‘ನಮ್ಮ ಧ್ವನಿ’ಯ ಜೊತೆಗೆ -ದೇವನೂರ ಮಹಾದೇವ

[ ಬೆಂಗಳೂರಿನ “ನಮ್ಮ ಧ್ವನಿ” ವೇದಿಕೆ, ಗಾಂಧಿ ಭವನದಲ್ಲಿ 10.3.2019 ರ ಭಾನುವಾರ ಆಯೋಜಿಸಿದ್ದ ‘ಪ್ರಬುದ್ಧ ಭಾರತ’ ವಿಷಯ ಕುರಿತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಬರಹ ರೂಪ ಮತ್ತು ವಿಡಿಯೋ ಕೊಂಡಿ ಇಲ್ಲಿದೆ.]


 

ಪ್ರೊ.ಕೆ.ನಾರಾಯಣ ಸ್ವಾಮಿಯವರ ಜೀವನದಲ್ಲಿ ಎದುರಾದ ಒಂದು ಪ್ರಸಂಗವನ್ನು ಹಂಚಿಕೊಳ್ಳಬೇಕೆನಿಸುತ್ತಿದೆ. ಕೆ.ನಾರಾಯಣಸ್ವಾಮಿಯವರು ಗೌರಿಬಿದನೂರು ತಾಲ್ಲೂಕಿನವರು. ತೇಜಸ್ವಿಯವರ ಸಮಕಾಲೀನರು. 60ರ ದಶಕದಲ್ಲಿ ಕನ್ನಡ ಎಂಎ ಮಾಡಿ ಅಧ್ಯಾಪಕರಾಗಿ ಮುಂದೆ ಶಿಕ್ಷಣ ಇಲಾಖೆಯಲ್ಲಿ ಅಧಿಕಾರಿಯಾಗಿ ನಿವೃತ್ತರಾದರು. ಇತ್ತೀಚೆಗಷ್ಟೆ ನಿಧನರಾದರು.

ನಾರಾಯಣಸ್ವಾಮಿಯವರು ಆಗಷ್ಟೇ ಅಧ್ಯಾಪಕರಾಗಿರುತ್ತಾರೆ. ಒಂದ್ಸಲ, ಸೌದೆ ಹೊರೆಯನ್ನು ಹೊತ್ತು ಕಾಲೆಳೆದುಕೊಂಡು ಹೋಗುತ್ತಿದ್ದ ಹುಡುಗ ಅವರ ಕಣ್ಣಿಗೆ ಬೀಳುತ್ತಾನೆ. ನಿಧಾನಕ್ಕೆ ಆ ಹುಡುಗನ ಗುರುತು ಸಿಗುತ್ತದೆ. ಆತ ಪಿಯುಸಿಯಲ್ಲಿ ನಾರಾಯಣಸ್ವಾಮಿಯವರ ಶಿಷ್ಯನಾಗಿದ್ದ. ಓದು ನಿಲ್ಲಿಸಿದ್ದ. ‘ಏನಪ್ಪ ನಿನ್ನ ಸಮಾಚಾರ’ ಎಂದು ವಿಚಾರಿಸುತ್ತಾರೆ. ಆ ಹುಡುಗ ದಲಿತ ಯುವಕ. ಹೆಸರು ಮುನಿವೆಂಕಟಪ್ಪ. ತಂದೆ ತಾಯಿ ಇಲ್ಲ. ಚಿಕ್ಕಪ್ಪನ ಮನೆಯಲ್ಲಿ ಆಶ್ರಯ ಪಡೆದಿರುತ್ತಾನೆ. ಪ್ರತಿದಿನ ಒಂದು ಸೌದೆಹೊರೆಯನ್ನು ಬೆಟ್ಟದಿಂದ ತಂದು ಪೇಟೆಯಲ್ಲಿ ಮಾರಿ ಅದರ ಹಣವನ್ನು ಚಿಕ್ಕಪ್ಪನಿಗೆ ನೀಡಿದರೆ ಮಾತ್ರ ಊಟ. ಇಲ್ಲವಾದರೆ ಇಲ್ಲ. ಕೇಳಿ ನಾರಾಯಣಸ್ವಾಮಿಯವರ ಕರುಳು ಚುರಕ್ ಅನ್ನುತ್ತದೆ. ಮುಂದೆ ನಾರಾಯಣ ಸ್ವಾಮಿಯವರು ಆ ಹುಡುಗನಿಗೆ ರೂಂ ಮಾಡಿಕೊಟ್ಟು ಊಟ, ಪುಸ್ತಕದ ವ್ಯವಸ್ಥೆಯನ್ನು ಮಾಡಿ ಆ ಹುಡುಗ ಪರೀಕ್ಷೆ ಪಾಸು ಮಾಡಿ ಉದ್ಯೋಗಸ್ಥನೂ ಆಗುತ್ತಾನೆ. ಇದು ಇಷ್ಟೇ ಆಗಿದ್ದರೆ ಏನೋ ಇದೂ ಒಂದು ಮಾನವೀಯ ಪ್ರಕರಣ ಎಂದು ಹೇಳಿ ಮುಂದೆ ಹೋಗಬಹುದಿತ್ತು. ಆದರೆ ನಾರಾಯಣಸ್ವಾಮಿಯವರು “ನನ್ನೊಳಗೆ ದಲಿತ ಪ್ರಜ್ಞೆಯನ್ನು ನನ್ನ ವಿದ್ಯಾರ್ಥಿ ಮುನಿವೆಂಕಟಪ್ಪ ಮೂಡಿಸಿಬಿಟ್ಟ. ಒಂದು ರೀತಿಯಲ್ಲಿ ಆತ ನನಗೆ ಗುರುವಾಗಿಬಿಟ್ಟ” ಎನ್ನುತ್ತಾರೆ.

