ದೇವನೂರ ಮಹಾದೇವ ಅವರೊಂದಿಗೆ ಸಂದರ್ಶನ- ರಾಘವೇಂದ್ರ ಪಾಟೀಲ ಮತ್ತು ಡಿ.ಎಸ್.ನಾಗಭೂಷಣ

ದೇವನೂರ ಮಹಾದೇವ ಅವರ ‘ಕುಸುಮಬಾಲೆ’ ಕೃತಿಗೆ 1990ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಂದ ಸಂದರ್ಭದಲ್ಲಿ 1991ರ ಜನವರಿ ಮತ್ತು ಫೆಬ್ರವರಿ ‘ಸಾಹಿತ್ಯ ಸಂವಾದ’ 19ನೇ ಸಂಚಿಕೆಗಾಗಿ ಪತ್ರಿಕೆಯ ಪರವಾಗಿ ಶ್ರೀ ರಾಘವೇಂದ್ರ ಪಾಟೀಲ ಮತ್ತು ಶ್ರೀ ಡಿ.ಎಸ್.ನಾಗಭೂಷಣ ಅವರು ಮಾಡಿದ ಸಂದರ್ಶನದ ಬರಹ ರೂಪ.dsnRaghavendra-Patil

(ನಮ್ಮ ಮುಖ್ಯ ಲೇಖಕರಲ್ಲೊಬ್ಬರಾದ ಶ್ರೀ ದೇವನೂರ ಮಹಾದೇವ ಅವರ ‘ಕುಸುಮಬಾಲೆ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಸಂದಿದೆ. ಈ ಪ್ರಶಸ್ತಿ ಬಂದಾದಮೇಲೆ ಸಂಕ್ರಮಣ ಪತ್ರಿಕೆಯು ಕುಸುಮಬಾಲೆ-ಮಹಾದೇವ ಕುರಿತಂತೆ ವಿವಾದ ಒಂದನ್ನು ಆರಂಭಿಸಿದೆ. ಮಹಾದೇವ ಅವರಿಗೆ ಪ್ರಶಸ್ತಿ ಬಂದ ಸಂತಸದ ಸಂದರ್ಭ ಮತ್ತು ಈ ವಿವಾದ ಇವುಗಳ ಹಿನ್ನೆಲೆಯಲ್ಲಿ ಮಹಾದೇವ ಅವರನ್ನು ಸಂದರ್ಶಿಸುವ ಉದ್ದೇಶದಿಂದ ‘ಸಂವಾದ’ದ ಪರವಾಗಿ ಶ್ರೀ ರಾಘವೇಂದ್ರ ಪಾಟೀಲ ಮತ್ತು ಶ್ರೀ ಡಿ.ಎಸ್.ನಾಗಭೂಷಣ, ಅವರಲ್ಲಿಗೆ ಹೋದೆವು. ಸುಮಾರು  ಎರಡು ಗಂಟೆಗಳ ಕಾಲ ಮುಕ್ತವಾಗಿ ಮಾತನಾಡಿದೆವು. ಈ ಮಾತುಕತೆಯ ಸಾರಾಂಶವನ್ನು ಇಲ್ಲಿ ದಾಖಲಿಸುತ್ತಿದ್ದೇವೆ. ಚರ್ಚೆಯನ್ನು ನಾವು ಧ್ವನಿ ಮುದ್ರಿಸಿಕೊಂಡಿಲ್ಲ, ಯಥಾವತ್ತಾಗಿ ಬರೆದುಕೊಂಡೂ ಇಲ್ಲ. ಸಂದರ್ಶನ ಮುಗಿದಾದ ಮೇಲೆ ನೆನಪಿನ ಆಧಾರದ ಮೇಲೆ ಬರೆದ ಲೇಖನ ಇದಾಗಿದೆ. ಆದ್ದರಿಂದ ಇಲ್ಲಿ ಬಳಕೆಗೊಂಡ ಮಾತುಗಳು ಚರ್ಚೆಯಲ್ಲಿ ಬಳಕೆಗೊಂಡ ತದ್ವತ್ ಮಾತುಗಳಾಗದಿರಬಹುದು. ಆದರೆ ಇಲ್ಲಿ ವ್ಯಕ್ತವಾದ ಅಭಿಪ್ರಾಯಗಳು ಮಾತ್ರ ಚರ್ಚೆಯಲ್ಲಿ ಮೂಡಿಬಂದ ಅಭಿಪ್ರಾಯಗಳೇ ಆಗಿವೆ. – ಸಂ)

