*ಪರ್ಯಾಯ ರಾಜಕಾರಣದ ಗೊತ್ತುಗುರಿಗಳು*-ಕೆ.ಪಿ.ಸುರೇಶ
ನಮ್ಮ ನಿತ್ಯದ ಬದುಕಿಗೆ ಅಷ್ಟೇನು ಅನುಕೂಲ ಮಾಡಿಕೊಡದಿದ್ದರೂ ಚುನಾವಣಾ ರಾಜಕೀಯ ಮತ್ತು ಅದನ್ನು ಆದ್ಯಂತವಾಗಿಸಿಕೊಂಡಿರುವ ಪಕ್ಪಗಳ ಬಗ್ಗೆ ಇರುವ ಆಸಕ್ತಿ ನೋಡಿದರೆ ಅಚ್ಚರಿಯಾಗುತ್ತದೆ; ರಾಜಕೀಯ ನಾಯಕರು ಢಾಳಾಗಿ ಅಪ್ಪಟ ಬಿಳಿಯಲ್ಲಿ ಸಿಂಗರಿಸಿಕೊಂಡು ನಮ್ಮೆದುರು ಠಳಾಯಿಸುವ ವರಸೆ ಯಾವ ಯಕ್ಷಗಾನದ ಒಡ್ಡೋಲಗಕ್ಕೂ ಕಡಿಮೆ ಇಲ್ಲ..
ಈ ಆಸಕ್ತಿಯ ಹಿಂದೆ ಏನು ಕೆಲಸ ಮಾಡುತ್ತಿದೆ ಎಂಬುದು ನನಗೆ ಪೂರ್ತಿ ಅರ್ಥ ಆಗಿಲ್ಲ..!!
ನಮ್ಮ ಯಾವ ನಾಗರಿಕನನ್ನು ಮಾತಾಡಿಸಿದರೂ ಅವನ ಬವಣೆಗೆ ಒದಗಿ ಬರುವುದು ಸ್ಥಳೀಯ ಪುಡಿ ನಾಯಕ. ಈ ನಾಯಕ ಅಷ್ಟೇನೂ ಸಿಂಗಾರಗೊಂಡವನಲ್ಲ! (ಬೆಂಗಳೂರಿನ ಕಾರ್ಪೋರೇಟರ್‍ಗಳು ಶಾಸಕರ ತರ ಇದ್ದಾರಂತೆ; ಅದು ಬೇರೆ ಮಾತು..!) ಹಾಗಿದ್ದೂ ದೊಡ್ಡ ನಾಯಕನೊಬ್ಬ ಹೇಗೆ ಠಳಾಯಿಸುತ್ತಾನೆ? ಆತನ ಮೂಲಕ ಈ ಸ್ಥಳೀಯನಿಗೆ ಶಕ್ತಿ ಬರುತ್ತದೆ. ಇದು ರಾಜಕೀಯದ ವಿಕೃತ ಉಲ್ಟಾ ಸ್ಥಿತಿ.
ನಿಜವಾದ ರಾಜಕೀಯದಲ್ಲಿ ತಳದಿಂದ ಇದು ವರ್ಗಾವಣೆಯಾಗಬೇಕು. ತಳಮಟ್ಟದ ಪ್ರಾತಿನಿಧಿಕ ಮಂದಿಯ ಅಭಿಪ್ರಾಯ; ಪ್ರೀತಿ, ಸಿಟ್ಟು ನಾಯಕನನ್ನು ನಿಯಂತ್ರಿಸಬೇಕು. ನಾಯಕ ಸ್ಪಂದಿಸಬೇಕು.. ಕರ್ನಾಟಕದಲ್ಲಿ ಇಂಥಾ ರಾಜಕೀಯ ಹೆಗಡೆಯವರು ಪಂಚಾಯತ್ ವ್ಯವಸ್ಥೆಯನ್ನು ಆರಂಭಿಸಿದಾಗ ಸ್ವಲ್ಪಮಟ್ಟಿಗೆ ಇತ್ತು. ಆದರೆ ತದನಂತರದ ದಶಕಗಳಲ್ಲಿ ಸಂಪೂರ್ಣ ಕೇಂದ್ರೀಕೃತ ರಾಜಕೀಯ ನಾಯಕತ್ವ ತುಂಬಿದೆ. ಶಾಸಕರ ಪರಮಾಧಿಕಾರವೇ ನಮ್ಮ ಪ್ರಜಾಸತ್ತಾತ್ಮಕ ರಾಜಕೀಯದ ವರಸೆಯಾಗಿದೆ.
