ಪೌರಕಾರ್ಮಿಕರ ಜೀವಕ್ಕೆ ಬೆಲೆ ಇಲ್ಲವೇ?-ವಿನಯಾ ಒಕ್ಕುಂದ
ಮೇಲ್ಜಾತಿ ಮೇಲ್ವರ್ಗಗಳಲ್ಲಿ ಹುಟ್ಟಿದ್ದರೆ ಯಾವುದೊ ಪರೀಕ್ಷೆಯ ತಯಾರಿಯಲ್ಲೋ ಬಿಳಿ ಕಾಲರಿನ ಉದ್ಯೊಗದ ಹುಡುಕಾಟದಲ್ಲೋ ಇದ್ದಿರಬಹುದಾದ ಎಳೆಯ ವಯಸ್ಸಿನ ಮೂವರು ಹುಡುಗರು ಕೊಳಚೆ ಸಂಸ್ಕರಣ ಘಟಕದ ರಿಪೇರಿಗೆ ಇಳಿದು ಉಸಿರುಗಟ್ಟಿ ಸತ್ತಿದ್ದಾರೆ. ಇದೇನು ಹೊಸದಲ್ಲ. ಆಗಾಗ ಮ್ಯಾನ್‍ಹೋಲ್‍ಗಳ ಕೊಳಚೆ ಗುಂಡಿಗಳ ಶುದ್ಧೀಕರಣದಲ್ಲಿ, ಶುದ್ಧೀಕರಣ ಘಟಕದ ರಿಪೇರಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ಆಮ್ಲಜನಕದ ಕೊರತೆಯಿಂದ ಉಸಿರುಗಟ್ಟಿ ಸಾಯುತ್ತಲೇ ಇರುತ್ತಾರೆ. ನಾಗರಿಕ ಬದುಕಿನ ನಿರಾತಂಕ ಸ್ಥಿತಿಗೆ ಇಂತಹ ಸಾವುಗಳು ಅನಿವಾರ್ಯ ಎಂದೇ ಭಾವಿಸಿಬಿಟ್ಟಿದ್ದೇವೆ. ಬಡವರ ಸಾವು ಬೆಲೆಬಾಳುವ ಸಂಗತಿಯಲ್ಲವಲ್ಲ್ಲ. ದುಡಿದು ಮರ್ಯಾದೆಯಿಂದ ಬದುಕು ಕಟ್ಟಿಕೊಳ್ಳಲು ಹೊರಟ ಜೀವಗಳು ಹೀಗೆ ಅಕಾರಣ ಮುರುಟಿ ಹೋಗುತ್ತವೆ. ಅವರನ್ನೇ ನಂಬಿಕೊಂಡಿರುವ ಕುಟುಂಬಗಳು ಅಭದ್ರತೆಯಿಂದ ನಲುಗಿ ಹೋಗುತ್ತವೆ. ಹರೆಯದ ಜೀವವೊಂದರ ಅಕಾಲಿಕ ಮೃತ್ಯು ಉಂಟುಮಾಡುವ ಹಾನಿಯನ್ನು ಪರಿಹಾರ ಧನವೆಂಬ ಪುಡಿಗಾಸು ತುಂಬಿಕೊಡಲು ಸಾಧ್ಯವೇ?
