’ಪ್ಯಾರಡೈಸ್’ ಚಿತ್ರ ವಿಮರ್ಶೆ: ಶ್ರೀಲಂಕಾ ಬಿಕ್ಕಟ್ಟಿನೊಳಗೆ ಎಷ್ಟೊಂದು ಪದರ!

[ಈ ದಿನ.ಕಾಂ ಅಂತರ್ಜಾಲ ಪತ್ರಿಕೆಗಾಗಿ ಯತಿರಾಜ್‌ ಬ್ಯಾಲಹಳ್ಳಿ ಅವರು 2.3.2024ರಂದು ಮಾಡಿರುವ ‘ಪ್ಯಾರಡೈಸ್‌’ ಸಿನಿಮಾ ವಿಮರ್ಶೆ ನಮ್ಮ ಓದಿಗಾಗಿ… ]

ಶ್ರೀಲಂಕಾ ನಿರ್ದೇಶಕ ಪ್ರಸನ್ನ ವಿತನಗೆಗೂ ದೇವನೂರ ಮಹಾದೇವರಿಗೂ ಎತ್ತಣಿಂದೆತ್ತ ಸಂಬಂಧ?

https://eedina.com/entertainment/paradise-review-how-many-layers-into-sri-lankas-crisis/2024-03-02/?

 

ಶ್ರೀಲಂಕಾದ ಅಭಿಜಾತ ಸಿನಿಮಾ ನಿರ್ದೇಶಕರಲ್ಲಿ ಒಬ್ಬರಾದ ಪ್ರಸನ್ನ ವಿತನಗೆಯವರ ‘ಪ್ಯಾರಡೈಸ್‌’ ಸಿನಿಮಾ ಈ ಸಲದ ಬೆಂಗಳೂರು ಅಂತಾರಾಷ್ಟ್ರೀಯ ಫಿಲ್ಮ್‌ ಫೆಸ್ಟಿವಲ್‌ (ಬಿಫೆಸ್‌)ನಲ್ಲಿ ಪ್ರದರ್ಶನವಾಗುತ್ತಿದೆ. ಪ್ರೇಕ್ಷಕರ ಮೆಚ್ಚುಗೆಗೂ ಪಾತ್ರವಾಗಿರುವ ‘ಪ್ಯಾರಡೈಸ್’ ಸಮಕಾಲೀನ ರಾಜಕೀಯ, ಆರ್ಥಿಕ ಬಿಕ್ಕಟ್ಟುಗಳನ್ನು ಯಾವುದೇ ಪೊಲಿಟಿಕಲ್ ಸ್ಟೇಟ್‌ಮೆಂಟ್ ಇಲ್ಲದೆ ಆರ್ದ್ರವಾಗಿ ಬಿಚ್ಚಿಡುವ ಕಥನ.

ಡೆತ್ ಆನ್‌ ಫುಲ್ ಮೂನ್ ಡೇ, ಆಗಸ್ಟ್ ಸನ್‌, ಗಾದಿ- ಹೀಗೆ ಹಲವು ಸಿನಿಮಾಗಳನ್ನು ನೀಡಿ, ಜಗತ್ತಿನ ಸಿನಿಮಾ ತಂತ್ರಜ್ಞರು ಶ್ರೀಲಂಕಾದತ್ತ ನೋಡುವುದಕ್ಕೆ ಕಾರಣವಾದ ನಿರ್ದೇಶಕ ಪ್ರಸನ್ನ ವಿತನಗೆ.

