ದೇಶದಲ್ಲಿ ಅಮಾನವೀಯ ಅಭಿವೃದ್ಧಿ-ಸಾಹಿತಿ ದೇವನೂರ ಮಹಾದೇವ ಬೇಸರ

[ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ ಗುರುವಾರ 24.3.2016 ರಂದು ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ‘ಕೃಷಿ ಕಿಡಿ’ ವಿಶೇಷ ಸಂಚಿಕೆಯನ್ನು ಸಾಹಿತಿ ದೇವನೂರ ಮಹದೇವ ಬಿಡುಗಡೆ ಮಾಡಿದರು. ಡಾ.ಜಯಲಕ್ಷ್ಮೀ, ದಿವಾಕರ್, ಪ. ಮಲ್ಲೇಶ್, ಕೆ. ರಾಧಾಕೃಷ್ಣ ಇದ್ದಾರೆ. ಆ ಕಾರ್ಯಕ್ರಮದ ಪ್ರಜಾವಾಣಿ ವರದಿ, ಆಂದೋಲನ ಪತ್ರಿಕಾ ವರದಿ ಇಲ್ಲಿದೆ]
               ಮೈಸೂರು: ಆರು ಸಾವಿರ ಕೋಟಿಗೂ ಅಧಿಕ ವರಮಾನವಿರುವ ಶ್ರೀಮಂತರ ಪಟ್ಟಿಯಲ್ಲಿ ಭಾರತಕ್ಕೆ ಮೂರನೇ ಸ್ಥಾನ. ಆದರೆ, ದೇಶದ ಶಿಕ್ಷಣ, ಆರೋಗ್ಯ, ವರಮಾನ ನಿರ್ಧರಿಸುವ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಮಾತ್ರ 137ನೇ ಸ್ಥಾನ. ಇದ್ಯಾವ ನ್ಯಾಯ? ಇದು ದೇಶದಲ್ಲಿ ನಡೆಯುತ್ತಿರುವ ಅಮಾನವೀಯ ಅಭಿವೃದ್ಧಿ ಸಂಕೇತ ಎಂದು ಸಾಹಿತಿ ದೇವನೂರ ಮಹಾದೇವ ಬೇಸರ ವ್ಯಕ್ತಪಡಿಸಿದರು.

ಕಲಾಮಂದಿರದ ಮನೆಯಂಗಳದಲ್ಲಿ ಗುರುವಾರ ರೈತ ಕೃಷಿ ಕಾರ್ಮಿಕರ ಸಂಘಟನೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಕೃಷಿ ಕಿಡಿ’ ವಿಶೇಷ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು. ‘ದೇಶದ ಶ್ರೀಮಂತರ ವರಮಾನ ಲೆಕ್ಕಾಚಾರದಲ್ಲಿ ದೇಶದ ಅಭಿವೃದ್ಧಿಯನ್ನು ಗುರುತಿಸಲಾಗುತ್ತಿದೆ. ಇದರಿಂದ ಸಮಾಜದ ಸಮತ್ವ, ಸಮತೋಲನ, ಸಮಾನತೆಯ ಕನಸು ಧ್ವಂಸಗೊಂಡಿವೆ.  ಶ್ರೀಮಂತರು–ನಿರ್ಗತಿಕರ ಹೊಯ್ದಾಟದಲ್ಲಿ ಅಮಾನವೀಯ ಅಭಿವೃದ್ಧಿ ಕಾಣುತ್ತಿದ್ದೇವೆ’ ಎಂದರು.

‘ಏನು  ಮಾತಾಡುವುದು. ಯಾವ ರೀತಿ ಮಾತನಾಡುವುದು. ಎಷ್ಟು ಮಾತಾಡಿದರೂ ಫಲವಿಲ್ಲ. ಗೊಂದಲಗಳು ಹಾಗೇ ಇವೆ. ದಲಿತರು, ರೈತರು ತಮ್ಮ  ಸಮಸ್ಯೆಗಾಗಿ ಹಗಲಿರುಳು ಹೋರಾಟ ನಡೆಸುತ್ತಿದ್ದಾರೆ. ಆದರೆ, ಅವೆಲ್ಲಾ ಒಂದು ಮಿತಿಯಲ್ಲಿ ನಡೆಯುತ್ತಿವೆ. ಪಕ್ಷಾತೀತವಾಗಿ ಸಂಘಟನೆ ಆಗ ಬೇಕು. ಹೋರಾಟದ ಹಾದಿ ಬದಲಾಗ ಬೇಕಿದೆ’ ಎಂದು ಸಲಹೆ ನೀಡಿದರು.

