ನಮ್ಮದಾಗದ ಸಾಂವಿಧಾನಿಕ ಸಂಸ್ಥೆ ಮತ್ತು ತತ್ವ-ಡಾ. ನಿತ್ಯಾನಂದ ಬಿ ಶೆಟ್ಟಿ
ಕರ್ನಾಟಕದ ಕೆಲವು ಪದವಿ ಕಾಲೇಜುಗಳಲ್ಲಿ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಬುರ್ಖಾ ಧರಿಸಿ ಬರುತ್ತಿದ್ದಾರೆ ಎಂದು, ಅದಕ್ಕೆ ವಿರೋಧವಾಗಿ ಹೆಗಲಿಗೆ ಕೇಸರಿ ಶಾಲು ಧರಿಸಿ ಕೆಲವು ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗುತ್ತಿದ್ದಾರೆ.
ಕರ್ನಾಟಕದ ಕೆಲವು ಪದವಿ ಕಾಲೇಜುಗಳಲ್ಲಿ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಬುರ್ಖಾ ಧರಿಸಿ ಬರುತ್ತಿದ್ದಾರೆ ಎಂದು, ಅದಕ್ಕೆ ವಿರೋಧವಾಗಿ ಹೆಗಲಿಗೆ ಕೇಸರಿ ಶಾಲು ಧರಿಸಿ ಕೆಲವು ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗುತ್ತಿದ್ದಾರೆ.
ಸಾರ್ವಜನಿಕ ಜೀವನದಲ್ಲಿ ಭ್ರಷ್ಟಾಚಾರ ಎಸಗಿ ಅಪರಾಧ ಸಾಬೀತಾಗಿ ತಮಿಳುನಾಡಿನ ಎಐಎಡಿಎಂಕೆ ಪಕ್ಷದ ನಾಯಕಿ ಶಶಿಕಲಾ ಜೈಲು ಸೇರಿದ್ದಾರೆ. ಅಪರಾಧಿಯಾದ ಆಕೆಯ ಆಣತಿಯ ಮೇರೆಗೆ ಪಳನಿಸ್ವಾಮಿಯವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದಾರೆ.
ಪಕ್ಕದ ಮೆಕ್ಸಿಕೊ ದೇಶದ ಜನರನ್ನು ನಿರ್ಬಂಧಿಸಲೆಂದು ಗಡಿಯಲ್ಲಿ ಬೃಹತ್ ಗೋಡೆಯೊಂದನ್ನು ಕಟ್ಟಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಯಾರಿ ನಡೆಸಿದ್ದಾರೆ.
ಏಕಕಾಲದಲ್ಲಿ ಆದರೆ ಬೇರೆ ಬೇರೆ ಪ್ರದೇಶಗಳಲ್ಲಿ ನಡೆದಿರುವ ಈ ಘಟನೆಗಳು ಕೇವಲ ಘಟನೆಗಳಲ್ಲ. ಇವು ನಮ್ಮ ದೇಶ-ಕಾಲದ ಬಹುಮುಖ್ಯ ಸಾಂಸ್ಕೃತಿಕ ವಿದ್ಯಮಾನಗಳು. ಇವುಗಳನ್ನು ಪ್ರತ್ಯೇಕ ಎಂದು ನೋಡದೆ ಒಂದು ಬೃಹತ್ ಸಾಂಸ್ಕೃತಿಕ ಪಠ್ಯ ಎಂದು ಭಾವಿಸಿ ಅರ್ಥೈಸಬೇಕಾಗಿದೆ.
ಈಗ ಮೊದಲಿನ ಘಟನೆಯನ್ನು ನೋಡೋಣ. ಬುರ್ಖಾ ಮತ್ತು ಕೇಸರಿ ಶಾಲು ವಿವಾದದಲ್ಲಿ ತೊಡಗಿಕೊಂಡವರು ಆಧುನಿಕವಾದ ಪದವಿ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರು. ಕರ್ನಾಟಕದಲ್ಲಿ ಪದವಿ ಶಿಕ್ಷಣವನ್ನು ಪಡೆಯುತ್ತಿರುವವರಿಗೆ ಭಾರತೀಯ ಸಂವಿಧಾನ ಅಭ್ಯಸಿಸುವುದನ್ನು ನಮ್ಮ ಸರ್ಕಾರ ಕಡ್ಡಾಯಗೊಳಿಸಿದೆ. ಸಂವಿಧಾನದ ಆಶಯಗಳನ್ನು ಓದಿ, ಅದರ ಉದಾತ್ತ ಮೌಲ್ಯ ಮತ್ತು ನೀತಿಗಳನ್ನು ತಮ್ಮ ಬಾಳ್ವೆಯಲ್ಲಿ ಬೆಸೆಯಬೇಕಿದ್ದ ವಿದ್ಯಾರ್ಥಿಗಳು ಜಾತಿ-ಮತಗಳ ಚೌಕಟ್ಟನ್ನು ಮೀರಿಲ್ಲ ಎನ್ನುವುದು ಇಲ್ಲಿ ಸಾಬೀತಾಗಿದೆ.
