ನಿಂತೇ ಪಯಣಿಸುವ ಮಹಾದೇವ – ಪ್ರೊ. ಸ.ಉಷಾ
[ ಕನ್ನಡ ಉಪನ್ಯಾಸಕರಾದ ಪ್ರೊ. ಸ.ಉಷಾ ಮತ್ತು ಮಂಜಪ್ಪ ಅವರು ಮಹಾದೇವ ಅವರ ಎಂ.ಎ ಸಹಪಾಠಿಗಳಾಗಿದ್ದು, ಸ.ಉಷಾ ಅವರು ಬರೆದ ಈ ಲೇಖನ ಅಭಿನವ ಪ್ರಕಾಶನದಿಂದ ಪ್ರಕಟವಾದ ದೇಮ ಸಾಹಿತ್ಯ ಕುರಿತ ಸಂಕಲನ “ಯಾರ ಜಪ್ತಿಗೂ ಸಿಗದ ನವಿಲುಗಳು” ಸಂಕಲನದಲ್ಲಿ ದಾಖಲಾಗಿದೆ.]
ದೇವನೂರ ಮಹಾದೇವರ ‘ಎದೆಗೆ ಬಿದ್ದ ಅಕ್ಷರ’ ಪ್ರಕಟವಾಯಿತು ಅಂತ ಪತ್ರಿಕೆಗಳಲ್ಲಿ ಓದಿದೆ. ಗೆಳತಿ ಪದ್ಮಾಕ್ಷಿ ತಮ್ಮ ಆಫೀಸಿನ ಯಾವುದೋ ಸಮಾರಂಭಕ್ಕೆ ಬಂದ ಅತಿಥಿಗಳಿಗೆ ಅದನ್ನೇ ತರಿಸಿ ಕೊಡುಗೆಯಾಗಿ ಕೊಟ್ಟೆ ಅಂದರು. ನಾನು ನನಗೂ ಒಂದು ಬೇಕು ಕಣ್ರೀ ತೆಗೆದಿಟ್ಟಿರಿ ಅಂದೆ.
ಹೀಗೆ ಮಧ್ಯಾನ್ಹದ ಮಾತುಕತೆಯಲ್ಲಿ ಗೆಳತಿ ರೂಪಾ ನೀವು ‘ಎದೆಗೆ ಬಿದ್ದ ಅಕ್ಷರ’ ಕೊಂಡ್ಕೋಬೇಡಿ, ನಾನು ಕಳಿಸಿಕೊಡ್ತೀನಿ ಅಂದರು. ಮಾರನೇ ದಿನವೇ ಪುಸ್ತಕ ಬಂತು. ಪದ್ಮಾಕ್ಷಿಗೆ ಹೇಳಿದೆ ಪುಸ್ತಕ ಬಂದಿದೆ ಕಣ್ರಿ ಅಂತ. ಹೀಗೇ ಒಂದು ದಿನ ರವಿಕುಮಾರ್ ಫೋನ್ ಬಂತು, “ಯಾರ ಜಪ್ತಿಗೂ ಸಿಗದ ನವಿಲುಗಳು” ಮತ್ತೆ ಮುದ್ರಿಸುತ್ತಿದ್ದೇವೆ. ಏನಾದರೂ ಬರೆದುಕೊಡಿ ಅಂತ. ದೇವನೂರು ಬಗ್ಗೆ ಅವರ ಬರಹದ ಬಗ್ಗೆ ಸಂತೋಷವಾಗಿ ಬರೆಯಬಹುದು, ಏನೂ ಒತ್ತಾಯ ಒತ್ತಡಗಳಿಲ್ಲದೇ ಅನಿಸಿ ಒಪ್ಪಿಕೊಂಡೆ.
