೆ ಹೊರಟು ಹೋಗಿದೆ. ಅದು ಅಂದು ಸೂರ್ಯನ ಬಳಿ ಬಂದಿದ್ದಾಗ ಅದರ ತಲೆಯಲ್ಲಿದ್ದ ದೂಳು ಮತ್ತು ಹಿಮದ ಕಣಗಳನ್ನು ಕೊಡವಿ ದಾರಿಯುದ್ದಕ್ಕೂ ಚೆಲ್ಲಿ ಹೋಗಿದೆ. ಭೂಮಿ ತನ್ನ ಕಕ್ಷೆಯಲ್ಲಿ ಸುತ್ತುತ್ತ ಪ್ರತಿ ವರ್ಷ ಇದೇ ವೇಳೆಗೆ ಧೂಮಕೇತು ಸಾಗಿ ಹೋದ ಕಕ್ಷೆಯನ್ನು ಕ್ರಾಸ್ ಮಾಡುತ್ತದೆ. ಲಾರಿಯೊಂದು ಹೊಗೆ ದೂಳು ಚಿಮ್ಮಿಸುತ್ತ ನಮ್ಮ ರಸ್ತೆಗೆ ಅಡ್ಡವಾಗಿ ದಾಟಿ ಹೋಗಿದ್ದಿದ್ದರೆ ನಾವು ಮೂಗಿಗೆ ಕರವಸ್ತ್ರ ಹಿಡಿಯುವ ಹಾಗೆ ಇಂದು ನಾವು ಮೂಗಿನ ಮೇಲೆ ಬೆರಳಿಟ್ಟು ಈ ವೈಚಿತ್ರ್ಯವನ್ನು ನೋಡಬಹುದು.

ಅದು ಸುಂದರ ದೃಶ್ಯವೇನೊ ಹೌದು. ಆದರೆ ನಮ್ಮ ರಾಜ್ಯದಲ್ಲಿ ಬಹುಪಾಲು ಎಲ್ಲ ಕಡೆ ಮೋಡ ಮುಸುಕಿದೆ. ಮಳೆಯ ಅದೃಷ್ಟವಿಲ್ಲದೆ ಬರ ಪರಿಸ್ಥಿತಿಯನ್ನು ಎದುರಿಸುತ್ತಿರುವ 98 ತಾಲ್ಲೂಕುಗಳಲ್ಲಿ ಉಲ್ಕಾವೃಷ್ಟಿ ಕಂಡೀತಾದರೂ ಅದರ ಮೋಹಕತೆಯನ್ನು ಗ್ರಹಿಸುವ ಮನಸ್ಥಿತಿ ಯಾರಿಗೂ ಇದ್ದಂತಿಲ್ಲ. ‘ಮೇಘರಾಜನೇ ನಮ್ಮತ್ತ ಮಿಂಚಿನ ಖಡ್ಗವನ್ನು ಝಳಪಿಸಬೇಡ, ಮಳೆಹನಿಯ ಬಾಣಗಳನ್ನು ಕಳಿಸು’ ಎಂದು ‘ಲಗಾನ್ ’ ಚಿತ್ರದಲ್ಲಿ ಉದಿತ್ ನಾರಾಯಣ ಹಾಡಿದ ಹಾಗೆ ಎಲ್ಲರೂ ಮಳೆಹನಿಗಾಗಿ ಕಾದಿರುತ್ತಾರೆ.

