ದ್ಯಾವನೂರು : ಒಂದು ಸಮೀಕ್ಷೆ-ವಿ.ಎನ್.ಲಕ್ಷ್ಮೀನಾರಾಯಣ

[ವಿಮರ್ಶಕರಾದ ವಿ.ಎನ್.ಲಕ್ಷ್ಮೀನಾರಾಯಣ ಅವರು ದೇವನೂರ ಮಹಾದೇವ ಅವರ ‘ದ್ಯಾವನೂರು’ ಕಥಾ ಸಂಕಲನದ ಕುರಿತು ಬರೆದ ವಿಮರ್ಶೆ ಅವರ ‘ನಿರಂತರ’ ಸಂಕಲನದಲ್ಲಿ ದಾಖಲಾಗಿದೆ ಆ ಬರಹ ನಮ್ಮ ಮರು ಓದಿಗಾಗಿ.]

odalala_cover
ಈ ಸಂಕಲನದಲ್ಲಿ 1968 ರಿಂದ 1973 – ಒಟ್ಟು ಐದು ವರ್ಷಗಳ ಅವಧಿಯಲ್ಲಿ ದೇವನೂರ ಮಹಾದೇವ ಅವರು ಬರೆದ ಏಳುಕತೆಗಳಿವೆ. ಇವನ್ನು ‘ಏಳು ಪ್ರಸಂಗಗಳು’ ಎಂದು ಲೇಖಕರು ಕರೆದಿರುವುದನ್ನು ಈ ಕತೆಗಳನ್ನು ಓದುವಾಗ ನೆನಪಿನಲ್ಲಿಡಬೇಕು.

ಈ ಕತೆಗಳ ಚೌಕಟ್ಟಿನಲ್ಲಿ ಬರುವ ಜನ ಗ್ರಾಮೀಣ ಪರಿಸರದಿಂದ ಬಂದವರು. ಇಲ್ಲಿನ ಪ್ರಸಂಗಗಳು ಸಂಭವಿಸುವ ರೀತಿ, ದಟ್ಟವಾದ ಚಿತ್ರಣದ ಮೂಲಕ ಒದಗುವ ವಿವರಗಳು ಎಲ್ಲವೂ ಗ್ರಾಮೀಣ. ಇದನ್ನೆಲ್ಲಾ ನಿಂತು ನೋಡುವ ಪ್ರಜ್ಞೆ ಮೂಲತಃ ಗ್ರಾಮೀಣವಾದರೂ, ನಗರ ಸಂಸ್ಕಾರಕ್ಕೊಳಗಾಗಿ ಸುಧಾರಿಸಿದ್ದಾದ್ದರಿಂದ ಗ್ರಾಮೀಣ ಪರಿಸರದಿಂದ ಆಚೆ ನಿಂತು ನೋಡುವಂಥದೂ ಆಗಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ನಗರ ಪರಿಸರ – ಅನುಭವದಿಂದ ರೂಪ ಪಡೆದುಕೊಂಡ ಪ್ರಜ್ಞೆ, ತನ್ನ ಬದುಕಿನ ಕಳೆದ ದಿನಗಳಲ್ಲಿ ಗ್ರಾಮೀಣ ಅನುಭವವನ್ನು ಮೈಗೂಡಿಸಿಕೊಂಡಿದ್ದು ಈಗ ಅದರ ಪ್ರಭಾವದಿಂದ ಗ್ರಾಮೀಣ ಜೀವನದ ವಿವರಗಳತ್ತ ತುಡಿಯುತ್ತಿರುವುದು.

ಈ ಕತೆಗಳನ್ನು ಓದುವಾಗ ಥಟ್ಟನೆ ನಮ್ಮ ಗಮನಕ್ಕೆ ಬೀಳುವುದು ಇಲ್ಲಿನ ಭಾಷೆ. ಬಹುಶಃ ಕನ್ನಡ ಸಾಹಿತ್ಯದಲ್ಲೇ ಮೊದಲ ಬಾರಿಗೆ, ಹಳ್ಳಿಯ ಭಾಷೆಯ ನುಡಿಗಟ್ಟಿನಿಂದ ಬೇರೆಯಾಗದೆ, ಆದರೆ ಅದೇ ಸಮಯದಲ್ಲಿ ಗ್ರಾಮ್ಯವೂ ಆಗದೆ ಜೀವಂತವಾಗಿ ನಿಂತು ಕತೆ ಹೇಳಬಲ್ಲ ನೇರವಾದ ಮತ್ತು ಸರಳವಾದ ಭಾಷೆಯನ್ನು ನಾವು ಕಾಣುತ್ತೇವೆ. ಈ ಭಾಷೆಯ ಪ್ರಖರತೆಯಿಂದಾಗಿಯೇ ನಮಗೆ ಇಲ್ಲಿನ ಪಾತ್ರಗಳು ಪರಿಸರ ಜೀವಂತವಾದವುಗಳೆಂದೂ ಹತ್ತಿರವಾದವುಗಳೆಂದೂ ಅನ್ನಿಸಲು ಸಾಧ್ಯವಾಗುತ್ತದೆ. ಯಾವುದೇ ಅನುಭವ ಸಮಕಾಲೀನವೂ ಅರ್ಥಪೂರ್ಣವೂ ಆಗುವುದು ಅದು ಆ ಕಾಲದ ಪರಿಸರದ ಭಾಷೆಯನ್ನು ಕ್ರಿಯಾತ್ಮಕವಾಗಿ ಬಳಸಿಕೊಂಡಾಗ ಮಾತ್ರ. ಈ ಅರ್ಥದಲ್ಲಿ ಈ ಸಂಕಲನದ ಕತೆಗಳು ಒಟ್ಟಾಗಿ ಸಮಕಾಲೀನವೂ ಅರ್ಥಪೂರ್ಣವೂ ಆಗಿವೆ.

ಇಲ್ಲಿನ ಕತೆಗಳನ್ನು ಸದ್ಯದ ಅನುಕೂಲತೆಗಾಗಿ ಮುಖ್ಯವಾಗಿ ಮೂರು ಭಾಗ ಮಾಡಿಕೊಳ್ಳಬಹುದು. ಒಂದು; ಒಬ್ಬ ನಾಯಕ ಅಥವಾ ಕೇಂದ್ರ ವ್ಯಕ್ತಿ ಇದ್ದು ಅವನ ಪ್ರಜ್ಞೆಯ ಮೂಲಕವೇ ಎಲ್ಲ ವಿವರಗಳನ್ನು ಮುಂದೂಡುತ್ತಾ, ಹಳ್ಳಿಯ ಜೀವನದ ಆದಷ್ಟು ಮುಖಗಳನ್ನು ಪರಿಚಯ ಮಾಡಿಕೊಟ್ಟು, ಈ ಯತ್ನದಲ್ಲೇ ವ್ಯಕ್ತವಾಗುವ ಜೀವನ-ವ್ಯಾಖ್ಯಾನವನ್ನು ಕುರಿತು ಓದುಗನ ಪ್ರತಿಕ್ರಿಯೆಗಳನ್ನು ಕರೆಯುತ್ತಾ ಅವನ ಸಮ್ಮತಿಯನ್ನು ಅಪೇಕ್ಷಿಸುವ ಕತೆಗಳು. ಎರಡು; ಅಂಥ ನಾಯಕ ಅಥವಾ ಕೇಂದ್ರ ವ್ಯಕ್ತಿಯಿಲ್ಲದೆ ಮೆಲ್ಮೈಯಲ್ಲಿ ಅಷ್ಟಾಗಿ ಪ್ರಕಟವಾಗದ ವಿವರಗಳನ್ನು ನಿರೂಪಣೆಯ ಅಥವಾ ವರದಿಯ ಮಟ್ಟದಲ್ಲೇ ಹೊರಗೆಳೆದು ಸ್ಪಷ್ಟವಾಗಿ ಬಿಚ್ಚಿತೋರಿಸುವ, ಸ್ಪಷ್ಟ ನಿಲುವುಳ್ಳ ಕತೆಗಳು. ಇಲ್ಲಿನ ಜೀವನ ವ್ಯಾಖ್ಯಾನಕ್ಕೆ ಓದುಗನ ಸಮ್ಮತಿ ಅತ್ಯಾವಶ್ಯಕವೇನೂ ಅಲ್ಲ. ಮೂರು; ಮೇಲಿನ ಎರಡು ರೀತಿಯ ಕತೆಗಳಲ್ಲಿನ ಪ್ರಧಾನ ಅಂಶಗಳನ್ನೂ ಮೈಗೂಡಿಸಿಕೊಂಡು, ಹಳ್ಳಿಯ ಜೀವನದ ಸಮೃದ್ಧ ವಿವರಗಳ ಅತ್ಯುತ್ತಮ ಚಿತ್ರಣದ ಮೂಲಕ ಶೋಷಣೆಯ ಬಗ್ಗೆ ಸದ್ದಿಲ್ಲದೆ ಗಮನ ಸೆಳೆಯುವ ಗದ್ಯಕಾವ್ಯ. ಮೊದಲ ನಾಲ್ಕು ಕತೆಗಳು ಮೊದಲ ಗುಂಪಿಗೂ, ‘ಡಾಂಬರು ಬಂದುದು’, ‘ಮೂಡಲ ಸೀಮೇಲಿ ಕೊಲೆಗಿಲೆ ಮುಂತಾಗಿ’ ಈ ಎರಡು ಎರಡನೆಯ ಗುಂಪಿಗೂ, ‘ಅಮಾಸ’ ಮೂರನೆಯ ಗುಂಪಿಗೂ ಸೇರುತ್ತವೆ.

ಮೊದಲ ಗುಂಪಿನ ಕತೆಗಳಲ್ಲಿ ಕಾಣುವ ‘ಪ್ರಧಾನ ವ್ಯಕ್ತಿ’ಗಳು ನಗರ ಜೀವನದ ಸೀಮಿತ ಅನುಭವವನ್ನು ಪಡೆದವರು. ತಂದೆ-ತಾಯಿಯ ಮಾತನ್ನು ಕೇಳದವರು. ಇದರ ಜೊತೆಗೆ ಬೇರೆ ಬೇರೆ ಕಾರಣಗಳಿಂದಾಗಿ ಹಳ್ಳಿಯ ಜೀವನವನ್ನೇ ಒಪ್ಪಿಕೊಂಡು ಅಲ್ಲೆ ಜೀವನ ಮಾಡಲು ಹೆಣಗುವವರು. ಆದರೆ ಇವರು ಹಳ್ಳಿಯ ಇತರರಂತೆ ಇಲ್ಲವಾದ್ದರಿಂದ ಅವರೊಡನೆ ಬೆರೆಯಲಾಗದೆ ಪರಕೀಯವಾಗಿ ನಿಲ್ಲಬೇಕಾಗಿ ಬಂದವರು.
‘ಮಾರಿಕೊಂಡವರು’ ಕತೆಯಲ್ಲಿ ಬರುವ ಕಿಟ್ಟಪ್ಪ, ಇಂಥ ಒಬ್ಬ ವ್ಯಕ್ತಿ. ಬೀರನ ಹೆಂಡತಿ ಲಚುಮಿಯ ಜೊತೆ ಅವರ ಸಂಬಂಧದಿಂದಾಗಿ, ಬೀರನಲ್ಲಿ ಮೂಡುವ ಮಾನಸಿಕ ಘರ್ಷಣೆಯ, ಪ್ರಧಾನ ವಸ್ತು ಅವನಾಗುವುದರ ಮೂಲಕ ಅಂಶತಃ ನಾಯಕನೂ ಖಳನಾಯಕನೂ ಆಗುತ್ತಾನೆ. ಬೀರ ಮತ್ತು ಲಚುಮಿಯರನ್ನು ಅವರ ಬಡತನದ ಅಸಹಾಯ ಸ್ಥಿತಿಯನ್ನೂ ಉಪಯೋಗಿಸಿಕೊಂಡು ಶೋಷಿಸುವ ಗೌಡರ ಒಂದು ಭಾಗವಾಗುತ್ತಾನೆ. ಒಬ್ಬ ವ್ಯಕ್ತಿಯನ್ನು ಇನ್ನೊಬ್ಬ ಹಂಗಿನಲ್ಲಿಟ್ಟು ಹೇಗೆ ಶೋಷಿಸಬಹುದು ಎಂಬುದಕ್ಕೆ ಗೌಡರು – ಬೀರ ಇವರ ಸಂಬಂಧ ಒಳ್ಳೆಯ ಉದಾಹರಣೆ. ಗೌಡರು ಮನೆಮಾರಿ ಕಿಟ್ಟಪ್ಪನನ್ನು ಓದಲು ಕಳಿಸಿದರೆ, ಅವನು ಓದದೆ ಗೆಣಕಾತಿಯ ಹಿಂದೆ ಬಿದ್ದು ಫೇಲಾಗಿ ಇತ್ತ ನಗರಕ್ಕೂ ಸೇರದ, ಅತ್ತ ಹಳ್ಳಿಗೂ ಹೊಂದಿಕೊಳ್ಳಲಾಗದ ಅಸ್ಪಷ್ಟ ನಿಲುವುಳ್ಳ ವಿಚಿತ್ರ ವ್ಯಕ್ತಿಯಾಗಿ ಹಿಂದಿರುಗಿದ್ದಾನೆ. ಅವನು, ಬಹುಶಃ ತನ್ನ ಗೆಣಕಾತಿಯಲ್ಲಿ ಪಡೆಯಲು ಯತ್ನಿಸಿ ವಿಫಲನಾದದ್ದನ್ನು, ಲಚುಮಿಯಲ್ಲಿ ಸುಲಭವಾಗಿ ಪಡೆಯುವಲ್ಲಿ ಸಫಲನಾಗಿದ್ದಾನೆ. ಇಂದು ನಗರದಲ್ಲಿ ವಿದ್ಯಾಭ್ಯಾಸ ಪಡೆದು (ಫೇಲಾಗಿ ಅಥವಾ ಪಾಸಾಗಿ) ಹಳ್ಳಿಗೆ ಹಿಂದಿರುಗುವ ಸಾವಿರಾರು ಯುವಕರ ಪ್ರತಿನಿಧಿ ಕಿಟ್ಟಪ್ಪ. ಇವನಿಗೆ ಹಳ್ಳಿಯಲ್ಲಿ ಬಲಿಯಾಗಬೇಕಾದವರು ಬೀರ, ಲಕ್ಷ್ಮಿ ಮತ್ತು ಇಂಥವರು. ಕಿಟ್ಟಪ್ಪನದು ಒಂದು ರೀತಿಯಲ್ಲಿ ಎರಡು ಮುಖವುಳ್ಳ ವ್ಯಕ್ತಿತ್ವ. ಅವನ ಹಳೆಯ ರೀತಿಯ (ಪಾಳೇಗಾರಶಾಹಿ ರೀತಿಯ ಮೌಲ್ಯಗಳನ್ನು ಒಪ್ಪಿ ಅನುಸರಿಸುವ) ತಂದೆ-ಮಗನ ಸಂಬಂಧ ವಿರುದ್ಧ ಬಂಡೆದ್ದವನು. ಆದರೆ ಲಕ್ಷ್ಮಿ ಬೀರನ ಜೊತೆ ಅವನ ಸಂಬಂಧ ಶೋಷಕ-ಶೋಷಿತ ರೀತಿಯದು.
“ಕಿಟ್ಟಪ್ಪ ಕೊಟ್ಟಿರುವ ರಗ್ಗು ಲಚುಮೀನ ಕವಿಚಿಕೊಂಡಿದೆ” (ಪುಟ ; 13)

