ಪಂಚಾಯಿತಿಗಳಿಗೂ ಲಗ್ಗೆಯಿಟ್ಟ ಕಾರ್ಪೊರೇಟ್!- ಕೆ.ಪಿ.ಸುರೇಶ

                                                                                                                                                                    ಕೆ.ಪಿ.ಸುರೇಶ
                                                       

                                                       ಪಂಚಾಯಿತಿಗಳಿಗೂ ಲಗ್ಗೆಯಿಟ್ಟ ಕಾರ್ಪೊರೇಟ್!

corporate world
ದೇಶವಿಡೀ ಬಿಹಾರದ ಬಗ್ಗೆ ಬೆಕ್ಕಸ ಬೆರಗಾಗಿ ಕೂತಿರುವಾಗ ನೆರೆಯ ಕೇರಳದ ಸುದ್ದಿ ಬೆಚ್ಚಿಬೀಳಿಸುವಂತೆ ಮಾಡಿದೆ. ಕೇರಳದಲ್ಲಿ ಪಂಚಾಯತ್‍ಗಳಿಗೆ ನಡೆದ ಚುನಾವಣೆಯಲ್ಲಿ, ಎರ್ನಾಕುಲಂ ಜಿಲ್ಲೆಯ ಕಿಳಕ್ಕಂಬಳಂ ಪಂಚಾಯತ್‍ನಲ್ಲಿ ಅಣ್ಣಾ-ಕೈಟೆಕ್ಸ್ ಎಂಬ ಕಂಪೆನಿ ತನ್ನ ಹುರಿಯಾಳುಗಳನ್ನ ನಿಲ್ಲಿಸಿ 19 ಸ್ಥಾನಗಳಲ್ಲಿ 17 ಸ್ಥಾನಗಳನ್ನು ಬಾಚಿಕೊಂಡಿದೆ. ಪ್ರಾಯಶಃ ಮೊಟ್ಟಮೊದಲ ಬಾರಿಗೆ ಕಾರ್ಪೊರೇಟ್ ಕಂಪೆನಿಯೊಂದು ನೇರಾನೇರಾ ಚುನಾವಣೆಗೆ ತನ್ನ ಅಭ್ಯರ್ಥಿಗಳನ್ನು ಇಳಿಸಿ ಪಂಚಾಯತನ್ನು ವಶಪಡಿಸಿಕೊಂಡಿದೆ.
ತನ್ನ ಸಾಮಾಜಿಕ ಜವಾಬ್ದಾರಿ(CSR) ಖಾತೆಯ ಮೂಲಕ ಕಳೆದ ಎರಡು ವರ್ಷಗಳಲ್ಲಿ ಈ ಪಂಚಾಯತ್ ನಲ್ಲಿ 25 ಕೋಟಿ ರೂಗಳಷ್ಟು ಕಾಮಗಾರಿ ಈ ಕಂಪೆನಿ ಮಾಡಿದೆ. ಅದಕ್ಕೆ ಇನ್ನೊಂದು ಕಾರಣವೂ ಇದೆ. ಈ ಹಳ್ಳಿಯಲ್ಲೇ ಕೈಟೆಕ್ಸ್ ಕಂಪೆನಿಯ ಉತ್ಪಾದನಾ ಘಟಕಗಳು ಇವೆ. ಕೈಟೆಕ್ಸ್ ಕಂಪೆನಿ ಕೇರಳದ ವಿಶ್ವಾಸಾರ್ಹ ಬ್ರಾಂಡ್‍ಗಳಲ್ಲಿ ಒಂದು. ಅಲ್ಯುಮಿನಿಯಂ ಪಾತ್ರೆಗಳ ಉತ್ಪಾದನೆಯಲ್ಲಿ ಅಭೂತಪೂರ್ವ ಲಾಭ ಗಳಿಸಿದ ಈ ಕಂಪೆನಿ ಈಗ ಸಿದ್ಧ ಉಡುಪು ತಯಾರಿಕಾ ಘಟಕಗಳನ್ನೂ ಹೊಂದಿದೆ. ವರ್ಷಕ್ಕೆ ಸುಮಾರು 1,200 ಕೋಟಿ ವಹಿವಾಟು ಹೊಂದಿರುವ ವಾಣಿಜ್ಯ ಸಂಸ್ಥೆ ಇದು.
