ಪೈಲ್ವಾನನಂತಿದ್ದ ಪುಟ್ಟಣ್ಣಯ್ಯ ಸಿಟ್ಟುಬರಿಸಿದರು, ತಂದೆ ಪ್ರೀತಿಯನ್ನೂ ಹರಿಸಿದರು -ಚುಕ್ಕಿ ನಂಜುಂಡಸ್ವಾಮಿ

 

 

 

 

ನಾನಾಗ ಮೂರನೇ ತರಗತಿ ಓದುತ್ತಿದ್ದ ಪುಟ್ಟ ಹುಡುಗಿ. ಬೆಂಗಳೂರಿನ ವಿಜಯನಗರದಲ್ಲಿ ನಮ್ಮ ಮನೆ. ಪಪ್ಪನನ್ನು (ಪ್ರೊ.ಎಂ.ಡಿ.ನಂಜುಂಡಸ್ವಾಮಿ)ನೋಡಲು ರಾಜ್ಯದ ನಾನಾ ಕಡೆಯಿಂದ ರೈತ ಮುಖಂಡರು,ಕಾರ್ಯಕರ್ತರು ಬರುತ್ತಲೇ ಇರುತ್ತಿದ್ದರು. ಅಂತೆಯೇ, ಮಂಡ್ಯದಿಂದಲೂ ಕೆ.ಎಸ್.ಪುಟ್ಟಣ್ಣಯ್ಯ, ಕೆ.ಬೋರಯ್ಯ, ಸುನಂದ ಜಯರಾಂ, ಶ್ರೀನಿವಾಸ್ ಅವರನ್ನೊಳಗೊಂಡ ರೈತ ಮುಖಂಡರ ಗುಂಪು ಆಗಾಗ ಜೀಪಿನಲ್ಲಿ ಬರುತ್ತಿತ್ತು. ನಮಗೆಲ್ಲ  ಆಗ ಪುಟ್ಟಣ್ಣಯ್ಯ ಕಟುಮಸ್ತಾದ ದೊಡ್ಡ  ಕುಸ್ತಿ ಪೈಲ್ವಾನ್‌ ಥರ ಕಾಣಿಸುತ್ತಿದ್ದರು. ಇವರೆಲ್ಲ  ನಮ್ಮ ಕುಟುಂಬದವರಂತೆಯೇ ಆಗಿದ್ದರು. ಸುನಂದಮ್ಮ ಬಂದವರೇ ನೇರ ಅಡುಗೆ ಮನೆಗೆ ಹೋಗಿ, ಅಮ್ಮನೊಂದಿಗೆ ಅಡುಗೆಗೆ ನಿಲ್ಲುತ್ತಿದ್ದರು. ಎಲ್ಲರೂ ಕೂಡಿ ಊಟ ಮಾಡುತ್ತಿದ್ದರು. ನನ್ನನ್ನೂ ಅವರೆಲ್ಲ ಪ್ರೀತಿಯಿಂದ ಮಾತನಾಡಿಸುತ್ತಿದ್ದರು.

1992 ಅಕ್ಟೋಬರ್‌ 2, ಗಾಂಧಿ ಜಯಂತಿ ದಿನ.  ಹೊಸಪೇಟೆಯಲ್ಲಿ ಬೀಜ ಸತ್ಯಾಗ್ರಹ ಆಯೋಜನೆಯಾಗಿತ್ತು. ಬಹುರಾಷ್ಟ್ರೀಯ ಕಂಪನಿಗಳ ಷಡ್ಯಂತ್ರದ ವಿರುದ್ಧ ರೈತಸಂಘಟನೆ  ಆಗ ದೊಡ್ಡ ಚಳವಳಿಯನ್ನೇ ಆರಂಭಿಸಿತ್ತು. ವಂದನಾಶಿವ, ಮಹೇಂದ್ರ ಸಿಂಗ್‌ ಟಿಕಾಯಿತ್‌ ಮೊದಲಾದವರು ಭಾಗವಹಿಸಿದ್ದರು. ಶಾಲೆಗೆ ರಜೆ ಇದ್ದುದರಿಂದ ನಾನೂ ಅಮ್ಮನ ಜೊತೆ ಅಲ್ಲಿಗೆ ಹೋಗಿದ್ದೆ. ಹೊಸಪೇಟೆ ಪ್ರವಾಸಿ ಮಂದಿರದಲ್ಲಿದ್ದ ಅಮ್ಮನನ್ನು ಮಾತನಾಡಿಸಲು ಪುಟ್ಟಣ್ಣಯ್ಯ ಬಂದರು. ಔಪಚಾರಿಕ ಮಾತುಕತೆ ನಂತರ ಅಲ್ಲೇ ಇದ್ದ ನನ್ನನ್ನು ಉದ್ದೇಶಿಸಿ, “ನೀನು ತುಂಬಾ ಸೀರಿಯಸ್‌ ಆಗಿರ್ತೀಯಾ,’’ ಎಂದರು. ನನ್ನ -ಅವರ ನೇರ ಮಾತುಕತೆ ಅದೇ ಮೊದಲನೆಯದಾಗಿತ್ತು.