ಈ ವಿವಾದದಲ್ಲಿ ಬುರ್ಖಾ ಒಂದು ನೆವ ಅಷ್ಟೇ. ಮುಸ್ಲಿಂ ಹೆಣ್ಣುಮಕ್ಕಳನ್ನು ಹೆದರಿಸಿ-ಹೆದರಿಸಿಯೇ ಬುರ್ಖಾ ಹಾಕಿಸಲಾಗಿತ್ತು. ಈಗ ಅವರನ್ನು ಬೆದರಿಸಿ-ಬೆದರಿಸಿಯೇ ಬುರ್ಖಾ ತೆಗೆಸಲಾಗುತ್ತಿದೆ. ಸಾರ್ವಜನಿಕಗೊಳ್ಳುವುದಕ್ಕೆ ಸಂಕೋಚಪಡುವ ಸಾಂಸ್ಕೃತಿಕ ಹಿನ್ನೆಲೆಯ ಬುರ್ಖಾ ಈ ಘಟನೆಯಿಂದ ಇನ್ನಷ್ಟು ಮುದುಡಿಕೊಳ್ಳುತ್ತಿದೆ. ಸಾರ್ವಜನಿಕಗೊಳ್ಳುವುದಕ್ಕೆ ಗರ್ವಪಡುವ ಸಾಂಸ್ಕೃತಿಕ ಹಿನ್ನೆಲೆಯ ಕೇಸರಿ ಶಾಲು ಈ ಘಟನೆಯಿಂದ ಮತ್ತಷ್ಟು ಆಕ್ರಮಣಶಾಲಿಯಾಗುತ್ತಿದೆ. ಈ ವಿವಾದದಲ್ಲಿ ಬುರ್ಖಾದ ಮುಂದೆ ಯಾವುದೋ ಇನ್ನೊಂದು ಬಟ್ಟೆಯಾಗಿ ಕೇಸರಿ ಶಾಲು ಬಂದಿಲ್ಲ. ಅದು ಪರಾಕ್ರಮದ ಸಂಕೇತವಾಗಿ ಬಂದಿದೆ. ಪರಾಕ್ರಮ ಅಂದರೆ ಶೌರ್ಯ ಎಂದಲ್ಲ. ಪರರನ್ನು ಆಕ್ರಮಿಸುವ ನಿರ್ದಿಷ್ಟ ರಾಜಕೀಯ ಮನೋಧರ್ಮವಾಗಿ ಬಂದಿದೆ.
ನಮ್ಮ ಸಮಾಜಗಳಲ್ಲಿ ಸಂಕೇತಗಳ ಉತ್ಪಾದನೆ, ಸಂಕೇತಗಳ ವಿಕಾಸ-ವಿನಾಶಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಭಾರತದಲ್ಲಿ ಬಾಬರಿ ಮಸೀದಿಯ ಧ್ವಂಸ, ಆಫ್ಘಾನಿಸ್ತಾನದಲ್ಲಿ ಬುದ್ಧನ ವಿಗ್ರಹಗಳ ಧ್ವಂಸ ಮತ್ತು ಅಮೆರಿಕದಲ್ಲಿ ಅವಳಿ ಕಟ್ಟಡಗಳ ಧ್ವಂಸ ಇವೆಲ್ಲವನ್ನೂ ನಾವು ಧರ್ಮತಪ್ತ ಜನ ತಮ್ಮ ಕಾಲದಲ್ಲಿ ಖಚಿತ ರಾಜಕೀಯ ಉದ್ದೇಶದಿಂದ ನಡೆಸಿದ ಸಂಕೇತ ನಾಶಗಳೆಂದು (ಸಿಮಿಯಾಟಿಕ್ಸ್‌ನ ಹಿನ್ನೆಲೆಯಲ್ಲಿ) ನೋಡಬೇಕು. ಹಾಗೆಯೇ ಭಾರತೀಯ ಸಂದರ್ಭದಲ್ಲಿ ಸಾಮಾನ್ಯ ದನವೊಂದು ಅಸಾಮಾನ್ಯ ಧೇನುವಾಗುವ ಪ್ರಕ್ರಿಯೆಯನ್ನೂ ಸಂಕೇತದ ಉತ್ಪಾದನೆ ಮತ್ತು ವಿಕಾಸ ಎಂದು ನೋಡಬೇಕು. ನಮಗೆ ಬೇಕಾಗುವ ಸಾಂಸ್ಕೃತಿಕ ಸಂಕೇತಗಳನ್ನು ಬೆಳೆಸುವ ಮತ್ತು ನಮಗೆ ಬೇಡವಾಗುವ ಅನ್ಯರ ಸಾಂಸ್ಕೃತಿಕ ಸಂಕೇತಗಳನ್ನು ಹನನ ಮಾಡುವ ಈ ವಿದ್ಯಮಾನ ಜಾಗತಿಕವಾದುದು. ಸಂಕೇತಗಳ ವಿಕಾಸ ಮತ್ತು ವಿನಾಶಗಳನ್ನು ಕೈಗೊಳ್ಳುತ್ತಿರುವವರು ಅವಿದ್ಯಾವಂತರಲ್ಲ; ಅವರು ನಮ್ಮ ಕಾಲದ ಲಿಬರಲ್ ಎಜುಕೇಷನ್‌ನ ಫಲಾನುಭವಿಗಳು.
