ಪಾತಾಳಗಂಗೆಯ ಕೂಲಂಕಲ್ಮಷ ಕಥನಗಳು-ನಾಗೇಶ್ ಹೆಗಡೆ
ಗೂಗಲ್ ಉಪಗ್ರಹ ನಕಾಶೆಯಲ್ಲಿ ಸೌದಿ ಅರೇಬಿಯಾದ ತೂಬರ್ಜಲ್ (Tubarjal) ಎಂಬ ಪಟ್ಟಣದ ಮೇಲೆ ಒಮ್ಮೆ ಸುತ್ತಾಡಿ. ಅದು ಜೋರ್ಡನ್ ದೇಶದ ಗಡಿಯ ಸಮೀಪ ಇದೆ. ಪಟ್ಟಣದ ಸುತ್ತೆಲ್ಲ ಹಪ್ಪಳಗಳನ್ನು ಒಣಗಿಸಿದಂತೆ ಅಥವಾ ಸಿಡಿ ತಟ್ಟೆಗಳನ್ನು ಹರಡಿದಂತೆ ನೂರಾರು ವೃತ್ತಾಕಾರದ ಬಿಂಬಗಳು ಕಾಣುತ್ತವೆ. ಹೆಚ್ಚಿನವೆಲ್ಲ ಕಂದು ಬಣ್ಣದ ಒಣ ಹಪ್ಪಳಗಳಂತೆ ಇದ್ದು, ಅಪರೂಪಕ್ಕೆ ಒಂದೋ ಎರಡೊ ಅರೆಹಸುರು ಬಣ್ಣದ ತಟ್ಟೆಗಳಿವೆ. ಅವುಗಳ ಹಿಂದೆ ಒಂದು ದುರಂತ ಕತೆಯಿದೆ.
ಈ ತಟ್ಟೆಗಳೆಲ್ಲ ಒಂದೊಂದೂ ಅರ್ಧ ಕಿಲೊಮೀಟರ್ ವ್ಯಾಸದ ಸಪಾಟು ವೃತ್ತಗಳಾಗಿದ್ದು ಪ್ರತಿಯೊಂದರ ನಟ್ಟ ನಡುವೆ ಕೊಳವೆ ಬಾವಿ ಇದೆ. ಅಲ್ಲಿಂದ ಒಂದೂವರೆ, ಎರಡು ಕಿಲೊಮೀಟರ್ (ಐದಾರು ಸಾವಿರ ಅಡಿ) ಆಳಕ್ಕೆ ಬೋರ್ ಕೊರೆದು ಅಲ್ಲಿದ್ದ ‘ಪಾತಾಳ ಗಂಗೆ’ಯನ್ನು ಮೇಲೆತ್ತಿ ಹಸುರು ಕ್ರಾಂತಿ ಮಾಡಲೆಂದು 1980ರ ದಶಕದಲ್ಲಿ ಸೌದಿ ಅರೇಬಿಯಾ ಸರ್ಕಾರ ದೊಡ್ಡ ಯೋಜನೆ ಆರಂಭಿಸಿತು.
ಈ ತಟ್ಟೆಗಳೆಲ್ಲ ಒಂದೊಂದೂ ಅರ್ಧ ಕಿಲೊಮೀಟರ್ ವ್ಯಾಸದ ಸಪಾಟು ವೃತ್ತಗಳಾಗಿದ್ದು ಪ್ರತಿಯೊಂದರ ನಟ್ಟ ನಡುವೆ ಕೊಳವೆ ಬಾವಿ ಇದೆ. ಅಲ್ಲಿಂದ ಒಂದೂವರೆ, ಎರಡು ಕಿಲೊಮೀಟರ್ (ಐದಾರು ಸಾವಿರ ಅಡಿ) ಆಳಕ್ಕೆ ಬೋರ್ ಕೊರೆದು ಅಲ್ಲಿದ್ದ ‘ಪಾತಾಳ ಗಂಗೆ’ಯನ್ನು ಮೇಲೆತ್ತಿ ಹಸುರು ಕ್ರಾಂತಿ ಮಾಡಲೆಂದು 1980ರ ದಶಕದಲ್ಲಿ ಸೌದಿ ಅರೇಬಿಯಾ ಸರ್ಕಾರ ದೊಡ್ಡ ಯೋಜನೆ ಆರಂಭಿಸಿತು.
ಬಿಸಿಬಿಸಿ ನೀರೇನೊ ಭರ್ಜರಿ ಬಂತು. ಅದನ್ನು ಅರ್ಧ ಕಿಲೊಮೀಟರ್ ಮೇಲಕ್ಕೆತ್ತಿ ನೆಲದಾಳದಲ್ಲೇ ತಂಪು ಮಾಡಿ, ಮತ್ತೆ ಒಂದು-ಒಂದೂವರೆ ಕಿಮೀ ಮೇಲಕ್ಕೆತ್ತಬೇಕು. ಆ ನೀರಲ್ಲಿ ಅತಿಯಾದ ಲವಣಾಂಶ ಇರುತ್ತದೆ. ಸೋಸುಯಂತ್ರದಲ್ಲಿ ಲವಣಗಳನ್ನು ಪ್ರತ್ಯೇಕಿಸಿ ಶುದ್ಧ ನೀರನ್ನು ಬೋರ್ವೆಲ್ ಸುತ್ತ ಗಾಣದಂತೆ ತಿರುಗುವ ಪೈಪ್ಗಳ ಮೂಲಕ ಚಿಮುಕಿಸುತ್ತಾರೆ. ಗೋಧಿ ಬಿತ್ತನೆ ಮಾಡಿ, ಹೂಡಿಕೆದಾರರು ನೀರಿನ ಪೈಪಿಗೇ ರಸಗೊಬ್ಬರ ಸೇರಿಸಿ ಭರ್ಜರಿ ಬೆಳೆ ತೆಗೆದರು. ಸುಮಾರು 15–20 ವರ್ಷ ಸೌದಿ ಅರೇಬಿಯಾ ಗೋಧಿಯನ್ನು ರಫ್ತು ಮಾಡಿತು. ಆಮೇಲೆ ಒಂದೊಂದಾಗಿ ಕೊಳವೆ ಬಾವಿಗಳು ಖಾಲಿಯಾದವು. ಹೂಡಿಕೆದಾರರೆಲ್ಲ ಒಬ್ಬೊಬ್ಬರಾಗಿ ಕಾಲ್ತೆಗೆದರು.
ಇಂದು ತೂಬರ್ಜಲ್ ಸುತ್ತಮುತ್ತ ಸಾವಿರಾರು ಒಣವೃತ್ತಗಳನ್ನು, ಜಲವಿಲ್ಲದ ಖಾಲಿ ತೂಬುಗಳನ್ನು ನೋಡುತ್ತೀರಿ. ತುಕ್ಕು ಹಿಡಿದ ಯಂತ್ರೋಪಕರಣಗಳು ಅಲ್ಲಲ್ಲೇ ಬಿದ್ದಿವೆ. ವಿಷಕಾರಿ ಲವಣದ ರಾಶಿ ಸುತ್ತೆಲ್ಲ ಚದುರಿದೆ. ಊರಿಗೆ ಊರೇ ಬಿಕೋ ಎನ್ನುತ್ತಿದೆ. ಗೋಧಿಯ ರಫ್ತಿನಲ್ಲಿ ಒಂದು ಕಾಲಕ್ಕೆ ಜಗತ್ತಿನ ಆರನೇ ಶ್ರೇಯಾಂಕದಲ್ಲಿದ್ದ ಸೌದಿ ಅರೇಬಿಯಾ ಈಗ ಪಾತಾಳಕ್ಕೇ ಕುಸಿದಂತಾಗಿದೆ. ಗೋಧಿಯನ್ನು ಆಮದು ಮಾಡಿಕೊಳ್ಳುವ ಹಂತಕ್ಕೆ ಬಂದಿದೆ.