ಮಳೆ ಬಂದರೂ ನಾವೇನು ಸಂಭ್ರಮಿಸುವ ಸ್ಥಿತಿಯಲ್ಲಿದ್ದೇವೆಯೆ?  ‘ಸಾರ್ ನಮ್ಮಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು 80 ಸಾವಿರ ಮಾವಿನ ಮರಗಳು ಒಣಗಿ ಹೋಗಿವೆ. ಸುಮಾರು ಎಂಟೂವರೆ ಲಕ್ಷ ತೆಂಗಿನ ಮರಗಳು ನೀರಿಲ್ಲದೆ ಸತ್ತು ಹೋಗಿವೆ’ ಎನ್ನುತ್ತಾರೆ ರಾಮನಗರ ಜಿಲ್ಲೆಯ ಅರಳಾಳುಸಂದ್ರದ ರೈತ ಮುಖಂಡ ಪುಟ್ಟಸ್ವಾಮಿ. ಮಳೆ ಕಡಿಮೆಯಾಗಿದೆಯೆ? ಹಾಗೇನೂ ಇಲ್ಲ. ಕಳೆದ ಹತ್ತು ವರ್ಷಗಳಲ್ಲಿ ಈ ಜಿಲ್ಲೆಯಲ್ಲಿ ತೀವ್ರ ಬರಪರಿಸ್ಥಿತಿಯೇನೂ ಬರಲಿಲ್ಲ. ಮಳೆ ಬೀಳುವಷ್ಟು ಬೀಳುತ್ತಲೇ ಇದೆ.

ಮತ್ತೆ ಮಳೆನೀರನ್ನು ಇಂಗಿಸಬಾರದೆ? ಇಲ್ಲ, ಆ ನೀರೆಲ್ಲ ತಂತಾನೇ ಇಂಗ್ತಾನೇ ಇದೆ ಎಂದು ಅವರು ಹೇಳುತ್ತಾರೆ. ‘ಕಳೆದ 18 ವರ್ಷಗಳಿಂದ ನಮ್ಮ ಹಳ್ಳದಲ್ಲಿ ಸತತ ಒಂದು ಗಂಟೆ ನೀರು ಹರಿದಿರುವುದನ್ನು ನೋಡಲೇ ಇಲ್ಲ’ ಎನ್ನುತ್ತಾರೆ, ಪುಟ್ಟಸ್ವಾಮಿ. ನೀರು ಹರಿದರೆ ತಾನೆ ತಡೆಹಿಡಿದು ನಿಲ್ಲಿಸೋದು? ಅವರ ಜಿಲ್ಲೆಯಲ್ಲಿ 70 ಸಾವಿರ ಕೊಳವೆ ಬಾವಿಗಳು ಒಣಗಿವೆಯಂತೆ. ಬಿದ್ದ ನೀರನ್ನೆಲ್ಲ ನೆಲವೇ ನುಂಗಿಬಿಡುತ್ತದೆ. ನೆಲದ ಬಾಯಾರಿಕೆ ಇಂಗುವುದೇ ಇಲ್ಲ.

ನೆಲಕ್ಕೆ ಅಷ್ಟೆಲ್ಲ ಬಾಯಾರಿಕೆ ಆಗುವುದಾದರೂ ಹೇಗೆ? ಇದಕ್ಕೆ ನಾವು ಮಾಡಿಕೊಂಡ ಮೂರು ಸರಣಿ ದುರಂತಗಳೇ ಕಾರಣ: ಮೊದಲನೆಯದಾಗಿ ರಸಗೊಬ್ಬರಗಳ ಅತಿ ಬಳಕೆ; ಅದರಿಂದಾಗಿ ಅಂತರ್ಜಲದ ಬೇಕಾಬಿಟ್ಟಿ ಬಳಕೆ; ಇವೆರಡರ ಪರಿಣಾಮವಾಗಿ ಭೂಮಿ ಬಿಸಿಯಾಗುತ್ತಿದೆ.

