ದೇಹ ದಂಡನೆ ಮತ್ತು ಭಕ್ತಿ-ಸಿ.ಎನ್.ರಾಮಚಂದ್ರನ್

cruel-2
“ಯಾಕೆ ಈ ದೇಹವನು ದಂಡಿಸುವೆ ವ್ಯರ್ಥ?”- ಪುರಂದರದಾಸರು
ಜನ್ನನ ಯಶೋಧರ ಚರಿತೆಯ ಮೊದಲ ಅವತಾರದಲ್ಲಿ ನಗರ ದೇವತೆಯಾದ ಚಂಡಮಾರಿಯ ವಾರ್ಷಿಕ ಜಾತ್ರೆಯ ವರ್ಣನೆಯಿದೆ. ದೇವತೆಯ ಸಂಪ್ರೀತಿಗಾಗಿ ಅಲ್ಲಿ ನಡೆಯುತ್ತಿದ್ದ ಅಪಾರ ಸಂಖ್ಯೆಯ ‘ಆಡು ಕುರಿ ಕೋಳಿ ಕೋಣ’ಗಳ ಬಲಿಯಲ್ಲದೆ ಭಕ್ತರು ನಡೆಸುತ್ತಿದ್ದ ಆತ್ಮಾರ್ಪಣೆಯ ವಿವರಗಳು ಹೀಗಿವೆ: “ಅಂಗೈ-ಅಂಗಾಲುಗಳನ್ನು ಕತ್ತರಿಸಿ ಇಡುವ ವೀರರು, ಕಣ್ಣನ್ನು ಕಿತ್ತು ದೇವಿಗೆ ಸಮರ್ಪಿಸುವವರು, ಕರುಳನ್ನು ಹೊರಕ್ಕೆಳೆದು ತೋರಣ ಕಟ್ಟುವವರು, ಕಾಲುಗಳನ್ನು ಉರಿಸುತ್ತಾ ರಕ್ತದಲ್ಲಿ ಅನ್ನವನ್ನು ಬೇಯಿಸುವವರು ಅಲ್ಲಿ ತುಂಬಿಕೊಂಡಿದ್ದರು; ಬಾಯಿಯನ್ನು ಬಗಿದು ಗಾಳವನ್ನು ಅಲ್ಲಿ ನೆತ್ತಿಯಲ್ಲಿ ಹೊರಬರುವಂತೆ ಚುಚ್ಚಿ ಎತ್ತರದಿಂದ ತೂಗಾಡುವವರು ಸಾಲುಸಾಲಾಗಿ ಕಾಣಿಸುತ್ತಿದ್ದರು; ಹೊಲಗಳಲ್ಲಿ ಬೆರ್ಚಪ್ಪಗಳನ್ನು ನಿಲ್ಲಿಸಿರುವಂತೆ ಇಲ್ಲಿ ಈ ವೀರರು ಪಾಪದ ಬೆಳೆಯನ್ನು ರಕ್ಷಿಸುವುದಕ್ಕಾಗಿ ನಿಂತಿದ್ದರು” (1: 54-55). ಗ್ರಾಮದೇವತೆಗಳನ್ನು ತೃಪ್ತಿಗೊಳಿಸಲು ಅಂದಿನ ಕಾಲದಲ್ಲಿ (13ನೆಯ ಶ.) ಪ್ರಾಯಃ ಪ್ರತಿ ಗ್ರಾಮ-ನಗರಗಳಲ್ಲಿಯೂ ನಡೆಯುತ್ತಿದ್ದ ಹಿಂಸೆಯ ಭೀಭತ್ಸ ಚಿತ್ರವನ್ನು ಕವಿಯು ಇಲ್ಲಿ ಅನ್ಯಾದೃಶವಾಗಿ ಕಟ್ಟಿಕೊಡುತ್ತಾನೆ.
