ನಂಬಿ ಕೆಟ್ಟವರಿಲ್ಲ ನಿಜ, ಆದರೆ ಓದಿದ ನಂತರ…. – ಕೆ.ಸಿ.ರಘು
“ಸರಿ-ತಪ್ಪು, ಒಳ್ಳೆಯದು-ಕೆಟ್ಟದ್ದು ಯಾವುದು, ಹೇಗೆ ಎಂಬ ವಿವೇಕ ವಿದ್ಯಾಭ್ಯಾಸ ಮೂಕ ಮನುಷ್ಯನಿಗೆ ದೊರಕುವಂತದ್ದು” ಹೀಗೆ ಹೇಳಿದ್ದು ನಮ್ಮ ದೇಶದ ಸರ್ವೋಚ್ಚ ನ್ಯಾಯಾಲದ ನ್ಯಾಯಧೀಶರುಗಳು. ಅನಕ್ಷರಸ್ಥರನ್ನು, ಅವಿದ್ಯಾವಂತರನ್ನು ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಹೊರಗಿಡಲು ಹೊರತಂದಿರುವ ಹರಿಯಾಣ ಸರ್ಕಾರದ ವಿರುದ್ಧ ಬಂದಿದ್ದ ಅರ್ಜಿಯನ್ನು ತಿರಸ್ಕರಿಸಿ ತೀರ್ಪು ಹೊರಡಿಸುವಾಗ ಹೀಗೆ ಹೇಳಲಾಯಿತು. ಹರಿಯಾಣ ಸರ್ಕಾರ ಅವಿದ್ಯಾವಂತರನ್ನು, ಮನೆಯಲ್ಲಿ ಕಾರ್ಯನಿರತವಾದ ಶೌಚಾಲಯವಿಲ್ಲದವರನ್ನು ಮತ್ತು ಸಾಲ ಬಾಕಿ ಇದ್ದವರನ್ನು ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಕಾನೂನು ಹೊರತಂದಿದೆ. ಇದನ್ನು ಸರ್ವೋಚ್ಚ ನ್ಯಾಯಲಯ ಕೂಡ ಎತ್ತಿ ಹಿಡಿದುದ್ದಾಗಿದೆ. ಕೊನೆಯ ವಿಷಯಕ್ಕೆ ಮೊದಲು ಬರುವುದಾದರೆ, ನಮ್ಮದೇ ಸರ್ಕಾರ ಮಾಡಿರುವ ಸಾಲದ ಹೊರೆ ಭಾರತ ಪ್ರತಿ ಪ್ರಜೆಯ ಮೇಲೆ ಸುಮಾರು 45000 ರೂಪಾಯಿಯಾಗಿದೆ. ಇದಕ್ಕೆ ಜೆ.ಹೆಚ್.ಪಟೇಲರು ನಾವೆಲ್ಲರೂ ‘ಬಡ್ಡಿ ಮಕ್ಕಳು’ ಎನ್ನುತ್ತಿದ್ದರು. ‘ನೀವು ಸಾಲ ಮಾಡದಿದ್ದರೂ ನಾವು ಮಾಡಿದ್ದೇವೆ’ ಎಂದಿದ್ದರು.
