“ದೇವನೂರು ಟು ವೈಕಂ” – ವಿ.ಎಲ್.ನರಸಿಂಹಮೂರ್ತಿ
[2024 ಡಿಸೆಂಬರ್ ತಿಂಗಳ ‘ಅಂಬೇಡ್ಕರ್ ವಾದ’ ಪತ್ರಿಕೆಯಲ್ಲಿ ವಿ.ಎಲ್.ನರಸಿಂಹಮೂರ್ತಿ ಅವರ ಬರಹ…]
ಕೇರಳದ ತಿರುವಾಂಕೂರು ಜಿಲ್ಲೆಯಲ್ಲಿ ನಡೆದ ‘ವೈಕಂ ಸತ್ಯಾಗ್ರಹ’ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಸಾಮಾಜಿಕ ಸಮಾನತೆಯ ಪ್ರಶ್ನೆಯನ್ನು ಎತ್ತಿದ ಮಹತ್ವದ ಸಾರ್ವಜನಿಕ ಹೋರಾಟ. ಹತ್ತೊಂಬತ್ತನೆಯ ಶತಮಾನದಲ್ಲಿಯೇ ವಸಾಹತುಶಾಹಿಯ ಸಂದರ್ಭದಲ್ಲಿ ಮಹಾರಾಷ್ಟ್ರದಲ್ಲಿ ಜೋತಿಬಾ ಫುಲೆ, ತಮಿಳುನಾಡಿನಲ್ಲಿ ಪಂಡಿತ ಅಯೋತಿದಾಸ್ ಮತ್ತು ಕೇರಳದಲ್ಲಿ ಅಯ್ಯನ್‌ಕಾಳಿ ತರದ ಜಾತಿವಿನಾಶದ ಚಿಂತಕರು ಅಸ್ಪೃಶ್ಯತೆ ಮತ್ತು ಜಾತಿ ಅಸಮಾನತೆಯ ವಿರುದ್ಧ ಹೋರಾಟ ರೂಪಿಸುವ ಮೂಲಕ ತಳಸಮುದಾಯಗಳಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಮೂಡಿಸಲು ಪ್ರಯತ್ನಿಸಿದ್ದರು. ಈ ಸಾಮಾಜಿಕ ಎಚ್ಚರ ಮುಂದೆ ಹಲವು ರೀತಿಯ ಸಾಮಾಜಿಕ ಹೋರಾಟಗಳಿಗೆ ಕಾರಣವಾಯಿತು.
ತಿರುವಾಂಕೂರು ಜಿಲ್ಲೆಯ ವೈಕಂನ ಪ್ರಮುಖ ದೇವಸ್ಥಾನಕ್ಕೆ ಪ್ರವೇಶ ನೀಡುವ ನಾಲ್ಕು ಪ್ರಮುಖ ರಸ್ತೆಗಳನ್ನು ದೇವಸ್ಥಾನದ ‘ಪಾವಿತ್ರ್ಯತೆ’ಯನ್ನು ಕಾಪಾಡುವ ಹೆಸರಿನಲ್ಲಿ ಹಿಂದುಳಿದ ಸಮುದಾಯವಾದ ಈಳವ ಸಮುದಾಯ ಸೇರಿದಂತೆ ದಲಿತರಿಗೆ ನಿಷೇಧಿಸಲಾಗಿತ್ತು. ಮಡಿ-ಮೈಲಿಗೆಯ ಹೆಸರಿನಲ್ಲಿ ಆಚರಿಸಲ್ಪಡುತ್ತಿದ್ದ ಈ ಅಸ್ಪೃಶ್ಯತೆಯ ವಿರುದ್ಧ ವೈಕಂನ ಕಾಂಗ್ರೇಸ್ ಮುಖಂಡರು 1924ರಲ್ಲಿ ಸತ್ಯಾಗ್ರಹವನ್ನು