ನನ್ಮಕ್ಕ ಮಣ್ಣು ಹಿಡಿದ್ರು ಅದು ಚಿನ್ನ ಆಯ್ತದ – ನಂಜಮ್ಮ, ಚಿಕ್ಕವಲಂದೆ
[ಅಭಿನವ ಪ್ರಕಾಶನದಿಂದ ದೇವನೂರ ಮಹಾದೇವರ ಸಾಹಿತ್ಯ ಕುರಿತು ಪ್ರಕಟವಾಗಿರುವ “ಯಾರ ಜಪ್ತಿಗೂ ಸಿಗದ ನವಿಲುಗಳು” ಸಂಕಲನದಿಂದ ಆಯ್ದ, ಮಹಾದೇವ ಅವರ ತಾಯಿ ನಂಜಮ್ಮ ಅವರ ಒಡಲಾಳದ ಮಾತುಗಳ ಈ ಅದ್ಯಾಯ ನಮ್ಮ ಮರು ಓದಿಗಾಗಿ…]
ಮಾದೇವ್ನ ತಂದ ಊರು ದ್ಯಾವನೂರು. ನಮ್ತಂದ ಊರು ಕವಲಂದೆ, ನಮ್ಮ ಮನಲಿ ಗಂಡಮಕ್ಕ ಇಲ್ಲೆ ಇದ್ದದ್ಕ ಮನವಾಳ್ತನಕ್ಕ ಇವ್ರ ಅಪ್ಪ ಕವಲಂದೆಗ ಬಂದ್ರು, ಕವಲಂದೇಲೇ ಮಾದೇವ ಹುಟ್ಟದ್ದು, ಆಗ ಎಂಟು ದಿನದ ಹೊಟ್ಟೆನೋವು, ಎಲ್ಲೂ ಕೂಸು ಎದೆಗೇರುಬುಟ್ಟದ ಅಂತಿದ್ರು, ಆಸ್ಪತ್ರಿಲ್ಲ, ನರ್ಸಿದ್ದಿಲ್ಲ. ಯಾರಂದರ ಯಾರಿಲ್ಲ. ಮನಲಿಯ ಹೆರಿಗ ಆಯ್ತು. ಆಗ ಇವರ ತಂದ ಪೊಲೀಸ ಕೆಲ್ಸದಲ್ಲಿದ್ದು, ಆಗ ಬಂದ್ರು ಇವರ ತಂದ. ನಮ್ತಪು ದನಗಳು, ಎಮ್ಮಗಳು ಎಲ್ಲಾ ಇತ್ತು. ಮನೆ ಜನವೆಲ್ಲ ಬಾಣ್ತಿ ಅಂತ ನನ್ ದಿಕ್ಕ ಜನ ನಿಂತ್ಕಂಬುಟ್ಟು ದನ ಎಮ್ಮೆಗಳ ಕಸಕಡ್ಡಿಯೆಲ್ಲ ಮನೇಲೆ ಗುಡ್ಡ ಹಾಕ್ಕೋಯ್ತು. ಇವ್ರ ತಂದೆಯವರು ಬಂದವರು ಪೊಲೀಸ್ ಬಟ್ಟೆನ್ನೆಲ್ಲ ಬಿಚ್ಚಾಕ್ಬುಟ್ಟು ಕಸನೆಲ್ಲ ಗುಡ್ಲಿ ಜಮೀನ್ಗ ಸುರುದ್ರು. ಜಮೀನ್ಲಿ ಜೋಳ, ಹಸ್ರು, ಹಲಸಂದ, ಅವರ ಎಲ್ಲಾನುವಿ ಹಾಕ್ತಿದ್ವಿ, ಆಗ ಬಾಣಂತನ ಆಂದ್ರ ಒಂದಿಷ್ಟು ಅನ್ನ ಕೊಡೋರು, ಸಾರಿಲ್ಲ ಏನಿಲ್ಲ, ಈಗ್ನೋರು (ಕೈತೋರಿಸಿ) ಇಷ್ಟಿಷ್ಟು ಸಾರು ಕುಡಿತಾರ! ನೀವು ಅತ್ತರ್ಗ ಅಂಜ್ಕತಿದ್ವಿ. ಈಗ್ನವರು ಅಂಙ್ಕಳಲ್ಲ, ನಾವು ಒಂದ್ ಅಂದ್ರ ಅವ್ರು ಹತ್ ಅಂತಾರ.
