ನಂ ಗಲ್ಲಿ ಬಾಯ್ಸ್ ಗೆಲುವಯ್ಯ-ಕೋಟಗಾನಹಳ್ಳಿ ರಾಮಯ್ಯ

(ದೇವನೂರ ಮಹಾದೇವ ಅವರನ್ನು ಕುರಿತು 15.12.2024ರ ಆಂದೋಲನ ಪತ್ರಿಕೆಯ ಹಾಡುಪಾಡು ಸಾಪ್ತಾಹಿಕದಲ್ಲಿ ಪ್ರಕಟವಾದ ಕೋಟಗಾನಹಳ್ಳಿ ರಾಮಯ್ಯ ಅವರ ಕವಿತೆ)
ಸೊಲ್ಲು ಸೊಲ್ಲಿಗೂ ಕಣ್ಣ ದೀಪ ಬೆಳಗಿದ
ನುಡಿಯ ಗುಡಿಗಾರನೇ ನಿನ್ನ
ಮೇಲ್ನಡಿಯ ಅರಿವಿಗೆ ಶರಣು…
ವೈಕಂ – ಕೇವಲ ಒಂದು ಸೊಲ್ಲಲ್ಲ…
ಅದರ ಒಡಲಲ್ಲಿ ಪೆರಿಯಾರ್ ತಿರುವಿದೆ,
ಗಾಂಧಿಯವರ ಸಾಥ್ ಇದೆ…
ವೈಕಂ ಬಷೀರರ ಪಾತುಮ್ಮಳ ಆಡಿದೆ
ಇಲ್ಲೂ ದ್ಯಾವನೂರಲ್ಲೂ ಸಾಕವ್ವ ತೂರವ್ವ
ಕುಸುಮಬಾಲೆ ಶಿವೂ, ಪರಸಾದ, ಯಾಡ…
ಪಕಾಳಯ್ಯ ಬಿ.ಕೆ. ಆದಿಯಾಗಿ
ಟೀಕಾ ಪುರುಷರೆಲ್ಲರ immortality
ಇದೆ
ನುಡಿಕಾರನಿಗೆ ಸಂದಿರುವ ಶ್ರೇಷ್ಠ ಗೌರವ.
ಇನ್ನು ಮುಂದೆ ಮಾದೇವ್ ಕಪ್ಪು ಅಂಗಿ
ಅಥವಾ ಲುಂಗಿ ತೊಡಲಿ
ಯಾವುದಾದರೊಂದು
ಕಪ್ಪಾಗಿರಲಿ..! ಹಂಸ ಬಿಳಿ ಪರಮಹಂಸ
ಬಿಳಿಗೂ ಅಳತೆಯ ಮಾಪನ
ಗುಲಗಂಜಿಯಷ್ಟು
ಕರಿ… ಇರಲಿ
*********
ನಂ ದ್ಯಾವನೂರು
ಇದ್ದಲ್ಲೇ ನವಿಲೂರು.
ಗುಡಿ ಮುಂದ
ನಾಟ್ಯ ಆಡ್ತಾವೆ ನವಿಲ್‌ ಹಿಂಡು
ಜಿಂಕೆ ಸಾರಂಗ ನಂಜುಂಡ…
ಮೇಲುಕೋಟೆ Us ಶ್ರೀರಂಗ.
ಇದು ಎಂಥ ಚೆಲುವಯ್ಯ ಶರಣು ಶರಣಯ್ಯ
ನಿಜವಾದ ನಂ ಗಲ್ಲಿ ಬಾಯ್ಸ್ ಗೆಲುವಯ್ಯ
ಓ ಮಾಯ್ಕಾರ ಮಾದೇವಯ್ಯ.
• ಕೆ.ರಾಮಯ್ಯ