ದ್ಯಾವನೂರು- ಯಶವಂತ ಚಿತ್ತಾಲ
[ದೇವನೂರ ಮಹಾದೇವರ ದ್ಯಾವನೂರು ಕಥಾ ಸಂಕಲನ ಕುರಿತು ಯಶವಂತ ಚಿತ್ತಾಲರ ಅಭಿಪ್ರಾಯ]
ನನ್ನ ಮೇಲೆ ಅತಿಗಾಢವಾಗಿ ಪರಿಣಾಮ ಮಾಡಿ ನನ್ನ ಈವರೆಗಿನ ಬರವಣಿಗೆಯ ಮಿತಿಗಳಿಗೆ ನನ್ನ ಕಣ್ತೆರೆಯಿಸಿದ ಈ “ದ್ಯಾವನೂರು” ಕಥಾ ಸ೦ಕಲನವನ್ನು ಮೊದಲ ಬಾರಿಗೆ ಓದಿದಾಗ ಅದರ ತಾಜಾತನಕ್ಕೆ ಮನಸ್ಸು ತೆರೆಯುತ್ತಿರುವಷ್ಟರಲ್ಲೇ ಅದು ಪ್ರಕಟಿಸಿದ ಸತ್ಯಗಳಿ೦ದಾಗಿ ಓದಿನ ಕೊನೆಯಲ್ಲಿ ಮನಸ್ಸಿನಲ್ಲಿ ಸ್ಥಾಯಿಯಾಗಿ ನಿ೦ತ್ತದ್ದು ಹರವಾದ ಕೃತಜ್ಞತಾಭಾವ.
ದೇವನೂರು ಮಹಾದೇವರ ಬರವಣೆಗೆಯಲ್ಲಿ ನಮಗೆ ತಪ್ಪದೇ ಜೂಮ್ಮುದಟ್ಟಿಸುವುದು ಇಲ್ಲಿ ಬಂದ ಅನುಭವದ ಪ್ರಾಮಾಣಿಕತೆ ಹಾಗೂ ಈ ಅನುಭವ ಯಾವ ಒಂದು ಸುಳ್ಳಿನ ಅಪಸ್ವರ ಹಬ್ಬಿಸದೇ ಅಷ್ಟೇ ಪ್ರಾಮಾಣಿಕವಾಗಿ ಭಾಷೆಯಲ್ಲಿ ಸಶರೀರವಾಗುವ ಸಾಚಾ ರೀತಿ. ಹೀಗೆ ತಾನು ಹಿಡಿದಿಟ್ಟ ಅನುಭವ ಅದರ ಹುಟ್ಟಿಗೆ ಕಾರಣವಾದ ಸಾಮಾಜಿಕ ಸಂದರ್ಭದಲ್ಲಿ ನಿಜವಾಗುವಾಗಲೇ ಅದರ ಮಾನವೀಯ ಆಯಾಮಗಳನ್ನು ಸ್ಪಷ್ಟವಾಗಿ, ಆದರೂ ಕಳತಮಕವಾಗಿ, ಆದ್ದರಿಂದಲೇ ನಮಗೆ ನೇರವಾಗಿ ಮುಟ್ಟುವಂತೆ ತೆರೆದು ತೋರಿಸುವಲ್ಲಿ, ತೋರಿಸಿ ಆ ಸಂದರ್ಭವನ್ನೇ ಹೊಸ ಬೆಳಕಿನಲ್ಲಿ ನೋಡುವಂತೆ ಮಾಡುವುದರಲ್ಲಿ ಇಲ್ಲಿಯ ಪ್ರತಿಯೊಂದು ಕತೆಯೂ ಅಸಾಧಾರಣವಾದ ಯಶಸ್ಸನ್ನು ಗಳಿಸಿದೆ.