ನಮ್ಮ ಕೆಲಸಗಳಲ್ಲಿ ಮಹಿಳೆಯರ ಉಲ್ಲೇಖವೇ ಇಲ್ಲ-ಡೇವಿಡ್ ಲಿಯೋನ್ಹಾರ್ಟ್
ತಾನು ಬರೆದ ವರದಿಗಳಲ್ಲಿ ಉಲ್ಲೇಖಿಸಿದ ಮಹಿಳೆಯರ ಪ್ರಮಾಣ ಎಷ್ಟಿರಬಹುದು ಎಂಬುದನ್ನು ಕಂಡುಕೊಳ್ಳುವ ಕುತೂಹಲ ಏಡ್ರಿಯೆನ್ ಲಾಫ್ರಾನ್ಸ್ ಎಂಬ ಪತ್ರಕರ್ತೆಗೆ ಐದು ವರ್ಷಗಳ ಹಿಂದೆ ಬಂತು. ವರ್ಷದ ಹಿಂದೆ ವಿವಿಧ ವಿಷಯಗಳ ಬಗ್ಗೆ ಬರೆದು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳನ್ನು ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಎಂಐಟಿ) ಸಂಶೋಧಕರೊಬ್ಬರ ನೆರವಿನಿಂದ ಏಡ್ರಿಯೆನ್ ವಿಶ್ಲೇಷಿಸಿದರು.
‘ನಾನು ಪುರುಷರಿಗಿಂತ ಹೆಚ್ಚು ಮಹಿಳೆಯರನ್ನು ಉಲ್ಲೇಖಿಸಿದ್ದೇನೆ ಎಂಬುದು ವಿಶ್ಲೇಷಣೆಯಲ್ಲಿ ಕಾಣಿಸಬಹುದು ಎಂಬ ನಿರೀಕ್ಷೆ ಇತ್ತು. ನನ್ನ ವರದಿಗಳು ಇತರರ ವರದಿಗಳಿಗಿಂತ ಹೆಚ್ಚು ಲಿಂಗತ್ವ ಸಮತೋಲನ ಹೊಂದಿರಬಹುದು ಎಂಬ ರಹಸ್ಯ ಬಯಕೆ ನನ್ನಲ್ಲಿತ್ತು’ ಎಂದು ಬಳಿಕ ಅವರು ಹೇಳಿದ್ದರು. ‘ಮಹಿಳಾ ಮೂಲಗಳನ್ನು ಹುಡುಕಲು ನಾನು ಪ್ರಜ್ಞಾಪೂರ್ವಕ ಪ್ರಯತ್ನ ಮಾಡುತ್ತೇನೆ. ನಾನು ಸ್ತ್ರೀವಾದಿ! ಮುಂದಿನ ವರ್ಷದಲ್ಲಿ ಅದು ಖಂಡಿತವಾಗಿಯೂ ನನ್ನ ಕೆಲಸದಲ್ಲಿ ಕಾಣಿಸಿಕೊಳ್ಳಲಿದೆ’ ಎಂದೂ ಅವರು ಹೇಳಿದ್ದರು.
ಆದರೆ, ಅದು ಹಾಗೆ ಇರಲಿಲ್ಲ. ಏಡ್ರಿಯೆನ್ ಉಲ್ಲೇಖಿಸಿದ ವ್ಯಕ್ತಿಗಳಲ್ಲಿ ಶೇ 25ರಷ್ಟು ಮಾತ್ರ ಮಹಿಳೆಯರು ಇದ್ದರು. ಅಧ್ಯಯನಗಳ ಪ್ರಕಾರ, ಏಡ್ರಿಯೆನ್ ಉಲ್ಲೇಖಿಸಿದ ಮಹಿಳೆಯರ ಪ್ರಮಾಣ ಒಟ್ಟು ಮಾಧ್ಯಮದಲ್ಲಿ ಪ್ರಸ್ತಾಪಿತವಾದ ಮಹಿಳೆಯರ ಪ್ರಮಾಣದಷ್ಟೇ ಇತ್ತು. ಏಡ್ರಿಯೆನ್ ಅವರ ವಿಶ್ಲೇಷಣೆಯ ಫಲಿತಾಂಶ ನಿರಾಶಾದಾಯಕವಾಗಿಯೇ ಇದ್ದರೂ ಅವರು ಆಗಿನ ಕಾಲಕ್ಕಿಂತ ಬಹಳ ಮುಂದೆ ಇದ್ದರು ಎಂಬುದು ನಿಜ. ಮಾಧ್ಯಮದಲ್ಲಿ ಮತ್ತು ಸಾರ್ವಜನಿಕ ಸಮಾರಂಭಗಳಲ್ಲಿ ಮಹಿಳಾ ಧ್ವನಿಯ ಕೊರತೆ ಇರುವುದರ ಬಗ್ಗೆ ಕಳೆದ ಐದು ವರ್ಷಗಳಲ್ಲಿ ಹೆಚ್ಚಿನ ಗಮನ ಹರಿದಿದೆ.