ಗೌಡರು ಬೀರನನ್ನು ನೇರವಾಗೆ ಶೋಷಿಸಿದರೆ, ಕಿಟ್ಟಪ್ಪ ಲಚುಮಿಯನ್ನು ಆ ಮೂಲಕ ಬೀರನನ್ನು ಬಳಸು ರೀತಿಯಲ್ಲಿ ಶೋಷಿಸುತ್ತಾನೆ. ಹೀಗೆ ಹಂಗಿನ ಮೂಲಕ ಶೋಷಿಸುವುದು ಸಾಧ್ಯವಾಗುವುದು, ಎಲ್ಲ ರೀತಿಯ ಮುಖ್ಯವಾಗಿ ಆರ್ಥಿಕ ಅಸಮಾನತೆಯನ್ನು ಹುಟ್ಟು ಹಾಕುವ ಸಮಾಜದಲ್ಲಿ. ಇಲ್ಲಿ ಈ ರೀತಿಯ ಸಂಬಂಧಕ್ಕೆ ಲಕ್ಷ್ಮಿಯ ಸಮ್ಮತಿಯೂ ಇದೆ ಎಂಬುದು ಪ್ರಬಲ ಕಾರಣವಾಗಲಾರದು. ಏಕೆಂದರೆ, ಹಾಗೆ ನೋಡಿದರೆ ಬೀರನ ಸಮ್ಮತಿಯಿಂದಲೇ ಗೌಡರಿಂದ ಅವನ ಶೋಷಣೆ ನಡೆಯುತ್ತಿದೆ – ಹಾಗೆ ಶೋಷಿಸಿಕೊಳ್ಳುವುದು ಅನಿವಾರ್ಯ ಎಂಬ ಘಟ್ಟವನ್ನು ಮುಟ್ಟಿರುವುದರಿಂದ. ಅಂದರೆ ಬೀರ (ಮತ್ತು ಬೀರನಂಥವರು) ಹೊಟ್ಟೆಗಿಲ್ಲದೆ ಸಾಯಬೇಕು ಅಥವಾ ಗೌಡರಿಂದ (ಮತ್ತು ಅಂಥವರಿಂದ) ಶೋಷಿಸಿಕೊಂಡು ಬದುಕಲು ಯತ್ನಿಸಬೇಕು. ಎಲ್ಲಕ್ಕಿಂತ ಬದುಕುವುದೇ ಮೊದಲ ಕರ್ತವ್ಯವಾಗಿರುವುದರಿಂದ, ಬದುಕುವ ಹಂಬಲ ಸಹಜವಾಗಿ ಅದಮ್ಯವಾಗಿರುವುದರಿಂದ ಇರುವ ಸಾಮಾಜಿಕ ವ್ಯವಸ್ಥೆಯ ಚೌಕಟ್ಟಿನಲ್ಲಿ ಶೋಷಿಸಿಕೊಳ್ಳುವುದು ಅನಿವಾರ್ಯವಾಗಿರುತ್ತದೆ. ಈ ಕಾರಣಕ್ಕಾಗಿ, (ಇಂಥ ಕಥೆಗಳಲ್ಲಿ) ಬೀರ ಮತ್ತು ಲಚುಮಿಯರನ್ನು ಉದಾತ್ತರೆಂದು ಪರಿಗಣಿಸಬೇಕಿಲ್ಲವಾದರೂ, ಪಕ್ಷ ವಹಿಸುವುದರ ಬಗ್ಗೆ ಸಂಕೋಚ ಪಡಬೇಕಾದ್ದಿಲ್ಲ. ಶೋಷಕ ವರ್ಗಕ್ಕೆ, ತುಳಿಯುವ ಸವಲತ್ತುಗಳು ಅವರು ಶೋಷಿತರೊಂದಿಗೆ ಇಟ್ಟುಕೊಳ್ಳುವ ಸಂಬಂಧದ ರೀತಿಯಲ್ಲೇ ಇರುತ್ತವೆ ಎಂಬುದನ್ನು ಗಮನಿಸಬೇಕು. ಗೌಡರು ಬೀರ ಮತ್ತು ಲಚುಮಿಗೆ ಆಶ್ರಯ ಕೊಟ್ಟು ಉಪಕಾರ ಮಾಡಿದ್ದು ಸುಳ್ಳಲ್ಲ. ಆದರೆ ಹಾಗೆ ಉಪಕಾರ ಮಾಡುವ ಔದಾರ್ಯದ ಮೂಲದಲ್ಲೇ ಈ ರೀತಿಯ ಸಂಬಂಧವನ್ನು, ಇದಕ್ಕೆ ಅವಕಾಶ ಮಾಡಿಕೊಡುವ ವ್ಯವಸ್ಥೆ ಒದಗಿಸಿರುತ್ತದೆ. ಕಿಟ್ಟಪ್ಪ ಲಚುಮಿಯ ಜೊತೆ ಇಟ್ಟುಕೊಂಡಿರುವ ಸಂಬಂಧ ಬೀರನಿಗೆ ಗೊತ್ತಿದೆ. ಆದರೆ ಗೌಡರ ಔದಾರ್ಯ ಮತ್ತು ಹಂಗಿನಿಂದಾಗಿ ಏನೂ ಮಾಡುವ ಹಾಗಿಲ್ಲ. ಉದಾಹರಣೆಗೆ : ‘ಪಟೇಲರ ಹಟ್ಟಿಗೆ ಚಲ್ಲಣ ಸಿಕ್ಕಿಸಿಕೊಂಡು ಬಂದಿದ್ದವ’ ಲಚುಮಿಯನ್ನು ಕೆಣಕಿದ್ದನ್ನು ಕೇಳಿದ್ದೇ ತಡ “ಜಗಲಿ ಮ್ಯಾಲೆ ಕಾಲಮೇಲೆ ಕಾಲ ಹಾಕಿ ಕುಳಿತಿದ್ದವನ ಕತ್ತಿನ ಪಟ್ಟಿ ಹಿಡಿದು ಎಳೆದು ‘ನಿನ್ನ ಸಾವ್ಕಾರಿಕೆ ಇದ್ರ ನಿನ್ನ ಹಟ್ಟಿಗೆ ಕನ್ಲ. ನಂಗೂವಸಿ ತೋರಿಸೋಕೆ ಬತ್ತಿಯಾ?’ಎಂದು….” ಬಿಗಿಯಲು ಹೊರಟ ಬೀರ, ಕಿಟ್ಟಪ್ಪ ತನ್ನ ಹೆಂಡತಿಯ ಜೊತೆ ಇಟ್ಟು ಕೊಳ್ಳಬಹುದಾದ ಸಂಬಂಧಕ್ಕೆ, ಮಾಂಸ ಸರಾಪು ಒದಗಿಸುವುದರ ಮೂಲಕ ಮುಗ್ಧವಾಗಿ ಸಹಾಯ ಮಾಡಬೇಕಾದ ವಿಪರ್ಯಾಸ ಒದಗುತ್ತದೆ. ಅದು ಅವನ ಪ್ರಜ್ಞೆಯನ್ನು ಹೊಕ್ಕು ಕೆಣಕಿದರೂ ಏನೂ ಮಾಡುವಂತಿಲ್ಲ. ಕಿಟ್ಟಪ್ಪ ಮತ್ತು ಕಿಟ್ಟಪ್ಪನ ಅಪ್ಪ ಅವನಿಗೆ ಅನ್ನ ಕೊಡುವ ದಣಿ. ಹಾಗಾಗಿ ತನ್ನ ಸಿಟ್ಟು-ವಿರೋಧಗಳನ್ನೆಲ್ಲ ಸುಪ್ತ ಮನಸ್ಸಿಗೆ ತಳ್ಳಬೇಕಾಗುತ್ತದೆ. ಕುಡಿದಾಗ ಅವೆಲ್ಲ ಈಚೆ ಬಂದು ಬೀರನನ್ನು ಕಲಕುತ್ತವೆ. ಕಿಟ್ಟಪ್ಪನನ್ನ ಲಚುಮಿಯೊಡನೆ ಮುಗಿಸಲು ಮುಚ್ಚು ತೆಗೆದಿಟ್ಟಿರುವುದಾಗಿ ಲಚುಮಿಗೂ ಹೇಳುತ್ತಾನೆ. ಆದರೆ ಕಿಟ್ಟಪ್ಪನೇ ಪ್ರತ್ಯಕ್ಷವಾಗಿ ಎದುರು ನಿಂತು ನಕ್ಕಾಗ ತಾನೂ ನಗುತ್ತಾನೆ ಆ ನಗುವಿನ ಹಿಂದಿರುವ ಅಸಹಾಯಕತೆ, ಬದುಕಿನಲ್ಲಿ ಅತ್ಯಂತ ವೈಯಕ್ತಿಕವಾದ ಆಪ್ತವಾದ ಭಾವನೆ-ಸಂಬಂಧಗಳನ್ನು ನಿರ್ದಯವಾಗಿ ಧ್ವಂಸ ಮಾಡುವ ಶೋಷಣೆಯ ಹೊಡೆತಕ್ಕೆ ಅನಿವಾರ್ಯವಾಗಿ ಪಕ್ಕಾಗುವ ಬೀರನ ಸ್ಥಿತಿ ನಮ್ಮ ಗಮನ ಸೆಳೆಯುತ್ತದೆ. ಇಂಥ ಸನ್ನಿವೇಶವನ್ನು ಭಾವೋದ್ವೇಗಕ್ಕೆ ಎಡೆಕೊಡದಂತೆ ಸೂಚ್ಯವಾಗಿ ಸಾಧಿಸುವಲ್ಲಿ ಲೇಖಕರ ಶಕ್ತಿ ವ್ಯಕ್ತವಾಗುತ್ತದೆ.

ಇಲ್ಲಿ, ಲಕ್ಷ್ಮಿಯ ಭಾವನೆಗಳೇನು ಎನ್ನುವುದನ್ನು ನಿರ್ಧರಿಸುವುದು, ಗಂಡು-ಹೆಣ್ಣಿನ ಸಂಬಂಧದ ಬಗ್ಗೆ ನಾವು ಯಾವುದೇ ಸರಳವಾದ ಮತ್ತು ಸ್ಪಷ್ಟವಾದ ನಿಲುವನ್ನು ತಾಳಲಾಗುವುದಿಲ್ಲ ಎಂಬುದರಿಂದಲೋ ಏನೊ, ಸಾಧ್ಯವಾಗುವುದಿಲ್ಲ.