ಬೆಂಗಳೂರಿನ ರಾಯಲ್ ಸಿಟಾಡೆಲ್ ಅಪಾರ್ಟಮೆಂಡಿನಲ್ಲಿ ನಡೆದ ಈ ಘಟನೆ ಸದ್ಯದ ಭಾರತದ ಸಾಮಾಜಿಕತೆಯ ರೂಪಕವಾಗಿದೆ. ‘ದೇವರು ಶೂದ್ರನಿಗೆ ವಹಿಸಿದ ಒಂದೇ ಒಂದು ವೃತ್ತಿ ಎಂದರೆ ವಿಧೇಯಪೂರ್ವಕವಾಗಿ ಉಳಿದ ಮೂರು ವರ್ಣದವರ ಸೇವೆ ಮಾಡುವುದು’ (ಮನುಸ್ಮತಿ 1-91) ಎಂಬ ಅಬದ್ಧ ಶಾಸನ ಇಂದಿಗೂ ಹಲವು ರೂಪಾಂತರಗಳಲ್ಲಿ ಜೀವಂತವಾಗೇ ಇದೆ. ಆಧುನಿಕ ಸಂದರ್ಭದಲ್ಲಿ ಜಾತಿ ಮತ್ತು ವರ್ಗಗಳು ಸಮಾನಾರ್ಥಕ ಪದಗಳಾಗಿರುವಾಗ ಕೆಳಜಾತಿಯ ಬಡವರಿಗೆ ತೆರೆದುಕೊಳ್ಳುತ್ತಿರುವ ಪರ್ಯಾಯಗಳು ಮೇಲ್ಜಾತಿಯ ಶ್ರೀಮಂತರ ಜೀವನ ಕ್ರಮವನ್ನು ಎತ್ತರಿಸಲು ಅಗತ್ಯವಾದ ಸೇವಾವಲಯಗಳೇ ಆಗಿರುತ್ತವೆ. ನಗರಗಳ ಪೌರಕಾರ್ಮಿಕ ವೃತ್ತಿಗಳು ಕೆಳಜಾತಿಯ ಬಡವರಿಗೇ ಮೀಸಲು. ಮೂಡ್ನಾಕೂಡು ಚಿನ್ನಸ್ವಾಮಿಯವರ ‘ಕೆಂಡಮಂಡಲ’ ನಾಟಕದಲ್ಲಿ ಹಳ್ಳಿಯಲ್ಲಿ ಒಂದಿಷ್ಟು ಶಾಲೆ ಕಲಿತ ಹುಡುಗರು, ಹಳ್ಳಿಯ ಜಾತ್ಯಂಧ ಸ್ಥಿತಿಯನ್ನು ಪರಂಪರಾಗತ ವೃತ್ತಿಯನ್ನು ಮುಂದುವರೆಸಲು ಮನಸ್ಸಿಲ್ಲದೆ ಬದುಕಿನ ಬದಲಾವಣೆಯ ಕನಸು ಹೊತ್ತು ಪೇಟೆಗೆ ಬರುತ್ತಾರೆ. ನಗರಗಳ ಅಪರಿಚಿತತನದಲ್ಲಿ ಭ್ರಮನಿರಸನಗೊಳ್ಳುತ್ತಾರೆ. ಕಡೆಗೂ ಅವರು ಪೌರಕಾರ್ಮಿಕನಾಗುವ, ಚಹದಂಗಡಿಯಲ್ಲಿ ಸ್ವೀಪರ್ ಆಗುವ ವೃತ್ತಿಗಳನ್ನು ಸಂಪಾದಿಸಿಕೊಳ್ಳುತ್ತಾರೆ. ಇಷ್ಟಕ್ಕಾಗಿ ಇಷ್ಟೆಲ್ಲಾ ಪಾಡು ಪಡಬೇಕೇ? ಇದನ್ನೇ ಬದಲಾವಣೆ ಎಂದು ಒಪ್ಪಿಕೊಳ್ಳಬೇಕೇ? ಎಂಬ ಭಾರದ ಪ್ರಶ್ನೆಯೊಂದು ಆ ಎಳೆಯ ಜೀವಗಳನ್ನು ಬಾಧಿಸುತ್ತದೆ. ಇದು ಇಂದಿನ ಭಾರತದ ವಾಸ್ತವದ ಮುಖವೇ ಆಗಿದೆ.
