ದೊರೆಸ್ವಾಮಿ 99: ದಣಿವರಿಯದ ಸಕ್ರಿಯ ರಾಜಕಾರಣ

                                                                

 

Image no found

  ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಯವರು (ಜನನ:10 ಏಪ್ರಿಲ್ 1918) ಮೊನ್ನೆ ತೊಂಬತ್ತೊಂಬತ್ತಕ್ಕೆ ಕಾಲಿಟ್ಟರು. ಈ ಅಂಕಣ ಬರೆಯುವ ಮಂಗಳವಾರ ಬೆಂಗಳೂರಿನ ಜಯನಗರದಲ್ಲಿರುವ ಅವರ ಮನೆಗೆ ಹೋದಾಗ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಕೇಕ್ ಕತ್ತರಿಸುತ್ತಿದ್ದರು. ‘ನನಗೂ ಕೊಡಿ’ ಎಂದು ಕೇಕ್ ತೆಗೆದುಕೊಂಡು ತಿನ್ನುತ್ತಿದ್ದ ದೊರೆಸ್ವಾಮಿಯವರನ್ನು ‘ಹಲ್ಲುಗಳು ಹೇಗಿವೆ?’ ಎಂದೆ. ‘ಎಲ್ಲಾ ಒರಿಜಿನಲ್’ ಎಂದರು. ಬಾಲ್ಯದಲ್ಲಿ ಅಜ್ಜನ ಜೊತೆ ಕಬ್ಬಿನ ಗದ್ದೆಗೆ ಹೋಗಿ ನಿತ್ಯ ಕಬ್ಬು ಜಗಿದು ಗಟ್ಟಿಯಾದ ಹಲ್ಲುಗಳು ಇನ್ನೂ ಉಳಿದಿದ್ದವು. ಹಾಗೆಯೇ, ಗಾಂಧೀ ಸ್ಪರ್ಶದಿಂದ ಹುಟ್ಟಿದ ಸಾಮಾಜಿಕ ಬದ್ಧತೆ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿ ಯಾಗಿ ದ್ದರಿಂದ ಬಂದ ನಿರ್ಭೀತಿ, ನಿರಂತರ ಎಚ್ಚರ, ಸರ್ವೋದಯ ಚಳವಳಿಯಿಂದ ಬಂದ ಭೂಹಂಚಿಕೆಯ ಬಗೆಗಿನ ಕಾಳಜಿ, ರಚನಾತ್ಮಕ ಕಾರ್ಯಕ್ರಮಗಳು… ಎಲ್ಲವೂ ಹಾಗೇ ಇವೆ. ದೊರೆಸ್ವಾಮಿ ಅಧಿಕಾರ ರಾಜ ಕಾರಣ ದತ್ತ ಹೋಗದಿದ್ದರೂ, ‘ನಾನು ಸಕ್ರಿಯ ರಾಜ ಕೀಯ ದಲ್ಲಿದ್ದೇನೆ’ ಎನ್ನುತ್ತಾರೆ. ಭೂಗಳ್ಳರು ಕಬಳಿಸಿದ ಲಕ್ಷಗಟ್ಟಲೆ ಎಕರೆ ಸರ್ಕಾರಿ ಜಮೀನನ್ನು ಉಳಿಸಲು ಅವರು ಮಾಡಿದ ಈಚಿನ ಹೋರಾಟದವರೆಗೂ ಅವರು ನಡೆಸಿ ರುವ ಹತ್ತಾರು ಹೋರಾಟಗಳೇ ‘ಸಕ್ರಿಯ ರಾಜಕಾರಣ’ ಎಂದರೇನು ಎಂಬುದನ್ನು ಸ್ಪಷ್ಟವಾಗಿ ವಿವರಿಸುತ್ತವೆ.