ಮೇಲಿನ ಕತೆಗೆ ಹೋಲಿಸಿದರೆ, ‘ಗ್ರಸ್ತರು’ ‘ಒಂದು ದಹನದ ಕತೆ’ ಮತ್ತು ‘ದತ್ತ’ ಮಹತ್ತ್ವಪೂರ್ಣ ಕತೆಗಳೆಂದು ಅನ್ನಿಸುವುದಿಲ್ಲ. ಈ ಮೂರು ಕತೆಗಳ ಜೀವಾಳ ಭಾಷೆ ಮತ್ತು ಸಮೃದ್ಧವಾದ ಹಳ್ಳಿಯ ಪರಿಸರದ-ನಂಬಿಕೆಯ ವಿವರಗಳನ್ನೊಳಗೊಂಡ ಕಾವ್ಯಮಯ ಚಿತ್ರಣ.

‘ಗ್ರಸ್ತರು’ ಕತೆಯ ಮುಖ್ಯವಸ್ತು ಶೋಷಣೆ, ಈ ಕತೆಯ ನಾಯಕ ಗೌಡರ ಕೃಪಾಶ್ರಯದಿಂದಲ್ಲದೆ ಸ್ವತಂತ್ರವಾಗಿ ಬದುಕುವುದು ಸಾಧ್ಯವಿಲ್ಲ. ತನ್ನ ಓದಿಗೆಂದು ಗೌಡರ ಬಳಿ ಮಾಡಿರುವ ಸಾಲ ಅವನ ಸ್ವಾತಂತ್ರ್ಯವನ್ನು ನಿರ್ಬಂಧಿಸುತ್ತದೆ. ಪಾಳೆಗಾರೀಶಾಹಿ ಮೌಲ್ಯಗಳನ್ನು ರೂಢಿಸಿಕೊಂಡಿರುವ ವ್ಯವಸ್ಥೆಯ ಅಂಗವನ್ನು ಪ್ರತಿನಿಧಿಸುವ ಸ್ವಾಮಿಗಳ ಬಳಿ ಗೌಡರ ಶಿಫಾರಸಿನಿಂದಾಗಿ ಕೆಲಸ ಸಂಪಾದಿಸಿಕೊಂಡು ಅವರ ಔದಾರ್ಯದಲ್ಲಿ ಬದುಕುವುದರಿಂದ ಅವನ ಸ್ವಾತಂತ್ರ್ಯ ಇನ್ನಷ್ಟು ಮೊಟಕಾಗುತ್ತದೆ. ಇವುಗಳಿಂದ ಮುಕ್ತನಾಗಬೇಕಾದರೆ, ಇರುವ ಸವಲತ್ತುಗಳನ್ನು ಕಳೆದುಕೊಳ್ಳಬೇಕು. ಶೋಷಿಸುವಾಗ ಗೌಡರು, ಸ್ವಾಮಿಗಳು ಹೇಗೆ ಒಂದಾಗುತ್ತಾರೆಂಬುದು ಶೋಷಣೆಗೆ ಅವಕಾಶ ಮಾಡಿಕೊಡುವ ವ್ಯವಸ್ಥೆ ಹೇಗೆ ಇರುವ ಸಾಮಾಜಿಕ ಅಂಗಗಳನ್ನು ಸಹಜವಾಗಿ ಉಪಯೋಗಿಸಿಕೊಳ್ಳುತ್ತದೆ ಎಂಬುದು ಸ್ಪಷ್ಟವಾಗುತ್ತದೆ, ನಾಯಕನ ಅವ್ವ, ದೊಡ್ಡವ್ವ ವಸ್ತುತಃ ಶೋಷಿತರಾದರೂ, ಇಂಥ ವ್ಯವಸ್ಥೆಯು ರೂಪಿಸುವ ಮೌಲ್ಯಗಳನ್ನು ಮುಗ್ಧವಾಗಿ ಅಥವಾ ಅನಿವಾರ್ಯವಾಗಿ ಅವರೂ ಒಪ್ಪಿಕೊಳ್ಳುವುದರಿಂದ, ಅವನು ವ್ಯವಸ್ಥೆಯಿಂದ ಇದ್ದುದಿದ್ದಂತೆ ಸಿಡಿದೇಳಬೇಕಾದರೆ, ತನ್ನ ಅತ್ಯಂತ ಆಪ್ತರಿಂದಲೂ ದೂರ ಸರಿಯಬೇಕಾಗುತ್ತದೆ.

ಬದುಕಿನ ಮುಖ್ಯ ಚಟುವಟಿಕೆಗಳನ್ನೇ ಸ್ಥಗಿತಗೊಳಿಸುವಂಥ ರೋಗದಿಂದ ಗ್ರಸ್ತಳಾಗಿ ಅವ್ವ ನಿಧಾನವಾಗಿ ಸಾಯುತ್ತಿದ್ದರೆ, ನಾಯಕ ಅವನ ದೊಡ್ಡವ್ವ ಮತ್ತು ಅವ್ವ (ಮತ್ತು ಇಂಥವರು) ಶೋಷಣೆಯಿಂದ ಗ್ರಸ್ತರಾಗಿ ನಿಧಾನವಾಗಿ ಸಾಯುತ್ತಾ ಕೊನೆಗೆ, ಸತ್ತೇ ಜೀವನ ಮಾಡುತ್ತಿದ್ದಾರೆ, ‘ಗೆದ್ದಲು ತಿನ್ನುತ್ತಾ ನಿಂತ ಹಟ್ಟಿಯ ಥರ’ ತೋರುವ ಅವ್ವ-ಹಿಂಗಂದ್ರ ನಾವು ಬದುಕೋದು, ಎನ್ನುವುದಕ್ಕೆ ‘ಈಗ ನಾವು ಬದ್ಕಿದ್ದೀವಾ?’ ಎನ್ನುವ ನಾಯಕನ ಉತ್ತರ ಎಲ್ಲವನ್ನೂ ಹೇಳುತ್ತದೆ.

ಕಥಾವಸ್ತುವಿನ ದೃಷ್ಟಿಯಿಂದ ‘ಸಂಸ್ಕಾರ’ವನ್ನು ನೆನಪಿಗೆ ತರುವ ‘ಒಂದು ದಹನದ ಕತೆ’ಯ ಉದ್ದೇಶ, ನಂಬಿದ ಆಚಾರಗಳಿಂದ ಸಿಡಿದು ತನ್ನ ಜನರಿಂದ ದೂರವಾಗುವ ‘ವ್ಯಕ್ತಿ’ಯ ದಟ್ಟ ಚಿತ್ರಣವನ್ನು ಕೊಡುವುದಷ್ಟೇ ಆಗಿರುವಂತೆ ತೋರುತ್ತದೆ. ಈ ನೆಪದಲ್ಲಿ ಹಳ್ಳಿಗಳಲ್ಲಿ ಸಾಮಾನ್ಯವಾಗಿ ನಡೆಯುವ ‘ಪಂಚಾಯ್ತಿ’ಗಳು ಅದರಲ್ಲಿ ಪ್ರಮುಖ ಪಾತ್ರವಹಿಸುವ ವ್ಯಕ್ತಿಗಳ ಹಿತಾಸಕ್ತಿಗಳು, ಅವಕ್ಕೆ ಪೂರಕವಾದ ಮೌಲ್ಯಗಳು – ಇವುಗಳತ್ತ ಓದುಗನ ಗಮನ ಸೆಳೆಯುವುದು ಸಾಧ್ಯವಾಗುತ್ತದೆ. ನಾಯಕ ಕಮಲಿಯ ಸಂಬಂಧ ಅದರಿಂದ ಉದ್ಭವಿಸುವ ಸಮಸ್ಯೆಗಳು, ಹಣದ ಸಹಾಯದಿಂದ ಅದನ್ನು ಬಿಡಿಸಿ, ನಾಯಕನಿಗೆ ‘ಉಪಕಾರ’ ಮಾಡಬಯಸುವ ದೊಡ್ಡಪ್ಪ, ಆ ಉಪಕಾರದ ಹಿಂದಿರುವ ದೊಡ್ಡಪ್ಪನ ಹಿತ್ತಾಸಕ್ತಿ – ಅಂದರೆ ತನ್ನ ಮೊಮ್ಮಗಳನ್ನು ನಾಯಕನಿಗೆ ಕೊಟ್ಟು ಮದುವೆಮಾಡಿ ಕೈ ತೊಳೆದುಕೊಳ್ಳುವುದು – ಇದಾವುದಕ್ಕೂ ಒಪ್ಪದೆ ಬೇರೆ ಜಾತಿಯವಳಾದ ಕಮಲಿಯನ್ನೇ ಮದುವೆಯಾಗಿ ಹೊರಟು ಹೋದಾಗ ಊರವರು ನಾಯಕನ ಅಜ್ಜಿಗೆ ಬಹಿಷ್ಕಾರ ಹಾಕಿ, ಕೊನೆಗೆ ಅಜ್ಜಿ ಸತ್ತಾಗ ಶವಸಂಸ್ಕಾರಕ್ಕೆ ಯಾರೂ ಬರದೆ, ಪಂಚಾಯ್ತಿ ಮಾಡಿ ‘ಊರ ಮಾನ ತೆಗೆದ ವಿಷಯ ಹಾವನ್ನು ಸೇರಿಸಿಕೊಳ್ಳೋದು ಉಂಟಾ’ ಎಂದು ತೀರ್ಮಾನಿಸಿಬಿಡುವುದು. ಈ ‘ನ್ಯಾಯ’ದಿಂದ ರೋಸಿ ರೊಚ್ಚಿಗೆದ್ದ ನಾಯಕ ಅಜ್ಜಿಯ ಗುಡಿಸಲನ್ನೇ ಕಿತ್ತು, ಅದರ ಪರಿಕರಗಳನ್ನು ಬೆಂಕಿಗೊಡ್ಡಿ ಅಜ್ಜಿಯ ಶವವನ್ನು ಅದರೊಳಕ್ಕೊಗೆದು ತೀವ್ರವಾದ ಮಾನಸಿಕ ಹೊಡೆತಗಳನ್ನು ಎದುರಿಸುತ್ತಾ ಹೊರಟುಹೋಗುವುದು ಇವಿಷ್ಟು ಮಾಮೂಲು ಜಾಡಿನಲ್ಲೇ ಸಾಗುವ ಈ ಕತೆಯ ಸ್ಥೂಲ ವಿವರಗಳು. ಇವು ಹಳ್ಳಿಯ ಸ್ಥಳಿಯ ರಾಜಕೀಯವನ್ನೂ ಅಲ್ಲಿನ ಜೀವನದ ಒಳಮುಖಗಳನ್ನೂ ಓದುಗನಿಗೆ ಪರಿಚಯಮಾಡಿಕೊಡುತ್ತದೆ ಎನ್ನುವಷ್ಟರಮಟ್ಟಿಗೆ ಅರ್ಥಪೂರ್ಣವಾಗುತ್ತವೆ.

‘ದತ್ತ’ ಕತೆಯ ಕೇಂದ್ರ ವ್ಯಕ್ತಿ ತನ್ನವರಿಂದ, ತನ್ನ ಆಪ್ತ ಪರಿಸರದಿಂದ ಎಲ್ಲ ಅರ್ಥದಲ್ಲೂ ಬೇರೆಯಾಗಿ ನಿಂತವನು. ಕೆಲವಂಶದಲ್ಲಿ ಕೃತಕವಾಗಿರುವ ಈ ಕತೆಯಲ್ಲಿ ತುಂಬಾ ಹತ್ತಿರದ ಸಂಬಂಧಗಳನ್ನು ಕೆದಕಿ ಅದರ ಸುಪ್ತ ಮುಖಗಳ ಮೇಲೆ ಬೆಳಕು ಚೆಲ್ಲುವ ಹವಣೆಕೆ ಇದೆ. ತಂದೆಯ ಪಾಲಿಗೆ ‘ಮಗ’ ಎಂದರೆ ಇನ್ನೊಬ್ಬರಿಗೆ ದತ್ತು ಕೊಟ್ಟು ಆದಾಯಗಳಿಸಬಹುದಾದ ವಸ್ತು. ಚಿಕ್ಕಂದಿನಲ್ಲೆ ಬೇರೆಯವರಿಗೆ ದತ್ತುಕೊಡಲ್ಪಟ್ಟ ವ್ಯಕ್ತಿ ತನ್ನ ಸಾಕು ತಂದೆ-ತಾಯಿ ಸತ್ತಮೇಲೆ ‘ಊರಿಗೆ’ ಮರಳುತ್ತಾನೆ. ಅವನನ್ನು ಎದುರುಗೊಳ್ಳಲು ಅವನ ಸ್ವಂತ ತಾಯಿ, ತಂದೆ, ತಂಗಿ ಮತ್ತು ತಮ್ಮಂದಿರು ದೇವಸ್ಥಾನದ ಬಳಿ ಕಾದಿರುತ್ತಾರೆ. ಪರಸ್ಪರ ನೇರ ಭೇಟಿಯಾಗುವ ಮುಂಚೆ ವ್ಯಕ್ತಿ ತನ್ನವರ ಪ್ರತಿಬಿಂಬಗಳನ್ನು ಎಣ್ಣೆಯಲ್ಲಿ ನೋಡಬೇಕಾಗುವ ಶಾಸ್ತ್ರವನ್ನು ಇಷ್ಟವಿಲ್ಲದಿದ್ದರೂ ಆಚರಿಸಬೇಕಾಗುತ್ತದೆ.