ಇವಕ್ಕೆಲ್ಲ ಮೂಲ ಕಾರಣವಾದ ಸಾರಜನಕ ರಸಗೊಬ್ಬರದ (ಯೂರಿಯಾ, ಆಮೋನಿಯಂ ನೈಟ್ರೇಟ್) ಕತೆ ರೋಚಕವಾಗಿದೆ. ಸಸ್ಯಗಳ ಬೆಳವಣಿಗೆಗೆ ಸಾರಜನಕ ಬೇಕು ಎಂಬುದು ಎಲ್ಲರಿಗೂ ಗೊತ್ತಿತ್ತು. ವಾತಾವರಣದಲ್ಲಿ ಹೇರಳ (ಶೇ 78) ಸಾರಜನಕ ಇರುವುದೂ ಗೊತ್ತಾಗಿತ್ತು.  ನಿಸರ್ಗ ಅದ್ಯಾವುದೋ ಅದ್ಭುತ ಲೆಕ್ಕಾಚಾರದ ಪ್ರಕಾರ   ಮಣ್ಣಿನಲ್ಲಿರುವ ಸೂಕ್ಷ್ಮಾಣುಗಳ ಸಹಾಯದಿಂದ ಗಾಳಿಯಲ್ಲಿನ ಸಾರಜನಕವನ್ನು ಹೀರಿ ಸಸ್ಯಗಳಿಗೆ ಉಣಿಸುತ್ತಿತ್ತು.  ಕೆಲವಷ್ಟನ್ನು ಮಿಂಚಿನ ಮೂಲಕವೂ ಕೊಡುತ್ತಿತ್ತು. ಸಸ್ಯಗಳು ಮತ್ತು ಪ್ರಾಣಿಗಳ ಮೂಲಕ ಸಾರಜನಕವೆಲ್ಲ ಮತ್ತೆ ಸಸ್ಯಗಳ ಬೇರಿಗೆ ಸೇರುತ್ತಿತ್ತು.

ಆಸೆ ನೋಡಿ. ಹೇಗಾದರೂ ಮಾಡಿ ವಾಯುಮಂಡಲದಲ್ಲಿದ್ದ ಹೇರಳ ಸಾರಜನಕವನ್ನು ಹಿಂಡಿ ಸಸ್ಯಗಳಿಗೆ ದ್ರಾವಣ ಅಥವಾ ಪುಡಿರೂಪದಲ್ಲಿ ಕೊಡಲು ಸಾಧ್ಯವಾದರೆ ಬೇಕೆಂದಲ್ಲಿ ಬೇಕಾದಷ್ಟು ಬೆಳೆ ತೆಗೆಯಬಹುದು ಎಂಬ ಯೋಚನೆ ಮನುಷ್ಯನಿಗೆ ಬಂತು. 120 ವರ್ಷಗಳ ಹಿಂದೆ ಅನೇಕ ಪ್ರಯತ್ನಗಳು ನಡೆದು ವಿಫಲವಾಗಿದ್ದವು. ಜರ್ಮನಿಯ ಫ್ರಿತ್ಸ್ ಹೇಬರ್ ಎಂಬಾತ ಮಾಮೂಲು ಗಾಳಿಯನ್ನು ಅಡುಗೆ ಅನಿಲಕ್ಕೆ ಸೇರಿಸಿ ಭಾರೀ ಶಾಖ ಮತ್ತು ಒತ್ತಡ ಕೊಟ್ಟು ಸಾರಜನಕವನ್ನು ರಸರೂಪಕ್ಕೆ ತಂದೇಬಿಟ್ಟ. ’ಯುರೇಕಾ!’ ಎಂದು ಕೂಗುವ ಬದಲು ’ಯೂರಿಯಾ’ ಎಂದನೇನೊ.