ಅಲ್ಲಿದ್ದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರನ್ನು ನೋಡುತ್ತಾ, ‘ಆಪ್, ಬಿಜೆಪಿ ವಿರುದ್ಧ ಪರ್ಯಾಯ ವೊಂ ದನ್ನು ಕಟ್ಟಬಹುದೇ?’ ಎಂದೆ. ‘ಅದಕ್ಕೆ ಆ ಶಕ್ತಿ ಇರ ಬಹುದು; ಆದರೆ ಈಗಿನ ಸನ್ನಿವೇಶದಲ್ಲಿ ಆ ಪಕ್ಷ, ಈ ಪಕ್ಷ ಅಂತ ಅಲ್ಲ; ಅವತ್ತು ಇಂದಿರಾ ಗಾಂಧಿಯವರ ಸರ್ವಾಧಿ ಕಾರದ ವಿರುದ್ಧ ಎಲ್ಲ ಪಕ್ಷಗಳೂ ಒಗ್ಗೂಡಿದಂತೆ ಈಗ ಬಿಜೆಪಿ ವಿರುದ್ಧ ಎಲ್ಲ ಪಕ್ಷಗಳೂ ಒಗ್ಗೂಡಬೇಕು. ಅದೊಂದೇ ದಾರಿ’ ಎಂದರು ದೊರೆಸ್ವಾಮಿ. ‘ದಬ್ಬಾಳಿಕೆಯ ಹಾಗೂ ಸರ್ವಾಧಿಕಾರದ ರಾಜಕಾರಣ ವನ್ನು ಎಲೆಕ್ಷನ್ನಿನಲ್ಲಿ ಹಿಮ್ಮೆಟ್ಟಿ ಸು ವುದು ಮುಖ್ಯ’ ಎಂಬ ಅವರ ಮಾತು ಕೇಳುತ್ತಿದ್ದರೆ, ಒಳ್ಳೆಯ ರಾಜ ಕಾರಣವೆನ್ನುವುದು ಕೇವಲ ಆದರ್ಶಗಳ ಆರಾಧನೆಯಲ್ಲ; ನಿರಂತರವಾಗಿ ತಕ್ಷಣದ ಸವಾಲುಗಳಿಗೆ ಎದುರಾಗುವುದು ಎಂಬುದು ಹೊಳೆಯತೊಡಗುತ್ತದೆ. ರಾಜಕಾರಣವನ್ನು ಎಷ್ಟು ತುರ್ತಿನಿಂದ ಮಾಡಬೇಕಾಗುತ್ತದೆ ಎಂಬ ಎಚ್ಚರ ಮೂಡತೊಡಗುತ್ತದೆ. ಸಾಮಾಜಿಕ ಚಳವಳಿ ಮಾಡುವ ವರು ಚುನಾವಣಾ ರಾಜಕಾರಣವನ್ನು ಎಷ್ಟು ಗಂಭೀರ ವಾಗಿ ನೋಡಬೇಕು ಎಂಬುದೂ ಸ್ಪಷ್ಟವಾಗತೊಡ ಗುತ್ತದೆ. ಇದೆಲ್ಲದರ ನಡುವೆ, ಬರವಣಿಗೆಯನ್ನೂ ಬಿಡದ ದೊರೆ ಸ್ವಾಮಿ ಯವರು ತಮ್ಮ 98ನೆಯ ವಯಸ್ಸಿನಲ್ಲಿ ‘ಭೂಗಳ್ಳರು ಕಬಳಿಸಿದ ಸರ್ಕಾರಿ ಜಮೀನನ್ನು ಉಳಿಸಿದ ಹೋರಾಟ’ ಎಂಬ ಪುಸ್ತಕವನ್ನೂ ಬರೆದಿದ್ದಾರೆ. ಈ ಪುಸ್ತಕ ದೊರೆ ಸ್ವಾಮಿ ಯವರ ಹರೆಯದ ದಿನಗಳ ದಿಟ್ಟ ಪತ್ರಿಕೋದ್ಯಮ ಹಾಗೂ ಅವರಲ್ಲಿ ಇವತ್ತಿಗೂ ಉಳಿದಿರುವ ನೇರ, ನಿರ್ಭೀತ, ಸತ್ಯನಿಷ್ಠ ಬರವಣಿಗೆಯ ಸಾಕ್ಷಿಯಂತಿದೆ.

