ಅದು ಮಾಧ್ಯಮ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ. ದೇಶದ ಪ್ರತಿಷ್ಠಿತ ಮಾಧ್ಯಮ ಕಾಲೇಜುಗಳ ಗಣ್ಯರು ನೆರೆದಿದ್ದರು. ಮಾಧ್ಯಮ ಶಿಕ್ಷಕರು, ವಿದ್ಯಾರ್ಥಿಗಳು, ವೃತ್ತಿನಿರತರು ಹೀಗೆ.. ಅಪರೂಪಕ್ಕೆ ಎಲ್ಲರೂ ಸೇರುವ ಸಮ್ಮೇಳನ. ನಾನು ಮಾತನಾಡುತ್ತಾ ಮಾಧ್ಯಮ ಲೋಕ ಹೇಗೆ ‘ಏಕ’ ಸಂಸ್ಕೃತಿಯನ್ನು ಬಿತ್ತುತ್ತಿದೆ ಎಂಬುದರ ಬಗ್ಗೆ ಕಳವಳಪಡುತ್ತಿದ್ದೆ. ಹೀಗೇಕೆ ಆಗುತ್ತಿದೆ? ಎನ್ನುವ ಪ್ರಶ್ನೆಯನ್ನು ಹಾಕಿಕೊಂಡು ಅದಕ್ಕೆ ನಾನೇ ಉತ್ತರ ಹುಡುಕುತ್ತಾ ಇದ್ದೆ. ಆಗಲೇ ನಾನು ಮಾಧ್ಯಮ ರಂಗದ ಒಳಗೆ ಹೇಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ಏಕರೀತಿಯ ಸಂವೇದನೆಗೆ ಮಾತ್ರ ಜಾಗ ಸಿಗುತ್ತಿದೆ ಎನ್ನುವುದನ್ನು ವಿವರಿಸುತ್ತಿದ್ದೆ.
ಎಲ್ಲಿಯವರೆಗೆ ನಮ್ಮ ನ್ಯೂಸ್ ರೂಂಗಳು ಎಲ್ಲಾ ರೀತಿಯ ಜಾತಿ, ಎಲ್ಲಾ ರೀತಿಯ ಧರ್ಮ, ಎಲ್ಲಾ ಪ್ರದೇಶಗಳಿಗೆ ನೆಲೆ ಒದಗಿಸುವುದಲ್ಲವೋ ಅಲ್ಲಿಯವರೆಗೆ ಅದು ಏಕ ದೃಷ್ಟಿಕೋನವನ್ನು ಮಾತ್ರ ಹರಡುತ್ತಾ ಸಮಾಜ ವಿರೋಧಿಯಾಗುವ ಅಪಾಯವಿದೆ ಎಂದೆ. ಹಾಗೆ ನಾನು ಇನ್ನೂ ಹೇಳಿ ಮುಗಿಸಿರಲಿಲ್ಲ, ಸಭಾಂಗಣದಲ್ಲಿ ಗುಜು ಗುಜು ಶುರುವಾಯಿತು. ಮಾತು ಮಥಿಸಲಾರಂಭಿಸಿದ್ದರು. ಆಗತಾನೆ ಪತ್ರಿಕೋದ್ಯಮ ಶಿಕ್ಷಣ ಪೂರೈಸಿ, ಮಾಧ್ಯಮ ಸಂಶೋಧನೆ ನಡೆಸುತ್ತಾ, ಪತ್ರಿಕೋದ್ಯಮವನ್ನು ಕಲಿಸುತ್ತಾ ಇದ್ದ ತರುಣನೊಬ್ಬ ಎದ್ದು ನಿಂತು, ಸಿಟ್ಟಿನಿಂದ ‘ಅಂದರೆ ನಿಮ್ಮ ಮಾತಿನ ಅರ್ಥ ಮಾಧ್ಯಮ ಅನುಭವ ಮಂಟಪ ಆಗಬೇಕು ಅಂತಾನಾ..?’ ಎಂದು ಪ್ರಶ್ನಿಸಿದ.