ಜನ ತಲೆ ಮೇಲೆ ಸೂರಿಲ್ಲದೆ ಬದುಕುವಾಗ ‘ಬೀದಿ ಬದಿ ಮಲಗಬಾರದು’ ಎನ್ನುವ ಕಾನೂನು ಮಾಡುವುದಾಗಿದೆ. ಆರ್.ಕೆ.ಲಕ್ಷ್ಮಣರವರ ವ್ಯಂಗ ಚಿತ್ರವೊಂದರಲ್ಲಿ ಬೀದಿ ಬದಿ ಹಾಕಿದ್ದ ದೊಡ್ಡ ಸಿಮೆಂಟ್ ಕೊಳವೆಯೊಳಗೆ ಒಬ್ಬ ಕುಳಿತಿದ್ದಾನೆ. ಪೇದೆಯೊಬ್ಬ ಬಂದು “ಇಲ್ಲಿ ಯಾಕೆ ಅವಿತುಕೊಂಡಿರುವೆ?” ಎನ್ನುತ್ತಾನೆ. ಕೊಳವೆಯಿಂದ ಆತ “ಸ್ವಾಮಿ, ನಾನು ವಾಸಿಸುವುದೇ ಇಲ್ಲಿ” ಎನ್ನುತ್ತಾನೆ! ಸ್ವಾತಂತ್ರ ಬಂದು 68 ವರ್ಷವಾದರೂ ಶೇಕಡಾ 25ರಷ್ಟು ಜನ ಅನಕ್ಷರಸ್ಥರಾಗಿರುವುದು ನಮ್ಮ ವ್ಯವಸ್ಥೆ, ನ್ಯಾಯಾಂಗವೂ ಸೇರಿ ನಮ್ಮ ಜನರಿಗೆ ಮಾಡಿರುವ ಅನ್ಯಾಯ ಮತ್ತು ಹೊಣೆಗೇಡಿತನವನ್ನಲ್ಲದೇ ಇನ್ನೇನನ್ನು ಹೇಳುತ್ತದೆ? ಹದಿನೈದು ವರ್ಷದ ನಂತರ ವಯಸ್ಸಿನ ಹರಿಜನ ಗಿರಿಜನರಲ್ಲಿ ಅನಕ್ಷರತೆ 2011-12ರ ರಾಷ್ಟ್ರೀಯ ಸ್ಯಾಂಪಲ್ಲು ಸಮೀಕ್ಷೆಯ ಪ್ರಕಾರ ಶೇಕಡಾ ಸುಮಾರು 40! ಅದೇ ಸಮೀಕ್ಷೆಯ ಪ್ರಕಾರ ಪದವೀಧರರು ಇವರಲ್ಲಿ ಕೇವಲ ಸುಮಾರು 2.5%. ಪದವೀಧರರು ಇತರೇ ಗುಂಪಿನಲ್ಲಿ ಸುಮಾರು ಶೇಕಡಾ 12.This means that the state has managed to conserve and preserve illiteracy and poverty in a sustainable manner!
ಸರ್ಕಾರದ ಹೆಜ್ಜೆ ಕಡೆಗಣಿಸಿದವನ ಕಡೆ ಇರಬೇಕಾದುದು. ದ್ವನಿ ಇಲ್ಲದವನ ಪರ ಇರಬೇಕಾದುದು. ಕುರುಡು ಕಾಂಚಾಣದ ಹೆಜ್ಜೆಯಾಗಬಾರದು. ಗಾಂದಿ ಹೇಳಿದ ಮಂತ್ರ: ನಾಮ್ಮ ಪ್ರತಿ ಕೆಲಸ ಕಟ್ಟಕಡೆಯ ಮನುಷ್ಯನಿಗೆ ಹೇಗೆ ಸಹಾಯವಾಗುವುದು ಎನ್ನುವುದು ಗಮದಲ್ಲಿರಬೇಕಾದುದು. ಜಾನ್ ರಾಲ್ಸ್ ಕೂಡ ಅದನ್ನೇ ಹೇಳಿದ್ದು.Best action is that which helps the most disadvantaged. ಈ ಎಚ್ಚರ ಸದಾ ನಮ್ಮ ವ್ಯವಸ್ತೆಗೆ ದಾರಿದೀಪವಾಗಬೇಕಾದುದು.