ರೈತ ಸಂಘಟನೆಯ ಬಲವಾಗಿದ್ದ ಸುಂದರೇಶ್ ಅವರು ಆ ವೇಳಗೆ ನಿಧನರಾಗಿದ್ದರು. ಅವರು ನಿರ್ವಹಿಸುತ್ತಿದ್ದ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಯಾರಿಗೆ ವಹಿಸಬೇಕು ಎನ್ನುವ ಕುರಿತು ಮನೆಯಲ್ಲಿ ಚರ್ಚೆಗಳು ನಡೆಯುತ್ತಿದ್ದವು. ಸಿಂಧನೂರಿನ ಹನುಮನಗೌಡ ಮತ್ತು ಪುಟ್ಟಣ್ಣಯ್ಯ ಅವರ ಹೆಸರು ಚರ್ಚೆಯಲ್ಲಿದ್ದವು. ಅದ್ಯಾಕೆ ಕೇಳಿದರೊ ಗೊತ್ತಿಲ್ಲ,“ ಈ ಇಬ್ಬರಲ್ಲಿ ಯಾರನ್ನು ಮಾಡಬಹುದು?’’ಎಂದು ಪಪ್ಪ ನನ್ನನ್ನೇ ಕೇಳಿದರು. ಆಗಿನ್ನೂ ನನಗೆ 12ರ ಹರೆಯ. ಅವರಿಬ್ಬರ ಭಾಷಣದ ವೈಖರಿಯನ್ನು ಕಂಡು ಕೇಳಿದ್ದ ನಾನು, ಇಬ್ಬರ “ಫ್ಯಾನ್‌’’ಆಗಿದ್ದೆ. ಪಪ್ಪ ಕೇಳಿದೊಡನೆ, “ಇಬ್ಬರನ್ನೂ ಮಾಡಿ,’’ಎಂದು ಪ್ರತಿಕ್ರಿಯಿಸಿದೆ. “ಅದು ಹ್ಯಾಗೆ ಸಾಧ್ಯ. ಇರುವುದು ಒಂದೇ ಪೋಸ್ಟು,’’ಎಂದ ಪಪ್ಪ, “ಉತ್ತರ ಕರ್ನಾಟಕಕ್ಕೆ ಒಬ್ಬರು, ದಕ್ಷಿಣಕ್ಕೆ ಮತ್ತೊಬ್ಬರನ್ನು ಪ್ರಧಾನ ಕಾರ್ಯದರ್ಶಿ ಮಾಡಲೂ ಬಹುದು,’’ಎಂದು ಹೇಳಿದ್ದು ಕೇಳಿಸಿತು. ಆದರೆ, ನಂತರದ ರಾಜ್ಯಸಮಿತಿ ಸಭೆಯಲ್ಲಿ ಹನುಮನಗೌಡರ ಹೆಸರು ಅಂತಿಮಗೊಂಡಿತು.

ನಂತರ,1994ರಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಯಿತು. ಪಪ್ಪ, ಬಾಬಾಗೌಡ ಪಾಟೀಲ್‌, ಪುಟ್ಟಣ್ಣಯ್ಯ “ರೈತ ರಾಜಕಾರಣ’’ದ ಭಾಗವಾಗಿ ಕಣಕ್ಕಿಳಿದಿದ್ದರಾದರೂ ಗೆದ್ದವರು ಪುಟ್ಟಣ್ಣಯ್ಯ ಮಾತ್ರ. ಹಸಿರು ಶಾಲು ವಿಧಾನಸಭೆ ಪ್ರವೇಶಿಸಿತು. ಶಾಸಕರಾದ ನಂತರ ಪುಟ್ಟಣ್ಣಯ್ಯ ಅವರು ನಮ್ಮನೆಗೆ ಮತ್ತೆ ಮತ್ತೆ ಬಂದು, ಪಪ್ಪನ ಜೊತೆ ಅನೇಕ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಶಾಸನ ಸಭೆಯಲ್ಲಿ ಚರ್ಚಿಸಬೇಕಿದ್ದ ಸಂಗತಿಗಳ ಕುರಿತಂತೆ ಪಪ್ಪ ಹೆಚ್ಚಿನ ವಿವರ ನೀಡುತ್ತಿದ್ದರು. ಆ ಹೊತ್ತಿಗೆ ರೈತ ಸಂಘಟನೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯವಾಗುತ್ತಿತ್ತು. ಜಪಾನ್‌, ಕೊರಿಯಾ ಮುಂತಾದ ದೇಶಗಳ ರೈತ ನಾಯಕರು, ಪತ್ರಕರ್ತರು ಇಲ್ಲಿಗೆ ಬರುತ್ತಿದ್ದರು. ಹೀಗೆ ಬಂದವರನ್ನು ಮನೆಗೆ ಊಟಕ್ಕೆ ಕರೆದಾಗ ಪುಟ್ಟಣ್ಣಯ್ಯ ಕಾಯಂ ಆಹ್ವಾನಿತರಾಗಿರುತ್ತಿದ್ದರು.