ಅವರ ‘ಡೆತ್‌ ಆನ್ ಫುಲ್ ಮೂನ್ ಡೇ’ ಸಿನಿಮಾದ ಕುರಿತು ಒಂದೆರಡು ಮಾತು. ಈ ಸಿನಿಮಾ ದೇವನೂರ ಮಹಾದೇವ ಅವರ ‘ಕುಸುಮಬಾಲೆ’ ಕಾದಂಬರಿಯನ್ನು ನೆನಪಿಸುತ್ತದೆ. ಕುಸುಮಬಾಲೆಯ ಚೆನ್ನನ ಅಪ್ಪ ಮತ್ತು ಅವ್ವನ ಮುಗ್ಧತೆ ಇದೆಯಲ್ಲ- ಅದು ಸಾಹಿತ್ಯ ಲೋಕವನ್ನು ತಣ್ಣಗೆ ಕಾಡಿತ್ತು. ಕೊಲೆಯಾದ ಚೆನ್ನನ ಬಗ್ಗೆ ಅರಿಯದ ಈ ಮುಗ್ಧ ತಂದೆ ತಾಯಿ ಮಾತನಾಡಿಕೊಳ್ಳುವ ರೀತಿಯನ್ನು ಕನ್ನಡ ಸಾಹಿತ್ಯಲೋಕ ಸದಾ ನೆನೆಯುತ್ತಲೇ ಇದೆ.

“ನಮ್ಮ ಆ ಕ್ರಿಯಾ ಒಂದು ಸುದ್ದ ಇದ್ದರ ಒಂದಲ್ಲ ಒಂಜಿನ ಅವ್ನೇ ಬತ್ತನಕನಾ, ಸಾಸ್ತ್ರ ಹೇಳೌವ್ನ ರೂಪ್ದಲಿ ಬರಬೌದೂ… ದಾಸಯ್ಯನ ರೂಪ್ದಲ್ಲಿ ಬರಬೌದು… ಮಾಟ ಮಂತ್ರದವ್ನ ರೂಪ್ದಲಿ ಬರಬೌದೂ…”

“ಯಾವ್ ರೂಪ್ದಲ್ಲಾರೂ ಆಗ್ಲಿ ಕನಾ… ಯಾವತ್ತಾರೂ ಒಂಜಿನಾರೂ ಬಂದನಾ…?”

“ಬರ್ದೇ? ಸಂಬಂಜ ಅನ್ನೋದು ದೊಡ್ದು ಕನಾ…” -ಅಂತ ದೇವನೂರರ ಕುಸುಮಬಾಲೆ ನುಡಿಯುತ್ತದೆ. ಶ್ರೇಷ್ಠ ಕೃತಿಯೊಂದರಲ್ಲಿ ವಿಲನ್‌ಗಳು ಇರುವುದಿಲ್ಲ. ನಮ್ಮ ಸುತ್ತಲಿನ ರಾಜಕೀಯ, ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳೊಳಗೆ ಪಾತ್ರಗಳು ಕೇವಲ ನಿಮಿತ್ತ. ‘ಡೆತ್ ಆನ್ ಫುಲ್ ಮೂನ್ ಡೇ’ನಲ್ಲಿ ಮುಗ್ಧ ಬಡಪಾಯಿ ಮತ್ತು ಕುರುಡ ತಂದೆಗೆ ತನ್ನ ಮಗ ಬದುಕಿದ್ದಾನೆ ಎಂಬ ಅಚಲ ನಂಬಿಕೆ. ಆತ ಯುದ್ಧದಲ್ಲಿ ಮಡಿದಿದ್ದಾನೆಯೇ ಎಂಬುದು ನಿಗೂಢ. ಆತನ ಹೆಣವನ್ನೂ ತೋರಿಸದೆ ಶವಪೆಟ್ಟಿಗೆಯನ್ನು ಮಿಲಿಟರಿಯವರು ತಂದು ಹೂಳುತ್ತಾರೆ. ಅರೆಬರೆ ಕಟ್ಟಿದ ಮನೆಯನ್ನು ಪೂರ್ಣಗೊಳಿಸಲು ಇರುವ ಕೊನೆಯ ಆಸರೆ- ಮಗನ ಸಾವಿನಿಂದ ಸಿಗಬಹುದಾದ ಪರಿಹಾರ. ಯುದ್ಧದಲ್ಲಿ ಆತ ಸತ್ತಿದ್ದಾನೆಂದು ಸರ್ಕಾರ ಘೋಷಿಸಿದ ಕೆಲವು ದಿನಗಳ ನಂತರ ಒಂದು ಪತ್ರ ತಂದೆಗೆ ಬರುತ್ತದೆ. ಈ ಪತ್ರ ಆತ ಸಾಯುವ ಮುಂಚೆ ಬರೆದದ್ದು ಎಂದು ಹೇಳಿದರೂ ತಂದೆಗೆ ನಂಬಿಕೆ ಇಲ್ಲ. ಮಗ ಖಂಡಿತವಾಗಿಯೂ ಬದುಕಿದ್ದಾನೆಂಬ ವಿಶ್ವಾಸ ಆತನದ್ದು. ಆತ ಕುರುಡನಾಗಿರಬಹುದು, ಆದರೆ ಯಾವುದನ್ನೋ ಗ್ರಹಿಸುವ ಒಳಗಣ್ಣು ಅವನೊಳಗೆ ಜಾಗೃತವಾಗಿದೆ. ಕಿತ್ತು ತಿನ್ನುವ ಬಡತನವಿದ್ದರೂ ಪರಿಹಾರದ ಪತ್ರಕ್ಕೆ ಸಹಿ ಹಾಕುವುದಿಲ್ಲ. ಕೊನೆಗೆ ಮಗನ ಸಮಾಧಿಯನ್ನು ಅಗೆದು, ಶವಪಟ್ಟಿಗೆಯನ್ನು ತೆರೆಯುವ ಮೂಲಕ ಸಿನಿಮಾ ಕೊನೆಯಾಗುತ್ತದೆ. ಮತ್ತೆ ದೇವನೂರರ ಸಾಲು ‘ಸಂಬಂಜ ಅನ್ನೋದು ದೊಡ್ದು ಕನಾ’ ಕಾಡುತ್ತದೆ. ವಿತನಗೆಗೂ ದೇವನೂರರಿಗೂ ಎತ್ತಣಿಂದೆತ್ತ ಸಂಬಂಧ?