ಗೋಧಿಯಿಂದ ಧನಿಕರಾದ ಹೂಡಿಕೆದಾರರೆಲ್ಲ ಬೇರೆ ಬೇರೆ ಖಂಡಗಳಲ್ಲಿ, (ಉತ್ತರ ಅಮೆರಿಕಾ, ಆಫ್ರಿಕಾ, ಲ್ಯಾಟಿನ್ ಅಮೆರಿಕಾ) ಬೇರೆ ಬೇರೆ ದೇಶಗಳಲ್ಲಿ (ಥಾಯ್ಲೆಂಡ್, ಇಂಡೊನೇಶ್ಯ) ಕೃಷಿಗಾಗಿ ಭೂಮಿಯನ್ನು ಖರೀದಿಸುತ್ತ, ಅಂತರ್ಜಲವನ್ನೂ ತಾತ್ಕಾಲಿಕ ಲಾಭವನ್ನೂ ಎತ್ತುತ್ತ ಸುತ್ತುತ್ತಿದ್ದಾರೆ. ನಮ್ಮ ಕರ್ನಾಟಕ ಸರಕಾರವೂ ಅಂಥದ್ದೇ ಘನಂದಾರಿ ಕೆಲಸಕ್ಕೆ ಕೈಹಾಕಲು ಹೊರಟಿದೆ. ದಕ್ಷಿಣ ಭಾರತದ ಶಿಲಾರಚನೆಯೇ ಗೊತ್ತಿಲ್ಲದ ಕಂಪನಿಯೊಂದಕ್ಕೆ ಅದು ‘ಪಾತಾಳ ಗಂಗೆ’ಯನ್ನು ಮೇಲೆತ್ತುವ ಗುತ್ತಿಗೆ ಕೊಡುತ್ತಿದೆ. ಬೇರೆ ಕೆಲವು ಭೂಖಂಡಗಳಲ್ಲಿ ಹೀಗೆ ಅಲ್ಲಲ್ಲಿ ‘ಪಳೆಯುಳಿಕೆ ನೀರು’ ಸಿಗುತ್ತದೆ ನಿಜ. ಅದಕ್ಕೆ ‘ಫಾಸಿಲ್ ವಾಟರ್’ ಅಥವಾ ‘ಪೇಲಿಯೊ ವಾಟರ್’ (ಪುರಾತನ ಜಲ) ಎನ್ನುತ್ತಾರೆ.
ಲಕ್ಷಾಂತರ ವರ್ಷಗಳ ಹಿಂದೆ, ಭೂಮಿಯ ಬಹುಭಾಗ ಹಿಮಯುಗದಲ್ಲಿದ್ದಾಗ ಕೆಲವೆಡೆ ನೆಲದಾಳದಲ್ಲಿ ನೀರು ಜಿನುಗಿ ಅಲ್ಲಲ್ಲಿ ಸ್ಪಂಜಿನಂತೆ ನೀರಿನ ಭಾರೀ ಖಜಾನೆ ಶೇಖರವಾಗಿದ್ದು ಹೌದು. ಅವೆಲ್ಲವೂ ಭೂಮಿಯ ಆಳದಲ್ಲಿರುವ ಮರಳುಶಿಲೆ ಅಥವಾ ಕಣಶಿಲೆಗಳಲ್ಲಿ ಸಂಚಯವಾಗಿರುತ್ತವೆ. ಉತ್ತರ ಭಾರತದಲ್ಲಿ ಗಂಗಾ-ಸಿಂಧೂ ಬಯಲಿನಲ್ಲಿ ಕಿಲೊಮೀಟರ್ ಆಳದಲ್ಲೂ ಅಂಥ ಶಿಲೆಗಳಿವೆ.
ಆದರೆ ದಕ್ಷಿಣ ಭಾರತದಲ್ಲಿ ಅಂಥ ಹಳೇಕಾಲದ ಕಣಶಿಲೆಗಳು ಇಲ್ಲ. ಇಲ್ಲಿ ಹೆಚ್ಚೆಂದರೆ ಗ್ರಾನೈಟ್ನ ಬಿರುಕುಗಳಲ್ಲಿ, ಭಗ್ನಶಿಲೆಗಳ ಸೀಳುಗಳಲ್ಲಿ ಪುರಾತನ ನೀರು ಸಂಚಯವಾಗಿರುತ್ತದೆ. ಅದು ನದಿಯಂತೆ ಹರಿಯುವುದೂ ಇಲ್ಲ.