ಬಹುಶಃ ಮಾನವೀಯ ಕಾರಣಗಳಿಂದ ಅಸ್ತಿತ್ವಕ್ಕೆ ಬಂದ ಈ ದತ್ತು ಪದ್ಧತಿ ಕ್ರಮೇಣ ಹೇಗೆ ವ್ಯವಸ್ಥೆ ಒತ್ತಡಕ್ಕೊಳಪಟ್ಟು ಆರ್ಥಿಕ ಕಾರಣಗಳಿಗಾಗಿ ಆಸ್ತಿ ಸಂಪಾದಿಸುವ ಸುಲಭ ಕ್ರಮವಾಗಿ ಏರ್ಪಟ್ಟಿದೆ ಎಂಬುದು ಗಮನಾರ್ಹ. ಆದರೆ ವ್ಯವಸ್ಥೆಯನ್ನು ಕಾರಣವನ್ನಾಗಿ ಒಡ್ಡಿ ತಾನು ಮಾಡುವ ಪ್ರತಿಯೊಂದು ಕೆಲಸವನ್ನೂ ಅನಿವಾರ್ಯವೆಂದು ಸಮರ್ಥಿಸಿಕೊಳ್ಳುತ್ತಾ ನೈತಿಕ ಹೊಣೆಯಿಂದ ತಪ್ಪಿಸಿಕೊಳ್ಳಲೆತ್ನಿಸುವ ಅಪಾಯವಂತೂ ಇದ್ದೇ ಇದೆ.

ವ್ಯಕ್ತಿಯ ಅಪ್ಪ, ಎರಡನೆಯ ಬಾರಿ ಇವನನ್ನು ಇನ್ನೊಬ್ಬ ಆಸ್ತಿವಂತನಿಗೆ ದತ್ತು ಕೊಡಲೆತ್ನಿಸುವ ಪ್ರಸಂಗ, ಅಂಥ ಪರಿಸ್ಥಿತಿಯ ಹಿಂದಿರಬೇಕಾದ ಅನಿವಾರ್ಯತೆಯನ್ನು ಪ್ರಬಲವಾಗಿ ಮನಗಾಣಿಸುವುದಿಲ್ಲವಾದ್ದರಿಂದ, ಕೃತಕವಾಗಿ ಕಾಣುತ್ತದೆ. ಮಗ ಹೊರಟುಹೋದ ಎಂದು ಗೊತ್ತಾದ ತಕ್ಷಣ, ತಾಯಿ ಓಡಿಬಂದು ಪೆಟ್ಟಿಗೆ ತೆರೆದು ‘ಹಣ ಮುಟ್ಟಿಲ್ಲ’ ಎಂದು ಸಮಾಧಾನ ಪಡುವ ಅಸಹಜ ಸಂಗತಿ ಇಂಥ ಕೃತಕತೆಯನ್ನು ಹೆಚ್ಚು ಮಾಡುತ್ತದೆ.

ಈ ಕತೆಯಲ್ಲಿ ಗಮನಿಸಬೇಕಾದ ಇನ್ನೊಂದು ಮುಖ್ಯ ಅಂಶ, ಅಣ್ಣ – ತಂಗಿಯ ರೀತಿಯ ಸಂಬಂಧ ಅದನ್ನು ದಾಟಿ ನಿಲ್ಲುವ ವ್ಯಕ್ತಿಯ ಮನಃಸ್ಥಿತಿ. ಇದನ್ನು ಲೇಖಕರು ತುಂಬಾ ಜಾಗರೂಕತೆಯಿಂದ, ಸೂಚ್ಯವಾಗಿ ಮನಗಾಣಿಸುತ್ತಾರೆ. ಚಿಕ್ಕಂದಿನಿಂದಲೂ ನೋಡದ, ಬೆಳೆದ ಹುಡುಗಿಯೊಬ್ಬಳನ್ನು ಏಕಾಏಕಿ ತಂಗಿ ಎಂದು ಪರಿಚಯ ಮಾಡಿಕೊಟ್ಟಾಗ, ಅವಳು ರಕ್ತಸಂಬಂಧದಿಂದಾಗಿ ತಂಗಿಯೇ ಆಗಿದ್ದರೂ ಈ ವ್ಯಕ್ತಿಯ ಮನಸ್ಸು ಅದನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿರುವುದಿಲ್ಲ. ಈ ಕಾರಣದಿಂದಾಗಿ, ‘ತಂಗಿ’ ಪದಕ್ಕಿರುವ ಸಾಂಪ್ರದಾಯಿಕ ಅರ್ಥವನ್ನು ಅದನ್ನು ಪದೇ ಪದೇ ಉಪಯೋಗಿಸುವ ರೀತಿಯಲ್ಲಿಯೇ ತಿರುಚುವ ಧ್ವನಿ ಅದಕ್ಕೆ ಸಿಕ್ಕಂತೆ ತೋರುತ್ತದೆ. ವ್ಯಕ್ತಿ ತನ್ನ ತಂಗಿಯನ್ನು ಗಮನಿಸುವ ರೀತಿ-

“ಹಿಂದಲ ಬಾಗಲು ತೆಗೆದು ಹಿತ್ತಲಿಗೆ ಬಂದವನಿಗೆ ಕೆಂಪುಸೀರೆ ಉಟ್ಟಿದ್ದ ತಂಗಿ ಸಸಿಗಳಿಗೆ ನೀರು ಹಾಕುತ್ತಿದ್ದವಳು ನೋಡಿ ನಕ್ಕಳು…. ನಗಲು ನೋಡಿದ……” “……….. ಬಂದು ಕೂತು ಏನು ಎನ್ನುವ ರೀತಿ…………”
-ತನಗೆ ಕೊಟ್ಟು ಮದುವೆ ಮಾಡಬೇಕೆಂದಿರುವ ಹುಡುಗಿ ನೀರು ಸೇದಲು ಬಂದಾಗ, ‘ತಂಗಿ’ ಕೀಟಲೆ ಮಾಡುತ್ತಾ ಶ್ ಶ್ ಮಾಡಿ ವ್ಯಕ್ತಿಯನ್ನು ಎರಡನೆ ಬಾರಿ ಕರೆದಾಗ, ಅವನು. ‘ನೀನು ಬಾ’ ಎಂದು ಕರೆಯುವುದು ‘ಹೆಜ್ಜೆ ಹೆಜ್ಜೆಗೂ ಹತ್ತಿರವಾದಳು’ ಎನ್ನುವ ಮಾತು ಇವೆಲ್ಲಾ, ಮೇಲಿನಂತೆ ಅನ್ನಿಸುವುದಕ್ಕೆ ಬಲ ಕೊಡುತ್ತವೆ. ಉದಾಹರಣೆಗೆ ಇದನ್ನೂ ನೋಡಬಹುದು-

“ಒಂದ್ಮಾತು ಕೇಳ್ತೀನಿ, ಏನೂ ತಿಳ್ಕೊಬೇಡ”
ಸುಮ್ಮನೆ ನೋಡಿದಳು.
“ನಾನು ನಿಂಗ ಅಣ್ಣ ಅನ್ನಿಸ್ತದ?”
“ನೀನು ನಂಗ ಅಣ್ಣಾನೆ ಅಲ್ವಾ ?”
(“ಅದ್ಸರಿ, ಅಣ್ಣ ಅಂತ ಅನ್ನಿಸ್ತದ ಅಂತ”)
ತಂಗಿ ತಡಕಾಡಿದಳು.
“ಎಂಥದಪ್ಪ, ನೀ ಕೇಳೋದೆ ಗೊತ್ತಾಗಲ್ಲ”
ಹಾಗೆ ಕುಳಿತಿದ್ದರು.
“ನಿನ್ನ ಜೊತೇಲಿ ಕುಂತ್ಕಂಡ್ರೆ ಕೆಲ್ಸ ಆಯ್ತದೆ?”
ಎದ್ದು ನಿಂತು ನಗು ಚಲ್ಲಿ ಅಂದಳು.

ಜೊತೆಗೇ ವ್ಯಕ್ತಿ ಬಿಟ್ಟು ಹೋದ ಕಾಗದದಿಂದಾಗಿ ಎಲ್ಲರೂ ಗೊಂದಲದಲ್ಲಿ ಮುಳುಗಿದ್ದರೆ ‘ತಂಗಿಗೆ ಇನ್ನೂ ನಿದ್ದೆ ತಿಳಿದಿರಲಿಲ್ಲ’ ಎಂಬ ಕೊನೆಯ ಮಾತು ಸಹ ಈ ಧ್ವನಿಯನ್ನೆ ಬೆಂಬಲಿಸುವಂತಿದೆ.
‘ಡಾಂಬರು ಬಂದುದು’ ಕತೆಯ ತಂತ್ರ ಕನ್ನಡಕ್ಕೆ ಹೊಸದು. ಬೇರೆ ಕತೆಗಳಲ್ಲಿ ಒಬ್ಬ ವ್ಯಕ್ತಿಯನ್ನು ಕೇಂದ್ರವನ್ನಾಗಿ ಇಟ್ಟುಕೊಂಡಿದ್ದರೆ, ಇಲ್ಲಿ ಒಂದು ಇಡೀ ಊರೇ ಕತೆಯ ಕೇಂದ್ರವಾಗುತ್ತದೆ. ಡಾಂಬರು ಇಡೀ ಊರೇ ಸ್ಪಂದಿಸುವಂತೆ ಮಾಡಬಲ್ಲ ಪವಾಡ ವಸ್ತುವಾಗಿ ಪರಿಣಮಿಸಿದೆ. ಅತಿ ಕಡಿಮೆ ಮಾತುಗಳಲ್ಲಿ ಊರಿನ ಚಿತ್ರ ಅದರ ಬಹುಮುಖಗಳೊಡನೆ ನಮ್ಮೆದುರಿಗೆ ನಿಲ್ಲುತ್ತದೆ. ಪಾತ್ರಗಳು ಬೇರೆ ಬೇರೆ ವರ್ಗದ ಜನರನ್ನೂ ಚೊಕ್ಕವಾಗಿ ಪ್ರತಿನಿಧಿಸುತ್ತವೆ. ದೇವರು, ಊರಿನ ಆರ್ಥಿಕ ವ್ಯವಸ್ಥೆಯಲ್ಲಿ ಒಂದು ಅಂಗವಾಗಿ ಸೇರಿಕೊಂಡು, ಹಳ್ಳಿಯ ‘ಆಧಾರಸ್ಥಂಭ’ಗಳನ್ನೇ ಮೀಟಿ, ಪ್ರಶ್ನಿಸಿ, ಅಲ್ಲಾಡಿಸುವ ಪ್ರಸಂಗಕ್ಕೆ ಕಾರಣವಾಗುವ ಅಂಶವಾಗುತ್ತದೆ.

ರಸ್ತೆ ತಯಾರಾಗುವ ವಿವಿಧ ಹಂತಗಳಲ್ಲಿ ಉಪಯೋಗಿಸಲ್ಪಡುವ ಬೇರೆ ಬೇರೆ ಯಂತ್ರಗಳು ಹಳ್ಳಿಯ ಜನರನ್ನು ಚಿಕಿತಗೊಳಿಸುವ ವಸ್ತುಗಳಾಗುತ್ತವೆ.