ದೇವನೂರು ಕಾಲೇಜಿನ ಲೆಕ್ಕದಲ್ಲಿ ನಮಗೆ ಜೂನಿಯರ್, ನಾನು ನನ್ನ ಮಂಜಪ್ಪ ಎರಡನೇ ಎಂ.ಎ.ಯಲ್ಲಿದ್ದಾಗ ಮಹಾದೇವ ಮೊದಲ ಎಂ.ಎ.ಯಲ್ಲಿದ್ದರು. ಗಂಗೋತ್ರಿಯಲ್ಲಿ ಸುಮಾರು 72ರಲ್ಲಿ ಇರಬಹುದೇನೋ ಘಟಿಕೋತ್ಸವ ನಡೆಯುವಾಗ ಮಹಾದೇವ ಮತ್ತು ಅವರ ಸಂಗಾತಿಗಳು ಕಪ್ಪು ಬಾವುಟ ತೋರಿಸಿದರಂತೆ. ಪೊಲೀಸರು ಅವರನ್ನು ಒಂದು ದಿನವೋ ಏನೋ ಒಳಗೆ ಹಾಕಿದ್ದರಂತೆ’ ಅಂತ ಸುದ್ದಿಗಳು ಹರಿದಾಡಿದ್ದವು.
`ನಮಗೆ ಗಂಗೋತ್ರಿಯಲ್ಲಿ ಮೇಷ್ಟ್ರಾಗಿದ್ದ ಸುಧಾಕರ್ ಅವರು ಒಂದು ದಿನ ಕರೆಸಿಕೊಂಡು ಮೈಸೂರು ಆಕಾಶವಾಣಿಯಲ್ಲಿ ಒಂದು ಯುವವಾಣಿ, ಪ್ರೋಗ್ರಾಂ ಮಾಡ್ತಾರಂತೆ, ಹೋಗಿ ಮಾತಾಡಿ ಬನ್ನಿ ಎಂದು ಹೇಳಿದರು. ಹಾಗೆ ಹೋಗಿ ಮಾತಾಡಿದ ಕಾರ್ಯಕ್ರಮದಲ್ಲಿ ದೇವನೂರೂ ಇದ್ದರು. ವಾಸುದೇವ ಅಂತ ಒಬ್ಬರು ಇದ್ದರು ಅಂತ ನೆನಪು. ಆ ಕಾರ್ಯಕ್ರಮ ತ.ರಾ.ಸು ಅವರು ಮಾಡರೇಟರ್ ಆಗಿ ಅವರ ಜೊತೆಗೆ ಪ್ರಭಾಕರ ಎಂಬ ಅವರ ಶಿಷ್ಯರೊಬ್ಬರು ಬಂದಿದ್ದರು. ನಮ್ಮ ಒಲವುಗಳು ತ.ರಾ.ಸು ಅವರ ಸಾಹಿತ್ಯದ ಒಲವುಗಳಿಗಿಂತ ಸ್ಪಷ್ಟವಾಗಿ ಬೇರೆಯಾಗಿದ್ದವು. ತ.ರಾ.ಸು. ಅವರು ಒಂದು ಸುತ್ತು ಎಲ್ಲರೂ ಮಾತಾಡಿದ ಮೇಲೆ ಏನೇನಾದರೂ ಹೇಳಿ- ಒಪ್ಪಿಕೊಳ್ತೀರಾ, ಒಪ್ಪಿಕೊಳ್ತೀರಾ ಅಂತ ಕೇಳುತ್ತಿದ್ದರು. ನಮಗೆ ಒಳಗೆ ಕಿರಿಕಿರಿಯಾಗುತ್ತಿತ್ತು. ಆಗ ಮಹಾದೇವ ಹೇಳಿದ್ದು ‘ಹಾಗೆ ಒಪ್ಪಿಕೊಳ್ತೀರಾ, ಒಪ್ಪಿಕೊಳ್ತೀರಾ ಅಂತ ಕೇಳಿದ್ರೆ ನಮಗೆ ಇಷ್ಟವಾಗಲ್ಲ. ಯಾಕೆ ನೀವು ನಮ್ಮನ್ನು ಒಪ್ಪಿಸೋಕೆ ಪ್ರಯತ್ನಿಸ್ತೀರ?’ ಆದರೆ ಅಷ್ಟೊತ್ತಿಗೆ ಆಕಾಶವಾಣಿಯವರು ನಮಸ್ಕಾರ ಅಂತ ಹೇಳಿ ರೆಕಾರ್ಡಿಂಗ್ ಕಟ್ ಮಾಡಿ ಆಗಿತ್ತು. ನನಗೂ ತ.ರಾ.ಸು, ಅವರ ಒಪ್ಪಿಸುವ ಮಾತು ಸ್ವಲ್ಪ ಮುಜಗರವೇ ಆಗಿದ್ದರೂ ಅದನ್ನು ಬಾಯಿಬಿಟ್ಟು ಹೇಳಿದವರು ಮಹದೇವ ಆಗಿದ್ದರು.