ಪ್ರಭುತ್ವ ಸೃಷ್ಟಿಸುವ ಬಿಕ್ಕಟ್ಟುಗಳು ಸಾಮಾನ್ಯ ಜನರ ಬದುಕಿನ ಮೇಲೆ ಹೇಗೆ ಪರಿಣಾಮಗಳನ್ನು ಬೀರುತ್ತವೆ ಎಂಬುದನ್ನು ಯಾವುದೇ ರಾಜಕೀಯ ಹೇಳಿಕೆ ನೀಡದೆ, ಸಿನಿಮಾವನ್ನು ವಾಚ್ಯವಾಗಿಸದೆ ಕಥೆ ಹೇಳುವ ತಂತ್ರಗಾರಿಕೆ ವಿತನಗೆಯವರದ್ದು. ಕೇವಲ ನಿರೂಪಣೆಯನ್ನು ಮಾಡಿ(ಅದು ಡಾಕ್ಯುಮೆಂಟರಿ ನಿರೂಪಣೆಯಲ್ಲ, ದೃಶ್ಯ ಮಾಧ್ಯಮದ ಕಲಾಶಕ್ತಿಯೂ ಹೌದು) ಪ್ರೇಕ್ಷಕರು ಉತ್ತರವನ್ನು ಕಂಡುಕೊಳ್ಳಲು ಬಿಟ್ಟುಬಿಡುತ್ತಾರೆ ವಿತನಗೆ. ‘ಪ್ಯಾರಡೈಸ್‌’ ಕೂಡ ಅವರ ದೃಶ್ಯಕಲಾ ಮಾಂತ್ರಿಕತೆಗೆ ಹಿಡಿದ ಮತ್ತೊಂದು ಕನ್ನಡಿ.