ಯಾವುದೇ ಪರ್ಯಾಯ ರಾಜಕೀಯ ಕಾಣ್ಕೆ ಇದನ್ನು ಮುರಿಯಬಯಸುತ್ತದೆ. ಇದರ ಕಾರ್ಯಸಾಧು ವಿಧಾನಗಳೇನು ಎಂಬುದೇ ಸದ್ಯದ ಜಿಜ್ಞಾಸೆ.
ಸೈದ್ಧಾತಿಕವಾಗಿ ಮಾತಾಡುವುದಾದರೆ ನಮ್ಮ ಮುಖ್ಯವಾಹಿನಿಯ ಪಕ್ಷಗಳ ಆರ್ಥಿಕ ನಿಲುಮೆಯಲ್ಲಿ ಯಾವ ಭಿನ್ನಾಭಿಪ್ರಾಯಗಳೂ ಇಲ್ಲ. ಎಲ್ಲಾ ಪಕ್ಷಗಳೂ ಜಾಗತೀಕರಣ ಸಾದರಪಡಿಸಿರುವ ಆರ್ಥಿಕ ನೀತಿಯನ್ನು ಪಲ್ಲಕ್ಕಿಯಲ್ಲಿ ಹೊರುವವರೇ. ಸಂಪನ್ಮೂಲಗಳ ಉಪಯೋಗದ ಬಗ್ಗೆಯೂ ಅಷ್ಟೇ. ಪ್ರತಿರೋಧ ಇಲ್ಲದಿದ್ದರೆ ಏನನ್ನಾದರೂ ಕಾಸಿಗೆ ಮಾರುವವರೇ..!
ಜಗಳವಿರುವುದು ಕಾಂಗ್ರೆಸ್ಸಿನ ಭೃಷ್ಟಾಚಾರ ಮತ್ತು ಭಾಜಪದ ಕೋಮು ಧ್ರುವೀಕರಣದ ರಾಜಕೀಯದ ವಿರುದ್ಧ ಮಾತ್ರಾ.!!! ಭಾಜಪದ ರಾಜಕೀಯ ನಿಲುವನ್ನುಇಂಗ್ಲಿಶಿನ double jeopardy ಎಂಬ ಪದದಿಂದ ವಿವರಿಸಬಹುದು. ಏಕಕಾಲಕ್ಕೆ ಅದು ಕೋಮು ಧ್ರುವೀಕರಣದ ಮೂಲಕ ಸಮಾಜದಲ್ಲಿ ಬಹುಸಂಖ್ಯಾತರ ಆಡಳಿತವನ್ನು ಸಕ್ರಮಗೊಳಿಸುತ್ತಾ ಜಾಗತೀಕರಣದ ಆರ್ಥಿಕತೆಯ ಮೂಲಕ ಕಾರ್ಪೋರೇಟೀಕರಣವನ್ನೂ ಉತ್ತೇಜಿಸುತ್ತೆ. ಉಳಿದ ಪಕ್ಷಗಳ ನೈತಿಕ ನೆಲೆ ಅಷ್ಟೇನೂ ಗಟ್ಟಿ ಇಲ್ಲದ ಕಾರಣ ಈ ಆರೋಪವನ್ನು ಗಣನೀಯವಾಗಿ ಮತದಾರರು ಪರಿಗಣಿಸಿದಂತೆ ಕಾಣುತ್ತಿಲ್ಲ. ಇದು ಈ ಚರ್ಚೆಗೆ ಅನುಶಂಗಿಕ.