ಪ್ರಾರಂಭ ಮಾಡಿದರು. ಹೋರಾಟ ತೀವ್ರಗೊಳ್ಳುತ್ತಿದ್ದಂತೆಯೇ ಪ್ರಬಲ ಜಾತಿಗಳ ಒತ್ತಡದಿಂದ ಸರ್ಕಾರ ಹೋರಾಟಗಾರರನ್ನು ಬಂಧಿಸಿ ಜೈಲಿನಲ್ಲಿಟ್ಟಾಗ ತಮಿಳುನಾಡು ಕಾಂಗ್ರೇಸ್ ಮುಖಂಡರಾಗಿದ್ದ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ವೈಕಂಗೆ ಪ್ರವೇಶಿಸಿ ಚಳುವಳಿಯ ನೇತೃತ್ವ ವಹಿಸಿದರು. 600 ದಿನಗಳಿಂತಲೂ ಹೆಚ್ಚು ದಿನ ನಡೆದ ಈ ಸತ್ಯಾಗ್ರಹಕ್ಕೆ ಗಾಂಧಿಯವರು ಪ್ರವೇಶ ಮಾಡಿದರು. ಈ ಕಾರಣಕ್ಕೆ ವೈಕಂ ಸತ್ಯಾಗ್ರಹ ದೇಶದ ಗಮನ ಸೆಳೆಯಿತು. ಕೊನೆಗೆ ಗಾಂಧಿಯವರ ಮಧ್ಯಪ್ರವೇಶದಿಂದ ಸರ್ಕಾರ, ಪ್ರಬಲ ಜಾತಿಗಳು ಹೋರಾಟಗಾರರ ಜೊತೆಗೆ ಒಪ್ಪಂದಕ್ಕೆ ಬಂದು ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ನಾಲ್ಕು ರಸ್ತೆಗಳಲ್ಲಿ ಮೂರು ರಸ್ತೆಗಳನ್ನು ಸಾರ್ವಜನಿಕ ಬಳಕೆಗೆ ಮುಕ್ತವಾಗಿಸಿ ಒಂದು ರಸ್ತೆಯನ್ನು ನಿಷೇಧಿಸಿದರು. ಗಾಂಧಿಯವರ ಮಧ್ಯಸ್ಥಿಕೆಯಲ್ಲಿ ನಡೆದ ಈ ಒಪ್ಪಂದ ಪೆರಿಯಾರ್ ರಾಮಸ್ವಾಮಿಯವರಿಗೆ ಹಿಡಿಸಲಿಲ್ಲ. ಹಾಗಾಗಿಯೇ ಕಾಂಗ್ರೇಸ್ ಮತ್ತು ಗಾಂಧಿಮಾರ್ಗದ ಹೋರಾಟದಿಂದ ಹಿಂದೆ ಸರಿದು ತಮಿಳುನಾಡಿನಲ್ಲಿ ‘ಆತ್ಮ ಗೌರವ’ ಚಳುವಳಿಯನ್ನು ಶುರುಮಾಡಿದರು. ಮುಂದೆ ‘ವೈಕಂ ಸತ್ಯಾಗ್ರಹ’ ಕುರಿತು ಬೆಳಗಾವಿಯ ನಿಪ್ಪಾಣಿಯಲ್ಲಿ ಮಾತನಾಡಿದ ಬಾಬಾಸಾಹೇಬ್ ಅಂಬೇಡ್ಕರ್ ಅಸ್ಪೃಶ್ಯತೆ ಆಚರಣೆ ಮತ್ತು ಜಾತಿವಿನಾಶದ ಕುರಿತು ಕಾಂಗ್ರೇಸ್ ಮತ್ತು ಗಾಂಧಿಯವರ ನಿಲುವುಗಳ ಕುರಿತು ಬೇಸರ ವ್ಯಕ್ತಪಡಿಸಿದರು.
