ಪುರಾಣ ಮತ್ತು ಆಧುನಿಕ ಕನ್ನಡ ಸಾಹಿತ್ಯ – ಲಕ್ಷ್ಮೀಶ ತೋಳ್ಪಾಡಿ
[ಸಂವಾದ (ಸಾಹಿತ್ಯಿಕ, ಸಾಂಸ್ಕೃತಿಕ ಸಂಕಲನ) ಸಂಚಿಕೆ : 22, ಜುಲೈ-ಆಗಸ್ಟ್ 1991, [ಸಂಪಾದಕರು : ಡಿ.ಎಸ್.ನಾಗಭೂಷಣ, ರಾಘವೇಂದ್ರ ಪಾಟೀಲ, ಸ.ಉಷಾ.] ರ ಸಂಚಿಕೆಯಲ್ಲಿ ಲಕ್ಷ್ಮೀಶ ತೋಲ್ಪಾಡಿ ಅವರು ‘ಪುರಾಣ ಮತ್ತು ಆಧುನಿಕ ಕನ್ನಡ ಸಾಹಿತ್ಯ’, ಎಂಬ ವಿಷಯವನ್ನು ಕುರಿತು ಬರೆದ ಟಿಪ್ಪಣಿ. ದೇವನೂರರ ಕುಸುಮಬಾಲೆ ಕುರಿತು ಪ್ರಸ್ತಾಪವಿದೆ.]
‘ಪುರಾಣ’ ಎಂದರೆ ಹಳೆಯದು, ಪ್ರಾಚೀನ ಎನ್ನುವುದು ಶಬ್ದಶಃ ಅರ್ಥ. ಪುರಾಣ ಎಂಬ ವಾಙ್ಮಯ ಪ್ರಕಾರ ಕೂಡ ಇದೆ. ಅಲ್ಲೂ ‘ಹಳೆಯದು’ ಎನ್ನುವ ಅರ್ಥದ ಭಾರ ಇದೆ.‘ಮಹಾಭಾರತ’ವೇನೋ ಇತಿಹಾಸವೆಂದೇ ಪ್ರಖ್ಯಾತ. ಜಯೋನಾಮ ಇತಿಹಾಸೋಯಂ.. ಆದರೆ ಮಹಾ ಭಾರತದಲ್ಲೂ ಪೌರಾಣಿಕ ಅಂಶಗಳು ಬೇಕಾದಷ್ಟಿವೆ. ಹಾಗೆಯೇ ಭಾಗವತಾದಿ ಪುರಾಣಗಳಲ್ಲಿ ಇತಿಹಾಸದ ಅಂಶಗಳೂ ಸೇರಿದ್ದಾವೆ. ಮತ್ತು ಪುರಾಣೇತಿಹಾಸಗಳ ರಚನೆ ವ್ಯಾಸರೇ, ಓರ್ವ ವ್ಯಾಸರೇ ಮಾಡಿದ್ದು ಎಂದು ಪರಂಪರೆ ಹೇಳುತ್ತದೆ. ಇದು ತಪ್ಪಿರಬಹುದು ಅಡ್ಡಿ ಇಲ್ಲ. ಅರ್ಥವೇನೆಂದರೆ ಇವೆಲ್ಲ ಒಂದೇ ಸೃಜನಶೀಲ ಪರಂಪರೆ ಎಂಬುದು.
ಇದೇ ಚಿಂತನೆಯ ಇನ್ನೊಂದು ಮಗ್ಗಲು, ಪುರಾಣ ಮತ್ತು ಆಧುನಿಕ ಎಂದು ಕಾಲಖಂಡಗಳ ಸ್ಪಷ್ಟ ವ್ಯತ್ಯಾಸದಿಂದ ನೋಡುವುದು ಭಾರತೀಯ ದೃಷ್ಟಿಗೆ ತಾತ್ವಿಕವಾಗಿ ಒಪ್ಪಿತವಾದದ್ದಲ್ಲ ಎನ್ನುವುದು. ಐತಿಹಾಸಿಕವಾಗಿಯೇ ಪ್ರಾಚೀನತಮ ರಚನೆಗಳಾದ ವೇದಗಳನ್ನು ‘ಪುರಾಣ’ ‘ಹಳೆಯದು’ ಎಂದು ಯಾರೂ ಕರೆದದ್ದಿಲ್ಲ. ಬದಲಾಗಿ “ಇತಿಹಾಸ ಪುರಾಣಭ್ಯಾಂ ವೇದಂ ಸಮುಪಬೃಂಹಯೇತ್” – ಇತಿಹಾಸ ಮತ್ತು ಪುರಾಣಗಳಲ್ಲಿ ವೇದಗಳನ್ನೇ ವಿಸ್ತರಿಸಿ ಎಂದೇ ಸೂತ್ರ. ಉಪಬೃಂಹಣ ಎಂದರೆ ಸೂಕ್ಷ್ಮವಾಗಿ ಬೀಜರೂಪವಾಗಿ ಇದ್ದುವನ್ನು ವಿಸ್ತಾರವಾಗಿ ಬೆಳೆಸುವುದು ಎಂದರ್ಥ. ಇತಿಹಾಸದಲ್ಲಿ ವೇದಾರ್ಥ ವಿಸ್ತಾರವೇ ಗುರಿಯಾದರೆ, ವೇದಗಳ ಗತಿ ಹೇಗೂ ಆಗಲಿ, ಆ ಇತಿಹಾಸದ ಗತಿ ಏನು? ಎಂದರೆ ಒಬ್ಬ ಮನುಷ್ಯನ ಕಾಣ್ಕೆ ಮನುಕುಲದ ಕಾಣ್ಕೆಯಾಗಬಲ್ಲದು ಎನ್ನುವುದೇ ಇಂಗಿತ. ಒಳನೋಟದಲ್ಲಿ ತಿಳಿವ ಸತ್ಯ ಮಾನವ ಸಮಾಜದ ಸತ್ಯವಾಗಿರುತ್ತದೆ. ಈ ನಿಲುವು ಜ್ಞಾನದ ಹರಿಗೆಡದ ಪರಂಪರೆಯನ್ನು ಸೃಜಿಸುವುದರ ಜತೆಗೆ; ಸ್ವಲ್ಪ ಜಡಗೊಂಡಾಗ, ಜ್ಞಾನದ ವ್ಯವಸ್ಥಿತ ಕೇಂದ್ರೀಕರಣವೂ ಆಗಿಬಿಡಬಲ್ಲುದು. ಆಗಿದೆ. ಇರಲಿ.