ದೊರೆಸ್ವಾಮಿಯವರನ್ನು ರೂಪಿಸಿದ ಪುಸ್ತಕ ಪ್ರಕಾಶನ ಹಾಗೂ ಪತ್ರಿಕೋದ್ಯಮಗಳೆರಡಕ್ಕೂ ಅವರ ಬದುಕಿನಲ್ಲಿ ಮುಖ್ಯ ಸ್ಥಾನವಿದೆ. ಅವರ ಜೀವನದ ಮುಖ್ಯ ವಿವರಗಳನ್ನು ಬಿ. ಆರ್. ರಮೇಶ್ ಬರೆದ ‘ಗಾಳಿಗೆ ಸಿಕ್ಕ ತರಗೆಲೆ’ (ಪ್ರ: ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ, ಮೈಸೂರು) ಪುಸ್ತಕದಿಂದ ಆಯ್ದುಕೊಂಡಿರುವೆ. ಹಾರೋ ಹಳ್ಳಿ ಯಲ್ಲಿ ಹುಟ್ಟಿ, ನಂತರ ಬೆಂಗಳೂರು ಸೇರಿ ಸ್ವಾತಂತ್ರ್ಯ ಚಳವಳಿಗೆ ಧುಮುಕಿದ ದೊರೆಸ್ವಾಮಿ ನಂದಿಬೆಟ್ಟದಲ್ಲಿ ಗಾಂಧಿ ಅವರನ್ನು ಮೊದಲ ಬಾರಿಗೆ ಕಂಡರು. ಅದಕ್ಕೂ ಮುನ್ನ ಐದನೆಯ ಕ್ಲಾಸಿನಲ್ಲಿದ್ದಾಗಲೇ ಗಾಂಧಿಯವರ ‘ಮೈ ಅರ್ಲಿ ಲೈಫ್’ ಪುಸ್ತಕದ ಪ್ರಭಾವಕ್ಕೊಳಗಾಗಿದ್ದರು. ಯಾವ ಪುಸ್ತಕದಲ್ಲಿ ಯಾವ ಸಾಲು ನಮ್ಮಲ್ಲಿ ಉಳಿಯುತ್ತದೆ ಎಂಬುದು ನಿಜಕ್ಕೂ ನಿಗೂಢ! ಗಾಂಧಿಯವರ ಈ ಪುಸ್ತಕದಲ್ಲಿ ‘ಎ ಸೋಷಿಯಲ್ ವರ್ಕರ್ ಶುಡ್ ಹಗ್ ವಾಲಂಟರಿ ಪಾವರ್ಟಿ’ (ಸಾಮಾಜಿಕ ಕಾರ್ಯಕರ್ತನೊಬ್ಬ ಸ್ವಇಚ್ಛೆಯಿಂದ ಬಡತನವನ್ನು ಅಪ್ಪಿಕೊಳ್ಳಬೇಕು) ಎಂಬ ಮಾತು ದೊರೆಸ್ವಾಮಿಯವರಲ್ಲಿ ಉಳಿದುಬಿಟ್ಟಿತು. ‘ಅದರ ಅರ್ಥ ಆಗ ಸರಿಯಾಗಿ ಆಗಿರಲಿಲ್ಲ. ಸಾರ್ವಜನಿಕ ಜೀವನಕ್ಕೆ ಬಂದಾಗ ಅದು ಸರಿಯಾಗಿ ಅರ್ಥವಾಯಿತು’ ಎಂದು ನಕ್ಕರು ದೊರೆಸ್ವಾಮಿ. ಗೆಳೆಯ ಭದ್ರಣ್ಣನವರು ‘ಪೌರವಾಣಿ’ ಪತ್ರಿಕೆಯನ್ನು ನಡೆಸುವ ಹೊಣೆಯನ್ನು ದೊರೆಸ್ವಾಮಿಯ ವರಿಗೆ ಬಿಟ್ಟು ತೀರಿಕೊಂಡರು. ದೊರೆಸ್ವಾಮಿ ಮಿತ್ರರೊಬ್ಬರ ಮನೆಯಲ್ಲಿ ಊಟ ಮಾಡಿ, ‘ಪೌರವಾಣಿ’ ಪತ್ರಿಕೆಯ ಆಫೀಸಿನಲ್ಲಿ ಕೆಲಸ ಮಾಡಿ, ಅಲ್ಲೇ ಮಲಗುತ್ತಿದ್ದರು.