ಅದು ನಮ್ಮೆಲ್ಲರ ಮೂತ್ರದಲ್ಲಿಯೂ ಇದೆ. (ಈಚೆಗೆ ನಿತಿನ್ ಗಡ್ಕರಿಯವರು ತನ್ನ ತೋಟದ ಗಿಡಮರಗಳು ತನ್ನದೇ ಮೂತ್ರದಿಂದ ಬೆಳೆದಿವೆ ಎಂದು ಹೇಳಿದ್ದು ನೆನಪಿಗೆ ಬಂತೆ?) 1910ರಲ್ಲಿ ಅದನ್ನು ಯಂತ್ರದ ಮೂಲಕ ಆಮೊನಿಯಾ ದ್ರವ ರೂಪದಲ್ಲಿ ಬಸಿದ ಹೇಬರ್‌ಗೆ ನೊಬೆಲ್ ಪ್ರಶಸ್ತಿ ಬಂತು. ವಾಯುಮಂಡಲದಲ್ಲಿ ಮೋಡ ಮತ್ತು ಮಿಂಚು ಸೇರಿ ಇಂಥದ್ದೇ ರಸಗೊಬ್ಬರವನ್ನು ತಯಾರಿಸಿ ಕೋಟ್ಯಂತರ ವರ್ಷಗಳಿಂದ ಭೂಮಿಗೆ ಎರಚುತ್ತಿವೆ. ಮಿಂಚು ಕೋರೈಸಿದಾಗಿನ ಅಪಾರ ಶಾಖ ಮತ್ತು ಒತ್ತಡದಲ್ಲಿ ಅಲ್ಲಿನ ಸಾರಜನಕವೆಲ್ಲ ಆಮೋನಿಯಾ ಅನಿಲ ರೂಪದಲ್ಲಿ ಎಲೆಗಳಿಗೆ ಒದಗುತ್ತಿದೆ. ಗುಡುಗಿನ ಸದ್ದು ಹೊಮ್ಮುತ್ತಲೇ ಮಳೆ ಹನಿ ಬೀಳದಿದ್ದರೂ ಗಿಡಮರಗಳು ಹಸುರಾಗಲು ಈ ಆಮೋನಿಯಾವೇ ಕಾರಣ.

ಗಾಳಿಯಿಂದ ಆಮೋನಿಯಾ ಮತ್ತು ನೈಟ್ರೇಟ್ ಉತ್ಪಾದಿಸಿದ ಹುಮ್ಮಸಿನಲ್ಲೇ ಫ್ರಿತ್ಸ್ ಹೇಬರ್ ಮರುವರ್ಷ ಅದೇ ಆಮೋನಿಯಂ ನೈಟ್ರೇಟನ್ನು ವಿಷಾನಿಲ ಅಸ್ತ್ರವನ್ನಾಗಿ ಬಳಸುವ ವಿಧಾನದ ಬಗ್ಗೆ ಪ್ರಯೋಗ ಆರಂಭಿಸಿದ. ಅವನಿಗಿಂತ ಹೆಚ್ಚು ಕಲಿತು ಕೆಮಿಸ್ಟ್ರಿಯಲ್ಲಿ ಡಾಕ್ಟರೇಟ್ ಪಡೆದಿದ್ದ ಪತ್ನಿ ಕ್ಲಾರಾ ಅಂಥ ವಿಧ್ವಂಸಕ ಪ್ರಯೋಗ ಬೇಡವೆಂದು ಪರಿಪರಿಯಾಗಿ ಹೇಳಿದಳು. ಆದರೂ ವಿಷಾನಿಲ ಅಸ್ತ್ರ ರೂಪುಗೊಂಡಿತು.