“ಹಿಂದಕ್ಕೂ ಮುಂದಕ್ಕೂ ಹೋಗುವ ಬರುವ ಮಿಷನ್ನು. ಸಮ ಮಾಡುವ ದಗ್ ದಗ್ ಮಿಷನ್ನು. ಬೆಂಕಿ ಉಗುಳುತ್ತ ಜಲ್ಲಿ, ಟಾರು-ಮರಳು ಒಕ್ಕೂಡಿಸುವ ಮಿಷನ್ನು. ಯಾವು ಯಾವುದಕ್ಕೂ ಮಿಷನ್ನು, ಎಷ್ಟಂತೆ ಹೇಳುವುದು. ಎಲ್ಲವೂ ಕಪ್ಪು ಕಪ್ಪಗೆಯಾಸ ತಾಳಿ ಮೇಲೇಳುತ್ತಿದೆ”. ಟಾರ್ ರಸ್ತೆ ಊರಿನ ಪಾಲಿಗೆ ಬರಿ ರಸ್ತೆಯಲ್ಲ. ಅದು ಹಳ್ಳಿಯ ಹಣೆಬರಹವನ್ನು ಬದಲಿಸುವ, ಒಂದು ಬಗೆಯ ಜಡತೆಯಲ್ಲಿ ಮೈಮರೆತಿದ್ದ ಹಳ್ಳಿಯನ್ನು ಅಲ್ಲೋಲ ಕಲ್ಲೋಲ ಮಾಡಿದ, ‘ಊರ ಮುಂದಲು ಒಂದು ರಣರಂಗ’ವೆನಿಸುವಂತೆ ಮಾಡಿದ, ಅದೇ ಊರಿನ ಜನರೇ ಹೊಸಬರೇನೋ ಎಂದು ಭ್ರಮೆ ಹುಟ್ಟಿಸುವಂತೆ ಮಾಡಿದ ಬದಲಾವಣೆಯ ಪ್ರತೀಕ.
“ಆಳೆತ್ತರದ ಕಲ್ಲು ಚಕ್ರದ ಮಿಷನ್ನುಗಳು ಹೊಗೆಬಿಟ್ಟು ಓಡಾಡುವ ಚಂದಕ್ಕೆ ಹಳ್ಳಿ ಹೈಕಳೇನು ಗಂಡಸು ಯಮ್ಮಕ್ಳು ಅನ್ನದೆ ನೋಡುತ್ತಾ ತಮ್ಮ ಮರೆಯುವುದೂ ಉಂಟು. ಅಲ್ಲಿ ಎದ್ದೇಳುವ ಸದ್ದು ಊರ ಮೀರಿ ಆಚೆಗೂ ಹೋಗುವುದು ದೂರದಿಂದ ನೋಡಿದ ಯಾವ ಮಗನಿಗೂ ಅಲ್ಲೋಲ ಕಲ್ಲೋಲ ಆಗುತ್ತಿರುವಂತೆ ಕಾಣಬೇಕು. ಹತ್ತಿರ ಬಂದರೆ ಅದೇ ಊರಿನ ಜನರು. ಅವರೇ ಮಾತಾಡಿಸಿದರೆ ಅವರೇ ಎಂದು ತಿಳಿಯಬಹುದೇ ಹೊರತು ಗುರುತು ಹತ್ತದಷ್ಟು ಅವರ ಯಾಸ ವರಸೆ ಬದಲಿಸಿ ಬಿಟ್ಟಿದೆ. ನೆಲಕ್ಕಂಟಿಕೊಂಡು ಕಪ್ಪಗಿರುವ ಟಾರಿಗಂಟಿಕೊಂಡು ಅವರು ಮೂಡಿದಂತೆ ಚಲಿಸಿದಂತೆ”.

ಪಟೇಲರು ರೋಡು ಮಾಡಿಸಲು ಕಂಟ್ರಾಕ್ಟರಾಗಿ, ಅವರು ಸರ್ಕಾರಿ ಹಣದಲ್ಲಿ ಸ್ವಲ್ಪ ಮಿಗಿಸಿ ದೇವಸ್ಥಾನವನ್ನು ಊರ್ಜಿತಗೊಳಿಸುವುದನ್ನು ವಿರೋಧಿಸುವುದರ ಮೂಲಕ ಅಲ್ಪಸ್ವಲ್ಪ ಓದಿದ ಹುಡುಗರಾದ ಲಕುಮ, ರಾಜಪ್ಪ, ಮಾದ ಮತ್ತು ಶಂಭು. ಈ ಕಾರಣಕ್ಕಾಗಿ ಪಂಚಾಯ್ತಿ ನಡೆಸಲು ಸೇರುವ ಉಳಿದವರು, ರಸ್ತೆಯ ಕೆಲಸದಲ್ಲಿ ಪಾಲ್ಗೊಳ್ಳುವ ಅತಿಕಡಿಮೆ ವರಮಾನದ ಜನರು- ಹೀಗೆ ಊರಿನ ಜನರಲ್ಲಿಯೂ ಒಂದಲ್ಲ ಒಂದು ರೀತಿಯಲ್ಲಿ ಈ ಬದಲಾವಣೆಯಲ್ಲಿ ಪಾಲ್ಗೊಳ್ಳುತ್ತಾರೆ.

ಇಷ್ಟೆಲ್ಲಾ ಬದಲಾವಣೆಗೆ ಅವಕಾಶವಿರುವಾಗ, ಮತ್ತು ಅದೇ ಹಳ್ಳಿಯ ಜನರನ್ನೇ ರಸ್ತೆಯ ಕೆಲಸಕ್ಕೆ ನೇಮಿಸಿಕೊಂಡಿದ್ದರಿಂದ ‘ತಿಂಗಳಾನುಗಟ್ಟಲೆ ಯಾರೂ ಕೆಲ್ಸಕ್ಕೆ ಕೈ ಬಾಯಿ ನೋಡುವಂತಿಲ್ಲ’ವಾಗಿರುವುದರಿಂದ ಈ ಜನರ ಆರ್ಥಿಕ ಸ್ಥಿತಿಗತಿ, ಸಂಬಂಧಗಳು ಮತ್ತು ಆ ಮೂಲಕ ಹಳ್ಳಿಯ ಆರ್ಥಿಕ ವ್ಯವಸ್ಥೆಯಲ್ಲೇ ಸಾಕಷ್ಟು ಬದಲಾವಣೆ ಆಗಿರಬೇಕೆಂದು ನಂಬುವುದು ಸಾಧ್ಯ. ಈ ದೃಷ್ಟಿಯಿಂದ ಜನರ ಜೀವನವನ್ನು ಚಿತ್ರಿಸಿದ್ದರೆ ಕತೆಗೆ ಹೊಸ ಆಯಾಮ ಸಿಗುವ ಸಂಭವವಿತ್ತು ಅನಿಸುತ್ತದೆ. ಹಳ್ಳಿಯ ಜನಜೀವನವನ್ನು ಸೂಕ್ಷ್ಮವಾಗಿ ನೋಡಿದ ಮೇಲೂ ಲೇಖಕರು ಕೊಡುವ ಚಿತ್ರಗಳು ನಮಗೆ ಊರಿನ ಬರಿ ಮೇಲ್ಪದರದ ಮುಖಗಳನ್ನಷ್ಟೇ ಪರಿಚಯ ಮಾಡಿಕೊಡುವಲ್ಲಿ ಮುಗಿದು ಬಿಡುತ್ತವೆ. ಇವೆಲ್ಲಕ್ಕೂ ಮೂಲಾಧಾರವಾದ ಆರ್ಥಿಕ ಸಂಬಂಧಗಳತ್ತ ಗಮನಹರಿಸುವುದಕ್ಕೆ ಬಹುಶಃ ಲೇಖಕರು ಈ ಬಗೆಯ ಆಲೋಚನೆಗೆ ತಮ್ಮನ್ನು ಒಡ್ಡಿಕೊಳ್ಳದಿರುವುದು ಕಾರಣವಾಗಿರಬಹುದು.

ಪಟೇಲರು ಸರ್ಕಾರಿ ದುಡ್ಡಿನಲ್ಲಿ ಮಿಗಿಸಿ ದೇವಸ್ಥಾನವನ್ನು ಊರ್ಜಿತಗೊಳಿಸುವುದರಲ್ಲಿ ಊರವರಿಗೆ ತಪ್ಪೇನು ಕಾಣುವುದಿಲ್ಲ. ಅಲ್ಪಸ್ವಲ್ಪ ವಿದ್ಯಾಭ್ಯಾಸ ಪಡೆದ ರಾಜಪ್ಪ ಮತ್ತಿತರರಿಗೆ ಇದು ಹಣದ ದುರುಪಯೋಗವಾಗಿ ಕಾಣಿಸುತ್ತದೆ, ‘ಓದುಗರ ಓಲೆಯಲ್ಲಿ’ ಈ ಬಗ್ಗೆ ಪತ್ರ ಪ್ರಕಟವಾಗಿ ಇವರು ಊರ ಮಾನವನ್ನು ತೆಗೆದರು ಎಂಬ ವಿವಾದವನ್ನು ಬಗೆಹರಿಸಲು ಪಂಚಾಯ್ತಿ ಸೇರುತ್ತದೆ. ‘ಹಣದ ದುರುಪಯೋಗ’ ಸ್ವಂತಕ್ಕಾಗಿ ಅಲ್ಲವಲ್ಲ ಎಂಬುದು ಪಟೇಲರ ವಾದ. ‘ಯಾಕಾರು ಮಾಡಿ ಸ್ವಾಮಿ ಅದ್ರ ಮಾಡೋ ಅಂಥದಕ್ಕೆ ಮಾಡ್ನಿಲ್ಲ’ ಎನ್ನುವುದು ರಾಜಪ್ಪ ಮತ್ತಿತರರ ಆಕ್ಷೇಪ. ಇದು ಬರಿ ನೈತಿಕ ನಿಲುವಿಗೆ ಸಂಬಂಧಿಸಿದ ಪ್ರಶ್ನೆ ಎನ್ನುವುದನ್ನು ಗಮನಿಸಬೇಕು. ಇದು ಅಷ್ಟಕ್ಕೇ ನಿಲ್ಲದೆ ಆರ್ಥಿಕ ಸಂಬಂಧಗಳತ್ತ ಕೆದಕಿ ನೋಡಿದ್ದರೆ ಮಾತ್ರ, ಊರಿಗೆ ರೋಡು ಮಾಡಿಸಲು ಕಂಟ್ರಾಕ್ಟರಾಗಲು ಪಟೇಲರಂಥವರಿಗೆ ಮಾತ್ರ ಏಕೆ ಸಾಧ್ಯ ಮತ್ತು ಈ ಕೆಲಸದಿಂದ ತಮಗೆ ಲಾಭ ಮಾಡಿಕೊಳ್ಳುವ ಯತ್ನದಲ್ಲೇ ಊರಿಗೆ ‘ಒಳ್ಳೆಯ’ದನ್ನೂ ಮಾಡಬಯಸುವ ಅವರು ದೇವಸ್ಥಾನವನ್ನು ಊರ್ಜಿತಗೊಳಿಸಲು ಸರ್ಕಾರಿ ಹಣದಲ್ಲಿ ಮಿಗಿಸಿದರೆ ತಪ್ಪೇನೂ ಅಲ್ಲವೆಂದು ಯಾಕೆ ನಂಬುತ್ತಾರೆ ಎಂಬುದು ಸ್ಪಷ್ಟವಾಗುತ್ತಿತ್ತು. ಒಪ್ಪಿಕೊಂಡ ವ್ಯವಸ್ಥೆಯನ್ನು ‘ದೇವರು’ ಬಲಪಡಿಸಿ ಕಾಯ್ದುಕೊಂಡು ಬರಲು ಸಹಾಯಕನಾಗುವಾಗ ‘ದೇವರ ಕೆಲಸ’ ಅಂದರೆ ದೇವಸ್ಥಾನದ ಕೆಲಸ ‘ಒಳ್ಳೆಯಾ’ ಕೆಲಸವಾಗುತ್ತದೆ. ಈ ಒಳ್ಳೆಯ ಕೆಲಸಕ್ಕೆ ಅಕ್ರಮವಾಗಿ ಹಣವನ್ನು ಹೊಂದಿಸುವುದು ತಪ್ಪಲ್ಲವೆಂದು ಅಂಥ ವ್ಯವಸ್ಥೆಯ ಹಿನ್ನೆಲೆಯಲ್ಲಿ ಮೈದಾಳುವ ಮೌಲ್ಯಗಳು ಸ್ಪಷ್ಟಪಡಿಸುತ್ತವೆ. (ಅದಷ್ಟು ಬೇಗ ಮಗಳ ಮದುವೆಯನ್ನು ಮಾಡಬೇಕೆಂಬುದು ಒಂದು ಮೌಲ್ಯವಾಗಿರುವ ಸಮಾಜದಲ್ಲಿ ‘ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು’ ಎಂಬಂಥ ಮಾತುಗಳು ಹೇಗೆ ವ್ಯಕ್ತಿಮಟ್ಟದ ನೈತಿಕ ಎಲ್ಲೆಯನ್ನು ದಾಟಿರುತ್ತದೆ ಎಂಬುದನ್ನು ಇಲ್ಲಿ ಗಮನಿಸಬಹುದು) ಹೀಗಿರುವಾಗ ತಿಳಿದೋ, ತಿಳಿಯದೆಯೋ ಒಪ್ಪಿಕೊಂಡ ಒಂದು ವ್ಯವಸ್ಥೆಯ ಒಳಗೆ ಬದುಕುವ ಜನ ‘ಹೀಗೆ ಮಾಡಿದರೆ ಏನು ತಪ್ಪು’ ಎಂದು ಪ್ರಶ್ನಿಸಿದರೆ ಬಹುಶಃ ರಾಜಪ್ಪ ಮತ್ತು ಅಂಥವರ ಬಳಿ ಉತ್ತರವಿರುವುದಿಲ್ಲ. ಈ ಅಂಶವನ್ನು ಮನಗಾಣದಿರುವುದರಿಂದ ದೇವನೂರರ ಕತೆಗಳ ಕೇಂದ್ರ ವ್ಯಕ್ತಿಗಳು ಬರಿ ಶೋಷಣೆಯ ವಿರುದ್ಧ ಸೊಲ್ಲೆತ್ತುತ್ತಾರೆಯೇ ಹೊರತು ಇದಕ್ಕೆ ಸಂಬಂಧಿಸಿದಂತೆ ಯಾವುದೇ ಕ್ರಿಯಾತ್ಮಕ ಧೋರಣೆಯನ್ನು ತಳೆಯಲು ಸಾಧ್ಯವಾಗುವುದಿಲ್ಲ.

