ದೇವನೂರ ಮಹಾದೇವ ಜೊತೆ ಮುಖಾಮುಖಿ -ಸಂದರ್ಶಕರು: ಅಭಿಷ್ ಕೆ ಬೋಸ್ , ಮಲಯಾಳಂ ಪತ್ರಕರ್ತ
[13 ಏಪ್ರಿಲ್
ಪ್ರ: ನೀವು ವಿದ್ಯಾರ್ಥಿಯಾಗಿದ್ದಾಗ ಆರ್.ಎಸ್.ಎಸ್ ಕಾರ್ಯಕರ್ತರಾಗಿದ್ದಿರಿ. ಮುಂದೆ 2022ರಲ್ಲಿ ನೀವು ಬರೆದ “ಆರ್.ಎಸ್.ಎಸ್ ಆಳ ಅಗಲ” ಎನ್ನುವ ಪುಸ್ತಕ ದೊಡ್ಡ ಸಂಖ್ಯೆಯ ಓದುಗರನ್ನು ಆಕರ್ಷಿಸಿತು. ಈ ಪುಸ್ತಕ ಬರೆಯುವ ಸಂದರ್ಭದಲ್ಲಿ, ನೀವು ಆರ್.ಎಸ್.ಎಸ್ ಬಗ್ಗೆ ಓದಿ ತಿಳಿದುಕೊಂಡದ್ದರ ಆಚೆಗೆ, ಆರ್.ಎಸ್.ಎಸ್ನಲ್ಲಿ ಕಾರ್ಯಕರ್ತರಾಗಿದ್ದಾಗಿನ ನಿಮ್ಮ ಅನುಭವ ಆ ಸಂಘಟನೆಯ ಒಳಮರ್ಮವನ್ನು ತಿಳಿಯುವಲ್ಲಿ ಹೇಗೆ ನೆರವಾಯಿತು? ವಿಸ್ತ್ರತವಾಗಿ ತಿಳಿಸುವಿರಾ?
• ನಾನು ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗ ಒಂದೆರಡು ವರ್ಷ ಹಾಗೂ ಪಿ.ಯು.ಸಿ. ಕಾಲದ ಒಂದು ವರ್ಷ ಆರ್ಎಸ್ಎಸ್ನಲ್ಲಿದ್ದೆ. `ಹಿಂದು ಒಂದು’ ಎಂಬ ಅವರ ಮೇಲ್ನೋಟದ ಸಮಾನತೆ ಭಾವನೆ ಇದೆಯಲ್ಲಾ ಅದು ಕಾರಣ ಇರಬಹುದು. ಆಗ ಅನುಭವಕ್ಕೆ ಬಂದ ಒಂದೆರಡು ಉದಾಹರಣೆ ಹೇಳುತ್ತೇನೆ- ಮೋಹನ್ ಅಂತ ಒಬ್ಬ ದಯಾಳು ಬ್ರಾಹ್ಮಣರ ಹುಡುಗ ಆರ್ಎಸ್ಎಸ್ನಲ್ಲಿದ್ದನು. ಅವರ ಕುಟುಂಬವೇ ಆರ್ಎಸ್ಎಸ್ ಎಂಬಂತೆ ಇತ್ತು. ಆರ್ಎಸ್ಎಸ್ ಕಛೇರಿಯಲ್ಲಾಗಲಿ ಅಥವಾ ಅವರ ಮನೆಯಲ್ಲಾಗಲಿ ಊಟ, ತಿಂಡಿ ಮಾಡಿದ ಮೇಲೆ ಆ ಮೋಹನ್ ನನ್ನ ಎಂಜಲು ತಟ್ಟೆಗಳನ್ನು ತಾನೇ ಎತ್ತಿ ತೊಳೆಯುತ್ತಿದ್ದ. ಮೇಲು ಕೀಳು ತಾರತಮ್ಯಕ್ಕೆ ತುತ್ತಾಗಿ ನರಳುತ್ತಿದ್ದವರಿಗೆ ನಮ್ಮ ಸಾಮಾಜಿಕ ವಿಷಮ ಪರಿಸ್ಥಿತಿಯಲ್ಲಿ ಇದು ಸಾಂತ್ವನದಂತೆ ಇರುತ್ತದೆ. ಆದರೆ ಆರ್ಎಸ್ಎಸ್ನವರ ಮಾತುಕತೆಯಲ್ಲಿ- ಅಂತರ್ಜಾತೀಯ ಮತೀಯ ವಿವಾಹಗಳ ಬಗ್ಗೆ ಅಸಹನೆ ಇತ್ತು. ಮುಸ್ಲಿಂ, ಕ್ರಿಶ್ಚಿಯನ್ ಧರ್ಮದವರು ಈ ವಿಚಾರದಲ್ಲಿ ಉದಾರವಾಗಿರುವಾಗ `ಹಿಂದು ಒಂದು’ ಎನ್ನುವವರಲ್ಲಿ ಹೀಗೇಕೆ ಎಂದು ಇನ್ನೂ ಮದುವೆ ವಯಸ್ಸಿಗೆ ಕಾಲಿಡದ ನನ್ನೊಳಗೂ ಗೊಂದಲ ಎಬ್ಬಿಸಿತ್ತು. ಇದು ಇರಲಿ.
ಈಗ, ಈ ಘಟನೆಗಳನ್ನು ಒಟ್ಟಿಗೆ ನೋಡಿದಾಗ ಮೋಹನ್ ಕೇಸಿನಲ್ಲಿ ಸುಧಾರಣೆಯಂತೆ ಕಂಡರೂ ಆರ್ಎಸ್ಎಸ್ನವರ ಆಲೋಚನೆಯಲ್ಲಿ ಜಾತಿಯತೆಯ ಯಥಾಸ್ಥಿತಿಯು ಆಳವಾಗಿ ಉಳಿದಿರುತ್ತದೆ. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ, ಆರ್ಎಸ್ಎಸ್ ಪರಂಪರೆಯಲ್ಲಿ ಅದರ ಕೇಂದ್ರದ ನಾಯಕತ್ವದತ್ತ ನೋಡುವುದಾದರೆ ಅದರೊಳಗೆ ಬ್ರಾಹ್ಮಣರ, ಅದರಲ್ಲೂ ಹೆಚ್ಚಾಗಿ ಬ್ರಾಹ್ಮಣರ ಒಂದು ಒಳಪಂಗಡದ ನಾಯಕತ್ವವೇ ಎದ್ದು ಕಾಣಿಸುತ್ತದೆ. ಇದನ್ನೆ ಇಂದು ಆರ್ಎಸ್ಎಸ್ ದೇಶದೆಲ್ಲೆಡೆ ಜಾರಿ ಮಾಡಲು ಹೊರಟಿದೆ. ಇದಕ್ಕೆ ಬಿಜೆಪಿ ಸಾತ್ ಕೊಡುತ್ತಿದೆ. ಒಟ್ಟಿನಲ್ಲಿ ಬ್ರಾಹ್ಮಣ್ಯದ ದ್ವಿಗಿಜಯಕ್ಕೆ ಅಶ್ವಮೇಧ ಯಾಗ!
ಆಗ ನನ್ನನ್ನು ಬೆಂಬಿಡದೆ ಕಾಡಿದ್ದು, ಈಗಲೂ ಕಾಡುತ್ತಿರುವ ಒಂದು ಅನುಭವ ಎಂದರೆ- ಆರ್ಎಸ್ಎಸ್ ಕಛೇರಿಗೆ ಆಗಾಗ ದೊಡ್ಡ ದೊಡ್ಡ ನಾಯಕರು ಬಂದು ಹೋಗಿ ಉಳಿದು ಹೋಗುತ್ತಿದ್ದರು. ಒಂದು ಸಲ, ಪೈಲ್ವಾನರಂತೆ ಇದ್ದ ಒಬ್ಬರು ಬಂದಿದ್ದರು. ಆ ದಿನ ಅವರು ತಮ್ಮ ಸುತ್ತಲೂ ಆರೇಳು ಎಳೆ ಹುಡುಗರನ್ನು ಕೂರಿಸಿಕೊಂಡು ಅದು ಇದು ಕತೆ, ಚರಿತ್ರೆ, ದೇಶಪ್ರೇಮ, ಪುರಾಣ ಇತ್ಯಾದಿ ಹೇಳುತ್ತಿದ್ದು, ಅದರ ನಡುವೆ ತಕ್ಷಣಕ್ಕೆ ನೆನಪಿಸಿಕೊಂಡವರಂತೆ, ಪಿಸುದನಿಯಲ್ಲಿ- `ನನ್ನ ಜೀವನದ ಆಸೆ ಒಂದಿತ್ತು, ನಮ್ಮ ಮಾತೃಭೂಮಿಯನ್ನು ಸರ್ವನಾಶ ಮಾಡಿದ ಮುಸಲ್ಮಾನೊಬ್ಬನ ರಕ್ತ ಹರಿಸಿ ಈ ಭೂಮಿಗೆ ಆಹುತಿ ಕೊಡಬೇಕೆಂಬ ಆಸೆ. ಆ ಅಮೃತಗಳಿಗೆ ನನಗೆ ಎದುರಾಯ್ತು. ನಿರ್ಜನವಾದ ದಾರಿಯಲ್ಲಿ ಒಬ್ಬ ತುರುಕ ನಡೆದುಕೊಂಡು ಬರುತ್ತಿದ್ದ. ಇದೇ ಸುಸಮಯ ಎಂದು ಚಾಕುವಿನಿಂದ ಅವನನ್ನು ಒಂದೇ ಏಟಿಗೆ ಕೊಂದೆ. ನಾನು ಹುಟ್ಟಿದ್ದಕ್ಕೆ ನನ್ನ ಜೀವನ ಸಾರ್ಥಕ ಅನ್ನಿಸಿತು’- ಇದು ಅವರ ಮಾತುಗಳು. ಇಡೀ ವಾತಾವರಣವು ಸಮ್ಮೋಹನಕ್ಕೆ ಒಳಗಾದಂತೆ ಇತ್ತು. ಇದ್ದಕ್ಕಿದ್ದಂತೆ ನನ್ನ ಮನಸ್ಸೊ, ಪ್ರಜ್ಞೆಯೋ ಆ ವಾತಾವರಣದಿಂದ ನೆಗೆದು ದೂರ ನಿಂತು ಎಲ್ಲವನ್ನು ನೋಡತೊಡಗಿತು. ಆಗ ನನಗೆ ಅನ್ನಿಸುತ್ತಿತ್ತು ಹೀಗೆ- “ಅವರನ್ನು ನೋಡಿದರೆ ಕೊಲೆ ಮಾಡಿದವರು ಅಂತ ಅನ್ನಿಸುತ್ತಿಲ್ಲ. ಸತ್ಯದ ತಲೆಗೆ ಹೊಡೆದು ಸುಳ್ಳು ಹೇಳುತ್ತಿದ್ದಾರೆ ಅನ್ನಿಸುತ್ತಿದೆ. ಆದರೆ ಯಾಕಾದರು ಈ ಸುಳ್ಳು? ಹಾಗಾದರೆ ಮುಸ್ಲಿಮರನ್ನು ಕೊಲೆ ಮಾಡುವಂತಹ ಭಾವನೆ ನಮ್ಮೊಳಗೆ ಉಂಟಾಗುವಂತೆ ಪ್ರೇರೇಪಿಸುತ್ತಿದ್ದಾರೆಯೇ?”- ಆಗ ಈ ಪ್ರಶ್ನೆ ನನಗೆ ಬಗೆಹರಿಯಲಿಲ್ಲ. ಈಗಲೂ ಬಗೆಹರಿದಿಲ್ಲ. ಅಥವಾ, ಇದು ಗುಪ್ತ ಅಜೆಂಡಾ ಸಂಘಟನೆಗಳ ಬೋಧನಾ ವಿಧಾನ ಇರಬಹುದೆ?