ಇದು ಅರಿವಿನ ಸ್ಫೋಟ. ಈ ಅರಿವು ಉಂಟಾದ ಮೇಲೆ ಹಿಂದುಳಿದ ವರ್ಗಕ್ಕೆ ಸೇರಿದ ನಾರಾಯಣಸ್ವಾಮಿಯವರು ಅಸ್ಪೃಶ್ಯರೊಳಗೆ ಒಂದಾಗಿ ಬಿಡುತ್ತಾರೆ. ಇವರ ಅಂತರಂಗ ಬೆಳೆಯತೊಡಗುತ್ತದೆ. ಮುಂದೆ ದಲಿತ ಸಂಘರ್ಷ ಸಮಿತಿ ಆರಂಭಗೊಂಡಾಗ ಅದರ ಸಂವಿಧಾನ ರಚನೆಯಲ್ಲಿ ಮುಖ್ಯರಾಗುತ್ತಾರೆ. ‘ಅಂಬೇಡ್ಕರ್ ವಾಣಿ’ ಪ್ಯಾಕೆಟ್ ಬುಕ್ ರಚಿಸಿ ಪ್ರಚುರ ಪಡಿಸುತ್ತಾರೆ. ಆಗ ಹುಡುಗರು ಬೆಂಕಿಪೊಟ್ಟಣದಂತೆ ಆ ಪುಸ್ತಕವನ್ನು ಜೇಬಲ್ಲಿ ಇಟ್ಟುಕೊಂಡು ಓಡಾಡುತ್ತಿದ್ದರು. ಅವರ ವಿದ್ಯಾರ್ಥಿ ಮೂಡಿಸಿದ ದಲಿತ ಪ್ರಜ್ಞೆ ಅವರ ಕೊನೆ ಉಸಿರಿರುವವರೆಗೂ ಇವರೊಳಗೆ ಉಸಿರಾಡುತ್ತಿರುತ್ತದೆ.
ಆಲೋಚನೆಯಿಂದ ಕೆಲವರಿಗೆ ಅರಿವು ಉಂಟಾಗಬಹುದು. ಹೃದಯವಂತಿಕೆಯಿಂದ ಕೆಲವರಿಗೆ ಅರಿವು ಉಂಟಾಗಬಹುದು. ಇನ್ನು ಕೆಲವರಿಗೆ ಕರುಳ ಸ್ಪಂದನದಿಂದ ಅರಿವು ಉಂಟಾಗಬಹುದು. ಕೆ.ನಾರಾಯಣಸ್ವಾಮಿ ಕರುಳ ಸ್ಪಂದನದ ಅರಿವು ಪಡೆದವರು ಅನ್ನಿಸುತ್ತದೆ. ಇದನ್ನೆ ದಯೆ, ಕಾರುಣ್ಯ ಅನ್ನುತ್ತಾರೇನೊ.