ಸಂವಾದ: ಮಹಾದೇವ, ನೀವು ಎಪ್ಪತ್ತರ ದಶಕದ ಆರಂಭದಲ್ಲಿ, ಕಥೆ ಬರೆಯಲು ಆರಂಭಿಸಿದಿರಿ. ನಿಮ್ಮ ಕಥೆಗಳು ಹೊಸದೊಂದು ಧ್ವನಿಯನ್ನು ಹೊತ್ತು ಬಂದವು. ಬಹುಶಃ ಅವು ಕನ್ನಡದ ಮೊದಲ ಗಮನಾರ್ಹ ದಲಿತ ಬರಹ ಕೂಡ ಆಗಿವೆ. ಆದರೆ ನಿಮ್ಮ ಈ ಆರಂಭದ ಕತೆಗಳಲ್ಲಿ ರೊಚ್ಚು, ರೋಷ, ವ್ಯಕ್ತವಾಗದೇ ಒಂದು ತೆರೆನ ತಂಪಾದ ನಿರ್ಲಿಪ್ತ ಕೋಪ ಮೂಡಿ ಬಂದಿದೆ. ಇಂಥ ಒಂದು ನಿಲುವು ನಿಮಗೆ ನಿಮ್ಮ ಆರಂಭದ ಬರಹದಲ್ಲೇ ಹೇಗೆ ಸಾಧ್ಯವಾಯಿತು? ನಿಮ್ಮ ಬಾಲ್ಯದ ಅನುಭವಗಳ ಹಿನ್ನೆಲೆ ಏನಾದರೂ ಇದರ ಹಿಂದೆ ಇದೆಯಾ?
ಮಹಾದೇವ: ನಾನು ಬರೆಯಲು ಆರಂಭಿಸಿದಾಗ ಬರುತ್ತಿದ್ದಂತಹ ಕಥೆಗಳು- ನನ್ನ ಬಾಲ್ಯದ ಅನುಭವಗಳು – ಉದಾಹರಣೆಗೆ, ನನಗೆ ನನ್ನ ಅಜ್ಜಿ ಹೇಳುತ್ತಿದ್ದಂತಹ ಕಥೆಗಳು ಮತ್ತು ನನಗೆ ಒದಗಿದ ಸಹವಾಸ-ಆಗ ನನಗೆ ಸೂ.ರಮಾಕಾಂತ ಮತ್ತು ಆಲನಹಳ್ಳಿ ಕೃಷ್ಣನಂತವರ ಸಹವಾಸ ಒದಗಿತ್ತು. ಹೀಗೆ ಇವೆಲ್ಲಾ ಕಾರಣಗಳು ನನ್ನ ಕಥೆಗಳಲ್ಲಿನ ನಿಲುವಿಗೆ ಕಾರಣ ಆಗಿರಬಹುದು. ಮತ್ತೆ.. ನಾನು ಬರೆಯಲು ಆರಂಭಿಸಿದಾಗಲೇ ನನಗೆ ಏನನಿಸ್ತಿತ್ತು ಅಂದರೆ-ಹೇಳಬೇಕಾದ್ದನ್ನ ಪರಿಣಾಮಕಾರಿಯಾಗಿ ಮತ್ತು ಸಂಕ್ಷಿಪ್ತವಾಗಿ ಹೇಳಬೇಕು ಎನ್ನುವ ಭಾವನೆ ಇತ್ತು.

ಸಂವಾದ: ನವ್ಯ ಮಾರ್ಗ ಮೀರಿದ ಈ ಶೈಲಿ ನಿಮಗೆ ಒಮ್ಮೆಲೇ ಒದಗಿ ಬಂದದ್ದು ಹೇಗೆ..
ಮಹಾದೇವ: ಗೊತ್ತಿಲ್ಲ..

ಸಂವಾದ: ದೇವರ ದಯವೇ..
ಮಹಾದೇವ: …(ನಗು)…

ಸಂವಾದ: ನೋಡಿ, ನಿಮ್ಮ ತಂದೆ ಪೊಲೀಸ್ ಕಾನ್‍ಸ್ಟೇಬಲ್ ಆದವರು. ಅಂದರೆ ಸರ್ಕಾರಿ ನೌಕರಿಯಲ್ಲಿದ್ದವರು. ಹೀಗಾಗಿ ನಿಮಗೆ ಒಂದು ರೀತಿಯ. Secured ಜೀವನ ಲಭ್ಯವಾಗಿತ್ತು. ಆದ್ದರಿಂದ ನಿಮ್ಮ ಬಾಲ್ಯದಲ್ಲಿ ನೀವು ತೀವ್ರ ನೋವನ್ನು ಅನುಭವಿಸದೇ ಇದ್ದಿರಬಹುದು. ಅದಕ್ಕೆ ನೀವು ಕಥಾನಕಗಳಲ್ಲಿ ದಲಿತ ಶೋಷಣೆ ಕುರಿತು ಭಾವಾವೇಶದ ರೊಚ್ಚು, ರೋಷ ವ್ಯಕ್ತವಾಗದೇ ಇರಬಹುದೇ..?
ಮಹಾದೇವ: ಇಲ್ಲ ಇಲ್ಲ. ನಮ್ಮಪ್ಪ ಪೋಲೀಸಾಗಿದ್ದಕ್ಕೆ ನನಗೆ ಸಮೃದ್ಧಿಯ ಜೀವನವೇನೊ ಸಿಕ್ಕಿಲ್ಲ. ನಾನು S.S.L.C ಪಾಸುಮಾಡಿ ಇಲ್ಲಿ ಮೈಸೂರಿಗೆ ಕಾಲೇಜಿಗೆ ಬಂದೆ  ನೋಡಿ.. 67-68ನೇ ಇಸ್ವಿಗಳಲ್ಲಿ .. ಆಗ ಮಳೆಗಿಳೆ ಬರದೇ ಬರಗಾಲ ಸೈತ ಇತ್ತು.. ಆಗ ಇಲ್ಲಿ ನನಗೆ ಊಟಕ್ಕೆ ಏನೇನೂ ವ್ಯವಸ್ಥೆ ಇರಲಿಲ್ಲ.. ಸಾಲಾ ಮಾಡಿ ಕಾರಾ ಮಂಡಕ್ಕಿ ತಿಂದು ದಿನಾ ಕಳೀತಿದ್ದೆ. ಹಂಗೆ ಸಮೃದ್ಧಿಯ ಬದುಕೇನೂ ಅಲ್ಲ..