ಸುದೈವಕ್ಕೆ ನಾನು ಪಿ.ಯು.ಸಿ. ಫೇಲಾಗಿ ಊರಿಗೆ ಬಂದೆ. ನಮ್ಮೂರಿಗೆ ಒಂದೇ ಒಂದು ಪ್ರಜಾವಾಣಿ ಪತ್ರಿಕೆ ಬರುತ್ತಿತ್ತು. ಒಂದು ದಿನ ಡಾ.ರಾಮಮನೋಹರ ಲೋಹಿಯಾ ಕಾಲವಶರಾದ ಸುದ್ದಿ, ಪತ್ರಿಕೆಯಲ್ಲಿ ಪ್ರಧಾನವಾಗಿ ಪ್ರಕಟವಾಗಿತ್ತು. ಲೋಹಿಯಾ ಬಗ್ಗೆ ವಿಶೇಷ ಲೇಖನಗಳೂ ಇದ್ದವು. ನಾನು ತುಂಬಾ ಪ್ರಭಾವಕ್ಕೆ ಒಳಗಾದೆ. ಲೋಹಿಯಾ ಕಾಲವಶವಾದ ದಿನ ನಾನು ಸ್ವಯಂಘೋಷಿತ ಸಮಾಜವಾದಿಯಾದೆ. ಆ ಸಂದರ್ಭದಲ್ಲೇ ನನಗೆ ಕತೆಗಾರರಾದ ಸೂ.ರಮಾಕಾಂತ, ಶ್ರೀಕೃಷ್ಣ ಆಲನಹಳ್ಳಿಯವರ ಗೆಳೆತನ ಸಿಕ್ಕಿತು. ಇದೆಲ್ಲಾ ಸೇರಿ ನಾನು ಇಂದು ಏನಾಗಿದ್ದೇನೆ, ಅದಾಗಿದ್ದೇನೆ.
ಪ್ರ: ಸಾಹಿತ್ಯ ಲೋಕಕ್ಕೆ ಮಹತ್ವದ ಕೊಡುಗೆಗಳಾದ ನಿಮ್ಮ ಕೆಲವೇ ಕೆಲವು ಕತೆ, ಕಾದಂಬರಿಗಳಲ್ಲಿ ನೀವು ದಲಿತರ ಬದುಕಿನ ಸೂಕ್ಷ್ಮ ಅನುಭವಗಳನ್ನು ಅದ್ಭುತವಾಗಿ ಸೆರೆ ಹಿಡಿದಿದ್ದೀರಿ. ಮೇಲ್ಜಾತಿಯ ಹುಡುಗಿಯನ್ನು ಪ್ರೇಮಿಸಿದ್ದಕ್ಕಾಗಿ ಕೊಲೆಯಾಗಿ ಹೋದ ‘ಕುಸುಮಬಾಲೆ’ಯ ಚೆನ್ನನ ಕತೆ, ಭಾರತದಲ್ಲಿ ಮೇಲ್ಜಾತಿಯವರು ನಡೆಸುವ ಮರ್ಯಾದೆಗೇಡು ಹತ್ಯೆಯ ವಿಚಾರವನ್ನು ಓದುಗರ ಮುಂದೆ ತೆರೆದಿಡುತ್ತದೆ. ಈ ಕೃತಿಯನ್ನು ನೀವು ರಚಿಸಿದ್ದು 1988ರಲ್ಲಿ. ಆ ನಂತರ ಅಂದರೆ 1988 ಮತ್ತು2024ರ ನಡುವೆ ದೇಶದಲ್ಲಿ ದಲಿತರ ಬದುಕಿನಲ್ಲಿ ಎದ್ದು ಕಾಣುವ ಪರಿವರ್ತನೆಗಳೇನಾದರೂ ಆಗಿವೆಯೇ?
• ನೀವು ಈ ಪ್ರಶ್ನೆ ಕೇಳಬೇಕಾದ್ದು ನನಗಲ್ಲ, ಯಾರು ಇವುಗಳನ್ನು ಓದಿದ್ದಾರೋ ಅವರಿಗೆ. ಯಾರೋ ಒಬ್ಬ ಲೇಖಕ, ಕಲಾವಿದ ಯಾವುದೋ ಕಾಲದವನು, ತಾನು ಮುಳುಗುತ್ತ ಏಳುತ್ತ ತೇಲುತ್ತ ಚಲಿಸುತ್ತಿರುವ ಜೀವನ ಪ್ರವಾಹದಲ್ಲಿ ಕಂಡುಂಡ ಒಂದಿಷ್ಟನ್ನು, ತಳಮಳಿಸಿದ ಸಂವೇದನೆಗಳನ್ನು ಅಭಿವ್ಯಕ್ತಿಸಿರುತ್ತಾನೆ. ಉದಾಹರಣೆಗೆ- ಮಾದಾರ ಧೂಳಯ್ಯ ಎಂಬ ಹನ್ನೆರಡನೆ ಶತಮಾನದ ವಚನಕಾರ. ಆತ ಚಮ್ಮಾರ. ಈತ ಚಪ್ಪಲಿ ಹೊಲಿಯುತ್ತಿರುವಾಗ, ಅವನು ಕೈಲಿ ಹಿಡಿದಿದ್ದ ದಬ್ಬಳದ ತುದಿಯ ಮೇಲೆ ದೇವರು ಪ್ರತ್ಯಕ್ಷನಾಗಿ ಸ್ಮೈಲ್ ಕೊಡುತ್ತಾನೆ. ಆಗ ಮಾದಾರ ಧೂಳಯ್ಯ ಹೇಳುತ್ತಾನೆ- “ನನ್ನತ್ರ ಬಂದು ಯಾಕಪ್ಪ ಹಲ್ಲು ಕಿರಿತಿದ್ದೀಯಾ? ನಿನ್ನನ್ನು ಪೂಜೆ ಮಾಡೋರು, ಸ್ತುತಿ ಮಾಡೋರು ಸುಮಾರು ಜನರಿದ್ದಾರೆ, ಅಲ್ಲಿಗೆ ಹೋಗು. ಇಲ್ಲಿಗೆ ಬಂದು ನನ್ನ ಕೆಲಸಕ್ಕೆ ತೊಂದರೆ ಕೊಡಬೇಡ’ ಅಂತಾನೆ. ಇದು ಆ ವಚನದ ಸಾರ. ಹೇಳಿ ಈಗ, 12ನೇ ಶತಮಾನಕ್ಕೂ, 21ನೆಯ ಶತಮಾನಕ್ಕೂ ಏನು ಬದಲಾವಣೆ ಎಂದು ಕೇಳಿದರೆ ನಾನೇನು ಹೇಳಲಿ? ಆ ವಚನ- ವರ್ತಮಾನವಲ್ಲವೆ? ಒಂದು ಕಲಾಕೃತಿಯಲ್ಲಿ ದರ್ಶಿಸಬೇಕಾದ್ದು- ದಿನಾಂಕಗಳನ್ನಲ್ಲ, ಘಟನಾವಳಿಗಳನ್ನೂ ಅಲ್ಲ, ಬದಲಿಗೆ ಆ ಕೃತಿಯ ಸಂವೇದನೆಗಳನ್ನು.