ಚುನಾವಣೆಗೆ ಯಾಕೆ ತಂಡ ನಿಲ್ಲಿಸುವ ನಿರ್ಧಾರ ಮಾಡಿದಿರಿ ಎಂದು ಕಂಪೆನಿಯವರನ್ನು ಕೇಳಿದರೆ, ಸ್ಥಳೀಯ ಪಂಚಾಯತ್ ಆಡಳಿತÀ ನಮ್ಮ ಸಾಮಾಜಿಕ ಸೇವೆಗೆ ಕಿರುಕುಳ ನೀಡುತ್ತಿತ್ತು. ಅದಕ್ಕೇ ನಮ್ಮವರನ್ನೇ ನಿಲ್ಲಿಸಿ ಗೆಲ್ಲಿಸುವ ನಿರ್ಧಾರ ಮಾಡಿದೆವು ಎನ್ನುತ್ತಾರೆ. ಈ ಕಂಪೆನಿಯ ಸಿಎಸ್‍ಆರ್. ಘಟಕದ ಹೆಸರೇ “Twenty 20”..!!
ಇದುವರೆಗೆ ಸ್ಥಳೀಯ ಪಂಚಾಯತ್‍ನ ನಿಯಂತ್ರಣ ಹೊಂದಿದ್ದ ಸಿಪಿಎಂ ನಾಯಕತ್ವದ ಆಡಳಿತ ಮಂಡಳಿ ಹೇಳುವುದೇನೆಂದರೆ, ಈ ಕಂಪೆನಿಯ ಉತ್ಪಾದನಾ ಘಟಕದ ಮಾಲಿನ್ಯದ ಕುರಿತು ನಾವು ಆಕ್ಷೇಪ ಹೇಳಿದ್ದೆವು ಅಂತ. ಆದರೆ, ಈ ಬಾರಿಯ ಚುನಾವಣೆಯಲ್ಲಿ ಪೂರಂಪೂರಾ ಸೀಟು ಗೆಲ್ಲುವ ಮೂಲಕ ಈ ಕಂಪೆನಿ ಇಡೀ ಪಂಚಾಯತಿನ ನಿಯಂತ್ರಣ ಪಡೆದಿದೆ. 2020ರ ವೇಳೆಗೆ ಕಿಳಕ್ಕಂಬಳಂ ಪಂಚಾಯತ್ ದೇಶದ ಅತ್ಯುತ್ತಮ ಪಂಚಾಯತ್ ಆಗಬೇಕು ಎಂಬುದು ನಮ್ಮ ಗುರಿ ಎಂದು ಕಂಪೆನಿ ಹೇಳುತ್ತಿದೆ.
ನೆಟ್ಟಗೆ ಕೆಲಸ ಮಾಡದ ಸದಸ್ಯರನ್ನು ರಾಜೀನಾಮೆ ಕೊಡಿಸಿ ಮನೆಗೆ ಕಳಿಸುವ ತನ್ನ ನಿರ್ಧಾರವನ್ನೂ ‘ಮರಳಿ ಕರೆಸುವ ಹಕ್ಕು” (Right to Recall)ಎಂಬ ಅಪ್ಯಾಯಮಾನ ಪದಗಳೊಂದಿಗೆ ಕಂಪೆನಿ ಘೋಷಿಸಿದೆ. ನೆಟ್ಟಗೆ ಕೆಲಸ ಮಾಡದಿರುವ ಮಾನದಂಡ ಏನು ಎಂಬ ಬಗ್ಗೆ ಕಂಪೆನಿ ಏನೂ ಹೇಳಿಲ್ಲ! ಪಂಚಾಯತಿನ 8500 ಪ್ರಜೆಗಳು ಈ ಕಂಪೆನಿಗೆ ಜೈ ಎಂದಾಗಿದೆ; ಕನಿಷ್ಠ ಮುಂದಿನ ಐದು ವರ್ಷ ಕಾಲ!!
