ಪರಿಸರದೊಂದಿಗೆ ಕಲೆತು ಕಲಿಯುವ ಮಾದರಿ-ಪಿ.ಓಂಕಾರ್

*ಪರ್ಯಾಯ…

ರಾಜಸ್ತಾನದ ಅರಾವಳಿ ಬೆಟ್ಟ ಪ್ರದೇಶದ ಪ್ರಕೃತಿ ಮಡಿಲಿನ ಹದಿನೈದು ಎಕರೆ ಪ್ರದೇಶದಲ್ಲಿರುವ ‘ತಪೋವನ’ವು ‘ಸ್ವರಾಜ್ ವಿಶ್ವವಿದ್ಯಾನಿಲಯ’ಎಂದು ಕರೆಸಿಕೊಳ್ಳುತ್ತಿದೆಯಾದರೂ ಇದಕ್ಕೆ ಯಾವ ಘನ ಸರ್ಕಾರ ಅಥವಾ ಯುಜಿಸಿಯ ಮಾನ್ಯತೆ ಇಲ್ಲ. ಎರಡು ವರ್ಷದ ಕೋರ್ಸ್ ಮುಗಿಸಿದವರಿಗೆ ಯಾವುದೇ ಪದವಿ- ಪ್ರಮಾಣ ಪತ್ರವನ್ನು ನೀಡುವುದಿಲ್ಲ. ಪ್ರವೇಶಾಕಾಂಕ್ಷಿಗೆ ಕನಿಷ್ಠ ವಿದ್ಯಾರ್ಹತೆಯ ನಿಬಂಧನೆಯೂ ಇಲ್ಲ. ಹಿಂದಿ ಭಾಷಾ ಜ್ಞಾನ, ಸಮಾಜ ಮತ್ತು ಪರಿಸರಕ್ಕೆ ಒಳಿತು ಮಾಡಬೇಕೆನ್ನುವ ಬದ್ಧತೆ ಇದ್ದರಷ್ಟೆ ಸಾಕು. ಸಾವಯವ ತೋಟ,ಮೂಲಿಕೆ ವನ,ಆಯುರ್ವೇದ ಚಿಕಿತ್ಸಾ ಕೇಂದ್ರ,ಗ್ರಂಥಾಲಯ,ಬಹುಮಾಧ್ಯಮ ಪ್ರಯೋಗಾಲಯ,ಸಮುದಾಯ ಅಡುಗೆ ಕೋಣೆ,ಜಾನುವಾರು ಕೊಟ್ಟಿಗೆ,ದಟ್ಟ ಹಸಿರು ಇತ್ಯಾದಿಗಳನ್ನೊಳಗೊಂಡ ವಿವಿಯ ಪರಿಸರದಲ್ಲಿ ವಿದ್ಯಾರ್ಥಿಗಳು;ಅಧ್ಯಾಪಕರಿಲ್ಲ. ಕಲಿಕಾರ್ಥಿಗಳಿದ್ದಾರೆ;ಕಲಿಕೆಗೆ ಸಹಕರಿಸುವವರು ಜತೆಗಿರುತ್ತಾರೆ. ಅಡುಗೆ,ಊಟ,ಉಳುಮೆ,ಸ್ವಚ್ಛತೆ, ಕಲಿಕೆ,ಚಿಂತನೆ ಎಲ್ಲವನ್ನೂ ಕಲೆತು ಮಾಡುತ್ತಾರೆ. ಪ್ರತಿಭೆ,ಪ್ರಶ್ನೆ, ಕನಸುಗಳನ್ನಾಧರಿಸಿದ ವ್ಯಕ್ತಿಗತ ಪಠ್ಯ;ಬದುಕನ್ನು ಸ್ವಯಂ ವಿನ್ಯಾಸಗೊಳಿಸಿಕೊಳ್ಳುವ ಕಲಿಕಾ ಕ್ರಮ ಇಲ್ಲಿನ ವಿಶೇಷ.