ಈ ಮಧ್ಯೆ, ಬಹುರಾಷ್ಟ್ರೀಯ ಕಂಪನಿಗಳಿಂದ ಪ್ರೇರಿತರಾದವರೋ ಅಥವಾ ಕೋಮುವಾದಿಗಳಿಂದಲೋ ಪಪ್ಪನಿಗೆ ಬೆದರಿಕೆ ಪತ್ರಗಳು ನಿರಂತರವಾಗಿ ಬರತೊಡಗಿದವು. “ನಿನ್ನನ್ನು ಕೊಲ್ಲುತ್ತೇವೆ, ಮಕ್ಕಳನ್ನು ಅಪಹರಿಸುತ್ತೇವೆ,’’ಎನ್ನುವುದು ಆ ಬೆದರಿಕೆಗಳ ಸಾರವಾಗಿರುತ್ತಿತ್ತು. ಆ ಸಂದರ್ಭ ನಮ್ಮ ಮನೆಯ ಮತ್ತು ಕುಟುಂಬದ ರಕ್ಷಣೆಯ ಹೊಣೆ ಹೊತ್ತಿದ್ದವರು ಪುಟ್ಟಣ್ಣಯ್ಯ ಅವರು. ಚಿಕ್ಕ ಮನೆಯ ಮೇಲ್ಮಹಡಿಯಲ್ಲಿ ನಿರಂತರ ಆರೇಳು ತಿಂಗಳು ಹದಿನೈದರಿಂದ ಇಪ್ಪತ್ತು ಮಂದಿ ರೈತ ಕಾರ್ಯಕರ್ತರು ಮಂಡ್ಯ ಜಿಲ್ಲೆಯಿಂದ ಬಂದು, ನಮ್ಮ ರಕ್ಷಣೆಗೆ ನಿಂತಿದ್ದರು. ಮನೆಯ ಮೇಲೆ, ಎದುರಿನ ಮಾರಿಗುಡಿಯಲ್ಲಿ ಕುಳಿತಿದ್ದು ಸುತ್ತಲೂ ನಡೆಯುವುದನ್ನು ಅವಲೋಕಿಸುತ್ತಿರುತ್ತಿದ್ದರು. ನಮ್ಮನ್ನು ಶಾಲೆಗೂ ಅವರೇ ಕರೆದುಕೊಂಡು ಹೋಗಿ, ವಾಪಸ್ ಕರೆ ತರುತ್ತಿದ್ದರು. ಈ ಕಾರ್ಯಕ್ಕೆ ಮಂಡ್ಯ ಜಿಲ್ಲೆಯ ಒಂದೊಂದು ಗ್ರಾಮದ ಕಾರ್ಯಕರ್ತರನ್ನು ಪಾಳಿ ಮೇಲೆ ನಿಯೋಜಿಸಲಾಗುತ್ತಿಂತೆ. ಮಾತ್ರವಲ್ಲ, ಆಂಥೋಣಿ ಎಂಬ ನಂಬಿಕಸ್ಥ ಕಾರು ಚಾಲಕರನ್ನು ಪುಟ್ಟಣ್ಣಯ್ಯ ಅವರೇ ಕಳುಹಿಸಿದ್ದರು. ಹೀಗೆ, ಪಪ್ಪನ ಮೇಲೆ ಮತ್ತು ನಮ್ಮ ಕುಟುಂಬದ ಮೇಲೆ ಅವರಿಗೆ ತುಂಬಾ ಅಕ್ಕರೆ.