ಸಂವಾದ: ಇದು ಬಡತನದ ಪ್ರಶ್ನೆ ಆಯ್ತು.. ಎಲ್ಲ ಬಡವರಿಗೂ ಸಾಮಾನ್ಯವಾದ ಅನುಭವ..
ಮಹಾದೇವ: ಹಾಗಲ್ಲ, ಬರೀ ಅದಷ್ಟೇ ಆಗಿರ್ಲಿಲ್ಲ..

ಸಂವಾದ: ನೀವು ನಿಮ್ಮ ದ್ಯಾವನೂರು ಸಂಕಲನದ ಕಥೆಗಳಲ್ಲಾಗಲೀ ಮತ್ತು ಒಡಲಾಳದಲ್ಲಾಗಲೀ ನಿಮ್ಮ ದಲಿತ ಅನುಭವಗಳಿಗೆ ಸೀಮಿತಗೊಂಡ ಅವುಗಳಿಗೆ ಮಾತ್ರ ಅಭಿವ್ಯಕ್ತಿ ನೀಡಿದ್ದೀರಿ. ಅಂದರೆ ಈ ಕೃತಿಗಳಲ್ಲಿ ದಲಿತ ಲೋಕಕ್ಕೆ ಹೊರತಾದ ಅನುಭವಗಳು ಬರುವುದೇ ಇಲ್ಲ. ಆದರೆ ನಿಮ್ಮ ಕುಸುಮಬಾಲೆ ಕೃತಿಯಲ್ಲಿ ಮೊಟ್ಟ ಮೊದಲಿಗೆ ದಲಿತೇತರ ಲೋಕದ ಚಿತ್ರ ಕೊಡಲು ಪ್ರಯತ್ನಿಸಿದ್ದೀರಿ. ಈ ಪ್ರಯತ್ನದಲ್ಲಿ ನಿಮಗೆ ಮಾನಸಿಕ ಹಿಂಜರಿಕೆ ಏನಾದರೂ ಅನ್ನಿಸಿತೆ?
ಮಹಾದೇವ: ನನ್ನ ಕಥೆಗಳಲ್ಲಿ ಮತ್ತು ಒಡಲಾಳದಲ್ಲಿ.. ನಾನು ನೋಡಿದ ಪಾತ್ರಗಳು-ನನ್ನ ಲೋಕದ, ಅನುಭವ ಪಾತ್ರಗಳು ಬರುತ್ತವೆ. ಅವು ಹೇಗಿದ್ದವೋ ಹಾಗೇ ಬರುತ್ತವಂತಲ್ಲ.. ಅಂದರೆ ನಾನು ಅವುಗಳನ್ನ ಹ್ಯಾಂಡಲ್ ಮಾಡಲು ಹೋಗುವುದಿಲ್ಲ. ನಾನು interfere ಮಾಡಲು ಹೋಗುವುದಿಲ್ಲ.. ಅಂದರೆ ಆ ಪಾತ್ರಗಳನ್ನ ಅವುಗಳ ಅತ್ಯಂತ ಸಹಜ ವಾತಾವರಣದೊಳಗೆ ಇರುವ ಪ್ರಯತ್ನ ಮಾಡ್ತೀನಿ. ಈ ಪಾತ್ರಗಳು ನನ್ನ ವರ್ಗದವೇ ಆಗಿದ್ದವು.. ಇನ್ನು ಕುಸುಮಬಾಲೆಯೊಳಗೆ-ನಾನು ಬರೀ ನೋಡಿದವಲ್ಲ-ಇನ್ನೂ ಬೇರೆಯದನ್ನ ಹಿಡಿಯಲಿಕ್ಕೆ ನೋಡಿದ್ದೇನೆ.. ಅಂದರೆ ಬರೀ ನನ್ನ ಅನುಭವದ ಅಂಗಳದೊಳಗೇ ನಿಲ್ಲುವದಲ್ಲ, ಅದನ್ನು ದಾಟಿ ಹೋಗಲು ನೋಡುವುದು.. ಒಂದು ರೀತಿಯಾಗಿ ನನ್ನ ಅನುಭವಗಳನ್ನು ಇನ್ನೊಂದಿಷ್ಟು ಚಾಚಿಕೊಳ್ಳುವುದು…

