ದೇವನೂರ ಮಹಾದೇವ ಅವರ ಸಂದರ್ಶನ ಪ್ರಹ್ಲಾದ ಅಗಸನಕಟ್ಟೆ ಅವರಿಂದ
[ದೇವನೂರ ಮಹಾದೇವ ಅವರ ಸಂದರ್ಶನ ಪ್ರಹ್ಲಾದ ಅಗಸನಕಟ್ಟೆ ಅವರಿಂದ – [ಸಿರಿಗೆರೆಯ ಎಂ.ಬಿ.ಆರ್. ಕಾಲೇಜಿನ ವಿಶೇಷ ಸಂಚಿಕೆ “ಆಯಾಮ”ಕ್ಕಾಗಿ ಸಂದರ್ಶಿಸಿದ್ದು, ಲೇಖಕರ 1996ರ ಪ್ರಕಟಿತ “ಎದುರು-ಬದುರು” ಪುಸ್ತಕದಲ್ಲಿ ದಾಖಲಾಗಿದೆ.]
“ಸಾಹಿತ್ಯ ಕ್ರಿಯೆ ಉಡಾಫೆಯಲ್ಲ”
ಪ್ರಹ್ಲಾದ : ನೀವು ಕಥೆ ಬರೆಯುವ ಹೊತ್ತಿಗಾಗಲೇ ಅನಂತಮೂರ್ತಿ, ಚಿತ್ತಾಲ, ಲಂಕೇಶ್ ಮುಂತಾದ ಕತೆಗಾರರು ಸಾಕಷ್ಟು ಹೆಸರು ಮಾಡಿದ್ದರು. ಬೆಳೆಯುವ ಕಥೆಗಾರರು ಅಂಥವರ ಪ್ರಭಾವದಿಂದ ಬಿಡಿಸಿಕೊಳ್ಳುವುದೇ ಕಷ್ಟವಾಗಿದ್ದಾಗ ನೀವು ಎಚ್ಚರವನ್ನ ದಕ್ಕಿಸಿಕೊಂಡದ್ದು ಹೇಗೆ? ನಿಮ್ಮ ಆ ಎಚ್ಚರ ತುಂಬಾ ಗಮನಾರ್ಹವಾದದ್ದೆಂದು ನಾನು ಭಾವಿಸಿದ್ದೇನೆ.
ಮಹಾದೇವ : ನಾನು ಕಥೆ ಬರೆಯುವಾಗೆಲ್ಲ ಆಳವಾಗಿ, ದಟ್ಟವಾಗಿ, ಪರಿಣಾಮಕಾರಿಯಾಗಿ ಇರಬೇಕು ಎಂದು ಪ್ರಬಲವಾಗಿ ಪ್ರಯತ್ನಿಸುತ್ತಿದ್ದದ್ದು ನೆನಪಿದೆ. ಪ್ರಭಾವಗಳು ಇದ್ದಲ್ಲಿ ಕಣ್ಣಿಗೆ ಕಾಣುವಂತೆ ನನಗೆ ಕಂಡಿಲ್ಲ. ನಾನು ಕಥೆ ಮಾಡುತ್ತಿದ್ದ ವಸ್ತು ನನ್ನನ್ನು ತನ್ನ ವಶಕ್ಕೆ ತೆಗೆದುಕೊಳ್ಳುತ್ತಿದ್ದುದರಿಂದಾಗಿ ಇದ್ದಿರಬಹುದಾದ ಅಲ್ಪ ಸ್ವಲ್ಪ ಪ್ರಭಾವವೂ ಕಾಣದಂತೆ ಕರಗಿರಬಹುದು ಅನ್ನಿಸುತ್ತದೆ.