ತಮ್ಮ ವರದಿಗಳಲ್ಲಿ ಮಹಿಳೆಯರ ಧ್ವನಿಯನ್ನು ಉದ್ದೇಶಪೂರ್ವಕವಾಗಿ ಹೆಚ್ಚಿಸುವ ತಮ್ಮ ಪ್ರಯತ್ನದ ಬಗ್ಗೆ ‘ದ ಅಟ್ಲಾಂಟಿಕ್’ನ ಎಡ್ ಯಂಗ್ ಬರೆದ ಲೇಖನವೊಂದು ಭಾರಿ ಜನಪ್ರಿಯತೆ ಪಡೆದುಕೊಂಡಿತು (ಏಡ್ರಿಯೆನ್ ಈಗ ದ ಅಟ್ಲಾಂಟಿಕ್ನಲ್ಲಿ ಕೆಲಸ ಮಾಡುತ್ತಿದ್ದಾರೆ). ವಿದೇಶಾಂಗ ನೀತಿ, ರಾಜಕೀಯಶಾಸ್ತ್ರ, ನರವಿಜ್ಞಾನಗಳಂತಹ ಹಲವು ಕ್ಷೇತ್ರಗಳಲ್ಲಿ ಮಹಿಳೆಯರು ಒಟ್ಟಾಗಿ, ಪರಿಣತರ ಪಟ್ಟಿಯನ್ನೇ ಸೃಷ್ಟಿಸಿಕೊಂಡಿದ್ದಾರೆ. ತಂತ್ರಜ್ಞಾನದಲ್ಲಿ ಪರಿಣತರಾಗಿರುವ ಮಹಿಳೆಯರ ಹೆಚ್ಚು ಸುಸಂಬದ್ಧವಾದ ದತ್ತಾಂಶ ಕೋಶವನ್ನು ಬ್ರೂಕಿಂಗ್ಸ್ ಇನ್ಸ್ಟಿಟ್ಯೂಟ್ ಇತ್ತೀಚೆಗೆ ರೂಪಿಸಿದೆ. ಈ ಮಧ್ಯೆ, ಪುರುಷರೇ ಇರುವ ಯಾವುದೇ ಸಮಿತಿಯ ಭಾಗ ಆಗುವುದಿಲ್ಲ ಎಂದು ವಿವಿಧ ಕ್ಷೇತ್ರಗಳ ನೂರಾರು ಪುರುಷರು ಇತ್ತೀಚೆಗೆ ಪ್ರತಿಜ್ಞೆ ಮಾಡಿದ್ದಾರೆ. ‘ಜೆಂಡರ್ ಅವೆಂಜರ್’ ಎಂಬ ಜಾಲತಾಣವು ಚರ್ಚಾ ಪ್ಯಾನೆಲ್ಗಳು ಮತ್ತು ಸುದ್ದಿವಾಹಿನಿಗಳಲ್ಲಿ ಮಹಿಳೆಯರು ಕಾಣಿಸಿಕೊಳ್ಳುವುದರ ಬಗೆಗಿನ ಅಂಕಿ ಅಂಶಗಳನ್ನು ನೀಡುತ್ತಿದೆ.
‘ಅಭಿನಂದನೆಗಳು, ಎಲ್ಲ ಪುರುಷರೇ ಇರುವ ಗುಂಪು ನಿಮ್ಮದು, ಪುರುಷರಷ್ಟೇ ಇರುವ ಚಿತ್ರಗಳನ್ನೇ ನೀವು ಪ್ರಕಟಿಸಿದ್ದೀರಿ’ ಎಂದು ಸಾಮಾಜಿಕ ಜಾಲತಾಣ tumblr ನಲ್ಲಿ ಈ ಬಗ್ಗೆ .