ಮಾದೇವ ಆದ ಮೇಲ ಮೂರು ಮಕ್ಳ ತೀರ್ಕಂಬುಟು ಆಗ ಜನ ‘ಮೂರು ಮಕ್ಕ ಹೋಗವ, ಮುಕ್ಕಣ್ಣನ ಬೇಡ್ಕಂಡ್ರೂ ಮಕ್ಕಳಾಗಲ್ಲ’ ಅಂದ್ರು, ಆಗ ಮಾದೇಶ್ವರ್ನ ಬೆಟ್ಟಕ್ಕ ನಾನು ಹೋದಿ. ಆಗ ಮಾದೇಶ್ವರ್ನ ಬೆಟ್ಟಕ್ಕ ಐದು ರೂಪಾಯ್ನ ಚಾರ್ಜು. ಮಾದೇವ ಕೈಲಿ ಕೊಡಾಕ ಹತ್ ಪೈಸೂವಿ ಕೈಲಿಲ್ಲ. ಆಗ ಬಸ್ಗೂವಿ ಕಾಸಿಲ್ಲ, ಮೂರು ರಾತ್ರ ಮೂರು, ಹಗಲು ನಡೆದಿವಿ, ಆಗ ಜೋಳದ ಮುದ್ದ ಕಟ್ಕಂಡು ಹೋಗಿ ಅವ್ನ ಸೇವೆ ಮಾಡ್ದಿ. ತಾಳ ಬೆಟ್ಟ ಹತ್ಲಿಲ್ಲ, ಅಲ್ಲಿಯ ನೀರಾಕಳಾಂಗಾಗ್ಬುಟ್ಟಿ, ಮಾದೇವನ್ಗ ಒಂದ ಟೋಪಿ ತಕ್ಕಂಬಂದಿ ಕೊಳ್ಳಗಾಲದಲ್ಲಿ, ನೋಡಿ ಈಗ ನಂಗ: ಮಾತಾಡಾಕ್ಕಾಗಲ್ಲ. ನಂಗ ಉಷಾರಿಲ್ಲ. ಮಕ್ಕಳು ನನ್ನ ಸೋಬಾನ ಪದ, ಮಾದೇಶ್ವರ್ನ ಪದ ಎಲ್ಲಾನುವಿ ಕ್ಯಾಸೆಟ್ ಮಾಡ್ಕಂಡರ,
ಮಾದೇವ್ನಗ ಐದು ತಿಂಗ್ಳು. ಆ ಐದು ತಿಂಗ್ಳ ಮಗೂಗ ಒಂದು ಜೋಳ್ದಾಗ ಒಂದು ಗುಳ್ಳೆ ನೆತ್ತಿ ಮೇಲೆ ಕಾಣುಸ್ತು. ಹಳ್ಳಿಲಿ ಇದ್ನ ಇಸಬ್ಲು ಅಂದ್ಬುಟ್ಟು ಬೆಳ್ಳುಳ್ಳಿ ಗೊತ್ತು ತಾನೆ ನಿಮ್ನ? ಆ ಬೆಳ್ಳುಳ್ಳಿ ಅರ್ದು ಆ ಗಾಯ್ಕ ಮೆತ್ತುಬುಟ್ಟರು. ಆ ಗುಳ್ಳೆ ಸ್ವಲ್ಪ ಕೆಂಪ್ಗ ಕಂಡ್ಬುಡ್ತು. ಕಾಣಗಂಟ ಅದೆಲ್ಲಾ ಮ್ಯಾಕ್ ಮೊಕ್ಕ ಉಬ್ಕಂಡ್ ಬಂದ್ಬುಡ್ತು, ಅದ್ರ ಒಳ್ಗೆ ಮಿದುಳ ಕಂಡ್ಬುಡ್ತು. ಗಾಯ ತೊಳ್ದಬುಟ್ಲಲ್ಲ ನಂ ತಾಯಿ ನೀರಾಡಿ ಇಷ್ಟಿಷ್ಟುದ್ದಕ ನೆತ್ತಿ ದೋಬಾಗೋಯ್ತು. ಒಳ್ಗಿಂದ ಮಿದುಳ ಬಂದ್ಬುಡ್ತು., ನಂ ಕವಲಂದಲಿ ಆಸ್ಪತ್ರ ಇರ್ನಿಲ್ಲ. ಆಸ್ಪತ್ರ ಇದ್ದದ್ದು ದ್ಯಾವನೂರ್ನಲ್ಲಿ, ನಮ್ತಾಯಿ ಕೂಸ ಹಿಡ್ಕಂಡಿರಕ, ನಾನು ಕೂಸ್ನ ನೆತ್ತು ಉಫ್ ಉಫ್’ ಅಂತ. ನೆತ್ತಿ ಉರಬ್ಕಂಡು ನಡ್ಕಂಡು ಹೋಗಾಕ, ಕೂಸು ಅಳಾಕ. ದ್ಯಾವನೂರ್ಗ ಹೋದ್ರ, ಅಲ್ಲಿ ಚೀಟಿ ಸೀರ್ಗಳ್ನೆಲ್ಲ ನರ್ಸಿರು ಒಣಾಕ್ಕಂಡು ಇದ್ರಲ್ಲ ಆ ಸೀರ್ಗಳ ನೋಡಿ ಕೂಸು ಅಳು ನಿಲ್ಲುಸ್ತು.