ಅಚ್ಚರಿ ಎಂದರೆ ಸಾಹಿತ್ಯಕ್ಕು ಇದೇ ಮಾತು ಅನ್ವಯಿಸುತ್ತದಲ್ಲವೆ? ಕವಿಯ ಕಾಣ್ಕೆ ಓರ್ವ ವ್ಯಕ್ತಿಯ ಕಾಣ್ಕೆ ಅಲ್ಲ. ಅದು ಒಂದು ಜನಾಂಗದ ಕಾಣ್ಕೆ ಕೂಡ.
ಮಹಾಭಾರತವನ್ನು ‘ಪಂಚಮೋವೇದಃ’ ಎಂದು ಕರೆದರು. ಉಳಿದಂತೆ ಯಾವ ಕೃತಿಗೂ ಈ ಪ್ರಶಸ್ತಿ ಇಲ್ಲ. ರಾಮಾಯಣಕ್ಕೂ ಕೂಡಾ ಇಲ್ಲ. ಮಹಾಭಾರತ ಇತಿಹಾಸವೆಂದು, ಅಥವ ಲೌಕಿಕದ ಜಟಿಲ, ಸಂಕೀರ್ಣ ಚಿತ್ರವೆಂದು ಎಲ್ಲರೂ ಬಲ್ಲರು. ಇಂಥ ಒಂದು ಚಿತ್ರಣಕ್ಕೆ ಐದನೆಯ ವೇದ ಎಂದು ಮಹತಿ. ಇದು ಅಚ್ಚರಿಯಲ್ಲವೆ?
ಹೌದು. ಲೌಕಿಕ ಮತ್ತು ಆಧ್ಯಾತ್ಮಿಕ ಎಂದು ನೀವು ಖಂಡ ವಿಭಾಗ ಮಾಡಿಯೆ ನೋಡುವವರಾದರೆ ಅಚ್ಚರಿಯೇ. ಆದರೆ ಆಧ್ಯಾತ್ಮಿಕ ಎನ್ನುವುದು ಮನುಷ್ಯನ ಲೌಕಿಕ ಅಸ್ತಿತ್ವದ್ದೇ ಒಂದು ಆಯಾಮ ಎನ್ನುವಿರಾದರೆ ಏಕೆ ಅಚ್ಚರಿ ?
ವಿಭಜಿಸುವುದೇ ವಿಷಾದನೀಯವಾದ ಅಚ್ಚರಿ. ಲೌಕಿಕ ಮತ್ತು ಆಧ್ಯಾತ್ಮ ಎಂದು ಬೇರ್ಪಡಿಸಿ ನೋಡುವ ನೋಟಕ್ಕೆ ಭಾರತೀಯತೆ ತನ್ನನ್ನು ತಾನು ತೆರೆದುಕೊಳ್ಳಲಾರದು. ಅದರಿಂದಲೇ ಆಚಾರ್ಯತ್ರಯರಲ್ಲಿ ಓರ್ವರಾದ ಆನಂದತೀರ್ಥರು ‘ಭಾರತ’ ಎಂಬ ಇತಿಹಾಸವನ್ನು ಇದು ಇಡಿಯಾಗಿ ಆಧ್ಯಾತ್ಮನಿಷ್ಠವಾದುದು ಎಂದು ಕರೆದರು. (ಏವಂ ಆಧ್ಯಾತ್ಮನಿಷ್ಠಂಹಿ ಭಾರತಂ ಸರ್ವಮುಚ್ಯತೆ) ಇತಿಹಾಸ ಪುರಾಣಗಳಲ್ಲಿ ವೇದವೇ ವಿಸ್ತ್ರತವಾಗಿ ಹಬ್ಬಿರುವುದು ಎಂದರೆ ಅದು ಇದೇ ನೋಟವೇ.
ಹೇಗೆ ‘ವರ್ತಮಾನ’ ಎನ್ನುವುದು ಭೂತ ಭವಿಷ್ಯತ್ಗಳು ಬೆಸೆದ ಒಂದು ಕಾಲಖಂಡವಾಗಿ ನಮ್ಮ ಅನುಭವಕ್ಕೆ ಬರುವುದೋ ಹಾಗೇ ನಮ್ಮ ಅನುಭವಕ್ಕೆ ಬರುತ್ತಿರುವ, ಆಧುನಿಕತೆಯಲ್ಲಿ ‘ಪುರಾಣ’ ಉದ್ದಕ್ಕೆ ಮೈಚಾಚಿರುತ್ತದೆ.