ಸಂವಾದ: ಅಲ್ಲ. ನಾವು ಈ ಪ್ರಶ್ನೆ ಯಾಕೆ ಕೇಳಿದವೆಂದರೆ-ಕುಸುಮಬಾಲೆಯಲ್ಲಿ ಬರುವ ಮುಖ್ಯ ಎಳೆ ಈ ವಂಶ-ಜಾತಿಗಳ ಶುದ್ಧತೆಯ ಅಹಂಕಾರವನ್ನ ಸ್ಫೋಟಗೊಳಿಸುವುದಾಗಿದೆ.. ಜಾತಿ ಸಂಕರವನ್ನ ಸಹಿಸಲಾರೆನೆನ್ನುವ ನಮ್ಮ ಸಾಮಾಜಿಕ ‘ಇಗೋ’ದ ಬಲೂನಿಗೆ ಮುಳ್ಳು ಚುಚ್ಚುವುದು ಇದರ ಮುಖ್ಯ ಎಳೆಯಾಗಿದೆ. ಆದರೆ ಈ ಎಳೆ ಅತ್ಯಂತ ತೆಳುವಾಗಿದೆ ಮತ್ತು ಅದು ಮೂರ್ತಗೊಳ್ಳುವುದಿಲ್ಲ. ಇದು ನೀವು ನಿಮ್ಮ ಖಾಸಾ ಅನುಭವ ಲೋಕವನ್ನು ಮೀರುವ ಪ್ರಯತ್ನದಲ್ಲಿನ ಮಾನಸಿಕ ಹಿಂಜರಿಕೆಯಿಂದ ಆದ ಪರಿಣಾಮವಾಗಿರಬಹುದೇ?.. ಅದಕ್ಕೇ ನೋಡಿ ಕಾದಂಬರಿ ಅತ್ಯಂತ ದಟ್ಟ ಕುಸುರುಗಾರಿಕೆಯ ತಂತ್ರದಲ್ಲಿ ಹುಗಿದುಕೊಂಡುಬಿಡುತ್ತದೆನಿಸುತ್ತದೆ…
ಮಹಾದೇವ: ಅಲ್ಲ… ಒಂದು… ಕುಸುಮಬಾಲೆಯಲ್ಲಿ ನಾನು ಹೊಸ ತಂತ್ರ ಬಳಸಿದ್ದೇನೆ ಅಥವಾ ನನ್ನ ಈ ಬರವಣಿಗೆ ಒಂದು ತಂತ್ರ. ಪ್ರಯೋಗ ಅಂತ ನಾನು ಖಂಡಿತವಾಗಿ ಭಾವಿಸುವುದಿಲ್ಲ. ಅದರಲ್ಲಿ ತಂತ್ರ ಅನ್ನುವುದು ಇಲ್ಲವೇ ಇಲ್ಲ… ನಾನು ಯಾವಾಗಲೂ ಸಹಜವಾಗಿ ಕಥೆ ಹೇಳುವವ. ತಂತ್ರ ಅನ್ನುವಂಥಾದ್ದು ಅಲ್ಲಿ ಇರುವುದಿಲ್ಲ. ಕುಸುಮಬಾಲೆಯಲ್ಲಿ ಈಗ ಜಾನಪದ ಸಹಜ ಕಥೆಯ ರೀತಿ ಜೋತಮ್ಮಗಳು ಬಂದು ಕಥೆ ಹೇಳುತ್ತಾವೆ…

ಸಂವಾದ: ಅದು ತಂತ್ರವೆಂದೇ ಅನಿಸುತ್ತದೆ… ಕಥೆ ಹೇಳುವ ರೀತಿಯೇ ಅಲ್ಲವೇ ಈ ತಂತ್ರವೆನ್ನುವುದು
ಮಹಾದೇವ: ಹೌದಾ…(ಮುಗುಳುನಗೆ)

ಸಂವಾದ: ಅದಾಯಿತಲ್ಲ… ಈ ಕಥಾನಕದ ಮುಖ್ಯ ಎಳೆ ನೋಡಿ… ಎಷ್ಟೊಂದು ತೆಳುವಾಗಿದೆ ಬಂದಿದೆ. ಕುಸುಮಳ ಒಂದು ಘಟನೆ- ಕೆಂಪಿಯ ಒಂದು ಘಟನೆ…
ಮಹಾದೇವ: ಅದೇ ಮುಖ್ಯ ಎಳೆ ಅಂತ ಯಾಕೆ ಇಟ್ಟಕೋಬೇಕು…
ಸಂವಾದ: ಕುಸುಮಬಾಲೆ ಹಾಗಿದ್ದರೆ ಏನನ್ನ ಹೇಳ್ತದೆ? ಅದು ತುಂಬ ಅಮೂರ್ತವಾಗಿಬಿಡ್ತದೆ. ಅದು ಒಂದು ತತ್ವಪದ ಆಗಬಹುದಿತ್ತು, ಆದರೆ ಕಾದಂಬರಿ ಆಗಲು ಹೋಗಿದೆ, ಎರಡೂ ಆಗಿಲ್ಲ… ನೀವು ಹಿಂದೊಮ್ಮೆ ಮಾತಾಡ್ತಾ-ನಾನು ಓದುಗನನ್ನ ಹೊರಗಡೆ ಇಟಕೊಂಡು ಬರೆಯುವುದಿಲ್ಲ… ನಾನೇ ಓದುಗ ಆಗಿ ನನ್ನನ್ನು ಕೂಡಿಸಿಕೊಂಡು ನಾನು ಕಥೆ ಹೇಳ್ತಿನಿ ಅಂತ ಹೇಳಿದ್ದಿರಿ. ಇಲ್ಲಿ ಅದು ಅತಿಗೆ ಹೋಗಿದೆ ಅನಿಸ್ತದೆ. ಬಹುಶಃ ಕುಸುಮಬಾಲೆ ನಿಮ್ಮನ್ನು ಬಿಟ್ಟು ಮತ್ಯಾರಿಗೂ ತಲುಪಲೇ ಇಲ್ಲ ಅನ್ನುವ ಅಭಿಪ್ರಾಯ ಬರ್ತಾ ಇದೆ
ಮಹಾದೇವ: ಹಾಗೇ ಅಂದಕೊಳ್ಳಿ… ಬುದ್ಧಿವಂತರಿಗೆ ಅರ್ಥವಾಗ್ತಿರಲಿಕ್ಕಿಲ್ಲ (ನಗು)