‘ಡೆತ್ ಆನ್‌ ಫುಲ್ ಮೂನ್ ಡೇ’ 1997ರಲ್ಲಿ ಬಂದ ಸಿನಿಮಾ. ‘ಪ್ಯಾರಡೈಸ್’ 2023ರ ಸಿನಿಮಾ. ವಿತನಗೆಯ ಜೋಳಿಗೆ ಮಾತ್ರ ಬರಿದಾಗಿಲ್ಲ. 93 ನಿಮಿಷಗಳ ‘ಪ್ಯಾರಡೈಸ್’ನಲ್ಲಿ ಪ್ರಧಾನವಾಗಿ ಬಳಸಿರುವ ಭಾಷೆ- ಮಲಯಾಳಂ. ಶ್ರೀಲಂಕಾ- ಇಂಡಿಯಾ ಸಂಸ್ಥೆಗಳ ಕೋ-ಪ್ರೊಡ್ಯೂಸಿಂಗ್‌ನಲ್ಲಿ ವಿತನಗೆ ಮಾಡಿದ ಮೊದಲ ಸಿನಿಮಾವೂ ಹೌದು. ಸಿಂಹಳ, ತಮಿಳು, ಇಂಗ್ಲಿಷ್‌, ಮಲಯಾಳಂ ಎಲ್ಲ ಭಾಷೆಯೂ ಇಲ್ಲಿನ ಸಂಭಾಷಣೆಯಲ್ಲಿ ಬಳಕೆಯಾಗಿದೆ.

ಮಲಯಾಳಂನ ರೋಷನ್ ಮ್ಯಾಥ್ಯೂ, ದರ್ಶನಾ ರಾಜೇಂದ್ರನ್‌ ಪ್ರಮುಖ ಪಾತ್ರಗಳನ್ನು ನಿರ್ವಹಿಸಿ ಜೀವ ತುಂಬಿದ್ದಾರೆ.

ಆರ್ಥಿಕ ಬಿಕ್ಕಟ್ಟಿನ ಗಳಿಗೆಯಲ್ಲಿ ಶ್ರೀಲಂಕಾಕ್ಕೆ ಪ್ರವಾಸ ಕೈಗೊಳ್ಳುವ ಕೇರಳದ ‘ಗಂಡ- ಹೆಂಡತಿ’ಯ ಸುತ್ತ ಸೃಷ್ಟಿಯಾಗುವ ಸನ್ನಿವೇಶಗಳ ಗುಚ್ಛ ‘ಪ್ಯಾರಡೈಸ್’. ಈ ಸಿನಿಮಾದ ಹೆಸರೇ ಒಂದು ರೀತಿಯ ವ್ಯಂಗ್ಯವನ್ನು ಸೂಚಿಸುತ್ತಿದೆ.

ಬೀದಿಬೀದಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು, ಅಲ್ಲಿಲ್ಲಿ ಪ್ರದರ್ಶನವಾಗುವ ಬ್ಯಾನರ್‌ಗಳು, ಅದರ ನಡುವೆ, ‘ಪ್ಯಾರಡೈಸ್’ ಅಂದರೆ ಸ್ವರ್ಗವನ್ನು ನಿರೀಕ್ಷಿಸಿ ಬಂದಿರುವ ದಂಪತಿ, ವಿದ್ಯುತ್‌ ಕಟ್ ಆಗಿರುವಾಗ ಹಚ್ಚಿದ ಮೇಣವನ್ನು ಕಂಡು ‘ಸೋ ರೊಮ್ಯಾಂಟಿಕ್‌’ ಎಂದು ಖುಷಿ ಪಡುವ ರೀತಿ, ಐದನೇ ವರ್ಷದ ವಿವಾಹ ವಾರ್ಷಿಕೋತ್ಸವದ ಖುಷಿಯಲ್ಲಿರುವ ಈ ದಂಪತಿಯ ಸುತ್ತ ತೆರೆದುಕೊಳ್ಳುತ್ತಾ ಹೋಗುವ ಪದರಗಳು- ನೋಡುಗರನ್ನು ಕಥನದ ಸುರಳಿಯೊಳಗೆ ಎಳೆದುಕೊಂಡುಬಿಡುತ್ತವೆ.

