ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಖಂಡಿಸಿ ಪ್ರಶಸ್ತಿ ವಾಪಸ್ ಮಾಡಿದ ಮಹಾದೇವ ಅವರು
[ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಖಂಡಿಸಿ ಪದ್ಮಶ್ರೀ ಪ್ರಶಸ್ತಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ವಾಪಸ್ ಮಾಡಲು ನಿರ್ಧರಿಸಿರುವ ದೇವನೂರ ಮಹಾದೇವ ಅವರು 14.11.2015 ರಂದು ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯ ಕನ್ನಡ ಪತ್ರ ಮತ್ತು ಅದರ ಇಂಗ್ಲಿಷ್ ಅನುವಾದದ ಪತ್ರಗಳು. [ಇಂಗ್ಲಿಷ್ ಗೆ ಅನುವಾದಿಸಿ ಕೊಟ್ಟಿರುವ ರಾಜೇಂದ್ರ ಚೆನ್ನಿ ಅವರಿಗೆ ವಂದನೆಗಳು]
ಇಂದ,
ದೇವನೂರ ಮಹಾದೇವ
# 53, 11ನೇ ಕ್ರಾಸ್, ನವಿಲುರಸ್ತೆ,
ಕುವೆಂಪುನಗರ, ಮೈಸೂರು.
ಪತ್ರಿಕಾ ಹೇಳಿಕೆ
ಯಾವುದೇ ಆಳ್ವಿಕೆಯು ಸಂವೇದನಾಶೀಲವಾಗಲು ಹಾಗೂ ಸಮಾಜಮುಖಿಯಾಗಲು ಲೇಖಕ ಕಲಾವಿದ ಪ್ರಜ್ಞಾವಂತರು ಸರ್ಕಾರಕ್ಕೆ ಅಂಕುಶದಂತೆ ಇರಬೇಕು ಎಂದು ನಂಬಿಕೊಂಡಿರುವ ನಾನು, ಇತ್ತೀಚಿನ ‘ಅಸಹಿಷ್ಣುತೆಗಾಗಿ ಪ್ರಶಸ್ತಿ ಹಿಂತಿರುಗಿಸುತ್ತಿರುವ’ ಈ ಸಂದರ್ಭದಲ್ಲಿ ನನ್ನ ಸ್ವಭಾವಕ್ಕೆ ವಿರುದ್ಧವಾಗಿ ಸಂಯಮಿಸಿಕೊಂಡೇ ಬಂದೆ. ಆದರೆ ಯಾವಾಗ ಕೆಲ ಲೇಖಕ-ಕಲಾವಿದರು ಆಳ್ವಿಕೆ ಪರ ಸಂಘಟಿತರಾಗಿ ನಿಂತರೋ ಅದು ಕೇಡಿನ ಲಕ್ಷಣ ಅನ್ನಿಸಿಬಿಟ್ಟಿತು. ಇದಕ್ಕೆ ಜಿಗುಪ್ಸೆಗೊಂಡು, ನಾನು ಪಡೆದ ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಪದ್ಮಶ್ರೀ ಪ್ರಶಸ್ತಿಗಳನ್ನು ಹಿಂತಿರುಗಿಸುತ್ತಿದ್ದೇನೆ. ಈಗ ಹಿಂತಿರುಗಿಸುತ್ತಿರುವುದು ಸಾಂಕೇತಿಕವಾಗಿ ಮಾತ್ರವೆ, ಯಾಕೆಂದರೆ ಅವುಗಳನ್ನು ಪಡೆದಿದ್ದರಿಂದ ಪರೋಕ್ಷವಾಗಿ ಪಡೆದಿರಬಹುದಾದ ಸ್ಥಾನಮಾನಗಳನ್ನು ಹಿಂತಿರುಗಿಸಲಾಗುತ್ತಿಲ್ಲ ಎಂಬ ಸಂಕೋಚವೂ ನನಗಿದೆ.