ಇದ್ದಾಗ ಅವರ್ತಂದ ಬಂದ್ರು, ಮೈಸೂರಲ್ಲಿ ಕಿರಸ್ತಾನದ ಆಸ್ಪತ್ರ ಅದ ಅಲ್ಲಿ. ಅಲ್ಲಿಗೆ ತೋರುಸ್ತು, ಅಶೋಕಪುರಂ ನಾಕನೇ ಕ್ರಾಸಲ್ಲಿ ಮನಮಾಡ್ತು. ಅಲ್ಲಿ ನೀರ್ಗ ಹೊಡೆದಾಟ. ನೀರ್ಕೊಡೊಲ್ರು. ಬೀದಿ ನಲ್ಲಿಗಳು, ಗುಡ್ಡಾಕ ಬುಡರು. ಅದ್ನೆಲ್ಲಾವಿ ಹಿಡ್ಕಳಗಂಟ ತಾವು ಕೊಡೊಲ್ರು. ನಾವು ಬಿಂದ್ಗ ಹಿಡ್ಕಂಡು ನಿಂತರದು. ‘ಪೋಲಿಸನವನಾದ್ರ ಅವ್ನಮನಗ ನೀರ ಬುಡದಿಲ್ಲ’ ಅನ್ನರು, ‘ಆಯ್ತಪ, ಮಗು ಮನಗ್ಸಬುಟ್ಟು ಬಂದೀನಿ” ಅಂದ್ರೂ ನೀರು ಬುಡೊಲ್ರು., ಬಾಡ್ಗ ಮನವ್ರು ಸ್ವಲ್ಪ ನೀರು ಕೊಟ್ರ ಮೈ ತೊಳದು ಆಗ ಆಸ್ಪತ್ರ ಈ ಆಸ್ಪತ್ರ ಅಲ್ಲೆಲ್ಲ ತಿರುಗದು. ನಮ್ಗ ಮನ ದೂರ ಆಯ್ತದ ಅಂದ್ಬುಟ್ಟು ವರ್ಕ್ಷಾಪ್ ಆಸ್ಪತ್ರಗ ಸೇರ್ಸ ಕೊಟ್ರು, ಆ ಆಸ್ಪತ್ರಲಿ ಕೈ ಬಾಯ್ ನೋಡಿದ್ರ ದುಡ್ಡಿಲ್ಲ ಕೊಡಾಕ. ನೆತ್ತಿಗಾಯ ಮುಚ್ಕ ಬಂದ್ಬುಡ್ತು. ಇನ್ನೇನ ಮನಗೋಗಬಹುದು ಅಂದ್ರ ರಾತ್ರಿನಾಗ ಲೈಟ್ ಆರೋಯ್ತು. ತಲಾತಲ್ಕನಾಗಿ ಜಿಗಿದು ಬಿದ್ಬುಟ್ಟ ಮಾದೇವ, ಪುನಃ ಗಾಯವಾಗೋಯ್ತು. ಗಾಯ ಇವತ್ಮುಚ್ಕಂಡ ಬರಾದು, ಇನ್ನೊಂದ ಔಸ್ದಿ ಹಾಕದ್ರ ಹೆಚ್ಚಾಗ್‌ಬುಡಾದು. ಇದಾಯ್ತಪss ಇನ್ನೊಂದಿವ್ಸ ಊರಿಂದ ಯಾರ ನಮ್ಮ ಬೇಕಾದವರು ಬಂದು ದುಡ್ಡು ಕ್ವಟ್ರು, ಆ ಕಿರಸ್ತಾನದ ದೊಡ್ಡ ಹೆಂಗ್ಸುಗ ಹಣ್ಣುಹಂಪ್ಲ ತಂದ್ಕೊಟ್ರು, ಮನ್ಗ ಬಂದೊ. ಮೂರು ದಿನ್ಕ ಬಂದ್ಬಂದ್ ತೋರ್ಸಿಗಳಿ ಅಂದ್ರು, ಈಗ್ಲು ನನ್ಮಗನ್ಗ ಬುಂಡೆ ನೆತ್ತಿ ಮ್ಯಾಲ ಮಚ್ಚ ಅದ. ರೈಲಲಿ ಬತ್ತಿದ್ವಲ್ಲ ಆಗ ಜನ ‘ಇದ್ಕ ಮೈಸೂರ್ಗಂಟ ಹೋಗ್ಬೇಕಾ ಮೈಸೂರ್ಗ? ಬ್ಯಾಲದ್ಕಾಯ್ ಓಟ ಅದಲ್ಲ ಅದ್ನ ತೇದು ಹಾಕ್ಬುಟ್ಟಿದ್ರ ಮಾದೋಗೋದು’ ಅಂದ್ರು. ಯಾನೇಳ್ಲಿ? ಅಷ್ಟು ಕಷ್ಟ ಬಿದ್ದೀನಿ ಆ ಮಗ್ನನ್ಗ. ನಮ್ಮ ಅಪ್ಪೋರ ಮನಲಿ ಗಂಡು ಮಕ್ಳಿಲ್ಲ. ಇವ್ನೇ ದೊಡ್ಡವ. ನಮ್ತಾಯಿ 8-9 ತಿಂಗಳಗಂಟೂವ ನೋಡ್ತಿನಿ ಅಂದವರ್ಗ ಇವ್ನ ತೋರ್ಸಿ ಕೊಡ್ತಿರಲಿಲ್ಲ.