ಮಹದೇವ ನನ್ನ ಮಂಜಪ್ಪಗೆ ಹಾಸ್ಟೆಲ್ ಮೇಟ್ ಆಗಿದ್ದರು. ಹಾಗಾಗಿ ಈ ಪ್ಯಾರಾದಲ್ಲಿ ಹೇಳಿರುವ ಅನುಭವ-ನೆನಪು ನನ್ನದಲ್ಲ. ನನಗೆ ಮಂಜಪ್ಪ ಹೇಳಿದ್ದು, ಅದೂ ಮೊನ್ನೆ ಮೊನ್ನೆ. “ಎದೆಗೆ ಬಿದ್ದ ಅಕ್ಷರ”ವನ್ನು ನಾವಿಬ್ಬರೂ ಓದಿ ಅದರ ಬಗ್ಗೆ ನಮ್ಮಲ್ಲೇ ಮಾತಾಡಿಕೊಳ್ಳುತ್ತಿದ್ದಾಗ ಹೇಳಿದ್ದು, ಅವರ ಹಾಸ್ಟೆಲಿನ ಡೈನಿಂಗ್ ಹಾಲ್‌ನಲ್ಲಿ ಸಿನಿಮಾ ಹಾಡುಗಳನ್ನು ಹಾಕಿರುತ್ತಿದ್ದರಂತೆ. ಮಂಜಪ್ಪ ಅಲ್ಲಿ ಕೂತು ಕೈ ಬೆರಳುಗಳಲ್ಲಿ ತಬಲ ಬಡಿಯುತ್ತ ‘ಆಹಾ ಮೈಸೂರು ಮಲ್ಲಿಗೇ…’ ಎಂಬ ಹಾಡಿಗೆ ತನ್ನಯರಾಗಿ ಕೂತಿದ್ದಾಗ ಮಹದೇವ “ಯಾವ ಮಲ್ಲಿಗೆ ಮಂಜಪ್ಪನವರೇ” ಎಂದು ಕೇಳಿದರಂತೆ. ತಮ್ಮ ಪಾಡಿಗೆ ತಾವು ತಮ್ಮದೇ ಜಗತ್ತಿನಲ್ಲಿರುತ್ತಿದ್ದ ಮಹದೇವ ನಮ್ಮಿಬ್ಬರ ಒಡನಾಟವನ್ನು ಗುರ್ತಿಸಿದ್ದರು. ಎಂಬುದು ನನಗೆ ಬೆರಗಾಯಿತು.
ಗಂಗೋತ್ರಿಯಲ್ಲಿ ಒಂದು ಗಾಂಧಿಭವನವಿದೆ. ಅದು ಝೆನ್ ಕನ್ನಡಿಯ ಹಾಗೆ ಬೇರೆ ಬೇರೆಯವರಿಗೆ ಬೇರೆ ಬೇರೆ ಅನುಭವಗಳನ್ನು ಕೊಟ್ಟಿದೆ. ನನಗೂ ಮಂಜಪ್ಪಗೂ ಅದು ಸಂಜೆಯ ಕೆಂಬೆಳಕಿನಲ್ಲಿ ನಡೆದಾಡುತ್ತ ಭವಿಷ್ಯದ ಕನಸುಗಳನ್ನು ಕಾಣುವ ಪ್ರಿಯವಾದ ಜಾಗ. ಆದರೆ ಆ ಗಾಂಧಿಭವನದ ಹತ್ತಿರ ಮಹದೇವ ಮಾಡಿದ ಯಾವುದೋ ಒಂದು ಪ್ರತಿಭಟನೆಯನ್ನು ವಾಪಸ್ಸು ತೆಗೆದುಕೊಳ್ಳಬೇಕೆಂದು ಒಂದಷ್ಟು ಜನ ವಿ.ಸಿ. ಕಡೆಯ ಜನರು- ಅವರು ವಿದ್ಯಾರ್ಥಿಗಳೋ, ಪುಂಡರೋ, ರಾಜಕೀಯ ಪ್ರೇರಿತರೋ ತಿಳಿಯದು. ಮಹದೇವರನ್ನು ದೈಹಿಕವಾಗಿ ಆಕ್ರಮಿಸಿ ಬಟ್ಟೆ ಹಿಡಿದೆಳೆದು ಎಳೆದಾಡಿ ಹಿಂಸಿಸಿದರಂತೆ. ಆದರೆ ಮಹದೇವ ತಮ್ಮ ಪ್ರತಿಭಟನೆಯನ್ನು ವಾಪಸು ಪಡೆಯಲಿಲ್ಲ. ತನ್ನ ಪರ ಯೋಚಿಸಬಹುದಾದ ಜನಗಳ ಸಹಾಯವನ್ನು ಪಡೆಯಲಿಲ್ಲ. ನೀವು