ಪರ್ಯಾಯ ರಾಜಕಾರಣವೆಂಬುದು, ಸ್ಥಳೀಯವಾಗಿ ಜನದನಿಯನ್ನು ಗಟ್ಟಿಗೊಳಿಸುವ ಕೆಲಸ ಮಾಡಬೇಕು. ಸೈದ್ಧಾಂತಿಕ ಭೂಮಿಕೆ ಈ ಜನ ಸಮುದಾಯದ ಅರಿವಿನ ಮೂಲಕ ಇಳಿಯಬೇಕು.
ಇತ್ತೀಚೆಗಿನ ದಿನಗಳ ಜನಪ್ರತಿರೋಧದ ಉದಾಹರಣೆಗಳನ್ನು ಗಮನಿಸಿದರೆ ಕೆಲವು ವಿನ್ಯಾಸಗಳನ್ನು ಗುರುತಿಸಬಹುದು. 1. ಸರ್ಕಾರ ಭರವಸೆ ನೀಡಿದ ಕಲ್ಯಾಣ ಕಾರ್ಯಕ್ರಮಗಳ ಅನುಕೂಲಗಳು ದಕ್ಕದಿರುವ ವಿರುದ್ಧ ಜನ ದನಿ ಎತ್ತುವುದು. ಇದು ಕುಡಿಯುವ ನೀರಿನಿಂದ ಹಿಡಿದು ರೇಶನ್‍ವರೆಗೂ ಸಿಡಿಯುತ್ತಲೇ ಇದೆ. ಈ ಹೋರಾಟಗಳೇ ನಿಜವಾದ ಪರ್ಯಾಯ ರಾಜಕಾರಣದ ಮೂಲ ಸೆಲೆ. ಇವು ಎಷ್ಟು ಸ್ಥಳೀಯವಾಗಿವೆ ಎಂದರೆ ಹೆಚ್ಚಿನವೆಲ್ಲಾ ಜನಪ್ರತಿನಿಧಿಗಳ (ಶಾಸಕರ ಎಂದು ಓದಿಕೊಳ್ಳಿ) ಪದತಲದಲ್ಲಿ ಒರಗಿ ಉಸಿರು ಕಳೆದುಕೊಳ್ಳುತ್ತಿವೆ. ಇಂಥಾ ಹೋರಾಟಗಳ ನೆಲೆಗಳನ್ನು ಗುರುತಿಸುವ ಶಕ್ತಿ ಹೋರಾಟಗಾರನಿಗೆ ಇದ್ದರೆ ಇದಕ್ಕೊಂದು ತಾತ್ವಿಕ ಮತ್ತು ಸಂಘಟನಾತ್ಮಕ ಸ್ವರೂಪ ದೊರೆಯುತ್ತದೆ. ಇವು ತಮ್ಮಷ್ಟಕ್ಕೇ ಚಿಮ್ಮುವ ಬದಲು ನಿರ್ದಿಷ್ಟವಾಗಿ ವ್ಯಕ್ತವಾಗುವಂತೆ ಮಾಡಿದಾಗ ಅದಕ್ಕೊಂದು ಸಂಘಟನಾತ್ಮಕ ನಿಯಂತ್ರಣವೂ ಇರುತ್ತದೆ. 2. ಸರ್ಕಾರದ ನೀತಿ ನಿರೂಪಣೆಯ ತಿದ್ದುಪಡಿ ಬದಲಾವಣೆಗೆ ಒತ್ತಾಯಿಸುವಂಥವು.. ದಿಡ್ಡಳ್ಳಿ ಹೋರಾಟ ಮತ್ತು ಭೂಮಿ ವಸತಿ ಹೋರಾಟಗಳು ಇಂಥಾ ಭೂಮಿಕೆಗೆ ಸರ್ಕಾರ ಮತ್ತು ಪಕ್ಷಗಳನ್ನು ಒಡಂಬಡಿಸುವ ಹೋರಾಟಗಳು. 3. ಸಾಮಾಜಿಕ ಸಾಂಸ್ಕøತಿಕ ಯಜಮಾನಿಕೆಯ ಬಗ್ಗೆ ಪ್ರತಿಕ್ರಿಯಿಸುವ ಹೋರಾಟಗಳು. ಉಡುಪಿ ಚಲೋದಂಥಾ ದಲಿತ ಪ್ರತಿಕ್ರಿಯೆಯ ಚಲನೆಗಳನ್ನು ಹೀಗೆ ಗುರುತಿಸಬಹುದು.