ಅತ್ಯಂತ ಖೇದದ ಸಂಗತಿಯೆಂದರೆ, 800 ವರ್ಷಗಳ ನಂತರವೂ ಈ ಚಿತ್ರ ಇಂದೂ ಭಾರತದಲ್ಲಿ ಕಾಣಿಸುತ್ತದೆ –ಇನ್ನೂ ಹೆಚ್ಚು ಭೀಭತ್ಸವಾಗಿ. ಧಾರ್ಮಿಕ ಸಂಪ್ರದಾಯ-ನಂಬಿಕೆಗಳ ಕಾರಣಗಳಿಂದ ಇಂದೂ ಕೂಡ ಭಾರತದ ಗ್ರಾಮೀಣ ಭಾಗಗಳಲ್ಲಿ ನಡೆಯುವ ಹಿಂಸಾತ್ಮಕ ದೇಹದಂಡನೆಗಳ ನಾನಾ ಪ್ರಕಾರಗಳು ಭೀಕರವಾಗಿವೆ:
1) ಸಿಡಿ ಆಚರಣೆಯ ಪ್ರಕಾರಗಳು: ಗ್ರಾಮದೇವತೆಯ ಹಬ್ಬದ/ ಜಾತ್ರೆಯ ಸಂದರ್ಭದಲ್ಲಿ ಭಕ್ತರು ತಮ್ಮ ದೇಹಕ್ಕೆ (ಸಾಮಾನ್ಯವಾಗಿ ಬೆನ್ನಿಗೆ) ಚುಚ್ಚಿಕೊಂಡ ಕಬ್ಬಿಣದ ಕೊಕ್ಕೆಗಳ ಮೂಲಕ ಅಂತರಾಳದಲ್ಲಿ ನೇತಾಡುವುದು. ಇದನ್ನು ಹೋಲುವ ಚರಕ್ ಪೂಜಾ, ಉರಾ, ಪಟ, ಕಂಡೇರಾ, ಗಳ್ ದೇವೋರಾ, ಗಳ್ ಬಾಪ್ಸಿ, ಇತ್ಯಾದಿ ಹದಿನಾಲ್ಕು ಪ್ರಕಾರಗಳು ಪಶ್ಚಿಮ ಬಂಗಾಳ, ಝಾರ್ಖಂಡ್, ಒರಿಸ್ಸಾ, ಮಧ್ಯ ಪ್ರದೇಶ್, ತಮಿಳುನಾಡು, ಕರ್ನಾಟಕ, ಕೇರಳ ಇತ್ಯಾದಿ ಭಾರತದ ನಾನಾ ಭಾಗಗಳಲ್ಲಿ ಕಂಡುಬರುತ್ತವೆ.
2) ಬಾಯಿ ಬೀಗ ಪ್ರಕಾರಗಳು: ಈ ಪ್ರಕಾರದಲ್ಲಿ ಭಕ್ತರು ನಾಲಿಗೆಗೆ ಅಥವಾ ಬಾಯಿಯ ಎರಡೂ ಭಾಗಗಳಿಗೆ ದಬ್ಬಳಗಳನ್ನು ಚುಚ್ಚಿಕೊಂಡಿರುತ್ತಾರೆ; ಮುಳ್ಳಿನ / ಮೊಳೆಗಳ ಹಾಸಿಗೆಯ ಮೇಲೆ ಮಲಗುವುದು, ಮುಳ್ಳಿನ / ಮೊಳೆಗಳ ಮೇಲೆ ನಡೆಯುವುದು, ಮುಳ್ಳು/ ಮೊಳೆ ಹೊರಚಾಚಿರುವ ಮತ್ತು ಎರಡೂ ಕಡೆ ಭಾರಿ ಹೊರೆಗಳಿರುವ ಕಾವಡಿಯನ್ನು ದೂರದಿಂದ ಹೊತ್ತು ತರುವುದು ಇತ್ಯಾದಿ ಇತರ ಪ್ರಕಾರಗಳು. ಇವು, ಗಾಜನ್, ಪಾಟುವ, ಬಾಲಿ ಯಾತ್ರಾ, ದಗೋಯಿ-ಗೀಗೆ, ಕಾವಟಿ, ಅಲಕು ಕಾವಟಿ, ವೇಲ್ ಕಾವಟಿ, ಅಲಕು ಪೋಟು, ಇತ್ಯಾದಿ ಹೆಸರುಗಳಲ್ಲಿ ಪ. ಬಂಗಾಳ, ಒರಿಸ್ಸಾ, ಕರ್ನಾಟಕ, ತಮಿಳುನಾಡು, ಮುಂತಾದ ಅನೇಕ ಪ್ರಾಂತ್ಯಗಳಲ್ಲಿ ಆಚರಣೆಯಲ್ಲಿವೆ.