ರಾಜಾ ರಾಮಮೋಹನರಾಯ್, ಸಂಪ್ರದಾಯ ಜಡಗೊಂಡ ಭಾರತೀಯನ ದೃಷ್ಟಿಕೋನದಲ್ಲಿ ತೀವ್ರ ಬದಲಾವಣೆ, ಜೀವನಪರ ಬದಲಾವಣೆ, ಕ್ರಾಂತಿಕಾರೀ ಬದಲಾವಣೆಯಾಗಬೇಕೆಂದು ಬಯಸಿ ಹೋಗುತ್ತಿರುವಾಗ ‘ಉಪನಿಷತ್’ಗಳನ್ನು ಮಾರ್ಗದರ್ಶಕವಾಗಿ ಸೂಚಿಸಿದ್ದರು. ಸಮಾಜಸೇವಕ ಈಶ್ವರಚಂದ್ರ ವಿದ್ಯಾಸಾಗರ, ವಿಧವಾ ವಿವಾಹದ ತಮ್ಮ ಪ್ರಯತ್ನದಲ್ಲಿ ‘ಪರಾಶರಸ್ಮೃತಿ’ಯ ಸಹಾಯ ಪಡೆದಿದ್ದರು. ಜಾತಿಯನ್ನು ಲೆಕ್ಕಿಸದ ದಯಾನಂದ ಸರಸ್ವತಿ ವೇದ ಧರ್ಮದ ಉಜ್ಜೀವನವನ್ನು ಹೇಳುತ್ತಿದ್ದರು. ಆಧುನಿಕತೆಯ ಮೈಯಲ್ಲಿ ಪುರಾಣ ಹೊಳೆಯುತ್ತಿದೆಯಾದರೂ, ಇಲ್ಲಿ ಗೋಜಲು, ವಿರೋಧಾಭಾಸ ಕೂಡ ತಪ್ಪಿದ್ದಲ್ಲ. ಅತ್ಯಂತ ಆಧುನಿಕನಾದ ಗಾಂಧಿ ಈ ಗೋಜಲನ್ನು ತಪ್ಪಿಸಿಕೊಳ್ಳಲೋ ಎಂಬಂತೆ ‘ಅಂತರ್ವಾಣಿ’ಯ ಆಲಂಬನವನ್ನು ಹೇಳುತ್ತಿದ್ದರು. ಲೌಕಿಕ ಮತ್ತು ಆಧ್ಯಾತ್ಮ ಗಾಂಧಿಯಲ್ಲಿ ಮರಳಿ ತನ್ನ ಒಮ್ಮೈಯನ್ನು ಪಡೆಯಿತು. ಮತ್ತು ‘ಅಂತರ್ವಾಣಿ’ ಎಂಬ ಮಾತು ವೇದೋಪನಿಷತ್ಗಳಿಗೂ ಸಮುಚಿತವಾಗಿ ಅನ್ವಯವಾಗುವಂಥದೇ. (ಶೃತಿ ಎಂದರೆ ಕೇಳಿ ಬಂದದ್ದೇ) ‘ಒಳದನಿ’ ಎಂಬ ಈ ಮಾತನ್ನು ಹೆಚ್ಚು ಲೌಕಿಕಗೊಳಿಸುತ್ತ, ಇತಿಹಾಸವಾಗಿಯೂ ಪುರಾಣಗಳಲ್ಲಿ ಪುರಾಣವಾದ ಮಹಾಭಾರತ ಈ ಮಾತನ್ನು ಹೇಳುತ್ತದೆ:
“ವೇದಾಂಶ್ಚ ವೇದ್ಯಂಚ ವಿಧಿಂಚ ಕೃತ್ಸ್ನಂ
ಅಥೋ ನಿರುಕ್ತಂ ಪರಮಾರ್ಥತಾಂ ಚ
ಸರ್ವಂ ಶರೀರಾತ್ಮನಿ ಯಃ ಪ್ರವೇದ
ತಸ್ಸ ಸ್ಮೆ ದೇವಾಃ ಸ್ಪೃಹಯಾತಿ ನಿತ್ಯಂ” (ಶಾಂತಿಪರ್ವ)
“ವೇದಗಳು ವೇದಗಳಿಂದ ತಿಳಿಯಲ್ಪಡಬೇಕಾದುದು ಅದಕ್ಕಾಗಿ ಇರುವ ಆಚರಣೆಗಳು, ನಿರುಕ್ತ, ಆದರಿಂದ ಹೊಳೆಯುವ ನಿಜಾರ್ಥ – ಈ ಎಲ್ಲವನ್ನು ಯಾರು ತನ್ನ ದೇಹದಲಿ (ಶರೀರ ಎಂಬ ಆತ್ಮದಲ್ಲಿ), ಜೈವಿಕ ಅನುಭವದಲ್ಲಿ ತಿಳಿಯುತ್ತಾನೆ, ಅಂಥವನನ್ನು ದೇವತೆಗಳೂ ಬಯಸುತ್ತಾರೆ. ಇದಕ್ಕಿಂತ ಕ್ರಾಂತಿಕಾರಕವಾದುದು ಇನ್ನೇನಿದೆ?