ಪ್ರ: ಗೌರಿ ಲಂಕೇಶ್, ಕಲ್ಬುರ್ಗಿ, ದಾಬೋಳ್ಕರ್ ಮತ್ತು ಪಾನ್ಸಾರೆ ಮುಂತಾದವರ ಕೊಲೆಗಳು ಹಿಂದೂ ಧರ್ಮೀಯರು ಹೆಚ್ಚು ಹೆಚ್ಚು ಮೂಲಭೂತವಾದಿಗಳಾಗುತ್ತಿರುವುದರ ದ್ಯೋತಕವೇ? ಹೌದಾಗಿದ್ದರೆ, ಇವುಗಳನ್ನು ಹೇಗೆ ಅರ್ಥೈಸುತ್ತೀರಿ?
• ದಾಬೋಳ್ಕರ್, ಕಲ್ಬುರ್ಗಿ, ಗೌರಿ, ಪಾನ್ಸಾರೆಯವರ ಕೊಲೆಗಳು ಮನುಷ್ಯರು ಮಾಡುವ ಕೊಲೆಗಳಲ್ಲ. ಇವು ಸೈದ್ಧಾಂತಿಕ ಕೊಲೆಗಳು. ಯಾರೋ ಯಾರಿಂದಲೊ ಮಾಡಿಸಿದ ಕೊಲೆಗಳು. ಮನುಷ್ಯರನ್ನು ಆಯುಧವಾಗಿ ಪರಿವರ್ತಿಸಿ ಮಾಡಿಸಿದ ಕೊಲೆಗಳು. ದೈವದ ಭಕ್ತಿ ಮತ್ತು ದೇಶಭಕ್ತಿಯನ್ನು ದುರುಪಯೋಗಪಡಿಸಿಕೊಂಡು ಮಾಡಿಸಿದ ಕೊಲೆಗಳು. `ಯಾಕೆ ಗೌರಿಯನ್ನು ಕೊಂದೆ?’ ಎಂದು ಕೇಳಿದಾಗ, ಆ ಕೊಂದವನು ಹೇಳುತ್ತಾನೆ- “ನಾನು ದೇವರ ಭಕ್ತ. ನನ್ನ ಗುರುಗಳಂತಿದ್ದವರು ಒಂದು ದಿನ, ಗೌರಿ ಎಂಬಾಕೆ ನನ್ನ ದೇವರನ್ನು ಹಿಗ್ಗಾಮುಗ್ಗಾ ಬೈದಿರುವ ಸುದ್ದಿಯನ್ನು ತೋರಿಸಿದರು. ಈ ದೈವ ವಿರೋಧಿಯನ್ನು ಉಳಿಸಬಾರದು ಅನ್ನಿಸಿತು” ಎನ್ನುತ್ತಾನೆ. ಆ ಸಿದ್ಧಾಂತಿ ಗುರುಗಳು ತನ್ನ ಭಕ್ತರಿಗೆ ಸುದ್ದಿ ಓದಿಸುತ್ತಾರೆ, ಕೊಲ್ಲಬೇಕಾದವರ ಫೋಟೋ ತೋರಿಸುತ್ತಾರೆ ಅಷ್ಟೆ! ಭಕ್ತ ತನ್ನ ಸ್ವಯ ಕಳೆದುಕೊಳ್ಳುತ್ತಾನೆ. ಮುಂದಿನದು ಜರುಗುತ್ತದೆ. ಬಹುಶಃ ಹೀಗೆ ಆಗುತ್ತಿರಬಹುದು ಅನ್ನಿಸುತ್ತದೆ. ಇಲ್ಲಿ ದಾಬೋಳ್ಕರ್, ಗೌರಿ, ಕಲ್ಬುರ್ಗಿ, ಪಾನ್ಸಾರೆ ಪ್ರಾಣ ಕಳೆದುಕೊಂಡರು. ಕೊಲೆ ಮಾಡಿದಾತ ಆಯುಧವಾಗಿ ಯಾರದೋ ಸಂಚಿಗೆ ಬಲಿಪಶುವಾದ. ಇದಕ್ಕೆ ಮೂಲವಾದ ಆ ಸೈದ್ಧಾಂತಿಕ ಗುರು ಅನ್ನಿಸಿಕೊಂಡವನು ತನ್ನ ಆತ್ಮವನ್ನೆ, ಪ್ರಜ್ಞೆಯನ್ನೆ ಕೊಂದುಕೊಂಡು ಅಮಾನವೀಯನಾಗಿ ಕೊಲೆ ಮಾಡಿಸುತ್ತಿರುತ್ತಾನೆ. ಅದಕ್ಕೆ ನಾನು ಮೊದಲು ಹೇಳಿದ್ದು, ಇದು ಮನುಷ್ಯರು ಮಾಡಿದ ಕೊಲೆ ಅಲ್ಲ ಅಂತ. ಈ ಸಂದರ್ಭದಲ್ಲಿ ಪ್ರಬುದ್ಧ ಚಿತ್ರನಟ ಪ್ರಕಾಶ್ರಾಜ್ ಅವರು ಹೇಳಿದ- `ನಾವು ಗೌರಿಯನ್ನು ಮಣ್ಣಿಗೆ ಹೂಳಲಿಲ್ಲ, ಬಿತ್ತಿದೆವು’ ಮಾತು ನೆನಪಾಗುತ್ತಿದೆ.