ಉದಯಪುರದ ಸದ್ದು ಗದ್ದಲದಿಂದ ಹದಿನೈದು ಕಿಮೀ ಆಚೆಗಿರುವ;‘ವಿಶ್ವವೇ ಕಲಿಕೆಯ ಕೋಣೆ’ಎಂದು ನಂಬಿರುವ ಈ ವಿವಿಯ ಕಲಿಕಾರ್ಥಿಗಳು ಸಾಂಪ್ರದಾಯಿಕ ವಿವಿಗಳ ಕಲಿಕೆಯ ಮಾದರಿಗಿಂತ ಭಿನ್ನವಾಗಿ,ಅಸಾಂಪ್ರದಾಯಿಕ ಮತ್ತು ಪ್ರಾಯೋಗಿಕ ವಿಧಾನದಲ್ಲಿ ಕಲಿಯುತ್ತಾರೆ. ಸಾವಯವ ಕೃಷಿ,ನಿಸರ್ಗ ಚಿಕಿತ್ಸೆ,ಸಮುದಾಯ ರೇಡಿಯೋ ಬಳಕೆ;ಸಿನಿಮಾ ನಿರ್ಮಾಣ, ಕಲಾತ್ಮಕ ಸಿನಿಮಾ ವೀಕ್ಷಣೆ; ಹೊಸತಿನ ಸಂಶೋಧನೆ,ಗುಂಪು ಚರ್ಚೆ; ಹತ್ತಿರದ ಹಳ್ಳಿಗಳಿಗೆ ಭೇಟಿ; ತ್ಯಾಜ್ಯವನ್ನೇ ಸೃಷ್ಟಿಸದೆ ಸೌರಶಕ್ತಿಯಲ್ಲಿ ಆರೋಗ್ಯಕರ ಅಡುಗೆ ತಯಾರಿ; ಶೌಚಾಲಯ ಶುಚಿತ್ವ; ಕಾಂಪೋಸ್ಟ್ ತಯಾರಿ ಮುಂತಾದ ಎಲ್ಲಾ ಚಟುವಟಿಕೆಯಲ್ಲಿ ತಮ್ಮ ಶ್ರಮವನ್ನು ಸೇರಿಸುತ್ತಾರೆ. ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ವಿದೇಶಿಯರೊಂದಿಗೆ ಸಂಹನ.ಸ್ಥಳೀಯ ಮಹಿಳೆಯರು; ಬೀದಿ ಮಕ್ಕಳೊಂದಿಗೂ ಒಳಿತಿನ ಕೆಲಸ. ಹಣ,ಮೊಬೈಲ್ ಫೋನು,ಆಹಾರ ಮುಂತಾದ ಯಾವುದೇ ಅಗತ್ಯಗಳನ್ನು ಜತೆಗಿಟ್ಟುಕೊಳ್ಳದೆ ಬಹುದೂರಕ್ಕೆ ಸೈಕಲ್‌ನಲ್ಲಿ ಪಯಣ ತೆರಳಿ, ಆ ಪ್ರದೇಶದ ಜನರೊಂದಿಗೆ ಬೆರೆತು,ಅಲ್ಲೇ ಆಹಾರ ಇತ್ಯಾದಿ ಅಗತ್ಯಗಳನ್ನು ಹುಟ್ಟಿಸಿಕೊಳ್ಳುವ ಮೂಲಕ ಸುಲಭ ಸೌಲಭ್ಯಗಳ ಅವಲಂಭನೆ ಇಲ್ಲದೆ ಬದುಕಬಹುದಾದ ದಾರಿಗಳನ್ನು ಕಂಡುಕೊಳ್ಳುತ್ತಾರೆ. ತಾವು ಬಳಸುವ,ಸೇವಿಸುವ ಪದಾರ್ಥಗಳು ಪರಿಸರದ ಮೇಲೆ ಏನೇನು ಪರಿಣಾಮ ಬೀರುತ್ತವೆನ್ನುವುದನ್ನು ಅರಿಯುತ್ತಾರೆ ಮತ್ತು ಪರಸ್ಪರರು ಹಾಗೂ ಪ್ರಕೃತಿ ಜತೆಗೆ ಸಾಮರಸ್ಯದಿಂದ ಬದುಕುವುದು ಹೇಗೆನ್ನುವ ಸಾಧ್ಯತೆಗಳನ್ನು ಹುಡುಕಿಕೊಳ್ಳುತ್ತಾರೆ. ಹೀಗೆ, ಸರಳ-ಸುಸ್ಥಿರ ಬದುಕಿನ ಜ್ಞಾನವನ್ನು ಪಡೆಯುತ್ತಲೇ ತಮ್ಮೊಳಗಿನ ನೈಜ ಕೌಶಲವನ್ನು ಸ್ವಯಂ ಗುರುತಿಸಿಕೊಂಡು ಅದಕ್ಕೆ ತಕ್ಕಂತೆ ತಮ್ಮ ಕನಸು,ಗುರಿಗಳನ್ನು ಮರು ವ್ಯಾಖ್ಯಾನಕ್ಕೆ ಒಡ್ಡಿಕೊಳ್ಳುತ್ತಾರೆ.