ತಮಿಳುನಾಡಿನ ಘಟನೆ ನೋಡಿ. ಪ್ರಜಾಪ್ರಭುತ್ವವನ್ನು ಒಂದು ಮುಖ್ಯ ಸಂಗತಿ ಎಂದು ಭಾವಿಸಿದವರನ್ನು ತಮಿಳುನಾಡಿನ ರಾಜಕೀಯ ದಿಗ್ಭ್ರಮೆಗೆ ತಳ್ಳಿದೆ. ಇಲ್ಲಿಯ ಶಾಸಕರು ಮತ್ತು ರಾಜ್ಯಪಾಲರು ಪೊಲಿಟಿಕಲ್ ಥಿಯರಿಗಳನ್ನು ಪಕ್ಕಕ್ಕಿಟ್ಟು ತಮಿಳುನಾಡನ್ನು ಒಂದು ‘ಪೊಲಿಟಿಕಲ್ ಥಿಯೇಟರ್’ ಆಗಿ ಪರಿವರ್ತಿಸಿದ್ದರು. ತಮಿಳುನಾಡಲ್ಲಿ ನಡೆಯುತ್ತಿರುವುದು ಒಂದು ಬಗೆಯ ಪೊಲಿಟಿಕಲ್ ಪೊಲೀಸಿಂಗ್. ಪೊಲಿಟಿಕ್ಸ್‌ಗೂ ಪೊಲೀಸಿಂಗ್‌ಗೂ ಬಹಳ ಹತ್ತಿರದ ಸಂಬಂಧ ಇರುವುದನ್ನು ಈ ಘಟನೆ ನೆನಪಿಸುತ್ತಿದೆ. ರಾಜಕೀಯ ಪಟುತ್ವ ಕಣ್ಮರೆಯಾಗಿ ರಾಜಕೀಯ ವಿಟತ್ವ ವಿಜೃಂಭಿಸುವ ಬಗೆಯಿದು.
ಮೂರನೆಯದು ಸ್ವಾತಂತ್ರ್ಯದ ಅತಿದೊಡ್ಡ ಸಂಕೇತವಾದ ಸ್ವಾತಂತ್ರ್ಯ ದೇವತೆಯ ವಿಗ್ರಹವನ್ನು ಹೊತ್ತಿರುವ ಅಮೆರಿಕದ ಅಧ್ಯಕ್ಷ ವಲಸಿಗರ ನಿಷೇಧಕ್ಕೆ ಮುಂದಾಗುವಂತಹ ಅತಿರೇಕದ ಮಾತುಗಳನ್ನು ಆಡುತ್ತಿರುವುದು. ಜಾಗತೀಕರಣವನ್ನು ಪ್ರತಿಪಾದಿಸಿ, ಅದರಿಂದ ಭರ್ತಿ ಲಾಭ ಮಾಡಿಕೊಂಡ ರಾಷ್ಟ್ರವೊಂದು ತನ್ನ ಆರ್ಥಿಕ ನೀತಿಗೆ ವಿರುದ್ಧವಾದ ಸಾಂಸ್ಕೃತಿಕ ನೀತಿಯೊಂದನ್ನು ಕಟ್ಟುವುದು ಪ್ರಜಾಪ್ರಭುತ್ವಾತ್ಮಕ ರಾಷ್ಟ್ರಕ್ಕಿರಬೇಕಾದ ವಿವೇಕವೊಂದು ಮರೆಯಾಗಿ, ಸಂವಿಧಾನದ ಹಾಳೆಗಳಿಗಿಂತ ಬ್ಯಾಲೆನ್ಸ್ ಶೀಟ್‌ಹಾಳೆಗಳು ಮುಖ್ಯವಾಗುವ ಅತ್ಯಂತ ವಿದೀರ್ಣ ಸ್ಥಿತಿ ಇದು.