ಇದಕ್ಕೆಲ್ಲ ಮೂಲ ಹುಡುಕುತ್ತ ನಡೆದರೆ ಅದು ಆರ್ಎಸ್ಎಸ್ನವರ ದೇವರ ಸಾಕ್ಷಾತ್ಕಾರಕ್ಕೆ ಬಂದು ನಿಲ್ಲುತ್ತದೆ. ಆರ್ಎಸ್ಎಸ್ನ ಸರಸಂಘ ಸಂಚಾಲಕ ಶ್ರೀ ಗೋಳ್ವಾಲ್ಕರ್ ಅವರು- `ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ಚಾತರ್ವರ್ಣದ ಸಮಾಜವನ್ನು ಸ್ಥಾಪಿಸುವುದೇ ದೇವರ ಸಾಕ್ಷಾತ್ಕಾರ’ ಎನ್ನುತ್ತಾರೆ. ಈ ಗುರುವಾಕ್ಯವನ್ನು ಆರ್ಎಸ್ಎಸ್ ಮತ್ತು ಅದರ ಕೈಗೊಂಬೆ ಬಿಜೆಪಿ ಸರ್ಕಾರವು ಪ್ರತಿಷ್ಠಾಪಿಸಲು ಹೊರಟಿರುವುದರ ಭಾಗವಾಗಿಯೇ ಈ ರೀತಿ ಕೊಲೆಗಳು, ಅಸಹನೆ, ದ್ವೇಷ ಇತ್ಯಾದಿ.
ಇದನ್ನು ನೋಡಿದಾಗ- ಆರ್ಎಸ್ಎಸ್ನವರಿಗೆ ರಾಮ, ಕೃಷ್ಣ, ಶಿವ, ಶಕ್ತಿ ಮುಂತಾದ ದೈವಗಳಲ್ಲಿ ನಿಜವಾದ ಭಕ್ತಿ ಇದೆಯೆ? ಇಲ್ಲ ಅನ್ನಿಸುತ್ತಿದೆ. ಈ ದೈವಗಳ ನಂಬುವವರನ್ನು ವಶಪಡಿಸಿಕೊಂಡು, ತಮ್ಮ ಚಾತರ್ವರ್ಣ ಸಮಾಜದ ದೇವರನ್ನು ಪ್ರತಿಷ್ಠಾಪಿಸುವ ಹುನ್ನಾರ ಇವರದು ಎಂದನ್ನಿಸುತ್ತದೆ.
ಪ್ರ: ಅಂಚಿನ ಸಮುದಾಯಗಳಾದ ದಲಿತ, ಅಲ್ಪಸಂಖ್ಯಾತ ಮತ್ತು ಬುಡಕಟ್ಟು ಜನರನ್ನು ಮತ್ತು ಮಹಿಳೆಯನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳಲು ಆರ್.ಎಸ್.ಎಸ್. ಮತ್ತು ಬಿಜೆಪಿ ಯಾವ ರೀತಿಯ ತಂತ್ರಗಳನ್ನು ಅನುಸರಿಸುತ್ತಿವೆ? ಹಾಗೂ ಸಂಘ ಪರಿವಾರ ಈ ವರ್ಗಗಳನ್ನು ಸೆಳೆಯಲು ಗಂಭೀರವಾಗಿ ಕಾರ್ಯಪ್ರವೃತ್ತರಾಗಿರುವ ಹಿನ್ನೆಲೆಯಲ್ಲಿ ಸಂಘ ಪರಿವಾರದ ಜತೆ ಸೇರಿಕೊಳ್ಳುತ್ತಿರುವ ಈ ಜನ ಸಮೂಹಗಳು ಮುಂದೆ ಎಂತಹ ಪರಿಣಾಮಗಳನ್ನು ಎದುರಿಸಬೇಕಾದೀತು?
ಆರ್ಎಸ್ಎಸ್ ಮತ್ತು ಬಿಜೆಪಿಗಳು ಅವರವರ ಭಾವಕ್ಕೆ ತಕ್ಕಂತೆ ವೇಷ ಹಾಕುತ್ತವೆ. ಆದಿವಾಸಿಗಳನ್ನು `ವನವಾಸಿ’ಗಳನ್ನಾಗಿಸಿ, ಅವರು ನಮ್ಮೆಲ್ಲರ ಮಾತೃಪಿತೃಗಳು ಎಂಬ ಸತ್ಯವನ್ನೆ ಮರೆಮಾಚಿ ಅವರನ್ನು ಅವರ ಹಕ್ಕುಗಳಿಂದ ವಂಚಿಸುತ್ತದೆ. ಮಹಿಳೆಯರನ್ನು ಸ್ತುತಿ ಮಾಡುತ್ತ ಮನೆಯಲ್ಲೆ ಇರುವಂತೆ ನೋಡಿಕೊಳ್ಳುತ್ತದೆ. ಇನ್ನು ದಲಿತರನ್ನು ತನ್ನವರೆಂದೇ ಹೇಳುತ್ತ, ಅವರಿಗಿದ್ದ ಅವಕಾಶಗಳನ್ನೆಲ್ಲ ಸಿಗದಂತೆ ಮಾಡಿ ವಂಚಿತರನ್ನಾಗಿಸುತ್ತದೆ. ಇವರನ್ನೆಲ್ಲಾ ಬಳಸಿ ಬಿಸಾಕುತ್ತದೆ, ಸಹಭಾಗಿಗಳನ್ನಾಗಿಸಿಕೊಳ್ಳುವುದಿಲ್ಲ. ಇದೇ ಕತೆ- ಮಧ್ಯಮ ಜಾತಿ(ಮಾಜಿ ಶೂದ್ರ)ಗಳದ್ದೂ ಕೂಡ. ಇವರೆಲ್ಲಾ ನಿರುದ್ಯೋಗಿ ಯುವಕರು ತಾನೆ? ಇವರು ತಮ್ಮನ್ನು ಬೇಯಿಸುತ್ತಿರುವ ಉದ್ಯೋಗದ ಸಮಸ್ಯೆ ಕಡೆಗೆ ಕಣ್ಣೆತ್ತೂ ನೋಡುತ್ತಿಲ್ಲ. ಇವರು ತಮ್ಮ ಹಕ್ಕುಗಳನ್ನೂ ಕೇಳುತ್ತಿಲ್ಲ. ಇವರೆಲ್ಲರೂ ಆರ್ಎಸ್ಎಸ್ನ ಥರಾವರಿ ವೇಷ, ಮೋಸಕ್ಕೆ ಬಲಿಯಾಗುತ್ತಿದ್ದಾರೆ. ಇಂಥವರು ಜೈಜೈ ಅನ್ನುತ್ತ ಮತ್ತೆ ಚಾತರ್ವರ್ಣ ಪದ್ಧತಿಯ ಶೂದ್ರ ಸೇವಕರಾಗುವತ್ತ ನಡೆಯುತ್ತಾರೆ.
