ದೇವನೂರು ಕಥನ- ಟಿ.ಪಿ.ಅಶೋಕ

[ದೇವನೂರು ಕಥನ- ದೇವನೂರ ಮಹಾದೇವ ಸಮಗ್ರ ಸಾಹಿತ್ಯ ಅಧ್ಯಯನ ಕುರಿತು ಟಿ.ಪಿ.ಅಶೋಕ ಅವರು ಬರೆದಿರುವ ಈ ಪುಸ್ತಕವು 2019ರಲ್ಲಿ ಅಭಿನವ ಪ್ರಕಾಶನದಿಂದ ಪ್ರಕಟವಾಗಿದ್ದು, ಅದರ  ಬೆನ್ನುಡಿ ಇಲ್ಲಿದೆ.]
ದೇವನೂರ ಮಹಾದೇವರ ಗದ್ಯವನ್ನು ಕಾವ್ಯದಂತೆಯೇ ಓದಿಕೊಳ್ಳಬೇಕು. ಅವರು ವಾಚಾಳಿಯಲ್ಲ; ಭಾಷಣಕಾರರಲ್ಲ. ಅವರ ಉದ್ಘಾಟನಾ ಭಾಷಣ, ಅಧ್ಯಕ್ಷೀಯ ಭಾಷಣಗಳು ಒಂದೆರಡು ನಿಮಿಷಗಳಲ್ಲಿ ಮುಗಿದುಹೋದ ಅನೇಕ ಸಂದರ್ಭಗಳನ್ನು ನಾನೇ ಕಂಡಿದ್ದೇನೆ; ಆಡಿದ್ದು ನಾಲ್ಕೇ ಮಾತಾದರೂ ಮಹಾದೇವರ ಮಾತಿನ ಧ್ವನಿಪೂರ್ಣತೆ ಮತ್ತು ಕೇಳುಗರ ಮೇಲೆ ಅದು ಮಾಡಿದ ಗಾಢ ಪರಿಣಾಮವನ್ನು ಗಮನಿಸಿದ್ದೇನೆ. ಪ್ರಶ್ನೋತ್ತರ-ಸಂದರ್ಶನಗಳಲ್ಲೂ ಅಷ್ಟೆ. ಬಹಳಷ್ಟು ಸಂದರ್ಭಗಳಲ್ಲಿ ಮಹಾದೇವರ ಉತ್ತರಗಳಿಗಿಂತ ಪ್ರಶ್ನೆಗಳೇ ಹೆಚ್ಚು ಉದ್ದವಾಗಿರುತ್ತಿದ್ದವು! ಮಹಾದೇವರ ಮಾತು ಮತ್ತು ಬರವಣಿಗೆಯಲ್ಲಿ ಕಂಡುಬರುವ ರೂಪಕ ಪ್ರಾಧಾನ್ಯತೆಗೂ ಅವರ ಸ್ವಭಾವಕ್ಕೂ ಹೀಗೆ ಒಂದು ಅಭಿನ್ನ ಸಾವಯವ ಸಂಬಂಧವಿದೆ.
ಮಹಾದೇವರ ಕತೆ ಕಾದಂಬರಿಗಳು ಗಾತ್ರದಲ್ಲಿ ಸಣ್ಣವು. ಆದರೆ ಅವು ತೋರುವುದಕ್ಕಿಂತ ಹೆಚ್ಚು ಧ್ವನಿಸುತ್ತವೆ. ಅಲ್ಲಿಯೂ ಮಹಾದೇವ ವಾಸ್ತವವಾದೀ ಮಾರ್ಗಕ್ಕಿಂತ ರೂಪಕಾತ್ಮಕ ಮಾರ್ಗವನ್ನೇ ತುಳಿದಿದ್ದಾರೆ. ವಾಸ್ತವಿಕ ವಿವರಗಳಿಗಿಂತ ಹೆಚ್ಚಾಗಿ ರೂಪಕಗಳಿಂದಲೇ ಕಟ್ಟುವುದರಿಂದ ಅವರ ರಚನೆಗಳಿಗೆ ಕಾವ್ಯದ ಬಿಗಿ, ಸಾಂದ್ರತೆ, ಸಂಕ್ಷಿಪ್ತತೆಗಳು ತಾನಾಗಿ ಬಂದುಬಿಟ್ಟಿವೆ. ವೈಚಾರಿಕ ಗದ್ಯಕ್ಕಿಂತ ಮೌಖಿಕ ಸಂಪ್ರದಾಯದ ಕಥನ, ಹಾಡು, ಪದ್ಯ, ಪುರಾಣಗಳಿಗೆ ಅವರ ಕೃತಿಗಳು ಹೆಚ್ಚು ಹತ್ತಿರವಾಗಿವೆ. ಸಂಕೋಚ ಸ್ವಭಾವದ ಮಿತಭಾಷೀ ಮಹಾದೇವರ ಹಾಸ್ಯಪ್ರಜ್ಞೆ ಅವರ ಆಪ್ತ ವಲಯಕ್ಕಷ್ಟೇ ಪರಿಚಿತ. ಆದರೆ ಅವರ ಕೃತಿಗಳು-ಮುಖ್ಯವಾಗಿ ‘ಒಡಲಾಳ’ ಮತ್ತು ‘ಕುಸುಮಬಾಲೆ’ – ಲಘು ಅನುಕರಣದಲ್ಲಿ, ವೈನೋದಿಕ ಧಾಟಿಯಲ್ಲಿ ಇವೆ. ಅವರು ಸೃಷ್ಟಿಸುವ ಪಾತ್ರಗಳು, ಘಟನೆಗಳು, ಸನ್ನಿವೇಶಗಳು ತೆಳು ಭಾವುಕತೆಯಲ್ಲಿ ಸುಲಭವಾಗಿ ದ್ರವಿಸದಂತೆ ತಡೆಯುವಲ್ಲಿ ಮಹಾದೇವರ ರೂಪಕಾತ್ಮಕ ಶೈಲಿ ಹಾಗೂ ವೈನೋದಿಕ ಧಾಟಿ ಅರ್ಥಪೂರ್ಣವಾಗಿ ಒದಗಿಬಂದಿವೆ. ಹೀಗೆ, ಸಂಕ್ಷಿಪ್ತತೆ ಮತ್ತು ಮೌನ ಅವರ ಮಿತಿ ಎನಿಸದೆ ಅವು ಅವರ ವ್ಯಕ್ತಿತ್ವ ಮತ್ತು ಬರವಣಿಗೆಗಳ ಪ್ರಧಾನ ಲಕ್ಷಣಗಳಾಗಿ ಮಾತ್ರ ತೋರುತ್ತವೆ. ಅಷ್ಟೇ ಅಲ್ಲ; ಅವು ಅವರ ದೊಡ್ಡ ಶಕ್ತಿ.
-ಟಿ.ಪಿ. ಅಶೋಕ