ಮಾನವ ಅಭಿವೃದ್ಧಿ ಸೂಚ್ಯಂಕ ನಿರ್ಧರಿಸುವ ಶಿಕ್ಷಣ, ಆರೋಗ್ಯ, ವರಮಾನಕ್ಕಾಗಿ ಹೋರಾಡಬೇಕು. ಜಿಡಿಪಿಯ ಅಸಮತೋಲನ, ಅಸಮಾನತೆ, ಅಮಾನವೀಯ ಅಭಿವೃದ್ಧಿ ವಿರುದ್ಧ ಹೋರಾಡಬೇಕಿದೆ. ಘನತೆಗಾಗಿ, ಸಮಾನತೆಗಾಗಿ ಹೋರಾಟ ನಡೆಸಬೇಕು’ ಎಂದು ಕರೆ ನೀಡಿದರು.

‘ಸಮಾನತೆಯ ಕನಸು, ಘನತೆಯ ತುಡಿತ ಯಾವತ್ತೂ ಬತ್ತಿ ಹೋಗುವುದಿಲ್ಲ. ಅವು ಅರಳಿ ಮರದಂತೆ. ಮರ ಬಿದ್ದು ಹೋದರೂ ಅದರ ಬೇರು ಗಟ್ಟಿಯಾಗಿ ಉಳಿಯುತ್ತದೆ. ಕಾಂಕ್ರೀಟ್‌ ನೆಲವನ್ನು ಸೀಳಿಕೊಂಡು ಚಿಗುರೊಡೆಯುತ್ತವೆ. ಹಾಗೆಯೇ, ಸಮಾಜವಾದ, ಕಮ್ಯುನಿಸಂ, ಸಮಾನತೆ ಮತ್ತೆ ಚಿಗುರೊಡೆಯಲಿವೆ’ ಎಂಬ ಆಶಾಭಾವ ವ್ಯಕ್ತಪಡಿಸಿದರು.

ಸಮಾಜವಾದಿ ಹೋರಾಟಗಾರ ಪ. ಮಲ್ಲೇಶ್‌ ಮಾತನಾಡಿ, ‘ಎಷ್ಟೊ ಮಂದಿ ಅರೆಹೊಟ್ಟೆಯಲ್ಲಿ ಬದುಕುತ್ತಿದ್ದಾರೆ. ಎಲ್ಲಿಯವರೆಗೆ ಈ ಅಸಮಾನತೆ? ಎಲ್ಲಿಯವರೆಗೆ ಈ ನೋವು? ಇದಕ್ಕೆ ಯಾರು ಹೊಣೆ? ಈ ನರಳಾಟದಿಂದ ಮುಕ್ತಿ ಎಂದು?’ ಎಂದು ಪ್ರಶ್ನಿಸಿದರು.

‘ಸರ್ಕಾರಕ್ಕೆ ಕಣ್ಣಿಲ್ಲ. ಕಿವಿಯಿಲ್ಲ, ಹೃದಯವೂ ಇಲ್ಲ ಎಂದು ಗೊತ್ತಿದ್ದರೂ ಜನ ಸಹನೆಯಿಂದ ಬದುಕುತ್ತಿದ್ದಾರೆ. ಇದು ಹೋರಾಡಲು ಶಕ್ತಿ ಇಲ್ಲ, ಪ್ರಶ್ನಿಸುವ ತಾಕತ್ತು ಇಲ್ಲ ಎಂಬ ಅರ್ಥವಲ್ಲ’ ಎಂದು ಎಚ್ಚರಿಸಿದರು.