ಏನಾದರೂ ಮಾಡಿ ನಾನು ಹೀಗೇ ಎಂದು ತನ್ನನ್ನು ತಾನು ದೃಢವಾಗಿ ಒಪ್ಪಿಕೊಂಡರು. ಸೆಮಿನಾರುಗಳಲ್ಲಿ ಮಿಂಚದ ನಸುಬೆಳೆದ ಗಡ್ಡದೊಡನೆ ಅನ್ಯಮನಸ್ಕರಾದಂತೆ ಕ್ಯಾಂಪಸ್ಸಿನಲ್ಲಿ ಅಡ್ಡಾಡುತ್ತಿದ್ದ ಮಹದೇವನ ಸಾಹಸಗಳನ್ನು ಕುರಿತು ಇಂಗ್ಲಿಷ್ ಎಂಬ ಹುಡುಗಿಯರೂ ಬೆರಗಿನಿಂದ ಗೌರವದಿಂದ ಮಾತಾಡಿಕೊಳ್ಳುತ್ತಿದ್ದುದು ಸುಳ್ಳಲ್ಲ. ”That Devanoor Mahadeva what guts he has I say ” ಎಂದು ಇಂಗ್ಲಿಷ್ ವಿಭಾಗದ ಬಾಬ್ ಕಟ್ ಹುಡುಗಿಯೊಬ್ಬಳು ಮೆಚ್ಚುಗೆಯಿಂದ ಉದ್ಗರಿಸಿದ್ದಳು.
ನಾವಿಬ್ಬರು ಅರಸಿಕೆರೆಯಲ್ಲಿ ಕಾಲೇಜು ಮೇಷ್ಟ್ರಾಗಿ ಕೆಲಸ ಮಾಡುತ್ತಿದ್ದಾಗ, ಒಮ್ಮೆ ಯಾವುದೋ ಸಮಾರಂಭಕ್ಕೆ ಸಿರಿಗೆರೆಗೆ ಹೋಗಬೇಕಾಯ್ತು, ಸುಮಾರು ಇಪ್ಪತ್ತು ಜನ ಮೇಷ್ಟ್ರುಗಳಲ್ಲಿ ಇಬ್ಬರು ಮಹಿಳೆಯರು. ರೈಲಿನಲ್ಲಿ ಒಂದು ಬೋಗಿಯ ತುಂಬಾ ನಾವೇ ಇದ್ದೆವು. ಆದರೆ ವಾಪಸು ಬರುವಾಗ ಭರ್ತಿ ರಶ್ಯು. ನಮ್ಮ ಜೊತೆಗಿದ್ದ ಮೇಷ್ಟ್ರುಗಳು ಮೊದಲು ಹತ್ತಿ ದಬಾಯಿಸಿ ದಮ್ಮಯ್ಯ ಅಂದು ಏನೇನೋ ಮಾಡಿ ತಮಗೆ ನಿಲ್ಲುವಷ್ಟು ಜಾಗ, ನನಗೂ ನನ್ನ ಗೆಳತಿಗೂ ಒಂದೊಂದು ಕೂರುವ ಜಾಗ ಸಂಪಾದಿಸಿ ಕೊಟ್ಟರು. ಸರಿ ರಾತ್ರಿಯಾಗುತ್ತಿತ್ತು, ಎಲ್ಲರಿಗೂ ನಿದ್ದೆ. ಎಲ್ಲ ಕೆಳಗೆ ಹಾಗೇ ಅನುಸರಿಸಿಕೊಂಡು ಕೂತು, ಒಂದಷ್ಟು ಜನ ಬಾಗಿಲ ಬಳಿ ಬಾಗಿಲುಗಳಿಗಾತು ಕೂತು ಎಲ್ಲರಿಗೂ ನಿದ್ರೆಯೋ ನಿದ್ರೆ. ಯಾವುದೋ ಜಂಕ್ಷನ್‌ನಲ್ಲಿ ರೈಲು ನಿಂತಾಗ, ಒಂದು ಗುಂಪು ಜನ ಬಂದು ರೈಲಿನ ಬಾಗಿಲು ಬಡಿದು ಹತ್ತಲು ನೋಡಿದ್ದಾರೆ. ನಮ್ಮ ಸಹೋದ್ಯೋಗಿಗಳು ಬಲವಾಗಿ ಬಾಗಿಲು ಮುಚ್ಚಿ ಬಾಗಿಲಿಗೆ ಅಡ್ಡ ಕೂತಿದ್ದಾರೆ. ಕೆಳಗಿರುವ ಗುಂಪು