ಸರ್ಕಾರಕ್ಕೆ ‘ಪಾತಾಳ ಗಂಗೆ’ಯ ಹುಚ್ಚು ಹಿಡಿಸಿದ ‘ವಾಟರ್ಕ್ವೆಸ್ಟ್’ ಕಂಪನಿಗೆ ಭೂವಿಜ್ಞಾನದ ಪರಿಜ್ಞಾನವೇ ಇಲ್ಲವೆಂಬುದಕ್ಕೆ ಅದರ ಜಾಲತಾಣದಲ್ಲೇ ಸಾಕಷ್ಟು ಸಾಕ್ಷ್ಯಗಳು ಸಿಗುತ್ತವೆ. ಯಾರೋ ಹೈಸ್ಕೂಲ್ ಹುಡುಗರು ಬರೆದಂತೆ ಕಾಣುವ ಪಾತಾಳದ ಭೂಚಿತ್ರಣ ಇದೆ. ಸಮುದ್ರದಿಂದ ಉಪ್ಪುನೀರು ನೆಲದ ಕಡೆಗಿನ ಪಾತಾಳದಲ್ಲಿ ಇಳಿದು ಅಲ್ಲಿನ ಶಾಖಕ್ಕೆ ಕುದಿಯುತ್ತದಂತೆ. ಅದು ಆವಿಯಾಗಿ ಉಪ್ಪಿನಂಶವನ್ನೆಲ್ಲ ಅಲ್ಲೇ ಬಿಟ್ಟು, ಬಿರುಕುಗಳ ಮೇಲೇಳುತ್ತ ಶುದ್ಧ ನೀರಾಗುತ್ತದಂತೆ. ತುಸು ಮೇಲೆ ಬಂದು (ನೆಲದಿಂದ ಸಾವಿರ ಮೀಟರ್ ಆಳದಲ್ಲಿ) ಮಡುಗಟ್ಟಿ ಹರಿಯುತ್ತದಂತೆ. ಎಲ್ಲವೂ ಶುದ್ಧ ಬೊಗಳೆ.
ವಿಜ್ಞಾನದ ನಿಯಮಗಳ ಪ್ರಕಾರ, ಪಾತಾಳದಲ್ಲಿ ಅದೆಷ್ಟೇ ಶಾಖವಿದ್ದರೂ ನೀರು ಕುದಿಯಲಾರದು; ಅದು ವಾತಾವರಣಕ್ಕೆ ತೆರೆದುಕೊಂಡರೆ ಮಾತ್ರ ಆವಿಯಾಗುತ್ತದೆ. ಇಲ್ಲಾಂದರೆ ಅತಿಶಾಖದ ದ್ರವವಾಗಿ ಅಲ್ಲೇ ಇರುತ್ತದೆ. ಅದು ಪ್ರವಾಹವಾಗಿ ಹರಿಯುವುದಿಲ್ಲ. ಸಮುದ್ರದ ನೀರೇ ಆಗಿದ್ದರೆ ಅದರ ಮಟ್ಟ ಸಮುದ್ರ ಪಾತಳಿಗಿಂತ ಕೆಳಕ್ಕೆ ಇಳಿಯುವುದೂ ಇಲ್ಲ, ಅದಕ್ಕಿಂತ ತೀರ ಮೇಲಕ್ಕೆ ಏರುವುದೂ ಇಲ್ಲ.
ಇನ್ನು ಈ ಕಂಪನಿಯ ಸಂಶೋಧನೆಗೆ ಕೊರಿಯಾದಲ್ಲಿ ನಡೆದ ‘ಇಂಟರ್ನ್ಯಾಶನಲ್ ಇನ್ವೆನ್ಶನ್ ಮೇಳ’ದಲ್ಲಿ ಗೋಲ್ಡ್ ಪ್ರೈಝ್ ಸಿಕ್ಕಿದೆಯೆಂಬ ಸರ್ಟಿಫಿಕೇಟ್ ಇದೆ. ಮೇಳ ನಡೆದಲ್ಲೇ ಪಾತಾಳಕ್ಕೆ ಬೋರ್ ಕೊರೆದು ನೀರನ್ನಂತೂ ಉಕ್ಕಿಸಿರಲಿಕ್ಕಿಲ್ಲ. ಹೆಚ್ಚೆಂದರೆ ಒಂದಿಷ್ಟು ಭಿತ್ತಿಚಿತ್ರಗಳು, ವಿಡಿಯೊ ಪ್ರದರ್ಶನ, ನಕಾಶೆಗಳ ಪ್ರದರ್ಶನ ಮಾಡಿರಬಹುದು. ಅದನ್ನು ಯಾರೂ ಕೂತಲ್ಲೇ ಜೋಡಿಸಬಹುದು. ಭಾರತದ ನಕಾಶೆಯ ಮೇಲೆ ಅವರು ತೋರಿಸಿದ ಭೂಜಲದ ರೇಖೆಗಳಂತೂ ನಗೆಪಾಟಲಿನದು. ಕಂಡಕಂಡಲ್ಲಿ ಉದ್ದ ಅಡ್ಡ ನೀಲಿ ರೇಖೆ ಎಳೆದಿದ್ದಾರೆ ಅಷ್ಟೆ.