ಹೀಗೆಯೇ ಆರ್ಎಸ್ಎಸ್ನ ಥಿಂಕ್ಟ್ಯಾಂಕ್ ಏನು ಮಾಡುತ್ತದೆ ಎಂದರೆ… ಅಲ್ಪಸಂಖ್ಯಾತರಾದ ಮುಸ್ಲಿಂ ಕ್ರಿಶ್ಚಿಯನ್ ಸಮುದಾಯಗಳನ್ನು ಭಯೋತ್ಪಾದಕರೆಂಬಂತೆ ತೋರಿಸುತ್ತ, ನಮ್ಮ ಕಷ್ಟ ಸಮಸ್ಯೆಗಳಿಗೆಲ್ಲಾ ಇವರೇ ಕಾರಣ ಎಂದು ಕತೆಗಳ ಕಟ್ಟಿ ಹೇಳುತ್ತ ದ್ವೇಷ ಹುಟ್ಟಿ ಹಾಕುತ್ತದೆ. ಈ ದ್ವೇಷವೇ ಇವರ ಬಂಡವಾಳ. ಈ ದ್ವೇಷವೇ ಇವರ ಎನರ್ಜಿ ಟಾನಿಕ್. ಈ ಜಾತಿಮತಗಳ ನಡುವೆ ದ್ವೇಷ ಇಲ್ಲದೆ ಸಮಾಜದಲ್ಲಿ ಪ್ರೀತಿ, ಸಹನೆ, ಸಹಬಾಳ್ವೆ ಉಂಟಾದ ಆ ದಿನ ಭೂತಕಾಲದವರು ಇಲ್ಲವಾಗುತ್ತಾರೆ. ಆಗ ನಾವು ವರ್ತಮಾನಕ್ಕೆ ಮುಖಾಮುಖಿಯಾಗುತ್ತೇವೆ. ಇದು ಅರಿವಾದರೆ ನಾವು ಮಾಡಬೇಕಾದ ಕೆಲಸ ಕರ್ಯಗಳು ನಮಗೆ ತಿಳಿಯುತ್ತದೆ.
ಹೀಗೆಲ್ಲಾ ಇಷ್ಟೆಲ್ಲಾ ಮಾಡುತ್ತ ಆರ್ಎಸ್ಎಸ್, ಬಿಜೆಪಿ ತಾವು ಮಾಡಬಹುದಾದ್ದನ್ನೆಲ್ಲಾ ಈಗಾಗಲೇ ಅತಿ ಎನ್ನಿಸುವಷ್ಟು ಮಾಡಿ ಮುಗಿಸಿಬಿಟ್ಟಿದ್ದಾರೆ, ಆ ಅತಿಯು ತುದಿ ಮುಟ್ಟಿ ಈಗ ಕೆಳಗಿಳಿಯುತ್ತಿದೆ. ಇಂದು ಎಲ್ಲರೂ ಚಳಿ ಬಿಟ್ಟವರಂತೆ ಚೇತರಿಸಿಕೊಂಡು ಈಗೀಗ ಮಾತಾಡುತ್ತಿದ್ದಾರೆ. ಇದು ಪ್ರತಿರೋಧವಾಗಿ ಪರಿಣಮಿಸುತ್ತದೆ, ಸಹಜವಾಗಿ. ಇತ್ತೀಚೆಗೆ ಹೆಚ್ಚು ಅನ್ನಿಸುವಷ್ಟು ಪ್ರತಿರೋಧ ಆರಂಭವಾಗಿದೆ.
ಪ್ರ: ಹಿಂದೂ ಧರ್ಮ ಮತ್ತು ಅದರ ವಿವಿಧ ಗುರುತು, ಸಂಕೇತಗಳನ್ನು ಸಂಘ ಪರಿವಾರದವರು ಬಳಸಿಕೊಳ್ಳುವ ಮೂಲಕ ತಮ್ಮ ರಾಜಕೀಯ ಬೆಂಬಲವನ್ನು ವೃದ್ಧಿಸಿಕೊಳ್ಳುತ್ತಿದ್ದಾರೆ. ಈಗ ವಿರೋಧ ಪಕ್ಷಗಳೂ ಜಾತಿ ಮತ್ತು ಧರ್ಮಗಳನ್ನು ಬಳಸಿಕೊಳ್ಳುವ ಮೂಲಕ ಸಂಘಪರಿವಾರದ ಯೋಜನೆಯನ್ನು ವಿಫಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಈ ಸಾಂಪ್ರದಾಯಿಕ ತಂತ್ರಗಳಷ್ಟೇ ಸಾಕಾಗುತ್ತವೆಯೇ?