ಸಣ್ಣಂವನಿದ್ದಾಗ ಇಂವ ಮಾದೇವ ಹೊಲ್ಕ ಮನ್ಗೋಗದು ದನಕರು ಎಲ್ಲಾನೂ ನೋಡ್ಕತಿದ್ದ, ಹೊಲದಲ್ಲಿ ಹೇರು ಕಟ್ತಿದ್ದ, ಬಿತ್ತನ ಜೋಳ ಬುಡನು. ಹೊಲಕ್ಕೋಗಾದು ಅಂದ್ರ ತುಂಬಾ ಪ್ರೀತಿ, ಎದ್ದೇಟಿಗ್ಲಿಯ ಹೊಲ್ಕ ಹೋಗಾದು ಅಣಬ ಅವಲ್ಲ ಅಣಬ ಅವ ಕಿತ್ಮ ಬಂದು ಸಾರ ಮಾಡವೈ ಅನ್ನದು. ಸಣ್ಣಂವನಾಗಿದ್ನಾಗಿಂದೂವಿ ತಾನಾಯ್ತು, ತನ್ನ ಕೆಲ್ಸವಾಯ್ತು, ಪೂಜ ಮಾಡ್ತಿರಲಿಲ್ಲ. ತನ್ನ ಅಕ್ಷರುಂಟು ತಾನುಂಟು. ಯಾರ ಜೊತಲೂವಿ ಸೇರ್ದಾವನಲ್ಲ. ಮಾದೇವ (ಕೈತೋರಿಸಿ) ಇಷ್ಟಿದ್ದ, ಚಿಕ್ಕವ. ನಂ ಜಮೀನ್ಲಿ ಜೋಳ ಮಟ್ಟಾಗಿ ಬೆಳ್ದಿತ್ತು. ಒಬ್ಬ ಲಿಂಗಾಯತ್ರವ ಹೋಗಿ ಜೋಳ್ದ ತೆನೆ ಕದ್ದು ಮುರ್ದು ಬೇಲಿ ಮರಲಿ ಮಡಗಿದ್ದ, ಮಾದೇವ ನನ್ನೊಂದ್ದ ಬಂದಿದ್ದ. ಆ ಲಿಂಗಾಯತವ ಇಷ್ಟು ನಮ್ಮ ತೆನೆ ಕದ್ದು ಮುದ್ದು ಇಟ್ಟವನಲ್ಲಾ ಅಂದ್ಬುಟ್ಟು ಪಂಚಾಯಿತಿಗೆ ಹಾಕ್ಸುವ ಅಂದುಟ್ಟು ನಾನೇ ಇನ್ನಷ್ಟು ತೆನೆ ಮುರ್ದು ಅದರ್ಜೊತೆಲಿ ಸೇರಿಸಿ ಆಮ್ಯಾಲ ಪಕ್ಕದ ಬಸಪ್ಪನೋರು ಅನ್ನವರ್ನ ಕರ್ಕಬಂದು ‘ನೋಡಿ ಇಷ್ಟು ತೆನ ಕದ್ದು ಮುರ್ದರಲ್ಲ’ ಅಂದಿ. ಅದ್ಕ ಅವ್ರು ಚಾವ್ಡಿ ತವಕ ಕರಕೊಂಡೋಗು ನಂಜಿ, ತಪ್ಪು ಮಡಗ್ಸಾವು’ ಅಂದ್ರು, ತೆನೆ ಮುರ್ದವ ‘ನನ್ಗ ಹೊಟ್ಗ ಇರ್ನಿಲ್ಲ ಮುರ್ದಿ’ ಅಂದ. ಮಾದೇವ `ನಮ್ಮವ್ವನೂ ಒಸಿ ತೆನೆ ಮುರ್ದು ಸೇರ್ಸಿ ಹೆಚ್ಚು ಮಾಡವ್ಳೆ’ ಅಂದ. ಇನ್ಯಾವ ಚಾವ್ಡಿಗ್ಯಾ ಕರ್ಕೊಂಡೋಗೋದು? ಆ ಥರವಾಗಾಯ್ತು. ಈಗ್ಲೂವಿ ಕಷ್ಟದವರ್ಗ ಜೀವ ಬುಡುತಾನ. ನಮ್ಮು ಕುಟುಂಬ ದೊಡ್ಡಾಗ. ಎಲ್ರೂವಿ ಅವ್ನ ಕಂಡ್ರ ಅಂಜ್ಕಂಡು ನಡಗ್ತಾರ. ಎಲ್ರೂವಿ ಅವ್ನ ಎದ್ರ ನಿಂತು ಮಾತಾಡಲ್ಲ. ನಾ ಹೆತ್ತ ತಾಯಲ್ವ? ಆದ್ರೂವಿ ಅವ್ವಾ ಅಂದ್ಬುಟ್ರೆ ತೀರೋಯ್ತು, ಮಾತಾಡಲ್ಲ. ಅಂವ ಮನಲಿ ಓತ್ತ ಬರಿತಿದ್ರ ನಾ ಟೀ ತಕ್ಕೊಂಡು ಹೋದ್ರೂವಿ ಮಾತಾಡಾಂಗಿಲ್ಲ-ಸುಳ್ಳಾಡಾಕಿಲ್ಲ. ನಾ ತಾಯಲ್ವಾ? ಸುಳ್ಳಾಡಾಕಿಲ್ಲ. ನಾನೂವಿ ಅವರೇಳ್ದಂಗೆ ನಡದುಬುಟ್ಟೇನಿ. ಇವ ಮನಿಗಿರಗಂಟ ಯಾರೂ ಏಳ್ಸಂಗಿಲ್ಲ. ಬಂದವರ್ಗ ಹೊರ್ಗ ಕೂರ್ಸಂಗಿಲ್ಲ.
ನಾನೂವಿ ಕಷ್ಟ ಪಟ್ಟಿವ್ನಿ. ಅವ್ರ ತಂದ ತೀರ್ಕಂಡಾಗ ಮಾದೇವ ಪಿ.ಯು.ಸಿ. ಓದ್ತಿದ್ದ, ಬಸವರಾಜು, ಶಂಕ್ರ ಈ ಮಕ್ಳೆಲ್ಲ (ಕೈತೋರಿಸಿ) ಇಷ್ಟಿಷ್ಟ ಇದ್ರು. ನಮಗಾಗ 36 ರೂಪಾಯಿ ಪಿಂಚಣಿ ಬತ್ತಿತ್ತು. ಈ ಮೂವತ್ತಾರು ರೂಪಾಯ್ಲಿ ಇವರ್ನೆಲ್ಲಾನುವಿ ನಾ ಯ್ಯಾಗ ಸಾಕದು? ಇರವ್ನೆಲ್ಲಾವಿ ಗಿರುವಿಗೆ ಮಡುಗಬುಟ್ಟಿ. ಬುಡುಸ್ಗತ್ತಾರ ನನ್ಮಕ್ಕ, ಬುಡುಸ್ಗತ್ತರ ಅವತ್ಗ ನನ್ಮಕ್ಕ ಅಂದ್ಬುಟ್ಟು ಎಲ್ಲಾನುವಿ ಗಿರುವಿಗ್ ಮಡಗುಬುಟ್ಟಿ, ಒಂದ್ಸಲ ಇವರ ತಂದ ಮಾಡ್ಸಿದ್ದ ನಾಕ್ಹರಳಿನ ಮೇಸ್ರಿನ ಗಿರುವಿ ಮಡ್ಗಕ್ಕೋಗಿ ಒಂದ್ರುಪಾಯ್ನ ಚಾರ್ಜಿಗುವಿ ಕಾಸಿಲ್ಲ. ಆಗ ಇವರ್ಗ ಇಡ್ಲಿಗು ಕಾಸಿಲ್ಲ. ಇರದ್ಮಡಗಿ ಬಂದು ಕೊಡ್ತಿನಿ ಒಂದ್ರುಪಾಯ್ನ ಇಡ್ಲಿ ಕೊಡಿ ಅಂದ್ರೂ ಯಾರೂ ಕೊಡ್ಲಿಲ್ಲ. ಅಷ್ಟರಮಟ್ಟಗ ಕಷ್ಟಪಟ್ಟು ಇವರ್ನೆಲ್ಲಾ ಓದಿಸ್ದೆ, ಅವರವರ ದಾರಿಗೆ ತೂದಿ. ಒಂದ್ಸಲ ಮೈಸೂರಿಂದ ಪಾತ್ರೆಯವರು. ಬಂದ್ರು, ಮಾದೇವ್ನಗ ‘ಒಂದು ಅಡುಗ ಪಾತ್ರ ತಕ್ಕೊಡಪ್ಪ’ ಅಂದಿ, ಅದ್ಕ ‘ಹಿಂದ ಯಾತ್ರಲಿ ಬಳಸ್ತಿದೆವ್ವ’ ಅಂದ, ಅದ್ಕ ‘ಮಡ್ಕೇಲಿ, ಕಪ್ಪಾ’ ಅಂದಿ, ಅದ್ಕೆ, ‘ಅದ್ನೆ ಬಳ್ಸು ಹೋಗವ್ವ’ ಅಂದ. ಅದೇ ತಂದಗೆ ಹೆದರ್ತಿದ್ದ, ಒಬ್ಬ ಮಗನ್ಗ ಹಲ್ಲು ನೋವಾಗಿತ್ತು. ಮಜ್ಗ ತರ್ಸಕ ಅಂತ ಅವರಪ್ಪ ದುಡ್ಡಿಟ್ಟಿದ್ದರ ಮಾದೇವ ಅದ್ಕ ಬೀಡಿ ತಕ್ಕಂಬುಟ್ಟ, ಮಜ್ಗಿಲ್ಲ. ಅದ್ಕ ತಮ್ಮ ‘ಅಪ್ಪ ಅಪ್ಪ ಮಜ್ಗಿಲ್ಲ. ದುಡ್ಡಗ ಅಣ್ಣ ಬೀಡಿ ತಕ್ಕಂಬುಟ್ಟ’ ಅಂದ. ಇದ್ನ ಮಾಡೋದು ಅಂತೇಳಿ ಎರಡೇಟ್ನಗ ಹೊಡದ್ಬುಟ್ರು ಮಾದೇವ್ನಗ. ಇಂವ ಅದೇ ಮೊಕ್ಕ ಮೈಸೂರ್ಗ ಬಂದ್‌ಬುಟ್ಟ. ಆಗ ನಾನು ಬತ್ತಾನೀಗ ಬೇಯ್ಸಿ ಆರಾಂಕಂಬುಟ್ಟಿದ್ದಿ. ನಿಮ್ಮ ಮಗ ಲಾರಿ ಹತ್ಕಂಡು ಮೈಸೂರ್ಗೋದ ಅಂತ ಎಲ್ಲಾ ಅಂದ್ರು, ನಾ ರೋಧನಾ ಮಾಡ್ತಾ ಇರ್ವಾಗ ಅದ್ಕ ಇವ್ರು ‘ನಿನ್ನ ಮಗ ಬೇಕೋ ನಾ ಬೇಕೋ’ ಅಂದುದ್ಕ ನಾನು ‘ಮಗ ಬೇಕು’ ಅಂದಿ. ಅದೇ ಮೊಕ್ಕಾ ಇವ್ರು ಬಸ್ ಹತ್ಕಂಡು ಮೈಸೂರ್‌ಗ ಬಂದು, ಒಂದ ಹೋಟ್ಲಲ್ಲಿ ಮಾದೇವ್ನ ಹಿಂದೆಯೇ ಹೋಗಿ ಕೂತರ ಇವ್ರ ತಂದ. ಬಪ್ಪ ಅಂತ ಕರ್ಕಂಡು ಬರೋತನಕ ಈ ಮೊಖ ತೊಳ್ದಿಲ್ಲ. ಊಟ ಮಾಡಿಲ್ಲ. ಬರೀ ಅಳ್ತಾ ಕೂತಿದ್ದಿ. ಮನಗ ಕರ್ಕ ಬಂದ್ರು, ಆಗ ಊಟ ಮಾಡ್ಕಂಡು ಖುಷಿಯಾಗಿದ್ವು