ಜ್ಞಾನದ ಎಲ್ಲ ಬಗೆಯ ಕೇಂದ್ರೀಕರಣವನ್ನೂ, ವ್ಯವಸ್ಥೆಯನ್ನೂ ಧಿಕ್ಕರಿಸಿ. ವಿಕೇಂದ್ರೀಕರಣದ ಕಟ್ಟಕಡೆಯ ಹಂತದಲ್ಲಿ ಹೊಳೆಯುವ ಜ್ಞಾನವೇ ನಿಜವಾದುದೆಂಬ ಉದ್ಘೋಷ ಇದು. ಲಕ್ಷಶ್ಲೋಕಗಳ ಮಹಾಭಾರತದ ಮಾತಿದು. ಪುರಾಣ ಎಲ್ಲಿ ಹೋಯಿತು ! ಆಧುನಿಕತೆ ಎಲ್ಲಿ ಬಂತು! ಏನು ಕತೆ! ಇನ್ನೊಂದು ಅಚ್ಚರಿ ಎಂದರೆ ಬುದ್ಧದೇವನ ಮಾತುಗಳಲ್ಲಿ ಇದಕ್ಕೆ ಸಂವಾದಿಯಾದ ಮಾತುಗಳಿವೆ. “ನ ತಾವತಾ ಧರ್ಮ ಧರೋ ಯಾವತಾ ಬಹುಭಾಸತಿ. ಯೋಚ ಅಪ್ಪಂ ಪಿ ಸುತ್ವಾನ, ಧರ್ಮಂ ಕಾಯೇನ ಪಸ್ಪತಿ” (ಧಮ್ಮಪದ)-ಧರ್ಮದ ಬಗ್ಗೆ ಬಹು ಮಾತಾಡುವವನು ಧರ್ಮವನ್ನು ತಿಳಿದವನಾಗಿರಬೇಕಿಲ್ಲ. ಅದರ ಬಗ್ಗೆ (ಧರ್ಮದ ಬಗ್ಗೆ) ಕೇಳಿಯೇ ಇರದಿದ್ದರೂ, ಯಾರು ಧರ್ಮವನ್ನು ತನ್ನ ದೇಹದಲ್ಲೇ (ಕಾಯೇನ) ಕಾಣುತ್ತಾನೆ, ಅವನೇ ನಿಜವಾಗಿ ತಿಳಿದವನು.
ವ್ಯಾಸ; ಬುದ್ಧರ ಅನುಭವದ ಹಿನ್ನೆಲೆಯಲ್ಲಿ ಅಲ್ಲದೆ ಸ್ವಲ್ಪ ಎಚ್ಚರಗೊಟ್ಟು ಈ ಮಾತುಗಳನ್ನು ನೋಡಿದರೆ ಇದು ಇಂದ್ರಿಯ ಪ್ರಪಂಚದ ಕೊಂಡಾಟವಾಗಿ ಜಡ ಲೋಕಾಯುತವಾಗಬಹುದು. ಹೌದು, ಲೋಕಾಯುತವೂ ಜಡವಾಗಬಹುದು. ಇನ್ನೂ ಒಂದು ಅಚ್ಚರಿ ಎಂದರೆ ದೇಹದ ಮೂಲಕವೇ ಜ್ಞಾನದ ಪರಮಸೀಮೆಯನ್ನು ಮುಟ್ಟಬಹುದೆನ್ನುವ ಈ ಸಂಸ್ಕೃತಿಯಲ್ಲೆ ಅದೇ ದೇಹವನ್ನು ಕೇಂದ್ರವಾಗಿಟ್ಟುಕೊಂಡು ‘ಅಸ್ಪೃಶ್ಯತೆ’ ಹುಟ್ಟಿದ್ದು.
ಭಕ್ತಿಯನ್ನು ಕೊಂಡಾಡುವಾಗ ಭಾಗವತ ಪುರಾಣ ಅಸ್ಪೃಶ್ಯತೆಯನ್ನು ನಿರಾಕರಿಸುತ್ತದೆ ಎನ್ನುವುದು ನಿಜ. ಆದರೆ ಇಂಥಲ್ಲಿ ಆಧುನಿಕ ಪ್ರಜ್ಞೆಯೇ ಹೆಚ್ಚು ಆಧ್ಯಾತ್ಮ ನಿಷ್ಠವಾದದ್ದು. ಅಸ್ಪೃಶ್ಯತೆಯ ಕುರಿತಾದ ಸಾಮಾಜಿಕವಾದ ಕ್ರೋಧವೇ ನಿಜವಾಗಿ ಆಧ್ಯಾತ್ಮಿಕವಾದುದು. ಏಕೆಂದರೆ ಸದ್ಯದ ಅರಿವನ್ನು ಮೀರಿ ಅದು ಹೊಸ ಅರಿವನ್ನು ಹಂಬಲಿಸುತ್ತದೆ. ಮತ್ತು ದೇಹದ ಮೂಲಕವೇ ಪಡೆದ ಕಾಣ್ಕೆ.
ಪುರಾಣಗಳಲ್ಲಿ ಮತ್ತು ‘ಭಾರತ’ದಲ್ಲಿ ಸ್ಫುಟವಾಗುವ ಸೃಜನಶೀಲತೆಯ ಸ್ವರೂಪ ಹೇಗಿದೆ ಮತ್ತು ಅದು ಸಾಹಿತ್ಯದಲ್ಲಿ ವ್ಯಕ್ತವಾಗುವ ಸೃಜನಶೀಲತೆಗೆ ಹೇಗೆ ಸಂವಾದಿಯಾಗಿದೆ ಎನ್ನುವುದು ನೋಡಬೇಕಾದದ್ದು. ಭಾಗವತ ಪುರಾಣದಲ್ಲಿ ಧ್ರುವನ ಕತೆ ಬರುತ್ತದಲ್ಲ. ಬಾಲಕ ಧ್ರುವ ತಪಸ್ಸು ಮಾಡಿದ. ಅದು ಫಲಿಸಿತು. ಆರಾಧ್ಯದೈವ ಕಣ್ಣಿದುರು ನಿಂತಾಗ ಧ್ರುವನ ಕರಣಗಳೆಲ್ಲ ನಿಶ್ಚಲವಾಗಿ ಆತ ಏನು ಮಾಡುವುದೆಂದೇ ತಿಳಿಯದೆ ನಿಂತ. ಆಗ ವಿಷ್ಣು ತನ್ನ ಶಂಖವನ್ನು ಧ್ರುವನ ಕಪೋಲಕ್ಕೆ ಮುಟ್ಟಿಸಿದ. ಧ್ರುವನ ಕಂಠದಿಂದ ಮಾತು ಹೊಮ್ಮಿತು. ಅದು ಹೀಗಿದೆ.