ಮೊದಲನೆ ಮಹಾಯುದ್ಧದ ಆರಂಭದಲ್ಲೇ (1914ರಲ್ಲೇ) ಈಪ್ರೆಸ್ ಕದನದಲ್ಲಿ 65 ಸಾವಿರ ಜನರ ಸಾವಿಗೆ ಕಾರಣವಾಯಿತು. ಇಂದಿಗೆ ಸರಿಯಾಗಿ ನೂರು ವರ್ಷಗಳ ಹಿಂದೆ, 1915ರಲ್ಲಿ ಡಾ. ಕ್ಲಾರಾ ತೀರ ಬೇಜಾರಿನಿಂದ ಅವನದೇ ಪಿಸ್ತೂಲಿನಿಂದ ತನ್ನ ಎದೆಗೆ ಗುಂಡಿಟ್ಟುಕೊಂಡು ಸತ್ತಳು. ಜರ್ಮನಿ ದೊಡ್ಡ ಪ್ರಮಾಣದಲ್ಲಿ ಆಮೋನಿಯಂ ನೈಟ್ರೇಟ್ ಉತ್ಪಾದಿಸಿ ಕೊಬ್ಬಿ ಬೆಳೆಯಿತು. ಅದೇ ನೈಟ್ರೇಟ್ ಆಮೇಲೆ ಸ್ಫೋಟಕವಾಗಿಯೂ ವ್ಯಾಪಕವಾಗಿ ಬಳಕೆಗೆ ಬಂದು ಜಗತ್ತಿನೆಲ್ಲೆಡೆ ಭಯೋತ್ಪಾತಕ್ಕೆ ಕಾರಣವಾಯಿತು. ಬೆಂಗಳೂರಿನ ಮಲ್ಲೇಶ್ವರದಲ್ಲಿ ಬಿಜೆಪಿ ಕಚೇರಿಯ ಬಳಿ ಅದು ಸ್ಫೋಟಿಸಿದ್ದು ನೆನಪಿದೆ ತಾನೆ?

ಮರಳಿ ಮಣ್ಣಿಗೆ: ಹೀಗೆ ರಸಗೊಬ್ಬರ ರೂಪದಲ್ಲಿ ಸಸ್ಯಗಳಿಗೆ ಸಾರಜನಕವನ್ನು ಬಲವಂತವಾಗಿ ಊಡಿಸುವ ಪ್ರಕ್ರಿಯೆ ಎಲ್ಲ ದೇಶಗಳಲ್ಲೂ ಸಾಗಿ ಬಂತು. ಭಾರೀ ಪ್ರಮಾಣದಲ್ಲಿ ಪೆಟ್ರೋಲಿಯಂ ದ್ರವ್ಯವನ್ನು ಆಳದಿಂದ ಮೇಲಕ್ಕೆತ್ತಿ ತಂದು ಗಾಳಿಯಿಂದ ಗೊಬ್ಬರವನ್ನು ಉತ್ಪಾದಿಸುವ ಸಾವಿರಾರು ಫ್ಯಾಕ್ಟರಿಗಳು ತಲೆಯೆತ್ತಿದವು. ಜನಸಂಖ್ಯಾ ಸ್ಫೋಟಕ್ಕೆ ಸಂವಾದಿಯಾಗಿ ಹಸುರು ಕ್ರಾಂತಿಗೆ ನಾಂದಿಯಾಯಿತು.

ಸಾರಜನಕ ರಸಗೊಬ್ಬರವನ್ನು ಸಸ್ಯಗಳಿಗೆ ಕೊಟ್ಟರೆ ತಕ್ಷಣ ಸಾಕಷ್ಟು ನೀರನ್ನೂ ಕೊಡಬೇಕು. ಇಲ್ಲಾಂದರೆ ಗಿಡವೇ ಸುಟ್ಟು ಹೋಗುತ್ತದೆ. ಮಳೆ ಬಂತೆಂದು ರಸಗೊಬ್ಬರವನ್ನು ಬೇಕಾಬಿಟ್ಟಿ ಸುರಿದು ಆಮೇಲೆ ಮಳೆ ಕೈಕೊಟ್ಟರೆ ಗೊಬ್ಬರವೆಲ್ಲ ಆವಿಯಾಗಿ ನೈಟ್ರಸ್ ಆಕ್ಸೈಡ್ ರೂಪದಲ್ಲಿ ವಾಯುಮಂಡಲಕ್ಕೆ ಸೇರುತ್ತದೆ. ಮಳೆ ಬಂದಿಲ್ಲವೆಂದು ಕೊಳವೆ ಬಾವಿಯ ಪಂಪ್ ಓಡಿಸಿದರೆ ಅಂತರ್ಜಲ ಖಜಾನೆಯಂತೂ ತಳಕ್ಕಿಳಿಯುತ್ತ ಹೋಗುತ್ತದೆ. ಬಳಕೆಯಾದ ನೀರು ಕೂಡ ಮಣ್ಣಿನ ಮತ್ತು ಭೂಜಲದ ನೈಟ್ರೇಟ್ ಮಾಲಿನ್ಯವನ್ನು ಹೆಚ್ಚಿಸುತ್ತದೆ. ಕೆರೆಗಳಲ್ಲಿ ಜೊಂಡು ಕಳೆಯನ್ನು, ದುರ್ನಾತವನ್ನು ಹೆಚ್ಚಿಸುತ್ತದೆ.