ಮಾದೇವ ಉದ್ದಕ್ಕೂ ಕತಾ ಬರಿಯೋದು, ಓದಾದು, ಅಪ್ಪ ಬಂದರ ನೋಡ್ಕ ಅನ್ನದು, ಅವ್ರು ಬಂದ್ರ ಅದ್ನ ಅವ್ಸುಬುಡದು. ಪುಸ್ತಕ ತಕ್ಕಳದು. ಕತೆ ಬರಿಬ್ಯಾಡಪ್ಪ ಬ್ಯಾಡಪ್ಪ ನೀ ಓದು ಓದು ಅಂತಿದ್ರು, ಆದ್ರೂವಿ ಕತ ಬರ್ದು ಬರ್ದು ಮುಂದುವರ್ದ್ಕಂಡ. ಅವರಪ್ಪ ಇದ್ರ ಬರೆಯಕ್ಕ ಆಯ್ತಿತ್ತಾ? ಈಗ ಕತಾ ಬರ್ದು ಬಾನದ್ ಸೆರಗ ತನ್ಕೂವಿ ಹೆಸರ ಪಡ್ದಾನ, ಅಮೆರಿಕಾಗೆ ಹೋದಾಗ ಮೂರು ತಿಂಗ್ಳಗಂಟ ಬರ್ನಿಲ್ಲ. ನಂಗ ಭಯ ಆಗೋಯ್ತು. ಒಂದಿನ ಫೋನ್ಮಾಡಿ ಮಾದೇವ ಅಂದ್ಬುಟ್ಟು ಅಳಕೆರಿಕಂಡಿ. ಜನಯಲ್ಲಾವಿ ಅಮೆರಿಕಾಕ್ಕ ನೀರಿನ ಮ್ಯಾಲ ಹೋಗ್ಬೇಕು ಏನೇನೋ ಹುಚ್ಚಾಬಟ್ಟೆ ಮಾತಾಡಾರು. ಭಯ ಆಗದು. ಬರಜಿನ ಎಲ್ರೂವಿ ಮನಲಿದ್ದು, ನನ್ನ ಸೊಸೆ “ನಿಮ್ಮಮ್ನಗ ಯಾಕ ಸೀರ ತರ್ನಿಲ್ಲ’ ಅಂತ್ಲೆ ‘ಅವ್ವ ಉಟ್ಕಳಂತ ಸೀರ ಅಲ್ಲಿ ಇರ್ನಿಲ್ಲ’ ಅಂದ. ಆಗ ನಾನು ಕೂಲಿಗೀಲಿ ಮಾಡ್ಕಂಡ ಬರತನ್ಕ ಇವರೆಲ್ಲ ಓದ್ಕಂಡು ಆಡ್ಕಂಡು ಬಂದು ಕೂತಿರಾರು. ಆಗ ಕೂಲಿ ಮಾಡಾಗ ಮೂರು ರೂಪಾಯಿ, ಸೊಪ್ಪು ಊರದು, ಲಿಂಗಾಯ್ತ್ರು ನಮ್ಮ ಕೈ ಒಂಚೂರು ಸೋಕಿದ್ರ ತೊಪ್ಪ ಹಾಕ್ಕೊಂಡು ಕೈ ತೊಳ್ಕೊತಿದ್ರು, ಬಾಂಬ್ರು ಅಷ್ಟು ದೂರ ಓಡೋಕ್ತಿದ್ರು ದೂರಷ್ಟಕ ನಿಂತ್ಗ ದೂರಷ್ಟಕ ನಿಂತ್ಕ ಆಂದ್ಕಂಡು. ಒಂದೊಂದ್ಸಲ ಮಾದೇವ ಸಂಜ ರೈಲ್ಗ ಬರಾವ. ನಗರದಿಂದ ಬಸುರಾಜು ಬರಾವ, ದ್ಯಾವನೂರಿಂದ ಇನ್ನೊಬ್ಬ ಮಗ ಬರಾಂವ. ನಾನು ಹೊಲ್ದಿಂದ ಬಂದಿರ್ತಿದ್ದಿ. ಈಗ್ಲೂವಿ ನಂ ಮಾದೇವ ಹೊಲಕ ಮನ್ಗ ಹೋಯ್ತಾನ. ಕವಲಂದೆಲಿ ನಮ್ಮ ಮನೊಗೋಯ್ತಾನ ನಾ ಹುಟ್ಟಿದ ಸ್ಥಲ ಅಂದ್ಕೊಂಡು. ಕಷ್ಟ ಬಿದ್ದಾನ ಅವ್ನೂವಿ, ಹಳ್ಳಿಲಿ ಯಾರಂದ್ರ ಯಾರೂ ಇಲ್ಲ. ಎಲ್ರೂ ಕೂಲಿಗ ಗುಳಗಳ್ನ ಹೋಗಾರು. ನಾನೂ ಹಿಂದ್ನಿಂದ ಹೋಗಾನು, ಅದ್ಕ ಅದ್ಯಾರ ಕೈಲಿ ಈಸ್ಕಂಡಾಳು ಈಸ್ಟಳ್ಳಿ ದುಡ್ಡ ಅನ್ನದು ಈ ಗೌಡ್ಗಳು, ಒಂದ್ಸಲ ನಾನು ನಿಂತಿನಿ ನಮ್ಮೂರ ಬೀದಿಲಿಯ. “ಅವ್ವಾ ಆಳು ಸಾಕದ್ರವ್ವಾ’ ಅಂದೆ. ‘ಸಾಕಾದ್ರುಕಕ್ಕೆ’ ಅಂದರು. ಈಗ ನಾನು ನನ್ಮಕ್ಕಳಗ ತಂದಿಕ್ಕಬೇಕಲ್ಲ? ಇದ್ಬದ್ದ ಪಾತ್ರ ಪನ್ನಂಗ, ಅವರಪ್ಪ ತಂದಿದ್ದೆಲ್ಲಾ ಗಿರುವ್ಗಿಟ್ಟು ಮಾರಿ, ಮುಂದ್ಕ ನನ್ನಕ್ಕ ತಕ್ಕತ್ತರ, ಕಟ್ಸಕತ್ತಾರ ಅಂತ. ಮಕ್ಕ ತಕ್ಕಂಡ್ರು, ಆ ಗಿರುವ್ಗಿಟ್ಟ ಸಾಮಾನ ಎಷ್ಟೋ ಬುಟ್ಟೋಬಿಟ್ಟಿ, ಮಕ್ಕ ಅದ್ಯಂತ ಹೆಚ್ಚಿನದನ್ನೆ ತಕ್ಕಂಡ್ರು, ಆಗ ಮೂರು ಜೀನ್ಗಂಟ ತಿನ್ನಕ್ಕ ಏನೂ ಇಲ್ಲ. ಅರ್ವಾಣ, ತಪ್ಪಲ ಕಂಚ್ನವು ತಕ್ಕಂಡು ನಂಜನಗೂಡು ರೈಲಸ್ಟೇಷನ್ ತಾವ್ಕ ಬಂದಿ. ಈ ಒಬ್ಬ ಮಗ ಬಸುರಾಜು ಅನ್ನಾವ ನಂಜನಗೂಡಲ್ಲೆ ಓದ್ತಿದ್ದ, ಕಾಲೇಜ್ಲಿ ಓದಾದು, ಹಾಸ್ಟೆಲಲ್ಲಿ ಊಟ ಮಾಡಾದು. ನನ್ನ ಅಳಿಯನವ್ರು ನಂಜನಗೂಡ್ಲ ಆಸ್ಪತ್ರೆಯಲ್ಲಿ ಇದ್ರು, ಕಾಂಪೌಂಡ್ರಾಗಿ, ಇರನಗಂಟ ಆಗ ಪಾತ್ರ ಪಗ್ಡ ಹೊತ್ಗಂಡು ಬಂದಿ, ಬಂದವ್ಳು ಅಲ್ಲಿಳಿದು ಇಳಿಯನಗಂಟ ಈ ಮಗ ನಮ್ಮವ್ರು ಬತ್ತಾಳ ಈವತ್ತು ನಮ್ಮವ್ವ ಬತ್ತಾಳ ಅಂದ್ಬುಟ್ಟು ನಿಂತಾನ. ಪುನಃ ನೋಡಿದ್ರ ಹೊಟ್ಟ ಹಸದ್ಬುಡ್ತು.. ರೈಲು ಠೇಷನ್ತಾಪು. ದ್ಯಾವನೂರು ಕಡೆಯವರೇ ಮಿಣಕಣ್ಣು ಮಾರ್ತಿದ್ರು, “ಅವ್ವಾ ಒಂದ್ಮಿಣಕಣ್ಣು ಕೊಡವ್ವ, ರೈಲು ಬರಾದು ಒತ್ತಾಗೋಯ್ತು, ಹೊಟ್ಟೆ ಸಂಕ್ಟ’ ಅಂದಿ, ‘ಆಯ್ ಕೈಮ್ಯಾಲ ಕಾಸಿಲ್ದಯ ಕೊಡಾಕಿಲ್ಲಕ. ನಂಜಯ್ಯನೆಡ್ತಿ ನಿಂಗ’ ಅಂದ್ರು, ನಮ್ಮೂರ ಲಿಂಗಾಯ್ತ್ರವ ‘ನಾ ಕೊಡ್ತೀನಿ ಕೊಡು’ ಅಂದ್ರು, ಆಗ ಒಂದು ಮಿಣಕಣ್ಣ ತಿಂದಿ, ಸಟ್ಗ ಜೀವ ಸಮಾಧಾನವಾಯ್ತು. ಆಗ ಪಾತ್ರ ಪಗಡ ಜೊತಗ ವಾಲಾನುವಿ ಬಿಚ್ಚಿ ಬರಿ ಐವತ್ತು ರೂಪಾಯ್ಗ ಮಡುಗ್ಬುಟ್ಟೆ. ನನ್ನ ಮಕ್ಕಳ್ಗಿಂತಲೂ ಹೆಚ್ಚ ಅಂತ ಅಳಿಯನ ಕೈಲಿ ಮಡುಗ್ಸಬುಟ್ಟಿ. ಅವ್ರ ತಂದ ಮಾಡಿಸಿದ ವಾಲ ಸಾಲಗ್ರಾಮದಲ್ಲಿ. ಆಗ ಐವತ್ತು ರೂಪಾಯ್ಗ ಮುನ್ನೂರು ರುಪಾಯಿ ಬಡ್ಡಿ, ಐವತ್ತ್ರುಪಾಯ್ನ ಅಸ್ಲು ಅಂದ್ಬುಟ್ಟು ನೋಟೀಸ್ ಕಳ್ಸದ್ರು, ನೋಟೀಸ್ನ ಚೀಟಿ ತಕ್ಕೊಂಡೋಗಿ ನಮ್ಮ ಕವಲಂದ ಮನಲಿ ಟ್ರಂಕ್ನಲ್ಲಿ ಮಡಗಿದ್ವಿ, ಈ ಮಗ ಬಸುರಾಜ ‘ನಮ್ಮವ್ವ ವಾಲ ನಾಳ ಹರಾಜಾಗ್ತದ’ ಅಂತಿದ್ದ, ಅದ್ಕ ವಾಸ ಸುಮ್ಕಿರಪ್ಪ ಅಂದ್ರ ಇವ ಚಿಕ್ಕವ ಶಂಕ್ರ ಅಳಕ್ಕೇರಿಕಂಡ. ನಮ್ಮಪ್ಪ ಮಾಡ್ತಿದ ವಾಲ ನಾಳ ಹರಾಜಾಯ್ತದ ಅಂತ. ಇನ್ನೇನಾಗೋಯ್ತು ಅಷ್ಟೊತ್ಗ ಮಾದೇವ ಬಂದ, ಈ ಮಗ ಚೀಟಿ ತಕ್ಕಂಡು ಬಂದ. ಮುನ್ನೂರು ರುಪಾಯಿ ಬಡ್ಡಿ ಐವತ್ತು ರುಪಾಯಿ ಅಸ್ಲು. ಇವ ಆದ ತಕ್ಕೊಂಡೋಗಿ ನೂರು ರುಪಾಯ್ನ ಬಡ್ಡಿ ಐವತ್ತು ರುಪಾಯ್ನ ಅಸ್ಲು ಕೊಟ್ಬಿಟ್ಟು ಬುಡ್ಸಗಂಡು ಬಂದ್ಬುಟ್ಟ.