ಪತ್ರಿಕೆ ವಹಿಸಿಕೊಂಡ ದೊರೆಸ್ವಾಮಿ ಮೈಸೂರಿನಲ್ಲಿ ಸ್ವಾತಂತ್ರ್ಯ ಘೋಷಣೆಗೆ ಅಡ್ಡಿಯಾಗಿದ್ದ ಆರ್ಕಾಟ್ ರಾಮಸ್ವಾಮಿ ನೇತೃತ್ವದ ಮಂತ್ರಿಮಂಡಲದ ಸರ್ಕಾರವನ್ನು ವಜಾಗೊಳಿಸಿ ಜವಾಬ್ದಾರಿ ಸರ್ಕಾರವನ್ನು ಸ್ಥಾಪಿಸಲು ಒತ್ತಾಯಿ ಸುವ ಲೇಖನಗಳನ್ನು ಪ್ರಕಟಿಸಲಾರಂಭಿಸಿದರು. ಆರ್ಕಾಟ್ ಸರ್ಕಾರದ ವಿರುದ್ಧ ಎಂಟು ದಿನಗಳ ಕಾಲ ತಿ.ತಾ. ಶರ್ಮರ ಹರಿತವಾದ ಬರಹಗಳನ್ನು ‘ಪೌರವಾಣಿ’ ಪ್ರಕಟಿಸ ತೊಡಗಿ ದಾಗ, ಸರ್ಕಾರ ಈ ಪತ್ರಿಕೆಯ ಲೇಖನಗಳನ್ನು ಸರ್ಕಾರದ ಮುಖ್ಯಕಾರ್ಯದರ್ಶಿಗೆ ತೋರಿಸಿ ಪ್ರಕಟಿಸ ಬೇಕೆಂಬ ನಿರ್ಬಂಧ ಹೇರಿತು. ಅದಕ್ಕೆಲ್ಲ ಜಗ್ಗದ ದೊರೆಸ್ವಾಮಿ ತಿ.ತಾ.ಶರ್ಮರ ಉಳಿದ ಎರಡು ಲೇಖನ ಗಳನ್ನೂ ಪ್ರಕಟಿಸಿ, ‘ಆರ್ಕಾಟ್ ರಾಮಸ್ವಾಮಿ ಮೊದಲಿಯಾರರ ನೇತೃತ್ವದ ಸರ್ಕಾರದ ಈ ನಿರಂಕುಶ ನೀತಿಯನ್ನು ಪ್ರತಿಭಟಿಸಲು ನಾಳೆಯಿಂದ ಪತ್ರಿಕೆ ಯನ್ನು ಹೊರತರಬಾರದೆಂದು ನಿರ್ಧರಿಸಿದ್ದೇವೆ’ ಎಂದು ಘೋಷಿಸಿ ದರು. ಆರ್ಕಾಟ್ ನೇತೃತ್ವದ ಸರ್ಕಾರ ‘ಪೌರವಾಣಿ’ ಪತ್ರಿಕೆಯನ್ನು ಮುಟ್ಟುಗೋಲು ಹಾಕಿಕೊಂಡಿತು.

ಆರ್ಕಾಟ್ ನೇತೃತ್ವದ ಸರ್ಕಾರದ ವಿರುದ್ಧ ಸತ್ಯಾಗ್ರಹಕ್ಕೆ ಜನರನ್ನು ಅಣಿಗೊಳಿಸಲು ಪತ್ರಿಕೆ ಇರಲೇಬೇಕೆಂಬುದನ್ನು ಮನಗಂಡ ದೊರೆಸ್ವಾಮಿ ಆಗ ಮದ್ರಾಸು ಪ್ರಾಂತದಲ್ಲಿದ್ದ ಹಿಂದೂಪುರದಿಂದ ಪತ್ರಿಕೆಯನ್ನು ಹೊರತಂದರು. ಸರ್ಕಾರ ತರಲೆ ಮಾಡಿದರೆ ಅದಕ್ಕೂ ಟಾಂಗ್ ಕೊಡಲು, ‘ಪೌರವಾಣಿ’ಯ ಜೊತೆಗೇ, ‘ಪೌರವೀರ’, ‘ಪೌರ ಮಾರ್ತಾಂಡ’, ‘ಪೌರದೂತ’, ‘ಪೌರಭಾಸ್ಕರ’ ಹೀಗೆ ಒಟ್ಟು ಐದು ಪತ್ರಿಕೆಗಳ ಸಂಪಾದಕರಾಗಿ ನೋಂದಾಯಿಸಿ ಕೊಂಡರು! ಮುಂದೆ ‘ಪೌರವಾಣಿ’ ಮೈಸೂರು ಸಂಸ್ಥಾನ ದೊಳಗೆ ಬರಬಾರದೆಂದು ಮೈಸೂರು ಸರ್ಕಾರ ಆದೇಶ ಹೊರಡಿಸಿದ ತಕ್ಷಣ ಅದೇ ಪತ್ರಿಕೆ ‘ಪೌರವೀರ’ ಆಗಿ ಹೊರಬಂತು! 1947ರ ಅಕ್ಟೋಬರ್ 24ರಂದು ಕೆ.ಸಿ.ರೆಡ್ಡಿ ಯವರ ನಾಯಕತ್ವದಲ್ಲಿ ಮೈಸೂರಿನಲ್ಲಿ ಜವಾಬ್ದಾರಿ ಸರ್ಕಾರ ಅಸ್ತಿತ್ವಕ್ಕೆ ಬಂತು. ‘ಪೌರವಾಣಿ’ಯ ಜೊತೆ ದೊರೆಸ್ವಾಮಿ ಮತ್ತೆ ಬೆಂಗಳೂರಿಗೆ ಬಂದರು.

