ನರಗುಂದ ರೈತ ಬಂಡಾಯದ ಸ್ಮರಣೆಯ ಸಮಾವೇಶದಲ್ಲಿ…..

[ನರಗುಂದ ರೈತ ಬಂಡಾಯದ 35ನೇ ವರ್ಷದ ಸ್ಮರಣೆ ಅಂಗವಾಗಿ ಏರ್ಪಡಿಸಿದ್ದ ರೈತ ಸಮಾವೇಶದ ಸಂದರ್ಭದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳು, 21 ಜುಲೈ 2015ರ ಪ್ರಜಾವಾಣಿಯಲ್ಲಿ ವರದಿಯಾಗಿದ್ದು, ನಮ್ಮ ಮರು ಓದಿಗಾಗಿ ಇಲ್ಲಿದೆ.]
ಸಮಾಜದ ಸಂವೇದನೆಗೆ ಕುಷ್ಠ ಹಿಡಿಯದಿರಲಿ: ದೇವನೂರ ಅಭಿಮತ

ಅನ್ನಭಾಗ್ಯ ಯೋಜನೆಗೆ ಕಾಲಮಿತಿ ಅಗತ್ಯ

ಹುಬ್ಬಳ್ಳಿಯ ಎಪಿಎಂಸಿ ಪ್ರಾಂಗಣದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಮಂಗಳವಾರ ನಡೆದ ರೈತರ ಸಮಾವೇಶದಲ್ಲಿ ಕರ್ನಾಟಕ ಸರ್ವೋದಯ ಪಕ್ಷದ ಅಧ್ಯಕ್ಷ ದೇವನೂರ ಮಹಾದೇವ ಮಾತನಾಡಿದರು

ಹುಬ್ಬಳ್ಳಿ: ‘ಬಡತನ ನಿರ್ಮೂಲನೆ ಹಾದಿಯಲ್ಲಿ ಅನ್ನಭಾಗ್ಯ ಯೋಜನೆಯು ತೇಪೆ ಹಚ್ಚುವ ಕೆಲಸವಾಗಿದ್ದು, ಅದಕ್ಕೆ ಕಾಲ ಮಿತಿ ನಿಗದಿಗೊಳಿಸಬೇಕಿದೆ. ಇಲ್ಲದಿದ್ದರೆ ಬಡವರು ಬಡವರಾಗಿಯೇ ಉಳಿಯುವ ಸಾಧ್ಯತೆ ಇದೆ’ ಎಂದು ಚಿಂತಕ ದೇವನೂರ ಮಹಾದೇವ ಎಚ್ಚರಿಸಿದರು.

ಇಲ್ಲಿನ ಸರ್ಕಿಟ್‍ಹೌಸ್‍ನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯೋಜನೆಯಿಂದ ಫಲಾನುಭವಿಗಳ ಉದ್ಧಾರವೂ ಆಗಬಹುದು; ಇಲ್ಲವೇ ಅವರು ಸೋಮಾರಿಗಳೂ ಆಗಬಹುದು. ಆಯ್ಕೆ ಅವರಿಗೆ ಬಿಟ್ಟಿದ್ದು, ಆದರೆ, ಅನ್ನಭಾಗ್ಯ ಹಸಿವಿನ ಯಾತನೆಯುಳ್ಳವರ ಊಟಕ್ಕೆ ಮಾರ್ಗವಾಗಿದೆ; ಅದು ಸ್ವಾಗತಾರ್ಹ’ ಎಂದರು.
‘ಅನ್ನಭಾಗ್ಯದ ಬಗ್ಗೆ ಬೇರೆಯವರ ಅಭಿಪ್ರಾಯಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿ ವಿವಾದ ಸೃಷ್ಟಿಸಲಾರೆ’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಧೈರ್ಯ ತೋರಲಿ: ಮಧ್ಯಾಹ್ನ ಎಪಿಎಂಸಿ ಆವರಣದಲ್ಲಿ ನಡೆದ ರೈತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ‘ಬಡವರು ಹಾಗೂ ರೈತರ ಆತ್ಮಹತ್ಯೆ ತಪ್ಪಿಸಲು ಪ್ರಾಥಮಿಕ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರವನ್ನು ಖಾಸಗಿ ಹಿಡಿತದಿಂದ ಮುಕ್ತಗೊಳಿಸಿ ತನ್ನ ಅಧೀನಕ್ಕೆ ಪಡೆಯುವ ಧೈರ್ಯವನ್ನು ಸರ್ಕಾರ ತೋರಬೇಕು’ ಎಂದು ದೇವನೂರ ಸಲಹೆ ನೀಡಿದರು.
‘ಶುಲ್ಕ ತುಂಬಲು ಸಾಧ್ಯವಾಗದೇ ಖಾಸಗಿ ಶಾಲೆಯಿಂದ ಮಗನನ್ನು ಹೊರಹಾಕಿದ್ದರಿಂದ ಅವಮಾನದಿಂದ ಆತ್ಮಹತ್ಯೆ ಮಾಡಿಕೊಂಡ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಸಾದೊಳಲಿನ ರೈತ ಶಿವಣ್ಣನ ಪ್ರಕರಣ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಗಂಡನ ಹೃದಯ ಚಿಕಿತ್ಸೆಗೆ ಮಾಡಿದ 7 ಲಕ್ಷ ರೂಪಾಯಿ ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಯತ್ನಿಸಿದ ಮಂಡ್ಯ ತಾಲ್ಲೂಕಿನ ಮಹಿಳೆಯೊಬ್ಬರ ವಿಚಾರ ಪ್ರಸ್ತಾಪಿಸಿದ ಅವರು, ಸಮಾನ ಶಿಕ್ಷಣ ಹಾಗೂ ಆರೋಗ್ಯ ಸೌಲಭ್ಯಗಳಿಗಾಗಿ ಸರ್ಕಾರ ಎರಡೂ ಕ್ಷೇತ್ರಗಳನ್ನು ಸಾರ್ವತ್ರಿಕಗೊಳಿಸಬೇಕಿದೆ’ ಎಂದರು.