ಇಲ್ಲಿನ ಕಾರ್ಮಿಕರ ಶ್ರಮದ ಒಂದಂಶವನ್ನು ಊರಿನ ರಸ್ತೆ , ಕುಡಿಯುವ ನೀರು, ವೈದ್ಯಕೀಯ ಶುಶ್ರೂಷೆಗೆ ವೆಚ್ಚ ಮಾಡುವ ಮೂಲಕ ಊರವರ ಕೃತಜ್ಞತೆ, ಮತ್ತು ಉದಾರ ಕೊಡುಗೆಯ ಹೆಸರು ಎರಡನ್ನೂ ಈ ಕಂಪೆನಿ ಪಡೆದುಕೊಂಡಿದೆ. ಜನಕ್ಕೆ ಈ ಕಂಪೆನಿಗಳ “ಸೇವೆ” ಯಾಕೆ ಇಷ್ಟವಾಗುತ್ತದೆ? ಯಾಕೆ ನಮ್ಮ ಮಧ್ಯಮ ವರ್ಗವೂ , ಸರಕಾರಗಳೂ ಈ “ಸೇವೆ” ಬಗ್ಗೆ ಸಡಗರ ಪಡುತ್ತವೆ? ದೇಶದ ಅತ್ಯುತ್ತಮ ಪಂಚಾಯತ್ ರಾಜ್ ವ್ಯವಸ್ಥೆ ಇರುವ ರಾಜ್ಯವೆಂದು ನಂಬಲಾದ ಕೇರಳದಲ್ಲೇ ಇದು ಘಟಿಸಿದೆಯೆಂದರೆ ಇದರ ದೂರಗಾಮಿ ಪರಿಣಾಮವೇನು? ನಾವು ಚರ್ಚಿಸಬೇಕಾದ ಅಂಶಗಳೇನು?
ಇದೇನು ಯಕ್ಷಪ್ರಶ್ನೆಯಲ್ಲ. ಪ್ರಭುತ್ವ ಮತ್ತು ಪ್ರಜಾಸತ್ತೆ ತಮ್ಮ ಕರ್ತವ್ಯಚ್ಯುತಿ ಮಾಡಿದಾಗ ಉಂಟಾಗುವ ನಿರ್ವಾತವನ್ನು ಯಾರಾದರೂ ತುಂಬಬೇಕಲ್ಲ.. ಕುಡಿಯುವ ನೀರು, ಶಾಲೆ, ರಸ್ತೆ, ಕೃಷಿ/ಉದ್ಯೊಗ ಮಾರ್ಗದರ್ಶನ ಇವೆಲ್ಲದರಲ್ಲೂ ದಾರಿದ್ರ್ಯ ಅನುಭವಿಸುತ್ತಿರುವ ಸಮುದಾಯವೊಂದು ಗುಟುಕಿನಷ್ಟಾದರೂ ಸಹಾಯ ಸಿಕ್ಕಾಗ ಕೃತಜ್ಞವಾಗುತ್ತದೆ. ಆದರೆ ಇದು ಪ್ರಜಾಸತ್ತೆಯಲ್ಲಿ ಅಪೇಕ್ಷಿಸಬೇಕಾದ ವಿದ್ಯಾಮಾನವಲ್ಲ.