ಇದನ್ನು ಇಲ್ಲಿ ಯಾಕೆ ಹೇಳುತ್ತಿದ್ದೇನೆ ಅಂದರೆ- ಪ್ರಬುದ್ಧ ಭಾರತ ಆರಂಭಿಸುತ್ತಿರುವ “ನಮ್ಮ ಧ್ವನಿ”ಯ ತರುಣರೂ ಕೂಡ ಹೊಸ ಹುಟ್ಟು ಪಡೆದವರು. ದ್ವೇಷ, ಅಸಹನೆ, ಅಸಮಾನತೆ ಉಲ್ಬಣಿಸಿರುವ ಸಮಾಜದಲ್ಲಿ ಪ್ರೀತಿ, ಸಹನೆ, ಸಮಾನತೆ ಸಹಬಾಳ್ವೆಗಾಗಿ ಹಂಬಲಿಸುತ್ತಿರುವವರು. ಇಂಥವರು ಜಡ ಸಮಾಜಕ್ಕೆ ಜೀವ ತುಂಬುತ್ತಾರೆ. ಇಂಥವರು ಚರಿತ್ರೆಯನ್ನು ಬರೆಯುತ್ತಾರೆ. ಈ ದಿಕ್ಕಲ್ಲಿ ನಿಮ್ಮ ಹೆಜ್ಜೆಗಳಿರಲಿ ಎಂದು ಆಶಿಸುವೆ.