ಈ ಕಂಪನಿಯದೆಂದು ಹೇಳಲಾದ ‘ವಾಟರ್ಕ್ವೆಸ್ಟ್ ರಿಸೋರ್ಸಸ್’ ಮತ್ತು ‘ಸ್ಕೈಕ್ವೆಸ್ಟ್’ ಜಾಲತಾಣಗಳಲ್ಲಿ ಮಾಹಿತಿಗಳೂ ಅಸ್ಪಷ್ಟವಾಗಿವೆ. ಯುರೋಪ್ ಮತ್ತು ಅರಬ್ ಎಮಿರೇಟ್ಸ್ನಲ್ಲಿ ಈ ಕಂಪನಿಯದೆಂಬಂತೆ ಕೆಲವು ಕೊಳವೆ ಬಾವಿಗಳ ಚಿತ್ರಗಳನ್ನು ಕೂರಿಸಲಾಗಿದೆ.
ಆಳವಾದ ಬೋರ್ ಕೊರೆಯಬಲ್ಲ ವಿಶೇಷ ಡ್ರಿಲ್ಲಿಂಗ್ ಸಲಕರಣೆಗಳ ಚಿತ್ರ ಕೂಡ ಇದೆ. ವಿವರಗಳೇನೂ ಇಲ್ಲ. ಅಲ್ಲಿ ಕೆಲವೆಡೆ ಪೆಟ್ರೋಲಿಗೆಂದು ಬಾವಿ ಕೊರೆಯುವಾಗ ನೀರು ಉಕ್ಕುವುದು ಸಹಜ. ನೀರಿಗೆಂದೇ ಕಿಲೊಮೀಟರ್ಗಟ್ಟಲೆ ಕೊರೆದಿದ್ದೂ ಇರಬಹುದು. ಅರ್ಜೆಂಟಿನಾದಲ್ಲಿ ತೋರಿಸಿದ ಹನ್ನೊಂದು ಬಾವಿಗಳ ಪೈಕಿ ಒಂಭತ್ತರಲ್ಲಿ ‘ಥರ್ಮಲ್ ವಾಟರ್’ (ಬಿಸಿ ನೀರು) ಎಂದು ಗುರುತಿಸಲಾಗಿದೆ.
‘ನೀರು ಸಿಗದಿದ್ದರೆ ಹಣವೂ ಇಲ್ಲ’ ಎಂಬ ಕರಾರಿನೊಂದಿಗೆ ಕರ್ನಾಟಕ ಸರ್ಕಾರದ ಜಲಸಂಪನ್ಮೂಲ ಇಲಾಖೆ ಈ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾಗಿ ಹೇಳಿಕೊಂಡಿದೆ. ನೀರು ಸಿಕ್ಕರೆ ಸಾಕೆ? ದಕ್ಷಿಣ ಭಾರತದಲ್ಲಿ ಎಲ್ಲೇ ಒಂದು ಕಿಲೊಮೀಟರ್ ಆಳಕ್ಕೆ ಕೊರೆದರೂ ನೀರು ಸಿಕ್ಕೇ ಸಿಕ್ಕೀತು.
ಎಷ್ಟು ವರ್ಷ ಅಥವಾ ಎಷ್ಟು ದಿನದವರೆಗೆ ನೀರು ಸಿಗಲಿದೆ ಎಂಬುದನ್ನು ಯಾರೂ ಹೇಳಲಾರರು.
ಎಷ್ಟು ವರ್ಷ ಅಥವಾ ಎಷ್ಟು ದಿನದವರೆಗೆ ನೀರು ಸಿಗಲಿದೆ ಎಂಬುದನ್ನು ಯಾರೂ ಹೇಳಲಾರರು.