ಈಗ ಪರಸ್ಥಳದಲ್ಲು ದೇವನೂರ ಮಾದೇವ ಅಂದ್ರೆ ಯಾವ ನನ್ತಾಯಿ ಹೆತ್ತಿದ್ದಳಪ್ಪಾ ಅಂದರಂತ. ಇವತ್ತು ಅಂತಾರ. ಅವತ್ತು ಅವರಪ್ಪ ಸತ್ತಮ್ಯಾಲ ಇವ್ರ ಸಾಕಾಕ ಎಷ್ಟು ಕಷ್ಟಪಟ್ಟಿನಿ. ನಾನು ದುಡ್ಡು ಎದಬಗ್ದು ಮುರ್ದು ಸಾಕಿನಿ, ಸೊಪ್ಪ ಕುಯ್ಕಂಡು ಬಂದ್ರ ಅದಕ್ಯಾಕಕ ಉಪ್ಪಿಲ್ಲ. ಒಂದಿನ ಹೊಲ್ಡಿಂದ ಬತ್ತೀನಿ ಉಸ್ಸೋ ಅಂದ್ಕಂಡು ಮಳ ಬಂದ್ಬಿಡ್ತು. ಸಿಳ್ಳು ಗುಡುಗ್ನ ಜೊತೆ ನೆನ್ಕಂಡು ಮನ್ಗ ಬ೦ದೀನಿ, ಈ ಮಗ್ನೂ ಬಂದ ಆ ಮಗ್ನೂ ಬಂದ ಎಲ್ಲೂ ಬಂದ್ರು, ಈ ಪಾಟಿ ಮಳಲಿ ನೆನ್ಕಂಡು ಬಂದಾಳಲ್ಲ ಅಂತ ಎಲ್ರೂ ಅತ್ತರು. ‘ಅಯ್ಯೋ ಬುಡಪ್ಪ, ಶಿವ ನಮ್ಗ ಇದೇ ಕಷ್ಟಾ ಕೊಟ್ಟಾನ’ ಅಂದಿ. ಇಂದು ಆ
ಕಷ್ಟ ಕೊಟ್ಟಿಲ್ಲ. ಹಿಂದಗ ಹನ್ನೊಂದ್ರುಪಾಯ್ಗ ಮೇಸ್ತ್ರಿ ಮಡಗ್ದಿ. ಇಂದು ಮಕ್ಳ ಮೊಮ್ಮಕ್ಕ ‘ಬಳ ಮಾಡ್ಸಗಮ್ಮ ಬಳ ಮಾಡ್ಸಗಮ್ಮ’ ಅಂತಾರ. ‘ಬ್ಯಾಡನಂಗ, ಬಂದೋರ್ಗ ಮಾಡ್ಸಗಳ್ರಪ್ಪ ಅಂದ್ನೆ ಹೊರ್ತು ನನ್ನ ಕೈಗೆ ಬಳ ಮಾಡ್ಸಕಳ್ಳಿಲ್ಲ. ಇನ್ನೂ ನೋಡಿ ನನ್ನ ಕೈಲಿ ಇರಾದು ರಬ್ಬರ್ ಬಳೀಯಾ, ಸೀರ ತಕ್ಕೊಟ್ಟರ, ಅದ್ನೆಲ್ಲಾವಿ ಇಸ್ತ್ರಿ ಮಾಡ್ಲಿ ಮಡಿಸಿ ಮಡಿಗಿವ್ನಿ. ಮಕ್ಕಳು ಓ ನಮ್ಮವ್ವ ಚೆನ್ನಾಗಳ, ಒಂದು ಸೀರೆ ಉಟ್ಕಂಡ್ರ ಚೆನ್ನಗಿರ ಸೀರ ಉಟ್ಕಂಡಳ ಅನ್ನದು. ಹಿಂದೆ ಹರ್ದ ಸೀರೆ ಉಟ್ಕಂಡಿರದ ಮರೆಯಾಕಾಗುತ್ತ? ಈಗ ಜನ ಕರದ್ರ ಆ ಅಂತೀನಿ, ಜನ ಅಂತರ ‘ನೋಡು ನಂಜಕ್ಕನ ಸಿರಿಯ’ ಅಂತ. ಇನ್ನೊಬ್ಬ ಅಂತಾಳ ಇಂದೇನ ನಂಜಕ್ಕನ ಸಿರಿ ನೋಡು ಅಂತಿದಿರಿ ಹಿಂದ ಅವಳ ಕಷ್ಟ ಹೆಂಗಿತ್ತು? ಹಿಂದ ನಾ ಬತ್ತಿದ್ರ ಜನ ದಾರಿ ತಪ್ಸರು ಯಾನಾರು ಕೇಳಾಳು ಅಂತ. ಈಗ ತಬ್ಕತಾರ, ಈಗ ಜನ ಏನಂತಾರ ನೋಡಿ, ನನ್ನ ಉಜ್ವಲ್ನ ಮದ್ವೇಲಿ ಮೂರು ಸಾವಿರ ರೂಪಾಯ್ನ ಸೀರ ತಂದರ, ರೇಸ್ಮ ಸೀರ, ಇಲ್ಲಿ ಮಡ್ಸಿ ಮಡ್ಡಿದೀನಿ ನಾನು ನನ್ನ ಕಷ್ಟಾನೆಲ್ಲಾ ನೆನಸ್ಕತಿನಿ ಅದ್ಕ ನನ್ಮಕ್ಕ ಮಣ್ಣು ಹಿಡಿದ್ರು, ಅದು ಚಿನ್ನ ಆಯ್ತದ.