ಮುಂದೆ ಹಲವು ಬಗೆಯ ಚರ್ಚೆಗಳಿಗೆ ಕಾರಣವಾದ ‘ವೈಕಂ ಸತ್ಯಾಗ್ರಹ’ ಪೆರಿಯಾರ್ ಮತ್ತು ಬಾಬಾಸಾಹೇಬರ ಸಾರ್ವಜನಿಕ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸಿತು. ತಮಿಳುನಾಡಿನಲ್ಲಿ ವೈಚಾರಿಕ ಚಳುವಳಿಯನ್ನು ಕಟ್ಟಿದ ಪೆರಿಯಾರ್ ಅನೇಕ ಕಡೆಗಳಲ್ಲಿ ದೇಗುಲ ಪ್ರವೇಶ ದೊರಕಿಸಿಕೊಡಲು ಹೋರಾಟ ರೂಪಿಸಿದರೆ, ಬಾಬಾಸಾಹೇಬರು ಮಹಾಡ್ ಸತ್ಯಾಗ್ರಹ, ಕಾಳಾರಾಮ ದೇಗುಲ ಪ್ರವೇಶದ ಹೋರಾಟ ಸೇರಿದಂತೆ ಹಲವು ಹೋರಾಟಗಳ ನೇತೃತ್ವ ವಹಿಸುವ ಮೂಲಕ ಜಾತಿಯ ಹೆಸರಿನಲ್ಲಿ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ನಿರಾಕರಿಸುವ, ಸಾರ್ವಜನಿಕರ ಬಳಕೆಗೆ ಇರುವ ಮೂಲಗಳನ್ನು ಪ್ರತಿಬಂಧಿಸುವ ನಡೆ ನಾಗರೀಕ ಹಕ್ಕುಗಳ ನಿರಾಕರಣೆಯಾಗುತ್ತದೆ ಎನ್ನುವುದನ್ನು ಎತ್ತಿ ತೋರಿಸಿದರು. ಈ ಎಲ್ಲ ಹೋರಾಟಗಳ ಹಿಂದೆ ಇದ್ದ ಸಮಾನತೆಯ ಆಶಯ ಸಂವಿಧಾನದಲ್ಲಿ ಅಳವಡಿಕೆಯಾಯಿತು.
ಈ ರೀತಿ ಇಪ್ಪತ್ತನೆಯ ಶತಮಾನದಲ್ಲಿ ಹಲವು ಬಗೆಯ ಸ್ಥಿತ್ಯಂತರಗಳಿಗೆ, ಸಾಮಾಜಿಕ ಚಳುವಳಿಗೆ ಕಾರಣವಾದ ವೈಕಂ ಸತ್ಯಾಗ್ರಹಕ್ಕೆ ನೂರು ವರ್ಷಗಳಾದವು. ತಮಿಳುನಾಡು ಮತ್ತು ಕೇರಳ ಸರ್ಕಾರಗಳು ಜೊತೆಯಾಗಿ ವೈಕಂ ಸತ್ಯಾಗ್ರಹದ ನೂರು ವರ್ಷಗಳ ಸಂಭ್ರಮಾಚರಣೆ ಮಾಡಿವೆ. ವೈಕಂ ಸತ್ಯಾಗ್ರಹಕ್ಕೆ ಪೆರಿಯಾರ್ ರಾಮಸ್ವಾಮಿಯವರು ಕೊಟ್ಟ ಕೊಡುಗೆಯನ್ನು ಗೌರವಿಸುವುದಕ್ಕಾಗಿ ಪೆರಿಯಾರ್ ಹೆಸರಿನಲ್ಲಿ ತಮಿಳುನಾಡು ಸರ್ಕಾರ ‘ವೈಕಂ ಪ್ರಶಸ್ತಿ’ಯನ್ನು ಸ್ಥಾಪಿಸಿ ಸಾಮಾಜಿಕ ನ್ಯಾಯದ ಹೋರಾಟಕ್ಕೆ ಮಹತ್ವದ ಕಾಣಿಕೆ ನೀಡಿರುವ ನಮ್ಮ ದೇವನೂರ ಮಹಾದೇವ ಅವರಿಗೆ ನೀಡಿದೆ. ಈ ಮೂಲಕ ವೈಕಂ ಸತ್ಯಾಗ್ರಹಕ್ಕೆ ನೂರು ವರ್ಷಗಳಾಗಿರುವ ಸಂದರ್ಭದಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ.