“ಯೋಂತಃ ಪ್ರವಿಶ್ಯ ಮಮ ವಾಚಮಿಮಾಂ ಪ್ರಸುಪ್ತಾಂ
ಸಂಜೀವಯತಿ ಅಖಿಲ ಶಕ್ತಿಧರಃ ಸ್ವಧಾಮ್ನಾ
ಅನ್ಯಾಂಶ್ಚ ಹಸ್ತಚರಣ ಶ್ರವಣ ತ್ವಗಾದೀನ್
ಪ್ರಾಣಾನ್ ನಮೋ ಭಗವತೇ ಪುರುಷಾಯ ತುಭ್ಯಂ”
“ಯಾರು ನನ್ನೊಳ ಹೊಕ್ಕು ಮಲಗಿದೀ ಮಾತನ್ನು
ಉಸಿರಾಡುವಂತೆಸಗಿ ಮಹಿಮೆಯಿಂದ,
ನಡೆಯುವುದು; ಕೇಳುವುದು; ಮುಟ್ಟವುದು – ಯಾರ ಕೃಪೆ
ಉಸಿರ ಉಸುರಾಗಿಸಿದ ಅಧಿದೈವ, ಓ, ನಿನಗ ನಮನ”
ಮಾತು ಮೂಕ ಮೂಢವಾಗಿತ್ತು. ಅದೀಗ ಸಪ್ರಾಣಿಸಲ್ಪಟ್ಟು ಸೃಜನಶೀಲವಾಗಿದೆ. ಮಾತು ಮಾತ್ರವಲ್ಲ ಎಲ್ಲ ಇಂದ್ರಿಯ ವ್ಯಾಪಾರಗಳೂ, ಬಯಲಗಾಳಿ ಜೀವದ ಉಸಿರಾದದ್ದು ಕೂಡ ದೈವದ ಕರುಣೆ ಎಂದ. ಇಲ್ಲಿ ಒಂದು ಸೂಕ್ಷ್ಮ ಇದೆ. ಮಾತು ಸೃಜನಶೀಲವಾಯಿತು ಎಂದ. ಹಾಗೆ ಸೃಜನಶೀಲವಾದ ಈ ಮಾತು ಏನನ್ನು ಹೇಳುತ್ತದೆ ಎಂದರೆ ತನ್ನೊಳಗೂ ಇರುವ ಪ್ರೇರಕ ತತ್ವವೊಂದು ಹೀಗೆ ತನ್ನನ್ನು ಸೃಜನಶೀಲನನ್ನಾಗಿ ಮಾಡುತ್ತಿದೆ ಎಂದು.
ತನ್ನೊಳಗಿನ ಪ್ರೇರಣೆಯನ್ನು ತಿಳಿಯುವುದೇ ಸೃಜನಶೀಲತೆ. ಇದು ಏಕಕಾಲದಲ್ಲಿ ಅಂತರ್ಮುಖವೂ ಹೌದು! ಬಹಿರ್ಮುಖವೂ ಹೌದು. ತನ್ನ ಪರಿಸರ, ಸಂಸ್ಕೃತಿ. ಸಮಾಜಗಳನ್ನು ತಿಳಿಯುವ ಪ್ರತಿಕ್ರಿಯೆಯಲ್ಲಿ ಈ ಸೃಜನಶೀಲ ಸಂಬಂಧ ಎರಡು ಮುಖಗಳಲ್ಲಿರಬಹುದು. ತಾದಾತ್ಮ್ಯದ ಮುಖ ಮತ್ತು ವಿಮರ್ಶಾತ್ಮಕ ಮುಖ. ಎರಡೂ ಜತೆಗೂಡಿಕೊಂಡೂ ಇರಬಹುದು. ಇರುತ್ತವೆ.
ಕನ್ನಡದ ಮಹಾಪುರಾಣ ಎಂದು ನಾನು ತಿಳಿದಿರುವ “ಮಲೆಗಳಲ್ಲಿ ಮದುಮಗಳು” ಕೃತಿಯಲ್ಲಿ ಕಾಣುತ್ತಿರುವ ತಾದಾತ್ಮ್ಯ ಸಂಬಂಧ.“ರಾಮಾಯಣ ದರ್ಶನಂ” ನೇರವಾಗಿ ರಾಮಾಯಣವನ್ನೇ ಆಧರಿಸಿದ್ದಾದರೂ, ಆಧುನಿಕ ದೃಷ್ಟಿಕೋನ ಉಳ್ಳದ್ದಾದರೂ ನಿಜಕ್ಕೂ ಆಧುನಿಕವಾದದ್ದು, ಅಥವಾ ಆಧುನಿಕ – ಪುರಾಣ ಎಂಬ ಭೇದವನ್ನೆ ಆಳಿಸಿಬಿಡುವಷ್ಟು ಸಮೃದ್ಧವಾದದ್ದು “ಮಲೆಗಳಲ್ಲಿ ಮದುಮಗಳೇ”.