ಇನ್ನೊಂದೆಡೆ ಮಾರ್ಕ್ ಟ್ವೈನ್ “ನನ್ನ ಕಲಿಕೆಗೆ ಶಾಲೆ ಅಡ್ಡಿ ಬರದಂತೆ ನಾನು ನೋಡಿಕೊಂಡಿದ್ದೇನೆ” ಎಂದಿದ್ದ! ಕಲಿಕೆಗೂ ಶಾಲೆಗೂ ಸಂಬಂಧವಿಲ್ಲದಂತೆ ಟ್ವೈನ್ ಸೂಚಿಸಿದ್ದಾನೆ. ಸಾಕ್ರೆಟೀಸ್ ‘ಬರೆಯುವುದು ಮರೆಯುವುದು’ ಎಂದಿದ್ದ. ಶಾಲೆ ಅನೇಕ ವಿಚಾರಗಳಲ್ಲಿ ತನ್ನ ಬೇರು ಬುಡ ಕತ್ತರಿಸುವ ಕೆಲಸ ಕೂಡಾ ಮಾಡುವುದುಂಟು. ಹೊಸತು ಹಿಡಿಯಲಿಲ್ಲ ಹಳತು ಉಳಿಯಲಿಲ್ಲ ಎನ್ನುವುದಾಗಬಹುದು. ಹಳೆಯ ಕತೆಯೊಂದು ಹೀಗಿದೆ: ಬಹಳ ಓದಿದ್ದ ನಗರ ವಾಸಿಯೊಬ್ಬ ಹಳ್ಳಿ ಬೀದಿಯಲ್ಲಿ ನಡೆಯುವಾಗ ಹಳ್ಳಿ ರೈತನೊಬ್ಬ ಎತ್ತು ಕಟ್ಟಿಕೊಂಡು ಗಾಣದಲ್ಲಿ ಎಣ್ಣೆ ತೆಗೆಯುತ್ತಿದ್ದದ್ದನ್ನು ಕಂಡ. ಅಲ್ಲಿ ಎತ್ತು ಗಾಣದ ಸುತ್ತಾ ತಿರುಗುತ್ತಿತ್ತು. ರೈತ ಪಕ್ಕದಲ್ಲಿಯೇ ಮಲಗಿಕೊಂಡಿದ್ದ. ಈ ಓದಿದ ಮನುಷ್ಯ ರೈತನ ಬಳಿ ಹೋಗಿ, “ಏನಿದು, ನೀನು ಇಲ್ಲಿ ಮಲಗಿಕೊಂಡಿರುವೆ. ಅಲ್ಲಿ ಎತ್ತು ತಿರುಗುತ್ತಿದೆ. ಅದು ನಿಂತರೆ ನಿನಗೆ ಹೇಗೆ ಗೊತ್ತಾಗುತ್ತದೆ?” ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ರೈತ, “ಸ್ವಾಮಿ ಕುತ್ತಿಗೆಗೆ ಘಂಟೆ ಕಟ್ಟಿರುವೆ. ಅದನ್ನು ಆಲಿಸುತ್ತ ಇಲ್ಲಿ ಮಲಗಿರುವೆ” ಎನ್ನುತ್ತಾನೆ. ಅದಕ್ಕೆ ವಿದ್ಯಾವಂತ ಮರು ಪ್ರಶ್ನೆ ಹಾಕುತ್ತಾನೆ, “ಅಲ್ಲಾ ಅದು ಅಲ್ಲಿಯೇ ನಿಂತು ತಲೆ ಅಲ್ಲಾಡಿಸಿದರೆ?” ಅದಕ್ಕೆ ರೈತ, “ಅದು ಅಷ್ಟು ಓದಿಲ್ಲ ಬುಡಿ ಬುದ್ದಿ!” ಎನ್ನುತಾನೆ.
ಆಹಾರ ವಿಚಾರಕ್ಕೆ ಬಂದರೆ ಕಲಿತು ಕೆಟ್ಟದ್ದೆ ಹೆಚ್ಚು ಎಂದರೆ ತಪ್ಪಾಗಲಾರದು. ಇದು ಕಲಿಕೆ, ವಿದ್ಯೆಯನ್ನು ಮೂದಲಿಸುವುದಕ್ಕಲ್ಲ. ಜ್ಞಾನ ಪರಂಪರೆ ಕೇವಲ ನಾಲ್ಕು ಗೋಡೆಯೊಳಗೆ ಪುಸ್ತಕದಲ್ಲಿ ಕಲಿತದ್ದು ಎಂಬುದಾಗಿದೆ. ಅನಕ್ಷರಸ್ಥರಾದರೂ ಜ್ಞಾನ ಭಂಡಾರವಾಗಿರುವ ಅನೇಕ ಉದಾಹರಣೆಗಳಿವೆ. ಅದರಲ್ಲಿಯೂ ಪಾರಂಪರಿಕ ಕೃಷಿ, ಅಡುಗೆ, ಔಷಧ, ಪ್ರಕೃತಿ, ಪರಿಸರ ಜ್ಞಾನ ವಿಚಾರದಲ್ಲಿ. ಸ್ನೇಹಿತೆ, ಲೇಖಕಿ ವಿ ಗಾಯತ್ರಿ ಮತ್ತು ಎನ್. ಶಿವಲಿಂಗೇಗೌಡ ಸಂದರ್ಶನ ರೂಪದಲ್ಲಿ ಹೊರತಂದಿರುವ ಪುಸ್ತಕ ‘ ಪುಟ್ಟೀರಮ್ಮನ ಪುರಾಣ’. ಇದು ಅವರುಗಳು ಚಾಮರಾಜನಗರ ಜಿಲ್ಲೆಯ ಪುಣ್ಯದಹುಂಡಿ ಗ್ರಾಮದ ಅನಕ್ಷರಸ್ಥೆ ಮಹಿಳೆ ಪುಟ್ಟೀರಮ್ಮನೊಂದಿಗೆ ನಡೆಸಿರುವ ಸಂಭಾಷಣೆ. ಪುಟ್ಟೀರಮ್ಮ ಆರೋಗ್ಯಕ್ಕೆ ಉತ್ತಮವಾದ ಹತ್ತಾರು ಬೆಳೆದಿರುವ ಬೆರೆಕೆ ಸೊಪ್ಪನ್ನು ಗುರುತಿಸುವ ಆಗಾಧವಾದ ಜ್ಞಾನವುಳ್ಳವಳು. ಆಕೆಗೆ ಈ ಭೂಮಿಯೇ ಉಣಬಡಿಸುವ ತಟ್ಟೆ. Her edible world is too large. ನಮ್ಮ ಪಾಲಿಗೆ ಯಾವುದು ಕಸ ಕಳೆಯೋ ಅದು ಆಕೆಗೆ ಅತ್ಯುತ್ತಮ ಆಹಾರ! ಆಕೆ ಪಟ ಪಟನೆ ಹೇಳುವ ಬೆರೆಕೆ ಸೊಪ್ಪಿನ ಸ್ಯಾಪಲ್ ಪಟ್ಟಿ ಹೀಗಿದೆ: ಗಣಕೆ ಸೊಪ್ಪು, ಪಸರೆ ಸೊಪ್ಪು, ಗುಳ್ಸುಂಡೆ ಸೊಪ್ಪು, ಮಳ್ಳಿ ಸೊಪ್ಪು, ಹಾಲೆ ಸೊಪ್ಪು, ಜವಣ ಸೊಪ್ಪು, ಅಣ್ಣೆ ಸೊಪ್ಪು, ಗುರುಜೆ ಸೊಪ್ಪು, ಕಲ್ಲು ಗರುಜೆ ಸೊಪ್ಪು, ಹಿಟ್ಟಿನಕುಡಿ ಸೊಪ್ಪು, ಕರಿಕಡ್ಡಿ ಸೊಪ್ಪು, ಅಡಕಪುಟ್ಟ, ಕೊಟ್ಟನ ಗುರುಜೆ, ಸಾರಿನ ಸೀಗೇಕುಡಿ, ತಡಗುಣಿ ಚಿಗುರು, ನಲ್ಲಿ ಕುಡಿ ಚಿಗುರು, ಹೊನಗಾಲ ಸೊಪ್ಪು, ಹೊನಗೊನೆ ಸೊಪ್ಪು, ಕಾರೇ ಸೊಪ್ಪು, ಕನ್ನೇ ಸೊಪ್ಪು, ಕಿರುನಗಲ ಸೊಪ್ಪು, ನುಗ್ಗೆ ಸೊಪ್ಪು, ಅಗಸೆ ಸೊಪ್ಪು, ಕಿಲಕೀರೆ ಸೊಪ್ಪು, ದಂಟು ಸೊಪ್ಪು, ಬೊದಗೀರ ಸೊಪ್ಪು, ಸಪ್ಪಸೀಗೆ ಸೊಪ್ಪು, ಮುಳ್ಳುಗೀರ ಸೊಪ್ಪು, ಕೀರೆ ಸೊಪ್ಪು, ಮೆಂಥೆ ಸೊಪ್ಪು, ಕುಂಬಳ ಸೊಪ್ಪು, ಪಾಲಕ ಸೊಪ್ಪು, ಬಿಳಿ ಬಗ್ಗರವಾಟ, ಒಂದೆಲಗ ಸೊಪ್ಪು, ಕಾಡು ನುಗ್ಗೆ ಸೊಪ್ಪು, ಕಾಡಂದಗ, ದ್ಯವನದ ಸೊಪ್ಪು, ಪುಂಡಿ ಸೊಪ್ಪು, ಬಸಲೆ ಸೊಪ್ಪು, ಕಳ್ಳೆ ಸೊಪ್ಪು. ಸಾಕಾ.. ಇನ್ನಾ ಬೇಕಾ….? ಬಯಲಿನ ಬೆರಕೆ ಸೊಪ್ಪಿನ ಆಕೆಯ ಜ್ಞಾನ ನಮ್ಮ ಅಜ್ಞಾನವನ್ನು ಬಯಲಿಗೆಳೆದಿದೆ.