ದೇವನೂರು ಈ ದೇಶದ ಶ್ರೇಷ್ಠ ಸೃಜನಶೀಲ ಲೇಖಕರಲ್ಲೊಬ್ಬರು ಮಾತ್ರವಲ್ಲ ಪೆರಿಯಾರ್ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರ ಆಶಯಗಳನ್ನು ಸಾಕಾರಗೊಳಿಸುವುದಕ್ಕಾಗಿ ಮತ್ತು ಅವರ ಹೋರಾಟವನ್ನು ಮುಂದುವರೆಸುವುದಕ್ಕಾಗಿ ಹುಟ್ಟಿದ ಅಂಬೇಡ್ಕರೋತ್ತರ ದಲಿತ ಚಳುವಳಿಯನ್ನು ಕಟ್ಟಿ, ಮುನ್ನೆಡಿಸಿದವರಲ್ಲೊಬ್ಬರು. ಎಪ್ಪತ್ತರ ದಶಕದಲ್ಲಿ ಕರ್ನಾಟಕದಲ್ಲಿ ಹುಟ್ಟಿದ ಸಮಾಜವಾದಿ ಚಳುವಳಿ, ವಿಚಾರವಾದಿ ಚಳುವಳಿ, ಬೂಸಾ ಚಳುವಳಿ, ದಲಿತ ಚಳುವಳಿ, ಬಂಡಾಯ ಸಾಹಿತ್ಯ ಸಂಘಟನೆಗಳ ಇತಿಹಾಸವನ್ನು ದೇವನೂರರನ್ನು ಬಿಟ್ಟು ಬರೆಯುವುದಕ್ಕೆ ಸಾಧ್ಯವಿಲ್ಲ.
ತಮಿಳುನಾಡಿನಲ್ಲಿ ಪೆರಿಯಾರ್ ಶುರು ಮಾಡಿದ ವೈಚಾರಿಕ ಚಳುವಳಿಯ ಪ್ರಭಾವ ಕರ್ನಾಟಕದಲ್ಲಿ ವಿಚಾರವಾದಿ ಚಳುವಳಿಗೆ ಪ್ರೇರಣೆಯಾಗಿ ಕೆಲಸ ಮಾಡಿತು. ಸ್ವತಃ ಪೆರಿಯಾರ್ ಕರ್ನಾಟಕಕ್ಕೆ ಬಂದು ಹೋದರು. ಇನ್ನು ಬಾಬಾಸಾಹೇಬರ ಪ್ರಭಾವ ದಲಿತ ಚಳುವಳಿಯ ಉಗಮಕ್ಕೆ ಇದ್ದ ದೊಡ್ಡ ಪ್ರೇರಣೆ.
ದೇವನೂರು ಪ್ರೊ. ಬಿ. ಕೃಷ್ಣಪ್ಪನವರೊಡನೆ ದಲಿತ ಚಳುವಳಿಯ ನಾಯಕತ್ವವಹಿಸಿಕೊಂಡು ದಸಂಸ ಕರ್ನಾಟಕದ ತಳಸಮುದಾಯಗಳ ದನಿಯಾಗುವಂತೆ ಮಾಡಿದರು. ಕನ್ನಡದ ದೊಡ್ಡ Celebrated ಬರಹಗಾರರಾಗಿದ್ದರೂ, ದಲಿತ ಚಳುವಳಿಯ ಹಿರಿಯ ನಾಯಕರಾಗಿದ್ದರೂ ದೇವನೂರರು ವಿಶಿಷ್ಟವಾಗಿ ನಿಲ್ಲುವುದು ಅವರ ವ್ಯಕ್ತಿತ್ವದ ಕಾರಣಕ್ಕಾಗಿ. ಅವರ ಸಂಕೋಚದ ಸ್ವಭಾವ, ಏಕಾಂತ ಬಯಸುವ ಮನೋಭಾವ, ಬುದ್ದಿಜೀವಿಗಳಲ್ಲಿ ಕಾಣುವ ಪೊಲಿಟಿಕಲ್ ಕರೆಕ್ಟ್‌ನೆಸ್ ಅನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ತಮಗೆ ಅನಿಸಿದ್ದನ್ನಷ್ಟೆ ಮಾತನಾಡುವ ಗುಣ ಮತ್ತು ಎಂತಹ ಸಂದರ್ಭಕ್ಕೂ ಜಗ್ಗದೆ ಕಾಯ್ದುಕೊಂಡು ಬಂದಿರುವ ತಮ್ಮ ನೈತಿಕ ವ್ಯಕ್ತಿತ್ವ ಅವರನ್ನು ಕನ್ನಡದ ಮಹತ್ವದ ಸಾಂಸ್ಕೃತಿಕ ವ್ಯಕ್ತಿಯಾಗಿಸಿವೆ. ಎಷ್ಟೆಲ್ಲಾ ಬರೆದು, ಮಾತನಾಡುವ ಅವಕಾಶವಿದ್ದಾಗಲೂ ಅವರು ಸೃಜನಶೀಲ ಸಾಹಿತ್ಯ ಬರೆದಿದ್ದು, ಮಾತನಾಡಿದ್ದು ಕಡಿಮೆ. ಆದರೆ ಅವರ ಬರಹ ಮತ್ತು ಮಾತಿಗೆ ಇರುವ ಪರಿಣಾಮ ಅಗಾಧವಾದುದು.
ದಲಿತ ಚಳುವಳಿಯ ನಂತರ ದೇವನೂರು ಸಾಮಾಜಿಕ ಹೋರಾಟದ ಜೊತೆಗೆ ರಾಜಕೀಯ ಹೋರಾಟವೂ ಮುಖ್ಯ ಎಂದು ದಲಿತ-ರೈತ ಚಳುವಳಿಯ ಒಂದಷ್ಟು ಬಣಗಳನ್ನು ಸೇರಿಸಿ ನಡಸಿದ ‘ಸರ್ವೋದಯ ಕರ್ನಾಟಕ’, ಯೋಗೆಂದ್ರ ಯಾದವ್ ಅವರ ‘ಸ್ವರಾಜ್ ಇಂಡಿಯಾ’ ಜೊತೆಗೆ ಸೇರಿ ಮೌಲ್ಯಾಧಾರಿತ ರಾಜಕಾರಣವನ್ನು ಮುನ್ನಲೆಗೆ ತರಲು ಪ್ರಯತ್ನಿಸಿದರು. ಈ ರಾಜಕೀಯ ಪ್ರಯತ್ನಗಳು ಉಂಟು ಮಾಡಿದ ಪರಿಣಾಮಗಳ ಆಚೆಗೆ ಕಳೆದ ಹತ್ತು ವರ್ಷಗಳಿಂದ ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದ ಸಿಟ್ಟಿಗೆದ್ದಂತೆ ಕಾಣುತ್ತಿರುವ ದೇವನೂರು ಈಗ ಹೆಚ್ಚು ಹೆಚ್ಚು ಮಾತನಾಡುತ್ತಿದ್ದಾರೆ, ಬರೆಯುತ್ತಿದ್ದಾರೆ ಅನಿಸುತ್ತಿದೆ. ದೇವನೂರರಂತವರಿಗೆ ತಮ್ಮ ಎಂದಿನ ಸ್ವಭಾವಕ್ಕೆ ವಿರುದ್ದವಾಗಿ ಹೆಚ್ಚು ಮಾತನಾಡುವ, ಬರೆಯುವ, ಬೀದಿಗಿಳಿಯುವಷ್ಟು ಅನಿವಾರ್ಯತೆ ಯಾಕೆ ಸೃಷ್ಟಿಯಾಗಿದೆ ಎಂದು ಕೇಳಿಕೊಂಡರೆ ಇವತ್ತು ದೇಶದಲ್ಲಿ ಹೆಚ್ಚುತ್ತಲೇ ಇರುವ ಕೋಮುವಾದಿಗಳ ಸಂವಿಧಾನ ವಿರೋಧಿ ನಡೆಗಳು.