ಏಡ್ರಿಯೆನ್ ಅವರ ವಿಶ್ಲೇಷಣಾ ಯೋಜನೆಯ ಬಗ್ಗೆ ನನ್ನ ನಿಲುವು ಏನು ಎಂಬುದನ್ನು ಹೇಳುವುದಕ್ಕೆ ಮೊದಲು ಇಂತಹ ಪ್ರಯತ್ನಗಳ ಬಗ್ಗೆ ಕೆಲವು ಮಂದಿ ಹೊಂದಿರುವ ಅನುಮಾನಗಳನ್ನು ನಾನು ಪರಿಹರಿಸಬೇಕಿದೆ. ಸಮಸ್ಯೆ ಇರುವುದು ಪತ್ರಿಕೋದ್ಯಮ ಅಥವಾ ವಿಶ್ಲೇಷಕರ ಪ್ಯಾನೆಲ್ನಲ್ಲಿ ಅಲ್ಲ. ಇಲ್ಲಿ ಮಾತ್ರ ಸಮಸ್ಯೆ ಇದು ಎಂದು ಭಾವಿಸುವುದು ಸಮಂಜಸವಲ್ಲ. ಹಲವು ಕ್ಷೇತ್ರಗಳು ಪುರುಷ ಪ್ರಧಾನವಾಗಿಯೇ ಮುಂದುವರಿಯುತ್ತಿವೆ. ಅವರ ಧ್ವನಿ ಹೆಚ್ಚು ಗಮನ ಸೆಳೆಯುತ್ತದೆ. ಉಲ್ಲೇಖಗಳ ಕೋಟಾದಲ್ಲಿ ಎಷ್ಟು ಮಹಿಳೆಯರಿದ್ದಾರೆ ಎಂಬುದನ್ನು ಬದಿಗಿಟ್ಟು ನಿಜವಾದ ಸಮಸ್ಯೆ ಏನು ಎಂಬುದರತ್ತ ಗಮನ ಹರಿಸೋಣ.
ಪತ್ರಕರ್ತರು ಮತ್ತು ಸಮಾವೇಶ ಸಂಘಟಕರು ಲಿಂಗತ್ವ ಅಸಮತೋಲನವನ್ನು ತೊಡೆದುಹಾಕುವುದು ಸಾಧ್ಯವಿಲ್ಲ ಎಂಬುದು ಸಂಪೂರ್ಣವಾಗಿ ಹುಚ್ಚು ವಾದ ಎಂದು ತಳ್ಳಿ ಹಾಕುವಂತಿಲ್ಲ. ಮುಖ್ಯ ವಿಷಯ ಏನು ಎಂದರೆ, ಸರ್ಕಾರದ ಸೇವೆಗೆ ಸೇರುವುದು, ಸಂಸ್ಥೆಗಳನ್ನು ನಡೆಸುವುದು ಮತ್ತು ಪರಿಣತಿ ಸಾಧಿಸುವುದರಲ್ಲಿ ಪುರುಷ ಮತ್ತು ಮಹಿಳೆಯರಿಗೆ ಸಾಕಷ್ಟು ಅವಕಾಶಗಳು ಇವೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಬೇರೆ ಎಲ್ಲಕ್ಕಿಂತ ಇದು ಹೆಚ್ಚು ಮುಖ್ಯ. ಪತ್ರಕರ್ತರು ಮತ್ತು ಇತರ ಪ್ರಮುಖ ಸ್ಥಾನಗಳಲ್ಲಿ ಇರುವವರು ಸಮಸ್ಯೆಯ ತಿರುಳಿನಲ್ಲಿ ತಮ್ಮ ಪಾತ್ರವೂ ಇದೆ ಎಂಬುದನ್ನು ಒಪ್ಪಿಕೊಳ್ಳದೇ ಇದ್ದರೆ ಅವರು ತಮ್ಮ ಹೊಣೆಯಿಂದ ಸುಲಭವಾಗಿ ಕೈತೊಳೆದುಕೊಂಡು ಬಿಡುತ್ತಾರೆ.