ನಮ್ಮ ದೇಶ ಅಸಮಾನ ಸಂರಚನೆಗಳನ್ನು ಸಹಜವೆಂಬಂತೆ ಬದುಕುತ್ತಿದೆ. ಅಸಮಾನತೆಯ ಪಾಯದ ಮೇಲೆ ಪ್ರಜಾಪ್ರಭುತ್ವವೆಂಬ ಸಮಾನತೆಯ ಸೌಧವನ್ನು ನಿಲ್ಲಿಸಲು ಏದುಸಿರು ಬಿಡಲಾಗುತ್ತಿದೆ. ಇಲ್ಲಿ ಪ್ರಜೆಗಳ ಜೀವಬೆಲೆಯನ್ನು ಅವರು ಪ್ರತಿನಿಧಿಸುವ ಜಾತಿ-ವರ್ಗಗಳ ಮೂಲಕ ನಿಗದೀಕರಿಸಲಾಗುತ್ತದೆ. ಅಪಘಾತದಲ್ಲಿ ಮರಣ ಹೊಂದಿದವರಿಗೆ ಸರ್ಕಾರ ನೀಡುವ ಪರಹಾರದ ಮೊತ್ತದಲ್ಲಿಯೇ ತರತಮವಿದೆ. ಸಾದಾ ಬಸ್ಸಿನ ಪ್ರಯಾಣಿಕರು ಹಾಗೂ ಲಗ್ಸುರಿ ಬಸ್ಸಿನ ಪ್ರಯಾಣಿಕರಿಗೆ ನೀಡುವ ಪರಿಹಾರದ ಮೊತ್ತ ಬೇರೆಬೇರೆ. ರೇಲ್ವೆಯಲ್ಲಂತೂ ಕ್ಲಾಸ್‍ಗಳ ಮೂಲಕವೇ ಸೌಲಭ್ಯಗಳು ಪರಿಹಾರಗಳು ನಿರ್ಧರಿತವಾಗುತ್ತವೆ. ಇಂತಹ ವ್ಯವಸ್ಥೆಯಲ್ಲಿ ಪೌರಕಾರ್ಮಿಕರ ಜೀವಬೆಲೆ ದೊಡ್ಡದೆನ್ನಿಸೀತೇ?
ನಮ್ಮನ್ನಾಳುವವರು ಸ್ಮಾರ್ಟ ಸಿಟಿಯ ಕನಸನ್ನು ಬುಲೆಟ್ ಟ್ರೇನುಗಳ ಪುಲಕವನ್ನು ನಗರವಾಸಿಗಳ ನರನಾಡಿಗಳಿಗೆ ತುಂಬುತ್ತಿದ್ದಾರೆ. ಇನ್ನೊಂದೆಡೆ ಮಾನವ ನಿರ್ಮಿತ ಕಸದ ವಿಲೇವಾರಿ ಹಾಗೂ ಕೊಳಚೆಯ ನಿರ್ವಹಣೆ ಬಹುದೊಡ್ಡ ತೊಡಕಾಗಿ ಪರಿಣಮಿಸಿದೆ. ಹೈಟೆಕ್ ತಂತ್ರಜ್ಞಾನವನ್ನು ಬಳಸಿ, ಎಲ್ಲವನ್ನೂ ಒಂದು ಸ್ವಿಚ್ಚು ಗುಂಡಿಯನ್ನೊತ್ತಿ ಶುಚಿಗೊಳಿಸಿ ಪರಿಹರಿಸಿಬಿಡುವುದು ಸಾಧ್ಯವಾಗುತ್ತಿಲ್ಲ. ಎಂತಹ ಯಂತ್ರ ನಾಗರಿಕತೆಯನ್ನು ಕೂಡ ನಿರ್ವಹಿಸಲು ಮಾನವ ಶ್ರಮ ಶಕ್ತಿ ಅನಿವಾರ್ಯವಿದೆ. ಸಮಸ್ಯೆ ಇರುವುದು ನಾವು ನಿರ್ಮಿಸಿಕೊಂಡ ವ್ಯವಸ್ಥೆಯ ಶುಚಿತ್ವದ ನಿರ್ವಹಣೆ ಸಮಾಜದ ಪ್ರತಿಯೊಬ್ಬರ ಕರ್ತವ್ಯವೆಂದು ಭಾವಿಸದೇ ಇರುವುದರಲ್ಲಿ. ಸಮಾಜದ ಮೇಲಿನವರ ಹಿತಾಸಕ್ತಿಯನ್ನು ಪೂರೈಸಲು ಕೆಳಗಿನವರನ್ನು ಸದಾ ಸನ್ನದ್ಧರಾಗಿಡುವ ಅಸಮಾನತೆಯನ್ನೇ ವ್ಯವಸ್ಥಿತಗೊಳಿಸಿಕೊಳ್ಳಲಾಗಿದೆ. ಮಲಹೊರುವ, ಪಾಯಖಾನೆ ಸ್ವಚ್ಛಗೊಳಿಸುವ ಕೆಲಸಗಳನ್ನು ಕಾನೂನುಬದ್ಧವಾಗಿ ನಿರ್ಬಂಧಿಸಿಲಾಗಿದೆ. ಅದನ್ನೇ ಸಂಸ್ಕರಣ, ಶುದ್ಧೀಕರಣ ಎಂಬ ಹೆಸರುಗಳಲ್ಲಿ ಬದಲಿಸಲಾಗಿದೆ. ಕೆಲಸದ ವಿಧಾನಗಳು ಬದಲಾಗಿವೆ. ಕೆಲಸಗಾರರು ಮಾತ್ರ ಅವರೇ ಆಗಿದ್ದಾರೆ.
