ದೇವನೂರು ಮಹಾದೇವ ಅವರ ಕಥನ ಸಾಹಿತ್ಯದಲ್ಲಿ ಹೆಣ್ಣು- ಡಾ.ಎಚ್.ಎಲ್.ಪುಷ್ಪಾ
[ಯಾಜಿ ಪ್ರಕಾಶನ ಪ್ರಕಟಿಸಿರುವ ಕವಿ, ವಿಮರ್ಶಕಿ ಡಾ.ಎಚ್.ಎಲ್. ಪುಷ್ಪಾ ಅವರ ‘ಸ್ತ್ರೀ ಎಂದರೆ ಅಷ್ಟೇ ಸಾಕೆ’ ಕೃತಿಯಲ್ಲಿ ‘ದೇವನೂರು ಮಹಾದೇವ ಅವರ ಕಥನ ಸಾಹಿತ್ಯದಲ್ಲಿ ಹೆಣ್ಣು’ ಎಂಬ ಈ ಲೇಖನ ಪ್ರಕಟವಾಗಿದೆ.]
ನವ್ಯದ ಸಂದರ್ಭದಲ್ಲಿ ಬರೆಯಲಾರಂಭಿಸಿದ ದೇವನೂರು ಮಹಾದೇವ ಆರಂಭದ ಹಂತದಲ್ಲಿ ನವ್ಯ ಸಾಹಿತ್ಯ ಕಟ್ಟಿಕೊಟ್ಟ ‘ಅನಾಥಪ್ರಜ್ಞೆಯ ಪರಕೀಯತೆ’ಯಂತಹ ಸಂವೇದನಗಳನ್ನು ಮಾತ್ರ ಸ್ವೀಕರಿಸಿದರು. ಈ ಪ್ರಜ್ಞೆ ದ್ಯಾವನೂರು ಕಥಾ ಸಂಕಲನದ ಕೆಲವು ಕಥೆಗಳಲ್ಲಿ ಯಥಾರ್ಥದಲ್ಲಿಯೇ ಬಳಕೆಯಾಗಿದೆ. ಗ್ರಸ್ತರು, ಒಂದು ದಹನದ ಕಥೆ, ದತ್ತ –ಈ ಕಥೆಗಳಲ್ಲಿ ತನ್ನ ನೆಲ, ಪರಿಸರದ ಪರಕೀಯತೆಯಿಂದ ನರಳುವ ನಾಯಕಿಯರಿದ್ದಾರೆ. ‘ಮಾರಿಕೊಂಡವರು’ ಕತೆಯಲ್ಲಿ ಈ ಪರಕೀಯತೆ ಪ್ರಧಾನವಾಗಿದ್ದು ದಲಿತಪ್ರಜ್ಞೆ ಮುಖ್ಯವಾದುದಲ್ಲ, ಬಡತನ ಅಸಹಾಯಕತೆಗೆ ತಮ್ಮನ್ನು ಬೀರ, ಲಕ್ಷ್ಮಿ ಕೊಟ್ಟುಕೊಂಡಿದ್ದಾರೆಯೇ ವಿನಃ ಜಾತಿ ಅವರ ದ್ವಂದ್ವದ ಬದುಕಿಗೆ ಕಾರಣವಾಗಿಲ್ಲ.
ನವ್ಯರ ಜೊತೆಯಲ್ಲಿ ಬರೆಯಲಾರಂಭಿಸಿದ ಮಹಾದೇವರಿಗೆ ಸ್ತ್ರೀಯರನ್ನು ಇತರ ಲೇಖಕರು ತಮ್ಮ ವ್ಯಕ್ತಿತ್ವದ ಶೋಧನೆಯ ಮಾರ್ಗವೆಂಬಂತೆ ಬಳಸಿಕೊಂಡರೂ ಅದು ಪ್ರಮುಖವಾದ ಅಂಶವಾಗಿಲ್ಲ. ದೇವನೂರು ಕಥೆಗಳು, ಒಡಲಾಳ, ಕುಸುಮಬಾಲೆ- ಈ ಕೃತಿಗಳಲ್ಲಿ ಹೆಣ್ಣನ್ನು ‘ಮಾತೃತ್ವದ’ ಆರೋಗ್ಯಕರ ಮುದ್ರೆಗಳಲ್ಲಿಯೇ ಚಿತ್ರಿಸಲಾಗಿದೆ. ಯಾವುದೋ ಹಂತದಲ್ಲಿ(ಲೇಖಕರು ಅಷ್ಟಾಗಿ ಗಮನಹರಿಸದ, ವಿವರ ನೀಡದ) ಲೈಂಗಿಕವಾಗಿ ತೊಡಗಿಸಿಕೊಂಡರೂ ಗರ್ಭಿಣಿಯರಾದ ನಂತರ ತಮ್ಮ ಸಂತಾನದ ಕಡೆ ಪೂರ್ತಿಯಾಗಿ ಗಮನಹರಿಸಿದವರು. ಹೆಣ್ಣುಗಂಡಿನ ಸಂಬಂಧದ ವಿಕೃತಿಗಳು ಸಂತಾನವೆಂಬ ನಿಕಷದಲ್ಲಿ ಮಿಂದು ಬಂದ ಸುಕೃತಿಗಳಾಗಿ ಬದಲಾಗುತ್ತವೆ. ಸಂತಾನದ ನಂತರ ಅವರ ಬದುಕುಗಳಿಗೆ ನಿಶ್ಚಿತವಾದ ಗುರಿಯಿದೆ, ಕಲ್ಪನೆಗಳಿವೆ.