ಪ್ರಹ್ಲಾದ : ನವ್ಯರಿಂದ ನೀವು ಭಿನ್ನ ಅನಿಸಿದರೂ ಇವತ್ತಿಗೂ ನನಗೆ ನೀವು ಕಥೆ ಮಾಡುವ ರೀತಿ, ಕಥೆಯ ವಿವರಗಳೊಳಗೆ ಸೃಷ್ಟಿಸುವಂತಹ ಸೂಕ್ಷ್ಮ ಒಳಧ್ವನಿಗಳು ಇವೆಲ್ಲವೂ ನವ್ಯದ ಬರವಣಿಗೆಯಂತೆ ಕಾಣುತ್ತವೆ. ನನಗೆ ತಿಳಿದಮಟ್ಟಿಗೆ ನವ್ಯರಿಗೂ, ನಿಮಗೂ ಮೂಲಭೂತವಾಗಿ ವ್ಯತ್ಯಾಸ ಇರುವುದು ಪ್ರಾಯಶಃ ಕಥೆ ಮಾಡುವ ರೀತಿ, ತಂತ್ರಗಳಿಗಿಂತಲೂ ವಸ್ತುವಿನ ಹೊಸತನದಿಂದ ಮತ್ತು ಇದುವರೆಗೂ ನಮ್ಮ ಕನ್ನಡ ಸಾಹಿತ್ಯದೊಳಕ್ಕೆ ಬಾರದ ನಿಮ್ಮ ಜನಾಂಗದ ವಿವಿಧ ಅನುಭವ ದ್ರವ್ಯದಿಂದ ಅನ್ನಿಸುತ್ತದೆ. ಈ ಮಾತು ಸರಿಯಲ್ಲವೆ?
ಮಹಾದೇವ : ನೀವು ಹೇಳುವುದು ನನಗೂ ನಿಜ ಅನ್ನಿಸುತ್ತದೆ. ಆದರೆ ಪ್ರತಿಸಲ ಕಥೆ ಬರೆಯುವಾಗೆಲ್ಲ ನಾನು ಆದಷ್ಟೂ ನೇರವಾಗಿ, ಸರಳವಾಗಿ, ಕಾವ್ಯಾತ್ಮಕವಾಗಿ ಬರೆಯಲು ಯತ್ನಿಸುತ್ತ…. ಸೋಲುತ್ತ….. ಯತ್ನಿಸುತ್ತೇನೆ.
ಪ್ರಹ್ಲಾದ : ಹೀಗೆ, ನವ್ಯರಿಂದ ತಂತ್ರ, ರೀತಿ ಮುಂತಾದ ಕಥೆ ಮಾಡುವ ಪರಿಕರಗಳಿಂದ ಪ್ರಭಾವಿತವಾಗಿದ್ದರೂ ನೀವೊಂದು ಭಾಷಣದಲ್ಲಿ ನವ್ಯರ ಸಾಂಕೇತಿಕತೆಯನ್ನ, ಪ್ರತಿಮೆ-ಪ್ರತೀಕ. ಮುಂತಾದವುಗಳನ್ನು ಅವು ಉಂಟುಮಾಡುವ ಕ್ಲಿಷ್ಟತೆ ಮತ್ತು ಅಭಿವ್ಯಕ್ತಿ ಕ್ರಮದ ಜಟಿಲತೆಯ ಬಗ್ಗೆ ತರಾಟೆ ತೆಗೆದುಕೊಂಡದ್ದು ಏಕೆ?
ಮಹಾದೇವ : ನೋಡಿ ಯಾವುದೇ ಸಂಕೇತ ಪ್ರತಿಮೆಗಳು ಅವಕ್ಕೆ ಅವಷ್ಟೆ ಇಲ್ಲ. ವಸ್ತುವನ್ನ ನಿಲ್ಲಿಸಬೇಕಾದವುಗಳು ವಸ್ತುಗಳ ಮೇಲೆ ಕುಳಿತಾಗ ತರಾಟೆಗೆ ತೆಗೆದುಕೊಂಡು ಕೆಳಗಿಳಿಸಿ-ಅಂದೆ. ಅಷ್ಟೆ.