ಇಡೀ ಸಮಸ್ಯೆಯನ್ನು ಹೀಗೆ ಯೋಚಿಸೋಣ: ನಮ್ಮ ಸಮಾಜದಲ್ಲಿ ಲಿಂಗ ತಾರತಮ್ಯ ಇದೆ ಎಂಬುದಕ್ಕೆ ವಿಪುಲ ನಿದರ್ಶನಗಳಿವೆ. ಮಕ್ಕಳನ್ನು ಹೊಂದುವುದಕ್ಕಾಗಿ ಮಹಿಳೆಯರು ತಮ್ಮ ವೃತ್ತಿಗೆ ಸಂಬಂಧಿಸಿ ಭಾರಿ ದಂಡ ತೆರಬೇಕಾಗುತ್ತದೆ. ಅವರು ಅಡ್ಡಿಯನ್ನು ಎದುರಿಸಬೇಕಾದ ಸಾಧ್ಯತೆಗಳು ಬಹಳ ಹೆಚ್ಚು. ಸಾಮಾಜಿಕ ಜಾಲ ತಾಣದಲ್ಲಿ ಅವರು ದ್ವೇಷಪೂರಿತ ದಾಳಿಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ. ಮಹಿಳೆ ಮತ್ತು ಪುರುಷರಿಗೆ ಸಮಾನ ಅರ್ಹತೆ ಇದ್ದಾಗ ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಸಂಭವನೀಯತೆ ಕಡಿಮೆ ಎಂಬುದನ್ನು ಹಲವು ಸಮೀಕ್ಷೆಗಳು ಹೇಳಿವೆ. ‘ಯಜಮಾನಿಕೆ’ (ಬಾಸಿಸಂ) ಮಾಡುತ್ತಾರೆ ಎಂದು ಮಹಿಳೆಯರಿಗೆ ಹಣೆಪಟ್ಟಿ ಕಟ್ಟುವ ಸಾಧ್ಯತೆ ಹೆಚ್ಚಾದರೆ, ಗಂಡಸರನ್ನು ‘ಬುದ್ಧಿವಂತ’ ಎಂದು ಕರೆಯುವ ಸಂಭವ ಹೆಚ್ಚು ಎಂದು ಕೆಲವು ಅಧ್ಯಯನಗಳು ಹೇಳಿವೆ. ಯಾವುದಾದರೂ ಯೋಜನೆಯಲ್ಲಿ ಸ್ತ್ರೀಯರು ಮತ್ತು ಪುರುಷರು ಒಟ್ಟಾಗಿ ಕೆಲಸ ಮಾಡಿದರೆ ಪುರುಷರಿಗೆ ಹೆಚ್ಚು ಸಾರ್ವಜನಿಕ ಶ್ಲಾಘನೆ ವ್ಯಕ್ತವಾಗುತ್ತದೆ. ಉದಾಹರಣೆಗೆ, ಹೆಸರುಗಳ ಪಟ್ಟಿಯಲ್ಲಿ ಗಂಡಸರ ಹೆಸರೇ ಮೊದಲು ಇರುತ್ತದೆ. ಈ ಪಟ್ಟಿಯನ್ನು ಹೀಗೆಯೇ ಮುಂದುವರಿಸಬಹುದು.