ಆ ಹೊತ್ತಿಗಾಗಲೇ ರೈತ ಸಂಘಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೆರೆದುಕೊಳ್ಳುತ್ತಿತ್ತು ಎಂದು ಹೇಳಿದೆ. ಈ ನಿಟ್ಟಿನ ಸಂಘಟನೆಯಲ್ಲಿ ತಮ್ಮನ್ನು ಹೆಚ್ಚು ತೊಡಗಿಸಿಕೊಳ್ಳಲು ನಿರ್ಧರಿಸಿದ್ದ ಪಪ್ಪ, ರಾಜ್ಯದ ಸಂಘಟನೆಯ ಹೊಣೆಯನ್ನು ಪುಟ್ಟಣ್ಣಯ್ಯ ಅವರಿಗೆ ವಹಿಸುವ ಇಂಗಿತವನ್ನೂ ವ್ಯಕ್ತಪಡಿಸಿದ್ದರು. ಆದರೆ, ಅದೇನಾಯಿತೋ, ಕ್ರಮೇಣ ಇಬ್ಬರ ನಡುವಿನ ಸಂಬಂಧ ಹಳಸತೊಡಗಿತು. ಪಪ್ಪ ಜಾಗತೀಕರಣ, ಉದಾರೀಕರಣದ ಅಪಾಯಗಳ ಬಗ್ಗೆ ಮತ್ತೆ ಮತ್ತೆ ಮಾತನಾಡುತ್ತಿದ್ದರು. ಆದರೆ,“ಮಾತೆತ್ತಿದರೆ ಬಹುರಾಷ್ಟ್ರೀಯ ಕಂಪನಿ, ಫಾರಿನ್ ಅಂತಾರೆ. ಅಂತಾರಾಷ್ಟ್ರೀಯ ಸಂಘಟನೆ ಬಗ್ಗೆ ಹೇಳುತ್ತಾರೆ. ಇಲ್ಲಿನ ಕಬ್ಬಿನ ಬೆಲೆಯ ಬಗ್ಗೆ ಮಾತನಾಡಲ್ಲ,’’ ಎಂದು ಕೆಲವರು ಬಹಿರಂಗವಾಗಿ ಟೀಕಿಸತೊಡಗಿದರು. ಪರಸ್ಪರ ಆರೋಪ – ಪ್ರತ್ಯಾರೋಪ, ವಾಗ್ದಾಳಿಗಳು ಶುರುವಾದವು. ರೈತ ಸಂಘಟನೆ ಇಬ್ಬಣಗಳಲ್ಲಿ ವಿಘಟನೆಯಾಗಿ, ಪ್ರತ್ಯೇಕ ರಾಜ್ಯ ಸಮಿತಿ ಸಭೆಗಳೂ ನಡೆದವು. ಮನಸ್ಸುಗಳು ಒಡೆದವು.

ರಾಜ್ಯದ ಅನ್ನದಾತ ರೈತರಲ್ಲಿ ಸ್ವಾಭಿಮಾನವನ್ನು, ಹೋರಾಟದ ಕಸುವನ್ನು ತುಂಬಿದ್ದ ರೈತ ಚಳವಳಿಯ ದುರಂತದ ದಿನಗಳವು. ವಿಘಟನೆಯಾದ ಬಣಗಳಿಗೆ ಪಪ್ಪ ಮತ್ತು ಪುಟ್ಟಣ್ಣಯ್ಯ ಅಧ್ಯಕ್ಷರಾದರು. ಇದೇ ಹೊತ್ತಿನಲ್ಲಿ ಪಪ್ಪನ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸತೊಡಗಿದರು. ಅದರಿಂದ ಪಪ್ಪ ಮಾತ್ರವಲ್ಲ, ಅದಾಗಲೇ ಎಲ್ಲದರ ಬಗ್ಗೆ ತಿಳುವಳಿಕೆ ಹೊಂದುತ್ತಿದ್ದ ನನಗೂ ತೀವ್ರ ಘಾಸಿಯಾಯಿತು. ಪಪ್ಪ ಹಣಕಾಸಿನ ವ್ಯವಹಾರದಲ್ಲಿ ಎಷ್ಟು ಪ್ರಾಮಾಣಿಕವಾಗಿದ್ದರು ಎನ್ನುವುದು ನನಗಾಗಲೇ ಅರ್ಥವಾಗಿತ್ತು. ನನಗೆ ನೂರು ರೂ. ಕೊಟ್ಟರೂ ಅದರ ಖರ್ಚಿನ ಲೆಕ್ಕ ಕೇಳುತ್ತಿದ್ದರು. ಸಂಘಟನೆಗೆ ಸಂಬಂಧಿಸಿದ ಪತ್ರವನ್ನು ಜೆರಾಕ್ಸ್ ಮಾಡಿಸಿ ತಂದರೆ, ಅದರ ಬಿಲ್‌ ಪಡೆದು ಕಡತಕ್ಕೆ ಹಾಕುತ್ತಿದ್ದರು. ಒಂದೊಮ್ಮೆ ನಾನು ಬಿಲ್‌ ತರದಿದ್ದರೆ, “ಇನ್ನೂ ಯಾವಾಗ ಶಿಸ್ತು ಕಲಿಯುವುದು,’’ಎಂದು ಗದರುತ್ತಿದ್ದರು. ಅಂಥ ಪಪ್ಪನ ಬಗ್ಗೆ ಇವರೆಲ್ಲ ಭ್ರಷ್ಟಾಚಾರದ ಆರೋಪ ಹೊರಿಸುತ್ತಿದ್ದಾರಲ್ಲ ಎನ್ನುವುದನ್ನು ನನಗೆ ಅರಿಗಿಸಿಕೊಳ್ಳಲಾಗಲೇ ಇಲ್ಲ. ಕೆಲವೇ ವರ್ಷದ ಹಿಂದೆ ಪುಟ್ಟಣ್ಣಯ್ಯ ಬಗ್ಗೆ ಬಹುವಾಗಿ ಅಭಿಮಾನ ಹೊಂದಿದ್ದ ನಾನು ಅವರನ್ನು ದ್ವೇಷಿಸತೊಡಗಿದೆ.