‘ನಮ್ಮ ಶಕ್ತಿ ಚದುರಿ ಹೋಗಿದೆ. ಕೇಂದ್ರೀಕೃತ ಹೋರಾಟ ನಡೆಯುತ್ತಿಲ್ಲ. ಒಂದೇ ನೆಲೆಗಟ್ಟಿನಲ್ಲಿ ಹೋರಾಟ ಮಾಡಬೇಕಾದ ಅನಿವಾರ್ಯ ಈಗ ನೆಲೆಸಿದೆ. ಒಂದು ಗುರಿ ಸಾಧನೆಗೆ ಎಲ್ಲರೂ ಒಂದುಗೂಡಬೇಕು. ರಾಜ್ಯದಲ್ಲಿ ರೈತರ ಹೋರಾಟ ದೊಡ್ಡಮಟ್ಟದಲ್ಲಿ ನಡೆಯಬೇಕು’ ಎಂದು ಸಲಹೆ ನೀಡಿದರು.

ರೈತ ಕೃಷಿ ಕಾರ್ಮಿಕರ ಸಂಘಟನೆಯ ರಾಜ್ಯ ಘಟಕದ ಕಾರ್ಯದರ್ಶಿ ಎಚ್‌.ವಿ. ದಿವಾಕರ್‌, ರಾಜ್ಯ ಘಟಕದ ಅಧ್ಯಕ್ಷ ಡಾ.ಟಿ.ಎಸ್‌. ಸುನೀತ್‌ಕುಮಾರ್‌, ಎಸ್‌ಯುಸಿಐ (ಸಿ) ರಾಜ್ಯ ಕಾರ್ಯದರ್ಶಿ ಕೆ. ರಾಧಾಕೃಷ್ಣ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಶೇಷಾದ್ರಿ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಕೆ. ಬಸವರಾಜು ಇದ್ದರು.

ದೇವನೂರ ಹೇಳಿದ ‘ಪರ’ದ ಕಥೆ…
ಒಂದೂರಿನಲ್ಲಿ ಅಲೆಮಾರಿನ ಜನಾಂಗದ ದೊಂಬರು ಇದ್ದರು. ಅವರು ಆಗಾಗ್ಗೆ ಎಲ್ಲರೂ ಒಟ್ಟಿಗೆ ಸೇರಿ ಊಟ ಮಾಡುವ ಸಂಪ್ರದಾಯ ಇಟ್ಟುಕೊಂಡಿದ್ದರು. ಇದಕ್ಕೆ ನಮ್ಮ ಕಡೆ ಪರ ಅಂತಾರೆ. ಕೆಲವೊಮ್ಮೆ ಇಂಥ ಆಚರಣೆಯಲ್ಲಿ ಸಮುದಾಯದ ಗರ್ಭಿಣಿಯರು, ವಯಸ್ಸಾದವರು, ಅನಾರೋಗ್ಯದಿಂದ ಬಳಲುತ್ತಿರುವವರು ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ.

ಕೂಟದಲ್ಲಿ ಪಾಲ್ಗೊಳ್ಳದವರಿಗೆ ಅವರ ಪಾಲನ್ನು ಎತ್ತಿಡುತ್ತಾರೆ. ಹಾಗೆಯೇ, ಗರ್ಭಿಣಿಯರಿಗೆ ಎರಡು ಪಾಲು ಇರುತ್ತದೆ. ಒಂದು ಅವರಿಗೆ, ಇನ್ನೊಂದು ಅವರ ಹೊಟ್ಟೆಯಲ್ಲಿರುವ ಮಗುವಿಗೆ. ಇದು ಮಾನವೀಯ ಸ್ಪಂದನೆ, ಬಂಧುತ್ವ. ಆದರೆ, ಈಗಿನ ಸಮಾಜದಲ್ಲಿ ಹಂಚಿಕೊಂಡು ತಿನ್ನುವ ಮನೋಭಾವ ಭೂತಕನ್ನಡಿ ಹಾಕಿಕೊಂಡು ಹುಡುಕಿದರೂ ಸಿಗಲ್ಲ.

_________________________________________________________________________

 ಆಂದೋಲನ ಪತ್ರಿಕಾ ವರದಿ   

                      ಬಿಲಿಯನೇರ್‍ಗಳಿಂದ ಸಮಾಜದ ಸಮತ್ವ ಧ್ವಂಸ-ಸಾಹಿತಿ ದೇವನೂರ ಮಹಾದೇವ 

ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಎಂಬ ಅಮಾನವೀಯ ಸೂಚ್ಯಂಕ ಬೆಳವಣಿಗೆ ನಮಗೆ ಬೇಕಿಲ್ಲ. ನಮಗೆ ಬೇಕಿರುವುದು ಮನುಷ್ಯತ್ವ, ಘನತೆಯ, ಮಾನವೀಯತೆಯ ಶಿಕ್ಷಣ, ಆರೋಗ್ಯ, ವರಮಾನ ಕುರಿತ `ಮಾನವ ಅಭಿವೃದ್ಧಿ ಸೂಚ್ಯಂಕ’.