ಗಾಂಧೀಜಿ ಕಾಲದ ರಾಜಕಾರಣದಲ್ಲಿ ತಯಾರಾದ ದೊರೆಸ್ವಾಮಿ ಅಧಿಕಾರ ರಾಜಕಾರಣಕ್ಕಿಂತ ಗಾಂಧೀಜಿಯ ರೀತಿಯ ರಚನಾತ್ಮಕ ಕಾರ್ಯಗಳ ಹಾದಿಯಲ್ಲೇ ಮುಂದು ವ ರಿದರು. ಸ್ವತಂತ್ರವಾಗಿ ಬದುಕಲು ಬಯಸಿದ್ದ ದೊರೆ ಸ್ವಾಮಿ ಬರವಣಿಗೆ ಮಾಡಿ, ಪುಸ್ತಕಗಳನ್ನು ಪ್ರಕಟಿಸಿ ಮಾರಾಟ ಮಾಡಿ, ತಮ್ಮ ಪುಟ್ಟ ಸಂಸಾರವನ್ನು ಪೊರೆ ದರು. ‘ಅದರಲ್ಲಿ ಮೂವತ್ತು ರೂಪಾಯಿ ಬಂದರೆ ಹಿಟ್ಟು ಸೊಪ್ಪು; ಮುನ್ನೂರು ರೂಪಾಯಿ ಬಂದರೆ ಒಳ್ಳೆಯ ಊಟ… ಹೀಗೇ ನಡೆಯಿತು ಜೀವನ’ ಎಂದು ನಕ್ಕರು ದೊರೆಸ್ವಾಮಿ.

ಕರ್ನಾಟಕ ಏಕೀಕರಣ ಚಳವಳಿಯ ಸಂದರ್ಭದಲ್ಲಿ ದೆಹಲಿಗೆ ಹೋದ ನಿಯೋಗದಲ್ಲಿ ದೊರೆಸ್ವಾಮಿಯವರೂ ಇದ್ದರು. ರಾಷ್ಟ್ರಪತಿ ಬಾಬು ರಾಜೇಂದ್ರಪ್ರಸಾದ್, ಪ್ರಧಾನಿ ನೆಹರೂ ಅವರನ್ನು ಭೇಟಿ ಮಾಡಿದ ನಿಯೋಗ ಗೃಹಮಂತ್ರಿ ಸರ್ದಾರ್ ಪಟೇಲರನ್ನೂ ಭೇಟಿ ಮಾಡಿ ಏಕೀಕರಣದ ಬೇಡಿಕೆ ಇಟ್ಟಿತು. ‘ಹಾಗಾದರೆ ಮೊದಲು ನಿಮ್ಮ ಮಹಾ ರಾಜರನ್ನು ತೆಗೆದುಹಾಕಿ’ ಎಂದರು ಪಟೇಲರು. ‘ಇದನ್ನು ತಮ್ಮ ಸಂದೇಶವೆಂದು ಒಯ್ಯಬಹುದೇ?’ ಎಂದು ದೊರೆಸ್ವಾಮಿ ಕೇಳಿದರು. ಪಟೇಲರು ‘ಹೂಂ’ ಎಂದರು. ನಿಯೋಗ ಬೆಂಗಳೂರಿಗೆ ಬಂದ ಮೇಲೆ ದೊರೆಸ್ವಾಮಿಯ ವರು ‘ಕರ್ನಾಟಕದ ಏಕೀಕರಣವನ್ನು ಸುಗಮಗೊಳಿಸಲು ಶ್ರೀಮನ್ಮಹಾರಾಜರು ಉದಾರ ಮನಸ್ಸಿನಿಂದ ತಮ್ಮ ಸಿಂಹಾ ಸನ ತೆರವು ಮಾಡಿಕೊಡಬೇಕು’ ಎಂದು ಮನವಿ ಮಾಡಿ ದರು. ಆಗ ಪಂಡಿತ ಶಿವಮೂರ್ತಿಶಾಸ್ತ್ರಿಗಳು ದೊರೆಸ್ವಾಮಿ ಯವರನ್ನು ಕಟುವಾಗಿ ಟೀಕಿಸಿದಾಗ, ದೊರೆಸ್ವಾಮಿ ದಿಟ್ಟವಾಗಿ ಹೇಳಿದರು: ‘ಸರ್ದಾರ್ ಪಟೇಲರು ನಿಮ್ಮ ಮಹಾರಾಜರನ್ನು ತೆಗೆದು ಹಾಕಿ ಎಂದು ಹೇಳಿದ್ದಾರೆ. ಆದರೆ ನಾವು ಪ್ರಥಮ ಹೆಜ್ಜೆಯಾಗಿ ‘ಸಿಂಹಾಸನ ತೆರವು ಮಾಡಿ ಕೊಡಿ’ ಎಂಬ ಪ್ರಾರ್ಥನೆ ಯನ್ನು ಗೌರವಪೂರ್ವಕ ವಾಗಿ ಸಲ್ಲಿಸುತ್ತಿ ದ್ದೇವೆ. ತೆರವು ಮಾಡದಿದ್ದರೆ ಪ್ರಜೆಗಳೇ ಅವರನ್ನು ರಾಜಗದ್ದುಗೆಯಿಂದ ಇಳಿಸಬೇಕಾಗು ವುದು’ ಎಂದರು.