ಬಹುಶಃ,ಬದುಕಿನ ವಿವೇಕವನ್ನು ಇಷ್ಟೊಂದು ಪರಿಣಾಮಕಾರಿಯಾಗಿ ಈ ಕಾಲದ ಯಾವ ಘನ ವಿವಿ; ಶಿಕ್ಷಣ ಸಂಸ್ಥೆಗಳೂ ಕಲಿಸುವುದಿಲ್ಲ.‘ಮುಖ್ಯವಾಹಿನಿ ಶಿಕ್ಷಣ ವಿದ್ಯಾರ್ಥಿಯನ್ನು ಪರಿಸರದ ಸಂಬಂಧದಿಂದ ಹೊರಗಿಟ್ಟು;ಪಠ್ಯಕ್ಕೆ ಸೀಮಿತಗೊಳಿಸಿ,ಅಂಕವೀರರನ್ನು ಸೃಷ್ಟಿಸುತ್ತಿದೆ. ಆತನಿಗೂ,ಆತ ಉಣ್ಣುವ ಆಹಾರ,ಬಳಸುವ ಶಕ್ತಿ,ಸೃಷ್ಟಿಸುವ ತ್ಯಾಜ್ಯಕ್ಕೂ ಸಂಬಂಧವಿಲ್ಲ. ನೆಲದ ನಂಟನ್ನು ಉಳಿಸುವುದಿಲ್ಲ; ಬದುಕಿನ ಮೌಲ್ಯಗಳನ್ನು ಕಲಿಸುವುದಿಲ್ಲ. ಎಂಥದೇ ಸವಾಲನ್ನು ಎದುರಿಸಲೂ ಸಜ್ಜುಗೊಳಿಸುವುದಿಲ್ಲ’ ಎನ್ನುವುದು ದಶಕದಿಂದ ಕೇಳಿಬರುತ್ತಿರುವ ಆಕ್ಷೇಪ. ಆದರೂ ಇಂಥ ಶಿಕ್ಷಣವೇ ಸರ್ವ ಜನಪ್ರಿಯ. ಬಂಡವಾಳ ಕೇಂದ್ರಿತ ಅಭಿವೃದ್ಧಿಯ ಅಬ್ಬರದ ಈ ಕಾಲದಲ್ಲಿ ಶಿಕ್ಷಣವೂ ಬಂಡವಾಳ ಹೂಡಿ ಬಂಡವಾಳ ತೆಗೆಯುವ ಉದ್ಯಮವಾಗಿ ರೂಪಾಂತರಗೊಂಡಿದೆ. ಮಕ್ಕಳು ಕೂಡ ಭವಿಷ್ಯದ ಬಂಡವಾಳ. ಪಡೆದ ಹಣಕ್ಕೆ ತಕ್ಕಂತೆ ಮಗುವನ್ನು ‘ಉತ್ಪಾದಿಸುವುದು’ ಶಿಕ್ಷಣ ಸಂಸ್ಥೆಗಳ ಹೊಣೆ. ಹೂಡಿದ ಹಣದ ಮರುಗಳಿಕೆಯ ಕುರಿತಂತೆಯೇ ಎಲ್ಲರ ಧ್ಯಾನ. ಪದವಿ,ಪ್ರಮಾಣ ಪತ್ರ ನೀಡುವುದಷ್ಟೆ ಅಲ್ಲ ‘ಮಾರುವುದು’ ಕೂಡ ದೊಡ್ಡ ದಂಧೆಯಾಗಿ ಪರಿಣಮಿಸಿದೆ. ‘ಸ್ವರಾಜ್’ವಿವಿ ಇಂಥದಕ್ಕೆಲ್ಲ ತದ್ವಿರುದ್ಧ. ‘ಇದು ಜನರಿಂದಲೇ ಮಾನ್ಯತೆ ಪಡೆದ ವಿವಿ. ಕಲಿಕಾರ್ಥಿಗಳು ನಿರ್ಜೀವ ಕಾಗದದ (ಪ್ರಮಾಣಪತ್ರ)ತುಣುಕಾಗಬಾರದು. ಸಮುದಾಯದ ನಡುವೆ ನಿಜ ಕಾರ‌್ಯಕ್ರಮಗಳನ್ನು ಕೈಗೆತ್ತಿಕೊಳ್ಳಬಲ್ಲ ಕೌಶಲ-ಜ್ಞಾನವಂತರಾಗಬೇಕು’ ಎನ್ನುವುದು ಸಂಸ್ಥಾಪಕರ ಆಶಯ. ಆದ್ದರಿಂದಲೇ,ಬಹುಸಂಖ್ಯೆಯ ಶಿಕ್ಷಣ ಸಂಸ್ಥೆ; ವಿವಿಗಳು ನೀಡುವ ಶಿಕ್ಷಣ ‘ಮಾದರಿ’ಯನ್ನು ಒಡೆದು,ಹೊಸದಾದ ಸುಸ್ಥಿರ ಮಾದರಿಯನ್ನು ಕಟ್ಟುವ ಪ್ರಯತ್ನ ನಿರತರಾಗಿದ್ದಾರೆ. ಹಾಗೆಂದೇ ಇಲ್ಲಿ,ಕಾನ್ಫರೆನ್ಸ್‌ಗಳು ‘ಅನ್‌ಕಾನ್ಫರೆನ್ಸ್’ಗಳೆನಿಸಿಕೊಳ್ಳುತ್ತವೆ.
ಹಾಗಂತ, ಈ ಮಾದರಿ ಇದೇ ಮೊದಲೇನಲ್ಲ. ಸ್ವಾತಂತ್ರ್ಯಕ್ಕೆ ಮುನ್ನವೇ ‘ನಯೀ ತಾಲೀಂ’ ಮೂಲಕ ಕುಶಲ ಕೈಕೆಲಸ,ಕಲೆ,ಆರೋಗ್ಯ ಮತ್ತು ಶಿಕ್ಷಣವನ್ನು ಮೇಳೈಸುವ ಪ್ರಯತ್ನ ಆರಂಭಿಸಿದ್ದ ಗಾಂಧೀಜಿ, ‘ಗುರು ಶಿಷ್ಯ ಇಬ್ಬರೂ ಕಲಿಸುವ ಮತ್ತು ಕಲಿಯುವ ಕ್ರಿಯೆಯಲ್ಲಿಯೇ ಉತ್ಪಾದನೆ ಮಾಡುತ್ತಾರೆ. ಅದು ಆರಂಭದಿಂದಲೇ ಜೀವನವನ್ನು ಸಮೃದ್ಧಗೊಳಿಸುತ್ತದೆ. ರಾಷ್ಟ್ರಕ್ಕೆ ಉದ್ಯೋಗ ಸೃಷ್ಟಿಯ ಕಷ್ಟವನ್ನೂ ತಪ್ಪಿಸುತ್ತದೆ’ ಎಂದು ಆಶಿಸಿದ್ದರು. ‘ಸ್ಮಾಲ್ ಈಸ್ ಬ್ಯೂಟಿಫುಲ್’ ಎಂದು ಪ್ರತಿಪಾದಿಸಿದ ಅಭಿವೃದ್ಧಿ ಅರ್ಥಶಾಸಜ್ಞ ಶೂಮಾಕರ್ ಚಿಂತನೆಗಳಿಂದ ಸ್ಫೂರ್ತಿ ಪಡೆದ ಭಾರತೀಯ ಮೂಲದ ಸತೀಶ್ ಕುಮಾರ್ ಹಾಗೂ ಜಾನ್ ಲೇನ್ ಮುಂತಾದ ಸಮಾನ ಆಸಕ್ತರು ಇಂಗ್ಲೆಂಡ್‌ನ ಡಾರ್ಟಿಂಗ್ಟನ್‌ನಲ್ಲಿ ಎರಡೂವರೆ ದಶಕದ ಹಿಂದೆಯೇ (1990-91) ನಿಸರ್ಗದ ಮಧ್ಯೆ ‘ಶೂಮಾಕರ್ ಕಾಲೇಜು’ ಸ್ಥಾಪಿಸಿದ್ದು,ಅದೀಗ ಸಾಮಾಜಿಕ ಮತ್ತು ಪರಿಸರ ಸಂಬಂಧಿ ಜನ ಕಾಳಜಿಯನ್ನಾಧರಿಸಿದ ಸುಸ್ಥಿರ-ಸಮಗ್ರ ಶಿಕ್ಷಣ ನೀಡುವ ಅಂತಾರಾಷ್ಟ್ರೀಯ ಕೇಂದ್ರವಾಗಿ ಬೆಳೆದಿದೆ. ಈ ಮಾದರಿಗಳು