ಈ ಮಧ್ಯೆಯೂ, ಪುಟ್ಟಣ್ಣಯ್ಯ ಅವರ ಹೇಳಿಕೆಗಳನ್ನು ಪತ್ರಿಕೆಗಳಲ್ಲಿ ಓದಿದಾಗ, ಶಾಸನ ಸಭೆಯಲ್ಲಿ ಅವರು ನಡೆಸಿದ ಚರ್ಚೆಯನ್ನು ಗಮನಿಸಿದಾಗ, “ನೋಡು, ಎಷ್ಟೊಂದು ಚೆನ್ನಾಗಿ ಮಾತನಾಡಿದ್ದಾನೆ,’’ಎಂದು ಪಪ್ಪ ಏಕವಚನ ಬಳಸಿಯೇ ಪುಟ್ಟಣ್ಣಯ್ಯ ಅವರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದನ್ನು ನಾನು ಅನೇಕ ಬಾರಿ ಕೇಳಿದ್ದೇನೆ. ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾಮಗಾರಿ ವಿರುದ್ಧ ಹೋರಾಟ ನಡೆಯುತ್ತಿದ್ದಾಗ ನೈಸ್‌ ಕಂಪನಿ ಕರೆದ ಸಾರ್ವಜನಿಕ ವಿಚಾರಣಾ ಸಭೆಗೆ ಇಬ್ಬರೂ ಆಹ್ವಾನಿತರಾಗಿದ್ದರು. ಅಲ್ಲಿ ಒಬ್ಬರನ್ನೊಬ್ಬರು ಬೆಂಬಲಿಸಿಕೊಂಡೇ ಮಾತನಾಡಿದ್ದರಂತೆ. ಒಂದು ಹಂತದಲ್ಲಿ ಕಂಪನಿ ಪರ ಹಿತಾಸಕ್ತಿಗಳು ಪಪ್ಪನ ಮಾತಿನಿಂದ ಕೆರಳಿ, ಹಲ್ಲೆ ನಡೆಸಲು ಮುಂದಾದರಂತೆ. ಆಗ, ಪುಟ್ಟಣ್ಣಯ್ಯ ಅವರೇ ಅದನ್ನು ತಡೆದು, ಹಿತಾಸಕ್ತರ ಗುಂಪನ್ನು ಹಿಮ್ಮೆಟ್ಟಿಸಿದ್ದರು.

ಆದಾಗ್ಯೂ, ವೈಮನಸ್ಸು, ಸಿಟ್ಟು ಸೆಡವು ಕಡಿಮೆಯಾಗಿರಲಿಲ್ಲ. ಪಪ್ಪ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾಗ ಪುಟ್ಟಣ್ಣಯ್ಯ ನೋಡಲು ಬಂದರು. ಆದರೆ, ಪಪ್ಪ ಅವರನ್ನು ನೋಡಲು ಬಯಸದೆ ಕಣ್ಣುಮುಚ್ಚಿಕೊಂಡರು. ನನಗೂ ಅವರ ಮೇಲಿದ್ದ ಸಿಟ್ಟು ಕಡಿಮೆಯಾಗಿರಲಿಲ್ಲ. 2004ರಲ್ಲಿ ಪಪ್ಪ ಕೊನೆಯುಸಿರೆಳೆದರು. ಅಂತಿಮ ದರ್ಶನ ಪಡೆಯಲು ಬಂದ ಪುಟ್ಟಣ್ಣಯ್ಯ ಅವರಿಗೆ ಅದಕ್ಕೆ ಅವಕಾಶ ನೀಡಲಿಲ್ಲ. “ಪಪ್ಪನೇ ಅವರನ್ನು ನೋಡಲು ಬಯಸಿರಲಿಲ್ಲ. ಆದ್ದರಿಂದ ಅಂತಿಮ ದರ್ಶನಕ್ಕೆ ಅವಕಾಶ ನೀಡಬಾರದು,’’ ಎಂದು ನಿರ್ಧರಿಸಿದ್ದೆವು. ನಮ್ಮ ಮನಸ್ಸು ಅಷ್ಟೊಂದು ಕೆಟ್ಟು ಹೋಗಿತ್ತು.