‘ಕೆನೆ ಮಾತ್ರ ತುತ್ತ ತುದಿ ತಲುಪಿದೆ ಮತ್ತು ಈ ಕೆನೆಯಲ್ಲಿ ಶೇ ನೂರರಷ್ಟು ಪುರುಷರು ಅಥವಾ ಶೇ 80ರಷ್ಟು ಪುರುಷರು ಇದ್ದಾರೆ ಎಂಬುದು ಮುಖ್ಯ ವಿಷಯವಲ್ಲ. ಇರುವ ಪ್ರತಿಭೆಯನ್ನು ಗುರುತಿಸುವಲ್ಲಿ ನಾವು ವಿಫಲರಾಗಿದ್ದೇವೆ’ ಎಂದು ಬ್ರೂಕಿಂಗ್ಸ್ ಪಟ್ಟಿಯನ್ನು ಸಿದ್ಧಪಡಿಸಿದ ರಾಷ್ಟ್ರೀಯ ಭದ್ರತೆಯ ತಜ್ಞೆ ಸೂಸನ್ ಹೆನೆಸಿ ಹೇಳುತ್ತಾರೆ. ಪತ್ರಕರ್ತರು ತಮ್ಮ ಕೆಲಸದ ಮೇಲಷ್ಟೇ ಗಮನ ಇರಿಸಿಕೊಂಡಾಗ ಅವರಲ್ಲಿ ತಟಸ್ಥ ಮನೋಭಾವ ಇರುವುದಿಲ್ಲ ಮತ್ತು ಲಿಂಗತ್ವದ ಬಗ್ಗೆ ಅವರು ನಿರ್ಲಕ್ಷ್ಯ ನಟಿಸುತ್ತಾರೆ ಎಂಬುದನ್ನು ಈ ಎಲ್ಲವೂ ತೋರಿಸುತ್ತದೆ. ಲಿಂಗ ತಾರತಮ್ಯವೇ ತಮ್ಮ ಮೂಲಗಳನ್ನು ಗುರುತಿಸಲು ಅವರು ಅವಕಾಶ ಕೊಡುತ್ತಾರೆ ಮತ್ತು ಸಮಸ್ಯೆ ಹಾಗೆಯೇ ಮುಂದುವರಿಯಲು ನೆರವಾಗುತ್ತಾರೆ. ಸುದ್ದಿಯಲ್ಲಿ ಇಂದು ಉಲ್ಲೇಖವಾಗುವ ವ್ಯಕ್ತಿಯನ್ನು ನಾಳೆ ಚರ್ಚೆಗೆ ಆಹ್ವಾನಿಸಲಾಗುತ್ತದೆ. ಮುಂದಿನ ವರ್ಷ ಒಳ್ಳೆಯ ಕೆಲಸವೊಂದು ಅವರನ್ನು ಹುಡುಕಿಕೊಂಡು ಬರುತ್ತದೆ.
ನನ್ನದೇ ಕೆಲಸದಲ್ಲಿ ಇರುವ ಲಿಂಗತ್ವ ಅಸಮತೋಲನದ ಬಗ್ಗೆ ನನ್ನಲ್ಲಿ ಬಹಳ ಕಾಲದಿಂದಲೂ ನಾಚಿಕೆ ಇದೆ. ಆದರೆ, ಸಾಮಾನ್ಯವಾಗಿ ಹೇಳುವ ನೆಪಗಳನ್ನು ನನಗೇ ಹೇಳಿಕೊಳ್ಳುತ್ತೇನೆ: ನನ್ನ ವ್ಯಾಪ್ತಿಯಲ್ಲಿ ಬರುವ ರಾಜಕಾರಣ ಮತ್ತು ಅರ್ಥಶಾಸ್ತ್ರದಂತಹ ವಿಚಾರಗಳಲ್ಲಿ ಗಂಡಸರೇ ತುಂಬಿದ್ದಾರೆ. ದೈನಿಕ ಇ-ಮೇಲ್ ವಾರ್ತಾಪತ್ರವನ್ನು 2016ರಲ್ಲಿ ಆರಂಭಿಸಿದಾಗ ನಾನು ಹೊಸದನ್ನು ಪ್ರಯತ್ನಿಸಲು ನಿರ್ಧರಿಸಿದ್ದೆ. ವಾರ್ತಾಪತ್ರದಲ್ಲಿ ಅಂದಿನ ಸುದ್ದಿಯ ಬಗ್ಗೆ ನಾನು ಬರೆದ ಕೆಲವು ಪ್ಯಾರಾಗಳಿರುತ್ತಿದ್ದವು ಮತ್ತು ಅಂತರ್ಜಾಲದಲ್ಲಿ ಓದಬಹುದಾದ ಕೆಲವು ವಿಚಾರಗಳ ಬಗೆಗಿನ ಸಲಹೆಗಳು ಇರುತ್ತಿದ್ದವು. ನಾನು ಒಂದು ಸರಳ ನಿಯಮ ರೂಪಿಸಿಕೊಂಡಿದ್ದೆ: ಒಂದೇ ಲಿಂಗಕ್ಕೆ ಸೇರಿದವರ ಕೆಲಸಗಳನ್ನು ಮಾತ್ರ ಯಾವುದೇ ವಾರ್ತಾಪತ್ರ ಉಲ್ಲೇಖಿಸುವುದು ಸಾಧ್ಯವಿಲ್ಲ. ಪ್ರತಿ ವಾರ್ತಾಪತ್ರವೂ ಹೆಣ್ಣು ಮತ್ತು ಗಂಡನ್ನು ಒಳಗೊಂಡಿರಬೇಕು. ಈ ನಿಯಮ ನನ್ನ ಕೆಲಸದ ರೀತಿಯನ್ನೇ ಬದಲಾಯಿಸಿತು.
ಈ ನಿಯಮ ಇಲ್ಲದಿರುತ್ತಿದ್ದರೆ, ನನಗೆ ಪರಿಚಿತರಾದ ವ್ಯಕ್ತಿಗಳನ್ನೇ ಸಾಮಾನ್ಯವಾಗಿ ಉಲ್ಲೇಖಿಸುತ್ತಿದ್ದೆ ಮತ್ತು ಅವರಲ್ಲಿ ಹೆಚ್ಚಿನವರು ಗಂಡಸರೇ ಆಗಿರುತ್ತಿದ್ದರು. ಈ ನಿಯಮದಿಂದಾಗಿಯೇ ನಾನು ಪರಿಣತರಿಗಾಗಿ ಹುಡುಕಾಡಬೇಕಾಯಿತು. ಇದು ನ್ಯಾಯಬದ್ಧತೆ ಮಾತ್ರ ಅಲ್ಲ, ನನ್ನ ದೃಷ್ಟಿಕೋನವನ್ನೇ ಬದಲಾಯಿಸಿತು ಮತ್ತು ನನ್ನ ಪತ್ರಿಕೋದ್ಯಮವನ್ನು ಉತ್ತಮಪಡಿಸಿತು. ಇತ್ತೀಚಿನ ತಿಂಗಳುಗಳಲ್ಲಿ ನನ್ನ ವಾರ್ತಾಪತ್ರದಲ್ಲಿ ಉಲ್ಲೇಖಿಸಲಾದವರಲ್ಲಿ ಶೇ 40ರಷ್ಟು ಮಹಿಳೆಯರಿದ್ದಾರೆ. ಹೋಲಿಕೆಗೆ ಹೇಳುವುದಾದರೆ, ವಾರಕ್ಕೊಮ್ಮೆ ನಾನು ಬರೆಯುವ ಅಂಕಣದಲ್ಲಿ ಉಲ್ಲೇಖವಾಗುವವರಲ್ಲಿ ಮಹಿಳೆಯರ ಪ್ರಮಾಣ ಶೇ 20ಕ್ಕಿಂತ ಕಡಿಮೆ. ಉತ್ತಮವಾಗಬೇಕು ಎಂಬ ಸ್ಫುಟವಿಲ್ಲದ ಬಯಕೆ ಮತ್ತು ಹೀಗೆಯೇ ಮಾಡಬೇಕು ಎಂಬ ಯೋಜನೆಯ ನಡುವೆ ಎಷ್ಟು ವ್ಯತ್ಯಾಸ ಇದೆ ಎಂಬುದನ್ನು ಈ ಎರಡರ ನಡುವಣ ಅಂತರ ತೋರಿಸಿಕೊಡುತ್ತದೆ. ಏಡ್ರಿಯೆನ್ ನನಗೆ ಹೇಳಿದಂತೆ ‘ಕಾಳಜಿ ಇದ್ದರೆ ಸಾಲದು, ಅದನ್ನು ಕಾರ್ಯರೂಪಕ್ಕೆ ಇಳಿಸಲು ಏನು ಮಾಡಬೇಕು ಎಂಬುದಕ್ಕೆ ಯೋಜನೆ ಇರಬೇಕು’.