ಇದು ಕಷ್ಟದ ಹಾದಿ. ಭಾರತ ಓಡುತ್ತಿರುವ ದಿಕ್ಕನ್ನು ನೋಡಿದರೆ ಎಲ್ಲಿಗೆ ತಲುಪುತ್ತೇವೋ ಎಂದು ದಿಗಿಲಾಗುತ್ತದೆ. ಕಾಡಿನಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡು ಜೀವಿಸುತ್ತಿದ್ದ ಮೂಲನಿವಾಸಿಗಳನ್ನು ಅವರ ನೆಲೆಯಿಂದ ಕಿತ್ತು ಎಸೆಯಲಾಗುತ್ತಿದೆ. ಭೂಮಿ ಅವಲಂಬಿಸಿ ತಮ್ಮ ಬದುಕನ್ನು ಕಟ್ಟಿಕೊಂಡು ಹೇಗೋ ಜೀವನ ಸಾಗಿಸುತ್ತಿದ್ದ ರೈತಾಪಿಗಳನ್ನು ಅವರ ನೆಲದಿಂದ ಕಿತ್ತು ಎಸೆಯಲಾಗುತ್ತಿದೆ. ಕಾರ್ಮಿಕರ ಕತೆಯೇನೂ ಇದಕ್ಕಿಂತ ಭಿನ್ನವಾಗಿಲ್ಲ. ಸಾರ್ವಜನಿಕ ಸಂಪತ್ತು ಹಾಗೂ ಸರ್ಕಾರಿ ಸ್ವಾಮ್ಯದ ಲಾಭದಾಯಕ ವಹಿವಾಟನ್ನು ಖಾಸಗಿಗೆ ಒಪ್ಪಿಸಿ ಕೈತೊಳೆದುಕೊಳ್ಳಲಾಗುತ್ತಿದೆ. ದೇಶ ಮಾರುವುದನ್ನೇ ದೇಶಪ್ರೇಮ ಎನ್ನುತ್ತಿದ್ದೇವೆ. ಒಟ್ಟಿನಲ್ಲಿ ಭಾರತದಲ್ಲಿ ಏನಾಗುತ್ತಿದೆ ಎಂದರೆ ನಿರುದ್ಯೋಗ ಅಭಿವೃದ್ಧಿ ಆಗುತ್ತಿದೆ. ಸಮುದಾಯದ ಬದುಕು ಅನಿಶ್ಚಿತತೆಯಿಂದ ತೊಳಲಾಡುತ್ತಿದೆ.
ಇಂತಹ ವಾತಾವರಣದಲ್ಲಿ ಹುಲ್ಲುಮೆದೆಗೆ ಒಂದು ಬೆಂಕಿಕಡ್ಡಿ ಗೀರಿ ಎಸೆದರೆ ಬೆಂಕಿ ಭುಗಿಲೆನ್ನುವಂತೆ ದ್ವೇಷ ಅಸೂಯೆ ಅಸಹನೆ ಭುಗಿಲೇಳುತ್ತದೆ. ಚುನಾವಣೆ ಇನ್ನೇನು ಬರುತ್ತಿದೆ. ಬೆಂಕಿ ಹಚ್ಚುವವರು ಇನ್ನೂ ಹೆಚ್ಚುತ್ತಾರೆ. ವೇಷ ಭೂಷಣ ಸ್ಪರ್ಧೆಯವರು ಸ್ಪರ್ಧಿಸುತ್ತಾರೆ. ಮಾತಲ್ಲೆ ಮನೆ ಕಟ್ಟುತ್ತಾರೆ. ಇದಕ್ಕೆಲ್ಲ ವಿಚಲಿತರಾಗದೆ ನಾವೆಲ್ಲ 2019ರ ಚುನಾವಣೆಯಲ್ಲಿ ‘ಉದ್ಯೋಗ ಮೂಲಭೂತ ಹಕ್ಕಾಗಲಿ’- ಇದನ್ನು ಚರ್ಚಿತ ವಿಷಯವಾಗುವಂತೆ ಎಚ್ಚರ ವಹಿಸಬೇಕಾಗಿದೆ. ಜೊತೆಗೆ, ಉದ್ಯೋಗ ಸ್ಥಿತಿಗತಿಯ ಶ್ವೇತಪತ್ರಕ್ಕಾಗಿ ಒತ್ತಾಯಿಸಬೇಕಾಗಿದೆ. ನೆನಪಿರಲಿ- ಬಹುತೇಕ ಅಸಹನೆ, ದ್ವೇಷ, ಅಸೂಯೆಗೆ ನಿರುದ್ಯೋಗವೇ ಕಾರಣ. ಈ ಎಚ್ಚರದೊಡನೆ ಮನೆಮನೆಗೂ ಒಂದು ಕಿವಿಮಾತನ್ನು ತಲುಪಿಸಬೇಕು, ಏನೆಂದರೆ- “ಯಾವುದೇ, ಯಾರದೇ ಮತಾಂಧತೆಯು ಮೊದಲು ಮಾಡುವುದು- ತನ್ನವರ, ತನಗೆ ಸೇರಿದವರ ಕಣ್ಣುಗಳನ್ನು ಕಿತ್ತು ಅಂಧರನ್ನಾಗಿಸುವುದು. ಆಮೇಲೆ ಮಿದುಳು ಕಿತ್ತು ವಿವೇಕ ಶೂನ್ಯರನ್ನಾಗಿಸುವುದು, ನಂತರ ಹೃದಯ ಕಿತ್ತು ಕ್ರೂರಿಗಳನ್ನಾಗಿಸುವುದು. ಆಮೇಲೆ ನರಬಲಿ ಕೇಳುವುದು ಇದು ಇಂದು ಹೆಚ್ಚುತ್ತಿದೆ. ಬಹಳ ತುರ್ತಾಗಿ ನಮ್ಮ ಮಕ್ಕಳ ಕಣ್ಣು ಹೃದಯ ಮಿದುಳುಗಳನ್ನು ಮತಾಂಧತೆಯ ದವಡೆಯಿಂದ ರಕ್ಷಿಸಬೇಕಾಗಿದೆ.”