-ದೇವನೂರ ಮಹಾದೇವ

ಬಿಲಿಯನೇರ್‍ಗಳಿಂದ ಸಮಾಜದ ಸಮತ್ವ, ಸಮತೋಲನ, ಸಮಾನತೆ ಧ್ವಂಸವಾಗಿದೆ. ಬಿಲಿಯನೇರ್‍ಗಳು ಮತ್ತು ನಿರ್ಗತಿಕರ ನಡುವೆ ಕಿತ್ತಾಟ
ಹಾಗೂ ತೊಯ್ದಾಟ ನಡೆಯುತ್ತಿದೆ ಎಂದು ಹಿರಿಯ ಸಾಹಿತಿ ಡಾ.ದೇವನೂರ ಮಹಾದೇವ ಆಕ್ರೋಶ ವ್ಯಕ್ತ ಪಡಿಸಿದರು.
ರೈತ ಕೃಷಿ ಕಾರ್ಮಿಕರ ಸಂಘಟನೆ (ಆರ್‍ಕೆಎಸ್) ಆಶ್ರಯದಲ್ಲಿ ನಗರದ ಕಲಾಮಂದಿರದ `ಮನೆಯಂಗಳ’ ದಲ್ಲಿ ಗುರುವಾರ ನಡೆದ
ರೈತ ಕೃಷಿ ಕಾರ್ಮಿಕರ ಸಮಸ್ಯೆಗಳ ಕಾರಣ, ಪರಿಹಾರ ಮತ್ತು ಅವರ ಹೊಣೆ ಕುರಿತ `ಕೃಷಿ ಕಿಡಿ’ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿ
ಅವರು ಮಾತನಾಡಿದರು. ಇಂದು ನಮ್ಮ ದೇಶದಲ್ಲಿ 100 ಕೋಟಿ ಡಾಲರ್‍ಗಳಿಗಿಂತ ಹೆಚ್ಚು ಆದಾಯ ಹೊಂದಿರುವ ಸಾವಿರಾರು ಬಿಲಿಯನೇರ್‍ಗಳು ಇದ್ದಾರೆ. ಬಿಲಿಯನೇರ್‍ಗಳ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, ಭಾರತ ಮೂರನೆಯ ಸ್ಥಾನದಲ್ಲಿದೆ. ಆದರೆ
ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 137 ನೆಯ ಸ್ಥಾನದಲ್ಲಿದೆ. ಇದು ವಿಪರ್ಯಾಸ. ಬಿಲಿಯನೇರ್‍ಗಳ ಸಂಪತ್ತು ಸೇರಿಸಿ ಜಿಡಿಪಿ ಬೆಳವಣಿಗೆ
ಎನ್ನುವುದು ಅಮಾನವೀಯ. ಇದರಲ್ಲಿ ಸಾಮಾಜಿಕ ಸಮತ್ವ, ಸಾಮಾಜಿಕ ಸಮತೋಲನ, ಸಾಮಾಜಿಕ ಸಮಾನತೆಯ ಕನಸನ್ನು ಧ್ವಂಸ ಮಾಡಲಾಗಿದೆ ಎಂದರು.
ಸಮಾಜದಲ್ಲಿ ನಿರ್ಗತಿಕರನ್ನು ತುಳಿಯಲಾಗುತ್ತಿದೆ ಎಂದು ನೋವಿನಿಂದ ನುಡಿದ ಅವರು, ರಾಜ್ಯಸರ್ಕಾರ ಕೂಡ ಈ ವರ್ಷದ
ಮುಂಗಡ ಪತ್ರದಲ್ಲಿ ಶಿಕ್ಷಣಕ್ಕೆ ಹಣ ಕಡಿಮೆ ಮಾಡಿದೆ. ಪ್ರಾಥಮಿಕ ಶಿಕ್ಷಣ, ಸಾರ್ವಜನಿಕ ಶಿಕ್ಷಣವನ್ನು ಖಾಸಗಿಯವರ ಬಾಯಿಗೆ ಹಾಕಿದೆ.