ಇನ್ನು ನೀರಿನ ಗುಣಮಟ್ಟ? ಈಜಿಪ್ತ್, ಇಸ್ರೇಲ್, ಜೋರ್ಡನ್, ಸೌದಿ ಅರೇಬಿಯಾ, ಲಿಬಿಯಾ ಈ ಎಲ್ಲ ದೇಶಗಳಲ್ಲಿ ಪಾತಾಳದಿಂದ ವಿಕಿರಣಯುಕ್ತ ನೀರು ಬಂದಿದೆ. ಅದರಲ್ಲಿನ ವಿಕಿರಣ ದ್ರವ್ಯಗಳನ್ನು ಸೋಸುವುದು ತೀರಾ ದುಬಾರಿ ಅಷ್ಟೇ ಅಲ್ಲ, ಸೋಸಿದಾಗ ಉಳಿಯುವ ಗಸಿಯನ್ನು ಬಿಸಾಕುವುದೇ ದೊಡ್ಡ ಸಮಸ್ಯೆಯಾಗಿದೆ. ಅಲ್ಲಲ್ಲೇ ಬಿಟ್ಟರೆ ಗಾಳಿಯಲ್ಲೂ ಚದುರಿ ಗಂಭೀರ ಕಾಯಿಲೆಗಳಿಗೆ ಕಾರಣವಾಗುವ ಸಂಭವ ಇದೆ. ನಮ್ಮ ಚಳ್ಳಕೆರೆಯಲ್ಲಿ ಈ ಕಂಪನಿಗೆ ತೋರಿಸಲಾದ ತಾಣದ ಆಸು ಪಾಸಿನಲ್ಲಂತೂ ವಿಕಿರಣಶೀಲ ಯುರೇನಿಯಂ ಅದುರಿನ ಶಿಲಾಸ್ತರಗಳೇ ಇವೆ.
ಕರ್ನಾಟಕದ ಇತರ ತಾಣಗಳಲ್ಲೂ ಅತಿ ಆಳಕ್ಕೆ ರಂಧ್ರ ಕೊರೆದರೆ ಬೇರೆ ಲವಣಗಳು ಏನೇನು, ಎಷ್ಟೆಷ್ಟು ಬರಲಿಕ್ಕಿವೆ ಗೊತ್ತಿಲ್ಲ. ಲಕ್ಷಾಂತರ ವರ್ಷಗಳಿಂದ ಶಿಲಾಬಿರುಕುಗಳಲ್ಲಿ ಸಂಚಯಗೊಂಡಿರುವ ನೀರು ನಿರಭ್ರವಾಗಿರಲಂತೂ ಸಾಧ್ಯವಿಲ್ಲ. ನಿರಂತರವೂ ಆಗಿರಲು ಸಾಧ್ಯವಿಲ್ಲ. ಇನ್ನು ಅದಕ್ಕಾಗಿ ಸುಡುವ ಡೀಸೆಲ್ಲು, ಕರೆಂಟು…
ಬರದ ಪರಿಸ್ಥಿತಿ ತೀರಾ ತೀರಾ ಗಂಭೀರವಾಗಿದೆ ನಿಜ. ಅಮೆರಿಕದ ವಾಸ್ತುವಿನ್ಯಾಸ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಯುವಕ ಕಿರಣ್ ರಾಮಾರೆಡ್ಡಿ ಆರು ತಿಂಗಳ ರಜೆ ಹಾಕಿ ತನ್ನೂರಿನ ನೀರಿನ ಬರ ನೀಗಿಸಲೆಂದೇ ಗೌರಿಬಿದನೂರಿಗೆ ಬಂದಿದ್ದಾರೆ. ಶ್ರೀಶ್ರೀ ರವಿಶಂಕರ್ ಗುರೂಜಿಯ ಅನುಯಾಯಿಗಳ ಜೊತೆ ಸೇರಿ ಉತ್ತರ ಪಿನಾಕಿನಿ ನದಿಯನ್ನು ಮತ್ತೆ ಬದುಕಿಸಲು ಯತ್ನಿಸುತ್ತಿದ್ದಾರೆ. ಅವರು ಮೊಬೈಲ್ ಆಪ್ ಮೂಲಕ ಕೊಳವೆ ಬಾವಿಗಳ ಸಮೀಕ್ಷೆ ನಡೆಸುತ್ತಿದ್ದಾರೆ.
ಅರ್ಕುಂದ ಎಂಬ ಒಂದೇ ಹಳ್ಳಿಯಲ್ಲಿ 260 ಬೋರ್ವೆಲ್ ಕೊರೆಸಿದ್ದು ಅವುಗಳಲ್ಲಿ 56 ಮಾತ್ರ ಅತಿ ಆಳದಿಂದ ನೀರು ಕೊಡುತ್ತಿವೆ.