ಇನ್ನು, ಕೃಷಿಭೂಮಿಯಿಂದ ವಾಯುಮಂಡಲಕ್ಕೆ ಸೇರಿದ ನೈಟ್ರಸ್ ಆಕ್ಸೈಡ್ ಅನಿಲ ಭೂಮಿಯ ವಾತಾವರಣವನ್ನು ಬಿಸಿ ಮಾಡುತ್ತದೆ. ಈ ಕೆಲಸದಲ್ಲಿ ಇದು ಕಾರ್ಬನ್ ಡೈಆಕ್ಸೈಡ್‌ಗಿಂತ 300 ಪಟ್ಟು ಹೆಚ್ಚು ದಕ್ಷ! ವಾಯುಮಂಡಲದ ತಾಪಮಾನ ಹೆಚ್ಚುತ್ತ ಹೋದಂತೆ ಋತುಮಾನ ಏರುಪೇರಾಗುತ್ತದೆ. ನೆಲದ ಉಷ್ಣತೆಯನ್ನೂ ಅದು ಹೆಚ್ಚಿಸುತ್ತದೆ. ಕೋಲಾರ, ರಾಮನಗರಗಳಲ್ಲಿ ಮಾವಿನ ತೋಪುಗಳು ಒಣಗುತ್ತಿರುವುದಕ್ಕೆ ನಮ್ಮ ರೈತರೇ ಕಾರಣವೆಂದು ಹೇಳುವಂತಿಲ್ಲ. ಚೀನೀಯರೂ ಕಾರಣವಿರಬಹುದು. ಏಕೆಂದರೆ ಸಾರಜನಕ ರಸಗೊಬ್ಬರಗಳ ಬಳಕೆಯಲ್ಲಿ ಚೀನಾ ಮತ್ತು ಅಮೆರಿಕದೊಂದಿಗೆ ಭಾರತ ಪೈಪೋಟಿ ನಡೆಸಿದೆ. ಭೂಮಿ ಬಿಸಿಯಾಗುತ್ತಿದ್ದರೆ ಅದು ಯಾರಿಂದಾಗಿಯೊ, ಯಾರಿಗೆ ಗೊತ್ತು?

ವಿಜ್ಞಾನಿಗಳಿಗೆ ಇವೆಲ್ಲ ಗೊತ್ತಿಲ್ಲವೆಂದಲ್ಲ. ಭಾರತದಲ್ಲಿ ಹಸುರು ಕ್ರಾಂತಿಯ ಹರಿಕಾರನೆಂದೇ ಹೆಸರು ಪಡೆದ ಕೃಷಿ ವಿಜ್ಞಾನಿ ಪ್ರೊ. ಎಮ್. ಎಸ್. ಸ್ವಾಮಿನಾಥನ್ ಆಗಲೇ (1968ರಲ್ಲಿ ವಾರಾಣಸಿಯ ಭಾರತೀಯ ವಿಜ್ಞಾನ ಕಾಂಗ್ರೆಸ್‌ನ ಅಧ್ಯಕ್ಷ ಭಾಷಣದಲ್ಲಿ) ಹೇಳಿದ ಈ ಮಾತನ್ನು ನೋಡಿ:

‘ಕೃಷಿಗೆ ಸಿಕ್ಕ ಈ ವರದಾನವನ್ನು ದಿಢೀರ್ ಲಾಭಕ್ಕಾಗಿ ಬಳಸಲು ಹೋದರೆ ಬರಗಾಲವೇ ಬಂದೀತು. ಭೂಮಿ ಮತ್ತೆಂದೂ ರಿಪೇರಿ ಮಾಡಲಾಗದಷ್ಟು ಸವುಳಾದೀತು. ಸಾಂಪ್ರದಾಯಿಕ ಕೃಷಿಯಿಂದಾಗಿ ಸಾವಿರಾರು ವರ್ಷಗಳಿಂದ ಶೇಖರವಾಗಿರುವ ಅಂತರ್ಜಲ ಖಜಾನೆಯೆಲ್ಲ ಖಾಲಿಯಾದೀತು. ರಸಗೊಬ್ಬರಗಳ ಬಳಕೆಯ ಜೊತೆಗೆ ಕೀಟನಾಶಕ, ಶಿಲೀಂಧ್ರ ನಾಶಕ ಮತ್ತು ಕಳೆನಾಶಕ ದ್ರವ್ಯಗಳನ್ನು ಬೇಕಾಬಿಟ್ಟಿ ಬಳಸಿದರೆ ಕ್ಯಾನ್ಸರ್ ಮತ್ತು ಇತರ ಅನೇಕ ರೋಗಗಳಿಗೆ ರೈತರೇ ಬಲಿಯಾಗಬಹುದು. ಕೃಷಿಕರಿಗೆ ಸರಿಯಾದ ತರಬೇತಿ ಕೊಡುವ ವ್ಯವಸ್ಥೆಯನ್ನು ಜಾರಿಗೆ ತರದೇ ಇದ್ದರೆ ದೂರಭವಿಷ್ಯದಲ್ಲಿ ಕೃಷಿಕ್ರಾಂತಿಯ ಬದಲು ದುರಂತವೇ ಬೆನ್ನಟ್ಟಿ ಬಂದೀತು.’

ಅವರು ಅಂದು ಕಂಡ ದುಃಸ್ವಪ್ನಗಳೆಲ್ಲ ಇಂದು ಸಾಕಾರಗೊಂಡಿವೆ. ಪಂಜಾಬಿನಲ್ಲಿ ಕ್ಯಾನ್ಸರ್ ಟ್ರೇನ್ ಓಡುತ್ತಿದೆ. ದಿವಾಳಿ ಅಂಚಿಗೆ ಬಂದ ಇಡೀ ಹಳ್ಳಿಗಳೇ ಅಲ್ಲಿ ಮಾರಾಟಕ್ಕಿವೆ. ಮಳೆ ಚೆನ್ನಾಗಿ ಬಿದ್ದರೂ ಬರಗಾಲ ಒತ್ತರಿಸಿಕೊಂಡು ಬರುತ್ತಿದೆ. ಕುಡಿಯಲು ಫಿಲ್ಟರ್ ನೀರನ್ನು ಗ್ರಾಮಮಟ್ಟದಲ್ಲೂ ಒದಗಿಸಬೇಕಾದ ಪರಿಸ್ಥಿತಿ ಬರುತ್ತಿದೆ. ಕೃಷಿ ಎಂಬುದು ಹುಲಿ ಸವಾರಿಯಾಗಿದೆ. 2015ನ್ನು ’ಅಂತರರಾಷ್ಟ್ರೀಯ ಮಣ್ಣು ರಕ್ಷಣಾ ವರ್ಷ’ ಎಂದು ವಿಶ್ವಸಂಸ್ಥೆ ಘೋಷಿಸಿದ್ದರೂ ಅದನ್ನು ರೈತರಿಗೆ ತಿಳಿಸುವ ಬದಲು ಮಣ್ಣನ್ನು ಇನ್ನಷ್ಟು ಧ್ವಂಸ ಮಾಡುವ ಕ್ರಮಗಳೇ ಜಾರಿಗೆ ಬರುತ್ತಿವೆ.