ಲಿಂಗತ್ವದ ಲೆಕ್ಕದಲ್ಲಿ ನನ್ನ ಸಂಯೋಜನೆ ಈಗಲೂ ಪುರುಷ ಪ್ರಧಾನವೇ ಆಗಿದೆ. ಹಾಗಾಗಿ ನಾನು ಕೆಲವು ಹೊಸ ಕ್ರಮಗಳನ್ನು ಕೈಗೊಳ್ಳುತ್ತಿದ್ದೇನೆ. ಮಹಿಳಾ ಪರಿಣತರ ಪಟ್ಟಿ ಮತ್ತು ಇತರ ಮೂಲಗಳಿಂದ ಅರ್ಥಶಾಸ್ತ್ರ, ರಾಜಕಾರಣ, ರಾಷ್ಟ್ರೀಯ ಭದ್ರತೆ ಮುಂತಾದ ವಿಚಾರಗಳಲ್ಲಿ ಪೂರ್ಣ ಮಹಿಳೆಯರೇ ಇರುವ ಟ್ವಿಟರ್ ಫೀಡ್ಗಳ ಪಟ್ಟಿ ಮಾಡಿಕೊಂಡಿದ್ದೇನೆ. ಇಂತಹ ಟ್ವಿಟರ್ ಸಂದೇಶಗಳು ಎಲ್ಲರಿಗೂ ಲಭ್ಯ ಇರುತ್ತವೆ. ಬೇರೆ ವಿಷಯಗಳಲ್ಲಿ ಇತರರೂ ಇಂತಹ ಪಟ್ಟಿಗಳನ್ನು ಸಿದ್ಧಪಡಿಸಿಕೊಳ್ಳಬಹುದು. ಬಿಳಿಯರಲ್ಲದವರಷ್ಟೇ ಇರುವ ಗುಂಪುಗಳನ್ನು ಕೂಡ ಆಯ್ಕೆ ಮಾಡಿಕೊಳ್ಳಬಹುದು. ಪಟ್ಟಿಯಲ್ಲಿ ಯಾರು ಸೇರ್ಪಡೆಯಾಗಿಲ್ಲ ಎಂಬುದನ್ನು ನನ್ನ ಓದುಗರೇ ಹೇಳುತ್ತಾರೆ.
ಮಹಿಳೆಯರು ಮಾತ್ರ ಕಳುಹಿಸಿದ ಸಂದೇಶಗಳನ್ನು ಓದುವುದು ಮೋಡಿ ಮಾಡುವಂತಹ ಅನುಭವ ಕೊಡುತ್ತದೆ. ಮೊದಲಿಗೆ, ಮಿಶ್ರ ಪಟ್ಟಿಗೆ ಬದಲಾಗಿ ಮಹಿಳೆಯರಷ್ಟೇ ಇರುವ ಪಟ್ಟಿ ತಯಾರಿ ನನ್ನಲ್ಲಿ ಸ್ವಲ್ಪ ಕಿರಿಕಿರಿ ಉಂಟು ಮಾಡಿತ್ತು. ಬಳಿಕ, ನನಗೆ ಕೆಲವು ವಿಚಾರಗಳು ಮನದಟ್ಟಾದವು: ಅರ್ಥಶಾಸ್ತ್ರ ಅಥವಾ ರಾಜಕಾರಣದ ಬಗೆಗಿನ ಚರ್ಚೆಯಲ್ಲಿ ಒಂದು ಲಿಂಗಕ್ಕೆ ಸೇರಿದವರು ಮಾತ್ರ ಭಾಗವಹಿಸುತ್ತಿದ್ದಾರೆ ಎಂಬುದು ವಿಚಿತ್ರ ಎಂದು ನಿಮಗೆ ಅನಿಸಬಹುದು. ಹಾಗೆ ಅನಿಸಿದೆ ಎಂದಾದರೆ, ಈಗ ಇಂತಹ ಕ್ಷೇತ್ರಗಳಲ್ಲಿ ನಡೆಯುವ ಸಾರ್ವಜನಿಕ ಸಂವಾದದ ಬಗ್ಗೆ ನಿಮಗೆ ಗಾಢವಾದ ಅಸಮಾಧಾನ ಉಂಟಾಗಬೇಕು. ಒಮ್ಮೆ, ಗಮನವಿಟ್ಟು ಪರಿಶೀಲನೆ ಆರಂಭಿಸಿದರೆ, ಎಲ್ಲವೂ ಎಷ್ಟೊಂದು ಆಘಾತಕಾರಿಯಾಗಿ ಗಂಡಿನ ಹಿಡಿತದಲ್ಲಿವೆ ಎಂಬುದು ಅರಿವಾಗುತ್ತದೆ. ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ನಾವು ಹೆಚ್ಚಿನ ಪ್ರಗತಿ ಸಾಧಿಸುವವರೆಗೆ, ಮಹಿಳೆಯರು ಹೇಳುವುದನ್ನು ಮಾತ್ರ ಕೇಳುವುದಕ್ಕೆ ಸಮಯ ಎತ್ತಿಡುವುದು ಅತ್ಯಂತ ಅಗತ್ಯ.