3) ಕೆಂಡದ ಸೇವೆ ಪ್ರಕಾರಗಳು: ಭಕ್ತರು ಬರಿಗಾಲಿನಲ್ಲಿ ಕೆಂಡದ ಮೇಲೆ ನಡೆಯುವುದು, ಕೆಂಡ ತುಂಬಿದ
ಅಥವಾ ಉರಿಯುವ ಪದಾರ್ಥಗಳು ತುಂಬಿರುವ ಮಣ್ಣಿನ ಗಡಿಗೆಗಳನ್ನು ಹೊರುವುದು, ಇತ್ಯಾದಿ. ತೀಮಿತಿ, ತೀಚ್ಚಟ್ಟಿ, ಧುನಾ ಪೊರಾಣಾ, ಝಾಮು, ಝೂಲಾ, ಫೂಲ್ ಕುಂಡೀ, ಇತ್ಯಾದಿ ಕೆಂಡದ ಸೇವೆಯ ಎಂಟು ಪ್ರಕಾರಗಳು ತಮಿಳುನಾಡು, ಕೇರಳ, ಕರ್ನಾಟಕ, ಮಹಾರಾಷ್ಟ್ರ, ಒರಿಸ್ಸಾ, ಪ. ಬಂಗಾಳ, ಇತ್ಯಾದಿ ಭಾರತದ ಅನೇಕ ಪ್ರಾಂತ್ಯಗಳಲ್ಲಿ ಆಚರಣೆಯಲ್ಲಿವೆ.
4) ಹೊಡೆದಾಟ: ಆಂಧ್ರಪ್ರದೇಶದ ಕರ್ನೂಲ್ ಪ್ರಾಂತ್ಯದಲ್ಲಿ ಬನಿ ಹಬ್ಬವೆಂದು ಕರೆಯಲ್ಪಡುವ ಈ ಆಚರಣೆಯಲ್ಲಿ ನೆರೆಹೊರೆ ಗ್ರಾಮಗಳ ಭಕ್ತರು, ದಸರಾ ಕಾಲದಲ್ಲಿ, ಮಧ್ಯ ರಾತ್ರಿಯಲ್ಲಿ, ಲಾಠಿಗಳಿಂದ ಪರಸ್ಪರ ಹೊಡೆದಾಡುತ್ತಾರೆ. ಬೆಳಗಿನವರೆಗೆ ನಡೆಯುವ ಈ ಹೊಡೆದಾಟದ ರಕ್ತದಲ್ಲಿ ತೋಯ್ದ ನಂತರ, ಎಲ್ಲರೂ ಸ್ನಾನ ಮಾಡಿ ದೇವರ (ಮಣಿ ಮಲ್ಲೇಶ್ವರ) ದರ್ಶನ ಪಡೆಯುತ್ತಾರೆ. (ಇಂತಹುದೇ ಆಚರಣೆ ಸೋಮಾಲಿಯಾದಲ್ಲಿ ‘ಇಸ್ತುಂಕ’ ಎಂಬ ಹೆಸರಿನಲ್ಲಿ ನಡೆಯುತ್ತದೆ.)
5) ಮಕ್ಕಳನ್ನು ಎತ್ತರದಿಂದ ಎಸೆಯುವುದು, ಹಸುಗಳ ಕಾಲ್ತುಳಿತಕ್ಕೆ ಒಡ್ಡಿಕೊಳ್ಳುವುದು (ಗೋವರ್ಧನ್ ಪೂಜಾ), ತಲೆಯ ಮೇಲೆ ತೆಂಗಿನಕಾಯಿ ಒಡೆಸಿಕೊಳ್ಳುವುದು, ಇತ್ಯಾದಿ ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶ, ತಮಿಳುನಾಡು, ಮುಂತಾದ ಪ್ರಾಂತ್ಯಗಳಲ್ಲಿ ಕಂಡುಬರುತ್ತವೆ. (ಈ ಭಾಗದ ವಿವರಗಳಿಗೆ ಆಧಾರ: [Franceso Brighenti, Hindu Devotional Ordeals.  EJVS, Vol. 19 [4: 2012], 103-175).