ನಮ್ಮ ಸ್ವಾತಂತ್ರ್ಯ ಹೋರಾಟದ ಕನಸುಗಳಾದ ಅಭಿವ್ಯಕ್ತಿ ಸ್ವಾತಂತ್ರ್ಯ, ಸಹಿಷ್ಣುತೆ, ಸಾಮಾಜಿಕ ನ್ಯಾಯ ಇತ್ಯಾದಿ ಮೌಲ್ಯಗಳು ನೆಹರೂಯುಗದ ನಂತರ ಒಂದಲ್ಲಾ ಒಂದು ಕ್ಷೀಣಿಸುತ್ತಾ ಬಂದು ಈಗ ತತ್ತರಿಸುತ್ತಿವೆ. ಈ ಮೌಲ್ಯಗಳು ಕಣ್ಣಿಗೆ ಕಾಣುವಂತೆ ಭೌತಿಕ ಅಲ್ಲದಿರಬಹುದು, ಆದರೆ ಇವು ನಾವು ಕಟ್ಟಬೇಕಾದ ಸಾಂಸ್ಕೃತಿಕ, ಸಾಮಾಜಿಕ ಭಾರತದ ಉಸಿರಾಟದಂತೆ ಎಂಬ ಈ ಅರಿವಿಲ್ಲದಿರುವುದೇ ಇಂದಿನ ಅಸಹಿಷ್ಣುತೆಗೆ ಕಾರಣವೆನ್ನಿಸುತ್ತಿದೆ.
ಇದಲ್ಲದಿದ್ದರೆ, ದಾದ್ರಿಯಂಥ ಘಟನೆಗಳೋ ಅಥವಾ ವೈಚಾರಿಕತೆ ಭಿನ್ನಾಭಿಪ್ರಾಯಗಳಿಂದ ನಡೆಯುತ್ತಿರುವ ಹತ್ಯೆಗಳೋ ಇವನ್ನು ಆಯಾಯ ರಾಜ್ಯಗಳ ಸಮಸ್ಯೆ ಎಂದು ಆಳ್ವಿಕೆ ನಡೆಸುತ್ತಿರುವ ಕೇಂದ್ರ ಸರ್ಕಾರದ ವರಿಷ್ಠರೇ ಹೇಳುವ ದುರಂತ ಸಂಭವಿಸುತ್ತಿರಲಿಲ್ಲ. ಹಾಗೆಯೇ ‘ಈ ಪ್ರಜ್ಞಾವಂತರ ಪ್ರಶಸ್ತಿ ಹಿಂತಿರುಗಿಸುವ ಪ್ರಕ್ರಿಯೆ’ಯು ಸಾಮಾಜಿಕ ಸಾಂಸ್ಕೃತಿಕ ಅಸಹಿಷ್ಣುತೆಗೆ ಪ್ರತಿಕ್ರಿಯೆಯಾಗಿ ಎಂಬ ಕನಿಷ್ಠ ಅರಿವಿದ್ದರೂ ಕಾನೂನು ಸಚಿವರು ಅದನ್ನು ‘ಮೋದಿಯವರ ವಿರುದ್ಧ ಸೈದ್ಧಾಂತಿಕ ಅಸಹಿಷ್ಣುತೆ’ ಎಂಬ ಆತ್ಮನಾಶಕ ಮಾತುಗಳನ್ನಾಡುತ್ತಿರಲಿಲ್ಲ. ಬದಲಾಗಿಇದನ್ನುಆಳ್ವಿಕೆ ನಡೆಸುತ್ತಿರುವವರಿಗೆಹೆಚ್ಚು ಸಂವೇದನಾಶೀಲರಾಗಲು ಸಹಕಾರಿಎಂದೇ ಸ್ವೀಕರಿಸಬಹುದಿತ್ತು. ಹಾಗೇ ಸಮಾಜದ ಪಟ್ಟಭದ್ರರಾದ ಪೇಜಾವರಶ್ರೀ ಅಂಥವರು ‘ಮಸೀದಿ ಮುಂದೆ ಹಂದಿ ಮಾಂಸದ ಸಮಾರಾಧನೆಯಾದರೆ ಸುಮ್ಮನಾಗುತ್ತಾರ?’ ಎಂದು ಮೂದಲಿಸುವುದೂ ಕೂಡ ಅಂಥದೇ ಮನಸ್ಥಿತಿಯಾಗಿದೆ; ಕೃಷ್ಣಮಠದ ಯತಿಗಳ ಮನಸ್ಸೊಳಗೆ ಮಸೀದಿ, ಹಂದಿಮಾಂಸ ತುಂಬಿರುವುದು ತರವಲ್ಲ ಎಂದು ಹೇಳುವವರು ಯಾರು? ಆಳ್ವಿಕೆ ನಡೆಸುತ್ತಿರುವವರ ಹಾಗೂ ಪಟ್ಟಭದ್ರರ ಇಂಥ ಧೋರಣೆಗಳು ಗೊತ್ತಿದ್ದೋ ಗೊತ್ತಿಲ್ಲದೆಯೋ ಸಮಾಜದಲ್ಲಿ ಅಸಹಿಷ್ಣುತೆ, ಹಿಂಸೆ ಹೆಚ್ಚಾಗಲು ಪ್ರಚೋದನೆ ನೀಡುತ್ತಿವೆ.