ಕೋಪೋದ್ರಿಕ್ತರಾಗಿ ಬಾಗಿಲು ತೆರೆಯುವಂತೆ ಕೇಳುತ್ತಿದ್ದಾರೆ. ಮಂಜಪ್ಪ ಯಾಕೋ ಬಾಗಿಲಿನತ್ತ ಹೋದರು, ಚಕಿತರಾಗಿ ಮಹದೇವ ಅಲ್ಲವಾ ಎಂದರು. ಕೊನೆಗೆ ನಮ್ಮ ಸಹೋದ್ಯೋಗಿಗಳು ಬಾಗಿಲು ತೆರೆದರು. ಮಹದೇವ ಮತ್ತು ಅವರ ಗುಂಪಿನ ಕೆಲವರು ಒಳಗೆ ಬಂದು ನಿಂತವರ ಜೊತೆ ನಿಂತರು ಇನ್ನಷ್ಟು ಅನುಸರಿಸಿಕೊಂಡು.
ಅವರು ಯಾವುದೋ ಸಾಮಾಜಿಕ ಹೋರಾಟದ ಮೀಟಿಂಗಿಗೆ ಹೋಗಿ ವಾಪಸು ಬೆಂಗಳೂರಿಗೋ ಮೈಸೂರಿಗೋ ಹೋಗುತ್ತಿದ್ದರು. ಸ್ವಲ್ಪ ಹೊತ್ತಿನಲ್ಲೇ ಅವರುಗಳಿಗೆ ಬೇರೆಲ್ಲೋ ಅನುಕೂಲಕರ ಜಾಗ ಸಿಕ್ಕಿ ಅವರು ಸ್ಥಳ ಬದಲಾವಣೆ ಮಾಡಿಕೊಂಡರು.
ದ್ಯಾವನೂರು ಕತೆಗಳಲ್ಲಿ ನಾನು ಅಮಾಸನನ್ನು ಪಾಠ ಮಾಡಿದ್ದೆ. ಆದರೆ ಅದು ಪಿ.ಯು.ಸಿ. ತರಗತಿಗೆ ಆಗಿತ್ತು. ಅದಕ್ಕೆ ರೂಪಿಸಿದ ಪ್ರಶ್ನೆಗಳು ಸಹ ಪದಗಳ ನಡುವಿನ ಒಂದನ್ನು ಹೊರಗೆಳೆಯುವಂತೆ ಇರಲಿಲ್ಲ. ನಾನು ಗಾಂಧಿ ಸಿನಿಮಾವನ್ನು ಈಗ ನೆನಪು ಮಾಡಿಕೊಂಡರೆ ಅದರಲ್ಲಿ ಇಂಗ್ಲಿಷ್ ಪೊಲೀಸರು ಗಾಂಧಿಗೆ ಹೊಡೆಯುತ್ತಿರುವಾಗಲೇ ಗಾಂಧಿ ಗುರುತುಚೀಟಿಗಳನ್ನು ಒಂದೊಂದಾಗಿ ಬೆಂಕಿಗೆ ಹಾಕುವ ದೃಶ್ಯ ನನಗೆ ಮಹದೇವ- ಗಾಂಧಿಮಂದಿರ ಮತ್ತು ಪುಂಡರು ಮಹದೇವನನ್ನು ಬೆದರಿಸುವ ಸನ್ನಿವೇಶದ ನೆನಪು ಬರುತ್ತದೆ. ಆಗ ಸಂಘಟನೆಯು ಗಾಂಧಿ ಸಿನಿಮಾ ನೋಡಬಾರದು ಎಂದು ನುಡಿದ ಕಟ್ಟಳೆಯನ್ನು ಮೀರಿ ಮಹದೇವ ಗಾಂಧಿ ಸಿನಿಮಾವನ್ನು ನೋಡಿದ್ದು ಅಲ್ಲದೆ ‘ನಾನು ಗಾಂಧಿ ಚಿತ್ರ ನೋಡಿದೆ’ ಎಂದು ಪತ್ರಿಕೆಯೊಂದರಲ್ಲಿ ಬರೆದಿದ್ದರು. ಅದು ಲಂಕೇಶ್ ಪತ್ರಿಕೆ ಎಂದು ನನ್ನ ನೆನಪು. ಮತ್ತೆ ಆ ಲೇಖನಕ್ಕೆ ಪ್ರತಿಯಾಗಿ ಒಬ್ಬರು ಮೆಟ್ಟಿಲುಗಳಿಲ್ಲದ ‘ಮಹಡಿ ಏರಿದ ಮಹದೇವ’ ಎಂದು ಬರೆದಿದ್ದರೆಂದೂ ನೆನಪು.