ಪಪ್ಪನ ನಿಧನದ ಬಳಿಕ ನಮ್ಮ ಕುಟುಂಬ ಮತ್ತು ಸಂಘಟನೆಯ ಹಿತಚಿಂತಕರಾದ ಕಡಿದಾಳು ಶಾಮಣ್ಣ, ರವಿವರ್ಮಕುಮಾರ್‌ ಮುಂತಾದವರು ರೈತ ಸಂಘಟನೆಯ ವಿಲೀನ ಆಗಬೇಕು ಎಂದು ಮತ್ತೆ ಮತ್ತೆ ಹೇಳಿದರು. ವೈಯಕ್ತಿಕ ಭಿನ್ನಾಭಿಪ್ರಾಯ, ಮುನಿಸು ಏನೇ ಇರಲಿ. ರೈತ ಚಳವಳಿ ಬೇಕಿರುವುದು ರೈತರ ಹಿತಕ್ಕೆ. ನಮ್ಮನೋವು, ಬೇಸರ ಅದಕ್ಕೆ ಅಡ್ಡಿಯಾಗಬಾರದು ಎಂದುಕೊಂಡು, “ವೀಲೀನಕ್ಕೆ ನಮ್ಮ ಅಭ್ಯಂತರವೇನೂ ಇಲ್ಲ,’’ ಎಂದು ತಿಳಿಸಿದೆ. ನಂತರ ಹಲವು ಸಭೆ, ಚರ್ಚೆಗಳ ನಂತರ ಇಬ್ಬಣಗಳು ಒಂದಾದವು. ಅದಾಗಿ, ಆರಂಭದ ಒಂದೆರಡು ವರ್ಷ ನನಗೆ ಕಷ್ಟವೇ ಆಯಿತು. ಇರುಸು ಮುರುಸಿನಿಂದಲೇ ಸಭೆಗಳಲ್ಲಿ ಭಾಗವಹಿಸುತ್ತಿದ್ದೆ. ಆದರೆ, ಕ್ರಮೇಣ ಪುಟ್ಟಣ್ಣಯ್ಯ ಅರ್ಥವಾಗತೊಡಗಿದರು. ಅವರ ಮಾತು, ನಡವಳಿಕೆ, ಮನಷ್ಯತ್ವ ಗುಣ ಮತ್ತೆ ಹಿಡಿಸತೊಡಗಿತು. ಕಷ್ಟ ಎಂದು ಬಂದವರು ಯಾರೇ ಆಗಲಿ ಅವರಿಗೆ ಸದಾ ಮಿಡಿಯುವ ಹೃದಯವಂತಿಕೆ ಅವರದ್ದಾಗಿತ್ತು. ಹೋಟೆಲ್‌ಗೆ ಹೋದರೆ ಆಹಾರ ಪೂರೈಸಿದ ಸಪ್ಲೈಯರ್ ನನ್ನು ಕರೆದು, ಅವನ ಬಗ್ಗೆ ಮಾಹಿತಿ ಪಡೆದು ಕೈಗೊಂದಷ್ಟು ದುಡ್ಡು ಕೊಡದೆ ಯಾವತ್ತೂ ಬಂದವರಲ್ಲ. ಶ್ರಮ ಸಂಸ್ಕೃತಿಯ ಮೇಲೆ ಅವರು ಬಹುವಾಗಿ ನಂಬಿಕೆ ಇಟ್ಟಿದ್ದರು. ತಮ್ಮ ಕ್ಷೇತ್ರದ ಶ್ರಮಿಕ ಜನರನ್ನು ವಿಶೇಷವಾಗಿ ಸನ್ಮಾನಿಸುತ್ತಿದ್ದರು. “ಸತ್ಯ ಇರುವುದೇ ಶ್ರಮ ಸಂಸ್ಕೃತಿಯಲ್ಲಿ,’ ಎಂದು ಮತ್ತೆ ಮತ್ತೆ ಹೇಳುತ್ತಿದ್ದರು. ಲೋಹಿಯಾವಾದ,ಸಮಾಜವಾದ ಎಲ್ಲವನ್ನೂ ಅರ್ಥೈಸಿಕೊಂಡು, ತಮ್ಮದೇ ಶೈಲಿಯ ಗ್ರಾಮ್ಯ ಭಾಷೆಯಲ್ಲಿ ಅದನ್ನು ಜನರಿಗೆ ಹೇಳುತ್ತಿದ್ದರು. ಅವರ ಮಾತಿನಲ್ಲಿ ಹೆಚ್ಚಿರುತ್ತಿದ್ದ ಹಾಸ್ಯ, ತಮಾಷೆಯ ಹಿಂದೆ ಮೊನಚು ವ್ಯಂಗ್ಯ ಸದಾ ಇದ್ದೇ ಇರುತ್ತಿತ್ತು.