ಇವು ಒಂದು ಹಂತದಲ್ಲಿ ಪ್ರಭುತ್ವದ, ಅದರಲ್ಲೂ ಉಚ್ಛ ಸ್ತರದ ಪ್ರಭುತ್ವದ ಮಧ್ಯಪ್ರವೇಶವನ್ನು ನಿರೀಕ್ಷಿಸುತ್ತಿರುತ್ತವೆ. ಕೇಂದ್ರೀಕರಣಗೊಂಡ ವ್ಯವಸ್ಥೆಯಲ್ಲಿ ಮತ್ತೆ ನಮ್ಮ ದೂರು ದುಮ್ಮಾನಗಳು, ಹಕ್ಕು ಬೇಡಿಕೆಗಳು ಪ್ರಭುತ್ವವನ್ನು ಆಪಾದಿತನ ಸ್ಥಾನದಲ್ಲಿಟ್ಟೂ; ಅದೇ ಪ್ರಭುತ್ವವನ್ನು ಬಲಗೊಳಿಸುತ್ತದೆ! ಒಂದೊಂದು ಬೇಡಿಕೆ, ಒತ್ತಾಯಗಳೂ ಪ್ರಭುತ್ವವನ್ನು ಇನ್ನಷ್ಟು ಬಲಶಾಲಿ ಪಾತ್ರಧಾರಿಯಾಗಿ ಮಾಡುತ್ತಿರುತ್ತದೆ.
ಆದ್ದರಿಂದಲೇ ಪರ್ಯಾಯ ರಾಜಕಾರಣ ಸಮುದಾಯಗಳನ್ನು ಸ್ವಾಯತ್ತಗೊಳಿಸುವತ್ತ ತರಬೇತುಗೊಳಿಸಬಹುದೇ ಎನ್ನುವುದು ನಮ್ಮ ಮುಂದಿರುವ ಪ್ರಶ್ನೆ. ಈ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯಗಳೆರಡೂ ಮೈಗೂಡಿದರೆ ಪ್ರಭುತ್ವದೆದುರು ಅಂಗಲಾಚುವ ಸಂದರ್ಭಗಳು ಕಡಿಮೆಯಾಗುತ್ತಾ ಹೋಗುತ್ತದೆ.
ಗ್ರಾಮೀಣ ಭಾರತದ ನೀರು- ನೆಲ – ಸಂಪನ್ಮೂಲಗಳ ದುರ್ಭರ ಸನ್ನಿವೇಶ ನೊಡಿದಾಗ ಅತಿ ಸುಲಭದಲ್ಲಿ ಜನರ ವಿಧೇಯತೆಯನ್ನು ಪಡೆದುಕೊಳ್ಳಬಹುದು ಅನ್ನಿಸುತ್ತೆ. ನೀರು ನಿಲ್ಲಿಸಿ ಮತ್ತೆ ಕೊಟ್ಟರಾಯಿತು. ಮೂರು ಕಾಸಿಗೆ ಮಾರಾಟವಾಗುವ ಬೆಲೆಗೆ ಆರು ಕಾಸು ಕೊಡಿಸಿದರಾಯಿತು, ಜನ ಕೃತಜ್ಞತೆಯಲ್ಲಿ ನೆಲಕ್ಕೆ ಪೊಡಮಡುತ್ತಾರೆ. ದೈನೇಸಿ ಸ್ಥಿತಿಯ ದುರುಪಯೋಗ ಇದು. ನಮ್ಮ ಬಹುತೇಕ ಪಕ್ಷಗಳು ಇದರಲ್ಲಿ ಪರಿಣಿತಿ ಪಡೆದಿವೆ.!