ಹೀಗೆ ಸ್ಪಷ್ಟ ಉತ್ತರ ಸಿಗದಿದ್ದಾಗ ‘ಅವರವ್ರು ಹೇಳಿದ್ದು ಅವರ ಮೂಗಿನ ನೇರಕ್ಕೆ ಸರಿ’ ಎಂಬ ಎಲ್ಲಿಗೂ ಕೊಂಡೊಯ್ಯದ ತೀರ್ಮಾನಕ್ಕೆ ಎಡೆಕೊಟ್ಟು ಗೊಂದಲ ಹೊಡೆದಾಟದಲ್ಲಿ ಪಂಚಾಯ್ತಿ ಪರ್ಯವಸಾನವಾಗುತ್ತದೆ. ಕರಗಿಸಿಟ್ಟಿದ್ದ ಟಾರು ಗುಂಡಿಗೆ ಸುರಿಯಲ್ಪಟ್ಟಿರುತ್ತದೆ. ಅದರಲ್ಲಿ ಸಿಕ್ಕಿಹಾಕಿಕೊಳ್ಳುವ ಯಾವುದೋ ಬೆಪ್ಪು ಹೈದ ಕೊನೆಯಲ್ಲಿ ಬರುವ ಪೊಲೀಸರ ಮಹಜರಿಗೆ ವಸ್ತುವಾಗುತ್ತಾನೆ.
ಈ ಕತೆಯಲ್ಲೇ ಸಿಗುವ ‘ಹಳ್ಳಿಯ ಕೋರ್ಟ’ನ್ನು ಪರಿಚಯ ಮಾಡಿಸುವ ಹೊಸೂರಿನ ಪ್ರಸಂಗ, ತನ್ನಷ್ಟಕ್ಕೆ ಕುತೂಹಲ ಕೆರಳಿಸುವ ಅಂಶವಾಗಿದೆಯಾದರೂ ಕತೆಯ ಒಟ್ಟು ಪರಿಣಾಮಕ್ಕೆ ಏನನ್ನೂ ಕೊಡುವುದಿಲ್ಲ.
‘ಮೂಡಲ ಸೀಮೇಲಿ ಕೊಲೆ ಗಿಲೆ ಮುಂತಾಗಿ’ ಈ ಸಂಕಲನದ ಅತ್ಯುತ್ತಮ ಕತೆ ಅನಿಸುತ್ತದೆ. ಗೌಡರು ರಂಗಪ್ಪನ ಸಂಬಂಧÀ ಇಂದಿಗೂ ನಮ್ಮ ಹಳ್ಳಿಗಳಲ್ಲಿ ಕಾಣಬಹುದಾದ ದಣಿ-ಆಳು ಸಂಬಂಧ ಚೌಕಟ್ಟಿನಲ್ಲಿ ಬರುತ್ತದೆ. ರಂಗಪ್ಪನ ದುಡಿತದಿಂದಾಗಿ ಗೌಡರ ಹಟ್ಟಿ ನಿಂತಿದೆ ಎಂದು ಕೆಲವರೆಂದರೆ, ‘ಗೌಡರು ಕಣ್ಣು ಬಿಟ್ಟರೆ ತನ್ನ ಹೊಟ್ಟೆ ಒಳಗೆ ಆಡುತ್ತೆ’ ಅಂತ ರಂಗಪ್ಪ ನಂಬಿದ್ದಾನೆ. ಮಳೆಯನ್ನೇ ನಂಬಿ ಕುಳಿತ ವ್ಯವಸಾಯವನ್ನಿಟ್ಟುಕೊಂಡಿರುವ ಗೌಡರ ಬಳಿ ಕೆಲಸ ಮಾಡುವ ರಂಗಪ್ಪ, ಮಳೆ ಕೈಕೊಟ್ಟಾಗ ಉಪವಾಸ ಬೀಳಲೇಬೇಕಾಗುತ್ತದೆ. ದುಡಿಯುವವನು ರಂಗಪ್ಪನಾದರೂ, ದುಡಿಮೆಯ ಫಲವನ್ನು ಸಂಗ್ರಹಿಸಿಟ್ಟುಕೊಂಡು ರಂಗಪ್ಪನ ಮೇಲೆ ಒಡೆತನ ಸ್ಥಾಪಿಸುವವರು ಗೌಡರು, ಹೀಗೆ ದುಡಿಯುವವರನ್ನೇ ಅಡಿಪಾಯವನ್ನಾಗಿಟ್ಟುಕೊಂಡು ನಿಂತ ಸಮಾಜದ ಇತರ ‘ದುಡಿಯದ’ ವ್ಯಕ್ತಿಗಳು ಶಾಸ್ತ್ರಿ ಮೇಷ್ಟ್ರ ಹರಿಜನರೇ ಆದ ಹೊಸ ಮೇಷ್ಟ್ರು, ಗೌಡರ ಹಟ್ಟಿಯ ಒಂದು ಭಾಗದಲ್ಲೇ ವಾಸಮಾಡುವ ಊರಿನ ಪಡ್ಡೆ ಹೆಣ್ಣು ಮಕ್ಕಳಿಗೆ ಮಾಡೆಲ್ ಆಗಿರುವ ನರ್ಸಮ್ಮ, ನರ್ಸಮ್ಮನ ಲಕ್ಕಿನ ವಿಚಾರವಾಗಿ ಮಾತನಾಡುತ್ತಾ ಕಾಲ ಕಳೆಯುವ ಶಿವರಾಮು ಮತ್ತು ಸ್ನೇಹಿತರು, ಗೌಡರು ಮತ್ತು ಗೌಡರ ಹೆಂಡತಿ ಇವರೆಲ್ಲರೂ ಸುಖವಾಗಿರಲು, ಹೊಟ್ಟೆತುಂಬ ಉಣ್ಣಲು ಅವಕಾಶವಿದೆ. ಮೂಲಭೂತವಾಗಿ ಯಾವುದೇ ರೀತಿಯ ಉತ್ಪನ್ನಕ್ಕೆ ಇವರು ಕಾರಣವಲ್ಲವಾದರೂ, ರಂಗಪ್ಪನಿಗಿಲ್ಲದ ರಕ್ಷಣೆ ಇವರಿಗೆ ಸಮಾಜದಿಂದ ದೊರಕಿದೆ.

ಒಬ್ಬನ ಜೀವಿತದ ಅವಧಿಯನ್ನು ಇನ್ನೊಬ್ಬ ಯಾವುದೇ ಉಪಾಯದಿಂದ ಇದ್ದಕ್ಕಿದ್ದಂತೆ ಮೊಟಕು ಮಾಡುವುದು ಕಾನೂನಿನ ದೃಷ್ಠಿಯಿಂದ ‘ಕೊಲೆ’ಯಾಗುತ್ತದೆ. ರಂಗಪ್ಪನಂಥವರ ಜೀವಿತದ ಅವಧಿ, ಶೋಷಣೆಯಿಂದಾಗಿ ನಿಧಾನವಾಗಿ ಮೊಟಕಾಗುತ್ತಾ ಹೋಗುತ್ತದೆ. ಈ ಅರ್ಥದಲ್ಲಿ ರಂಗಪ್ಪನಂಥವರು ಶೋಷಣೆಗೆ ಅವಕಾಶ ಮಾಡಿಕೊಡುವ ಸಮಾಜದಲ್ಲಿ ದಿನವೂ ‘ಕೊಲೆ’ಯಾಗುತ್ತಿರುತ್ತಾರೆ. ಇಲ್ಲಿ ಕೊಲೆ ಮಾಡುವವರು ನೇರವಾಗಿ ಯಾವುದೇ ವ್ಯಕ್ತಿ ಅಥವಾ ವ್ಯಕ್ತಿಗಳಲ್ಲ. ಎಲ್ಲ ರೀತಿಯ ಮುಖ್ಯವಾಗಿ ಆರ್ಥಿಕ ಅಸಮಾನತೆಗೆ, ಶೋಷಣೆಗೆ ಅವಕಾಶ ಮಾಡಿಕೊಡುವ, ಅದನ್ನು ಭದ್ರಪಡಿಸುವ ಮೌಲ್ಯಗಳನ್ನು ಜಾಗರೂಕತೆಯಿಂದ ಪೋಷಿಸುವ ಸಾಮಾಜಿಕ ವ್ಯವಸ್ಥೆಯೇ ಕೊಲೆಗಾರ, ಇಂಥ ವ್ಯವಸ್ಥೆಯೇ ರೂಪಿಸುವ ಕಾನೂನು ಇಂಥ ಕೊಲೆಯನ್ನು ಕೊಲೆ ಎಂದು ಪರಿಗಣಿಸುವುದಿಲ್ಲ ಎಂಬುದು ಗೊತ್ತಿರುವ ಸಂಗತಿಯೇ. ಈ ವ್ಯವಸ್ಥೆಯಲ್ಲಿ ಉಳಿದವರೆಲ್ಲರೂ ಭಾಗಿಗಳಾದ್ದರಿಂದ ಇಂತ ಕೊಲೆಗೆ ಪರೋಕ್ಷವಾಗಿಯಾದರೂ ಇವರು ಹೊಣೆಗಾರರಾಗಲೇ ಬೇಕಾಗುತ್ತದೆ. ಇದು ಪ್ರಸ್ತುತ ಕತೆಯಿಂದ ಕಣ್ಣು ಕುಕ್ಕುವಷ್ಟು ಸ್ಪಷ್ಟವಾಗುವ ಕಟು ಸತ್ಯ.
ಕೆಲವು ದಿನಗಳಿಂದಲೂ ಊಟವಿಲ್ಲದೆ ನಿತ್ರಾಣನಾದ ರಂಗಪ್ಪ, ಬೀಡಿಯನ್ನಾದರೂ ಸೇದೋಣವೆಂದು ಜೇಬನ್ನೆಲ್ಲಾ ತಡಕಾಡಿದರೂ ಬೀಡಿ ಸಿಗುವುದಿಲ್ಲ. ಹೆಂಡತಿ ಬೀಡಿ ಹತ್ತಿಸಲೆಂದು ತಂದ ಕೆಂಡವನ್ನು ಹಾಗೇ ವಾಪ್ಸು ಕಳಿಸುತ್ತಾನೆ. ಕತ್ತಲು ತುಂಬಿದ ಜೋಪಡಿಯಲ್ಲಿ ಅವನ ವಾಸ. ಹುಲ್ಲು ತಂದು ಚಾವಣಿಗೆ ಹಾಕಿ ಸೋರದಂತೆ ಮಾಡಲು ಹೆಂಡತಿ ಪದೇ ಪದೇ ಹೇಳಿದರೂ ರಂಗಪ್ಪ ಸುಮ್ಮನಿದ್ದಾನೆ, ಏಳು ವರ್ಷದ ಮಗು ಚಡ್ಡಿ ಬೇಕೆಂದು ಚಂಡಿ ಹಿಡಿದು ಹಾಗೇ ಮಲಗಿದೆ. ಹಿಂದೆ ಮತ್ತೆ ಕೇಳಬೇಡವೆಂದು ಹೇಳಿದ್ದರೂ ರಂಗಪ್ಪ ಏನಾದರೂ ಕೇಳಿ ತರಲು ಮತ್ತೆ ಗೌಡರ ಹಟ್ಟಿ ಕಡೆ ಹೊರಡುತ್ತಾನೆ.

ದಾರಿಯಲ್ಲಿ ಮೇಷ್ಟ್ರು ಮನೆ ಮುಂದಿನ ಲೈಟ್ ಕಂಬ ನಿಲ್ಲಿಸಲು ಊರೊಟ್ಟಿನ ಕೆಲಸವೆಂದು ಕೈಲಾಗದಿದ್ದರೂ ಕೈಹಾಕುವುದು – ತುಂಬಾ ಸುಸ್ತಾಗಿ ಶಾಸ್ತ್ರಿ ಮೇಷ್ಟ್ರರ ಮಗಳು ಶಾರದೆಯಿಂದ ಬೊಗಸೆಗೆ ನೀರು ಹಾಕಿಸಿಕೊಂಡು ಕುಡಿಯುವುದು, ಗೌಡರ ಹಟ್ಟಿ ಬಂದರೆ, ನರ್ಸಮ್ಮನ ಟ್ರಾನ್ಸ್‍ಫರನ್ನು ರದ್ದು ಪಡಿಸಲು ಹೋದ ಗೌಡರು ಇನ್ನೂ ಹಿಂತಿರುಗಿಲ್ಲವೆಂದು ಗೊತ್ತಾಗುವುದು – ಗೌಡರ ಹೆಂಡತಿ (ಆಳು ಕಂಡದ್ದರಿಂದ ಜ್ಞಾಪಕಕ್ಕೆ ಬಂದ) ಸೌದೆ ಒಡೆಯುವ ಕೆಲಸಕ್ಕೆ ಹಚ್ಚುವುದು- ರಂಗಪ್ಪ ಇಲ್ಲದ ಶಕ್ತಿಯನ್ನು ಬರಿಸಿಕೊಂಡು ಸೌದೆ ಒಡೆಯುತ್ತಾ ಕುಸಿದು ಕುಳಿತು, ಮಾತು ಹೊರಡುವುದೇ ಕಷ್ಟವಾಗಿ ಮೆಲ್ಲಗೆ ಎದ್ದು ತನ್ನ ಜೋಪರಿಯ ಕಡೆ ಹೆಜ್ಜೆ ಕಿತ್ತಿಡುವುದು- ಎಲ್ಲಕ್ಕಿಂತ ಮುಖ್ಯವಾಗಿ ನರ್ಸಮ್ಮನ ಜೊತೆ ಬಳೆ ಶಬ್ದ ಮಾಡುತ್ತಾ ಮಾತಿನಲ್ಲಿ ಮುಳುಗಿದ್ದ ಗೌಡರ ಹೆಂಡತಿ ಗಾಬರಿಯಾಗಿ ಎದ್ದು ‘ಅಯ್ಯೋ ಸಿವ್ನೆ ಸೌದೇನೇ ಇಲ್ದೆ ಇವತ್ತು ಏನಪ್ಪ ಮಾಡದು ದನ ತಿನ್ನೋ ಜೋಳದ ಕಡ್ಡೀನೆ ಗತಿಯಾತಲ್ಲ’ ಎಂದು ಪರಿತಾಪ ಪಡುವುದು- ಇವಿಷ್ಟು ಕತೆಯ ಸ್ಥೂಲ ಅಂಶಗಳು.