ಯಾರೆದುರೇ ಆದರೂ ಹೀಗೆ ನೇರವಾಗಿ ನುಡಿಯ ಬಲ್ಲ ದಿಟ್ಟತನ ದೊರೆಸ್ವಾಮಿಯವರಿಗೆ ಸ್ವಾತಂತ್ರ್ಯ ಚಳವಳಿ ಯಿಂದ ಬಂದದ್ದು. ಹಾಗಾಗಿಯೇ, 1975ರ ತನಕ ಕಾಂಗ್ರೆಸ್ಸಿ ನಲ್ಲಿದ್ದ ಅವರು ಇಂದಿರಾ ಗಾಂಧಿ ಹೇರಿದ ತುರ್ತು ಪರಿಸ್ಥಿತಿ ವಿರುದ್ಧ ಬಂಡೆದ್ದರು. ತುರ್ತು ಪರಿಸ್ಥಿತಿಯ ಕಾಲದಲ್ಲಿ ಜೈಲಿನಲ್ಲಿ ದೊರೆಸ್ವಾಮಿ ಆರೆಸ್ಸೆಸ್‌ನವರ ಜೊತೆಗಿದ್ದರೂ ಅವರ ರಾಜಕಾರಣ, ತತ್ವ ಎರಡನ್ನೂ ವಿರೋಧಿಸಿದವರು. ಸ್ವಾತಂತ್ರ್ಯ ಚಳವಳಿಯ ಕಾಲದಲ್ಲೂ, ಸ್ವಾತಂತ್ರ್ಯೋತ್ತರ ದಲ್ಲೂ ಸೆರೆಮನೆವಾಸ ಅನುಭವಿಸಿರುವ ದೊರೆಸ್ವಾಮಿ, ಹರಿಹರದಲ್ಲಿ ನೀಲಗಿರಿ ಬೆಳೆಸಿ ನೆಲವನ್ನು ಬಂಜರು ಮಾಡಿದ್ದ ಬಿರ್ಲಾ ಪಾಲಿಫೈಬರ್ಸ್ ಕಂಪೆನಿ ವಿರುದ್ಧ, ಕರ್ನಾಟಕದ ಗಣಿಲೂಟಿಯ ವಿರುದ್ಧ, ನೈಸ್ ಕಾರಿಡಾರ್ ರಸ್ತೆಯ ವಿರುದ್ಧ ಹೋರಾಡಿದ್ದಾರೆ. ರೈತ ಚಳವಳಿಯಲ್ಲಿ ಪಾಲ್ಗೊಂಡಿದ್ದಾರೆ, ರೈತ ಶಿಬಿರಗಳಲ್ಲಿ ಪಾಠ ಹೇಳಿದ್ದಾರೆ. ದಲಿತರ ದೇವಾಲಯ ಪ್ರವೇಶದ ಪರವಾಗಿ ನಿಂತಿದ್ದಾರೆ. ಕೋಮುಬೆಂಕಿ ಹಚ್ಚಿದ ಊರುಗಳಲ್ಲಿ ಶಾಂತಿ ನೆಲೆಸಲು ದುಡಿದಿದ್ದಾರೆ. ಕರ್ನಾಟಕದ ಬಹುತೇಕ ಭಾಗ ಗಳಲ್ಲಿ ಪಾದಯಾತ್ರೆ ಮಾಡಿದ್ದಾರೆ. ‘ಸರ್ವೋದಯದ ಭೂದಾನ ಚಳವಳಿಯ ಕಾಲದಲ್ಲಿ ಜನರಿಂದ ನಡೆದ ಭೂದಾನ ದಲ್ಲಿ ಪಾಲ್ಗೊಂಡಿದ್ದೆ; ಈಗ ಸರ್ಕಾರದಿಂದ ಭೂದಾನ ಚಳವಳಿಗಾಗಿ ಒತ್ತಾಯಿಸುತ್ತಿದ್ದೇವೆ’ ಎಂದರು.