ಆವತ್ತು, ಮನೆ ಮುಂದಿನ ಗಟಾರ ಕಸಕಟ್ಟಿ ಸೊಳ್ಳೆಗಳು ಮುಕುರಿರುವಾಗ ಉದ್ದನೆಯ ಸಲಿಕೆಯಿಂದ ಪಾಟಿಕಲ್ಲಿನ ಸಂದಿಯಿಂದ ಕಸದಬ್ಬಿ ಇನ್ನೇನು ಗೆದ್ದೆ ಎನ್ನುವಾಗ, ಪಚ್ ಎಂದು ಸಿಡಿದ ರಾಡಿಗೆ ಜೀವ ಹೇವರಿಸಿಬಿಟ್ಟಿತ್ತು. ಆ ಕ್ಷಣ, ನನ್ನಂತಹ ಹೆಣ್ಣೊಬ್ಬಳು ದಿನವೂ ಕೈಗವಸಿಲ್ಲದೆ, ಮೂಗು ಬಾಯಿಗಳಿಗೆ ಸೋಂಕು ನಿರೋಧಕಗಳಿಲ್ಲದೆ ನಾಜೂಕಾಗಿ ಶೃದ್ಧೆಯಿಂದ ಶುಚಿಗೊಳಿಸÀಬೇಕೆಂದು ಬಯಸುವ ವಿಚಿತ್ರಕ್ಕೆ ದಿಗಿಲುಗೊಂಡಿದ್ದೆ. ನಿತ್ಯ ಕಸ ಕಲ್ಮಶಗಳ ಹೊಲಸು ದುರ್ನಾತಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಅಗತ್ಯ ವಸ್ತುಗಳನ್ನು ಪೂರೈಸುವ, ವಾರಕ್ಕೊಂದು ದಿನ ರಜೆ ನೀಡುವ, ಉದ್ಯೋಗ ಖಾಯಂಗೊಳಿಸುವ ಮೂಲಕ ಮಾನಸಿಕ ಸುಸ್ಥಿರತೆಯನ್ನು ನೀಡುವ, ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಪ್ರಜ್ಞೆಯೂ ಬೇಡವೇ? ಬಡವರ ಜೀವ-ಜೀವನ ಎಂದರೆ ಅಷ್ಟೊಂದು ಉದಾಸವೇ? ಇವರಲ್ಲಿ ಬಹುತೇಕರು ಗುತ್ತಿಗೆ ಆಧಾರಿತ ಕಾರ್ಮಿಕರಾಗಿರುವುದರಿಂದ ಇವರ ಅನಾರೋಗ್ಯ, ಸಾವುಗಳಿಗೆ ಕುಟುಂಬಗಳು ಹಕ್ಕು ಕೇಳಲಿಕ್ಕೂ ಆಗುವುದಿಲ್ಲ. ಆದರೆ ಇಷ್ಟೊಂದು ಅಭದ್ರ ಕೆಲಸಗಳಿಗೂ ಜನ ಮುಗಿಬೀಳುತ್ತಾರೆಂದರೆ ಬಡತನದ ತೀವೃತೆ ಅದೆಷ್ಟಿದ್ದೀತು? ಈ ಕೆಲಸಗಳಿಗಿಂತ ಉತ್ತಮ ಪರಿಸ್ಥಿತಿಯಲ್ಲಿ ದುಡಿಯುವ ಹಾದಿಗಳೂ ಮುಚ್ಚಿಹೋಗುತ್ತಿವೆ. 