ಹಳ್ಳಿಯ ಬಗ್ಗೆ ನರ್ಸಮ್ಮನ ಮಾತುಗಳ ಮೂಲಕ ಹಳ್ಳಿಯ ಜೀವನದ ನಿಜವಾದ ಮುಖವನ್ನು ತಿಳಿಯದೆ ಸುಂದರವಾದ ಮಾತನಾಡುವ ಜನರನ್ನು ಶಿವರಾಮು ಮತ್ತು ಸ್ನೇಹಿತರ ಮಾತುಗಳು, ಸಿಳ್ಳನ ಮೂಲಕ ಯಾವುದೇ ಬಗೆಯ ಶೋಷಣೆಯ ಅರಿವಿಲ್ಲದೆ ಸಂತೋಷವಾಗಿ ಕಾಲ ಕಳೆಯುವ ‘ಹಾಸ್ಟೆಲ್ ಹುಡುಗರು’ ಮತ್ತು ಅಂಥವರನ್ನು, ಶಾಸ್ತ್ರಿ ಮೇಷ್ಟ್ರ ಮಾತುಗಳ ಮೂಲಕ ಶೋಷಿತರ ಬಗ್ಗೆ ದೂರದಿಂದಲೇ ಅನುಕಂಪ ತೋರಿಸಿ ತೃಪ್ತರಾಗಿ ಆರಾಮ ಜೀವನಕ್ಕೆ ದಾರಿ ಹುಡುಕಿಕೊಳ್ಳುವ ‘ನವ ಬ್ರಾಹ್ಮಣ’ರನ್ನು ಯಾವುದೇ ಶಬ್ದಾಡಂಬರವಿಲ್ಲದೆ ಧ್ವನಿಯ ಮೂಲಕವೇ ಚಿತ್ರಿಸಲಾಗಿದೆ. ಊರಿನ ಕೆಲಸಕ್ಕಾಗಿ ಸದಾ ಧಾವಂತದಿಂದ ಓಡಾಡುವ ಗೌಡರು, ಅವರ ಠೀವಿ, ಪೂರ್ವಿಕರ ಬಗೆಗಿನ ಅದ್ಭುತ ಕತೆಗಳನ್ನು ಸುತ್ತಿಕೊಂಡು ಬೆಳೆಯುತ್ತಾ ಭವ್ಯವಾಗಿ ನಿಂತ ಅವರ ಹಟ್ಟಿ, ಇವು ಹಳ್ಳಿಗಳಲ್ಲಿ ಇನ್ನೂ ಅಸ್ತಿತ್ವದಲ್ಲಿರುವ ಪಾಳೆಗಾರೀಶಾಹಿಯ ರೀತಿಯನ್ನು ನಮ್ಮ ಕಣ್ಮುಂದೆ ತಂದು ನಿಲ್ಲಿಸುತ್ತವೆ.

ಹೊಗೆ ಆಡಿಸ್ತಾ ಇರೋ ಉರಿಯೋ ಸಿಗರೇಟು ಹಿಡಿದು, ತಲೆ ಬಾಚಿಕೊಂಡು ‘ಕೆಳಕು ಮೇಕು ಬಿಳೀ ಬಟ್ಟೇನೇ ಹಾಕ್ಕೊಂಡು ಒಂಥರಾ ಹೊಳಪು ಹೊಡಿಯೋ’ ಹೊಸ ಮೇಷ್ಟ್ರು ರಂಗಪ್ಪನ ಜಾತಿಯವರೇ ಆದರೂ ‘ದೊಡ್ಡ ಮೇಷ್ಟ್ರ ಹಟ್ಟೀಲಿ ಗಳಾಸ್ಲೆ ನೀರು ಕುಡೀತಾರೆ- ಅವರ ಜಗಲಿ ಮೇಕೂ ಹೊಯ್ತಾರೆ’ ಎನ್ನುವ ಸಂಗತಿ ರಂಗಪ್ಪನ ಚಿಕ್ಕ ಮಗು ರಾಜನ ಬಾಯಿಂದ ಆಶ್ಚರ್ಯದ ಮಾತಾಗಿ ಹೊರಡಿಸುವುದು ಆ ವಯಸ್ಸಿನ ಮಗುವಿಗೆ ಭಾರವಾಗುತ್ತದೆ ಎನ್ನುವ ಕಾರಣದಿಂದ ಕೃತಕವೆನಿಸುತ್ತದೆ.

‘ಅಮಾಸ’ ಮೊದಲೇ ಹೇಳಿದಂತೆ ಸದ್ದಿಲ್ಲದೆ ನಡೆಯುವ ಶೋಷಣೆಯನ್ನು ವಸ್ತುವನ್ನಾಗಿ ಪಡೆದ ಒಂದು ಗದ್ಯ ಕಾವ್ಯ. ಅಮಾಸ ಮತ್ತು ಕುರಿಯಯ್ಯ ಬದುಕುವಂಥ ಸಮಾಜದಲ್ಲಿ ಗೌಡರು ಮತ್ತು ದೊಡ್ಡ ಗೌಡರಂಥ ಶೋಷಕರೇ ಹೇಗೆ ಮೇಲುಗೈ ಪಡೆಯುತ್ತಾರೆ ಎನ್ನುವುದಕ್ಕಿಂತ, ಶೋಷಿತರಿಗೆ ತಾವು ಶೋಷಣೆಗೊಳಗಾಗಿದ್ದೇವೆಂಬ ಅರಿವೇ ಇಲ್ಲದಿರುವುದೇ ದೊಡ್ಡ ದುರಂತವಾಗುತ್ತದೆ ಎಂಬುದು ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶ.

ಅಮಾಸ ಒಬ್ಬ ತಬ್ಬಲಿ ಹುಡುಗ. ಅವನನ್ನು ಸಾಕಿದ ಕುರಿಯಯ್ಯನೂ ದಿಕ್ಕು ದೆಸೆಯಿಲ್ಲದ ಒಬ್ಬ ಮನುಷ್ಯ. ಅಮಾಸನಿಗೆ ಹೇಗೋ ಕುರಿಯಯ್ಯನಿಗೂ ಅವನದೇ ಆದ ಹೆಸರಿಲ್ಲ. ಕುರಿಯಯ್ಯನು ತನ್ನ ಪ್ರಾಯದಲ್ಲಿ ಹುಲಿವೇಷ ಹಾಕಿ ಕುಣಿದದ್ದನ್ನು ಮೆಚ್ಚಿಕೊಂಡ ದೊಡ್ಡ ಗೌಡರು ಅಂಗಿ ಬಟ್ಟೆ ಇನಾಮು ಕೊಡುತ್ತ “ನೀ ಇರೋಷ್ಟು ಕಾಲ ನಮ್ಮ ಹಟ್ಟೀಲೆ ಇರು. ನೀನು ಉಂಡ ಊಟ ಹಾಕ್ಕೊಂಡ ಬಟ್ಟೆ. ಒಂದಿಷ್ಟು ಕುರಿ ನೋಡ್ಕೊ ಅಷ್ಟೇನೆ’ ಎಂದು ನಯವಾಗಿ ಅವನನ್ನು ಕುರಿ ಕಾಯಲು ನೇಮಿಸಿಕೊಳ್ಳುತ್ತಾರೆ, ಕುರಿಯಯ್ಯ ಮುದುಕನಾದಾಗ ಅವನಿಗೆ ಆಶ್ರಯ ಕೊಡುವುದು ಮಾರಿಗುಡಿ. ಅವನ ‘ಕಣ್ಣು ಮಟಾರ’ದಲ್ಲಿ ಬೆಳೆದ ಹುಡುಗ ಅಮಾಸ ‘ಮರಿ ಹುಲಿ’ಯಾಗಿ ಕುಣಿದಾಗ ಗೌಡರ ಕಣ್ಣು ಅವನ ಮೇಲೆ ಬೀಳುತ್ತದೆ. ಅಂದರೆ ದೊಡ್ಡ ಗೌಡರ ಕಣ್ಣಿಗೆ ಬಿದ್ದ ಹುಲಿ ಕುರಿಯಯ್ಯನ ಜೀವಿತದ ಬಹುಭಾಗವೆಲ್ಲಾ ಅವರ ಕುರಿ ಕಾಯುವುದರಲ್ಲಿಯೇ ಸವೆದುಹೋಗುತ್ತದೆ. ಅವನು ಸಾಕಿ ಬೆಳೆಸಿದ ಮರಿಹುಲಿ ಅಮಾಸ ಗೌಡರ ಕಣ್ಣಿಗೆ ಬಿದ್ದಾಗ ಕುರಿಯಯ್ಯನಿಗಾದ ಗತಿ ಅಮಾಸನಲ್ಲೂ ಮರುಕಳಿಸುವ ಸೂಚನೆ ಕಾಣುತ್ತದೆ. ದೊಡ್ಡ ಗೌಡರು ಮತ್ತು ಗೌಡರು ನಮ್ಮ ಸಮಾಜದ ಪಾಳೇಗಾರಶಾಹೀ ಶೋಷಕರನ್ನು ಪ್ರತಿನಿಧಿಸುವಂತೆ, ತಾವು ಶೋಷಣೆಗೊಳಗಾಗಿದ್ದೇವೆಂಬ ಅರಿವೂ ಇಲ್ಲದೆ ನಿರಂತರ ಶೋಷಣೆಗೊಳಗಾಗಿ ಕತ್ತಲಿನಲ್ಲೇ ಅನಾಮಧೇಯರಾಗೇ ಮರೆಯಾಗುವ ಜನರನ್ನು ಕುರಿಯಯ್ಯ ಮತ್ತು ಅಮಾಸ ಪ್ರತಿನಿಧಿಸುತ್ತಾರೆ.

ಕುರಿಯಯ್ಯ ಮಾರಿಗುಡಿಯ ಬಳಿ ಸ್ವತಃ ಬೆಳೆಸಿದ ತೆಂಗಿನಮರ ಫಲ ಕೊಡಲು ಶುರು ಮಾಡಿದಾಗ ತುಂಬ ಸುಲಭವಾಗಿ ಗೌಡರ ಮನೆಗೆಂದು ಕಾಯಿ ಉದುರಿಸಿಕೊಂಡು ಹೋಗುವುದು. ಕೊಬ್ಬಿದ ಆಡುಗಳನ್ನು ಬಲಿ ಕೊಡುವ ಪ್ರಸಂಗ, ಬಲಿಕೊಟ್ಟ ಆಡಿನ ಕೊರಳಲ್ಲಿದ್ದ ರಕ್ತ ಸೋರುತ್ತಿದ್ದ ಹೊಸರವನ್ನು ಹುಡುಗನೊಬ್ಬ ತಂದು ಅಮಾಸನ ಕೊರಳಿಗೆ ಹಾಕಿ ಕುಣಿ ಎನ್ನುವ ಸಂಗತಿ- ಇವು ಬರಿ ಸೂಚನೆಗಳ ಮೂಲಕವೇ ಶೋಷಣೆಯ ಕಾರ್ಯವನ್ನು ಮತ್ತು ಅಮಾಸನಂಥವರನ್ನು ಅದರಲ್ಲಿ ಬಲಿ ಪಶುಗಳನ್ನಾಗಿ ಮಾಡಿಕೊಳ್ಳುವ ಪ್ರಯತ್ನವನ್ನು ಶಕ್ತಿಯುತವಾಗಿ ಧ್ವನಿಸುತ್ತವೆ.