ಪ್ರಹ್ಲಾದ ; ನಿಮ್ಮ ಕೆಲವು ಪದ್ಯಗಳನ್ನು ಹಳೆಯ ಸಾಕ್ಷಿ, ಪ್ರಜಾವಾಣಿ ಮುಂತಾದ ಪತ್ರಿಕೆಗಳಲ್ಲಿ ನೋಡಿದ್ದೇನೆ. ಈಗಿನವರ ಅನೇಕ ಪದ್ಯಗಳಿಗೆ ನಿಮ್ಮ ಪದ್ಯಗಳನ್ನ ಹೋಲಿಸಿ ನೋಡಿದರೆ ನಿಮ್ಮ ಪದ್ಯಗಳು ತುಂಬಾ ಸೀರಿಯಸ್ಸಾಗಿ ಕಾಣುತ್ತವೆ. ನೀವು ಆ ಮಾಧ್ಯಮವನ್ನ ಕೈಬಿಟ್ಟಿದ್ದು ಏಕೆ?
ಮಹಾದೇವ : ನನಗೂ ಸಾಹಿತ್ಯ ಸ್ವಲ್ಪ ಗೊತ್ತಾಗುವ ಪ್ರಕಾರ. ನನ್ನ ಪದ್ಯಗಳು ಅಂಥಾ ಏನು ಚೆನ್ನಾಗಿಲ್ಲ. ಆದರೆ ನನ್ನ ಒಟ್ಟಾಸೆ ಮಾಧ್ಯಮ-ಕಾವ್ಯ, ಚಿತ್ರಕಲೆ ಆಗಿದ್ದರಿಂದ ಆ ಮಾಧ್ಯಮಾನ ಕೈ ಬಿಟ್ಟಿರುವೆ.
ಪ್ರಹ್ಲಾದ : ಪ್ರಗತಿಶೀಲ ಮೂಮೆಂಟ್ ಮತ್ತು ದಲಿತ ಸಾಹಿತ್ಯಕ ಚಳವಳಿಗಳ ತಾತ್ವಿಕ ಹಿನ್ನೆಲೆಗಳು ಸರಿಸುಮಾರಾಗಿ ಮೊದಲ ನೋಟಕ್ಕೆ ಒಂದೇ ಅನಿಸಿಬಿಡುತ್ತವೆ. ದಲಿತ ಸಾಹಿತ್ಯವನ್ನ ಪ್ರಗತಿಶೀಲ ಸಾಹಿತ್ಯ ಚಳವಳಿಯ ಮುಂದುವರಿಕೆ ಅನ್ನಬಾರದೇಕೆ?
ಮಹಾದೇವ : ಸಾಹಿತ್ಯದಲ್ಲಿ ಪ್ರಯೋಗ ತಿರುಗು ಮುರುಗಾಯಿತು. ಮೊದಲು ಹುಟ್ಟಿದ್ದು ಪ್ರನಾಳ ಶಿಶು, ಈಗ ನಿಜ ಕೂಸು.
ಪ್ರಹ್ಲಾದ : ಮಹಾದೇವ ಅವರೇ, ದಲಿತ ಸಂಘರ್ಷ ಸಮಿತಿಗಳಲ್ಲಿ ಕಮ್ಯುನಿಸಿಸ್ಟರು, ಲೋಹಿಯಾವಾದಿಗಳು ಮುಂತಾದ ನಾನಾ ರಾಜಕೀಯ ತತ್ವ ಪ್ರಣಾಳಿಕೆಯನ್ನು ನಂಬಿಕೊಂಡಂಥ ಜನರಿದ್ದಾರೆ. ಶೋಷಣಾ ವಿಮುಕ್ತ ಸಮಾಜಕ್ಕಾಗಿ ಹೋರಾಡುವ ಈ ಜನ ಮೂಲಭೂತವಾಗಿಯೇ ನಾನಾ ರೀತಿಯ ತತ್ವ ಪ್ರಣಾಳಿಕೆಯನ್ನು ಈಗಾಗಲೇ ನಿರ್ಧರಿಸಿಕೊಂಡಿರುವುದರಿಂದ ಸಂಘಗಳ ಸಂಘಟನೆ ಮತ್ತು ಹೋರಾಟದ ನಿರ್ಧಾರಗಳಲ್ಲಿ ಭಿನ್ನಾಭಿಪ್ರಾಯಗಳು ಬರುವುದಿಲ್ಲವೆ?