ಈಗಾಗಲೇ ಎಲ್ಲರೂ ಒಪ್ಪಿಕೊಂಡಿರುವಂತೆ ದ್ಯಾವನೂರರ ಕಥೆಗಳೆಲ್ಲವೂ ಮೇಲಿನ ಕಾರಣಕ್ಕಾಗಿ ತಮ್ಮದೇ ಆದ ರೀತಿಯಲ್ಲಿ ವಿಶಿಷ್ಟವಾಗಿವೆ. ಸಾಕಷ್ಟು ಬಾರಿ ಚರ್ಚೆಗೆ ಒಳಗಾದ ‘ಮಾರಿಕೊಂಡವರು’ ಕಥೆಯಲ್ಲಿನ ಲಕ್ಷ್ಮಿ-ಬೀರ ಗಂಡ ಹೆಂಡಿರಾದರೂ ಲಕ್ಷ್ಮಿಗೆ ಹತ್ತಿರವಾಗುವ ಕಿಟ್ಟಪ್ಪ ಯಜಮಾನನ ಮಗ. ಕಿಟ್ಟಪ್ಪ ಲಕ್ಷ್ಮಿಗೆ ಹತ್ತಿರವಾಗುತ್ತಿದ್ದಂತೆ ಬೀರ ಅವಳಿಂದ ದೂರವಾಗುತ್ತಾನೆ. ಅಪ್ರಜ್ಞಾವಸ್ಥೆಯಲ್ಲಿ ಅವರಿಬ್ಬರ ಸಂಬಂಧವನ್ನು ಪ್ರತಿಭಟಿಸಿದರೂ ಪ್ರಜ್ಞಾವಸ್ಥೆಯಲ್ಲಿ ಆ ಸಂಬಂಧವನ್ನು ಅಸಹಾಯಕನಾಗಿಯೇ ಒಪ್ಪಿ ಕೊಳ್ಳುತ್ತಾನೆ. ಲಕ್ಷ್ಮಿಯ ಒಳಗುದಿಗಳನ್ನು ಚಿತ್ರಿಸದ ಲೇಖಕರು ಅವಳನ್ನು ಒಳ್ಳೆಯ ಆದರೆ ಅಸಹಾಯಕ ಹೆಣ್ಣುಮಗಳಾಗಿಯೇ ಚಿತ್ರಿಸುತ್ತಾರೆ. ಅಸಹಾಯಕತೆಯಿಂದ ಅವಳು ಕಿಟ್ಟಪ್ಪನೊಂದಿಗೆ ಸಂಬಂಧ ಇಟ್ಟುಕೊಂಡರೂ ಅಲ್ಲಿ ತಪ್ಪಿತಸ್ಥ ಭಾವನೆಗಳಿಲ್ಲ. ಈ ಪಾಪಪ್ರಜ್ಞೆಗಳಿಲ್ಲದ ಸಂಕರಗಳನ್ನು, ಸಾಮಿಪ್ಯಗಳನ್ನು ಸಹಜವಾಗಿಯೇ ಅಪೇಕ್ಷಿಸಿದ, ಪಡೆದ ಹೆಣ್ಣುಮಕ್ಕಳ ಚಿತ್ರಣಗಳನ್ನು ಆಂತರಿಕ ಸಂಘರ್ಷಗಳಿಲ್ಲ ಎಂಬಂತೆ ಚಿತ್ರಿಸುತ್ತಾರೆ. ‘ಒಂದು ದಹನದ ಕತೆ’ಯ ನಾಯಕ ಮತ್ತು ಮೇಲ್ವರ್ಗದ ಕಮಲಿಯ ಸಂಬಂಧವೂ ಕೂಡ ಹೀಗೆಯೇ ಜಾತಿಮತಗಳ ಸಂಕೋಲೆಯಿಂದಾಚೆ ಪಡೆಯಬೇಕಾಗಿರುವ ಸ್ವರೂಪವನ್ನು ಸಹಜವಾಗಿಯೇ ಕಟ್ಟಿಕೊಡುತ್ತದೆ.
ಒಡಲಾಳದ ‘ಸಾಕವ್ವ’ ಈ ಎಲ್ಲಾ ಸೀಮಿತ ಕಾಲಘಟ್ಟದ, ನವ್ಯ ಹಾಗೂ ದಲಿತ ಪ್ರಜ್ಞೆಯಿಂದಾಚೆ ಕಡೆದ ಅದ್ಭುತ ಆದರೆ ಸಹಜವಾದ ವ್ಯಕ್ತಿತ್ವ. ತನ್ನ ದುಡಿಮೆ ಹಾಗೂ ಶ್ರಮದಿಂದ ಮನೆ ಜಮೀನನ್ನು ಸಾಧಿಸಿಕೊಂಡು ಪಡೆದ ಗಟ್ಟಿಗಿತ್ತಿ ಸಾಕವ್ವ. ಮೂರು ಜನ ಗಂಡುಮಕ್ಕಳು, ಇಬ್ಬರು ಹೆಣ್ಣು ಮಕ್ಕಳ ತಾಯಾದ ಸಾಕವ್ವ ಕುಟುಂಬದ ಕೇಂದ್ರ ವ್ಯಕ್ತಿ. ಅತಿ ಜಾಣೆಯಾದರೂ ಒಮ್ಮೊಮ್ಮೆ ಪೆದ್ದುತನದಿಂದ ಕೂಡಿದ ಮುಗ್ಧೆಯೂ ಹೌದು. ಈಕೆ ಯಾವುದೇ ಹಳ್ಳಿಯ, ಯಾವುದೇ ಕುಟುಂಬದಲ್ಲಿ ಇರಬಹುದಾದ ಯಜಮಾನಿಕೆ, ಜಗಳಗಂಟಿತನದ ಹೆಣ್ಣು. ಏಕಕಾಲಕ್ಕೆ ಗಂಡುಮಕ್ಕಳ, ಸೊಸೆಯಂದಿರ ಬಾಯಿಬಡೆಯಬಲ್ಲ ಜೋರು ಬಾಯಿಯ ಮುದುಕಿ. ತನ್ನ ಹುಂಜ ಕಳೆದುಹೋದಾಗ ಅವಳು ನಡೆಸುವ ಪತ್ತೆದಾರಿಕೆ, ತಿಪ್ಪೆಯಲ್ಲಿ ಅದನ್ನು ಹುಡುಕಿದ್ದು, ಎಲ್ಲರ ಮನೆಯ ಸಾರಿನ ವಾಸನೆಯಲ್ಲಿ ಹುಡುಕಿದ್ದು ಅವಳ ಅಸಾಮಾನ್ಯ ಗ್ರಹಿಕೆಯನ್ನು ಪರಿಚಯಿಸುತ್ತದೆ. ಹಲವು ರೀತಿಯ ‘ಪುರಾಣಗಳ’ ನೆಲೆಗಳು ಈ ಕಿರು ಕಾದಂಬರಿಯಲ್ಲಿವೆ ಎಂದು ಈಗಾಗಲೇ ಹಲವು ವಿಮರ್ಶಕರು ಚಿತ್ರಿಸಿದ್ದಾರೆ. ಇಲ್ಲಿನ ಸಾಕವ್ವ ಅನಕ್ಷರಸ್ಥಳಾದರೂ ತನ್ನದೇ ಆದ ಜೀವನ ಕಲಿಸಿದ, ಬಡತನ ಉಣಿಸಿದ ಕಷ್ಟಕರ ಅನುಭವದಲ್ಲಿ ಸಂಪೂರ್ಣ ಮಾಗಿದವಳು. ಎಷ್ಟು ಮಾಗಿದ್ದಾಳೆಂದರೆ ತಾನಿದ್ದಕಡೆ ಯಮದೇವನೂ ಓಡಿಹೋಗುತ್ತಾನೆ ಎಂದು ಹೇಳಬಲ್ಲಳು ಮತ್ತು ಅವನನ್ನು ಎದುರಿಸಬಲ್ಲಳು. ಅವಳು ಬದುಕಿದ ಕಷ್ಟದ ಬಾಳು ಅವಳಿಗೆ ಕೊಟ್ಟ ಕೆಚ್ಚು, ನಂಬಿಕೆ ಅದಾಗಿತ್ತು. ಇಂತಹ ಕೆಚ್ಚಿನ ಹೆಣ್ಣುಗಳು ದೇವನೂರರ ಕಥನಕ್ರಮದಲ್ಲಿ ಸಹಜವಾಗಿಯೇ ಕಂಡುಬರುತ್ತಾರೆ. ಗಂಡನನ್ನು ಕಳೆದುಕೊಂಡ ಇವರು ಧೈರ್ಯಕಳೆದುಕೊಳ್ಳದೆ ಮನೆಕಟ್ಟಿದವರು, ಮನೆಯನ್ನು ಉಳಿಸಿಕೊಂಡವರು ಆಗಿರುತ್ತಾರೆ.
ಹಲವು ರೀತಿಯ ಸಮಾಜಶಾಸ್ತ್ರೀಯ ಅಧ್ಯಯನಗಳಿಗೆ ಇಂದಿನ ಬದುಕು ಹಾಗೂ ಸಾಹಿತ್ಯ ಒಳಗಾಗುತ್ತಿರುವಾಗ ವಿಸ್ಮೃತಿಗೆ ಒಳಗಾಗುತ್ತಿರುವ ಹಲವು ವರ್ಗ ವರ್ಣಗಳ ಬದುಕಿನ ಏರಿಳಿತಗಳನ್ನು ಲೇಖಕರು ಕಟ್ಟಿಕೊಡುತ್ತಾರೆ. ದುಡಿಯುವ ಮನಸ್ಸಿದ್ದರೂ, ರಟ್ಟೆಯಲ್ಲಿ ಕಸುವಿದ್ದರೂ ಕೆಲಸವಿಲ್ಲದೆ ಕಂಗೆಟ್ಟು ಮನೆಯಲ್ಲಿ ಕುಳಿತು ಹಸಿವಿನಿಂದ ಬಸವಳಿದ ಗಂಡು ಹೆಣ್ಣುಗಳು ಒಡಲಾಳದಲ್ಲಿ ಸಿಕ್ಕುತ್ತಾರೆ. ಒಡಲಾಳದ ಮೊದಲರ್ಧದಲ್ಲಿ ಸಾಕವ್ವ ತನ್ನ ಕಳೆದ ಹುಂಜದ ಅನ್ವೇಷಣೆಯಲ್ಲಿ ತೊಡಗಿದರೆ ಇನ್ನರ್ಧದಲ್ಲಿ ಸಾಹುಕಾರ ಎತ್ತಪ್ಪನವರ ಕಡಲೇಕಾಯಿ ಮಿಲ್ಲಿನಲ್ಲಿ ನಡೆಯುತ್ತಿರುವ ಕಳ್ಳತನದ ಶೋಧ ನಡೆಯುತ್ತದೆ. ಸಾಕವ್ವನ ಮನೆಯಲ್ಲಿ ಮುಂದುವರಿದ ಈ ಶೋಧ ಹಸಿವಿನ ಮುಂದೆ ಯಾವ ಅಧಿಕಾರವೂ ಪೊಲೀಸು ವ್ಯವಸ್ಥೆಯೂ ನಿಲ್ಲಲಾರದು ಎಂಬುದನ್ನು ಸೂಚಿಸುತ್ತದೆ. ಇದೇ ಸಂದರ್ಭದಲ್ಲಿ ತನ್ನ ಕಳೆದುಹೋದ ಹುಂಜ ಹುಡುಕಲು ಇದ್ದ ಇನ್ನೊಂದು ಹುಂಜನನ್ನು ಕೊಡುವ ಸಾಕವ್ವನ ಮುಗ್ಧತೆಯನ್ನು ಸಹ ಕತೆ ಕಟ್ಟಿಕೊಡುತ್ತದೆ. ಬಡತನ, ಅಸಹಾಯಕತೆ, ಹಸಿವುಗಳ ಮದ್ಯೆಯೂ ತನ್ನ ಕುಟುಂಬವನ್ನು ಕಾಪಾಡುವ ಹೆಂಟೆ ಕೋಳಿಯಂತ ಸಾಕವ್ವ ಹಾಗೂ ಆಕೆಯ ಮಾತೃತ್ವವೆಂಬ ಒಡೆತನದ ಬಗ್ಗೆ ಹೆಚ್ಚು ಗಮನಹರಿಸಲಾಗಿದೆ. ಒಡಲಾಳ ಪ್ರಜ್ಞಾಪೂರ್ವಕವಾಗಿಯೇ ಜಾತಿಗಿಂತ ಮಿಗಿಲಾಗಿ ಬಡತನದ ಅಸಹಾಯಕತೆಯಿಂದ ನರಳುವ ಸ್ಥಿತಿಯಲ್ಲಿದ್ದರೂ, ಚರ್ಮ ಮೂಳೆಯ ಸಾಂಗತ್ಯ ತಪ್ಪಿ ಸ್ವತಂತ್ರವಾಗಿ ಚರ್ಮ ಅಲ್ಲಾಡುವ ಸ್ಥಿತಿಯಲ್ಲಿದ್ದರೂ ಜೀವನ ಪ್ರೀತಿಯನ್ನು ಬಿಡದ ಮುದುಕಿಯೊಬ್ಬಳ ಕಥೆಯಾಗಿಯೆ ಓದುಗರ ಗಮನ ಸೆಳೆಯುತ್ತದೆ.
‘ಕುಸುಮಬಾಲೆ’ ದಲಿತ ಸಂಘಟನೆ ತನ್ನದೇ ಆದ ಖಚಿತತೆ ಹಾಗು ವ್ಯಾಪ್ತಿಯನ್ನು ಪಡೆದ ಸಂದರ್ಭದಲ್ಲಿ ಬರೆಯಲ್ಪಟ್ಟ ಕೃತಿ. ಒಂದು ನಿರ್ದಿಷ್ಟ ಕೇಂದ್ರಕ್ಕೆ ಒಳಪಡದೆ ಬದಲಾವಣೆಗೆ ಒಳಗಾಗಿ ಸಹಜವಾಗಿಯೇ ಸ್ಥಿತ್ಯಂತರಕ್ಕೆ ಅಥವಾ ಹೊರಳುವಿಕೆಗೆ ಒಳಗಾಗುತ್ತಿರುವ ಪ್ರದೇಶದಲ್ಲಿನ ಜಾತಿ, ಗ್ರಾಮೀಣ ಸಂಬಂಧಗಳು ಒಳಗೊಳಗೆ ನಡೆಯುತ್ತಿರುವ ವರ್ಣಸಂಕರಗಳು, ಸಂಘರ್ಷಗಳನ್ನು ಚಿತ್ರಿಸಿದ ಕತೆ. ‘ಪದ್ಯ ಕಥನವೂ, ನಾಟಕೀಯತೆಯೂ’ ಒಟ್ಟೊಟ್ಟಾಗಿ ಬೆಸೆದಂತಿರುವ ಈ ಕೃತಿ ಸಾವಧಾನದ ಓದನ್ನು ಬಯಸುವಂತದ್ದು. ಒಮ್ಮೆ ಪ್ರವೇಶಮಾಡಿ ನಿಧಾನವಾಗಿ ಕಣ್ಣು ತೆರೆದು ಗ್ರಹಿಸಿದ ಮೇಲೆ ಎಲ್ಲವೂ ಗೋಚರವಾಗತೊಡಗುತ್ತದೆ, ಬಿಚ್ಚಿಕೊಳ್ಳಲಾರಂಭಿಸುತ್ತದೆ(ಅವರದೇ ಕತೆಯ ಮತ್ತೊಂದು ಪಾತ್ರ ಕುರಿಯಯ್ಯನ ಕಣ್ಣು ತೆರೆದಂತೆ ಹೊರಗು ನಿಧಾನವಾಗಿ ಗೋಚರವಾಯಿತು ಎಂಬಂತೆ). ಜೋತಮ್ಮರಿಂದ ಆರಂಭವಾಗುವ ಕತೆ ಜೋತಮ್ಮರಿಂದಲೇ ಮುಗಿಯುತ್ತದೆ. ಈಗಾಗಲೇ ಕಂಬಾರರ ಹಾಗೂ ಕಾರ್ನಾಡರ ನಾಟಕಗಳಲ್ಲಿ ಜೋತಮ್ಮಗಳು, ದೀಪದ ಮೊಲ್ಲೆಯೆಂಬ ಜಾನಪದೀಯ ತಂತ್ರಗಳನ್ನು ನಾಟಕಗಳ ಪ್ರವೇಶಿಕೆಯಲ್ಲಿ ಬಳಸಿಕೊಳ್ಳಲಾಗಿದೆ. ಕಾದಂಬರಿಯ ಪ್ರಕಾರದಲ್ಲಿ ಪದ್ಯಗದ್ಯ ಮಿಶ್ರಿತ ಭಾಷೆಯಲ್ಲಿ ಜೋತಮ್ಮಗಳ ಸಂಭಾಷಣೆಯಲ್ಲಿ ಕುಸುಮಬಾಲೆಯ ಕಥೆ ಮುಂದುವರೆಯುತ್ತದೆ. ಈ ಜೋತಮ್ಮರಾದರೂ ಭೂತ ವರ್ತಮಾನವನ್ನು ಬೆಸೆಯುವವರಾಗಿದ್ದಾರೆ. ಬತ್ತೀಸ ಪುತ್ಥಳಿಯಲ್ಲಿ ಸಿಂಹಾಸನದ ಮೇಲಿರುವ ಬೊಂಬೆಗಳು ಭೋಜರಾಜನಿಗೆ ಕಥೆ ಹೇಳಿದಂತೆ ಇಲ್ಲಿಯ ಮಂಚವೂ ಸೋಮಪ್ಪ ಮಲಗಿದ ಮೇಲೆ ಅವರ ಶರೀರದಿಂದ ಹೊರಬಂದ ಜೀವಾತ್ಮದೊಂದಿಗೆ. ತನ್ನ ಕತೆಯನ್ನ ಹೇಳುತ್ತಾ ಹೋಗುತ್ತದೆ.
ಇಲ್ಲಿ ಬಂದಿರುವ ನಿರೂಪಕರಾದ ಜೋತಮ್ಮರಾಗಲಿ, ಅಕ್ಕಮಹಾದೇವಮ್ಮನಿಂದ ಕುಸುಮಬಾಲೆಯವರೆಗಿನ ಕತೆಗಳಾಗಲೀ, ಕೆಂಪಿಯ ಕತೆಯಾಗಲೀ ಹರಿದು ಹಂಚಿ ಹೋಗುತ್ತಿರುವ ಸ್ತ್ರೀತ್ವ, ಮಾತೃತ್ವ ಉಳಿಯಲೇಬೇಕಾದ ಅನಿವಾರ್ಯತೆಯನ್ನು ಕಟ್ಟಿಕೊಡುತ್ತಿರುವ ಸಂಕಟಗಳ ಚರಿತ್ರೆಯ ಮಾಲೆಗಳು. ಈ ಎಲ್ಲಾ ಮಾತೃತ್ವವಾದರೂ ಸಂಭವಿಸಿದ್ದು ಈ ಹೆಣ್ಣುಗಳು ತಮ್ಮ ಜಾತಿಕಟ್ಟುಗಳಿಂದ ಆಚೆ ಏರ್ಪಡಿಸಿಕೊಂಡ ಪುರುಷಸಂಬಂಧಗಳಿಂದ. ಇರುವ ವ್ಯವಸ್ಥೆಯನ್ನು ಒಡೆದು ಅದರೊಳಗಿನ ಸತ್ವವನ್ನು ಬಳಸಿದಂತೆಯೇ ಮುರಿದುಕಟ್ಟುವ ಆಶಯವೊಂದು ಇಲ್ಲಿನ ಕಥನದಲ್ಲಿ ವ್ಯಕ್ತವಾಗುತ್ತದೆ. ಇಲ್ಲಿ ಲೇಖಕರಿಗೆ ಪಾತಿವ್ರತ್ಯ, ಸಂಗತ-ಅಸಂಗತಗಳು ಮುಖ್ಯವಾಗುವುದಿಲ್ಲ. ಇಲ್ಲಿನ ಸಂದರ್ಭದಲ್ಲಿ ಸಮಾಜದ ವ್ಯವಸ್ಥೆ ಕಲಕುವ ಚಾರಿತ್ರಿಕ ಅಗತ್ಯವಿದ್ದು ಬಗ್ಗಡ ರೂಪದ ನೀರು ಕ್ರಮೇಣ ತಿಳಿಯಾಗುವಂತೆ ಎಲ್ಲವೂ ಕಾಲಾನುಕಾಲಕ್ಕೆ ಶಾಂತವಾಗುತ್ತದೆ, ಅನಿವಾರ್ಯವಾಗಿ ಒಪ್ಪಿತವಾಗುತ್ತದೆ ಎಂಬ ಆಶಯ ವ್ಯಕ್ತವಾಗುತ್ತದೆ. ಯಾವುದನ್ನು ಪಾವಿತ್ರ್ಯವೆಂದು ಒಪ್ಪಿಕೊಂಡಿದ್ದೆವೋ ಅದು ಅಪವಿತ್ರವಾಗಬೇಕಾದದ್ದು ಅನಿವಾರ್ಯ ಎಂಬ ನಂಬಿಕೆಯೂ ಇಲ್ಲಿನ ಹೆಣ್ಣುಗಳ ಚಿತ್ರಣದಲ್ಲಿ ಕಂಡುಬರುತ್ತದೆ.