ಮೇಲ್ನೋಟದಲ್ಲಿ ಈ ಘಟನೆಗಳು ಪ್ರಜಾಪ್ರಭುತ್ವದ ಸಂಸ್ಕೃತಿಗೆ ಬಂದ ಬಿಕ್ಕಟ್ಟನ್ನು ಸೂಚಿಸುತ್ತಿವೆ. ಆದರೆ ನಿಜಕ್ಕೂ ಇದು ಪ್ರಜಾಪ್ರಭುತ್ವದ ನೀತಿ-ನಿಯಮ-ತತ್ವ- ಮೀಮಾಂಸೆಗಳನ್ನು ಸಾಂಸ್ಥಿಕ ವ್ಯವಸ್ಥೆಯ ಮೂಲಕ ನಮಗೆ ದಾಟಿಸುತ್ತಿರುವ ನಮ್ಮ ಉನ್ನತ ಶಿಕ್ಷಣ ಸಂಸ್ಥೆಗಳ ಬಿಕ್ಕಟ್ಟಾಗಿದೆ.
ವಸ್ತ್ರ ಸಂಹಿತೆ, ಆಹಾರ ಸಂಹಿತೆ, ದೇಶಪ್ರೇಮ ಅಥವಾ ಜನರ ವಲಸೆಗೆ ಸಂಬಂಧಿಸಿದ ನೀತಿಸಂಹಿತೆ ವಿವಾದಗಳೆಲ್ಲಾ ಈ ಪಠ್ಯದ (ಟೆಕ್ಸ್ಟ್) ಸಹಪಠ್ಯಗಳಾಗಿವೆ (ಕೋ-ಟೆಕ್ಸ್ಟ್). ಈ ಪಠ್ಯ ಮತ್ತು ಸಹಪಠ್ಯಗಳಿಗೆ ಕಾರಣವಾಗಿರುವ ಸಂದರ್ಭಪಠ್ಯವನ್ನು (ಕಾನ್‌ಟೆಕ್ಸ್ಟ್) ತಿಳಿದುಕೊಳ್ಳುವುದೇ ಈ ಎಲ್ಲ ವಿದ್ಯಮಾನಗಳನ್ನು ಅರ್ಥ ಮಾಡಿಕೊಳ್ಳುವ ಏಕೈಕ ದಾರಿಯಾಗಿದೆ. ಈ ಸಂದರ್ಭಪಠ್ಯ ನಮ್ಮ ಶಿಕ್ಷಣಸಂಸ್ಕೃತಿಯೇ ಆಗಿದೆ. ಸಂಸ್ಕೃತಿಯನ್ನು ಮಾನವ ವಿಕಾಸದ ಪ್ರಕ್ರಿಯೆ ಎಂದು ತಿಳಿಯುವುದಾದರೆ, ಸಂಸ್ಕೃತಿಯ ಜೊತೆಗೆ ನಮ್ಮ ಶಿಕ್ಷಣ ವ್ಯವಸ್ಥೆ ಯಾವ ಬಗೆಯ ಸಂಬಂಧವನ್ನು ಹೊಂದಿದೆ ಎಂಬುದನ್ನು ಗಮನಿಸಬೇಕು.
ಆಧುನಿಕ ಶಿಕ್ಷಣದ ಫಲಾನುಭವಿಗಳಾಗಿರುವ ಕರ್ನಾಟಕದ ಕಾಲೇಜು ಹುಡುಗರು, ತಮಿಳುನಾಡಿನ ಶಾಸಕರು ಮತ್ತು ರಾಜ್ಯಪಾಲರು ಮತ್ತು ಟ್ರಂಪ್ ಅವರನ್ನು ಚುನಾಯಿಸಿದ ಅಮೆರಿಕದ ಜನರು ಮತ್ತು ಸ್ವತಃ ಟ್ರಂಪ್; ಶಿಕ್ಷಣದ ಈ ಎಲ್ಲ ಆದರ್ಶ ಮತ್ತು ಧ್ಯೇಯೋದ್ದೇಶಗಳಿಗೆ ವಿರೋಧವಾಗಿ ಪ್ರವರ್ತಿಸುತ್ತಿದ್ದಾರೆ ಎಂದರೆ ಸಮಸ್ಯೆ ಇರುವುದು ವ್ಯಕ್ತಿಗಳಲ್ಲಿ ಅಲ್ಲ; ನಮ್ಮ ಲಿಬರಲ್ ಎಜುಕೇಷನ್‌ನಲ್ಲಿ ಮತ್ತು ನಮ್ಮ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಎನ್ನುವುದನ್ನು ಪ್ರಾಂಜಲವಾಗಿ ಒಪ್ಪಿಕೊಳ್ಳಬೇಕಾಗಿದೆ.