ಮಹಾದೇವ : ಭಿನ್ನಾಭಿಪ್ರಾಯ ಬರುವುದು, ಹೊಂದಿಸಿಕೊಳ್ಳುವುದು, ಭಿನ್ನಾಭಿಪ್ರಾಯ ಬರುವುದು, ಮತ್ತೆ ಹೊಂದಿಸಿಕೊಳ್ಳುವುದು ಇಲ್ಲದೆ ಯಾವುದಿದೆ ಹೇಳಿ?
ಪ್ರಹ್ಲಾದ : ನಿಮ್ಮ ಮೊದಲ ಕಥಾಸಂಕಲನದ `ದ್ಯಾವನೂರು’ ಬಂದ ಕಾಲದಲ್ಲಿ ಈಗಿನಷ್ಟೆ ಪ್ರಖರವಾಗಿ ದಲಿತ ಸಂಘರ್ಷ ಸಮಿತಿಗಳು ಮತ್ತು ದಲಿತ ಸಾಹಿತ್ಯ ಇರಲಿಲ್ಲ. ನಂತರದ ಬೆಳವಣಿಗೆಗಳಲ್ಲಿ ಸಾಹಿತ್ಯ ಜನಪರವಾಗಬೇಕು ಸಾಮಾಜಿಕವಾಗಬೇಕು ಎನ್ನುವ ಮಾತುಗಳು ಎತ್ತರದ ದನಿಗಳಲ್ಲಿ ಕೇಳಿಬರಲು ಶುರುವಾದವು. ತೇಜಸ್ವಿಯಂಥ ಲೇಖಕರು “ಅಪಾರ ಸಹೃದಯಸ್ತೋಮಕ್ಕೆ ಅರ್ಥವಾಗದಂತೆ ಬರೆಯುವುದು ಕೂಡ ಈ ದೇಶದಲ್ಲಿ ಹಲವು ಶೋಷಣೆಗಳಲ್ಲಿ ಅದೂ ಕೂಡ ಒಂದಾಗುತ್ತದೆ” ಎನ್ನುವ ಮಟ್ಟಕ್ಕೆ ಹೋದರು. ಈ ಎಲ್ಲ ಮಾತುಗಳು ಪ್ರಚಲಿತವಾಗಿದ್ದರೂ ನೀವು ನಂತರ ಬರೆದ “ಒಡಲಾಳ” ಕಥೆ ಕಲಾತ್ಮಕವಾಗಿದ್ದರೂ ನನಗೆ ತಿಳಿದಮಟ್ಟಿಗೆ ಸುಲಭವಾಗಿ ಜನಸಾಮಾನ್ಯರಿಗೆ ಸಂವಹನ ಹೊಂದಲಾರದ ಸಂಕೀರ್ಣತೆಯನ್ನು ಹೊಂದಿದೆ. ನೀವು ಹೀಗೆ ಕಥೆಯಿಂದ ಕಥೆಗೆ ಕಲಾತ್ಮಕವಾಗುತ್ತ ಜನರಿಂದ ದೂರವಾಗುತ್ತಿರುವಾಗ ಮೇಲಿನ ಆಪಾದಕರು ನಿಮ್ಮನ್ನೇಕೆ ಪ್ರಶ್ನೆ ಮಾಡುತ್ತಿಲ್ಲ?