ಮೊನ್ನೆ ಸೋಮವಾರ ಮಣ್ಣು ರಕ್ಷಣೆಯ ಮಹತ್ವದ ಬಗ್ಗೆ ಬೆಂಗಳೂರಿನ ಗಾಂಧೀ ಭವನದಲ್ಲಿ ಒಂದು ವಿಚಾರ ಸಂಕಿರಣವಿತ್ತು. ಕ್ಲಾಡ್ ಅಲ್ವಾರೀಸ್, ನಾರಾಯಣ ರೆಡ್ಡಿ, ಕೆಸಿ ರಘು, ವಾಸು, ಎನ್ನಾರ್ ಶೆಟ್ಟಿ ಮುಂತಾದ ಪರಿಚಿತ   60-70 ಜನರನ್ನು ಬಿಟ್ಟರೆ ರೈತರ ಸಂಖ್ಯೆ ಎರಡಂಕಿಯನ್ನೂ ದಾಟಿರಲಿಲ್ಲ.  ‘ತೀರ ಒಣ ಜಿಲ್ಲೆಯೆಂದು ಹೆಸರಾದ ಚಿತ್ರದುರ್ಗದಲ್ಲಿ ಕೂಡ ಪ್ರತಿವರ್ಷ ಹೆಕ್ಟೇರಿಗೆ 57 ಲಕ್ಷ ಲೀಟರ್ ನೀರು ಆಕಾಶದಿಂದ ಬರುತ್ತದಲ್ರೀ. ಲೀಟರಿಗೆ ಒಂದು ರೂಪಾಯಿಯಂತೆ ಬೆಲೆ ಕಟ್ಟಿದರೂ 57 ಲಕ್ಷ ರೂಪಾಯಿಗಳಷ್ಟು ದ್ರವ್ಯ ಸೋರಿ ಹೋಗ್ತಾ ಇದೆ.

ರೈತರಿಗೆ ಇದನ್ನು ಹೇಗೆ ಹೇಳೋಣ?’ ಎಂದು ನಿವೃತ್ತ ಕೃಷಿ ವಿಜ್ಞಾನಿ ಎಚ್. ಆರ್ . ಪ್ರಕಾಶ್ ಕೇಳುತ್ತಿದ್ದರು. ಅವರ ಪ್ರಶ್ನೆಗೆ ಉತ್ತರಿಸಬಹುದಾದ ಅಧಿಕಾರಿಗಳು ಅಲ್ಲೇ ಸಮೀಪದ ವಿಧಾನ ಸೌಧದಲ್ಲೆಲ್ಲೋ ವಿಮಾನದ ಮೂಲಕ ಕೃತಕ ಮಳೆ ಸುರಿಸುವ ಯೋಜನೆಯಲ್ಲಿ ಮುಳುಗಿದ್ದರು. ಅಂದಹಾಗೆ, ಗುಡುಗು ಮಿಂಚಿಲ್ಲದ ಕೃತಕ ಮಳೆಯಲ್ಲಿ ಫಸಲಿಗೆ ಪೂರಕವಾಗುವ ಸಾರಜನಕ ಇರುವುದಿಲ್ಲ. ನೈಟ್ರಸ್ ಆಕ್ಸೈಡ್ ಅನಿಲವನ್ನು  ‘ನಗೆ ಅನಿಲ’ ಎಂತಲೂ ಹೇಳುತ್ತಾರೆ. ಆಕಾಶದಲ್ಲಿ ತನ್ನ ಪಾಡಿಗೆ ಕೆಲಸ ಮಾಡಿಕೊಂಡಿದ್ದ ಸಾರಜನಕವನ್ನು ನೆಲಕ್ಕೆಳೆದು ಹಿಂಡಿ ಹಿಪ್ಪೆ ಮಾಡಿದ್ದಕ್ಕೆ ಅದು ವಿಕೃತ ರೂಪದಲ್ಲಿ ಮತ್ತೆ ಆಕಾಶಕ್ಕೇರಿ ಅಲ್ಲಿ ನಗುತ್ತಿರಬೇಕು.