ತಕ್ಷಣ ನನಗೆ ನೆನಪಿಗೆ ಬಂದಿದ್ದು ದೇವನೂರು ಮಹಾದೇವ. ಫ಼ಗು ಹಳಕಟ್ಟಿ ಅವರ ‘ಶಿವಾನುಭವ ಶಬ್ದಕೋಶ’ ಓದಿದ ದೇವನೂರು ಮಹಾದೇವ ಅವರು ವಚನಕಾರರ ಬಗ್ಗೆ ಮಾತನಾಡುತ್ತಾ ಹೋಗಿರುವುದು ನನ್ನೊಳಗಿನ ಕಣ್ಣನ್ನು ಖಂಡಿತಾ ತೆರೆಸಿತ್ತು. “ವಚನಕಾರರ ದೃಷ್ಟಿಯಲ್ಲಿ ಅರಿವು ಅಂದರೆ ತನ್ನಷ್ಟಕ್ಕೆ ತಾನು ಇರುವ ಕೇವಲ ತಿಳಿವಳಿಕೆ, ಜ್ಞಾನ ಮಾತ್ರ ಅಲ್ಲ; ಅದು ಕ್ರಿಯೆಯ ಅನುಭವದಿಂದ ಒಡಮೂಡುವುದು. ಅದು ಕೇಳಿ ತಿಳಿದಿದ್ದಲ್ಲ. ಕ್ರಿಯೆಯಲ್ಲಿ ಮೂಡಿದ ತಿಳಿವಳಿಕೆ. ಅದು ತರ್ಕವಲ್ಲ. ನಡೆಯಿಂದ ನುಡಿ ಹುಟ್ಟಿದರೆ ಅದು ಅರಿವು” ಎನ್ನುತ್ತಾ ಪ್ರತಿಯೊಬ್ಬ ವಚನಕಾರರಿಗೂ ಅವರ ಪ್ರಜ್ಞೆಯೇ ದೇವರಾಗಿತ್ತು ಎನ್ನುತ್ತಾರೆ. ಪ್ರಜ್ಞೆಯೇ ದೇವರು ಎಂದುಕೊಂಡಾಗಲೇ ಕಷ್ಟಗಳ ಸರಮಾಲೆ ಆರಂಭವಾಗುವುದು. ನೆತ್ತಿಯ ಮೇಲೆ ಸುಡುವ ಬೆಂಕಿ ಇಟ್ಟುಕೊಂಡಂತೆ. ತಮ್ಮ ಪ್ರಜ್ಞೆಯದುರು ಅವರು ಸುಳ್ಳು ಹೇಳಲು ಸಾಧ್ಯವೇ ಆಗುವುದಿಲ್ಲ. ಈ ಕಷ್ಟಕ್ಕೆ, ಇಕ್ಕಟ್ಟಿಗೆ ವಚನಕಾರರು ಮುಖಾಮುಖಿಯಾದರು ಎನ್ನುತ್ತಾರೆ. ಹೌದಲ್ಲಾ, ಮಾಧ್ಯಮ ಎನ್ನುವುದು ಸುಳ್ಳು ಹೇಳಲಾಗದ, ಕಪಟ ಕುತಂತ್ರ ಅನುಸರಿಸಲಾಗದ ಪ್ರಜ್ಞೆಯನ್ನು ನೆತ್ತಿಯ ಮೇಲೆ ಇಟ್ಟುಕೊಳ್ಳುವ ಅನುಭವ ಮಂಟಪ ಯಾಕಾಗಬಾರದು? ಪ್ರತಿ ನಿತ್ಯ ತನ್ನ ಪ್ರಜ್ಞೆಗೆ, ಅಂತಃಸಾಕ್ಷಿಗೆ ಮುಖಾಮುಖಿಯಾಗುವ ಪರಿಸ್ಥಿತಿ ಮಾಧ್ಯಮಗಳಿಗೆ ಎದುರಾದರೆ ದೇವನೂರರೇ ಹೇಳುವ ಹಾಗೆ ಬಂಡೆಯ ಮೇಲೂ ಚಿಗುರೊಡೆಯಬಹುದಾದ ಕಾಲ ಬರುತ್ತದೇನೋ..