ಸಮುದಾಯದ ಅಗತ್ಯಗಳಿಗೆ ಸ್ಪಂದಿಸುವ ಬದಲು ಗುತ್ತಿಗೆ ಏಜೆಂಟರ ತರ ಕೆಲಸ ಮಾಡುತ್ತಿರುವ ಇಮೇಜ್ ನಮ್ಮ ರಾಜಕೀಯ ನಾಯಕರುಗಳಿಗೆ (ಹಿರಿ-ಕಿರಿ ಎಲ್ಲಾ) ಈಗಾಗಲೇ ಇದೆ. ಕರ್ನಾಟಕದಲ್ಲಿ ಕೈಗಾರಿಕೆ ಶುರು ಮಾಡಲು ಉದ್ದೇಶಿಸಿದ ಕಂಪೆನಿಗೆ ಅಧಿಕಾರಶಾಹಿ ಜೊತೆ ಏಗಲು ನಿಯುಕ್ತಿ ಹೊಂದಿದ್ದ ಏಜೆಂಟನೊಬ್ಬ ನನ್ನಲ್ಲಿ ಹೇಳಿದ್ದ, “ನೋಡಿ ಸಾರ್, ಇಷ್ಟು ದಿನ ಯಾರೋ ರಾಜಕಾರಣಿಯ ಮೂಲಕ ಮಾಡಿಸುತ್ತಿದ್ದೆವು,. ಅದಕ್ಕೆ ದುಪ್ಪಟ್ಟು ಖರ್ಚು, ಈಗ ನೇರ ಅಧಿಕಾರಿಗಳ ಜೊತೆ ವ್ಯವಹಾರ ಕುದುರಿಸಿದರೆ ಸಾಕು.” ಅಂತ. ಈ ಬೈ ಪಾಸ್ ಮಾಡುವ ಅನುಕೂಲ ವಾಣಿಜ್ಯೋದ್ಯಮಿಗಳು ಬೇಡವೆಂದಾರೇ?
ನಮ್ಮ ರಾಜಕೀಯ ಪಕ್ಷಗಳು/ನೇತಾರರು ಅಭಿವೃದ್ಧಿಯ ಬಗ್ಗೆಯಾಗಲೀ ಅಭಿವೃದ್ಧಿಯ ಪರಿಕಲ್ಪನೆ ಬಗ್ಗೆಯಾಗಲೀ ಗಂಭೀರವಾಗಿ ಚಿಂತಿಸದೇ ಎಷ್ಟೋ ವರ್ಷಗಳಾದವು. ಜನರನ್ನೂ ಅಧಿಕಾರಶಾಹಿಯನ್ನೂ ‘ಮ್ಯಾನೇಜ್’ ಮಾಡುವುದಷ್ಟೇ ಇವರ ವೃತ್ತಿಯಾದಂತಿದೆ. ಈ ಸಂಪರ್ಕ ಕಡಿತದ ಪರಿಣಾಮವೆಂದರೆ, ಭೌತಿಕ ಸ್ಥಾವರಗಳು ಬರುತ್ತಿದ್ದಂತೆ ಜನಜೀವನದ ಕಷ್ಟಗಳ ಒಳಸುಳಿ ಅರ್ಥವಾಗುವುದಿಲ್ಲ. ಇದರೊಂದಿಗೆ ಅನುದಾನವಿರುವುದೇ ಒಂದಂಶ ತಿನ್ನಲು ಎಂಬ ನಿರ್ಲಜ್ಜ ಹುಂಬ ನಂಬಿಕೆ ಆಡಳಿತದ ಪ್ರಕ್ರಿಯೆಯನ್ನೇ ಅಸ್ತವ್ಯಸ್ತಗೊಳಿಸಿದೆ. ಅಭಿವೃದ್ಧಿಯ ಕಾಮಗಾರಿಗಳು ಲಭಿಸಬೇಕಾದ್ದು ಸಮುದಾಯದ ಹಕ್ಕು; ಈ ಅಭಿವೃದ್ಧಿಯ ಮೇಲೆ ಒಂದು ಜನಜೀವನ ಸುರಳೀತವಾಗಬೇಕು ಎಂಬ ನೆಲೆ ಅರ್ಥವಾದರೆ, ನಮ್ಮ ಯೋಜನೆ, ಅನುದಾನ, ಅನುಷ್ಠಾನಗಳ ವೈಖರಿಯೇ ಬದಲಾಗುತ್ತದೆ. ಇದಕ್ಕೆ ತಾಳಮೇಳವಿಲ್ಲದಾಗ ಸಮುದಾಯಗಳು ದಿಕ್ಕೆಡುತ್ತವೆ. ಆಗ ತಲುಪವ ಸ್ಥಿತಿ ಕೇರಳದ ಮಾದರಿ.