ನಮ್ಮ ಮುಂದಿರುವ ಪ್ರಜಾಪ್ರಭುತ್ವ ಎಂಬ ರಾಜಕೀಯ ಪ್ರಯೋಗ, ರಾಜಕೀಯ-ಬೌದ್ಧಿಕ ಮೀಮಾಂಸೆಗಳು, ವಿಜ್ಞಾನ-ತಂತ್ರಜ್ಞಾನದ ಸಿದ್ಧಿ-ಸಾಧನೆಗಳು; ಇವೆಲ್ಲವೂ ಪಶ್ಚಿಮದ ಸಮಾಜಗಳ ಜೀವನದರ್ಶನದ ಸ್ವಯಂ ಅನ್ವೇಷಣೆಯ ದಾರಿಯಲ್ಲಿ ಮೂಡಿಬಂದವುಗಳು. ಈ ಬೃಹತ್ ಬೌದ್ಧಿಕ ವಾಙ್ಮಯ ವಸಾಹತು ಸಂದರ್ಭದಲ್ಲಿ ಆಧುನಿಕ ಶಿಕ್ಷಣದ ಮೂಲಕ ನಮಗೆ ಅಡ್ಡಾದಿಡ್ಡಿಯಾಗಿ ಬಂದು ತಲುಪಿತು. ಈ ಬೌದ್ಧಿಕತೆಗಳ ಜೊತೆಗೆ ನಮಗೆ ಸಾವಯವ ಸಂಬಂಧವಿಲ್ಲ. ಶಿಕ್ಷಣ, ನ್ಯಾಯಾಂಗ, ಪ್ರಜಾಸತ್ತೆ ಇವಾವುವೂ ನಮ್ಮದಲ್ಲ. ಅದನ್ನು ನಾವು ನಮ್ಮದಾಗಿಸುವ ಪ್ರಯತ್ನವನ್ನೂ ನಡೆಸಿಲ್ಲ. ನಮ್ಮದಲ್ಲದ ಕ್ರಿಕೆಟನ್ನು, ನಮ್ಮದಲ್ಲದ ಸಿನಿಮಾವನ್ನು ನಾವು ಹೇಗೆ ನಮ್ಮದಾಗಿಸಿದೆವೋ ಹಾಗೆಯೇ; ನಾವು ಯಾವತ್ತೂ ಉನ್ನತ ಶಿಕ್ಷಣ ಎಂಬ ಸಂಸ್ಥೆಯನ್ನು, ಪ್ರಜಾಪ್ರಭುತ್ವ ಎಂಬ ತತ್ವವನ್ನು ನಮ್ಮದನ್ನಾಗಿಸುವ ಪ್ರಯತ್ನ ನಡೆಸಲಿಲ್ಲ. ನಾವು ಮೊದಲಿಗೆ ತಿಳಿದುಕೊಳ್ಳಬೇಕಾದುದು ಈ ಎಲ್ಲ ಸಂಸ್ಥೆಗಳು, ವ್ಯವಸ್ಥೆಗಳು, ತತ್ವಗಳು ನಮ್ಮವಲ್ಲ ಎಂಬುದನ್ನು. ಅವು ನಮ್ಮವಲ್ಲ ಎಂಬುದು ನಮಗೆ ಖಾತ್ರಿಯಾದರೆ ಮಾತ್ರ ಅವನ್ನು ನಮ್ಮದಾಗಿಸುವುದು ಹೇಗೆ ಎಂಬ ಅನ್ವೇಷಣೆ ಸಾಧ್ಯವಾಗುತ್ತದೆ. ಅನ್ವೇಷಣೆ ಮುಖ್ಯವಾಗದೆ ಈ ಎಲ್ಲ ಸಂಸ್ಥೆ-ವ್ಯವಸ್ಥೆ-ತತ್ವಗಳ ಪ್ರಯೋಜನಗಳು ಮಾತ್ರ ನಮಗೆ ಮುಖ್ಯವಾದವು. ಪಶ್ಚಿಮದ ಬೌದ್ಧಿಕ ವಾಙ್ಮಯವನ್ನು ಶಿಸ್ತುಬದ್ಧವಾಗಿ ದಾಟಿಸುವ ಶಿಕ್ಷಣ ಸಂಸ್ಕೃತಿಯ ಧ್ಯೇಯದ ಜೊತೆಗೆ ಸಂಬಂಧ ಸ್ಥಾಪಿಸದೆ, ಪ್ರಯೋಜನದ ಜೊತೆಗೆ ಸಂಬಂಧ ಬೆಳೆಸಿರುವುದೇ ಈ ಎಲ್ಲ ಬಿಕ್ಕಟ್ಟುಗಳಿಗೆ ಮೂಲಕಾರಣ.