ಇಲ್ಲಿ ನಿರ್ದೇಶಕ ವಿತನಗೆ ರಾಮಾಯಣಕ್ಕೆ ಸಂಬಂಧಿಸಿದ, ಕಥೆಯನ್ನು ಹೇಳುತ್ತಿರುವುದಾದರೂ ಏತಕ್ಕೆ? ಅಲ್ಲಿ ಬರುವ ಜಿಂಕೆಯ ಕಂಡು ಕಥಾನಾಯಕಿ ಮೋಹಗೊಳ್ಳುವ ಅಥವಾ ಅದನ್ನು ಕೊಲ್ಲಬೇಡಿ ಎಂದು ತಡೆಯುವ ರೂಪಕವಾದರೂ ಏನು? ಬಿಕ್ಕಟ್ಟಿನ ಸಂದರ್ಭದಲ್ಲಿ ಗಡಿಬಿಡಿಯೊಳಗಿರುವ ಗಂಡನ ಎದುರು ಅವಳೊಳಗೆ ಮೂಡಿದ ಖುಷಿಯ ಎಳೆಯಾದರೂ ಯಾವುದು? ಟೂರಿಸ್ಟ್ ಗೈಡ್‌ (ಕ್ಯಾಬ್ ಡ್ರೈವರ್‌ ಕೂಡ ಹೌದು) ಶ್ರೀಲಂಕಾದ ಪ್ರವಾಸಿ ತಾಣಗಳನ್ನು ತೋರಿಸುತ್ತಾ ರಾಮಾಯಣದ ಸನ್ನಿವೇಶಗಳನ್ನು ವಿವರಿಸುತ್ತಿರುವುದಾದರೂ ಏತಕ್ಕೆ?  -ಹೀಗೆ ಯಾವುದಕ್ಕೂ ನಿರ್ದೇಶಕ ಉತ್ತರ ನೀಡಿ ವಾಚ್ಯವಾಗಿಸುವುದಿಲ್ಲ. ನಿಮ್ಮ ಆಲೋಚನೆಗೆ ಬಿಟ್ಟು ಹೊರಡುತ್ತಾರೆ.

ರೋಮ್ಯಾಂಟಿಕ್ ಮೂಡ್‌ನಲ್ಲಿರುವ ದಂಪತಿಗೆ ಎದುರಾಗುವ ಅನಿರೀಕ್ಷಿತ ಆಪತ್ತು, ಅದರ ಮುಂದುವರಿದ ಭಾಗವಾಗಿ ಸೇರಿಕೊಳ್ಳುತ್ತಾ ಹೋಗುವ ಸ್ಥಳೀಯ ಎಳೆಗಳು, ಪ್ರತಿಭಟನೆಗಳು- ಇಲ್ಲಿ ಯಾರು ಅಪರಾಧಿ, ಯಾರು ನಿರಪರಾಧಿ? –ಅಂತಿಮವಾಗಿ ವಿತನಗೆ ಬಿಟ್ಟು ಹೋಗುವ ಅಬ್‌ಸ್ಟ್ರಾಕ್ಟ್‌ ಕ್ಲೈಮ್ಯಾಕ್ಸ್‌ ನಮ್ಮನ್ನೂ ಆಲೋಚನೆಗೆ ದೂಡುತ್ತದೆ.

ಈಗ ನಡೆಯುತ್ತಿರುವ ಚಿತ್ರೋತ್ಸವದಲ್ಲಿ ಸೋಮವಾರ (ಮಾರ್ಚ್ 4) ಮತ್ತೊಮ್ಮೆ ‘ಪ್ಯಾರಡೈಸ್’ ಸ್ಕ್ರೀನಿಂಗ್ ಆಗುತ್ತಿದೆ. ಆಸಕ್ತರು ನೋಡಬಹುದು.