ತನ್ನೊಳಗಿನ ಪ್ರೇರಣೆಯನ್ನು ಬಗೆಯುವುದೇ ಸೃಜನಶೀಲತೆ ಎಂಬ ಮಾತು ಎಂಥ ವಿಸ್ತಾರಕ್ಕೂ ಹಬ್ಬಬಹುದು. ಇದಕ್ಕೆ ವ್ಯಾಸರೇ ಸಾಕ್ಷಿ.‘ಭಾರತ’ದ ವಸ್ತು ‘ಕಾಲ’. ಒಂದು ಯುಗವನ್ನೇ ಪ್ರೇರಿಸಬಲ್ಲ, ಪ್ರೇರಿಸುತ್ತಿರುವ ‘ಕಾಲ’. ಧರ್ಮರಾಯನಿಗೆ ರಾಜಧರ್ಮವನ್ನು ಉಪದೇಶ ಮಾಡುತ್ತ ಭೀಷ್ಮ ಒಂದು ಕುತೂಹಲದ ಸಂಗತಿ ಹೇಳುತ್ತಾನೆ. “ನ ರಾಜ್ಯಂ ನ ಚ ರಾಜಾಸೀತ್,ನ ದಂಡ್ಯೋನ ಚ ದಾಂಡಿಕಃ | ಧರ್ಮೇಣೈವ ಪ್ರಜಾಃ ಸರ್ವಾಂ ರಕ್ಷಂತಿಸ್ಮ ಪರಸ್ಪರಂ” || ಹಿಂದೇ ಒಂದು ಕಾಲ ಇತ್ತು. ‘ರಾಜ್ಯ’ ಎನ್ನುವುದೇ ಇರಲಿಲ್ಲ. ಆದ್ದರಿಂದ ರಾಜ ಎಂಬುವನೂ ಇರಲಿಲ್ಲ. ದಂಡಿಸುವವನಾಗಲೀ, ದಂಡನೆಗೆ ಒಳಗಾಗುವವನಾಗಲೀ ಇರಲಿಲ್ಲ. ಧರ್ಮದಿಂದಲೇ ಜನ ಪರಸ್ಪರ ರಕ್ಷಿಸಿಕೊಳ್ಳುತ್ತಿದ್ದರು. ಇದು ಒಂದು ಘಟ್ಟ. ತಾನು ಕಾಲ ಸ್ವರೂಪಿಯೇ ಎಂದು ಹೇಳಿಕೊಳ್ಳುವ ಕೃಷ್ಣ ; ಅರ್ಜುನನಿಗೆ ಸಮಾಧಾನ ಹೇಳುತ್ತಾ “ಪರಿತ್ರಾಣಾಯ ಸಾಧೂನಾಂ ವಿನಾಶಯ ಚ ದುಷ್ಕøತಾಂ, ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ” ಎನ್ನುತ್ತಾನೆ. ‘ಸಾಧುಗಳನ್ನು ರಕ್ಷಿಸಲೆಂದು ಮತ್ತು ದುಷ್ಟರನ್ನು ಶಿಕ್ಷಿಸಲೆಂದು’ ಇದು ಸ್ಪಷ್ಟವಾಗಿ ರಾಜಕೀಯ ಪರಿಭಾಷೆ ಇದು ಒಂದು ಘಟ್ಟ. ಹೀಗೆ ಹೇಳಿದ ಕೃಷ್ಣ ಏನನ್ನು ಸಾಧಿಸಿದರೂ, ಕೊನೆಗೆ ತನ್ನ ಕುಲದ ಜತೆ ತಾನೇ ನಾಶವಾಗಿ (ತಾನು ಯಾದವನೇ ಆದುದರಿಂದ) ಕಾಲದ ವಿನಾಶಕವಾದ ಪ್ರೇರಣೆ ಎದುರಿಲ್ಲದ್ದೆಂದು ಸೂಚಿಸಿದ. ಇದು ಒಂದು ಘಟ್ಟ. ಹಿಂಸೆಯ ಇಂಥ ಪ್ರೇರಣೆಗಳನ್ನು ಕೊಡುತ್ತಿರುವ. ಒಳಗಿಟ್ಟುಕೊಂಡಿರುವ ಕಾಲದ ಮುಂದೆ ಯಾವುದು ಸೃಜನಶೀಲತೆ ? ನಿರ್ಮಮವಾಗಿ ಇದಕ್ಕೆ ಸಾಕ್ಷಿಯಾಗಿರುವುದು – ಎನ್ನುವಂತಿದೆ ವ್ಯಾಸ. ನಿರ್ಮಮವಾಗಿ ಆ ಕಾಲವನ್ನು. ಆ ಇತಿಹಾಸವನ್ನು ದಾಖಲು ಮಾಡಿದ್ದರಲ್ಲಿಯೇ ಈ ಉತ್ತರ ಇದೆ.
ದಲಿತ ಲೇಖಕನೊಬ್ಬ ನಿರ್ಮಮನಾಗಿ ಬರೆಯುವುದು ಸಾಧ್ಯವೆ ? (ಕಾಲದ ಮುಂದೆ ಎಲ್ಲರೂ ದಲಿತರೇ ಎಂದು ವ್ಯಾಸ ಸೂಚಿಸುತ್ತಿದ್ದಾನೋ) ನಿಶ್ಚಿತವಾಗಿ ದಲಿತನ ಸ್ಫೂರ್ತಿ ಪ್ರಪಂಚ, ಪ್ರೇರಣಾ ಪ್ರಪಂಚ ಅಕ್ಷರ ಪ್ರಪಂಚವಲ್ಲ. ಅದರಿಂದ, ಅಕ್ಷರ ಪ್ರಪಂಚದ ಹಂಗಿಲ್ಲದೆ, ತನ್ನ ಪ್ರೇರಣೆಗೆ ನಿಷ್ಠನಾಗುವುದೇ ಎಲ್ಲವನ್ನು ಉತ್ತರಿಸುವ ದಾರಿ. ವೇದ ವೇದಾಂತವನ್ನು ತನ್ನ ಧಮನಿಯ ಸ್ಪಂದನದಲ್ಲಿ ತಿಳಿದಂಥ ಅನುಭವ ಅದು. ಇಂಥ ಅನುಭವ; ಪ್ರದರ್ಶನವಾಗಿರುವುದಿಲ್ಲ. ಅಭಿವ್ಯಕ್ತಿ [Expression) ಆಗಿರುತ್ತದೆ. ಮತ್ತು Expression ಆದದ್ದು, ತನ್ನ ಸಹಜತೆಯಿಂದಾಗಿಯೇ ತಾನು ಮಾಡಿದ್ದಲ್ಲ, ತನ್ನ ಮಾಧ್ಯಮದಲ್ಲಿ ಮೂಡಿಬಂತು ಎಂಬಂತೆ ಇರುತ್ತದೆ ನನ್ನ ಸೀಮಿತ ಓದಿನಲ್ಲಿ ‘ಕುಸಮಬಾಲೆ’ ಮತ್ತು ‘ಬಕಾಲ’ ಈ ತೆರದ ಕೃತಿಗಳು ಎಂದು ಕಂಡಿದೆ.