ಈ ಸ್ವಾಯತ್ತತೆಯ ಮಾರ್ಗ ಮತ್ತು ಮಾದರಿಗಳಿವೆಯೇ? ನೀರು, ಸಂಪನ್ಮೂಲ, ಕೃಷಿಗಳಲ್ಲಿ ಪ್ರಭುತ್ವದ ಹಂಗಿಲ್ಲದೇ ಸ್ವಯಂ ಬದುಕು ರೂಢಿಸಿಕೊಳ್ಳುವ ಮಾದರಿಗಳಿವು. ಇದರಾಚೆಗೆ ಆರೋಗ್ಯ ಮತ್ತು ಶಿಕ್ಷಣ ಇವೆರಡಕ್ಕೂ ಸರ್ಕಾರವನ್ನು ಜವಾಬ್ದಾರಗೊಳಿಸುವ ಕ್ರಮವನ್ನು ರೂಢಿಸುವುದು ಸಾಧ್ಯವೇ?
ಇದಕ್ಕೆ ಸಿದ್ಧ ಮಾದರಿಗಳಿಲ್ಲ. ಆದರೆ ನಮ್ಮಲ್ಲಿ ಇದರ ಪೇಲವ ಮಾದರಿಗಳು ಆಗಾಗ ಚಿಗಿತುಕೊಳ್ಳುತ್ತವೆ. ಹಲವಾರು ಸಂಸ್ಥೆಗಳು, ಸರ್ಕಾರೇತರ ಸಂಘಟನೆಗಳು ನಾಯಕತ್ವ ತರಬೇತಿ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳುವುದು ನೋಡಿದ್ದೇನೆ. ಇವು ಮೂಲತಃ ನಿರ್ದಿಷ್ಟ ವಿಷಯದ ವಿವರಗಳನ್ನು ನೀಡಿ, ಜ್ಞಾನ ಸಂಪನ್ನಗೊಳಿಸುವ ಬಗೆ. ಇದರಲ್ಲೊಂದು ಅನುಕೂಲವಿದೆ. ಬ್ಯಾಂಕಿಂಗ್ ಇರಲಿ; ಕೃಷಿ ಇರಲಿ ವ್ಯಾವಹಾರಿಕ ಅಜ್ಞಾನದಿಂದ ಬಳಲುವ ಸ್ಥಿತಿ ಇಲ್ಲಿರುವುದಿಲ್ಲ.
ಆದರೆ ಪ್ರಭುತ್ವದ ಗಮನದಿಂದಾಚೆ ಹೇಗೊ ಬಾಳು ನಡೆಸಿಕೊಂಡು ಹೋಗುವ ವಿಧಾನವಾಗಿ ನನಗೆ ಇದು ಕಂಡಿದೆ. ಯಾಕೆಂದರೆ ಈ ಮೂಲಕ ಚಿಗುರಿದ ನಾಯಕರನ್ನು ನಾನು ಕಂಡಿಲ್ಲ..!! ಆದರೆ ಇದರ ಸುಧಾರಿತ ಮಾದರಿಗಳನ್ನು ಅಲ್ಲಲ್ಲಿ ಕಂಡಿದ್ದೇನೆ. ಅದು ಮೂಲತಃ ಸರಳ ಸೂತ್ರಗಳು. ಸುಸ್ಥಿರ ಕೃಷಿ ಮಾಡುವುದು ಹೇಗೆ? ಸ್ವಸಹಾಯ ಸಂಘಗಳ ಮೂಲಕ ಮಾರುಕಟ್ಟೆ ಸೃಷ್ಟಿಸುವುದು ಹೇಗೆ ಎಂಬಿತ್ಯಾದಿ ಕಮ್ಮಟಗಳು. ಇವು ಸದ್ಯದ ಅಸಹಾಯಕ ಸ್ಥಿತಿಯಿಂದ ಸಮುದಾಯವನ್ನು ಕೊಂಚ ಮೇಲೆತ್ತುತ್ತದೆ. ಆದರೆ ರಾಜಕೀಯ ಪ್ರಜ್ಞೆ ಮೂಲಕ ಬದಲಾವಣೆ ತರುವಷ್ಟು ಧಾಡಸೀತನ ಹೊಂದಿರುವುದಿಲ್ಲ.