ಸಂವಾದ: ಹಾಗಲ್ಲ. ಈಗ ನೋಡಿ ಕಾದಂಬರಿಯಲ್ಲಿ ಜೀತವಿಮೋಚನಾ ಚಳವಳಿಯ ದಲಿತ ಸಂಘರ್ಷ ಸಮಿತಿಯ ಮೆರವಣಿಗೆ ವಿವರ ಬರ್ತದೆ. ಇದು ಕಾದಂಬರಿಯ ಮುಖ್ಯ ಎಳೆಗೆ ತನ್ನನ್ನು ಜೋಡಿಸಿಕೊಳ್ಳುವುದೇ ಇಲ್ಲ. ಸ್ವತಂತ್ರವಾಗಿ ಈ ಬರಹ ಇಷ್ಟವಾಗುತ್ತದೆ. ಅದರಲ್ಲಿನ ತಿಳಿಹಾಸ್ಯವಂತೂ ನಿಮ್ಮ ವೈಶಿಷ್ಟ್ಯ… ಆದರೆ ಈ ಅಧ್ಯಾಯ ಕಾದಂಬರಿಯ ಮುಖ್ಯ ಎಳೆಯೊಂದಿಗೆ ಕೇಂದ್ರೀಯವಾಗಿ ಜೋಡಿಸಿ ಕೊಳ್ಳುವುದಿಲ್ಲ… ಒಂದು ಮುಖ್ಯಧಾರೆ ಕಾದಂಬರಿಯಲ್ಲಿ ಹರಿಯುತ್ತಿದ್ದರೆ ಮುಂದುಗಡೆ ಇನ್ನೊಂದು ಧಾರೆ ಕಾಣುತ್ತದೆ. ಅಕ್ಕಪಕ್ಕದಲ್ಲಿ ಇನ್ನಷ್ಟು ಧಾರೆ ಕಾಣಿಸುತ್ತದೆ. ಅವೆಲ್ಲಾ ಎಲ್ಲೋ ಸೇರಿಕೊಳ್ಳಬಹುದೆಂದರೆ ಅವು ಸೇರಿಕೊಳ್ಳುವುದೇ ಇಲ್ಲ. ಎಲ್ಲಾ ಅಕ್ಕಪಕ್ಕದಲ್ಲಿ ಬೇರೆ ಬೇರೆಯಾಗಿ ಹರಿಯುತ್ತದೆ.
ಮಹಾದೇವ: ಹರಿಯಲಿ ಬಿಡಿ… ಅಂತೂ ನೆಲಕ್ಕೆ ತಂಪೋ (ನಗು)

ಸಂವಾದ: ನೀವು ನಿಮ್ಮ ಕಥೆಗಳಲ್ಲಿ ಆರಂಭದಿಂದಲೇ ನಿಮ್ಮದೇ ಆದ ಒಂದು ಭಾಷೆಯನ್ನು ರೂಪಿಸಿಕೊಂಡಂತೆ ಕಾಣುತ್ತದೆ. ಅದರ ಅವಶ್ಯಕತೆ ಏನಿತ್ತು?… ಇಂಥದ್ದಕ್ಕೆ ಪ್ರೇರಣೆ ಪ್ರಭಾವ ದೊರೆತದ್ದು ಹೇಗೆ?
ಮಹಾದೇವ: ಪ್ರಭಾವ ಅಂಥಲ್ಲ… ಪಾತ್ರಗಳನ್ನು ಅವುಗಳ ಸ್ವಾಭಾವಿಕ ವಾತಾವರಣದಲ್ಲಿ ಇಡಬೇಕೆನ್ನುವ ನನ್ನ ಪ್ರಯತ್ನದ ಬಗ್ಗೆ ಹೇಳಿದೆನಲ್ಲ… ಅದರ ಅಂಗವಾಗಿಯೇ ಇದು ಬಂದಿರಬೇಕು. ಅದೂ ಅಲ್ಲದೇ ಕಥೆಗಳಲ್ಲಿ ಈ ಭಾಷೆ ಬಳಸಿದಾಗ ಬಂದ ಪ್ರತಿಕ್ರಿಯೆ – ಸಾಹಿತ್ಯದ ಗೆಳೆಯರು ಇದನ್ನು ಸ್ವೀಕರಿಸಿದ ರೀತಿ ನೀಡಿದ ಪ್ರೋತ್ಸಾಹ-ಇವು ಕೂಡ ನನ್ನ ಈ ಭಾಷೆಯ ಬಳಕೆಯ ಬಗ್ಗೆ ನನಗೆ ಪ್ರೇರಣೆ ನೀಡಿರಬೇಕು…

ಸಂವಾದ: ನೀವು ಲೋಹಿಯಾರವರ ಸಮಾಜವಾದಿ ಚಿಂತನೆಯಿಂದ ಪ್ರಭಾವಿತರಾದವರು ಕರ್ನಾಟಕ ಸಮಾಜವಾದಿ ಯುವಜನ ಸಭಾದ ಸಂಚಾಲಕರಾಗಿ ಕೆಲಸ ಮಾಡಿದ್ದೀರಿ ನೀವು ಸಮಾಜವಾದಿ ಚಿಂತನೆಯಿಂದ ಪ್ರಭಾವಿತರಾಗಲು ನಿಮ್ಮಲ್ಲಿನ ತುಡಿತಗಳು ಕಾರಣವೋ? ಅಥವಾ ಆಕಸ್ಮಿಕವಾಗಿ ಆದದ್ದೋ…
ಮಹಾದೇವ: ಅದು ಆಕಸ್ಮಿಕವಾದದ್ದೆನಿಸುತ್ತದೆ… ಆಗ ಸಂಘಟನೆಯ ಸಂಪರ್ಕದಲ್ಲಿ ಬಂದೆ