ಕನ್ನಡದ ಇಬ್ಬರು ಮಹಾ ಕವಿಗಳನ್ನು ಒಂದು ವಿಶಿಷ್ಟ ಸಂಗತಿಗಾಗಿ ನೆನಪಿಸಿಕೊಂಡು ಈ ಮಾತುಗಳನ್ನು ಮುಗಿಸಬಹುದು. ಈ ಇಬ್ಬರೂ ಆಧುನಿಕರೇ; ತಮ್ಮ ತಮ್ಮ ಅರ್ಥದಲ್ಲಿ. ಆಗಿದ್ದೂ ಭಾರತನಿಷ್ಠರೇ. ಭಕ್ತನಾದ ಕುಮಾರವ್ಯಾಸನಿಗೆ ಎಲ್ಲವೂ ಕೃಷ್ಣನ ಲೀಲೆ. ಲೀಲೆ ಎಂದರೆ ಆಟ. ಮಹಾಭಾರತದ ಆಟ ಒಂದೇ. ಅದು ದ್ಯೂತ. ದುರಂತದ ಬೀಜ ಬೀಳುವುದೂ ಈ ದ್ಯೂತದಲ್ಲೆ. ಆದರೆ ಕುಮಾರವ್ಯಾಸ ಇದು ಭಗವಂತನ ಲೀಲೆ ಎಂದು ಸೂಚಿಸುವುದು ಹೀಗೆ. ದ್ರೌಪದಿ; ತನ್ನ ವಸ್ತ್ರಾಪಹಾರದ ಪ್ರಯತ್ನ ನಡೆದಾಗ ಕೊನೆಗೆ ಕೃಷ್ಣನನ್ನು ಕರೆದಳಲ್ಲ – ಆಗ ಕೃಷ್ಣ ದ್ವಾರಕೆಯಲ್ಲಿ ತನ್ನ ಮಡದಿಯರೊಂದಿಗೆ ಜೂಜನ್ನೇ ಆಡುತ್ತಿದ್ದನಂತೆ. ಅದು ದ್ವಾರಕೆಯಲ್ಲಿ ಆಡುತ್ತಿರುವ ಜೂಜು. ಇದು ಹಸ್ತಿನಾವತಿಯಲ್ಲಿ ಆಡುತ್ತಿರುವ ಇನ್ನೊಂದು ಮಹಾಜೂಜು. ಎರಡೂ ಕೃಷ್ಣನದೇ ಲೀಲೆ ಪ್ರೇರಣೆ. ಆದ್ದರಿಂದ ಪ್ರೇರಕನಿಗೆ ಶರಣಾಗುವುದೇ ದಾರಿ. ಪಂಪ ವೀರ. ಅವನಿಗೆ ದ್ಯೂತ ಬರಿಯ ಲೀಲೆಯಲ್ಲ. ಬರಿಯ ಕ್ರೀಡೆಯೂ ಅಲ್ಲ. ವ್ಯಕ್ತಿತ್ವವನ್ನೇ ರೂಪಿಸಬಲ್ಲ ಚಟುವಟಿಕೆ ಅದು. ಕರ್ಣನನ್ನು ಕೃಷ್ಣ ಪಾಂಡವರೆಡೆಗೆ ಬಾರೆಂದು ಕರೆದಾಗ ಪಂಪನ ಕರ್ಣ ಉದ್ದೇಶಪೂರ್ವಕವಾಗಿ ಒಂದು ದ್ಯೂತವನ್ನು ನೆನಪಿಸುತ್ತಾನೆ. “ನೆತ್ತಮನಾಡಿ ಭಾನುಮತಿ ಸೋಲ್ತೊಡೆ….” ಎಂಬ ಪ್ರಸಿದ್ಧ ಪದ್ಯ ಅದು. ದ್ರೌಪದಿಯನ್ನು ಪಣಕ್ಕಿಟ್ಟ ದ್ಯೂತ ಪ್ರಸಂಗವನ್ನು ವಿವರ ವಿವರವಾಗಿ ನೆನಪಿಸುವಂತೆ ಈ ಪದ್ಯ ಇದೆ. ಅಲ್ಲಿ ದ್ರೌಪದಿ ಸೋತಳು. ಇಲ್ಲಿ ಭಾನುಮತಿ. ಅಲ್ಲಿ ಸೆರಗು ಸೆಳೆದ. ಇಲ್ಲಿ ಲಂಬಣ ಹರಿಯಿತು. ಅಲ್ಲಿ ಕೃಷ್ಣ ದ್ರೌಪದಿಯನ್ನು ಕಾಪಾಡಿ ಶರಣಾಗತ ವತ್ಸಲನಾದರೆ, ಇಲ್ಲಿ ಸ್ವಯಂ ದುರ್ಯೋಧನ ಕರ್ಣನ ಪರವಾಗಿ ನಿಂತು ಸ್ನೇಹವನ್ನು ಮೆರೆದ. ಕರ್ಣ ದುರ್ಯೋಧನರ ಸ್ನೇಹದ ಇನ್ನೊಂದು ಮಜಲನ್ನು ತೋರಿಸಿ ಇದು ಯಾಕೆ ಶ್ರೇಷ್ಠವಲ್ಲ ಎಂದು ಕೇಳುತ್ತಾನೆ ಪಂಪ.