ಧ್ಯೇಯ ಮತ್ತು ಪ್ರಯೋಜನದ ನಡುವಿನ ಗೊಂದಲವನ್ನು ನಮ್ಮ ರಾಜಕೀಯ ಸಂಸ್ಕೃತಿಯ ಅಪೂರ್ವ ನಿದರ್ಶನವೊಂದರ ಮೂಲಕ ಪರಿಚಯಿಸುತ್ತೇನೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಗಾಂಧಿ ಅವರನ್ನು ವಿದೇಶಿ ಪತ್ರಕರ್ತನೊಬ್ಬ ಸಂದರ್ಶಿಸುತ್ತ ‘ಕೊನೆಗೂ ನಿಮ್ಮ ಧ್ಯೇಯ ಏನು…?’ ಎಂದು ಕೇಳುತ್ತಾನೆ. ಆಗ ಗಾಂಧಿ ‘ನನಗೆ ಮೂರು ಧ್ಯೇಯಗಳಿವೆ. ಒಂದನೆಯದು, ಹಿಂದೂ-ಮುಸಲ್ಮಾನರು ಸಾಮರಸ್ಯದ ಬದುಕು ನಡೆಸುವಂತಹ ಪರಿಸ್ಥಿತಿಯನ್ನು ರೂಪಿಸುವುದು. ಎರಡನೆಯದು, ಸಮಾಜದಲ್ಲಿರುವ ಅಸ್ಪೃಶ್ಯತೆಯನ್ನು ಉಚ್ಚಾಟಿಸುವುದು ಮತ್ತು ಮೂರನೆಯದು, ಜನ ವಿದೇಶೀ ಬಟ್ಟೆಗಳನ್ನು ತ್ಯಜಿಸಿ ಖಾದಿ ಬಳಸುವಂತೆ ನೋಡಿಕೊಳ್ಳುವುದು’ ಎನ್ನುತ್ತಾರೆ.
ಗಾಂಧಿಯವರ ಧ್ಯೇಯಗಳಲ್ಲಿ ಬ್ರಿಟಿಷರನ್ನು ಭಾರತ ಬಿಟ್ಟು ತೊಲಗಿಸುವ ಪ್ರಸ್ತಾವವೇ ಇಲ್ಲ. ಆದರೆ ಈ ಧ್ಯೇಯಗಳು ಈಡೇರಿದಲ್ಲಿ ಬ್ರಿಟಿಷರು ಭಾರತವನ್ನು ಬಿಟ್ಟು ಹೊರಡುವುದು ತನ್ನಿಂತಾನೇ ಸಂಭವಿಸುತ್ತದೆ. ಅಂದರೆ ಧ್ಯೇಯದ ದಾರಿಯಲ್ಲಿ ಕೆಲವು ಪ್ರಯೋಜನಗಳು ಘಟಿಸುತ್ತವೆ. ಹಾಗೆಂದ ಮಾತ್ರಕ್ಕೆ ಪ್ರಯೋಜನವೇ ಧ್ಯೇಯವಲ್ಲ. ಧ್ಯೇಯ ಹೆಚ್ಚು ಆಳವಾದುದು ಮತ್ತು ಹೆಚ್ಚು ಘನವಾದುದು. ಧ್ಯೇಯಕ್ಕೆ ಆಧ್ಯಾತ್ಮಿಕವಾದ ವಿಸ್ತಾರ ಇದ್ದರೆ ಪ್ರಯೋಜನಕ್ಕಿರುವುದು ಲೌಕಿಕದ ಆಸಕ್ತಿಯಷ್ಟೇ.