ಕರ್ನಾಟಕವನ್ನೇ ತೆಗೆದುಕೊಳ್ಳಿ, ನಮ್ಮಲ್ಲಿರುವ ಸರಿಸುಮಾರು ಆರು ಸಾವಿರ ಪಂಚಾಯತುಗಳಲ್ಲಿ ಅರ್ಧಕ್ಕರ್ಧ ಪಂಚಾಯತುಗಳ ಮೂಲಭೂತ ಸೌಕರ್ಯಗಳಿಗೆ ಒಂದು ತರ್ಕವೇ ಇಲ್ಲ, ಅದನ್ನು ನಿತ್ಯ ದೈನಿಕದಲ್ಲಿ ನಿರ್ವಹಿಸಲು ಬೇಕಾದ ಸಾಮುದಾಯಿಕ ಕೌಶಲ್ಯ ಸೃಷ್ಟಿಯಾಗಿಲ್ಲ. ಆದ್ದರಿಂದಲೇ ಮನಸ್ಸು ಮಾಡಿದರೆ ಉದ್ಯಮಪತಿಗಳೂ ಚಿಲ್ಲರೆ ಹೂಡಿಕೆ ಮೂಲಕ ಅರ್ಧಕ್ಕರ್ಧ ಪಂಚಾಯತುಗಳನ್ನು ಕಬ್ಜಾ ಮಾಡುವುದು ಕಷ್ಟವಲ್ಲ.
ಮೊನ್ನೆ ಕಂಪೆನಿಯೊಂದು ಕುಡಿಯುವ ನೀರು ಮತ್ತು ಬೀಜ ವಿತರಿಸಿ ಗ್ರಾಮಸ್ಥರ ಮನಗೆದ್ದ ಸುದ್ದಿ ವರದಿಯಾಗಿತ್ತು. GIM ಗೆ ಮುನ್ನುಡಿಯಾಗಿ, ನಮ್ಮ ಐಟಿಬಿಟಿ ಸಚಿವರ ಹಳ್ಳಿಯಲ್ಲಿ ಅಂತರ್ಜಾಲ ವ್ಯವಸ್ಥೆ ಮಾಡಿಕೊಡುವ ಉದಾರ ಹೆಜ್ಜೆಯನ್ನು ಕಂಪೆನಿಯೊಂದು ಪ್ರಕಟಿಸಿದ ಸುದ್ದಿಯೂ ಬಂದಿತ್ತು. ಈಗ ಇವಕ್ಕೆಲ್ಲಾ ರಾಜಕೀಯ ಆಸೆ ಇರಲಾರದು. ಆದರೆ ಲಾಭದ ಆಕಾಂಕ್ಷೆ ಇಲ್ಲದೇ ಯಾವ ವ್ಯಾಪಾರೀ ಸಂಸ್ಥೆಯೂ ದಾನ ನೀಡದು. ಧನಾರ್ಜನೆಯ ಬಳಿಕ ಅಧಿಕಾರ/ಕೀರ್ತಿಯ ಹಪಾಹಪಿ ಇರುತ್ತದೆ!! ಯಶಸ್ವಿ ಉದ್ದಿಮೆಪತಿಗಳು ರಾಜಕಾರಣಕ್ಕಿಳಿದ ಮಾದರಿ ನಮ್ಮ ಮುಂದಿದೆಯಷ್ಟೇ.