ಉಳಿದವೆಲ್ಲ ಡೆಡ್. ಕಿರಣ್ ಪ್ರಕಾರ ಆರು ಕೋಟಿ ರೂಪಾಯಿಗಳನ್ನು ಊರಿನ ಜನರು ಬೋರ್ವೆಲ್ ಕಂಪನಿಗಳಿಗೆ ಸುರಿದಿದ್ದಾರೆ. ಸಮೀಕ್ಷೆಗೆ ಹೋದವರನ್ನು ಕಂಡು, ಕೆಲವರಂತೂ ಸಾಲ ವಸೂಲಿಗೆ ಬಂದರೆಂದೇ ಭಾವಿಸಿ ಓಡಿ ಅವಿತುಕೊಂಡಿದ್ದೂ ಇದೆ ಎಂದು ಅವರು ಹೇಳುತ್ತಾರೆ. ‘ಬಾಗೇಪಲ್ಲಿಯ ಹಳ್ಳಿಗಳ ಜನರು ಕೊಳವೆ ಬಾವಿಯ ಫ್ಲೋರೈಡ್ಯುಕ್ತ ನೀರು ಕುಡಿದು ಕುಡಿದು, ನಿಂತಲ್ಲಿ ಹತ್ತು ನಿಮಿಷ ನಿಲ್ಲಲೂ ತ್ರಾಣವಿಲ್ಲದವರಾಗಿದ್ದಾರೆ. ನಮ್ಮ ದೇಶದ ರೈತರಿಗೆ ಎಂಥಾ ಸ್ಥಿತಿ ಬಂತು!’ ಎಂದು ಕಿರಣ್ ಮರುಗುತ್ತಾರೆ.
ಚಿತ್ರದುರ್ಗದ ದೊಡ್ಡ ಸಿದ್ದವನಳ್ಳಿಯಂಥ ಹಳ್ಳಿಯಲ್ಲೂ ಜನರು ಕುಡಿಯುವ ನೀರಿನ ಲವಣಾಂಶ ನಿವಾರಣೆಗೆ ದುಬಾರಿ ಆರ್ಓ ಸಾಧನಗಳನ್ನು ಹಾಕಿಸಿಕೊಂಡಿದ್ದಾರೆ. ‘ಅದರಿಂದ ಹೊರಬರುವ ನೀರಿನಲ್ಲಿ ಶೇಕಡಾ 70ರಷ್ಟು ನೀರು ವೇಸ್ಟ್ ಆಗುತ್ತಿದೆ’ ಎನ್ನುತ್ತಾರೆ ಜಲತಜ್ಞ ಡಾ. ದೇವರಾಜ್ ರೆಡ್ಡಿ. ವೇಸ್ಟ್ ಆಗುವುದಷ್ಟೇ ಅಲ್ಲ, ಅದು ಮೊದಲಿಗಿಂತ ಹೆಚ್ಚು ಲವಣಗಳನ್ನು ಸೇರಿಸಿಕೊಂಡು ಭೂಮಿಯೊಳಕ್ಕೆ ಇಂಗುತ್ತದೆ; ಮುಂದಿನ ಪೀಳಿಗೆಗೆ ಹೆಚ್ಚಿನ ಸಂಕಷ್ಟ ಒಡ್ಡುತ್ತದೆ.
ಪಾತಾಳವಲ್ಲ, ಆಕಾಶವೇ ನಮಗಿರುವ ಏಕೈಕ ಆಸರೆ ಎಂಬುದು ಅಧಿಕಾರಸ್ಥರಿಗೆ ಏಕೆ ಗೊತ್ತಾಗುತ್ತಿಲ್ಲ? ಮಳೆನೀರನ್ನು ಸಂಗ್ರಹಿಸಲು, ಕೆರೆಗಳ ಹೂಳೆತ್ತಲು ಸರ್ಕಾರ ತೋರುತ್ತಿರುವ ಎಲ್ಲ ನಿರಾಸಕ್ತಿಯ ನಡುವೆ ಜನರೇ ಪಿಕಾಸಿ, ಸನಿಕೆಗಳನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ.