ಆರೋಗ್ಯ ಕ್ಷೇತ್ರವಂತೂ ಕೇಳಲೇಬೇಡಿ. ಒಬ್ಬೊಬ್ಬರದು ಒಂದೊಂದು ರೀತಿಯಾಗಿದೆ ಎಂದು ಕಿಡಿಕಾರಿದರು.
ಸಮಾಜವಾದದ ಕಾಲ ಮುಗಿದುಹೋಯಿತು. ಕಮ್ಯುನಿಸಂ ಕಾಲ ಮುಗಿದು ಹೋಯಿತು ಎಂದು ವಾದಿಸುವ ಜನ ಇದ್ದಾರೆ. ಆದರೆ, ಮನುಷ್ಯನ ಸಮಾನತೆಯ ಕನಸು, ಘನತೆಯ ತುಡಿತ ಬತ್ತಿ ಹೋಗಿಲ್ಲ. ಉರುಳಿ ಹೋಗಿಲ್ಲ; ಇದು ಅರಳಿ ಮರ ಇದ್ದ ಹಾಗೆ. ದೊಡ್ಡ ಅರಳಿ ಮರ ಬೀಳಬಹುದು. ಆದರೆ ಇದರ ಬೇರುಗಳು ಕಟ್ಟಡಗಳ ಅಡಿಪಾಯಗಳನ್ನು ದಾಟಿ ಸಾಗಿರುತ್ತವೆ. ಕಾಂಕ್ರಿಟ್ ಕಟ್ಟಡಗಳ ಸಂದಿ, ಗೊಂದಿಗಳಲ್ಲಿ, ಗೋಡೆಯ ನಡುವೆ, ಸಿಕ್ಕ ಸಿಕ್ಕ ಜಾಗದಲ್ಲೇ ಚಿಗುರುತ್ತಿರುತ್ತದೆ. ಅದೇ ರೀತಿ ಸಮಾಜವಾದ ಹಾಗೂ ಕಮ್ಯುನಿಸಂ ಚಿಗುರುತ್ತಲೇ ಮರುಹುಟ್ಟು ಪಡೆಯುತ್ತಿರುತ್ತದೆ ಎಂದರು. ದಲಿತರು, ರೈತರು, ಕಾರ್ಮಿಕರು, ಪತ್ಯೇಕವಾಗಿ ತಮ್ಮ ತಮ್ಮ ಬೇಡಿಕೆಗಳ ಈಡೇರಿಕೆಗೆ ಹೋರಾಟ ಮಾಡುವುದನ್ನು ಬಿಟ್ಟು, ಒಂದಾಗಿ ಮಾನವ ಸೂಚ್ಯಂಕಕ್ಕಾಗಿ ಹೋರಾಟ ಮಾಡಬೇಕು. ಆಲೋಚನೆ ಒಂದೇ ಆಗಿರಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಸಮಾಜವಾದಿ ಚಿಂತಕ, ಹಿರಿಯ ಗಾಂಧಿವಾದಿ ಪ.ಮಲ್ಲೇಶ್, ಎಸ್‍ಯುಸಿಐ ರಾಜ್ಯ ಕಾರ್ಯದರ್ಶಿ ಕೆ.ರಾಧಾಕೃಷ್ಣ,
ಎಸ್‍ಯುಸಿಐ ರಾಷ್ಟ್ರೀಯ ಕಾರ್ಯದರ್ಶಿ ಡಾ.ಜಯಲಕ್ಷ್ಮಿ, ಸಿಪಿಐ ಜಿಲ್ಲಾ  ಕಾರ್ಯದರ್ಶಿ ಶೇಷಾದ್ರಿ , ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಸಂಚಾಲಕ ಸಿಪಿಐಎಂನ ಕೆ.ಬಸವರಾಜು ಅವರು ಮಾತನಾಡಿದರು. ರೈತ ಕೃಷಿ ಕಾರ್ಮಿಕ ಸಂಘಟನೆಯ ರಾಜ್ಯ ಅಧ್ಯಕ್ಷ ಡಾ.ಟಿ.ಎಸ್.ಸುನಿತ್ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಹೆಚ್.ವಿ.ದಿವಾಕರ್ ಪಾಸ್ತಾವಿಕ ನುಡಿಗಳನ್ನಾಡಿದರು.