2003ರ ವಿಶ್ವಸಂಸ್ಥೆಯ ವರದಿಯು 2030ರ ವೇಳೆಗೆ ಜಗತ್ತಿನ ಮೂರನೇ ಒಂದು ಭಾಗದಷ್ಟು ಜನರು ಸ್ಲಮ್ಮುಗಳಲ್ಲಿ ವಾಸಿಸುತ್ತಾರೆ ಮತ್ತು ಅವರಲ್ಲಿ ಹೆಚ್ಚು ಜನರು ಭಾರತ ಮತ್ತು ಆಫ್ರಿಕಾ ದೇಶಗಳಲ್ಲಿ ಇರುತ್ತಾರೆ –ಎಂದು ಹೇಳಿದೆ. ಭಾರತದ ಗ್ರಾಮೀಣ ಪ್ರದೇಶವೀಗ ಬಡವರನ್ನು ಒಳಗೊಳ್ಳಲಾರದಷ್ಟು ಬರಡಾಗುತ್ತಿದೆ. ಕೃಷಿ ಮತ್ತು ಕೃಷಿ ಪೂರಕ ಚಟುವಟಿಕೆಗಳು ಪೂರ್ತಿ ನೆಲಕಚ್ಚಿದಾಗ, ಸಾಂಪ್ರದಾಯಿಕ ಶಿಕ್ಷಣ ಆತ್ಮಗೌರವದ ಬದುಕನ್ನು ಕೊಡಲು ಸೋತಾಗ ಯುವಕರು ನಗರಗಳಿಗೆ ದೌಡಾಯಿಸುತ್ತಾರೆ. ನಗರದ ‘ರಾಯಲ್ ಬದುಕಿಗೆ’ ಅಗತ್ಯ ಸೇವಾವೃತ್ತಿಗಳಲ್ಲಿ ದುಡಿಯತೊಡಗುತ್ತಾರೆ. ಸ್ಲಂಗಳಲ್ಲಿ ವಾಸಿಸುತ್ತಾರೆ. 1993 ರಷ್ಟು ಹಿಂದೆಯೇ, ಬಲಾತ್ಕಾರದಿಂದ ಜನರನ್ನು ಒಕ್ಕಲೆಬ್ಬಿಸುವುದು ಮೃಗೀಯ ಮತ್ತು ಅತ್ಯಂತ ಘೋರವಾದ ಮಾನವ ಹಕ್ಕಿನ ಉಲ್ಲಂಘನೆ –ಎಂದು ವಿಶ್ವ ಸಂಸ್ಥೆಯು ತೆಗೆದುಕೊಂಡ ನಿರ್ಣಯಕ್ಕೆ ಸಹಿ ಹಾಕಿದ್ದರೂ ಈಗ ಅಭಿವೃದ್ಧಿಯ ಮಂತ್ರಗಾಳಿಗೆ ಸಿಕ್ಕು ಸ್ಲಂವಾಸಿಗಳನ್ನು ನಿರ್ದಯವಾಗಿ ಹೊರದಬ್ಬಲಾಗುತ್ತದೆ. ದೇಶವಾಸಿಗಳು ಬಡವರಾದ ಕಾರಣಕ್ಕೆ ತಮ್ಮ ದೇಶದಲ್ಲೇ ಅಲೆಮಾರಿಗಳಾಗುತ್ತಾರೆ, ನಿರಾಶ್ರಿತರಾಗುತ್ತಾರೆ. ಅರ್ಧದಷ್ಟು ಜನ ದಿನನಿತ್ಯದ ಅಗತ್ಯಗಳನ್ನು ಪೂರೈಸಿಕೊಳ್ಳುವಲ್ಲಿಯೇ ಆಯುಷ್ಯ ಕಳೆಯಬೇಕಾದ ದೇಶದಲ್ಲಿ, ಸೃಜನಶೀಲತೆ ಕೌಶಲ್ಯವೃದ್ಧಿ, ವೈಜ್ಞಾನಿಕ ಆವಿಷ್ಕಾರ, ಆರ್ಥಿಕ ಅಭಿವೃದ್ಧಿಗಳು ಬರೀ ಮಾತಿನ ಮಾತಾಗುತ್ತವೆ. ಅಭಿವೃದ್ಧಿಯ ಮೀಮಾಂಸೆ ಸ್ಥಳೀಯವಾಗಿ ವಿಕಸನಗೊಳ್ಳದೆ, ಅನ್ಯ ಮಾದರಿಗಳ ಆರೋಪಣೆಯಾಗುತ್ತವೆ.