ಸಂವಾದ: ಹಾಗಂದರೆ ನೀವು ಆಗ ಕಮ್ಯುನಿಷ್ಟ್ ಸಂಘಟನೆಯ ಸಂಪರ್ಕಕ್ಕೆ ಬಂದಿದ್ದರೆ ಅದನ್ನು ಸೇರುತ್ತಿದ್ದಿರಾ?
ಮಹಾದೇವ: ಹೌದೆನಿಸುತ್ತದೆ…

ಸಂವಾದ: ಅಂದರೆ R.S.S ಸಂಪರ್ಕದಲ್ಲಿ ಬಂದಿದ್ದರೆ? ಅದನ್ನು ಸೇರುತ್ತಿದ್ದಿರಾ?
ಮಹಾದೇವ: ಇಲ್ಲ… ನಾನು R.S.S ನಲ್ಲಿ ಇದ್ದು ಹೊರಗೆ ಬಂದವನು… ಶಾಲೆಯಲ್ಲಿದ್ದಾಗ ನಾನು R.S.S ಗೆ ಹೋಗುತ್ತಿದ್ದೆ. ಒಂದು ರೀತಿಯಾಗಿ ಅದರ ಪ್ರಭಾವದಲ್ಲೇ ಇದ್ದೆ… ಒಂದು ನೆನಪು ಬರ್ತದೆ ಮೋಹನ ಅಂತ – ಈಗ ಎಲ್ಲಿಯೋ ಎಂಜಿನಿಯರ್ ಆಗಿದ್ದಾನೆ… ಬ್ರಾಹ್ಮಣರ ಹುಡುಗ. ಅವನು ಸಂಘದ ಕಾರ್ಯಕರ್ತ. ಅವ ಒಮ್ಮೆ ನನ್ನ ಎಂಜಲನ್ನು ಎತ್ತಿದ. ನನಗೆ ಅದು ಆಶ್ಚರ್ಯ ಎನಿಸಿತ್ತು. ಪ್ರಭಾವ ಬೀರಿತ್ತು. ಆದರೆ ಕ್ರಮೇಣ ಅವರು ಹೇಳುವ ಎಲ್ಲರೂ ಒಂದೇ ಎನ್ನುವ ಮಾತು ನಟನೆ ಅಂತೆ ತೋರತೊಡಗಿತು ಮತ್ತು ಇದೆಲ್ಲಾ ಅಲ್ಲದೇ, ಬರೀ ಅವರ ಸಂಪರ್ಕವೇ ಸಾಕು, ಒಂದು ರೀತಿಯ ಮುಸ್ಲಿಂರ ಬಗೆಗೆ, ಕ್ರಿಶ್ಚಿಯನ್ನರ ಬಗೆಗೆ ತನ್ನಿಂದ ತಾನೇ ದ್ವೇಷಭಾವನೆ ಮೂಡಿಬಿಡ್ತದೆ.. ಅದನ್ನ ಅವರು ವ್ಯಕ್ತವಾಗಿ ಹೇಳದಿದ್ದರೂ, ಕಲಿಸದಿದ್ದರೂ ಅದು ಸಹಜವಾಗಿ ನಮ್ಮ ಮನಸ್ಸಿನಲ್ಲಿ ಮೂಡ್ತದೆ… ಹೀಗಾಗಿ ನಾನು R.S.S ಬಿಟ್ಟವ… ಅದಕ್ಕೆ ಅದನ್ನ ಮತ್ತೆ ಸೇರುವ ಪ್ರಶ್ನೆಯೇ ಇಲ್ಲ.

ಸಂವಾದ: ಸಮಾಜವಾದಿ ಚಿಂತನೆಗಳ ಪ್ರಭಾವ ನಿಮ್ಮ ಕಥೆಗಳ ಮೇಲೆ ಆಗಿರಬಹುದಲ್ಲವೆ?
ಮಹಾದೇವ: ಆಗಿರಬಹುದು… ಸಹಜವಾಗಿ.

ಸಂವಾದ: ಹಾಗೆಯೇ. ನೀವು ಹೇಳಿದಿರಲ್ಲ… ಸಮಾಜವಾದಿ ಚಿಂತನೆಯ ಪ್ರಭಾವಕ್ಕೆ ಒಳಗಾದದ್ದು ಆಕಸ್ಮಿಕವೆಂದು. ಈ ಆಕಸ್ಮಿಕದಲ್ಲಿ ನೀವು ಕಮ್ಯುನಿಷ್ಟ್ ಚಿಂತನೆಯ ಪ್ರಭಾವಕ್ಕೆ ಒಳಗಾಗಿದ್ದರೆ ನಿಮ್ಮ ಕಥೆಗಳು ಇದೇ ರೂಪದಲ್ಲಿ ಬರುತ್ತಿದ್ದವ…
ಮಹಾದೇವ: ನಾನು ಬರೆಯುವಾಗ ನನಗೆ ಈ ಯಾವ ಚಿಂತನೆಗಳು ಬದ್ಧತೆಗಳಾಗಿ ಕಾಡುವುದಿಲ್ಲ. ಸಮಾಜವಾದಿ ಚಿಂತನೆಗಳಾಗಲಿ, ಕಮ್ಯುನಿಷ್ಟ್ ಚಿಂತನೆಗಳೇ ಆಗಲಿ, ದಲಿತ ಸಂಘರ್ಷ ಸಮಿತಿಯ ಚಟುವಟಿಕೆಗಳೇ ಆಗಲಿ… ಇವು ಯಾವ ಬದ್ಧತೆಗಳಾಗುವುದಿಲ್ಲ.