ಪರ್ಯಾಯ ರಾಜಕೀಯದ ಪರಿಕಲ್ಪನೆಯಲ್ಲಿ ಸೈದ್ಧಾಂತಿಕ ಹೋರಾಟಗಳ ನೆಲಗಟ್ಟೇ ಮೇಲ್ಗೈ ಪಡೆಯುತ್ತಿರುವುದು ಸ್ವಾಭಾವಿಕ. ಯಾಕೆಂದರೆ ಅದರ ಚೌಕಟ್ಟಿಗೆ ಒಂದು ಭಾವನಾತ್ಮಕ ಬಿಗಿ ಇದೆ. ಸಾಧಿಸಲಿಚ್ಛಿಸುವ ಗುರಿಗೂ ಒಂದು ರೊಮ್ಯಾಂಟಿಕ್ ಹೊಳಪು ಇದೆ. ‘ಎಲ್ಲಿಯ ವರೆಗೆ ಹೋರಾಟ’ ಎಂದು ಕೂಗಿದಾಗ ಸಿಗುವ ಮಾನಸಿಕ ದಾಡ್ರ್ಯತೆ ಬೇರೆಯೇ.
ಇತ್ತೀಚೆಗೆ ನಾನು ಎರಡು ವಿಭಿನ್ನ ಗುಂಪುಗಳೊಂದಿಗೆ ಸಂವಾದ ನಡೆಸಿದ್ದೆ. ಒಂದು ಗುಂಪು ಪಂಚಾಯತ್ ಜೊತೆ ವ್ಯವಹರಿಸುತ್ತಿದೆ. ನನಗೆ ಅಚ್ಚರಿಯಾಗಿದ್ದು ಹಣಾಹಣಿಗೆ ಇಳಿಯಲು ಸಿದ್ಧರಿರುವ ಈ ಮಂದಿಗೆ ಪಂಚಾಯತ್ ಸಂಸ್ಥೆಗಳ ಆಡಳಿತಾತ್ಮಕ ವಿವರಗಳೇ ಪೂರ್ತಿ ಗೊತ್ತಿರಲಿಲ್ಲ. ಪ್ರತೀ ಹಂತದ ಆಯವ್ಯಯ, ಅದರ ನೀಲಿ ನಕಾಶೆ, ನಿಯಮಗಳ ಅರಿವಿಲ್ಲದೇ ಗೋಡೆಗೆ ತಲೆ ಚಚ್ಚಿಸಿಕೊಳ್ಳುವುದರಲ್ಲೇ ದಿನ ವ್ಯರ್ಥವಾಗುತ್ತಿರುವುದನ್ನು ಕಂಡೆ.
ಇನ್ನೊಂದು ಗುಂಪು ಸುಸ್ಥಿರ ಕೃಷಿಗೆ ತಯಾರಾಗುವ; ಹಾಗೆಯೇ, ಕೃಷಿಲೋಕದ ದೊಡ್ಡ ಪ್ರಭಾವಗಳ ಬಗ್ಗೆ ಅರಿಯುವ ಕಮ್ಮಟ ನಡೆಸಿತ್ತು. ಇಲ್ಲೂ ಸ್ಪಷ್ಠವಾಗಿ ಎರಡು ಆಸಕ್ತಿಯ ಮಂದಿ ಕಂಡರು. ಒಂದು ವರ್ಗ, ಕೃಷಿಯ ತಾಂತ್ರಿಕ ವಿವರಗಳ ಮೂಲಕ ಸ್ವಾಯತ್ತ ಕೃಷಿ ನಡೆಸುತ್ತಾ ಮಾದರಿಗಳಾಗುವ ವಾಂಛೆ ಹೊಂದಿದ್ದರೆ, ಇನ್ನೊಂದು ಗುಂಪು ಕೃಷಿಯನ್ನು ನಿಯಂತ್ರಿಸುತ್ತಿರುವ ಬಾಹ್ಯ ಸಂಗತಿಗಳನ್ನು ನಿಭಾಯಿಸುವ ಬಗೆ ಹೇಗೆ ಎಂಬ ಚಿಂತೆ ಹೊಂದಿತ್ತು.
ಇದು ಗಮನಾರ್ಹವೆನ್ನಿಸಿತು. ನಾನು ಬೇರೆ ಬೇರೆ ಸಂದರ್ಭಗಳಲ್ಲಿ ತರುಣರೊಂದಿಗೆ ಸಂವಾದ ನಡೆಸಿದಾಗೆಲ್ಲಾ, ಸಿದ್ಧಾಂತದ ಹೊರೆ ಇಲ್ಲದೇ ಗ್ರಾಮೀಣ ಜೀವನ ಹಸನು ಮಾಡುವ; ಹಂಗಿಗೆ ಬೀಳದೇ ಸಮುದಾಯ ಕಟ್ಟುವ ಕನಸು ಹೊಂದಿದವರನ್ನು ಕಂಡಿದ್ದೇನೆ. ಅಂಥವರಲ್ಲಿ ರಾಜಕೀಯ ಪ್ರಜ್ಞೆ ಇಲ್ಲದೇ ಏನು ಕಟ್ಟಿದರೂ ಅದು ದ್ವೀಪವಾಗುತ್ತದೆ ಎಂದು ನಾನು ಹೇಳಿದ್ದಿದೆ. ಇನ್ನೊಂದೆಡೆ, ಸೈದ್ಧಾಂತಿಕ ಕೆಚ್ಚು ತುಂಬಿರುವ; ಆದರೆ ಗ್ರಾಮೀಣ ಬದುಕಿನ ನಿತ್ಯ ಸಿಕ್ಕುಗಳ ಅರಿವಿಲ್ಲದ ದೊಡ್ಡ ಸಂಖ್ಯೆಯ ಹುಡುಗರನ್ನು ಕಂಡಿದ್ದೇನೆ. ನಿತ್ಯ ಹೋರಾಟವಿಲ್ಲದಿದ್ದರೆ ನಿಮಗೆ ನಿದ್ರೆ ಬಾರದು ಎಂದು ಕಿಚಾಯಿಸಿದ್ದೂ ಇದೆ. ಆದರೆ ಈ ಎರಡೂ ಮಾದರಿಗಳೂ ನನ್ನಲ್ಲಿ ಗೌರವ; ಆಶಾಭಾವ ತುಂಬಿವೆ.
ಈ ಎರಡೂ ವಿಧದ ಯುವಕರು ಕೋಮವಾದಿಗಳಾಗಿಲ್ಲ; ಧರ್ಮದ ಮಯಕಕ್ಕೆ ಬಿದ್ದಿಲ್ಲ. ಇವರನ್ನು ನೋಡುತ್ತಿದ್ದಂತೆ ಮತ್ತೆ ಗಾಂಧೀ ಕಾಲದ ‘ರಚನಾತ್ಮಕ-ಹೋರಾಟ’ ಎಂಬೆರಡು ವಿಧಾನಗಳ ನೆನಪಾಯಿತು. ಆಗಲೂ ಇದು ಪ್ರತ್ಯೇಕ ಕಂಪಾರ್ಟ್‍ಮೆಂಟ್‍ಗಳಾಗಿರಲಿಲ್ಲ. ಆದರೆ ಸ್ವಾತಂತ್ರ್ಯೋತ್ತರ ದಿನಗಳಲ್ಲಿ, ರಾಜಕೀಯವೆಂದರೆ ಅಧಿಕಾರ ರಾಜಕೀಯವೆಂಬ ತೀರ್ಮಾನಕ್ಕೆ ಬಂದ ದೊಡ್ಡ ವರ್ಗವೊಂದು ರಚನಾತ್ಮಕ ಕೆಲಸಗಳಲ್ಲಿ ತೊಡಗಿ ಸ್ವಸಂತೃಪ್ತ ದ್ವೀಪಗಳನ್ನು ಕಟ್ಟಿಕೊಂಡರು. ಹೋರಾಟದ ಹಾದಿ ಹಿಡಿದವರು ಕ್ರಮೇಣ ವ್ಯಸನಿಗಳ ರೀತಿಯಲ್ಲಿ ಸಮುದಾಯಕ್ಕೆ ಕಂಡರು.!!