ನಮ್ಮ ಸರಕಾರಗಳು ಬಡತನವನ್ನು ಹಾಗೇ ಬಿಟ್ಟು ಬಡವರ ವಿರುದ್ಧ ಕಾರ್ಯಯೋಜನೆಗಳನ್ನು ರೂಪಿಸುತ್ತವೆ. 1995 ರಿಂದ 2005 ರ ನಡುವೆ ದೇಶದ ಬಡತನದ ಪ್ರಮಾಣ 45% ರಿಂದ 23% ಕ್ಕೆ ಇಳಿದಿದೆ ಎಂಬ ಜಾದೂ ಪ್ರದರ್ಶಿಸಲಾಯಿತು. ಇದಕ್ಕಾಗಿ ಬಡತನವನ್ನು ಅಳೆಯುವ ಮಾಪನವನ್ನೇ ಬದಲಿಸಲಾಯ್ತು. 2007ರ ಅರ್ಜುನ ಸೇನ್ ಗುಪ್ತಾ ಸಮಿತಿ ಭಾರತದ ಗ್ರಾಮೀಣ ಪ್ರದೇಶದಲ್ಲಿ 77% ಜನರ ದಿನದ ಆದಾಯ 30 ರೂಪಾಯಿ ಎಂಬ ವರದಿ ನೀಡಿತು. ವಿಶ್ವಬ್ಯಾಂಕಿನ ಪ್ರಕಾರ ದಿನದ ಆದಾಯ 100 ರೂಪಾಯಿಗಳಿಗಿಂತ ಕಡಿಮೆಯಿರುವವರನ್ನು ಬಡವರೆಂದು ಪರಿಗಣಿಸಬೇಕಿತ್ತು. ಸಕ್ಸೇನಾ ಸಮಿತಿ ಕೂಡ ಭಾರತದಲ್ಲಿ 50% ರಷ್ಟು ಬಡತನವಿರುವುದನ್ನು ಗುರುತಿಸಿತ್ತು. ಆದರೆ ನಮ್ಮ ಸರ್ಕಾರಗಳು ಈ ಬಗ್ಗೆ ಗಂಭೀರವಾಗಲಿಲ್ಲ. ಬಡತನದ ಮಾಪನ ಆರ್ಥಿಕತೆಗಿಂತಲೂ ರಾಜಕೀಯ ಅಂಶಗಳನ್ನೇ ಮುಖ್ಯವಾಗಿಟ್ಟುಕೊಂಡು ಬಡವರ ಬದುಕನ್ನು ಕಾಲ್ಚೆಂಡಿನಾಟವಾಗಿಸಿದೆ. ಸರಕಾರಗಳು ತಮ್ಮನ್ನು ಅಕಲಂಕಿತವಾಗಿ ಪ್ರದರ್ಶಿಸಿಕೊಳ್ಳುವುದಕ್ಕೆ ಜನಸಾಮಾನ್ಯರ ವಿರುದ್ಧ ತಂತ್ರವನ್ನು ರೂಪಿಸುತ್ತವೆ. ಇದಕ್ಕೆ ಪಿ. ಸಾಯಿನಾಥ ಅಮೇರಿಕೆಯ ಉದಾಹರಣೆ ನೀಡುತ್ತಾರೆ. ಅಮೇರಿಕಾದಲ್ಲೂ ರೈತರು ಆತ್ಮಹತ್ಯೆಮಾಡಿಕೊಳ್ಳುತ್ತಾರೆ. ಅದರೆ ಅದನ್ನು ಹಾಗೆ ಕರೆಯುವುದಿಲ್ಲ. ಯಾಕೆಂದರೆ ಆ ಕುಟುಂಬಗಳು ಜೀವವಿಮೆಯ ಹಣವನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ಇತ್ತೀಚೆಗೆ ಭಾರತ ಸರ್ಕಾರ ಬಡವರ ವಿಮಾ ಪಾಲಿಸಿಯ ಬಗ್ಗೆ ತೋರುತ್ತಿರುವ ತೀವೃ ಕಾಳಜಿ ಕೂಡ ಇದಕ್ಕೆ ಹೊರತಾದುದಲ್ಲ.