ಒಮ್ಮೆ ಶಿವಮೊಗ್ಗದಿಂದ ಬೆಂಗಳೂರಿಗೆ ಕಾರಿನಲ್ಲಿ ಒಟ್ಟಿಗೇ ಪ್ರಯಾಣಿಸಿದೆವು. ನನ್ನ ಮಗ ತೆನೆ, ನಿದ್ದೆಯಲ್ಲಿ ಅವರ ಮೇಲೆ ಕಾಲು ಹಾಕಿದ. ನಾನು ಕಾಲನ್ನು ನನ್ನತ್ತ ಎಳೆದುಕೊಂಡೆ. ಆದರೆ, ಅವರೇ ಅವನ ಕಾಲುಗಳನ್ನು ತಮ್ಮ ತೊಡೆಯ ಮೇಲೆಳೆದುಕೊಂಡು ನಿದ್ರೆಗೆ ಅನುವುಮಾಡಿಕೊಟ್ಟರು. ಜೀವನ ಪ್ರೀತಿ, ಬದುಕನ್ನು ಪ್ರೀತಿಸುವ ರೀತಿ ಅವರಲ್ಲಿ ದೊಡ್ಡ ಪ್ರಮಾಣದಲ್ಲಿತ್ತು. ಹೀಗಿರುವ ಪುಟ್ಟಣ್ಣಯ್ಯ ಪಪ್ಪ ಮತ್ತು ಸಂಘಟನೆಯ ವಿಷಯದಲ್ಲಿ ಆಗ ಯಾಕೆ ಹಾಗೆ ನಡೆದುಕೊಂಡರು, ಭಿನ್ನಾಭಿಪ್ರಾಯ ಮೂಡಿದ್ದು ಯಾಕೆ ಎನ್ನುವುದು ನನಗೆ ಬಿಡಿಸಲಾಗದ ಒಗಟಿನಂತೆ ಕಾಡತೊಡಗಿತು. ಈ ಸಂಬಂಧ ಎರಡು -ಮೂರು ಬಾರಿ ಅವರೊಂದಿಗೆ ಚರ್ಚಿಸಿದ್ದೆ ಕೂಡ. ಪುಟ್ಟಣ್ಣಯ್ಯ ಅವರ ಮುಗ್ಧತೆಯನ್ನು ಬಳಸಿಕೊಂಡ ಸಂಘಟನೆಯೊಳಗಿನ ಕೆಲವು ಹಿತಾಸಕ್ತರು ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ತಂದಿಟ್ಟು, ತಾವು ದುರ್ಲಾಭ ಪಡೆದರು ಎಂದು ಆ ಚರ್ಚೆಗಳ ಮೂಲಕ ನನಗೆ ಅರಿವಾಯಿತು. ಇಂಥ ಸ್ಥಿತಿಯ ಸೃಷ್ಟಿಗೆ ಕಾರಣರಾದವರು ಯಾರೂ ಈಗ ಸಂಘಟನೆಯಲ್ಲಿಲ್ಲ ಎನ್ನುವುದು ಕೂಡ ಸ್ಪಷ್ಟವಾಯಿತು. ಅಪ್ಪ ನಿಧನರಾದಾಗ ನನಗಿನ್ನೂ 22 ವಯಸ್ಸು. ಸಹೋದರ ಪಚ್ಚೆಯೂ ಚಿಕ್ಕವನು. ಇಬ್ಬರಿಗೂ ಅನುಭವ; ಪ್ರಪಂಚ ಜ್ಞಾನ ಅಷ್ಟಾಗಿರಲಿಲ್ಲ. ಅದರ ಲಾಭ ಪಡೆದ ಕೆಲವರು, “ಎಂಡಿಎನ್‌ ಮಕ್ಕಳು,’’ ಎನ್ನುವುದನ್ನೇ ಮುಂದೆ ಮಾಡಿ ಲಾಭ ಮಾಡಿಕೊಂಡರು. ಸಂಘಟನೆ ವಿಲೀನವಾಗಿ, ಪುಟ್ಟಣ್ಣಯ್ಯ ಜೊತೆ ಮತ್ತೆ ಸಂಪರ್ಕ ಬೆಳೆದು, ಕೆಲಸ ಮಾಡಲು ಆರಂಭಿಸದ ಮೇಲೆ, “ಯಾರು ಸೈದ್ಧಾಂತಿಕವಾಗಿ ಸರಿ. ಯಾರು ಚಳವಳಿಗೆ ಹೆಚ್ಚು ಬದ್ಧರು. ಯಾರು ಲಾಭಕೋರರು’’ ಎನ್ನುವುದು ಅರಿವಿಗೆ ಬಂದಿತು ಕೂಡ.

ಅದಾಗಲೇ ಸಂಘಟನೆ ಮತ್ತು ರಾಜಕೀಯವಾಗಿ ಬೆಳೆದಿದ್ದ ಪುಟ್ಟಣ್ಣಯ್ಯ ಅವರಿಗೆ ನಮ್ಮಿಂದ ಯಾವ ಲಾಭವೂ ಆಗಬೇಕಿರಲಿಲ್ಲ. ಆದರೂ, ನನ್ನನ್ನು ಮತ್ತು ಪಚ್ಚೆಯನ್ನು ಬಹುವಾಗಿ ಪ್ರೋತ್ಸಾಹಿಸಿದರು. “ಅಪ್ಪ ಅಮ್ಮನನ್ನು ಕಳೆದುಕೊಂಡ ಈ ಹುಡುಗರು ರೈತ ಹಿತಕ್ಕಾಗಿ ಚಳವಳಿಯಲ್ಲಿದ್ದಾರೆ. ಅವರು ಅನಾಥರಲ್ಲ, ಅವರು ನಮ್ಮ ಕುಟುಂಬದ ಸದಸ್ಯರು,’’ಎಂದು ಬಹಿರಂಗ ಸಭೆಗಳಲ್ಲಿ ಪ್ರೀತಿ ತೋರಿದರು. ನಾವು ಹಿಂದೆ ತೋರಿದ್ದ ಸಿಟ್ಟು, ಪಪ್ಪನ ದರ್ಶನಕ್ಕೆ ಅವಕಾಶ ಮಾಡಿಕೊಡದ ಬೇಸರ ಯಾವುದನ್ನೂ ಮನಸ್ಸಿನಲ್ಲಿ ಇಟ್ಟುಕೊಳ್ಳದೆ, ಆ ಸಂದರ್ಭವನ್ನು ಅರ್ಥಮಾಡಿಕೊಂಡು, ನಮ್ಮನ್ನು ತಮ್ಮ ಮಕ್ಕಳ ಹಾಗೆ ಪ್ರೀತಿಸಿದರು. ಈಗ ಮತ್ತೊಮ್ಮೆ “ಅಪ್ಪ’’ನನ್ನು ಕಳೆದುಕೊಂಡಿದ್ದೇವೆ ಎನ್ನಿಸುತ್ತಿದೆ.