ಕುಸುಮಬಾಲೆ ಊರಿನ ದಲಿತನಾದ ಚೆನ್ನನಿಂದ ಸಂತಾನ ಪಡೆದಿದ್ದಾಳೆ. ಮಗುವನ್ನು ನೋಡಲೆಂದು ಬಂದ ಅವಳ ಗಂಡ ತನ್ನಂತೆ ಕೆಂಪಗಿರದ ಕಪ್ಪಾದ ಕೂಸನ್ನು ಕಂಡು ತಿರುಗಿ ಹೋಗುತ್ತಾನೆ. ಯಾವುದೇ ಪತಿಕ್ರಿಯೆ ಇಲ್ಲದ ಕುಸುಮ ನಿಲ್ಲುತ್ತಾಳೆ. ಚನ್ನನ ಬಳಗಕ್ಕೆ ಸೇರಿದ ತೂರಮ್ಮನ ಮಗಳು ಕೆಂಪಿ ಗಂಡನಿಂದ ಮಕ್ಕಳಾಗುವುದಿಲ್ಲ ಎಂದು ಯಾರಿಂದಲೋ ಗರ್ಭ ಧರಿಸಿದ್ದಾಳೆ. ಇದು ಅವಳ ತಾಯಿಗೂ ಗೊತ್ತು, ಗಂಡನಿಗೂ ಗೊತ್ತು. ಯಾರಲ್ಲೂ ಬೇಸರವಿಲ್ಲ, ಬದಲಾಗಿ ಸಂಭ್ರಮವಿದೆ. ಪಾವಿತ್ರ್ಯತೆ ಮತ್ತು ಅಪವಿತ್ರತೆಯನ್ನು ವಿಭಾಗಿಸುವ ಆಲೋಚನೆಗಳಿಂದ ದೂರವಾಗಿ ಇಲ್ಲಿನ ಮಾನವೀಯ ಸಂಬಂಧಗಳಿದ್ದು ಹಾಗೂ ಭೂತವನ್ನು ಎದುರಿಸಿ ವರ್ತಮಾನದಲ್ಲಿ ನಿಲ್ಲಬಲ್ಲ ಛಾತಿ ಇಲ್ಲಿನ ಹೆಣ್ಣುಗಳಲ್ಲಿವೆ.
ದೊಡ್ಡಮನೆಯನ್ನು ಕಟ್ಟಿದ ಅಕ್ಕಮಹಾದೇವಮ್ಮ ತನ್ನ ಮಗನಾದ ಯಾಡನನ್ನು ತವರುಮನೆಯಲ್ಲಿ ಹಡೆದದ್ದು ಗಂಡಸತ್ತ ನಂತರ ಹನ್ನೆರಡನೇ ತಿಂಗಳಲ್ಲಿ. ಯಾಡನ ಮಗ ಸೋಮಪ್ಪನ ಹೆಂಡತಿ ಮಲ್ಲಾಜಮ್ಮನ ತಂದೆ ತಾಯಿಯರು ಯಾರೆಂಬುದು ಗೊತ್ತಿಲ್ಲ. ಸೋಮಪ್ಪನ ಮಗಳು ಕುಸುಮ ಗಂಡನಿದ್ದೂ ದಲಿತನಾದ ಚೆನ್ನನಿಗೆ ಮಗನನ್ನು ಹೆತ್ತಿದ್ದಾಳೆ. ಈ ಚೆನ್ನ ಹಾಗೂ ಕುಸುಮಳನ್ನು ಮುಖಾಮುಖಿಯಾಗಿಸದೆ ಕೂಸು ಹುಟ್ಟಿದ ನಂತರ ಚೆನ್ನ ಕೊಲೆಯಾಗಿದ್ದಾನೆ ಎಂಬ ಸುದ್ದಿ ಒಂದು ಕಡೆಯಾಗಿ ಇನ್ನೊಂದು ಕಡೆ ಬೊಂಬಾಯಿಯಲ್ಲಿ ಭರ್ಜರಿ ಜೀವನ ನಡೆಸುತ್ತಿದ್ದಾನೆ ಎಂಬ ಊಹಾಪೋಹಗಳು ಹರಡಿಕೊಳ್ಳುತ್ತವೆ. ಕತೆಯ ಭಾಗಗಳನ್ನು ಇಡೀ ಕೃತಿಯಲ್ಲಿ ಹೇಗೆ ಬೇಕಾದರೂ ಜೋಡಿಸಬಹುದು ಎಂಬ ವಿಮರ್ಶೆಯ ಮೇಲ್ನೋಟದ ಮಾತು ಕೇಳಿಬಂದರೂ ಕತೆಯು ನಡೆದ ಕಾಲವೇ ತನ್ನನ್ನು ಕ್ರಮವಾಗಿ ಜೋಡಿಸಿಕೊಳ್ಳುತ್ತಾ ಹೋಗುತ್ತದೆ. ಕುಂ.ವಿ.ಯವರ ‘ಆರೋಹಣ’ವೂ ಇದೇ ತಂತ್ರ ಒಳಗೊಂಡಿದ್ದು ‘ತಿಬುಮವ್ವ’ನೆಂಬ ಮುದುಕಿ ಈ ಜೋಡಣೆಯ ಹಿಂದೆ ಸಾಕ್ಷಿಯಾಗಿ ಭೂತ, ವರ್ತಮಾನಗಳನ್ನು ಹಿಡಿದಿಡುತ್ತಾಳೆ. ತನ್ನ ಮೊಮ್ಮಗನನ್ನು ಅರಮನೆಯ ಸಿಂಹಾಸನಕ್ಕೆ ಏರಿಸುವುದರೊಂದಿಗೆ ಯಶಸ್ವಿಯಾಗುತ್ತಾಳೆ.