ಮಂಗಳವಾರ ಬೆಳಗ್ಗೆ ದೊರೆಸ್ವಾಮಿಯವರು ನೂರ್ ಶ್ರೀಧರ್ ಜೊತೆಗೆ ಸರ್ಕಾರಿ ಜಮೀನನ್ನು ಭೂಮಿಯಿಲ್ಲ ದವರಿಗೆ ಹಂಚಬೇಕೆಂದು ಒತ್ತಾಯಿಸಲು ಮುಖ್ಯಮಂತ್ರಿ ಯ ವರನ್ನು ಭೇಟಿಯಾಗಬೇಕಿತ್ತು. ದೊರೆಸ್ವಾಮಿಯವರ ಮಡದಿ ಇದ್ದಕ್ಕಿದ್ದಂತೆ ಅಸ್ವಸ್ಥರಾಗಿದ್ದರು. ಗೆಳೆಯರು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ದೊರೆಸ್ವಾಮಿ ಭೂಹಂಚಿಕೆಯ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲು ಹೊರಡುವ ಗಡಿಬಿಡಿಯಲ್ಲಿದ್ದರು. ಮಾತಿನ ನಡುನಡುವೆ ಬರುತ್ತಲೇ ಇದ್ದ ಲ್ಯಾಂಡ್ ಲೈನ್ ಫೋನನ್ನು ರಿಸೀವ್ ಮಾಡುತ್ತಿದ್ದ ದೊರೆಸ್ವಾಮಿ ಫೋನ್ ಮಾಡಿದವರನ್ನು ಗುರುತಿಸಿ ಮಾತಾಡುತ್ತಿದ್ದರು. ಮನೆಗೆ ಬಂದ ಎಲ್ಲರಿಗೂ ಒಂದು ಕಣ್ಣೋಟದ, ಮುಗುಳ್ನಗೆಯ, ಒಂದೇ ಮಾತಿನ ಆತ್ಮೀಯತೆ ಯನ್ನಾ ದರೂ ತೋರುತ್ತಿ ದ್ದರು. ಮುಂದಿನ ವರ್ಷ ನೂರು ತಲುಪಲಿರುವ ದೊರೆಸ್ವಾಮಿಯವರ ನೆನಪು ಕೈಕೊಟ್ಟಿದ್ದಾ ಗಲೀ, ಚಿಂತನೆ ಯಲ್ಲಿ ಗೊಂದಲಗಳಾಗಲೀ ಕಾಣಲಿಲ್ಲ. ಒಟ್ಟು ನಾಲ್ಕು ಗಂಟೆಯಷ್ಟೆ ನಿದ್ರಿಸುವ ದೊರೆಸ್ವಾಮಿಯವರ ಬಿಡುವಿಲ್ಲದ ಸಮಾಜದ ಕೆಲಸ, ನಿಜವಾದ ಕಾಳಜಿ ಅವರನ್ನು ಲವಲವಿಕೆ ಯಲ್ಲಿ, ಆರೋಗ್ಯದಲ್ಲಿ ಇಟ್ಟಂತಿತ್ತು. ‘ನಮ್ಮ ಮನೆಯ ಬಾಗಿಲು ಸದಾ ತೆರೆದೇ ಇರುತ್ತದೆ’ ಎಂದ ದೊರೆಸ್ವಾಮಿ, ‘ಒಂದು ವಿಷಯದಲ್ಲಿ ನಾನು ಭಾಗ್ಯಶಾಲಿ. ನನಗೆ ಯಾರ ಭಯವೂ ಇಲ್ಲ. ನಾನು ಎಲ್ಲರನ್ನೂ ಟೀಕಿಸುತ್ತೇನೆ; ಆದರೆ ಯಾರನ್ನೂ ಶತ್ರುವಾಗಿ ಕಾಣುವು ದಿಲ್ಲ’ ಎಂದು ನಕ್ಕರು. ಆ ನಗೆಯ ಮುಗ್ಧತೆ, ನಿರಾಳತೆ ನನ್ನಲ್ಲಿ ಬಹುಕಾಲ ಉಳಿದಿರು ತ್ತದೆ. ಈ ಬರಹ ಮುಗಿಸುವ ಹೊತ್ತಿಗೆ, ಮುಖ್ಯಮಂತ್ರಿಗಳು ಹಾಗೂ ಕಂದಾಯ ಮಂತ್ರಿಗಳು ಭೂಹಂಚಿಕೆಯ ಬೇಡಿಕೆ ಯನ್ನು ಒಪ್ಪಿದ್ದಾರೆಂದು ದೊರೆಸ್ವಾಮಿಯವರು ಹೇಳಿದಾಗ, ಇದು ಕರ್ನಾಟಕ ಸರ್ಕಾರ ನಮ್ಮ ಧೀಮಂತ ನಾಯಕ ರೊಬ್ಬರ ತೊಂಬತ್ತೊಂಬತ್ತನೆಯ ಹುಟ್ಟುಹಬ್ಬಕ್ಕೆ ಕೊಟ್ಟ ದೊಡ್ಡ ಸಾಮಾಜಿಕ ಉಡುಗೊರೆ ಎಂದುಕೊಂಡೆ.