ಸಂವಾದ: ಹಾಗಿದ್ದರೆ ನೀವು ಆಕಸ್ಮಿಕವಾಗಿ ಕಮ್ಯುನಿಷ್ಟ್ ಪಕ್ಷ ಸೇರುವಂತಾಗಿದ್ದರೆ ನೀವು ಆ ಪಕ್ಷದಲ್ಲಿ ಉಳಿಯಲು ಸಾಧ್ಯವಾಗುತ್ತಿತ್ತೆ?
ಮಹಾದೇವ: ಆಗುತ್ತಿರಲಿಲ್ಲಾಂತ ಕಾಣ್ತದೆ… ನನ್ನ ಬರವಣಿಗೆಯನ್ನ ನಿರ್ದೇಶಿಸಕ್ಕಾಗದೇ ಹೊರಕ್ಕೆ ಹಾಕ್ತಿದ್ರೋ ಏನೋ…

ಸಂವಾದ: ಈಗ ದಲಿತ ಸಂಘರ್ಷ ಸಮಿತಿ ಹೇಗಿದೆ ಅನಿಸ್ತದೆ…
ಮಹಾದೇವ: ಅದು ಹಿಂದಕ್ಕೂ ಹೋಗ್ತಾ ಇಲ್ಲ, ಮುಂದಕ್ಕೂ ಬರ್ತಾ ಇಲ್ಲ ಅನಿಸ್ತದೆ.

ಸಂವಾದ: ಇದಕ್ಕೆ ನಿಮ್ಮಂಥವರ ನಿಷ್ಕ್ರಿಯತೆಯೇ ಕಾರಣವಲ್ಲವೇ? ನೀವೂ ರಾಜ್ಯ ಸಂಚಾಲಕರಾಗಿದ್ದಿರಿ…
ಮಹಾದೇವ: ನಾನು ರಾಜ್ಯ ಸಂಚಾಲಕನಾಗಿದ್ದಾಗಲೇ ಜಿಲ್ಲಾ ಸಂಚಾಲಕರಿಗೆ ತಾವು ಜಿಲ್ಲಾ ಸಂಚಾಲಕರು ಅಂತ ಅನಿಸಿದ್ದು… ದಲಿತ ಸಂಘರ್ಷ ಸಮಿತಿಯ ಸಮಸ್ಯೆ ಏನೆಂದರೆ? ಅದು ಸಮಾಜದ ಡಾಕ್ಟ್ರಾಗಿ ವರ್ತಿಸಬೇಕಾದದ್ದು… ಆದರೆ ಅದು ಪೇಶಂಟ್‍ನಂತೆ ವರ್ತಿಸ್ತಾ ಇದೆ. ನಾವು ಈ ತರದ ತಪ್ಪು ಮಾಡಿದಿವಿ ಅಂತ ಈಗ ನನಗೆ ಗೊತ್ತಾಗ್ತಾ ಇದೆ.

ಸಂವಾದ: ಪರಿಸ್ಥಿತಿ ಹೀಗಿರುವಾಗ ಅದು ರಾಜಕೀಯಕ್ಕೆ ಇಳಿಯುವುದು ಎಷ್ಟರ ಮಟ್ಟಿಗೆ ಸರಿ?
ಮಹಾದೇವ: ಹಂಗಲ್ಲ… ನಾವು ಎಲ್ಲಾ ರೀತಿಯಿಂದ ಪರಿಶುದ್ಧಿ ಮಾಡಿಕೊಂಡೆ ಏನಾದರೂ ಕೆಲಸಕ್ಕೆ ಹೊರಡ್ತಿವಿ ಅಂದ್ರೆ ಅದು ಆಗದ ಮಾತು… ಕೆಲಸಾ ಮಾಡ್ತಾ ಮಾಡ್ತಾನೆ ಸರಿಹೋಗಬೇಕು…