ನವ್ಯ ಸಂದರ್ಭದಲ್ಲಿ ಬರೆಯಲ್ಪಟ್ಟ ಸಂಸ್ಕಾರದಂತಹ ಕಾದಂಬರಿಗಳಲ್ಲಿ ಜಡಗಟ್ಟಿದ ವ್ಯವಸ್ಥೆಗೆ ಜೀವ ತುಂಬುವವರು ಶೂದ್ರ ಸ್ತ್ರೀಯರೆ ಎಂಬಂತೆ ಚಂದ್ರಿಯಂತವರನ್ನು ಬಳಸಿಕೊಳ್ಳಲಾಗಿದೆ. ನವ್ಯ ಕಾದಂಬರಿಯ ನಾಯಕರು ತಮ್ಮ ಪರಕೀಯತೆ, ವ್ಯಕ್ತಿತ್ವದ ಟೊಳ್ಳು ಅಕರಾಳ ವಿಕರಾಳಗಳನ್ನು ಪರೀಕ್ಷಿಸಿಕೊಳ್ಳಲು ಬಳಸಿಕೊಂಡಿದ್ದು ಈ ಕೆಳವರ್ಗದ ಹೆಣ್ಣುಮಕ್ಕಳನ್ನೆ. ಇದಕ್ಕಿಂತ ವಿಭಿನ್ನವಾಗಿ ಚದುರಂಗರ ವೈಶಾಖದ ವಿಧವೆ ರುಕ್ಮಿಣಿ ಮುಗ್ಧನಾದ ದಲಿತ ಲಕ್ಕನ ಮೂಲಕ ವೈಧವ್ಯದ ಕಿಟಕಿಯನ್ನು ದಾಟಿ ಹೊರಬರುತ್ತಾಳೆ. ಲಕ್ಕನನ್ನು ಅಮಾಯಕನನ್ನಾಗಿಯೂ ರುಕ್ಮಿಣಿಯನ್ನು ಪ್ರೌಢಬ್ರಾಹ್ಮಣ ಹೆಣ್ಣು ಮಗಳಾಗಿಯೂ ಚಿತ್ರಿಸಲಾಗಿದೆ. ಕೃಷ್ಣ ಆಲನಹಳ್ಳಿ ಮೇಲ್ವರ್ಗದವರು ಶೂದ್ರಸ್ತ್ರೀಯರನ್ನು ಶೋಧಕ್ಕೆ, ಶೋಷಣೆಗೆ ಬಳಸಿಕೊಂಡಂತೆ ತಮ್ಮ ಕೃತಿಗಳಲ್ಲಿ ಮೇಲ್ವರ್ಗದ ಹೆಣ್ಣು ಮಕ್ಕಳನ್ನು ಬಳಸಿಕೊಳ್ಳುತ್ತಾರೆ. ಈ ಸಂಬಂಧಗಳು ಕುಸುಮಬಾಲೆಯಲ್ಲಿ ಉದ್ದೇಶಪೂರ್ವಕವಾಗಿಯೇ ಏರ್ಪಟ್ಟಿವೆ ಎಂಬುದಕ್ಕೆ ಸೂಚನೆಯಾಗಿ ತೂರಮ್ಮನಿಂದ ಮೈದುಂಬಿ ಕುರಿಯಯ್ಯ ನುಡಿಯುವ ‘ನನ್ನಿಯ’ ಮಾತುಗಳು ಸಾಕ್ಷಿಯಾಗಿ ನಿಲ್ಲುತ್ತವೆ. ಕಾದಂಬರಿಯ ಒಂದು ಭಾಗವಾಗಿಯೇ ದಲಿತ ಸಂಘರ್ಷ ಸಮಿತಿ ಮತ್ತು ಸಮಿತಿಯ ಸಂಘಟಕರು ಬರುತ್ತಾರೆ. ಮೈದುಂಬಿದ ಕುರಿಯಯ್ಯನಿಗೆ ಕೃಷ್ಣಯ್ಯನವರು “ಹೊಲಮಾದಿಗರು ಅಂದ್ರ ಬೇರೆಯವರ ರಕ್ತ ಕುದಿಯೋದು ನಿಚ್ಚಳವಾಗಿ ಕಾಣ್ತದಲ್ಲಾ…” ಎಂದು ಪ್ರಶ್ನೆ ಕೇಳುತ್ತಾರೆ. ಅದಕ್ಕೆ ಉತ್ತರವಾಗಿ ಕುರಿಯಯ್ಯ ಸಾವಿರಾರು ವರ್ಷದ ತಲತಲಾಂತರದ ನನ್ನಿ ನುಡಿಯುತ್ತಾನೆ. ಕೆಳವರ್ಗದವರು ಉತ್ತಮ ಜಾತಿಯವರ ಹೆಂಡತಿಯರನ್ನು ಬೆಟ್ಟದ ತುದಿಗೆ ಹೊತ್ತು ಕೊಂಡು ಹೋಗಿ ಸ್ವಲ್ಪ ದಿನ ಇದ್ದು ಬರುತ್ತಿದ್ದರು. ಹೀಗೆ ಕಟ್ಟುಕಟ್ಟಲೆ ಮುರಿದಿದ್ದಕ್ಕಾಗಿ ಅವರನ್ನು ಊರಿಂದ ಹೊರಗೆ ಇರಿಸಿದರು -ಎಂಬ ಕುರಿಯಯ್ಯನ ಮಾತುಗಳು ಮೇಲ್ವರ್ಗದವರ ರಕ್ತ ಕೆಳವರ್ಗದವರನ್ನು ಕಂಡರೆ ಉರಿಯುವುದಕ್ಕೆ ಕಾರಣವಾಗಿತ್ತು ಎಂಬ ಸತ್ಯದ ಮಾತಾಗಿತ್ತು.
