ಗೌರಿ ಲಂಕೇಶ್ ಹತ್ಯೆಯ ರಕ್ತ ಕರ್ನಾಟಕದ ಮನೆಮನೆಗೆ ಚೆಲ್ಲಿದೆ -ದೇವನೂರು ಮಹಾದೇವ

[ಗೌರಿ ಲಂಕೇಶ್ ಅವರು 5 ಸೆಪ್ಟೆಂಬರ್ 2017 ರಂದು ಗುಂಡೇಟಿನಿಂದ ಕೊಲೆಯಾದ ಸಂದರ್ಭದಲ್ಲಿ, ಅವರ ಕೊಲೆಗೆ ಪ್ರತಿರೋಧವಾಗಿ ಬೆಂಗಳೂರಿನಲ್ಲಿ 12.9.2017ರಂದು ಆಯೋಜಿಸಿದ್ದ ‘ನಾನು ಗೌರಿ’ ಕಾರ್ಯಕ್ರಮದಲ್ಲಿ ಮಾತನಾಡಿದ ದೇವನೂರ ಮಹಾದೇವ ಅವರ ಮಾತುಗಳು]

 

‘ದೇಶದಲ್ಲಿ ಬಹುತ್ವಕ್ಕೆ ಧಕ್ಕೆಯಾಗುತ್ತಿರುವುದರಿಂದಲೇ ಕಲ್ಬುರ್ಗಿ, ಗೌರಿಯಂಥವರು ಬಲಿಯಾಗ್ತಿದಾರೆ. ಇಂದು ನಮಗೆ ಬಹುತ್ವವೇ ಮುಖ್ಯ, ಅದೇ ನಮ್ಮ ಧರ್ಮ. ಸಹನೆ ಮತ್ತು ಪ್ರೀತಿ ಇದರಿಂದಲೇ ಸಾಧ್ಯ. ನಮ್ಮ ಸರ್ಕಾರಗಳು ಭೂತವನ್ನೇ ವರ್ತಮಾನ ಮಾಡುತ್ತಿವೆ. ಎಲ್ಲ ಪ್ರೀತಿ, ಸಹನೆಯುಳ್ಳವರು ಉದಾರ, ವಿಶಾಲ ಮನೋಭಾವದವರೆಲ್ಲಾ ಒಗ್ಗಟ್ಟಾಗಬೇಕಾಗಿದೆ .ಗೌರಿ ಲಂಕೇಶ್ ಹತ್ಯೆಯ ರಕ್ತ ಕರ್ನಾಟಕದ ಮನೆಮನೆಗೆ ಚೆಲ್ಲಿದೆ. ಇದು ವ್ಯಕ್ತಿಯ ಕೊಲೆ ಅಲ್ಲ. ಇದೊಂದು ಮೌಲ್ಯದ ಕೊಲೆ. ತನಗೆ ಇಷ್ಟ ಇಲ್ಲದೇ ಇರೋದು ಭೂಮಿ ಮೇಲೆ ಇರಬಾರದು ಅನ್ನೋ ಪ್ರವೃತ್ತಿ ಹೆಚ್ಚಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗುತ್ತಿದೆ. ಇದಕ್ಕೆಲ್ಲ ಮೂಲ ಕಾರಣ ನಿರುದ್ಯೋಗ. ನಿರುದ್ಯೋಗಿಗಳು ಕೆಲಸವಿಲ್ಲದೆ ಕೊಲೆ ಮಾಡುವ ಹಂತ ತಲುಪಿದ್ದಾರೆ. ಈಗಲಾದರೂ ನಿರುದ್ಯೋಗದಿಂದ ಉದ್ಯೋಗದತ್ತ ಚಿಂತನೆ ಮಾಡಬೇಕಿದೆ.  ಬಡವ-ಬಲ್ಲಿದರ ನಡುವೆ ಅಂತರ ಕಡಿಮೆ ಆಗಬೇಕು.  ಇಲ್ಲವಾದಲ್ಲಿ ಬಡವರು ಸುಪಾರಿ ಕೊಲೆಗಡುಕರಾಗುತ್ತಾರೆ. ಗೌರಿ ಹತ್ಯೆ ವೈಚಾರಿಕತೆಯ ಹತ್ಯೆ ಎಂದು ಹಿರಿಯ ಸಾಹಿತಿ ದೇವನೂರ ಮಹದೇವ ಹೇಳಿದರು.