ಸಂವಾದ: ನಿಮಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದ ಮೇಲೆ ನೀವು ವಿವಾದಕ್ಕೆ ಸಿಕ್ಕಿ ಹಾಕಿಕೊಂಡಿದ್ದೀರಿ, ಇತ್ತೀಚಿನ ಸಂಕ್ರಮಣಗಳಲ್ಲಿ ಬಂದ ಲೇಖನ – ಪ್ರತಿಕ್ರಿಯೆಗಳನ್ನು ನೀವು ಗಮನಿಸಿರಬಹುದು. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ?
ಮಹಾದೇವ: ಬೇಜಾರು ಜಾಸ್ತಿ ಆಗಿ ಆಗಿ ಈಗ ಅದರ ತೀವ್ರತೆ ಕಳೆದು ಹೋಗಿದೆ… ಅಲ್ಲ, ಕುಸುಮಬಾಲೆ ನಿಮಗೆ ಒಳ್ಳೆಯ ಕಾದಂಬರಿ ಅನಿಸದಿದ್ದಲ್ಲಿ – ಅದು ಅರ್ಥವಾಗುವುದಿಲ್ಲ ಅನಿಸಿದಲ್ಲಿ – ಚಂಪಾ ಆಗಲಿ ಅಥವಾ ಮತ್ತೆ ಯಾರೇ ಆಗಲಿ- ಅದರ ಬಗ್ಗೆ ಹಾಗೆ ಬರೆದರೆ ನನಗೆ ಬೇಜಾರೇನೂ ಆಗುವುದಿಲ್ಲ – ಆದರೆ ಕೇವಲ ಊಹಾಪೋಹದ ಮೇಲೆ ವೈಯಕ್ತಿಕ ಆರೋಪ ಮಾಡುವುದರಿಂದ ಪ್ರಯೋಜನವಿಲ್ಲ. ನನ್ನ ಕೃತಿಯಲ್ಲಿ ಅಂತಿಮವಾಗಿ ಏನನ್ನೂ ಉಳಿಸಿಕೊಳ್ಳಬೇಕು, ಏನನ್ನು ಬಿಡಬೇಕು ಅನ್ನುವುದು ಸಂಪೂರ್ಣವಾಗಿ ನನಗೆ ಸೇರಿದ್ದು. ಅದಕ್ಕೆ ನಾನೇ ಹೊಣೆ, ಬೇರೆ ಯಾರು ಅಲ್ಲ. ಈ ಸಂಬಂಧವಾಗಿ ಬೇರೆಯವರ ಕಡೆಗೆ ಬೊಟ್ಟು ಮಾಡುವುದು ಸದಭಿರುಚಿ ಆಗಲಾರದು.

ಸಂವಾದ: ನಿಮ್ಮ ಕೃತಿ ಕುರಿತ ವಿಮರ್ಶೆಯೊಂದು ಪತ್ರಿಕೆಯಲ್ಲಿ ಪ್ರಕಟವಾಗುವ ಮೊದಲು ಅದರ ಕೆಲವು ಭಾಗಗಳನ್ನು ನೀವು ತೆಗೆಸಿ ಹಾಕಿದಿರೆನ್ನುವ ಆರೋಪವಿದೆಯಲ್ಲ?
ಮಹಾದೇವ: ಅದು ಹಾಗಲ್ಲ. ಚಂಪಾ ಈ ಸಂಬಂಧ ವಿಮರ್ಶೆಯ ಮಾಫಿಯಾ ಅದು ಇದೂ ಅಂತ ಭಯಾನಕ ಶಬ್ದ ಬಳಸಿ ಏನನ್ನೋ ಮಾಡಬಾರದನ್ನ ಮಾಡಲಾಗಿದೆ ಎನ್ನುವ ಅಭಿಪ್ರಾಯ ಮೂಡಿಸಲು ಪ್ರಯತ್ನಿಸಿದ್ದಾರೆ. ಆದರೆ ಆಗಿದ್ದೆಂದರೆ – ಡೆಕನ್ ಹೆರಾಲ್ಡ್‍ಗೆ ಪೋಲಂಕಿಯವರು ಕುಸುಮಬಾಲೆ ಬಗ್ಗೆ ಬರೆದು ಕಳುಹಿಸಿದ ಲೇಖನದಲ್ಲಿ ಕೃತಿಯಲ್ಲಿಲ್ಲದ ಭಾಗವನ್ನು ಉಲ್ಲೇಖಿಸಿ ಕೆಲವು ಅಭಿಪ್ರಾಯ ಮಂಡಿಸಿದ್ದರು ಎನ್ನುವುದು ಪತ್ರಿಕೆಯಲ್ಲಿನ ಓರ್ವ ಗೆಳೆಯನಿಂದ ತಿಳಿಯಿತು. ಆಗ ನಾನು ಶ್ರೀ ಪೋಲಂಕಿ ಅವರಿಗೆ ಪುಸ್ತಕದಲ್ಲಿಲ್ಲದ ಭಾಗದ ಮೂಲಕ ಪುಸ್ತಕವನ್ನು ಮತ್ತು ಲೇಖಕನನ್ನು ಚರ್ಚೆಗೀಡುಮಾಡುವುದು ಸರಿಯಲ್ಲವೆಂದು ಲೇಖನದಲ್ಲಿ ಬದಲಾವಣೆ ಮಾಡದಿದ್ದರೆ ಇಷ್ಟವಿಲ್ಲದಿದ್ದರೆ ಕನಿಷ್ಟ ಚರ್ಚೆಗೆ ನಿಮಿತ್ತವಾದ ಆ ಭಾಗ ಪುಸ್ತಕದಲ್ಲಿ ಸೇರಿಲ್ಲವೆನ್ನುವ ಟಿಪ್ಣಣಿಯನ್ನಾದರೂ ಬರೆಯಬೇಕೆಂದು ಸೂಚಿಸಿದೆ. ಆದರೆ ಅವರು ನನ್ನ ಆ ಸೂಚನೆಯನ್ನು ಒಪ್ಪದಿದ್ದಾಗ ಲೇಖನದ ಅಂಥ ಉಲ್ಲೇಖಗಳನ್ನು ತೆಗೆಯಲು ಮನವಿ ಮಾಡಬೇಕಾಯಿತು ಅಷ್ಟೇ.