ಕುಸುಮಬಾಲೆಯನ್ನು ಓದಿದಾಗ ನಾನು ಅರಸೀಕೆರೆಯಲ್ಲೇ ಇದ್ದೆ. ಮನೆ ಬಿಟ್ಟು ಹೋದನೆಂದು ಹೇಳಲಾದ ಚನ್ನನನ್ನು ನಾನು ಬೊಂಬಾಯಿಯಲ್ಲಿ ಕಂಡೆ- ಎಂದು ಯಾರೋ ಹೇಳಿದ ಮಾತಿಗೆ ರೆಕ್ಕೆ ಪುಕ್ಕ ಹುಟ್ಟಿಕೊಂಡು ಚನ್ನನ ತಾಯಿ ತನ್ನ ಮಗ ಇಟ್ಟುಕೊಂಡಿರುವ ಅಂಗಡಿಯಲ್ಲಿ ರವೆ – ಟೀ ಪುಡಿ- ಸಕ್ಕರೆಗಳಿರುತ್ತವೆ ಎಂದು ಅವನ ‘ಐಭೋಗ’ವನ್ನು ದರ್ಶಿಸುತ್ತಾಳೆ. ಅದು ಅವಳ ಸಂಪತ್ತಿನ ಶಿಖರ ಕಲ್ಪನೆ. ಪಾಪ ಚನ್ನನ ಒಂದು ಹನಿ ರಕ್ತ ಸಿಡಿದದ್ದರ ಮೇಲೂ ಸುಣ್ಣ ಬಳಿಯಲ್ಪಟ್ಟಿದೆ.
ಒಡಲಾಳದ ದುಪಟಿ ಕಮಿಷನರು, ಕುಸುಮಬಾಲೆಯಲ್ಲಿ ಕುರಿ ಕಾಯುವ ಯಾಡ, ಏನಯ್ಯ ಚನ್ನ: ಎನ್ನುವ ಮೇಷ್ಟ್ರು, ತನ್ನ ಮಗನ ಗತಿ ಏನಾಯಿತೆಂದು ತಿಳಿಯದೆ ಅವನ ಅಂಗಡಿಯಲ್ಲಿ ರವೆ, ಟೀಪುಡಿ, ಸಕ್ಕರೆಗಳಿರುತ್ತವೆ ಎಂದು ಕನಸು ಕಾಣುವ ಚನ್ನನ ತಾಯಿ, ಗೋಡೆಗೆ ಸಿಡಿದುಳಿದ ರಕ್ತದ ಮೇಲೆ ಬಳಿದ ಸುಣ್ಣ-ಎಲ್ಲ ದೇವನೂರು ಬರಹ ಓದಿದವರ ಮನಸ್ಸಿನಲ್ಲಿ ಹಾಗೇ ಕೂತುಬಿಡುತ್ತವೆ. ಮೈಸೂರಿನಲ್ಲಿ ವೀಳೆದೆಲೆಯನ್ನೋ, ಮಲ್ಲಿಗೆ ಹೂವನ್ನೋ ಖರೀದಿ ಮಾಡುವಾಗ – ಮಾರುವಾಕೆ ‘ಕೊನ್ನಿ ಬುದ್ದೇ’ ಅಥವಾ “ತತನ್ನಿ ಬುದೀ’ ಅಂದರೆ ಮೊದಲು ಮನಸ್ಸು ಪ್ರಸನ್ನವಾಗುತ್ತಿತ್ತು. ದ್ಯಾವನೂರು ಮತ್ತು ಕುಸುಮಬಾಲೆ ಓದಿದ ಮೇಲೆ ಹಾಗಾಗುವುದಿಲ್ಲ. ಎದೆಯೊಳಗೆ ಏನೋ ಚಳ್ ಅನ್ನುತ್ತವೆ. ಎಲ್ಲ ಸಾಂಪ್ರದಾಯಿಕ ಸೌಂದರ್ಯ ಸಂತೋಷ ನೆಮ್ಮದಿಗಳ ಮೇಲೂ ಯಾರೋ ಒಬ್ಬ ಚನ್ನನ ರಕ್ತದ ಹನಿಯೊಂದು ಇರಬಹುದಾ – ಅದಕ್ಕೆ ಸುಣ್ಣ ಬಳಿದು ಏನೂ ಆಗಿಲ್ಲ
ಅನ್ಕೊಂಬಿಟ್ಟಿದೀವಾ- ಅನ್ಸುತ್ತೆ.
ಈಗ ಎದೆಗೆ ಬಿದ್ದ ಅಕ್ಷರ ಪ್ರಕಟವಾಗಿದೆ. ಇಷ್ಟು ದೀರ್ಘ ಕಾಲದ ಅವಧಿಯಲ್ಲಿ ಮಹದೇವ ಸಾಕಷ್ಟು ಹೋರಾಟ ಮಾಡಿದ್ದಾರೆ. ಅವರನ್ನು ಬೈದವರನ್ನು, ಅವಹೇಳನ ಮಾಡಿದವರನ್ನು ತಮ್ಮ ಹೋರಾಟ ಬಿಟ್ಟುಕೊಡದೇ ಸಹಿಸಿದ್ದಾರೆ. ಅವರನ್ನು ಬೈದವರೊಡನೆ ಅವಹೇಳನ ಮಾಡಿದವರೊಡನೆ ಕೋಪದಿಂದ ಯುದ್ಧಕ್ಕೆ ಹೋಗರು. ಬದಲಾಗಿ ತತ್ಕಾಲಕ್ಕೆ ತನಗೆ ಎದುರುಬಿದ್ದವರಲ್ಲಿ ಇರುವ ಒಳ್ಳೆ ಗುಣಗಳನ್ನು ಹೈಲೈಟ್ ಮಾಡಿ ಮಾತಾಡುತ್ತಾರೆ.
ನಾವೆಲ್ಲ ಒಂದು ದೊಡ್ಡ ರೈಲಲ್ಲಿ ಪ್ರಯಾಣಿಸುತ್ತಿದ್ದೇವೆ. ನಮಗೆಲ್ಲ ಒಂದೋ ಅರ್ಧವೋ ಸೀಟು ಇದೆ. ಮಹದೇವ ಮನಸ್ಸು ಮಾಡಿದರೆ ಒಂದು ಪೂರ್ಣ ಸೀಟನ್ನೋ, ಒಂದು ಇಡೀ ಬೋಗೆಯನ್ನೋ ಪಡಕೊಂಡು ಬಾಗಿಲು ಮುಚ್ಚಿಕೊಂಡು ಕೂತೋ ಮಲಗಿಯೋ ಪ್ರಯಾಣ ಮುಂದುವರಿಸಬಹುದು. ಆದರೆ ಅವರು ಬಾಗಿಲು ಬಡಿಯುವವರೊಡನೆ ಇರುತ್ತಾರೆ. ಅವರು ಬನ್ನಿಕುಪ್ಪೆಯ ಯಜ್ಜೂರಯ್ಯನವರ ಜೊತೆ, ಕೆ.ನಿಂಗಯ್ಯನವರ ಜೊತೆ ಇರುತ್ತಾರೆ. ನಮಗೆಲ್ಲ ನಿದ್ದೆಯೋ ನಿದ್ದೆ.