ವರ್ಣಾಶ್ರಮ ಧರ್ಮದಲ್ಲಿ ನಂಬಿಕೆ ಇಟ್ಟಿರುವ ಸಂಘಪರಿವಾರ ದೇಶವನ್ನು ಹಿಂದಕ್ಕೆ ಕೊಂಡೊಯ್ಯಲು ಮಾಡುತ್ತಿರುವ ಪ್ರಯತ್ನಗಳು. ಸಂಪ್ರದಾಯವಾದಿ ಸಮಾಜಕ್ಕೆ ಸವಾಲಾಗಿರುವ ಭಾರತದ ಸಂವಿಧಾನವನ್ನು ಕೊಲ್ಲುವುದಕ್ಕೆ ನಡೆಯುತ್ತಿರುವ ಹುನ್ನಾರಗಳ ವಿರುದ್ಧ ದೇವನೂರು ಮಾತಾನಾಡುತ್ತಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಹೆಚ್ಚಾದ ಸಂಘಪರಿವಾರದ ಆಟಾಟೊಪಗಳನ್ನು ದೇವನೂರರು ಬಯಲು ಮಾಡುತ್ತಿದ್ದಾರೆ. ದಲಿತು-ಆದಿವಾಸಿಗಳ ಮೇಲಿನ ದೌರ್ಜನ್ಯಗಳು, ಸಿಎಎ-ಎನ್‌ಆರ್‌ಸಿ ವಿರುದ್ಧದ ಹೋರಾಟ, ರೈತ ವಿರೋಧಿ ನೀತಿಗಳ ವಿರುದ್ಧದ ಹೋರಾಟ, ಸಾಮಾಜಿಕ ನ್ಯಾಯಕ್ಕೆ ಮಾರಕವಾದ ಇಡಬ್ಲ್ಯುಎಸ್, ಅಲ್ಪಸಂಖ್ಯಾತರ ಮೇಲಿನ ದಾಳಿಗಳನ್ನು ಖಂಡಿಸುವ ಹೋರಾಟ ಹೀಗೆ ಯಾವುದೇ ಜನಪರ ಚಳುವಳಿಗೆ ದೇವನೂರರ ಮಾತು ನಾಯಕತ್ವವಾಗುತ್ತದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಡೆದ ಆಹಾರದ ಹಕ್ಕು, ಅಕ್ಷರದ ಹಕ್ಕು, ಸಾಮಾಜಿಕ ನ್ಯಾಯದ ಮೇಲಿನ ದಾಳಿಯ ವಿರುದ್ಧ ದೇವನೂರು ಸಮಾಜದ ದನಿಯಾಗಿ ಮಾತನಾಡಿದ್ದಾರೆ.
ಸಂಘಪರಿವಾರದ ದುಷ್ಟತನ ಮಿತಿಮೀರಿದಾಗ ಅದರ ದುಷ್ಟತನವನ್ನು ಬಯಲುಮಾಡುವುದಕ್ಕೆ ‘ಆರ್‌ಎಸ್‌ಎಸ್: ಆಳ-ಅಗಲ’ ಎನ್ನುವ ಪುಟ್ಟ ಪುಸ್ತಿಕೆಯನ್ನು ಬರೆದರು. ಪ್ರಕಟವಾದ ಕೆಲವೇ ದಿನಗಳಲ್ಲಿ ಈ ಪುಟ್ಟ ಪುಸ್ತಕದ ಲಕ್ಷಾಂತರ ಪ್ರತಿಗಳನ್ನು ಜನ ಕೊಂಡು ಓದಿದರು. ಇಂಗ್ಲೀಷ್ ಸೇರಿದಂತೆ ಭಾರತದ ಹಲವಾರು ಭಾಷೆಗಳಿಗೆ ಈ ಪುಸ್ತಕ ಅನುವಾದವಾಗಿ ಭಾರತದ ಬೇರೆ ಭಾಗಗಳಿಗೂ ತಲುಪಿತು. ಸಂಘಪರಿವಾರದ ದ್ವೇಷದ ರಾಜಕಾರಣದ ಕುರಿತು ಈಗಾಗಲೇ ಅನೇಕ ಮಹತ್ವದ ಕೃತಿಗಳು ಬಂದಿದ್ದರೂ ದೇವನೂರರ ಪುಸ್ತಕ ಪಡೆದ ಮಹತ್ವಕ್ಕೆ ಕಾರಣ ಅವರ ವ್ಯಕ್ತಿತ್ವ. ದೇವನೂರರಂತವರು ಎಚ್ಚರಿಸುತ್ತಿದ್ದಾರೆ ಎಂದರೆ ಅಲ್ಲೇನೊ ಅಪಾಯವಿದೆ ಎಂದು ಜನ ಭಾವಿಸಿದ ಕಾರಣಕ್ಕಾಗಿಯೇ ಒಂದು ರಾಜಕೀಯ ಪಕ್ಷ, ಒಂದು ಸಾಮಾಜಿಕ ಚಳುವಳಿ ಮಾಡಬಹುದಾದ ಪರಿಣಾಮವನ್ನು ‘ಆರ್‌ಎಸ್ಎಸ್: ಆಳ-ಅಗಲ’ ಕೃತಿ ಮಾಡಿತು. ಇದು ನಮ್ಮ ಕಾಲದ ಬಹುದೊಡ್ಡ ‘ಸಾಂಸ್ಕೃತಿಕ ಕ್ರಾಂತಿ’ಯ ಮಾದರಿ. ದೇವನೂರರ ಮಾತಿಗೆ ಇರುವ ಕ್ರೆಡಿಬಲಿಟಿ ಅಂತದ್ದು.
ಸಾಮಾಜಿಕ ಕ್ರಾಂತಿಗಾಗಿ ಮಾಡುವ ಯಾವುದೇ ಹೋರಾಟದ ನಾಯಕತ್ವ ತಳಸಮುದಾಯಗಳಿಂದ ಬಂದವರಿಗೆ ಸಿಗಬೇಕು ಎಂದು ಬಾಬಾಸಾಹೇಬ್ ಅಂಬೇಡ್ಕರ್ ನಂಬಿದ್ದರು. ಇವತ್ತಿನ ಕರ್ನಾಟಕದ ಸಾಮಾಜಿಕ ಚಳುವಳಿಗಳು ಮತ್ತು ಸಾಂಸ್ಕೃತಿಕ ವಲಯದಲ್ಲಿ ದೇವನೂರರ ಮಾತಿಗೆ ಇರುವ ಮಹತ್ವವನ್ನು ಗಮನಿದರೆ ಬಾಬಾಸಾಹೇಬರ ಮಾತು ನೆನಪಾಗುತ್ತದೆ. ಬಹುಶಃ ಕುವೆಂಪು ನಂತರ ದೇವನೂರು ಕರ್ನಾಟಕದ ಸಾಂಸ್ಕೃತಿಕ ನಾಯಕರಾಗಿ ಹೊರಹೊಮ್ಮಿದ್ದಾರೆ. ಬೂಸಾ ಚಳುವಳಿ, ದಲಿತ ಚಳುವಳಿ ಹುಟ್ಟಿ ಅರ್ಧ ಶತಮಾನ ಆಗಿರುವ ಈ ಸಂದರ್ಭದಲ್ಲಿ ದೇವನೂರರಿಗೆ ಸಿಕ್ಕಿರುವ ಈ ಸ್ಥಾನಕ್ಕೆ ಐತಿಹಾಸಿಕ ಮಹತ್ವ ಇದೆ.
ಇತ್ತೋಚೆಗೆ ಸುಪ್ರಿಂ ಕೋರ್ಟ್ ಒಳಮೀಸಲಾತಿ ಕುರಿತು ನೀಡಿದ ತೀರ್ಪು ದಲಿತ ಚಳುವಳಿಯ ಒಳಗೆ ಹಲವು ಬಗೆಯ ಚರ್ಚೆಗಳಿಗೆ ಕಾರಣವಾಗಿದೆ. ದೇಶದ ದೊಡ್ಡ ದೊಡ್ಡ ಚಿಂತಕರು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡುತ್ತಿರುವಾಗ ದೇವನೂರು ಖಚಿತವಾದ ನಿಲುವು ತೆಗೆದುಕೊಂಡು ಒಳಮೀಸಲಾತಿ ಪರ ಮಾತನಾಡುತ್ತಿರುವುದು ಕರ್ನಾಟಕ ಮಾತ್ರವಲ್ಲ ದೇಶದ ಮಟ್ಟಿಗೆ ಒಳಮೀಸಲಾತಿ ಜಾರಿಗೆ ಒತ್ತಾಯಿಸುತ್ತಿರುವ ಹೋರಾಟಕ್ಕೆ ಶಕ್ತಿ ತಂದು ಕೊಟ್ಟಿದೆ.