ಆಧುನಿಕ ಪೋಷಕಾಂಶ ತಜ್ಞರ ನಿಕಟ ಸಂಪರ್ಕದಿಂದ ಹೇಳುವುದಾದರೆ ಅಲ್ಲಿ ಇವಾವುದನ್ನೂ ಕಲಿಯಲಾಗುವುದಿಲ್ಲ. ಜಗತ್ತಿನ ಶ್ರೇಷ್ಠ ತರಕಾರಿ ಯಾವುದು ಎಂದು ಕೇಳಿದರೆ ಅನೇಕರು ‘ಬ್ರಾಕೊಲಿ’ ಎನ್ನುತ್ತಾರೆ!
ನಮ್ಮ ನಾಡಿನ ಶ್ರೇಷ್ಠ ಪರಿಸರ ವಿಜ್ಞಾನಿ ಭಾರತೀಯ ವಿಜ್ಞಾನ ಸಂಸ್ಥೆಯ ಮಾದವ್ ಗಾಡ್ಗಿಲ್. ಅವರು ಹಾರ್ವರ್ಡ್ ವಿಶ್ವವಿದ್ಯಾನಿಲಯದ ಜಗತ್ತಿನ ಶ್ರೇಷ್ಠ ಪರಸರ ವಿಜ್ಞಾನಿ ಇ.ಒ.ವಿಲ್ಸನ್‍ರವರೊಂದಿಗೆ ಕಲಿತು ಬಂದವರು. ಅವರು ವಿಲ್ಸನ್‍ರಷ್ಟೇ ಗೌರವಿಸುವ ಇನ್ನೊಬ್ಬ ವ್ಯಕ್ತಿ ಕುನ್ಜಿರ ಮೂಲ್ಯ. ಕುನ್ಜಿರ ಮೂಲ್ಯ ಯಾವುದೇ ವಿಶ್ವ ವಿದ್ಯಾಲಯದ ಪ್ರಾದ್ಯಾಪಕರಲ್ಲ, ಪ್ರೊಫೆಸರ್ ಅಲ್ಲ. ಉಡುಪಿ ಜಿಲ್ಲೆಯ, ಕಾರ್ಕಳ ತಾಲೂಕಿನಲ್ಲಿರುವ ಮಾಲ ಗ್ರಾಮದವರು. ಕೆಲಸ ದನ ಮೇಯಿಸುವುದು. ಗಾಡ್ಗಿಲ್ ಪ್ರಾಕಾರ ಪಶ್ಚಿಮ ಘಟ್ಟದ ಸಸ್ಯ ಸಾಮ್ರಾಜ್ಯವನ್ನು ಅಂತರ್ಗತ ಮಾಡಿಕೊಂಡಿರುವ ಅತೀ ಅಪರೂಪದ ಅಪರಂಜಿ. ಅವರೇ ಹೇಳಿರುವಂತೆ ಅವರು ಮೂಲ್ಯನಿಂದ ಕಲಿತದ್ದು ವಿಲ್ಸನ್‍ಗಿಂತ ಕಮ್ಮಿ ಇಲ್ಲವಂತೆ! ಶಿಶುವಿನಿಂದ ಪಶುವಿನವರೆಗೂ ಹತ್ತಾರೂ ಕಾಯಿಲೆಗಳಿಗೆ ಅಂಗೈಯಲ್ಲಿದೆ ಔಷಧ ಅವರಲ್ಲಿ. ಕೆಲವು ವರ್ಷಗಳ ಹಿಂದೆ ಸ್ಥಳೀಯ ಕುಟುಂಬದವರು ವಿಷದ ಹಣಬೆ ತಿಂದು ಜೀವ ಕಳೆದುಕೊಳ್ಳುವ ಸ್ಥಿತಿಗತಿಯಲ್ಲಿದ್ದರು. ಮೂಲ್ಯ ಅವರನ್ನು ಗಿಡಮೂಲಿಕೆ ಔಷಧದಿಂದ ಬದುಕಿಸಿದ್ದರು. ಇದುವರೆಗೆ ಸುಮಾರು 5000ಕ್ಕೂ ಹೆಚ್ಚು ವಿವಿಧ ಕಾಯಿಲೆಗಳಿಂದ ನರಳುವ ಜನರಿಗೆ ಕೊನೆಯ ಹಂತದಲ್ಲಿಯೂ ಔಷಧ ಕೊಟ್ಟು ಬದುಕಿಸಿದ್ದಾರೆ. ಅದೃಷ್ಟವಶಾತ್ ಅವರನ್ನು ಸಮಾಜ ಅನೇಕ ಪುರಸ್ಕಾರಗಳಿಂದ ಸನ್ಮಾನಿಸಿದೆ. ದೆಹಲಿಯಲ್ಲಿ ಅಂದಿನ ರಾಷ್ಟ್ರಪತಿ ಅಬ್ದುಲ್ ಕಾಲಾಂರಿಂದ ಸಹ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಮಲೆನಾಡಿನ ನಮ್ಮೂರಿನ ರಾಮಜ್ಜ, ನಿಂಗಜ್ಜ ಈ ರೀತಿ ಹಾವು ಕಚ್ಚಿದ ಹಸುವಿಗೆ ಔಷಧ ಕೊಟ್ಟು ಅರೆಗಳಿಗೆಯಲ್ಲಿ ಎಬ್ಬಿಸಿ ಕಳಿಸುತ್ತಿದ್ದರು. ಆದರೆ ನಮಗೆ ಅದು ಜ್ಞಾನವೆಂದು ಗುರುತಿಸುವ ಪ್ರಜ್ಞೆ ಇರಲಿಲ್ಲ. ಕಾರಣ ಅವರ ಮೇಲೆ ಬಿಳಿ ಕೋಟ್ ಇರಲಿಲ್ಲ!
ಇನ್ನೊಂದು ಹಳೆ ಕತೆ: ಒಂದು ಊರಿನಲ್ಲಿ ಒಬ್ಬ ವೈದ್ಯ ಮತ್ತು ಜೋತಿಷಿಯಿದ್ದರು. ಅವರು ಯಾವುದೋ ಕಾರಣಕಾಗಿ ಊರಿನಿಂದ ಸ್ವಲ್ಪ ದಿನ ಹೊರಗೆ ಹೋಗಬೇಕಾಯಿತು. ತಿರುಗಿ ಇಬ್ಬರೂ ಒಟ್ಟಿಗೆ ಊರಿಗೆ ಬರುವಾಗ ಊರಿನಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರ ಶವ ಸಂಸ್ಕಾರ ನಡೆಯುತಿತ್ತು. ಇವರಿಬ್ಬರೂ ಮಾತನಾಡಿಕೊಳ್ಳುತ್ತಾರೆ “ನಾವಿಬ್ಬರೂ ಊರಲ್ಲಿಲ್ಲದಿದ್ದಾಗ ಈತ ಸತ್ತದ್ದಾದರೂ ಹೇಗೆ?’ ಎಂದು!
ಮೊನ್ನೆ ಅರ್ಚಕರ ನೇಮಕಾತಿ ವಿಷಯದ ತಮಿಳುನಾಡಿನ ಹಳೆಯ ಅರ್ಜಿ ವಿಚಾರಣೆ ಮಾಡಿ ಸರ್ವೋಚ್ಚ ನ್ಯಾಯಾಲಯ ತೀರ್ಪು ಕೊಟ್ಟಿದೆ. ಆಗಮ ಶಾಸ್ತ್ರದ ಪ್ರಕಾರವೇ ನೇಮಕಾತಿ ಮಾಡಬೇಕೆಂದಿದೆ ಮತ್ತು ಇದು ಜಾತ್ಯಾತೀತತೆಗೆ ವಿರುದ್ಧವಲ್ಲವೆಂದು ಸಹ ಹೇಳಿದೆ! ದೇವಾಲಯಕ್ಕೆ ಎಷ್ಟು ಹತ್ತಿರವೋ ಅಷ್ಟು ದೇವರಿಂದ ದೂರ ಎನ್ನುವುದುಂಟು!
*****