ಪುಸ್ತಕದ ಕಾಡಿಗೆ ಬಂದಂತೆಯೇ ಭಾಸ: ದೇವನೂರು ಮಹದೇವ

 [ಪಾಂಡವಪುರ ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿರುವ ಲಿಮ್ಕಾ ದಾಖಲೆಯ ಪುಸ್ತಕ ಪ್ರೇಮಿ ಅಂಕೇಗೌಡರ ಪುಸ್ತಕ ಮನೆಗೆ ಹಿರಿಯ ಸಾಹಿತಿ ದೇವನೂರ ಮಹದೇವ ಹಾಗೂ ಪತ್ನಿ, ಮೈಸೂರು ಯುವರಾಜ ಕಾಲೇಜು ನಿವೃತ್ತ ಪ್ರಾಂಶುಪಾಲೆ ಪ್ರೊ.ಸುಮಿತ್ರಾಬಾಯಿ ಅವರು ಭೇಟಿ ನೀಡಿ ಪುಸ್ತಕದ ರಾಶಿಗಳನ್ನು ವೀಕ್ಷಣೆ ಮಾಡಿದ 24,9.2021 ರ ಉದಯವಾಣಿ ಪತ್ರಿಕಾ ವರದಿ ನಮ್ಮ ಮರು ಓದಿಗಾಗಿ]
   
ಪಾಂಡವಪುರ ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿರುವ ಲಿಮ್ಕಾ ದಾಖಲೆಯ ಪುಸ್ತಕ ಪ್ರೇಮಿ ಅಂಕೇಗೌಡರ ಪುಸ್ತಕ ಮನೆಗೆ ಹಿರಿಯ ಸಾಹಿತಿ ದೇವನೂರು ಮಹದೇವ ಹಾಗೂ ಪತ್ನಿ, ಮೈಸೂರು ಯುವರಾಜ ಕಾಲೇಜು ನಿವೃತ್ತ ಪ್ರಾಂಶುಪಾಲೆ ಸುಮಿತ್ರಾಬಾಯಿ ಭೇಟಿ ನೀಡಿ ಪುಸ್ತಕದ ರಾಶಿಗಳನ್ನು ವೀಕ್ಷಣೆ ಮಾಡಿದರು.
ಪುಸ್ತಕ ಮನೆಯಲ್ಲಿನ 12 ಲಕ್ಷಕ್ಕೂ ಹೆಚ್ಚಿರುವ ರಾಶಿ ರಾಶಿ ಪುಸ್ತಕಗಳನ್ನು ವೀಕ್ಷಣೆ ಮಾಡಿ ಸಾಹಿತ್ಯ ದಂಪತಿಗಳಿಬ್ಬರು ಮೂಕ ವಿಸ್ಮಿತರಾದರು.
ಈ ವೇಳೆ ಸಾಹಿತಿ ದೇವನೂರು ಮಹಾದೇವ ಮಾತನಾಡಿ, ಅಂಕೇಗೌಡರ ಪುಸ್ತಕ ಮನೆಗೆ ಭೇಟಿ ನೀಡಿರುವುದು ನಮಗೆ ಪುಸ್ತಕದ ಕಾಡಿಗೆ ಬಂದಂತೆಯೇ ಭಾಸವಾಗುತ್ತಿದೆ. ಇಲ್ಲಿನ ರಾಶಿ ರಾಶಿ ಪುಸ್ತಕಗಳನ್ನು ಕೆಡದಂತೆ ಜೋಪಾನವಾಗಿ ಸಂರಕ್ಷಣೆ ಮಾಡುವ ಅಗತ್ಯತೆ ಇದೆ. ಪ್ರತಿಯೊಬ್ಬರೂ ಈ ಪುಸ್ತಕ ಮನೆ ಸಂರಕ್ಷಣೆಗೆ ಏನಾದರು ಮಾಡಬೇಕು ಎಂದರು.