ದೇವನೂರು ಅವರ ಬಗ್ಗೆ, ಅವರ ಬರಹದ ಬಗ್ಗೆ ನಾನು ಗೆಳೆಯರೊಂದಿಗೆ ಪದೇ ಪದೇ ಚರ್ಚಿಸಿದ್ದೇನೆ. ಅವರ ಪ್ರಸ್ತುತತೆ ಏನು ಎನ್ನುವುದನ್ನು ನಿಕಷಕ್ಕೊಡ್ಡಿದ್ದೇವೆ. ನನಗಂತೂ ಅವರು ಇಂತಹ ಪ್ರಜ್ಞೆಯಾಗಿ, ಅಂತಃಸಾಕ್ಷಿಯಾಗಿಯೇ ಕಂಡಿದ್ದಾರೆ. ಹಿಂದೆ ಒಮ್ಮೆ ‘ಮಾಲು, ಬಾಲು’ ಸಾಹಿತ್ಯ ಚಿತ್ರರಂಗವನ್ನು ಬಿರುಗಾಳಿಯಂತೆ ಅವರಿಸಿಕೊಳ್ಳುತ್ತಿದ್ದ ಕಾಲದಲ್ಲಿ ‘ಇಂತಹ ಸಾಹಿತ್ಯ ಹೇಗೆ ಸಾಧ್ಯ?’ ಎಂದು ಚಿತ್ರ ಸಾಹಿತಿಯೊಬ್ಬರನ್ನು ಪ್ರಶ್ನಿಸಿದ್ದೆ. ಅವರು ‘ನಮ್ಮೊಳಗೊಬ್ಬ ಪೊಲೀಸು, ನಮ್ಮೊಳಗೊಬ್ಬ ನ್ಯಾಯಾಧೀಶ ಇರುತ್ತಾನೆ. ಅವನನ್ನು ಕೊಂದುಕೊಂಡ ಕ್ಷಣ ಇಂತಹ ಸಾಹಿತ್ಯ ಹುಟ್ಟುತ್ತದೆ’ ಎಂದಿದ್ದರು. ನನಗೆ ದೇವನೂರು ಹಾಗೆ ಕಂಡಿದ್ದಾರೆ. ನಮ್ಮೊಳಗಿನ ಪೊಲೀಸ್, ನಮ್ಮೊಳಗಿನ ನ್ಯಾಯಾಧೀಶ, ನಮ್ಮೊಳಗಿನ ಅಂತಃಸಾಕ್ಷಿಯಾಗಿ.
ದೇವನೂರು ನನಗೆ ತೀರಾ, ತೀರಾ ಹತ್ತಿರವಾಗಿರುವುದು ಅವರ ಸಾಹಿತ್ಯಕ್ಕಿಂತಲೂ ಹೆಚ್ಚು ಅವರ ಚಿಂತನೆಗಳ ಮೂಲಕ. ಬಹುಷಃ ನಾನು ನಡೆದುಬಂದ ದಶಕಗಳು ಎದುರಿಸುತ್ತಿದ್ದ ಬಿಕ್ಕಟ್ಟುಗಳಿತ್ತಲ್ಲಾ, ಅದಕ್ಕೆಲ್ಲಾ ದೇವನೂರು ಒಂದು ರೀತಿಯಲ್ಲಿ ಉತ್ತರ ಒದಗಿಸುತ್ತಾ ಹೋಗಿದ್ದರು. ನಾವು ಎದುರಿಸುತ್ತಿದ್ದ ಪ್ರಶ್ನೆಗಳು ಅವರ ಪ್ರಶ್ನೆಗಳೂ ಆಗಿತ್ತು. ಇಥಿಯೋಪಿಯಾದ ಹಸಿವಿನ ಸಾವುಗಳಿಂದ ಹಿಡಿದು ಕಾನ್ಶಿರಾಂ, ಮಾಯಾವತಿ ಬಿಜೆಪಿ ಜೊತೆ ಕೈಗೂಡಿಸಿದ್ದರವರೆಗೆ, ಕನ್ನಡ ಸಾಹಿತ್ಯ ಪರಿಷತ್ ನಿಂದ ಹಿಡಿದು ಕೋಣ ಬಲಿಯವರೆಗೆ… ಅದೇಕೋ ಗೊತ್ತಿಲ್ಲ. ಬಹುಷಃ ನಾನು ಒಡನಾಡಿದ ಸಂಘಟನೆಗಳ ಪರಿಣಾಮವಿರಬೇಕು, ನಾನು ಅಂತರಾಷ್ಟ್ರೀಯ ವಿದ್ಯಮಾನಗಳಿಗೆ ತೆರೆದುಕೊಳ್ಳುತ್ತಾ ಹೋದೆ. ಹಾಗೆ ತೆರೆದುಕೊಳ್ಳವುದು ಎಂದರೆ ಗ್ಲೋಬಿನ ಉದ್ದಗಲದ ನೋವುಗಳಿಗೆ ಮೈಯಾಗುವುದು ಎಂದೇ ಅರ್ಥ. ವಿಯೆಟ್ನಾಂ, ಲೆಬನಾನ್, ದಕ್ಷಿಣ ಆಫ್ರಿಕಾ, ಸೋವಿಯತ್ ದೇಶ, ಕ್ಯೂಬಾ, ರೊಮೇನಿಯಾ.. ಹೀಗೆ ಎಷ್ಟೊಂದು ದೇಶಗಳು ನನ್ನೊಳಗೆ ಅರಳಿ ನಿಲ್ಲುತ್ತಿದ್ದವು. ಅಗಲೇ ಒಡೆದು ಕಂಡಿದ್ದು ಇಥಿಯೋಪಿಯಾದ ಸಾವು. ಪತ್ರಿಕೆಗಳು ಹದ್ದುಗಳ ಹಿಂಡು ಮೂಳೆ ಚಕ್ಕಳೆಗಳ ದೇಹಗಳನ್ನು ಕುಕ್ಕುತ್ತಿರುವ ದೃಶ್ಯಗಳನ್ನು ಹೊತ್ತು ಬರುತ್ತಿದ್ದವು. ಒಡಲು ಹಸಿವಿನ ಕುಂಡವಾಗಿ ಹೋಗಿತ್ತು. ಆಗಲೇ ಪ್ರಜಾವಾಣಿಯ ದೀಪಾವಳಿ ವಿಶೇಷಾಂಕ ‘ಮನವ ಕಾಡುತಿದೆ’ ಎನ್ನುವ ಅಂಕಣವನ್ನು ರೂಪಿಸಿತ್ತು. ಹತ್ತಾರು ಬರಹಗಾರರನ್ನು ಮಾತನಾಡಿಸಿ ಅವರ ಮನವನ್ನು ಕಾಡುತ್ತಿರುವುದೇನು ಎಂದು ಕೇಳಿತ್ತು. ದೇವನೂರು ಹೇಳಿದ್ದರು, ನಾಲ್ಕೇ ನಾಲ್ಕು ಸಾಲುಗಳಲ್ಲಿ- “ದಿನ ಸವಯುತ್ತಿದೆ. ದಿನ ಮುಗಿಯುವ ಕೊನೆಯಲ್ಲಿ ಎಲ್ಲವೂ ಮುಗಿದ ಮೇಲೆ ಭಾವನೆ ಮೀರಿದ ಇಥಿಯೋಪಿಯಾದ ಮಕ್ಕಳು ಬರುತ್ತಾರೆ. ಕ್ಷಾಮದ ಬಿಳಿ ಹಲ್ಲುಗಳು ಅವುಗಳನ್ನು ತಿನ್ನುತ್ತವೆ. ಅವುಗಳು ನನ್ನನ್ನು ತಿನ್ನುತ್ತವೆ..”. ದೇವನೂರು ಮಹಾದೇವ ನನ್ನ ಮನವನ್ನು ಈ ಕಾರಣಕ್ಕಾಗಿಯೇ ಕಾಡಿದ್ದರು.