• ಚಾತರ್ವರ್ಣ ಹಿಂದುತ್ವದ ಆರ್ಎಸ್ಎಸ್ ಎಂಬ ಅಲ್ಪ ಸಂಘಟನೆಯು, ವಿಶಾಲವಾದ ಹಿಂದೂ ಧರ್ಮಗಳನ್ನು ಅವರ ಮೌಲ್ಯಗಳನ್ನು, ಲಾಂಛನಗಳನ್ನು ತನ್ನದೆಂದು ಬಿಂಬಿಸಿಕೊಳ್ಳುತ್ತ, ಪ್ರದರ್ಶಿಸುತ್ತ ತಾನೇ ಸಮಸ್ತ ಹಿಂದೂ ಧರ್ಮಗಳ ಪ್ರತಿನಿಧಿ ಎಂಬಂತೆ ಜನರಿಗೆ ಮಂಕುಬೂದಿ ಎರಚುತ್ತಿದೆ. ಇದನ್ನೆಲ್ಲಾ ತನ್ನ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ಕುಟಿಲ ರಾಜಕಾರಣದಲ್ಲಿ ಅವರು ಪರಿಣಿತರು. ಅವರೊಳಗೆ ಕುಟಿಲತೆಯಲ್ಲಿ ಚಾಣಕ್ಯರು ಅನ್ನಿಸಿಕೊಂಡವರೂ ಇದ್ದಾರೆ. ಅವರಿಗೆಲ್ಲಾ ತರಬೇತಿಯೂ ಆಗಿದೆ. ಉಳಿದವರೂ ಇದನ್ನೆ ನಕಲು ಮಾಡಲು ನೋಡಿದರೆ ಅಪಹಾಸ್ಯಕ್ಕೆ ಒಳಗಾಗುತ್ತಾರೆ. ಇಲ್ಲಿ ನಾವು ಹೇಳಬೇಕಾದ್ದು ಇಷ್ಟೆ: ದೇವರು ಧರ್ಮ ನಮ್ಮ ನಮ್ಮ ಮನೆಗಳಲ್ಲಿ ಇರಲಿ. ಬೀದಿಗೆ ಬಿದ್ದರೆ ಅವು ದೆವ್ವಗಳಂತಾಗಲೂಬಹುದು. ಈ ಎಚ್ಚರ ನಮಗೆ ಬೇಕಾಗಿದೆ. ಹಾಗೂ ಇನ್ನೊಂದು ಎಚ್ಚರ: ಸಂವಿಧಾನ, ಸಹಭಾಗಿ ಪ್ರಜಾಪ್ರಭುತ್ವ, ಒಕ್ಕೂಟ ವ್ಯವಸ್ಥೆ, ಸ್ವಾಯತ್ತ ಸಂಸ್ಥೆಗಳ ಸ್ವಾಯತ್ತತೆ ಕಾಪಾಡುವುದು, ಸಾರ್ವಜನಿಕ ಸಂಪತ್ತನ್ನು ಉಳಿಸಿಕೊಳ್ಳುವುದು, ಅರಣ್ಯ ಕೃಷಿಗೆ ಉತ್ತೇಜನ, ಸ್ವಾಮಿನಾಥನ್ ಬೆಂಬಲ ಬೆಲೆ ಅನುಷ್ಠಾನ, ಆರೋಗ್ಯ ಮತ್ತು ಶಿಕ್ಷಣಕ್ಕೆ ಆದ್ಯತೆ, ಉದ್ಯೋಗ ಸೃಷ್ಟಿ, ಬೆಲೆ ಏರಿಕೆ ನಿಯಂತ್ರಣ- ಇಂತವುಗಳತ್ತ ನಾವು ನಡೆಯಬೇಕಾಗಿದೆ.
ಪ್ರ: ನೀವು 2024ರ ಲೋಕಸಭಾ ಚುನಾವಣೆಯನ್ನು ಹೇಗೆ ನೋಡುತ್ತೀರಿ? ನಿಮ್ಮ ಪ್ರಕಾರ ಈ ಚುನಾವಣೆಯ ಮಹತ್ವ ಏನು?
• ಇತ್ತೀಚೆಗೆ ಏಪ್ರಿಲ್ ತಿಂಗಳಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿಯವರನ್ನು ಪತ್ರಿಕೆಯವರು ನಿಮ್ಮ ಕಾರ್ಯಸೂಚಿ ಏನು ಎಂದು ಪ್ರಶ್ನಿಸಿದಾಗ ನಿತಿನ್ ಗಡ್ಕರಿಯವರು ಹೀಗೆ ಹೇಳುತ್ತಾರೆ- “ನನಗೆ ವ್ಯಕ್ತಿಗತವಾಗಿ ಯಾವ ಕರ್ಯಸೂಚಿಯೂ ಇಲ್ಲ; ಕರ್ಯಸೂಚಿ ಏನು ಅನ್ನುವುದನ್ನು ಆರ್ಎಸ್ಎಸ್ ಹೇಳುತ್ತದೆ. ಅದನ್ನು ಈಡೇರಿಸುವುದು ನಮ್ಮ ಜವಾಬ್ದಾರಿ ಆಗಿದೆ” ಎಂದು ಹೇಳುತ್ತಾರೆ. ಇವರು ತನ್ನ ಪಕ್ಷ ಬಿಜೆಪಿಯು ಕರ್ಯಸೂಚಿ ರೂಪಿಸುತ್ತದೆ ಎಂದು ಹೇಳಿದ್ದರೂ ಅದನ್ನು ಅರ್ಥ ಮಾಡಿಕೊಳ್ಳಬಹುದಿತ್ತು. ಬದಲಿಗೆ ಆರ್ಎಸ್ಎಸ್ ರೂಪಿಸುವ ಕಾರ್ಯಸೂಚಿಯಂತೆ ನಡೆದುಕೊಳ್ಳುತ್ತೇನೆ ಎನ್ನುತ್ತಾರೆ! ಇದರ ಅರ್ಥ ಇಷ್ಟೆ: ಆರ್ಎಸ್ಎಸ್ ಕೈಗೊಂಬೆಯಾದ ಬಿಜೆಪಿಯವರು ಪ್ರಜಾಪ್ರಭುತ್ವಕ್ಕೆ ಅನರ್ಹರು ಹಾಗೂ ಆಳ್ವಿಕೆ ನಡೆಸಲೂ ಅನರ್ಹರು.