ಕೊನೆ ಟಿಪ್ಪಣಿ: ‘ಲಾಯಲ್’ ಎಂದರೇನು ಸ್ವಾಮಿ?

ದೊರೆಸ್ವಾಮಿಯವರಿಗೆ ಕೆಂಗಲ್ ಹನುಮಂತಯ್ಯ ನ ವರ ಕಾಲದಲ್ಲಿ ವಿಧಾನ ಪರಿಷತ್ ಸದಸ್ಯರಾಗುವ ಅವಕಾಶ ಬಂತು. ಆಗ ಅವರಿಗೆ ಕೆಂಗಲ್ ಹಾಕಿದ ಷರತ್ತು: ‘ನಿಮ್ಮನ್ನು ಎಂ.ಎಲ್.ಸಿ. ಮಾಡುತ್ತೇನೆ. ನೀವು ನನಗೆ ಲಾಯಲ್ ಆಗಿರಬೇಕು.’

‘ಲಾಯಲ್ ಆಗಿರುವುದು ಎಂದರೆ?’

‘ಅಂದರೆ ನಾನು ತಪ್ಪು ಮಾಡಲಿ, ಸರಿ ಮಾಡಲಿ, ನೀವು ನನ್ನನ್ನು ಬೆಂಬಲಿಸಬೇಕು’.

‘ನೀವು ತಪ್ಪು ಮಾಡಿದಾಗ ಬಹಿರಂಗವಾಗಿ ಅಲ್ಲದಿದ್ದರೂ ನಿಮ್ಮ ಕಿವಿಯಲ್ಲಾದರೂ ನಿಮ್ಮ ನಡವಳಿಕೆ ಸರಿಯಿಲ್ಲವೆಂದು ಹೇಳಬೇಕಲ್ಲವೇ?’

ದೊರೆಸ್ವಾಮಿಯವರ ಮಾತಿಗೆ ಕೆಂಗಲ್ ಒಪ್ಪಲಿಲ್ಲ. ದೊರೆಸ್ವಾಮಿ ಬಗ್ಗಲಿಲ್ಲ. ಎಂ.ಎಲ್.ಸಿ. ಚಾಪ್ಟರ್ ಮುಗಿಯಿತು!