ಮಹಾದೇವ : “ಕಲಾತ್ಮಕ ಕಥೆಗಳನ್ನು ಬರೆಯುತ್ತಾ ಜನರಿಂದ ದೂರವಾಗುತ್ತಿದ್ದಾಗ” ಎಂಬ ನಿಮ್ಮ ಮಾತಿಗೆ ಹೇಳುತ್ತಿದ್ದೇನೆ: ನಾನು ಕಥೆಯಿಂದ ಕಥೆಗೆ ನನ್ನ ಜನರನ್ನ ಅರ್ಥಮಾಡಿಕೊಳ್ಳುವುದು ಹೆಚ್ಚುತ್ತಿದೆ. ಅಂತೆ ಹತ್ತಿರವಾಗುತ್ತಿದ್ದೇನೆ. ಹಾಗೂ ಒಂದಾಗಲೂ ವಿಫಲ ಪ್ರಯತ್ನಿಸುತ್ತಿದ್ದೇನೆ. ಈಗ ನಿಮ್ಮ ಪ್ರಶ್ನೆಯನ್ನು ಬದಲಿಸಿಕೊಳ್ಳಿ. ಇಲ್ಲದಿದ್ದರೆ ವಚನಕಾರರು ಜನರಿಂದ ಓಡಿಬಿಡುವರು.
ಪ್ರಹ್ಲಾದ : ಶುದ್ದ ಸೋಷಿಯಲ್ ರೆಲೆವೆನ್ಸ್ ಇಟ್ಟುಕೊಂಡು ಬರುವ ಅನೇಕ ಪದ್ಯಗಳು ಕ್ರಾಂತಿಯಾಗುತ್ತೆ. ನೊಂದವ ನಾಳೆ ಸಿಡಿಯುತ್ತಾನೆ ಎಂಬ ಆಶಾವಾದಗಳು, ಸಂಭಾವ್ಯತೆಗಳಿಂದ ಮುಕ್ತಾಯವಾಗುತ್ತವೆ. ಉದಾ : ಸಿದ್ಧಲಿಂಗಯ್ಯನವರ ಅನೇಕ ಪದ್ಯಗಳನ್ನು ನೋಡಬಹುದು. ಈ ಆಶಾವಾದಗಳು ಕಾವ್ಯದ ಅನುಭವದ ಸಂದರ್ಭದಲ್ಲೇ ಸೃಷ್ಟಿಯಾಗದೆ ತಂದು ತುರುಕಿದಂತೆ ಕೃತಕವಾಗಿ ಭಾಸವಾಗುವುದಿಲ್ಲವೆ?
ಮಹಾದೇವ : ಸಿದ್ಧಲಿಂಗಯ್ಯ ನಿರ್ಧಾರಗಳಿಂದ ಬರೆಯಲು ಹೊರಡುತ್ತಾರೆ. ಹಾಗಾಗಿ ನಿಮ್ಮ ಮಾತಿನಂತೆ ಅನೇಕ ಕಡೆ ಆಗಿದೆ. ಕಾವ್ಯಕ್ಕೆ ಇರೋ ಏಕಮುಖತೆಯೆ ಅದಕ್ಕೆ ಕಾರಣವಿರಬಹುದು. ಇದರೊಡನೆಯೇ ಅವರು ಕಾವ್ಯವನ್ನು ಜನಪದಗೊಳಿಸುವ ಕ್ರಿಯೆಯಲ್ಲಿ ತೊಡಗಿರುವುದರಿಂದ ಇದರಿಂದಾಗಿ ಅದು ಕರಗಬಹುದೆಂಬ ಕಡೆ ನೋಡುತ್ತಿದ್ದೇನೆ.
ಪ್ರಹ್ಲಾದ : ನಿಮಗೆ ಮೇಲ್ಸ್ತರದ ಪಾತ್ರಗಳನ್ನು ಮೇಜರ್ ಕ್ಯಾರೆಕ್ಟರ್ಗಳನ್ನಾಗಿ ಬಳಸಿಕೊಳ್ಳಲು ಏಕೆ ಸಾಧ್ಯವಾಗುತ್ತಿಲ್ಲ? ಸಾಧ್ಯವಾಗದ್ದರ ಇತಿ-ಮಿತಿಗಳೇನು?