ಸಂಘಟನೆ ವಿಘಟನೆಯಾಗಿದ್ದರ ಕುರಿತು ಪುಟ್ಟಣ್ಣಯ್ಯ ಪಶ್ಚಾತ್ತಾಪ ವ್ಯಕ್ತಪಡಿಸುತ್ತಿದ್ದರು. “ಆಗಿನ ಘಟನೆಗಳಿಂದ ಚಳವಳಿ ಏನೇನೋ ಆಯಿತು. ರೈತ ಶಕ್ತಿ ದುರ್ಬಲವಾಯಿತು. ಅದು ತಪ್ಪು ನಡೆಯಾಗಿತ್ತು,’’ ಎಂದು ಪಚ್ಚೆ ಜೊತೆಗೆ ಇತ್ತೀಚೆಗೆ ಕೂಡ ಬೇಸರ ವ್ಯಕ್ತಪಡಿಸಿದ್ದರಂತೆ. ಆದ್ದರಿಂದಲೇ, ಸಂಘಟನಾತ್ಮಕ ಮತ್ತು ರಾಜಕೀಯವಾಗಿ ಬಲಪಡಿಸುವ ನಿಟ್ಟಿನಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದರು. ಈಚೀಚೆಗೆ, ಯಾವುದೋ ಕಾರಣಕ್ಕೆ ನನಗೆ ಸಭೆಗೆ ಹೋಗಲಾಗುತ್ತಿರಲಿಲ್ಲ. ಎರಡು -ಮೂರು ಸಭೆಯಲ್ಲಿ ಕಾಣಿಸದಿದ್ದರೆ, ಮತ್ತೆ ಭೇಟಿಯಾದಾಗ, “ಕಾಣದಂತೆ ಮಾಯವಾದನೋ ನಮ್ಮ ಶಿವ,’ ಎಂದು ಹಾಡಿ, “ಹಿಂಗಾದ್ರೆ ನಮ್ಮ ಕತೆ ಹೇಗೆ,’’ ಅಂತ ರೇಗಿಸುತ್ತಿದ್ದರು.

ರೈತ ಸಂಘಟನೆಯ ಎರಡೂ ಬಣಗಳು ವಿಲೀನವಾದರೆ ದೊಡ್ಡ ಶಕ್ತಿ ಬರುತ್ತದೆಂದು ಅನೇಕ ಹಿರಿಯರು ಬಯಸಲು ಇದ್ದ ಒಂದೇ ಭರವಸೆ ಪುಟ್ಟಣ್ಣಯ್ಯ ಅವರಾಗಿದ್ದರು. ಈಗ ಆ “ಪೈಲ್ವಾನ್‌’’ ನಾಯಕತ್ವವೂ ನಿರ್ಗಮಿಸಿದ್ದು, ಚಳವಳಿಯಲ್ಲಿ ದೊಡ್ಡ ನಿರ್ವಾತ ಸೃಷ್ಟಿಯಾಗಿದೆ. ಆದರೆ, ನಾಡಿನ ಕೃಷಿ, ಕೃಷಿಕರು ಉಳಿಯಬೇಕೆಂದರೆ ರೈತ ಚಳವಳಿ ಉಳಿಯಲೇಬೇಕು. ಈ ಕಾರಣಕ್ಕೆ, ‘36’ ವಯಸ್ಸಾಗಿರುವ ಚಳವಳಿಗೆ ರೈತ ಸಮುದಾಯದ ಹೊಸ ತಲೆಮಾರಿನ, ಹೊಸ ಆಲೋಚನೆಯ ಜನರನ್ನು ಸೆಳೆಯುವ ಮತ್ತು ರಚನಾತ್ಮಕ ಕೆಲಸಗಳ ಮೂಲಕ ಚಳವಳಿಯನ್ನು ವಿಸ್ತರಿಸುವ “ಒಂದಂಶ’’ದ ಕಾರ್ಯಕ್ರಮವನ್ನು ಹಾಕಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಚಳವಳಿಯಲ್ಲಿರುವ ನಮ್ಮೆಲ್ಲರ ಜವಾಬ್ದಾರಿ ದೊಡ್ಡದಿದೆ.