ವ್ಯಾಸನಿಗೆ ದ್ಯೂತ ಕಾಲಕ್ರೀಡೆಯಾಗಿದೆ. ಪಂಪನಿಗೆ ಅದು ರಾಜಕಾರಣದ ನಿಷ್ಟುರ ನಡೆಯಾಗಿರುವಂತೆ ಸುಹೃದ್ ದ್ಯೂತವೂ ಹೌದು. ಮತ್ತೆ ಕುಮಾರವ್ಯಾಸನಿಗೆ ಅದು ಲೀಲಾದ್ಯೂತ. ಪುರಾಣ, ಆಧುನಿಕವಾಗಿ ಹೊಸ ಹೊಳಪನ್ನು ಪಡೆದಂತೆ ತೋರಿ ಮರಳಿ ಪುರಾಣವಾಗಿದೆ.
ಪಂಪನಿಗೆ ವ್ಯಾಸರ ಆಲಂಬನ ಯಾಕೆ ಬೇಕೆಂದರೆ; ಮಹಾಭಾರತ ಮಹಾ ಯುದ್ಧವೊಂದರ ಕತೆ. ವೀರರ ಕತೆ. ರಾಜಕಾರಣವೇ ಕೇಂದ್ರವಾಗಿರುವ ಕತೆ. ಅವನ ಭೀಷ್ಮ “ವೀರ ಸಿದ್ಧಾಂತದ ಶಾಸನಂ ಬರೆದ ಪೊತ್ತಗೆ”ಯಂತೆ ಆಯ್ಕೆ ಶರಶಯ್ಯೆ.
ಭಕ್ತ ಕುಮಾರವ್ಯಾಸನಿಗೂ ಇದೇ ಕತೆ ಬೇಕೆಂದರೆ ಅಚ್ಚರಿಯಲ್ಲವೆ ? ಅವನ ಭಕ್ತ ವತ್ಸಲನಾದ ಕೃಷ್ಣ ತಾನು ಕೊಲ್ಲಿಸಬೇಕೆಂದಿರುವವರನ್ನು ಎಲ್ಲ ಮಾನವೀಯ ಚೌಕಟ್ಟನ್ನು ಮುರಿದಂತೆ ತೋರಿಸಿ ಕೊಲ್ಲಿಸುತ್ತಾನೆ. ಕೊನೆಗಾಲದಲ್ಲಿ ಕರ್ಣ ಬಸವಳಿದಿದ್ದಾನೆ. ರಥ ಕುಸಿದಿದೆ ಸಾರಥಿ ಹೊರಟು ಹೋಗಿದ್ದಾನೆ. ಆಯುಧಗಳಿಲ್ಲ. ಸಹಜವಾಗಿ (ಸಹಜನೇ ಆದ) ಅರ್ಜುನನಿಗೆ ಅನುಕಂಪ ಮಿಡಿದಿದೆ. ಆಗ ಕುಮಾರವ್ಯಾಸ ಹೇಳುವ ಮಾತು ಇದು.“ಬೀಸಿದನು ನಿಜಮಾಯೆಯನು, ಡೊಳ್ಳಾಸದಲಿ ಹರಹಿದನು ತಮವನು, ನರಕ ಕಲಿಮಾಡಿ” ಅರ್ಜುನನನ್ನು ‘ನರ’ ಎಂದು ಕರೆಯುವುದು ಇಲ್ಲಿ ಎಷ್ಟು ಸಾರ್ಥಕ. ನರನು ತನ್ನ ನರತ್ವವನ್ನು ದಾಟಿ ‘ಕಲಿ’ಯಾಗುವುದು, ವೀರನಾಗುವುದು, ತಮಸ್ಸಿನಿಂದಲಂತೆ, ದೇವರ ಮಾಯೆ ಎನ್ನೋಣ. ಆದರೆ ತಮಸ್ಸು ತಮಸ್ಸೇ. ಭಕ್ತನ ನೋಟಕ್ಕೆ ವೀರ ಹೇಗೆ ಕಾಣುತ್ತಿದ್ದಾನೆ ನೋಡಿ ಇದಕ್ಕಿಂತ ಆಧುನಿಕವಾದ್ದು ಯಾವುದು ?
[ಮಲ್ಲಾಡಿಹಳ್ಳಿಯಲ್ಲಿ ಜರುಗಿದ ಶ್ರೀ ರಾಘವೇಂದ್ರ ಸ್ವಾಮೀಜಿಯವರ ಶತಮಾನೋತ್ಸವ ಸಂದರ್ಭದ ಸಂಸ್ಕೃತ ಸಮ್ಮೇಳನದಲ್ಲಿ ‘ಪುರಾಣ ಮತ್ತು ಆಧುನಿಕ ಕನ್ನಡ ಸಾಹಿತ್ಯ’, ಎಂಬ ವಿಷಯವನ್ನು ಕುರಿತು ನಾನು ಮಾತನಾಡಬೇಕಾಗಿತ್ತು. ಅದಕ್ಕಾಗಿ ನಾನು ಮಾಡಿಕೊಂಡ ಟಿಪ್ಪಣಿಗಳು ಇವು. ಇವುಗಳನ್ನು ಬೆಸೆದು ಒಂದು ಲೇಖನವಾಗಿಸುವುದಕ್ಕಿಂತ, ಹೀಗೆ ಟಿಪ್ಪಣಿಗಳ ರೂಪದಲ್ಲೇ ಮಂಡಿಸಿದರೂ, ಒಳಗಿನ ಸಮನ್ವಯ ಸ್ಪಷ್ಟವಾಗುವುದರಿಂದ ಅನುಚಿತವಾಗಲಾರದು ಎಂದು ತಿಳಿದಿದ್ದೇನೆ.]