ಹಾಗಾಗಿ ಇಂದು ಅಸಹಿಷ್ಣುತೆಯ ಅಟ್ಟಹಾಸ ಎಸಗುತ್ತಿರುವ ಗುಂಪಿಗೆ ತಾನು ಗೆಲ್ಲಿಸಿದವರೇ ಕೇಂದ್ರ ಸರ್ಕಾರವಾಗಿರುವುದರಿಂದ ‘ತಾನು ಏನೇ ಮಾಡಿದರೂ ಮೇಲಿನವರ ಕೃಪೆಯಿಂದ ಬಚಾವಾಗಬಲ್ಲೆ’ ಎಂಬ ಭೀತಿಯಿಲ್ಲದ ಭಾವನೆ ಇರುವುದರಿಂದಲೇ ಈ ಹಿಂದೆ ಕದ್ದುಮುಚ್ಚಿ ನಡೆಯುತ್ತಿದ್ದ ಅಸಹನೆಯ ಹಿಂಸಾಕೃತ್ಯಗಳು ಇಂದು ಹಾಡಹಗಲೇ ಜರುಗುತ್ತಿವೆ. ಈ ಹಿಂದೆ ಎಂದೂ ಇಂಥ ಪರಿಸ್ಥಿತಿ ಉಂಟಾಗಿರಲಿಲ್ಲ. ಇದನ್ನು ಆತ್ಮಾವಲೋಕನ ಮಾಡಿಕೊಂಡರೆ ಮಾತ್ರ ಹಾಲಿ ಕೇಂದ್ರ ಸರ್ಕಾರವು, ತಾನೂ ಸರ್ಕಾರ ಕೊಡಬಲ್ಲುದು.
ಈ ಸಂದರ್ಭದಲ್ಲಿ ಎಂದೋ ಎಲ್ಲೋ ಓದಿದ ಕತೆಯೊಂದು ನೆನಪಾಗುತ್ತಿದೆ: “ಒಂದು ದರೋಡೆ, ಸುಲಿಗೆ ಹಿಂಸೆಯ ಸಮುದಾಯದ ಬಲಿಷ್ಠ ವ್ಯಕ್ತಿಯೊಬ್ಬನು ದುರ್ಬಲ ರಾಜನನ್ನು ಸೋಲಿಸಿ ತಾನೇ ರಾಜನಾದಾಗ ಆತ ಮಾಡುವ ಮೊದಲ ಕೆಲಸ – ತನ್ನ ಸಮುದಾಯದ ದರೋಡೆ ಹಿಂಸೆ ಅಪರಾಧಗಳಿಗೆ ಯಾವ ರಿಯಾಯಿತಿಯನ್ನು ಕೊಡದೆ ಹತ್ತಿಕ್ಕಿ ಅವರನ್ನು ಸುಸಂಸ್ಕೃತ ಸಭ್ಯ ಪ್ರಜೆಗಳನ್ನಾಗಿಸಿ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕಾರಣನಾಗುತ್ತಾನಂತೆ” – ಚರಿತ್ರೆಯು, ನಮ್ಮ ಹಾಲಿ ಪ್ರಧಾನಿಗಳ ಮುಂದೆ ಒಂದು ದೊಡ್ಡ ಸವಾಲನ್ನು ಇಟ್ಟು ಈಗ ಕಿರುನಗೆ ಸೂಸುತ್ತಿರುವಂತಿದೆ.