cruel
ಈ ಎಲ್ಲಾ ಆಚರಣೆಗಳಲ್ಲಿಯೂ ನಾವು ಗಮನಿಸಲೇ ಬೇಕಾದ ಕೆಲವು ಸಮಾನ ಅಂಶಗಳಿವೆ. 1) ಈ ಆಚರಣೆಗಳನ್ನು ಮಾಡುವವರು ಯಾರೂ ಸಮಾಜದ ಮೇಲ್ವರ್ಗಗಳಿಗೆ ಸೇರಿದವರಲ್ಲ; ಸಮಾಜದಲ್ಲಿ ಅತ್ಯಂತ ಕೆಳಸ್ತರದಲ್ಲಿರುವ ಅನುಸೂಚಿತ ಹಾಗೂ ಬುಡಕಟ್ಟು ಜನಾಂಗಗಳು ಮಾತ್ರ ಇವುಗಳನ್ನು ಆಚರಿಸುತ್ತಾರೆ; ಮತ್ತು ಸರಿ ಸುಮಾರು ಇವರೆಲ್ಲರೂ ಅಶಿಕ್ಷಿತರು ಹಾಗೂ ಆರ್ಥಿಕವಾಗಿ ದುರ್ಬಲರು. 2) ಈ ಆಚರಣೆಗಳು ನಡೆಯುವುದು ಗ್ರಾಮದೇವತೆಗಳ ಹೆಸರಿನಲ್ಲಿ, ಮತ್ತು ಈ ಗ್ರಾಮದೇವತೆಗಳೆಲ್ಲರೂ (ಒಂದೆರಡು ಅಪವಾದಗಳನ್ನು ಬಿಟ್ಟರೆ) ಸ್ತ್ರೀದೇವತೆಗಳು. ಎಂದರೆ, ‘ಶಕ್ತಿ’ ದೇವತೆಯ ರೂಪಗಳು. ಕೆಲವರು ವಿಶಿಷ್ಟವಾದ ಪ್ಲೇಗ್, ಸಿಡುಬು, ಜ್ವರ ಇತ್ಯಾದಿಗಳಿಗೆ ಕಾರಣವೆಂದು ಹಾಗೂ ಅವರನ್ನು ತೃಪ್ತಿಪಡಿಸಿದಾಗ ಆ ರೋಗಗಳು ನಿವಾರಣೆಯಾಗುತ್ತವೆಂದು ಭಾವಿಸಲ್ಪಡುವ ಮಾರಿ/ ಮಾರಿಯಮ್ಮ, ಕಾಳಿ, ಸೀತಾಳಮಾತಾ, ಮರೈ ಮಾತಾ, ಭಗವತಿ, ಭದ್ರಕಾಳಿ, ಇತ್ಯಾದಿ ಸ್ತ್ರೀದೇವತೆಗಳು.
ಧಾರ್ಮಿಕ ನಂಬಿಕೆಯ ನೆಲೆಯಲ್ಲಿ ನಡೆಯುವ ದೇಹದಂಡನೆ ಕೇವಲ ಭಾರತಕ್ಕೆ ಅಥವಾ ಹಿಂದು ಧರ್ಮಕ್ಕೆ ಸೀಮಿತವಲ್ಲ. ಹದಿನೈದನೆಯ ಶತಮಾನದವರೆಗೆ ಇಡೀ ಯೂರೋಪಿನಲ್ಲಿ ಕ್ಯಾಥೋಲಿಕ್ ಕ್ರಿಶ್ಚಿಯನ್ನರು ನಾನಾ ಬಗೆಗಳಲ್ಲಿ ತಮ್ಮ ದೇಹವನ್ನು ದಂಡಿಸುತ್ತಿದ್ದರು: ಉಪವಾಸ, ಬ್ರಹ್ಮಚರ್ಯ, ಬರಿಗಾಲಲ್ಲಿ ನಡೆಯುವುದು, ವಿಶಿಷ್ಟ ಸ್ಥಳಗಳಲ್ಲಿ ಮಂಡಿಯೂರಿ ನಡೆಯುವುದು, ಇತ್ಯಾದಿಗಳೊಡನೆ ಇನ್ನೂ ಹಿಂಸ್ರಕವಾದ ಚರ್ಮದ ಚಾಟಿಯಿಂದ ತಮ್ಮನ್ನೇ ತಾವು ಹೊಡೆದುಕೊಳ್ಳುವುದು (Flagellation),   ಒರಟು ಕೂದಲಿನ ಅಂಗಿಯನ್ನು ತೊಡುವುದು (hair-shirt] ಕೆಲವು ಪ್ರಾಣಿಗಳ ಕೂದಲು ಎಷ್ಟು ಒರಟಾಗಿರುತ್ತಿತ್ತೆಂದರೆ, ಆ ಅಂಗಿಗಳನ್ನು ಹಾಕಿಕೊಂಡಾಗ ಅವು ಚರ್ಮವನ್ನು ಚುಚ್ಚಿ ರಕ್ತ ಹೊರಬರುವಂತೆ ಮಾಡುತ್ತಿದ್ದುವು); ಇವೆಲ್ಲವೂ ಆಚರಣೆಯಲ್ಲಿದ್ದುವು. ಇದೇ ಮಾತು ಇತರ ಧರ್ಮೀಯರಿಗೂ ಅನ್ವಯಿಸುತ್ತದೆಂದು ಕಾಣುತ್ತದೆ.