ಪುಸ್ತಕಗಳ ವೀಕ್ಷಣೆ ಮುಗಿಸಿ ದೇವನೂರು ಮಹಾದೇವ ಅವರು ಮೈಸೂರಿಗೆ ತೆರಳಲು ಕಾರು ಹತ್ತುವ ವೇಳೆ, ಪುಸ್ತಕ ಪ್ರೇಮಿ ಅಂಕೇಗೌಡರು ಈ ಪುಸ್ತಕ ಮನೆಯ ಇಂದಿನ ಕಟ್ಟಡವನ್ನು ದೆವ್ವ ಇದೆ ಅಂತಾ ಯಾರೂ ಕೂಡ ಖರೀದಿ ಮಾಡಿರಲಿಲ್ಲ ಎಂದರು. ಅದಕ್ಕೆ ಕೂಡಲೇ ಪ್ರತಿಕ್ರಿಯಿಸಿದ ದೇವನೂರು ಮಹಾದೇವ ಅವರು, ಈ ಪುಸ್ತಕಗಳೇ ದೆವ್ವಗಳಿದ್ದಂತೆ, ಅವುಗಳನ್ನು ಹಿಡಿದುಕೊಂಡರೆ ಬಿಡೋದಿಲ್ಲ ಎಂದು ಹಾಸ್ಯಭರಿತವಾಗಿ ಹೇಳಿದರು.
ಇದೇ ವೇಳೆ ತಮ್ಮ ಕೃತಿ “ಕುಸುಮಬಾಲೆ’ಯ ಕನ್ನಡ ಮತ್ತು ಇಂಗ್ಲಿಷ್‌ ಆವೃತ್ತಿಯ ಎರಡು ಪುಸ್ತಕಗಳನ್ನು ಅಂಕೇಗೌಡರ ಪುಸ್ತಕ ಮನೆಗೆ ದೇವನೂರು ಮಹದೇವ ನೀಡಿದರು.
ಮೈಸೂರು ಯುವರಾಜ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ, ದೇವನೂರು ಮಹಾದೇವರ ಪತ್ನಿ ಪ್ರೊ.ಸುಮಿತ್ರಾಬಾಯಿ ಮಾತನಾಡಿ, ಇದೊಂದು ಚಿಕ್ಕ ವಿಶ್ವವಿದ್ಯಾಲಯದ ಗ್ರಂಥಾಲಯದ ರೀತಿ ಇದೆ. ಆದರೆ ಈ ಗ್ರಂಥಾಲಯವನ್ನು ಮುಂದಿನ ಪೀಳಿಗೆಯ ಅನುಕೂಲಕ್ಕಾಗಿ ವ್ಯವಸ್ಥಿತ ರೀತಿಯಲ್ಲಿ ಪುಸ್ತಕ ಸಂರಕ್ಷಣೆ ಮಾಡಬೇಕಿದೆ ಎಂದರು.
ಅಂಕೇಗೌಡರು ಏಕ ವ್ಯಕ್ತಿ ಇಷ್ಟೊಂದು ಪುಸ್ತಕಗಳ ಸಂಗ್ರಹಣೆ ಮಾಡಿರೋದು ದೊಡ್ಡ ಸಾಧನೆಯೇ ಸರಿ. ಜತೆಗೆ ಗಂಡ-ಹೆಂಡತಿಯರ ಸಹಯೋಗದ ಬೆಳವಣಿಗೆ ಇದಾಗಿದೆ. ಇಲ್ಲಿ ಅ ಆ ಇ ಈ ಕಲಿಯುವ 4 ವರ್ಷದ ಮಕ್ಕಳಿಂದ ಹಿಡಿದು 75ರಿಂದ 90ವರ್ಷದವರೆಗಿನವರು ಓದುವಂತಹ ಎಲ್ಲ ಅಪರೂಪದ ಪುಸ್ತಕಗಳು ಸಿಗುತ್ತವೆ. ನಮ್ಮ ಮನಸ್ಸಿನ ಭಾವನೆಗೆ ತಕ್ಕಂತಹ ಪುಸ್ತಕಗಳಿವೆ.
ಈ ವೇಳೆ ಜಾನಪದ ವಿದ್ವಾಂಸ ಕ್ಯಾತನಹಳ್ಳಿ ರಾಮಣ್ಣ, ರುಕ್ಮಿಣಿ ರಾಮಣ್ಣ, ಮಕ್ಕಳ ಸಾಹಿತ್ಯ ಪರಿಷತ್‌ ಅಧ್ಯಕ್ಷ ಧನ್ಯಕುಮಾರ್‌, ಡಾಮಡಹಳ್ಳಿ ಸ್ವಾಮಿಗೌಡ, ಜಯಲಕ್ಷ್ಮಿ ಅಂಕೇಗೌಡ ಇತರರಿದ್ದರು.