ಕುಡಿದು ಓವರಾಗಿ, ಲೈಟ್ ಕಂಬವನ್ನು, ರಾಜಕಾರಣಿಯನ್ನೋ, ಕಂಟ್ರಾಕ್ಟರನ್ನೋ, ರೈಲ್ವೆ ಬಾಸನ್ನೋ, ಆಣೆ ಬಡ್ಡಿ ಸಾಲ ಕೊಡೊ ಮಾದಪ್ಪನನ್ನೊ ನೆಪಮಾಡಿಕೊಂಡು ಬಯ್ಯುವ ಗ್ಯಾಂಗ್‍ಮನ್ ಸಿದ್ದಪ್ಪ, ಇಂಥ ಶೋಷಣೆಯನ್ನು ವಿರೋಧಿಸುವ ಧ್ವನಿಯ, ಸಾಧ್ಯತೆಯ ಸೂಚನೆಯಾಗಿ ನಿಲ್ಲುತ್ತಾರೆ, ಅಂದರೆ ಶೋಷಣೆಯ ಬಗ್ಗೆ ಅರಿವಿನಿಂದ ಕೂಡಿದ ಇಂಥ ಪ್ರತಿಭಟನೆ ವ್ಯಕ್ತವಾಗುವುದು ಕುರಿಯ ಮನಸ್ಥಿತಿಯಲ್ಲಲ್ಲದೆ ಬೇರೆ ರೀತಿ ಸಾಧ್ಯವಿಲ್ಲ ಎನ್ನುವುದು, ತುಳಿಯುವ ಜನರ ಕ್ರೌರ್ಯದ ಬಗ್ಗೆ ಓದುಗ ಇನ್ನಷ್ಟು ಗಮನ ಹರಿಸುವಂತೆ ಮಾಡುತ್ತದೆ.

ಇವೆಲ್ಲವನ್ನೂ ಹೇಳುವ ಪ್ರಯತ್ನದಲ್ಲೇ ಉದ್ದಕ್ಕೂ ಸಿಗುವ ಕಾವ್ಯಮಯ ದಟ್ಟ ಚಿತ್ರಣಗಳು- ಉದಾಹರಣೆಗೆ ‘ಊರಿಗೆ ಕತ್ತಲು ಇಳಿಯಲು ತೊಡಗಿದಾಗಲೇ ಅಮಾಸನೂ ಕುರಿಂiÀiಯ್ಯನೂ ಮಠದ ಬೆಲ್ಲು ಆಗುವುದನ್ನೇ ನೆಟ್ಟಗೆ ಕಾಯುವರು. ಮಠದ ಬೆಲ್ಲು ಹೊಡೆದ ತಡವೇ ಅಮಾಸನು ಕುರಿಯಯ್ಯನ ಕಿದ್ದಂಡೆಯಲ್ಲಿ ಮಡಗಿರುವ ತಟ್ಟೆ ಗ್ಲಾಸು ತೆಗೆದುಕೊಂಡು ಲಗುಬಗೆ ಓಡುವನು, ಅಷ್ಟಕ್ಕಾಗಲೇ ಸಂಪೂರ್ಣ ಕತ್ತಲು ಹಿಡಿದು ಗವ್ವಗಿರುದರಿಂದ ಅಮಾಸ ಓಡುವುದೇನೂ ಕಾಣಿಸುವುದಿಲ್ಲ. ಕಣ್ಣು ಸೀಳಿಕೊಂಡು ನೋಡಿದರೆ ಅವ ಓಡುವ ಓಟಕ್ಕೆ ಕತ್ತಲು ಕಲಕುತ್ತಿರುವಂತೆ ಹೊಳೆಯುತ್ತದೆ, ಹಾಗೆ ಅವನು ಹೋದವನು ತಿರುಗ ಯಾವಾಗ ಬಂದ- ಎಂಬುದೂ ತಿಳಿಯದು, ಬಂದವ ‘ಅಯ್ಯಾ’ ಅಂದುದು ಕತ್ತಲನ್ನು ಅಲುಗಾಡಿಸುತ್ತಾ ಮೂಡುವಾಗಲೆ: ತಿಳಿಯುವುದು (ಪುಟ-57)

ಇದಕ್ಕೆ ಪ್ರತಿಯಾಗಿ ಎಂಬಂತೆ ಬರುವ ಮಾರಿಗುಡಿಯ ಪರಿಸರದ ಚಿತ್ರಣ “ಹೆಚ್ಚು ಕಮ್ಮಿ ಎಲ್ಲರೂ ಅಲ್ಲಿ ಹೊಸ ಹೊಸ ಬಿಳಿ ಬಟ್ಟೆ ಹಾಕಿದ್ದರಿಂದ ಮಾರಿಗುಡಿ ತುಂಬ ಬಿಳಿ ಹೊಳಪು ವಡೀತಿತ್ತು. ಅಲ್ಲಿದ್ದ ಬಸಣ್ಣ ಎಂಬುವವನು ಫ್ರೆಂಚು ಮೀಸೆ ಬಿಟ್ಟು ಕಪ್ಪಗೆ ಗಿಡ್ಡಗೆ ಇದ್ದನು, ಅವನೂ ಬಿಳಿ ಬಟ್ಟೆ ತೊಟ್ಟಿದ್ದರಿಂದ ಮತ್ತು ಹೆಚ್ಚು ಕಪ್ಪಾಗಿ ಹೊಳೆಯುತ್ತಿದ್ದನು. ಅವನು ಬಾಯಿ ಬಿಡದಿದ್ದರೂ ಅವನ ಹಳದಿ ಬಾಚಿ ಹಲ್ಲುಗಳು ಬಿಳಿ ಬಟ್ಟೆ ದೆಸೆಯಿಂದ ಅವೂ ಹೊಳೆಯುತ್ತಾ ಹೊರಗೇ ಇದ್ದವು.”

ಜೊತೆಗೆ ತಮ್ಮಟೆಯ ದನಿಯೊಂದಿಗೆ ಕುಣಿತದ ದೃಶ್ಯವನ್ನು ಕಣ್ಣಿಗೆ ಕಟ್ಟುವ ಚಿತ್ರಣ-
“ಬಸವಣ್ಣ ತಮ್ಮಟೆಯ ಎದೆಗೆ ಏರಿಸಿ ಚಡ್ ಚಡ್ ನಕುನ ನಕುನ, ನಕುನ ಬಾರಿಸಲು ಕಂಚಿಗೆ ಬಡಿದಂತೆ ತಮ್ಮಟೆ ದನಿಯು ಊರ ನಾಕು ಮೂಲೆ ಮುಟ್ಟತೊಡಗಿತು. ಬಸವಣ್ಣನಿಗೂ ಹುಮ್ಮಸ್ಸು ಬಂದು ಡಂಗ್ ಡಂಗ್, ಡಂಗುಚುಕ್ಕಿ ವಡೀತ ಅವನೂ ಕುಣಿದನು” (ಪುಟ 60)
“ಊರ ಮೇಲಕ್ಕೆ ಕತ್ತಲು ಬಿದ್ದ ಕುಣಿತ ಮುಗಿದರೂ ಆದರೂ ಊರವರ ಕಣ್ಣು ಎತ್ತ ಹೋದರೂ ನಿದ್ದೆ ಮಾಡಲು ಕಣ್ಣು ಮುಚ್ಚಿದರೂ ಅಥವಾ ಹೆಂಡ್ತೀಗೆ ಸೀರೆ ಬಿಚ್ಚಿ ಬೆತ್ತಲೆ ಮಾಡಿ ನೋಡಿದರೂ ಕುಣಿತವೆ ಢಂಗು ಚುಕ್ಕಿ ತಮ್ಮಟೆ ದನಿ ಜೊತೇಲೆ ಕಾಣುತ್ತಿತ್ತು.” (ಪುಟ-64)

ಇವಲ್ಲದೆ ಬಿಡಿ ಬಿಡಿಯಾಗಿ ಸಿಗುವ-
1. ‘ಅಮಾಸೆ ಎಂಬುದು ಅಮಾಸನ ಹೆಸರು’
2. “ಕಂಬಳಿಯ ಜಾಡಿಸಿ ವದರಿದ ಬಿರುಸಿಗೆ ಕಂಬಳಿಯಲ್ಲಿದ್ದ ದೂಳು ಕಸವೆಲ್ಲ ಎಳೆ ಬಿಸಿಲಿಗೆ ಹಾರಿ ಈಜತೊಡಗಿದವು”
3. ಮಾರಿಗುಡಿಯ ಮುಂದೆ ತಂದು ನಿಲ್ಲಿಸಿದ ‘ಆಡುಗಳು ಅಲುಗದೆ ಮಿಸುಕದೆ ಕಣ್ಣುಗಳು ಮಾತ್ರವೆ ಸುತ್ತಲೂ ತಿರುಗುತ್ತಿದ್ದವು’
4. ಬಲಿಕೊಟ್ಟ ಆಡಿನ ‘ದೇಹ ಎಷ್ಟೆಷ್ಟೋ ಒದ್ದಾಡಲು ಒದ್ದಾಡುತ್ತಿತ್ತು’ – ಈ ಸಾಲುಗಳು ಇವೆಲ್ಲ ‘ಅಮಾಸ’ ಕತೆಯನ್ನು ‘ಗದ್ಯಕಾವ್ಯ’ವೆಂದು ಪರಿಗಣಿಸಲು ಓದುಗನನ್ನು ಪ್ರೇರೇಪಿಸುತ್ತವೆ.

ದೇವನೂರು ಮಹಾದೇವರು ಈ ಸಂಕಲನದ ಮೂಲಕ ಕನ್ನಡದಲ್ಲಿ ನಾವು ಇದುವರೆವಿಗೂ ಕಾಣದ ಹೊಸ ಸಾಹಿತ್ಯ ಧಾಟಿಯನ್ನೇ ಸೃಷ್ಟಿಸಿದ್ದಾರೆಂದು ನನ್ನ ನಂಬುಗೆ. ಹೀಗನ್ನಿಸುವುದಕ್ಕೆ ಸ್ಪಷ್ಟ ಕಾರಣಗಳು ಎರಡು-

ಒಂದು: ಗ್ರಾಮೀಣ ಭಾಷೆಯನ್ನು ಅದ್ಭುತ ರೀತಿಯಲ್ಲಿ ಬಳಸಿಕೊಳ್ಳುವುದರ ಮೂಲಕ ಮತ್ತು ಇಂಥ ಭಾಷೆಗೆ ಬೆನ್ನೆಲುಬಾದ ಬಹುಸಂಖ್ಯಾತ ಶೋಷಿತರ ಅನುಭವದತ್ತ ಸಮಗ್ರ ದೃಷ್ಟಿಹರಿಸಲು ಪ್ರಯತ್ನಿಸುವುದರ ಮೂಲಕ ಇದುವರೆವಿಗೂ ಕನ್ನಡ ಸಾಹಿತ್ಯದಲ್ಲಿ ಮೇಲುಗೈ ಪಡೆದಿದ್ದ ವ್ಯಕ್ತಿಗತ ದೃಷ್ಟಿ ಮತ್ತು ಭಾಷೆಯ ಅನಗತ್ಯ ನಾಜೂಕಿನ ಕಡೆಗೆ ತೀವ್ರ ಲಕ್ಷ್ಯಹರಿಸಿ ಅನುಭವದ ಅಭಿವ್ಯಕ್ಕಿಗೆ ಭಾಷೆಯೇ ಮೊದಲ ತೊಡಕಾಗಿ ಪರಿಣಮಿಸಿದ ಅಪಾಯದಿಂದ ಪಾರಾಗಲು ಯತ್ನಿಸಿರುವುದು,

ಎರಡು: ಬರಿ ಒಂದು ವಿಶಿಷ್ಟ ಎಂದು ಭ್ರಮಿಸಿದ ಕೆಲವೇ ಜನರು ಅನುಭವವನ್ನೇ ಬಂಡವಾಳವನ್ನಾಗಿ ಮಾಡಿಕೊಂಡು, ಅದನ್ನೇ ಸಾರ್ವತ್ರಿಕವೆಂದು ನಂಬುತ್ತಾ, ಮತ್ತು ಗ್ರಾಮಿಣ ಜೀವನದ ಅನುಭವವನ್ನು ಓದುಗನಿಗೆ ಒಂದು ಹೊಸ ಸರಕೆಂಬಂತೆ ಒದಗಿಸಿ ಅವನನ್ನು ರಂಜಿಸಿ ಪ್ರಸನ್ನಗೊಳಿಸುವುದನ್ನೇ ಮುಖ್ಯ ಅಂಶವನ್ನಾಗಿ ಪರಿಗಣಿಸಿ, ಒಂದು ಬಗೆಯ ಬೌದ್ಧಿಕ ಲೋಲುಪತೆಯಲ್ಲಿ ಮುಳುಗಿ ಆನಂದಪಡುವ ಸಂಪ್ರದಾಯವನ್ನು ಮರಿದು, ಸಮುದಾಯದ ಆಶೋತ್ತರಗಳ ಅನುಭವದ ಕಡೆ ಶೋಷಣೆಯ ಬಗ್ಗೆ ಅರಿವಿನಿಂದ ಕೂಡಿ ಪ್ರಜ್ಞಾಪೂರ್ವಕವಾಗಿ ನೇರ ದೃಷ್ಟಿ ಹರಿಸಲು ಪ್ರಯತ್ನಿಸಿರುವುದು.