ಮತ್ತು ಅದಾಗ ತಾನೆ ಬಿಡುಗಡೆಯಾಗಿದ್ದ ‘ತ್ರಿ ಈಡಿಯಟ್ ’ಸಿನಿಮಾ ಪ್ರೇರಣೆಯಿಂದ 2010ರ ಏಪ್ರಿಲ್‌ನಲ್ಲಿ ಅಂಕುರಿಸಿದ ‘ಸ್ವರಾಜ್’ ವಿವಿ ಕಲ್ಪನೆಯ ಹಿಂದಿದ್ದವರು ನಿತಿನ್ ಪರಂಜಪೆ,ರೇವಾ ದಾಂಡಗೆ,ಮನಿಷ್‌ಜೈನ್,ಡೆಬೋರಾ ಮತ್ತಿತರ ಸಮಾನಾಸಕ್ತರು. ಈಗ ಶಿಕ್ಷಣದ ಎಲ್ಲ ಸಾಧ್ಯತೆಗಳ ಕುರಿತಂತೆ ಆಳ ಜ್ಞಾನ ಹೊಂದಿದ 150ಕ್ಕೂ ಹೆಚ್ಚು ‘ಮೌಲ್ಯ ಶಿಕ್ಷಣ’ತಜ್ಞರು ಆಗಾಗ ಬಂದು ಮಾರ್ಗದರ್ಶನ ಮಾಡುವರು. ದೇಶಾದ್ಯಂತದ ವಿವಿಧ ಸಾಮಾಜಿಕ ,ಆರ್ಥಿಕ ಹಿನ್ನೆಲೆಯ 17ರಿಂದ 31ರ ವಯೋಮಾನದ ಹಲವು ಕಲಿಕಾರ್ಥಿಗಳು ತರಬೇತಿ ಪಡೆದಿದ್ದು,ಕೆಲವರು ಉತ್ತಮ ಉದ್ಯೋಗಾವಕಾಶ ಪಡೆದಿದ್ದಾರೆ. ಕೆಲವರು ತಮ್ಮದೇ ಸಮುದಾಯ ವ್ಯವಹಾರಗಳನ್ನು ಕಟ್ಟಿ ನಿಲ್ಲಿಸಿದ್ದಾರೆ. ಬೆಂಬಲಿಗರು,ಹಿತೈಷಿಗಳು ನೀಡುವ ಆರ್ಥಿಕ,ವಸ್ತುರೂಪದ ಕೊಡುಗೆಗಳೇ ಸಂಸ್ಥೆಯ ಆರ್ಥಿಕ ಉಸಿರು.ಕಲಿಕಾರ್ಥಿಗೆ ಶುಲ್ಕ ನಿಗದಿಪಡಿಸಿದ್ದರೂ;ನೀಡಲಾಗದವರನ್ನು ನಿರಾಕರಿಸುವುದಿಲ್ಲ. ‘ಜೈಲು ಭೇಟಿ,ನೆರೆಯ ಹಳ್ಳಿಗಳಲ್ಲಿ ಪರಿಷೆ ,ಪರ್ವತ ಶ್ರೇಣಿಯಲ್ಲಿ ತಣ್ಣನೆಯ ಚಾರಣ, ಕುಂಬಾರರು,ಸೂತ್ರದ ಗೊಂಬೆಕಾರರು ಮುಂತಾದ ಕುಶಲಕರ್ಮಿಗಳೊಂದಿಗೆ ಕೆಲಸ, ಬಿಡುವಿದ್ದಾಗ ಚಿರತೆಯ ಹೆಜ್ಜೆ ಗುರುತು,ಹಕ್ಕಿಯ ಧ್ವನಿ,ಬಣ್ಣವನ್ನು ಅರಸಿ ಅಲೆಯುವುದು…ಹೀಗೆ ಪ್ರಕೃತಿ ಮತ್ತು ಜನ ಬದುಕಿನ ಒಡನಾಟದೊಂದಿಗಿನ ಕಲಿಕೆಯ ಪಯಣ ಕಲಿಕಾರ್ಥಿಗಳು ಮತ್ತು ಮಾರ್ಗದರ್ಶಕರನ್ನು ರೋಮಾಂಚನಕ್ಕೆ ಒಳಗುಮಾಡುತ್ತದೆ.