ನಮ್ಮ ಶಿಕ್ಷಣದ ಸಂದರ್ಭದಲ್ಲೂ ಇಂತಹುದೇ ಒಂದು ಫಜೀತಿ ಸಂಭವಿಸಿದೆ. ಶಿಕ್ಷಣದ ಧ್ಯೇಯವನ್ನು ತಿಳಿಯದೆ, ಶಿಕ್ಷಣವನ್ನು ಪಡೆಯುವ ದಾರಿಯಲ್ಲಿ ಲಭ್ಯವಾಗಬಹುದಾದ ಪ್ರಯೋಜನವನ್ನೇ ಶಿಕ್ಷಣದ ಧ್ಯೇಯ ಎಂದು ನಾವು ತಪ್ಪು ಭಾವಿಸಿದ್ದೇವೆ. ಪಶ್ಚಿಮದ ಶಿಕ್ಷಣ ಕ್ರಮವೇ ಅಮೆರಿಕಕ್ಕೂ ಹೋಗಿರುವುದು, ಭಾರತಕ್ಕೂ ಬಂದಿರುವುದು. ಉನ್ನತಶಿಕ್ಷಣದ ಧ್ಯೇಯವನ್ನು ರಕ್ಷಿಸುವುದು ಪಶ್ಚಿಮದ ಸಮಾಜಗಳಲ್ಲಿ ಸಾವು-ಬದುಕಿನ ಪ್ರಶ್ನೆಯಾದರೆ, ಭಾರತೀಯ ಸಮಾಜಗಳಲ್ಲಿ ಉನ್ನತ ಶಿಕ್ಷಣದ ಪ್ರಯೋಜನವನ್ನು ನಮ್ಮ ಹೊಟ್ಟೆಪಾಡಿನ ಜೊತೆಗೆ ಬೆಸೆಯಲಾಗಿದೆ. ನಮ್ಮ ಅನುಭವದ ಭಾಗವಾಗದ, ನಮ್ಮ ಸಂಸ್ಕೃತಿಯ ಭಾಗವಾಗದ, ನಮ್ಮ ಜೀವನ ದರ್ಶನದ ಭಾಗವಾಗದ ಶಿಕ್ಷಣ ವ್ಯವಸ್ಥೆಯಿಂದ ಹುಟ್ಟಿರುವ ಈ ನಮ್ಮ ಹುಡುಗರು, ಶಾಸಕರು ತಾವು ವಿದ್ಯಾವಂತರಾಗಿರುವುದನ್ನು ಮತ್ತು ಜನಪ್ರತಿನಿಧಿಗಳಾಗಿರುವುದನ್ನು ಅಭಿನಯಿಸುತ್ತಿದ್ದಾರೆಯೇ ಹೊರತು ಅನುಭವಿಸುತ್ತಿಲ್ಲ. ಭಾರತದಂತಹ ದೇಶದಲ್ಲಿ ಶಿಕ್ಷಣದ ಕುರಿತು ಸ್ವ-ಪ್ರತಿಫಲನಗೊಳ್ಳುವುದಕ್ಕೆ ಅವಕಾಶವೇ ಇಲ್ಲದಂತಹ ವಾತಾವರಣದಲ್ಲಿ ನೆಹರೂ ‘ಜಾತಿಯನ್ನು ತೊಲಗಿಸಿಬಿಡುತ್ತೇನೆ’ ಎಂದಿದ್ದರು. ನವಭಾರತದ ಆಧುನಿಕ ಅವಕಾಶಗಳಲ್ಲಿ ಜಾತಿ ನಿರ್ನಾಮಗೊಳ್ಳುತ್ತದೆ ಎಂದು ಅವರು ನಂಬಿದ್ದರು. ಆದರೆ ನೆಹರೂವಿಯನ್ ಕಾಲದ ಈ ನಂಬಿಕೆ, ಮಂಡಲ್ ಆಯೋಗದ ಶಿಫಾರಸುಗಳನ್ನು ವಿ.ಪಿ.ಸಿಂಗ್ ನೇತೃತ್ವದ ಸರ್ಕಾರ ಜಾರಿಗೊಳಿಸಿದಾಗ ದೆಹಲಿಯಲ್ಲಿ ಕಾಣಿಸಿದ ವಿರೋಧದ ಬೆಂಕಿಯಲ್ಲಿ ಸುಟ್ಟು ಭಸ್ಮವಾಯಿತು. ಪ್ರಜಾಪ್ರಭುತ್ವದ ಸಂಸ್ಕೃತಿಗೆ ಬಂದ ಈ ಬಿಕ್ಕಟ್ಟು ಸಂಸ್ಕೃತಿಯ ಕುರಿತು ಮತ್ತು ಸಂಸ್ಕೃತಿಯನ್ನು ರೂಪಿಸುವ ಶಿಕ್ಷಣದ ಕುರಿತು ನಾವೆಲ್ಲರೂ ಹೆಚ್ಚು ಯೋಚಿಸುವಂತೆ ಮಾಡಿತು.