ಈ ಮೈದುಂಬುವಿಕೆಯ ಮಾತುಗಳನ್ನು ನೇರವಾಗಿ ಹೇಳಲಾಗದ ದೇವನೂರು ಕುರಿಯಯ್ಯನನ್ನು ಬಳಸಿಕೊಳ್ಳುತ್ತಾರೆ. ಈ ರೀತಿ ‘ನನ್ನಿಯ’ ಹುಡುಕಾಟಕ್ಕೆ ತೊಡಗಿದ ದೇವನೂರರ ದಾರಿ ಕಷ್ಟಕರವಾದದ್ದೇ ಆಗಿದೆ. ಹಿಂದೆ ಮೇಲ್ವರ್ಗದವರ ಹೆಣ್ಣುಮಕ್ಕಳನ್ನು ಕೆಳವರ್ಗದವರು ಎತ್ತಿಕೊಂಡು ಹೋದರೆ ಈಗ ಮೇಲ್ವರ್ಗದ ಹೆಣ್ಣು ಮಕ್ಕಳು ತಾವಾಗಿಯೇ ಕೆಳವರ್ಗದವರಿಗೆ ಒಲಿಯುತ್ತಿದ್ದಾರೆ. ಇದು ಅನಿವಾರ್ಯವಾಗಿ ನಡೆಯಲೇ ಬೇಕಾದ ವರ್ಣಸಂಕರವಾಗಿದ್ದು ಇದರಿಂದಲೇ ಜಾತಿ ವಿನಾಶ ಸಾಧ್ಯ ಎಂಬ ಚಿಂತನೆಗಳೂ ಕುರಿಯಯ್ಯನ ನನ್ನಿಯ ಮೂಲಕ ವ್ಯಕ್ತವಾಗುತ್ತದೆ. ಹೆಣ್ಣಿನಿಂದಲೇ ಸಂಕರವಾಗಬೇಕು ಎಂಬ ಆಶಯದ ಹಿಂದೆ ಹೆಣ್ಣು ಪ್ರಧಾನ ಭೂಮಿಕೆಗೆ ಬರಬೇಕು, ಅಂತಹ ಶಕ್ತಿ ಆಕೆಗಿದೆ ಎಂಬ ಪರಿಭಾವಿಸುವಿಕೆ ಕಂಡುಬರುತ್ತದೆ.
ಕುಸುಮಬಾಲೆಯಲ್ಲಿನ ಹೆಣ್ಣು ಮಕ್ಕಳು ಅಂತಹ ವಿದ್ಯಾವಂತರಲ್ಲ. ಆದರೆ ಅರೆ ಬರೆ ಕಲಿತ ಯುವಕರ ಕ್ರಾಂತಿ ಗಟ್ಟಿಯಾದ ತಳಹದಿಯ ಮೇಲೆ ನಿಲ್ಲದೇ ಅಸಮರ್ಥವಾಗಿದೆ ಎಂಬ ಸೂಚನೆ ಇಲ್ಲಿ ದೊರೆಯುತ್ತದೆ. ಅಕ್ಕಮಹಾದೇವಮ್ಮನಾಗಲೀ, ಕೆಂಪಿಯಾಗಲೀ, ತೂರಮ್ಮನಾಗಲೀ ತಮ್ಮ ಸಂತಾನದ ಮೂಲವೇನಿದ್ದರೂ ತಮ್ಮ ಮನೆ, ಸಂಸಾರ, ಸಂತಾನವನ್ನು ಉಳಿಸಿಕೊಳ್ಳಲು ಇಲ್ಲದ ಪಾಡು ಪಡುತ್ತಾರೆ. ಒಡಲಾಳದ ಸಾಕಮ್ಮನದು ಒಂದು ತರಹದ ಹಸಿವಿನ ಹೋರಾಟವಾದರೆ ಮೇಲ್ವರ್ಗಕ್ಕೆ ಸೇರಿದ ಅಕ್ಕಮಹಾದೇವಮ್ಮನದು ತನ್ನನ್ನು ಹೊರದೂಡಿದ ಸರೀಕರ ಎದುರು ನಿಲ್ಲುವ, ಮನೆ ಕಟ್ಟುವ ಹೋರಾಟ. ಎಂತಹ ಸಂದರ್ಭದಲ್ಲೂ ಇವರಿಗೆ ದಣಿವೆಂಬುದಿಲ್ಲ. ವ್ಯತ್ಯಾಸವಿಷ್ಟೆ ‘ಸಾಕಮ್ಮ’ ಯಾವುದೇ ಹೋರಾಟದ ಕಲ್ಪನೆಯಿಲ್ಲದೆ ‘ತನ್ನಷ್ಟಕ್ಕೆ’ ತಾನೇ ಗಟ್ಟಿಯಾಗಿ ನಿಂತ ಜೀವ. ಅಕ್ಕಮಹಾದೇವಿ ದಲಿತ ಸಂಘರ್ಷ ಸಮಿತಿ ತನ್ನನ್ನು ತೀವ್ರ ಚಟುವಟಿಕೆಗಳಿಗೆ ಒಡ್ಡಿದಂತಹ ಪ್ರಜ್ಞಾಪೂರ್ವಕ ಸಂದರ್ಭದಲ್ಲಿ ಚಿತ್ರಿಸಲ್ಪಟ್ಟ ವ್ಯಕ್ತಿತ್ವ. ಹೀಗಾಗಿಯೇ ಕುಸುಮಬಾಲೆಗೆ ಹಲವು ಕೇಂದ್ರ ಹಾಗೂ ಪಾತಳಿಗಳಿವೆ.
ಲೇಖಕರು ಈ ಕೇಂದ್ರ ಹಾಗೂ ಪಾತಳಿಗಳನ್ನು ಕಾದಂಬರಿಯ ಕೊನೆಯ ಭಾಗದಲ್ಲಿ ಕೆದಕುವ ಕೆಲಸ ಮಾಡುತ್ತಾರೆ. ಡಿ.ಎಸ್.ಎಸ್. ಶಕ್ತಿ ಹಾಗೂ ಆ ಶಕ್ತಿಯ ಮಿತಿಗಳ ಚರ್ಚೆಯು ಇಲ್ಲಿ ನಡೆಯುತ್ತದೆ. ಗಂಭೀರವಾಗಿಯಲ್ಲ ಒಂದು ರೀತಿಯ ಆತ್ಮಾವಲೋಕನ ಹಾಗೂ ನಸುಹಾಸ್ಯದ ಆತ್ಮಮರುಕದಲ್ಲಿ. ದೇವನೂರು ಅವರ ಕತೆ ಹಾಗೂ ಕಾದಂಬರಿಗಳ ಒಡಲಲ್ಲಿ ಚಿತ್ರಿಸುವ ಮಾತೃತ್ವದ ಸಂಕೇತವಾದ ಹೆಣ್ಣುಗಳ ಬಹುತೇಕ ಗುರಿಯೆಂದರೆ ತಮ್ಮ ತಮ್ಮ ಮನೆ ಹಾಗೂ ಮನೆತನದ ಕಾರ್ಯ ಚಟುವಟಿಕೆಗಳನ್ನು ಕಟ್ಟಿಕೊಳ್ಳುವುದರ ಕಡೆಗೆ. ಸಂತಾನದ ವಾರಸುದಾರರು ಇಲ್ಲಿ ಅಮುಖ್ಯರು. ಆದರೆ ಸಂತಾನದ ಪಾತಳಿಗಳು ಮುಖ್ಯವಾದವು ಎಂಬ ನಿಲುವು ಮೇಲಿಂದ ಮೇಲೆ ವ್ಯಕ್ತವಾಗುತ್ತದೆ. ಮರ ಮುಖ್ಯವೋ, ಬೀಜ ಮುಖ್ಯವೋ ಎಂಬ ವಾದದಲ್ಲಿ ಮರವೇ ಮುಖ್ಯ ಎಂಬ ನಿಲುವು ಎದ್ದು ಕಾಣುತ್ತದೆ. ಹೀಗಾಗಿಯೇ ಅಕ್ಕಮಹಾದೇವಮ್ಮನಿಗಾಗಲೀ, ಕೆಂಪಿಗಾಗಲೀ, ಕುಸುಮಳಿ ಗಾಗಲೀ ಮುಖ್ಯವಾಗುವುದು ಬದುಕು ಕಟ್ಟಿಕೊಡುವ ಮನೆಯೇ. ಹೀಗಾಗಿಯೇ ಕುಸುಮ ಇದ್ದಕ್ಕಿದ್ದಂತೆ ನಿಸೂರಾಗಿ ಹೇಳುವುದು ‘I want to be in my house’ ಎಂದು. ಇಲ್ಲಿ ಬಳಸುವ ಕಲ್ಲು ಕರಗುವ ಸಮಯವಾಗಲೀ, ಜೋತಮ್ಮರಾಗಲೀ, ಮಂಚವಾಗಲೀ, ಜೀವಾತ್ಮರಾಗಲೀ -ಎಲ್ಲರೂ ಕಾಲದ ಪ್ರವಾಹದಲ್ಲಿ ತೇಲಿಹೋದವರೆ. ಕಾಲ ದೇಶಗಳನ್ನು ಮೀರಿದ ಸತ್ಯವೊಂದು ಯಾವಾಗಲೂ ತನ್ನ ಪಾಡಿಗೆ ತಾನು ನಿಧಾನಗತಿಯಲ್ಲಿ ಚಲಿಸುತ್ತದೆ. ಅದು ತನ್ನನ್ನು ಕಾಣಿಸಿಕೊಳ್ಳುವ ವಿಧಾನ ಮಾತ್ರ ಬೇರೆ. ಒಡಲಾಳದಲ್ಲಿ ಮೊಮ್ಮಗನಿಗೆ ಕತೆ ಹೇಳುವ ಸಾಕವ್ವ ಒಮ್ಮೆ ಸುಕ್ಕು ಸುಕ್ಕು ನೆರಿಗೆಯ ಮುದುಕಿಯಾದರೆ, ಮತ್ತೊಮ್ಮೆ ಪುಟ್ಟ ಗೌರಿಯಂತೆ, ಮಗದೊಮ್ಮೆ ಅಪ್ಸರೆಯಂತೆ ಕಾಣಿಸಿಕೊಳ್ಳುತ್ತಾಳೆ. ಹೀಗೆ ತಮ್ಮ ಕಥನಗಳಲ್ಲಿ ಮಹಾದೇವರಿಗೆ ಹೆಣ್ಣಿನ ಬಗ್ಗೆ, ಅವಳು ಯಾವ ಸ್ವರೂಪದಲ್ಲೆ ಇರಲಿ ಅವಳ ಧಾರಣ ಶಕ್ತಿ ಹಾಗೂ ಸೃಷ್ಟಿಶಕ್ತಿಯ ಬಗ್ಗೆ ಅಪಾರವಾದ ಗೌರವವಿದೆ. ಆ ಗೌರವವೇ ದಲಿತಳಾದ ಸಾಕವ್ವನನ್ನು ಚಿತ್ರಿಸಿದಂತೆ ಮೇಲು ವರ್ಗದ ಅಕ್ಕಮಹಾದೇವಿಯ ಧಾರಣ ಶಕ್ತಿಯನ್ನು ಗುರುತಿಸಬಲ್ಲದು.
ಹೀಗೆ ದೇವನೂರು ಮಹಾದೇವ ಚಿತ್ರಿಸುವ ಹೆಣ್ಣು ಶ್ರಮ, ಸಹನೆ ನಾಳೆಯನ್ನು ಎದುರಿಸಬಲ್ಲ, ಇರುವ ವ್ಯವಸ್ಥೆಯನ್ನು ಮುರಿದು ಕಟ್ಟಬಲ್ಲ ಸರ್ವಶಕ್ತಿಯುಳ್ಳವಳಾಗಿದ್ದಾಳೆ. ಮಿಥ್ಗಳು ಸಾವನ್ನು ಕುರಿತು ಇರುವ ಜನಜನಿತ ನಂಬಿಕೆಗಳು, ಆಚರಣೆಗಳು, ಹೊಸದೊಂದು ‘ಗದ್ಯ, ಪದ್ಯ, ನಾಟಕ’ ಮಿಶ್ರಿತ ಭಾಷೆ, ಹಲವು ಕಥೆಗಳನ್ನು ಹೆಣಿಗೆಯ ಮೂಲಕ ಜೋಡಿಸುವ ಕ್ರಮಗಳಿಂದಾಗಿ ಕೇವಲ ಒಂದು ವರ್ಗ ವರ್ಣಕ್ಕೆ ಸೀಮಿತವಲ್ಲದ ಒಟ್ಟಾರೆ ಮನುಕುಲದ ಕತೆಯಂತೆಯೆ ಈ ಕಥನಗಳು ತೋರುತ್ತವೆ.
[ಯಾಜಿ ಪ್ರಕಾಶನ ಪ್ರಕಟಿಸಿರುವ ಕವಿ, ವಿಮರ್ಶಕಿ ಡಾ. ಎಚ್.ಎಲ್.ಪುಷ್ಪಾ ಅವರ ‘ಸ್ತ್ರೀ ಎಂದರೆ ಅಷ್ಟೇ ಸಾಕೆ’ ಕೃತಿಯಲ್ಲಿ ಈ ಲೇಖನ ಪ್ರಕಟವಾಗಿದೆ.]