ಹೀಗೆ, ಅಲ್ಲೆಲೋ ಬಿತ್ತಿದ ಕನಸಿನ ಬೀಜ ಹಾರಿಬಂದು ಈಗ ಕರ್ನಾಟಕದ ನೆಲದಲ್ಲಿ ಬಿದ್ದು ಕೊನರತೊಡಗಿದೆ. ಹಲವು ವರ್ಷಗಳಿಂದ ಸುಸ್ಥಿರ ಬದುಕು ಮತ್ತು ಶಿಕ್ಷಣದ ವಿಷಯದಲ್ಲಿ ಪರ‌್ಯಾಯ ದಾರಿಗಳ ಶೋಧನೆ ನಿರತ ಸಮಾನ ಆಸಕ್ತ ಗೆಳೆಯರು ಸೇರಿ ಪರಿಸರದೊಂದಿಗೆ ಕಲೆತು ಕಲಿಯುವ ‘ಶ್ರಮ ಸಹಿತ ಶಿಕ್ಷಣ’ವನ್ನು ಕನ್ನಡದಲ್ಲಿ ಸಾಧ್ಯಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಶೀಲರಾಗಿದ್ದಾರೆ. ಈಗಾಗಲೆ ಈ ಗೆಳೆಯರೆಲ್ಲ ಹಲವು ಸುತ್ತಿನ ಚರ್ಚೆ ನಡೆಸಿ,ಧಾರವಾಡ ಸಮೀಪದ ಸಂಜೀವ ಕುಲಕರ್ಣಿಯವರ ‘ಸುಮನ ಸಂಗಮ ಕಾಡು ತೋಟ’ವನ್ನು ಕೇಂದ್ರವನ್ನಾಗಿಸಿಕೊಂಡು ‘ಸಂಗಮ ಕಲಿವೀಡು’ ಅಥವಾ ‘ಸಂಗಮ ವಿವಿ’ಯನ್ನು ರೂಪಿಸಲು ಮತ್ತು ಸ್ವರಾಜ್ ವಿವಿ ಮಾದರಿ ಅನುಸರಿಸಿದರೂ ಇಲ್ಲಿನ ಅಗತ್ಯಗಳಿಗೆ ತಕ್ಕಂತೆ ಕೆಲವು ಬದಲಾವಣೆಗಳನ್ನು ಒಳಗೊಳ್ಳಲು ನಿರ್ಣಯಿಸಿದ್ದಾರೆ. ಅವರು ಅಂದುಕೊಂಡದ್ದೆಲ್ಲ ಸಾಧ್ಯವಾದರೆ, ಸುಸ್ಥಿರ ಬದುಕಿನೆಡೆಗಿನ ನಡೆಯಲ್ಲಿ ತೊಡಗುವವರಿಗೆ ವಿಚಾರ ಸ್ಪಷ್ಟತೆಯನ್ನು ದೊರಕಿಸುವ ಕೇಂದ್ರವೊಂದು ಉದಯಿಸಿದಂತಾಗುತ್ತದೆ. ಸುಸ್ಥಿರ-ಸುಖಿ ಜೀವನದ ಮೂಲತತ್ತ್ವಗಳನ್ನು ಹಂಚಿಕೊಳ್ಳಲು ಒಂದು ವರ್ಷದ ತರಬೇತಿ ನಡೆಸುವುದು ಮತ್ತು ಅದಕ್ಕೆ ಮೊದಲು ಎದುರಾಗಬಹುದಾದ ಸವಾಲುಗಳನ್ನರಿಯಲು ಹತ್ತು ಮಂದಿಗೆ 3 ತಿಂಗಳ ಪ್ರಾಯೋಗಿಕ ತರಬೇತಿ ಸಂಘಟಿಸುವುದು ಈ ಗೆಳೆಯರ ತೀರ್ಮಾನ. ಇಲ್ಲಿಯೂ ತರಬೇತಿಗೆ ಕನಿಷ್ಠ ವಿದ್ಯಾರ್ಹತೆ ಇಲ್ಲ. ಅನಕ್ಷರಸ್ತರಿಗೂ ಪ್ರವೇಶವಿದೆ. ಕಲಿಕಾರ್ಥಿಗಳಿಗೆ ಪದವಿ;ಪ್ರಮಾಣ ಪತ್ರ ನೀಡುವುದಿಲ್ಲ. ವಯೋಮಿತಿ ಕನಿಷ್ಠ 18-ಗರಿಷ್ಠ 50 ಆದರೂ ಸಡಿಲಿಕೆಯ ಸ್ವಾತಂತ್ರ್ಯವಿದೆ. ಮಾಸಿಕ ವೆಚ್ಚ ಭರಿಸಬೇಕಾದರೂ ನೀಡಲಾಗದವರಿಗೆ ಪ್ರವೇಶ ನಿರಾಕರಿಸುವುದಿಲ್ಲ. ವಾಸ್ತವ್ಯಸಹಿತ ತರಬೇತಿ ಒಟ್ಟಾಗಿ ಅಡುಗೆ ತಯಾರಿ,ಮನೆ-ಶೌಚಾಲಯ ಸ್ವಚ್ಛತೆ, ಕೃಷಿ ಕೆಲಸ ಮುಂತಾದ ಸಮುದಾಯ ಕೆಲಸ ಮತ್ತು ಸುಸ್ಥಿರ ಅಭಿವೃದ್ಧಿ ವಿಷಯ ವೈವಿಧ್ಯಗಳನ್ನೊಳಗೊಂಡ ಪಠ್ಯವನ್ನು ಒಳಗೊಂಡಿರುತ್ತದೆ. ಸುಸ್ಥಿರ ಅಭಿವೃದ್ಧಿ ಕ್ಷೇತ್ರದ ನಾನಾ ಜ್ಞಾನ ಶಾಖೆಗಳ ತಿಳಿವಳಿಕಸ್ಥರು ಕಲಿಕಾರ್ಥಿಗಳ ಜತೆಗಿದ್ದು ಮಾರ್ಗದರ್ಶನ ಮಾಡುವರು. ಕಲಿಕಾರ್ಥಿ ತನ್ನ ಒಳಿತನ್ನು ಸಮಾಜದ ಒಳಿತಿನ ಜತೆಗೆ ಕಂಡುಕೊಳ್ಳುವ ಪ್ರಯತ್ನ ಮಾಡಬೇಕೆನ್ನುವುದು ‘ಸಂಗಮ’ದ ಗೆಳೆಯರ ಒಟ್ಟು ಆಶಯ.
ವೇಗದ;ಶಕ್ತಿಶಾಲಿ ಜಗತ್ತಿನಲ್ಲಿ ಉರಿಬಿಸಿಲ ಬೆಳಕಿನದ್ದೇ ಪ್ರಖರತೆ. ಈ ಮಧ್ಯೆ,ನಿಜ ಮೌಲ್ಯವನ್ನು ಬಿತ್ತಿ ಬೆಳೆಯುವು ಪ್ರಯತ್ನಗಳು ತಂಪು ಹಣತೆಯಂತೆ ಅಲಲ್ಲಿ ಬೆಳಗುತ್ತಿವೆ.ಎಲ್ಲೋ ಬಿದ್ದ ಬೀಜ ಹೀಗೆ ಯಾರದೋ ಎದೆಯಲ್ಲಿ ಚೆಲ್ಲಿ ಚಿಗುರೊಡೆಯುತ್ತದೆ;‘ಪುಟ್ಟದೇ ಸುಂದರ’ಎನ್ನುವ ಆಶಯ ಪುಟ್ಟದಾಗಿಯಾದರೂ ವಿಸ್ತರಿಸುತ್ತಿದೆ.