ಪ್ರಶ್ನೆಗಳನ್ನು ಕೇಳುವುದನ್ನು ಕಲಿಸಿದ ಪಶ್ಚಿಮದ ಶಿಕ್ಷಣ ಕ್ರಮದಲ್ಲಿ ಮತ್ತು ಸಿದ್ಧ ಉತ್ತರಗಳನ್ನು ಕೊಡುವುದನ್ನಷ್ಟೇ ಕಲಿಸಿದ ಭಾರತೀಯ ಶಿಕ್ಷಣಕ್ರಮದಲ್ಲಿ ಮೂಲಭೂತವಾದ ಭಿನ್ನತೆಗಳಿರುವುದರಿಂದಲೇ ಪ್ರಜಾಪ್ರಭುತ್ವ, ಸಂವಿಧಾನ, ಸಾಮಾಜಿಕ ನ್ಯಾಯ ನಮ್ಮ ಅನುಭವದ ಭಾಗವಾಗಿ ನಮ್ಮೊಳಗಿನಿಂದ ಬರಲಿಲ್ಲ. ನಾಗರಿಕ ಬದುಕಿನ ಲಕ್ಷಣಗಳಾಗಿ ಹೊರಗಿನಿಂದ ಬಂದವು. ಶಿಕ್ಷಣದ ಅರ್ಥ ಅಥವಾ ಅದರ ಮಹತ್ವ ಅದರ ಉಪಯೋಗದಲ್ಲಿಲ್ಲ, ಅದರ ಧ್ಯೇಯದಲ್ಲಿದೆ ಎಂದು ಭಾವಿಸಿದ ಗಾಂಧಿ-ಅಂಬೇಡ್ಕರ್-ಲೋಹಿಯಾ ಕನಸಿದ ಭಾರತದಲ್ಲಿ ಒಬ್ಬಾಕೆ ಮೇಧಾ ಪಾಟ್ಕರ್, ಒಬ್ಬ ಶಾಂತವೇರಿ ಗೋಪಾಲಗೌಡ, ಒಬ್ಬ ದೇವನೂರ ಮಹಾದೇವರಂತಹ ಬುದ್ಧಿಜೀವಿಗಳು ಹುಟ್ಟಿದರು. ಉನ್ನತ ಶಿಕ್ಷಣದ ಉದ್ದೇಶ ಕೌಶಲಭರಿತ ಕೈಗಳನ್ನು ಅಥವಾ ಯಂತ್ರಗಳನ್ನು ತಯಾರಿಸುವುದು ಎಂಬ ಆಧುನಿಕ ರಾಜಕೀಯ ನೇತಾರರು ಕನಸಿದ ಭಾರತದಲ್ಲಿ ರಾತ್ರಿ ಹೊತ್ತು ಧೇನುಗಳನ್ನು ಕಾಯುವ ಶ್ರಮಜೀವಿ ಹುಡುಗರು ಹುಟ್ಟಿದರು, ಬುರ್ಖಾ ಹಾಕಿಸುವ ಅಥವಾ ತೆಗೆಸುವಂತಹ ಸಂಸ್ಕೃತಿ ರಕ್ಷಕರು ಹುಟ್ಟಿದರು. ತತ್ವಭ್ರಷ್ಟ ರಾಜಕಾರಣದಲ್ಲಿ ಮುಳುಗಿರುವ ಜನನಾಯಕರೂ ಹುಟ್ಟಿಕೊಂಡರು
ಉನ್ನತ ಶಿಕ್ಷಣದ ಆದಿಮ ಸ್ಥಾನ ಎಂದು ಜಗತ್ತು ಗುರುತಿಸುವ ಗ್ರೀಸ್‌ನ ತತ್ವಜ್ಞಾನಿಗಳು ಸ್ವಂತಕ್ಕೆ ಪ್ರಶ್ನೆ ಕೇಳುವ ಧೈರ್ಯ ತೋರದ ಬದುಕು ಬದುಕೇ ಅಲ್ಲ ಎಂದಿದ್ದರು. ಅದನ್ನು ಕೊಂಚ ಮುಂದುವರಿಸಿ ಧೈರ್ಯಸ್ಥ ಬದುಕನ್ನು ಕಟ್ಟುವುದನ್ನು ಕಲಿಸದ ಶಿಕ್ಷಣ ಶಿಕ್ಷಣವೂ ಅಲ್ಲ ಎಂದು ಹೇಳಬೇಕಾಗಿದೆ. ಭಾರತ ತನ್ನ ಸದ್ಯದ ಸಾಂಸ್ಕೃತಿಕ ಮತ್ತು ನೈತಿಕ ಬಿಕ್ಕಟ್ಟುಗಳಿಂದ ಬಿಡಿಸಿಕೊಳ್ಳಬೇಕಿದ್ದರೆ ಅದು ನಮ್ಮ ಬೌದ್ಧಿಕತೆ ರೂಪುಗೊಳ್ಳುವ ಶಿಕ್ಷಣ ವ್ಯವಸ್ಥೆ ಮತ್ತು ಶಿಕ್ಷಣ ಸಂಸ್ಥೆಗಳ ಆಮೂಲಾಗ್ರ ಪುನರ್‌ರಚನೆಗೆ ತೊಡಗಬೇಕಾಗಿದೆ.
[ಲೇಖಕ: ಅಧ್ಯಾಪಕ, ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ತುಮಕೂರು ವಿಶ್ವವಿದ್ಯಾಲಯ, ತುಮಕೂರು]