ಸ್ವಾತಂತ್ರ್ಯದ ನಂತರದಲ್ಲಿ ದಲಿತರಿಗೆ ಬಡವರಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡಿದ ಮೇಲೂ ಪರಿಸ್ಥಿತಿ ಸುಧಾರಿಸಿಲ್ಲವೇಕೆ? ಎಂಬ ಪ್ರಶ್ನೆಯಿದೆ. ಸರ್ಕಾರದ ಅಭಿವೃದ್ಧಿ ಯೋಜನೆಗಳು ದಲಿತರನ್ನು ಬಡವರನ್ನು ಉದ್ದೇಶಿಸಿರುತ್ತವೆ. ಆದರೆ ಫಲಾನುಭವಿಗಳು ಮಾತ್ರ ಮೇಲ್ಜಾತಿ ಮೇಲ್ವರ್ಗದವರಾಗಿರುತ್ತಾರೆ ಎಂಬ ವಾಸ್ತವವೇ ಇದಕ್ಕೆ ಉತ್ತರವಾದೀತು. ಸರ್ಕಾರಿ ಯೋಜನೆಗಳು ಇನ್ನಾದರೂ ತಮ್ಮ ಫಲಿತವನ್ನು ಗಮನದಲ್ಲಿಟ್ಟುಕೊಂಡು ಬದಲಾಗಬೇಕಲ್ಲವೇ? ಕೆಳವರ್ಗ ಜಾತಿಗಳಿಗೆ ನೀಡುವ ಸೌಲಭ್ಯಗಳು ದಾನದ ರೀತಿಯಿಂದಲ್ಲ, ಹಕ್ಕಿನ ರೀತಿಯಲ್ಲಿ ಒದಗಬೇಕು. ತಳಸಮುದಾಯಗಳನ್ನು ಪ್ರತ್ಯೇಕವಾಗಿಡದೇ ಒಟ್ಟು ಸಾಮಾಜಿಕ ವ್ಯವಸ್ಥೆಯ ಒಳನೇಯ್ಗೆಯಾಗಿಸಬೇಕು. ಸರ್ಕಾರೀ ಉದ್ಯೋಗ ವಲಯವನ್ನು ಖಾಸಗಿಗೆ ಪರಭಾರೆ ಮಾಡದಿರುವುದು, ಗುತ್ತಿಗೆ ಹೊರಗುತ್ತಿಗೆ ಕ್ರಮಗಳನ್ನು ಕೈಬಿಡುವುದು, ಬಡ-ದಲಿತ ಯುವ ಸಮುದಾಯಕ್ಕೆ ನಿರಂತರ ಉದ್ಯೋಗಾವಕಾಶಗಳನ್ನು ಒದಗಿಸುವುದು, ಆ ಮೂಲಕ ಸ್ವಾವಲಂಬಿ ಬದುಕಿನ ಅವಕಾಶವನ್ನು ಸೃಷ್ಟಿಸುವುದು ಪ್ರತಿಯೊಂದು ಸರ್ಕಾರದ ತುರ್ತು ಹೊಣೆಗಾರಿಕೆ ಆಗಬೇಕು. ಇದು ಯಾವುದೇ ಸರ್ಕಾರ ಕೈಗೊಳ್ಳುವ ಅಭಿವೃದ್ಧಿ ಯೋಜನೆಯ ಭಾಗವಾಗಿ ಅಲ್ಲ, ಪ್ರಜಾಪ್ರಭುತ್ವದ ಪ್ರಾಥಮಿಕ ವಿಶ್ವಾಸಾರ್ಹತೆಯ ಪ್ರಶ್ನೆಯಾಗಿ. ಅಂದಾಗ ಮಾತ್ರ ಯಾರದೋ ಸುಖ ಸೌಕರ್ಯಕ್ಕಾಗಿ ತಣ್ಣಗೆ ನಡೆದು ಹೋಗುವ ಸಾವುಗಳಿಗೆ ಪೂರ್ಣವಿರಾಮ ದೊರೆತೀತು.