ಈಗಾಗಲೇ ಅಂದರೆ ಕಳೆದ ದಶಕದಿಂದ ಸರ್ಕಾರ ಕಾರ್ಪೋರೇಟ್ ಸಹಾಯವನ್ನು ವ್ರತವೆಂಬಂತೆ ಯಾಚಿಸುತ್ತಿದೆ. ಅದರ ಮಧ್ಯಪ್ರವೇಶವನ್ನು ವಿಶೇಷ ಕರುಣೆಯ ಹೆಜ್ಜೆಯೆಂಬಂತೆ ಬಿಂಬಿಸಲಾಗುತ್ತಿದೆ. ನಮ್ಮ ಸ್ವಯಂಸೇವಾಸಂಸ್ಥೆಗಳೂ ಈ ಸಿಎಸ್‍ಆರ್ ಸಹಾಯ ನಿರೀಕ್ಷಿಸಿ ಗ್ರಾಮಾಭಿವೃದ್ಧಿಗೆ ಟೊಂಕ ಕಟ್ಟಿ ನಿಂತಿವೆ. ಆದರೆ, ಈ ಕಾರ್ಪೋರೇಟ್ ಮೇಧಾವಿತನ ಹೇಗಿದೆಯೆಂದರೆ, ಬಹುತೇಕ ಕಂಪೆನಿಗಳು ತಮ್ಮದೇ ಆದ ದತ್ತಿ ಸಂಸ್ಥೆಗಳನ್ನು ಸ್ಥಾಪಿಸಿ ಬಲಗೈಯಿಂದ ಎಡಗೈಗೆ ವರ್ಗಾಯಿಸಿ “ಜನಸೇವೆ” ಮಾಡುತ್ತಿವೆ. ಈ ಸೇವೆಯಿಂದ ಸ್ವಯಮಾಡಳಿತದ ಪಂಚಾಯತುಗಳ ನಿಯಂತ್ರಣಕ್ಕೆ ಇರುವುದು ಒಂದೇ ಹೆಜ್ಜೆ. ಕೈಯಳತೆಯ ದೂರದಲ್ಲಿರುವ ಘಾಸಿಗೊಂಡ ಪಕ್ಷಿ ನಮ್ಮ ಪಂಚಾಯತುಗಳು..
ಕೇರಳದ ಉದಾಹರಣೆ , ಈ ನಿರ್ಧಾರದ ಮೊದಲ ಉದಾಹರಣೆ ಅಷ್ಟೇ. ನಮ್ಮ ಪಂಚಾಯತ್‍ಗಳು ಪಕ್ಷರಹಿತ ಸದಸ್ಯರ ಗುಂಪು ಎಂಬುದು ಕಾನೂನಿನ ಪೊಳ್ಳು ಹೇಳಿಕೆ ಎಂಬುದು ಎಲ್ಲರಿಗೂ ಗೊತ್ತು. ಆದ್ದರಿಂದಲೇ ಬಾಡಿಗೆ ತಾಯ್ತನದಂತೆ ಕಂಪೆನಿಯೊಂದು “ಗ್ರಾಮೋದ್ಧಾರಕ ಸಂಘ”ದ ಮೂಲಕ ಅಭ್ಯರ್ಥಿಗಳನ್ನು ಇಳಿಸಲು ಯಾವ ಕಾನೂನು ಅಡ್ಡಿಯಾಗಲಾರದು!. ಆದ್ದರಿಂದಲೇ ಇದನ್ನು ಕಾನೂನಿನ ಹಗ್ಗದ ಮೂಲಕ ಕಟ್ಟಲು ಸಾಧ್ಯವಿಲ್ಲ. ನಮ್ಮ ಗ್ರಾಮಗಳ ಮಂದಿಯ ಅರಿವಿನ ಮಟ್ಟವಾಗಲೀ, ಸಹಾಯವನ್ನು ಸ್ಮರಿಸುವ ಸಜ್ಜನಿಕೆಯಾಗಲೀ ಕಡಿಮೆಯಾಗಿಲ್ಲ. ಆದರೆ ಆತ್ಮಗೌರವ ಮತ್ತು ಸ್ವಾಯತ್ತತೆಯ ಬಗ್ಗೆ ಅರಿವು ಎಷ್ಟಿದೆ ಎಂಬುದು ನಮ್ಮ ಗಮನ ಸೆಳೆಯಬೇಕು. ನಮ್ಮ ರಾಜಕೀಯ ಪಕ್ಷಗಳು ಇದನ್ನು ಮುಖ್ಯವೆಂದು ಪರಿಗಣಿಸದಿದ್ದರೆ, ನೋಡನೋಡುತ್ತಿದ್ದಂತೆ ಈ ಪಕ್ಷಗಳೂ ಜೋಕರ್‍ಗಳ ತರ ಇಸ್ಪೀಟಿನಲ್ಲಿ ಎಲ್ಲಾದರೂ ಹೊಂದಿಕೊಳ್ಳುವ ಎಲೆಯಾಗಿ ಅರ್ಥ ಕಳೆದುಕೊಳ್ಳುತ್ತವೆ.