ಮಹಾದೇವ : ನನ್ನ ಬರವಣಿಗೆಯ ತಳಹದಿ ವಿವರಗಳಿಂದ ಮೂಡುವಂಥ ರೀತಿಯಾದ್ದರಿಂದ ದೂರಿದ್ದರ ಒಳವಿವರ ಸಿಗದೆ ನನಗೆ ದಕ್ಕುವುದು ನನ್ನ ಈಗಿನ ರೀತಿಯ ಬರವಣಿಗೆಗೆ ಕಷ್ಟವೆನಿಸುತ್ತದೆ. ಮುಂದೆ ನಾನು ಭಾವಿಸಿದಂತೆ, ನನಗೆ ಮುಟ್ಟಿದಂತೆ ಬರೆದರೆ ಬರೆಯಲೂಬಹುದು.
ಪ್ರಹ್ಲಾದ : ದಲಿತ ಸಾಹಿತ್ಯ ಎಂದು ಕರೆದುಕೊಂಡು ಬರೆಯುತ್ತಿರುವ ಅನೇಕ ಬರಹಗಾರರು ದಲಿತ ಜನಾಂಗದ ನೋವುಗಳನ್ನ, ಅದರ ವಿವಿಧ ಮುಖಗಳನ್ನ ವರ್ಗಭೇದದ ಹಿನ್ನೆಲೆಯಲ್ಲಿ ಸರಳೀಕರಣಗೊಳಿಸಿ ಬರೆಯುತ್ತಿದ್ದಾರೆ ಅನಿಸುವುದಿಲ್ಲವೇ?
ಮಹಾದೇವ : ಈಗ ದಲಿತ-ಪ್ರಗತಿಪರ ಸಾಹಿತ್ಯ ಪರಿಧಿಯಲ್ಲಿ ಬರೆಯುತ್ತಿರುವ ಅನೇಕ ಸ್ನೇಹಿತರು ಸಾಹಿತ್ಯವನ್ನು ಉಢಾಫೆಯಾಗಿ ತೆಗೆದುಕೊಳ್ಳುತ್ತಿರುವುದು ಉಂಟು. ನನಗೆ ಅನಿಸುತ್ತದೆ. ಇಂಥದರ ನಡುವೆಯೂ ಎಷ್ಟೋ ಒಳ್ಳೆಯ ಸಾಲುಗಳು ಬಂದಿವೆ. ಹೊರಮೈಲಿ ಓಡಾಡುತ್ತಿರುವ ನನ್ನ ಸ್ನೇಹಿತರು ಒಳಕ್ಕೆ ಬಂದಾಗ ಸರಿಯಾಗುವುದು.
ಪ್ರಹ್ಲಾದ : “ಮಾನವೀಯತೆ ಅಂತಾರಲ್ಲ. ಅದರ ಬಗ್ಗೆ” ಎಂಬ ನಿಮ್ಮ ಲೇಖನವೊಂದರಲ್ಲಿ ಬ್ರಾಹ್ಮಣರನ್ನ ದಲಿತರ ಬುದ್ಧಿಯ ಶೋಷಣೆಗೂ, ಲಿಂಗಾಯಿತ-ಗೌಡರನ್ನ ದಲಿತರ ಹೊಟ್ಟೆಯ ಶೋಷಣೆಗೂ ಹೋಲಿಸಿ ಬರೆದಿದ್ದೀರಿ. ಆ ಹೋಲಿಕೆ ಈ ಹೊತ್ತಿಗೂ ಸರಿ ಎನಿಸುತ್ತದೆಯೇ?
ಮಹಾದೇವ : ಆ ಲೇಖನ ಮರೆತಿರುವೆ, ಈ ಹೋಲಿಕೆ ರಪ್ಫಾಗಿ ಸರಿಯಾಗಿ ಇದೆಯಲ್ಲವೆ?