ಒಟ್ಟಿನಲ್ಲಿ ಇದು ಎಲ್ಲರಿಗೂ ಆತ್ಮಾವಲೋಕನದ ಕಾಲ. ಜನರಲ್ ಮುಷರಫ್ರ ಕೊನೆಗಾಲದ ಆತ್ಮಾವಲೋಕನದ ಮಾತುಗಳೂ ನಮಗೆ ಪಾಠವಾಗಬಲ್ಲುವು – “ಸಯೀದ್, ಲಖ್ವಿ ಇವರುಗಳು ಕಾಶ್ಮೀರದ ವಿಮೋಚನಾ ಹೋರಾಟಗಾರರಾಗಿದ್ದಾಗ ಅವರು ನಮ್ಮ ಹೀರೋಗಳಾಗಿದ್ದರು; ಯಾವಾಗ ಅವರ ಹೋರಾಟಕ್ಕೆ ಧಾರ್ಮಿಕ ಉಗ್ರವಾದ ಅಂಟಿತೊ ಆಗ ಅದು ಭಯೋತ್ಪಾದನೆಯಾಗಿ ಮಾರ್ಪಟ್ಟಿತು; ಈಗ ಆ ಭಯೋತ್ಪಾದನೆ ತಮ್ಮ ಜನರನ್ನೇ ಕೊಲ್ಲುವಲ್ಲಿಗೆ ಬಂದು ನಿಂತಿದೆ” – ಇದನ್ನು ಚರಿತ್ರೆ ಕೂಗಿ ಕೂಗಿ ಹೇಳುತ್ತಾ ಬಂದಿದೆ. ಹಾಗೇ ‘ಧರ್ಮದೇವರ ಹೆಸರಲ್ಲಿ ಕೊಲೆ-ಸುಲಿಗೆ ದ್ವೇಷ ಮಾಡುವವರನ್ನು ದೇವರೂ ಕಾಪಾಡಲಾರ’ ಎಂದು ಯೋಗಿಯ ಮಾತೊಂದು ಇದೆ. – ಇದನ್ನು ಈ ಸಂದರ್ಭದಲ್ಲಿ ನೆನಪಿಸುವುದಕ್ಕಾಗಿ ಪ್ರಶಸ್ತಿಗಳನ್ನು ಹಿಂತಿರುಗಿಸುತ್ತಿದ್ದೇನೆ.
ಮೈಸೂರು
14.11.2015 (ದೇವನೂರ ಮಹಾದೇವ)
From,
Devanooru Mahadeva
53, 11TH Cross, Navilu Road,
Kuvempunagara, Mysooru, Karnataka.
PRESS STATEMENT
I have always believed that for every government to remain sensitive and society-oriented, writers, artists and intellectuals should act like the restraining bridle. However, much against my nature, I have controlled myself from reacting in the present context of ‘returning awards against intolerance’. But when some writers and artists organised themselves in support of the ruling government, I felt it was a sure sign of evil. Disgusted by this development, I am now returning the Central Sahitya Akademi award and the Padmashri award. Returning them now, I know, is only symbolic in a way. I feel awkward that I am not able to return the position and prestige I may have obtained indirectly through these awards.
The dreams nurtured by our freedom struggle – freedom of expression, tolerance and social justice – have somehow dwindled after the Nehru era and are now in jeopardy. Those values may not be tangible or materially visible, but they are like the very breath of the cultural, social India we need to build. The lack of this awareness appears to be the reason for today’s intolerance. Otherwise we would not have witnessed the tragedy of the leaders of the central government themselves saying that incidents like that of Dadri and killings caused by ideological differences are the problems of the respective states. Similarly, the central law minister, who should at least know that the returning of awards by intellectuals is an expression of non co-operation in protest against social and cultural intolerance, would not have made the self-destructive comment that ‘it is intellectual intolerance against Modi.’ Instead, he should have accepted it as helpful for the ruling government to become more sensitive to such issues. Similarly again, the powerful Pejawar pontiff saying in ridicule ‘would they remain silent if pork were to be cooked in front of a masjid” is also an example of the same state of mind. Who has to say that it is not proper for the mind of the pontiff of the Krishna Mata to be filled with masjid and pork? Such attitudes among those in power and the vested are knowingly or unknowingly provoking greater intolerance and violence in society.
The group which is now indulging in violent excesses of intolerance is emboldened by the feeling that those whom it voted to power are now in the central government and that whatever misdeed it may commit it will escape by their blessings. Therefore the violent incidents of intolerance which used to take place in a clandestine manner are now happening in broad daylight. Never in the past had there been such a situation. Only if the central government introspects on this will it be able to provide governance.
In this context, I remember a story I had read somewhere. When a powerful man from a community given to dacoity, extortion and violence defeats a weak king and becomes the ruler, the first thing he does is, instead of showing any concession for the dacoity and violence practised by his community, he suppresses the criminal activities, makes his people civilized citizens and thus becomes responsible for creating a healthy society. It appears as though history, having placed a huge challenge before our present prime minister, is watching him with a little smile on its face.
In sum, this is a time for introspection and soul-searching for everyone. The following words of introspection spoken in his last days of power by General Musharraf can be a lesson to us: “Sayeed, Lakhwi were our heroes when they were fighting for the liberation of Kashmir. When religious fundamentalism began to mix with their struggle, it was transformed into terrorism. Now this terrorism is targeting our own people.”
History has been often been saying this loud and clear to us. There is also the saying of a Yogi that even God cannot save those who perpetrate murder, looting, hatred in the name of religion and God! I am returning the awards to remind ourselves of all this in the present situation.
Mysore (Devanoora Mahadeva)
14.11.2015