ಆದರೆ, ಕ್ಯಾಥೋಲಿಕ್ ಕ್ರಿಶ್ಚಿಯನ್ನರ ಈ ಬಗೆಯ ದೇಹದಂಡನೆಗೂ, ಹಠಯೋಗಿಗಳ ಸಾಧನಾಕ್ರಮಗಳಿಗೂ ಈ ಮೊದಲು ವಿವರಿಸಿದ ಗ್ರಾಮೀಣ ಭಾರತದಲ್ಲಿ ಕಂಡು ಬರುವ ದೇಹದಂಡನೆಗೂ ಇರುವ ಅಗಾಧ ವ್ಯತ್ಯಾಸವನ್ನು ನಾವು ಗುರುತಿಸಬೇಕು. ಕ್ಯಾಥೋಲಿಕ್ ಕ್ರಿಶ್ಚಿಯನ್ನರ ದೇಹದಂಡನೆಗೆ ಕಾರಣ ‘ಮೂಲ ಪಾಪ’ (Original Sin) ಮತ್ತು ಮಾನವನ ಅಧಃಪತನ(Fall of Man) ಎಂಬ ಪರಿಕಲ್ಪನೆಗಳಲ್ಲಿ ಅವರಿಗಿರುವ ನಂಬಿಕೆ. ಆ ನಂಬಿಕೆಯ ಪ್ರಕಾರ ಆಚರಿಸುವವರು ಸಮಾಜದ ಅತ್ಯುಚ್ಚ ವರ್ಗಕ್ಕೆ (ಚರ್ಚ್‍ಗೆ) ಸೇರಿದವರು. ಅವರುಗಳಲ್ಲಿ ಕಂಡು ಬರುವ ದೇಹದಂಡನೆಯ ಹಿಂದಿರುವ ತಾತ್ವಿಕತೆಯೆಂದರೆ ಅವರು ನಂಬುವ ‘ದೇಹ-ಆತ್ಮ’ಗಳ ನಡುವಿರುವ ವೈರುದ್ಧ್ಯ. ಈ ವೈರುದ್ಧ್ಯವನ್ನು ಸಂತ ಪಾಲ್ ಹೀಗೆ ವಿವರಿಸುತ್ತಾನೆ: ‘ನಿಮ್ಮ ದೇಹಕ್ಕನುಸಾರವಾಗಿ ನೀವು ಬದುಕಿದರೆ ಸಾಯುತ್ತೀರಿ; ಆದರೆ, ನಿಮ್ಮ ಆತ್ಮದ ಸಾಮಥ್ರ್ಯದಿಂದ ದೈಹಿಕ ಕಾಮನೆಗಳನ್ನು ಸಾಯಿಸಿದರೆ ನೀವು ಬದುಕುತ್ತೀರಿ’ (“For if you live according to the flesh you will die, but if by the Spirit you put to death the deeds of the body you will live,” “The Book of Romans,” The Holy Bible ).