ಪ್ರಹ್ಲಾದ : ದಲಿತ ಸಾಹಿತ್ಯಕ್ಕೆ ಒಂದು ಸ್ಪಷ್ಟವಾದ ತಾತ್ವಿಕ, ಸೈದ್ದಾಂತಿಕ ನೆಲೆಗಟ್ಟಿಲ್ಲ ಎನ್ನುವ ದೂರು ಇದೆಯಲ್ಲ. ದಲಿತ ಸಾಹಿತ್ಯದ ಸೈದ್ಧಾಂತಿಕ ನಿಲುವು ಏನು?
ಮಹಾದೇವ : ಭಾರತ ಮಾತೆಯ ಅಡಿದಾವರೆಯಲ್ಲಿ ನೇತಾಡುತ್ತಿರುವ ಜನಸ್ತೋಮ ನಿಲ್ಲುವಂತಾಗುವುದು, ಚಿಂತಿಸುವಂತಾಗುವುದು, ನಿರ್ಣಯಿಸುವಂತಾಗುವುದು ಹಸಿವು, ಅಸ್ಪಶ್ಯತೆ, ವರ್ಗ, ಜಾತಿ ಇಲ್ಲದೆ ಸಮಾನ ಬದುಕುವಂತಾಗುವ ಆಸೆಯ ಕಾಳುಗಳಿಂದ ಬೆಳೆ ತೆಗೆಯಬೇಕಾಗಿದೆ.
ಪ್ರಹ್ಲಾದ : ನಿಮಗೆ ಈಚೆಗೆ ಅಮೇರಿಕೆಯ ಫೋರ್ಡ್ ಸ್ಕಾಲರ್ಷಿಪ್ ದೊರಕಿದ್ದನ್ನ ನೀವು ತ್ಯಜಿಸಿದಿರಂತೆ ನಿಜವೆ. ನೀವು ಹೀಗೆ ಕೈಬಿಡಲು ಕಾರಣವೇನು?
ಮಹಾದೇವ : ಫೋರ್ಡ್ ಸ್ಕಾಲರ್ಷಿಪ್ ಕೈಬಿಟ್ಟದ್ದು ಏನಾದರೂ ತಾತ್ವಿಕ ಕಾರಣವಿರಬಹುದೊ ಎಂಬ ಅನುಮಾನ ನಿಮಗೆ ಇದ್ದಂತೆ ಇದೆ. ಅಂಥದೇನೂ ಇಲ್ಲ. ಅದು ಸಿ.ಐ.ಎ ಎಂಬ ಗುಮಾನಿ ಇರುವ ಕಾರಣಕ್ಕೂ ಅಲ್ಲ. ಈ ಸ್ಕಾಲರ್ಷಿಪ್ ಹಣ ಉಳಿಸಿ ಪ್ರೆಸ್ಸು ಮಾಡುವ ಯೋಚನೆ ಇತ್ತು. ನಾನು ದಲಿತ ಸಂಘರ್ಷ ಸಮಿತಿಯವನಾದ್ದರಿಂದ ಅದನ್ನ ಅನುಮಾನದಿಂದ ಯಾರಾದರೂ ನೋಡಿದರೆ ಎಂಬ ಅಳುಕಿನಿಂದ ಬಿಟ್ಟೆ, ಅಷ್ಟೇ,
ಪ್ರಹ್ಲಾದ : ಇದುವರೆಗೂ ಉತ್ತರಿಸಿದ ನಿಮಗೆ ಓದುಗರ ಮತ್ತು ನನ್ನ ವೈಯಕ್ತಿಕ ಕೃತಜ್ಞತೆಗಳು. ನಮಸ್ಕಾರ.
[ಸಿರಿಗೆರೆಯ ಎಂ.ಬಿ.ಆರ್. ಕಾಲೇಜಿನ ವಿಶೇಷ ಸಂಚಿಕೆ “ಆಯಾಮ”ಕ್ಕಾಗಿ ಸಂದರ್ಶಿಸಿದ್ದು, ಲೇಖಕರ 1996ರ ಪ್ರಕಟಿತ “ಎದುರು-ಬದುರು” ಪುಸ್ತಕದಲ್ಲಿ ದಾಖಲಾಗಿದೆ.]