ಆತ್ಮಹತ್ಯೆ ಮಾಡಿಕೊಂಡ ರಾಜಕಾರಣಿಗಳ ಆತ್ಮ: ‘ರೈತರ ಆತ್ಮಹತ್ಯೆಗೆ ರಾಜಕಾರಣಿಗಳ ಸ್ಪಂದನೆಯಲ್ಲೂ ಲಾಭ ಮಾಡಿಕೊಳ್ಳುವ ಇರಾದೆ ಕಾಣಿಸುತ್ತಿದೆ. ಸಾವಿನ ಮನೆಗೆ ಭೇಟಿ ಕೊಟ್ಟ ಯಾರೊಬ್ಬರಲ್ಲೂ ಅಧಿಕಾರದಲ್ಲಿದ್ದಾಗ ತಾವು ರೈತರ ಹಿತಾಸಕ್ತಿಗೆ ವಿರುದ್ಧವಾಗಿ ಮಾಡಿಕೊಂಡ ಒಪ್ಪಂದಗಳು, ಕಾನೂನಿನ ಬಗ್ಗೆ ಪಶ್ಚಾತ್ತಾಪ ಕಾಣುತ್ತಿಲ್ಲ. ರಾಜಕಾರಣಿಗಳ ಆತ್ಮವೇ ಆತ್ಮಹತ್ಯೆ ಮಾಡಿಕೊಂಡಂತೆ ಭಾಸವಾಗುತ್ತಿದೆ. ಆಹಾರ ಮತ್ತು ಔಷಧಿಯನ್ನು ಅಸ್ತ್ರ ಮಾಡಿಕೊಂಡು ಬಲಾಢ್ಯ ದೇಶಗಳು ಮಾಡುತ್ತಿರುವ ವ್ಯಾಪಾರಿ ಯುದ್ಧಕ್ಕೆ ನಮ್ಮ ರೈತಾಪಿ ವರ್ಗ ಬಲಿಯಾಗುತ್ತಿದೆ’ ಎಂದರು. ನರಗುಂದ ರೈತ ಬಂಡಾಯದ 35ನೇ ವರ್ಷದ ಸ್ಮರಣೆ ಅಂಗವಾಗಿ ಈ ಸಮಾವೇಶವನ್ನು ಆಯೋಜಿಸಲಾಗಿತ್ತು, ಆತ್ಯಹತ್ಯೆ ಮಾಡಿಕೊಳ್ಳದಂತೆ ರೈತರಿಗೆ ಮನವಿ ಮಾಡುವ ದೊಡ್ಡ ಭಿತ್ತಿಪತ್ರ ಪ್ರದರ್ಶಿಸಿ ಸಮಾವೇಶಕ್ಕೆ ಚಾಲನೆ ನೀಡಲಾಯಿತು.

“ರೈತರು ಅದ್ಧೂರಿ ಮದುವೆ, ತಿಥಿಯೂಟ, ಪಿತೃಪಕ್ಷ, ಬೀಗರೂಟದ ಹೆಸರಿನಲ್ಲಿ ದುಂದುವೆಚ್ಚ ಕೈ ಬಿಡಬೇಕು; ಈ ಬಗ್ಗೆ ತಿಳಿವಳಿಕೆ ಮೂಡಿಸಲು ರೈತ ಸಂಘ ಸೂಕ್ತ ಪ್ರಚಾರ ಕೈಗೊಳ್ಳಲಿ”-ದೇವನೂರ ಮಹಾದೇವ