ಹಿಂದೆ, 1962ರಲ್ಲಿ ಚೀನಾದೊಂದಿಗೆ ಯುದ್ಧ ನಡೆದಾಗ, ಪ್ರಧಾನಿ ಶಾಸ್ತ್ರಿಯವರ ಕರೆಯ ಮೇರೆಗೆ ಊರೂರಿನ ಜನರು ಚಿನ್ನಾಭರಣಗಳನ್ನು ದಾನ ಕೊಟ್ಟ ಹಾಗೆ ಈಗ ಕೆರೆ ಹೂಳೆತ್ತಲು ಕೊಡುಗೈ ದಾನ ನೀಡುತ್ತಿದ್ದಾರೆ. ಇದು ಶತ್ರುವಿಲ್ಲದ ಸಮರ. ಶಿರಸಿ, ಕುಷ್ಟಗಿ, ಸಾಗರ, ಹಾಸನಗಳಲ್ಲಿ ಜನರು ಕೆರೆ ಹೂಳೆತ್ತಲು ನೆರವಾಗುತ್ತಿದ್ದಾರೆ. ನೀರಿನ ಪಸೆ ಕಂಡರೆ ಹಬ್ಬದೋಪಾದಿ ಸಂಭ್ರಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಜನರೊಂದಿಗೆ ಸರ್ಕಾರ ನಿಲ್ಲಬೇಕಿತ್ತು. ಆದರೆ ಅದು ವಿರುದ್ಧ ದಿಕ್ಕಿನಲ್ಲಿ ಹೊರಟಂತಿದೆ.
ಪಾತಾಳದತ್ತ ಏನೋ ಆಸೆ ತೋರಿಸಿ, ‘ನೀವು ನಿಶ್ಚಿಂತರಾಗಿರಿ, ನಾವೆಲ್ಲ ವ್ಯವಸ್ಥೆ ಮಾಡುತ್ತೇವೆ’ ಎಂಬಂತೆ, ವಿಷದ ಬಟ್ಟಲಿಗೇ ಕೊಳವೆಕಡ್ಡಿ ಹಾಕಿ ಸೀಪಲು ಕೊಡುವಂತಿದೆ. ಮಳೆ ನೀರಿಂಗಿಸುವ ಮಹತ್ವದ ಕುರಿತಾಗಲೀ ಅದರ ಸರಳ ತಂತ್ರಗಳ ಕುರಿತಾಗಲೀ ಒಂದೇ ಒಂದು ಸರ್ಕಾರಿ ಕಿರುಪುಸ್ತಕ, ಕರಪತ್ರ, ಭಿತ್ತಿಚಿತ್ರ, ವಿಡಿಯೊ? ಹೋಗಲಿ, ಹತ್ತನೇ ಕ್ಲಾಸಿನವರೆಗೆ ಒಂದಾದರೂ ಪಾಠ ಇದೆಯೆ? ಯಶಸ್ಸಿನ ಒಂದಾದರೂ ಉದಾಹರಣೆ ಇದೆಯೆ ಸರ್ಕಾರದ ಬಳಿ? ಪ್ರತಿಪಕ್ಷಗಳು ಒಂದಾದರೂ ಸೊಲ್ಲೆತ್ತಿವೆಯೆ?
ಮೊನ್ನೆ ಏಪ್ರಿಲ್ 2ರಂದು ಬೆಂಗಳೂರಿನಲ್ಲಿ ಅದ್ದೂರಿಯ ‘ಭಗೀರಥ ಜಯಂತಿ’ಯನ್ನು ಸರ್ಕಾರ ಆಚರಿಸಿತು. ಅಲ್ಲಿನ ಬಾಜಾಬಜಂತ್ರಿಗೆ ವ್ಯಯಿಸಿದ ಹಣದಲ್ಲಿ ಒಂದು ಚಿಕ್ಕ ಪಾಲನ್ನಾದರೂ ಮಳೆನೀರಿನ ಕೈಪಿಡಿಯ ಮುದ್ರಿಸಿ ಹಂಚಲು ಬಳಸಿದ್ದಿದ್ದರೆ ಮೂವತ್ತೂ ಜಿಲ್ಲೆಗಳಲ್ಲಿ ವರುಣದೇವ ಕೈಹಿಡಿಯುತ್ತಿದ್ದ. ಸಿಂಗಪುರ ಮಾದರಿಯಲ್ಲಿ ಚರಂಡಿ ನೀರನ್ನು ಶುದ್ಧೀಕರಿಸಿ ಒಬ್ಬ ಸಚಿವನಾದರೂ ಕುಡಿದು ತೋರಿಸಿದ್ದಿದ್ದರೆ ಕನ್ನಡಮ್ಮನ ಒಣಗಿದ ಗಂಟಲಿಂದಲೂ ಜೈಕಾರ ಹೊಮ್ಮಬಹುದಿತ್ತು.