ಭಾವನಾತ್ಮಕ ಧಾರ್ಮಿಕ ವೈಪರೀತ್ಯಗಳ ಬಗ್ಗೆ ನಮ್ಮ ಬಹುತೇಕ ಮಾಧ್ಯಮ ಮತ್ತು ಬೌದ್ಧಿಕ ಚರ್ಚೆ ನಡೆಯುತ್ತಿರುವ ಈ ದಿನಗಳಲ್ಲಿ ಕ್ಷಯ ಬಡಿದು ಕ್ಷೀಣವಾಗಿ ಕೆಮ್ಮುತ್ತಿರುವ ನಮ್ಮ ಗ್ರಾಮಗಳ ಗೂರಲು ದನಿ ಯಾರಿಗೂ ಕೇಳಿಸುತ್ತಿಲ್ಲ. ಹೊಸ ಅಪಾಯದ ಸೂಚನೆಗೆ ನಾವು ಗಮನಕೊಡದಿದ್ದರೆ, ನಮ್ಮ ಪ್ರಜಾಸತ್ತೆಯ ರಾಜಕೀಯ ಸಾಮಾಜಿಕ ಬುನಾದಿ ನಾವು ಗಮನಿಸುವ ಮೊದಲೇ ಕುಸಿದಿರುತ್ತದೆ. ಮತ್ತೆ ಉಳಿಯುವುದು ಸರ್ಕಸ್ ಹುಲಿಗಳಂತೆ ಪಳಗಿಸಲ್ಪಟ್ಟ ‘ಸುಖೀ ಸಮುದಾಯಗಳು’ ಮಾತ್ರಾ. ಹಾಲಿವುಡ್‍ನ ಹಲವಾರು ಸಿನೆಮಾಗಳು ಭವಿಷ್ಯದ ಇಂಥಾ ಸ್ಥಿತಿಯ ಬಗ್ಗೆ ರಮ್ಯ ಸಿನೆಮಾಗಳನ್ನು ತಯಾರಿಸಿದೆ. ಇದು ನಮ್ಮ ಹಳ್ಳಿಗಳ ಭವಿಷ್ಯವಾದರೆ?
ದಕ್ಷಿಣ ಅಮೆರಿಕಾದ ಹತ್ತು ಹಲವು ದೇಶಗಳಲ್ಲಿ ಈ ರೀತಿಯ ಕಾರ್ಪೋರೇಟ್ ಸಹಾಯ ಸಿಕ್ಕಿ ಕೃತಜ್ಞ ಸಮುದಾಯಗಳ ದ್ವೀಪಗಳು ಸೃಷ್ಟಿಯಾಗಿವೆ ಎಂದು ನನ್ನ ಗೆಳತಿಯೊಬ್ಬರು ಹೇಳುತ್ತಿದ್ದರು. ಸಮುದಾಯ ನಾಯಿ ತರ ಇದ್ದರೇ ಎಲ್ಲರಿಗೂ ತೃಪ್ತಿ. ಬೆಕ್ಕಿನ ತರ ಅಲ್ಲ.!! ಬೆಕ್ಕು ಹಾಲು ಹಾಕುವುದು ನಮ್ಮ ಕರ್ತವ್ಯ ಎಂದು ಬಗೆಯುತ್ತದೆ; ಅದಕ್ಕೇ ಅದು ಬಾಲ ಅಲ್ಲಾಡಿಸುವುದಿಲ್ಲ.!