ಬಹುಸಂಖ್ಯಾತ ಯಜಮಾನಿಕೆಯೇ ರಾಷ್ಟ್ರೀಯತೆಯ ಸ್ವಭಾವವೆಂಬಂತೆ ತೋರುತ್ತಿರುವ ದಿನಗಳಿವು. ಆರ್ಥಿಕ ಚಿಂತನೆಗಳಲ್ಲಿ ಪರ್ಯಾಯವನ್ನೇ ಅನುಮೋದಿಸದ ರಾಜಕೀಯ ಪಕ್ಷಗಳು ತುಂಬಿರುವ ದಿನಗಳು. ಪರ್ಯಾಯ ರಾಜಕಾರಣದ ಕನಸು ಕಾಣುವವರು, ಏಕಕಾಲಕ್ಕೆ ಬದುಕಿನ ವಿವರಗಳನ್ನೂ ಕಲಿಯಬೇಕು; ಸೈದ್ಧಾಂತಿಕ ಹಾದಿಯನ್ನೂ ಕಾಣಬೇಕು. ಜೊತೆಗೆ ಈಗ ಪ್ರಭುತ್ವದ ಮೂಲಕ ಪ್ರಚುರಗೊಳ್ಳುತ್ತಿರುವ ಜಾಗತೀಕರಣದ ಭರವಸೆಗಳಿಗೆ ಮಾರುಹೋಗಿರುವ ತಲೆಮಾರಿಗೆ ಸತ್ಯದರ್ಶನವನ್ನೂ ಮಾಡಿಸಬೇಕು..
ಎರಡು ಆತ್ಯಂತಿಕ ಸತ್ಯಗಳೆಂದರೆ, 1. ಧರ್ಮ ಮತ್ತು ರಾಷ್ಟ್ರೀಯತೆ ಮೂಲಕ ಆರ್ಥಿಕ, ಸಾಮಾಜಿಕ ಮತ್ತು ಅವಕಾಶಗಳ ಸಮಾನತೆ ಸಾಧ್ಯವಿಲ್ಲ. 2. ಸಂಪನ್ಮೂಲಗಳು ಸೀಮಿತವಾಗಿರುವ ದೇಶಕ್ಕೆ ಅನ್‍ಲಿಮಿಟೆಡ್ ಅಭಿವೃದ್ಧಿ ಸಾಧ್ಯವಿಲ್ಲ..
ಈ ಎರಡೂ ಸತ್ಯಗಳನ್ನು ಒಳಗೊಂಡೇ ನಮ್ಮ ಪರ್ಯಾಯ ರಾಜಕಾರಣ ಬೆಳೆಯಬೇಕಾಗಿದೆ. ಯಾಕೆಂದರೆ ಈ ಎರಡು ಅಂಶಗಳನ್ನು ನಮ್ಮ ಮುಖ್ಯವಾಹಿನಿಯ ಪಕ್ಷಗಳು ಅನುಮೋದಿಸುವ ಸಾಧ್ಯತೆ ಇಲ್ಲ!! ಆದು ಒಳ್ಳೆಯದೇ.. ಅವರು ಮಾರು ವೇಷದಲ್ಲಿ ಇದರೊಳಗೆ ತೂರಿಕೊಳ್ಳುವ ಸಾಧ್ಯತೆ ಅಷ್ಟರ ಮಟ್ಟಿಗೆ ಕಮ್ಮಿ..!!
|