ಈ ಆರ್ಎಸ್ಎಸ್ ಲೆಕ್ಕಕ್ಕೆ ಸಿಗದ ಒಂದು ಸಂವಿಧಾನೇತರ ಸಂಘ. ಅದರ ಮುಖ್ಯ ಕರ್ಯಸೂಚಿ-ಚಾತರ್ವರ್ಣವನ್ನೇ ದೇವರೆಂದುಕೊಂಡು ಆ ಚಾತರ್ವರ್ಣದ ಸಮಾಜ ನಿರ್ಮಾಣ ಮಾಡುವುದು; ಇದಕ್ಕೆ ತಡೆಯಾಗಿರುವ ಭಾರತದ ಸಂವಿಧಾನವನ್ನು ಧ್ವಂಸ ಮಾಡುವುದು. ಅಂದರೆ ಆರ್ಎಸ್ಎಸ್ ಪಾದಗಳು ಹಿಮ್ಮುಖವಾಗಿವೆ. ಭೂತಕಾಲದೆಡೆಗೆ ನಡೆಯುವ ಪಾದಗಳು ಇವು. ಇಂತಹ ಭೂತಕಾಲದ ಆರ್ಎಸ್ಎಸ್ ಕೈಗೊಂಬೆಯಾದ ಬಿಜೆಪಿಯವರು, ಆರ್ಎಸ್ಎಸ್ ಕರ್ಯಸೂಚಿಗೆ ಬದ್ಧರಾದ ಬಿಜೆಪಿಯವರು ಹೇಗೆ ತಾನೇ ಪ್ರಜಾಪ್ರತಿನಿಧಿಗಳಾಗುತ್ತಾರೆ? ಚರಿತ್ರೆಯನ್ನು ಹಿಂದಕ್ಕೊಯ್ಯುವ ಬಿಜೆಪಿಯ ಭೂತದ ರಾಜಕಾರಣವನ್ನು ತಡೆಗಟ್ಟಬೇಕಾಗಿರುವುದೇ ನಮ್ಮೆಲ್ಲರ ಮುಂದಿರುವ ಇಂದಿನ ಸವಾಲು.
ಪ್ರ: ನೀವು ‘ಎದ್ದೇಳು ಕರ್ನಾಟಕ’ದಲ್ಲಿ ಸಕ್ರಿಯವಾಗಿದ್ದೀರಿ. 2023ರ ಕರ್ನಾಟಕ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ತಮಗಾದ ಅನುಭವ ಏನು ಅಂತ ಹೇಳುತ್ತೀರಾ?
• ನಾನು ಭಾರತ್ ಜೋಡೊ ಅಭಿಯಾನ್ ಸದಸ್ಯ. ಇದು ಒಂದು ಸಂಘಟನೆಯಂತೆ ಅಲ್ಲ. ಇದೊಂದು ತಿಚಿve. ಹಾಗಾಗಿ ನಾವು ಸಮಾಜಮುಖಿ ಎಲ್ಲಾ ಸಂಘಟನೆಗಳೊಡನೆ ಬೆರೆತು ಕೆಲಸ ಮಾಡುತ್ತೇವೆ. ನಾನು ಕಳೆದ 2023ರ ಚುನಾವಣೆಯಲ್ಲಿ ದಲಿತ ಸಂಘರ್ಷ ಸಮಿತಿ ಒಕ್ಕೂಟ, ಎದ್ದೇಳು ಕರ್ನಾಟಕ, ರೈತ ಸಂಘಟನೆಗಳೊಡನೆ ಜೊತೆಗೂಡಿ ಕೆಲಸ ಮಾಡಿದೆ. ಎದ್ದೇಳು ಕರ್ನಾಟಕವು ಪರಿಣಾಮಕಾರಿಯಾಗಿ ಪ್ರಚಾರ ಕಾರ್ಯ ಮಾಡಿದೆ. ದಲಿತ ಸಂಘರ್ಷ ಸಮಿತಿ ಒಕ್ಕೂಟ, ರೈತ ಸಂಘವು ತಳಮಟ್ಟದಲ್ಲಿ ಪರಿಣಾಮಕಾರಿ ಕೆಲಸ ಮಾಡಿವೆ. ಸಂಯುಕ್ತ ಹೋರಾಟ-ಕರ್ನಾಟಕ, ಜನಾಂದೋಲನಗಳ ಮಹಾಮೈತ್ರಿ ಸಂಘಟನೆಗಳು ಹೆಚ್ಚು ಕ್ರಿಯಾಶೀಲವಾಗಿದ್ದವು. ಜೊತೆಗೆ ಇವರೆಲ್ಲರೂ ಜೊತೆಗೂಡಿಯೂ ಕೆಲಸ ಮಾಡಿದ್ದಾರೆ. ಇವರೆಲ್ಲರೊಡನೆ ಶೋಷಿತ ಸಮುದಾಯಗಳ ಮಹಾಒಕ್ಕೂಟ, ಅಲ್ಪಸಂಖ್ಯಾತರ ಸಂಘಟನೆಗಳ ಕೊಡುಗೆಗಳೂ ಅಪಾರವಾಗಿದೆ. ಇವರಿಷ್ಟೇ ಮಾತ್ರವಲ್ಲ, ಇನ್ನೂ ಅನೇಕಾನೇಕ ಸಂಘಟನೆಗಳು ಕ್ರಿಯಾಶೀಲವಾಗಿದ್ದವು.
ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲೂ ಈ ಎಲ್ಲಾ ಸಂಘಟನೆಗಳೂ ಹೆಚ್ಚು ಕ್ರಿಯಾಶೀಲವಾಗಿರುವುದು ಎದ್ದು ಕಾಣುತ್ತಿದೆ. ಜೊತೆಗೆ ಹೊಸ ಹೊಸ ಮುಖಗಳೂ, ಸಂಘಟನೆಗಳೂ ಜೊತೆಗೂಡುತ್ತಿವೆ. ಎಲ್ಲರದೂ ಒಂದೇ ಚಿತ್ತ- ಚಾತರ್ವರ್ಣ ಹಿಂದುತ್ವದ ಆರ್ಎಸ್ಎಸ್ನ ಕೈಗೊಂಬೆ ಬಿಜೆಪಿ ಸರ್ಕಾರವು ಮತ್ತೆ ಅಧಿಕಾರಕ್ಕೆ ಬರಬಾರದು; ಸಂವಿಧಾನ ನಿಷ್ಠವಾದ ಪ್ರಜಾಪ್ರಭುತ್ವ ಸರ್ಕಾರ ಆಳ್ವಿಕೆ ನಡೆಸುವಂತಾಗಬೇಕು.