ಇತಿಹಾಸದ ಚಕ್ರ ಚಲಿಸುವ ರೀತಿಯೇ ಸೋಜಿಗ ಎನಿಸುತ್ತದೆ. ನೂರು ವರ್ಷಗಳ ಹಿಂದೆ ವೈಕಂನಲ್ಲಿ ನಡೆದ ಸತ್ಯಾಗ್ರಹ ದೇವಸ್ಥಾನದ ದಾರಿ ಎಲ್ಲರಿಗೂ ಮುಕ್ತವಾಗಲಿ ಎನ್ನುವುದಾಗಿತ್ತು. ಆದರೆ ಅಸಮಾನತೆಯ ಮೌಲ್ಯವನ್ನು ಉಸಿರಾಡುತ್ತಿದ್ದ ವೈದಿಕರು ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳಲು ಮನುಧರ್ಮಶಾಸ್ತ್ರವನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡು ಸಾಕ್ಷಿ ಸಮೇತ ಗಾಂಧಿಯವರ ಮುಂದೆ ವಾದಿಸಿದ್ದರು. ಇದನ್ನು ಗಮನಿಸಿಯೇ ಬಾಬಾಸಾಹೇಬರು ಅಸಮಾನತೆಯನ್ನು ಎತ್ತಿ ಹಿಡಿಯುವ ಈ ಶಾಸ್ತ್ರಗಳನ್ನು ಸುಟ್ಟು ಬಿಸಾಕಿ ಎಂದು ಎನ್ನುವ ಕರೆ ಕೊಟ್ಟಿದ್ದು. ಮುಂದೆ ಬಾಬಾಸಾಹೇಬರು ‘ಮಹಾಡ್ ಸತ್ಯಾಗ್ರಹ’ದ ಸಂದರ್ಭದಲ್ಲಿ ಮನುಸ್ಮೃತಿಯನ್ನು ಸುಟ್ಟು ತೋರಿಸಿದರೂ ಕೂಡ. ಬಾಬಾಸಾಹೇಬರು ಮನುಸ್ಮೃತಿಗೆ ಬದಲಾಗಿ ಸಂವಿಧಾನವನ್ನು ಕೊಟ್ಟರು. ಸಂವಿಧಾನದ ಆಶಯಗಳಿಗಾಗಿ ತಮ್ಮ ಬದುಕಿನುದ್ದಕ್ಕೂ ಹೋರಾಡುತ್ತಲೇ ಬಂದಿರುವ ದೇವನೂರು ಮಹಾದೇವರ ಅವರಿಗೆ ಅದೇ ವೈಕಂ ನೆಲದಲ್ಲಿ ಶತಮಾನದ ಗೌರವ ಸಂದಿತು.
ಯಾವ ದಲಿತರಿಗೆ ಆ ನೆಲದಲ್ಲಿ ನಡೆಯುವ ಅವಕಾಶವೇ ಇಲ್ಲ ಎನ್ನುವ ಕಟ್ಟಳೆ ಇತ್ತೊ ಅದೇ ನೆಲಕ್ಕೆ ದೇವನೂರರನ್ನ ಕರೆಸಿ ಗೌರವಿಸಿದ್ದು ಸಮಾನತೆಯ ಕನಸು ಕಾಣುವ ಎಲ್ಲರಿಗೂ ಸಂಭ್ರಮದ, ಹೆಮ್ಮೆಯ ವಿಷಯ.