ಭಾರತದಲ್ಲಿಯೂ ಆರ್ಷೇಯ ಕಾಲದಿಂದ ನೂರಾರು ಜ್ಞಾನಿಗಳು, ಸಂತರು, ಮತ್ತು ಗುರುಗಳು ದೇಹ-ಆತ್ಮ ವೈರುದ್ಧ್ಯವನ್ನು ಒಪ್ಪಿಕೊಂಡು, ಆತ್ಮಶಕ್ತಿಯನ್ನು ಹೆಚ್ಚಿಸಲು ದೇಹವನ್ನು ದಂಡಿಸಬೇಕೆಂದು ಉಪದೇಶಿಸಿದ್ದಾರೆ. ಆದರೆ, ಅವರುಗಳು ಉಪದೇಶಿಸುವ ದೇಹದಂಡನೆಯೆಂದರೆ ಉಪವಾಸ, ಬ್ರಹ್ಮಚರ್ಯ, ಜಿತೇಂದ್ರಿಯತ್ವ, ವೈರಾಗ್ಯ, ಇತ್ಯಾದಿ. ಆದರೆ, ಗ್ರಾಮೀಣ ಭಾರತದಲ್ಲಿ ತಳ ಜನಾಂಗಗಳು ಆಚರಿಸುವ ಸಿಡಿ, ಕೊಂಡ ಹಾಯುವುದು, ಇತ್ಯಾದಿಗಳಿಗೆ ಈ ದೇಹ-ಆತ್ಮ ವೈರುದ್ಧ್ಯ ತತ್ವ ಅನ್ವಯಿಸುವುದಿಲ್ಲ ಎಂದು ನನಗೆ ತೋರುತ್ತದೆ– ಎರಡು ಕಾರಣಗಳಿಗಾಗಿ: 1) ಈ ಆಚರಣೆಗಳನ್ನು ಒಪ್ಪಿಕೊಂಡಿರುವ ಅಶಿಕ್ಷಿತ-ಬಡ ತಳ ಸಮುದಾಯಗಳು ಸಂಪ್ರದಾಯವನ್ನು ಬಿಟ್ಟರೆ ಆಗಬಹುದಾದ ಕಷ್ಟ-ನಷ್ಟಗಳ ಭೀತಿ ಮತ್ತು ಇಂತಹ ಆಚರಣೆಗಳಿಂದ ಸಿಗಬಹುದೆಂದು ತಾವು ನಂಬಿರುವ (ಸಂತಾನಪ್ರಾಪ್ತಿ, ರೋಗನಿದಾನ, ಇತ್ಯಾದಿ) ಫಲದ ಕಾಂಕ್ಷೆ, ಇವುಗಳ ಕಾರಣದಿಂದ ಅವುಗಳನ್ನು ಆಚರಿಸುತ್ತಾರೆ. 2) ಈ ಆಚರಣೆಗಳ ಹಿಂದೆಯೂ ದೇಹ-ಆತ್ಮ ವೈರುದ್ಧ್ಯದ ಅಥವಾ ಇತರ ಬಗೆಯ ತಾತ್ವಿಕತೆ ಇದ್ದರೆ, ಎಲ್ಲಿಯಾದರೂ ಯಾವುದಾದರೂ ಆಚರಣೆಯಲ್ಲಿ ಮೇಲ್ವರ್ಗದ ಜನರೂ ಭಾಗವಹಿಸುತ್ತಿದ್ದರು. ಆದರೆ, ಈ ಹಿಂಸಾತ್ಮಕ ಆಚರಣೆಗಳೆಲ್ಲವೂ ತಳ ಸಮುದಾಯಗಳಲ್ಲಿಯೇ ಇರುವುದರಿಂದ ಅವುಗಳನ್ನು ಭೀತಿಯ ನೆಲೆಯಲ್ಲಾಗುವ ಶೋಷಣೆಯೆಂದೇ ಗುರುತಿಸಬೇಕಾಗುತ್ತದೆ.
ಇಂತಹ ಹಿಂಸಾತ್ಮಕ ಆಚರಣೆಗಳನ್ನು ದೂರವಾಗಿಸಲು ಶಾಸನಗಳ ಸಹಾಯ ಖಂಡಿತಾ ಬೇಕು; ಆದರೆ ಶಾಸನಗಳಿಂದಲೇ ಈ ಪರಂಪರಾಗತ ನಂಬಿಕೆಗಳನ್ನು ಹಾಗೂ ಆಚರಣೆಗಳನ್ನು ದೂರಮಾಡುವುದು ಅಸಾಧ್ಯ. ಅತ್ಯಂತ ಅವಶ್ಯಕವಾದದ್ದು ಸರಿ-ತಪ್ಪುಗಳನ್ನು ನಿರ್ಧರಿಸುವ ವಿವೇಕವನ್ನು ಕೊಡುವ ಶಿಕ್ಷಣ. ಶಿಕ್ಷಣದಿಂದ ಹಾಗೂ ವಿವೇಚನಾ ಶಕ್ತಿಯಿಂದ ಮಾತ್ರ ಕನಕದಾಸರ ಈ ಅದ್ಭುತ ತಾತ್ವಿಕತೆ ಅರ್ಥವಾಗಬಲ್ಲದು: “ ತನು ನಿನ್ನದು, ಜೀವನ ನಿನ್ನದು / ಅನುದಿನದಲಿ ಬಹ ಸುಖದುಃಖ ನಿನ್ನದಯ್ಯಾ.”