ಚೆನ್ನಾಗಿ ನೆನಪಿದೆ. ನಾನು ದೇವನೂರನ್ನು ಭೇಟಿಯಾದದ್ದು ನರಗುಂದದಲ್ಲಿ. ನನ್ನಣ್ಣನ ಪುಸ್ತಕದ ಕಪಾಟಿನಲ್ಲಿ. ಆಗಿನ್ನೂ ರೈತರ ಮೇಲೆ ಗೋಲಿಬಾರ್ ಆಗಿರಲಿಲ್ಲ. ಆದರೆ ನರಗುಂದ, ನವಲಗುಂದದಲ್ಲಿ ಹೆಜ್ಜೆ ಹಾಕಿದರೆ ಸಾಕು ಅದರ ಒಡಲೊಳಗೆ ಹೊರಳುತ್ತಿದ್ದ ಒಂದು ತಳಮಳವನ್ನು ಖಂಡಿತಾ ಗುರುತಿಸಬಹುದಿತ್ತು. ನನ್ನ ಅಣ್ಣ ಅಲ್ಲಿ ಕೃಷಿ ಅಧಿಕಾರಿ. ನನ್ನ ಅಣ್ಣನ ಪುಸ್ತಕದ ಕಪಾಟಿಗೆ ಕೈಹಾಕಿದಾಗ ಆ ಪುಸ್ತಕ ನನ್ನನ್ನು ಗಕ್ಕನೆ ಹಿಡಿದು ನಿಲ್ಲಿಸಿತ್ತು. ಪುಸ್ತಕದ ತುಂಬಾ ಹರಡಿಕೊಂಡಿದ್ದ ಮುಖ. ಅದು ಶಾಂತವಾಗಿತ್ತು ಎಂದು ಹೇಳಲಿ ಹೇಗೆ? ಆ ಮುಖ ಆ ಕ್ಷಣಕ್ಕೆ ನನಗೆ ಪಕ್ಕಾ ನರಗುಂದದ ಒಡಲೊಳಗಿನ ತಳಮಳದ ಮುಖದಂತೆ ಕಂಡಿತ್ತು. ಆ ಮುಖದ ಮೇಲೆ ಕೈಯಲ್ಲಿ ಬರೆದಂತೆ ‘ದ್ಯಾವನೂರು’ ಎನ್ನುವ ಹೆಸರು. ನೆಲಮನೆ ಪ್ರಕಾಶನ ನನಗೆ ದೇವನೂರು ಮಹಾದೇವರನ್ನು ಪರಿಚಯಿಸಿದ್ದು ಹೀಗೆ. ಆ ಪುಸ್ತಕದ ರೀತಿಯೇ ತಾನು ಅಧೋಲೋಕದ ಅಕಾವ್ಯವನ್ನು ಹೊತ್ತು ನಿಂತಿದ್ದೇನೆ ಎಂದು ಸಾರಿಬಿಟ್ಟಿತ್ತು. ದೇವನೂರು ತಮ್ಮ ಅಮಾಸನನ್ನೂ, ಸಾಕವ್ವನನ್ನೂ, ದುಪ್ಟಿ ಕಮಿಷನರ್ ನನ್ನೂ, ಜೋತಮ್ಮಗಳನ್ನೂ ಕೈಹಿಡಿದುಕೊಂಡು ಸೀದಾ ನನ್ನೊಳಗೆ ನಡೆದುಕೊಂಡು ಬಂದುಬಿಟ್ಟಿದ್ದರು. ಅವರು ಹೀಗೆ ನಡೆದುಕೊಂಡು ಸುಖಾಸುಮ್ಮನೆ ಬರಲಿಲ್ಲ. ನನ್ನೊಳಗೆ ತಲ್ಲಣದ ಮಳೆಗೆರೆದರು. ನಾನು ನೋಡಿಯೂ ಗೊತ್ತಿಲ್ಲದ, ಅದುವರೆಗೆ ಕೇಳಿಯು ಗೊತ್ತಿರದ, ಅನುಭವಿಸಿಯೇ ಇರದ ಒಂದು ಲೋಕವನ್ನು ನನಗೆ ದಾಟಿಸಿದ್ದರು. ಹೀಗೆ ಹೇಳುವಾಗಲೂ ಮತ್ತೆ ದೇವನೂರರ ಮಾತಿಗೆ ಮರಳುತ್ತಿದ್ದೇನೆ. “ನಾವು ಮಾಡಬೇಕಾದದ್ದು ಕ್ರಾಂತಿ. ಕ್ರಾಂತಿ ಸಾಹಿತ್ಯದಿಂದ ಅಗದು. ಕೈಲಾಗದವ ಬರೆದುಕೊಳ್ಳುತ್ತಾನೆ… ಇತ್ಯಾದಿ ಚರ್ಚೆ ಕೇಳಿದ್ದೇನೆ”, ಎನ್ನುತ್ತಾ ಸಾಹಿತ್ಯ ಉಂಟುಮಾಡುವ ಪರಿಣಾಮವನ್ನು ವಿವರಿಸುತ್ತಾ ಹೋಗುತ್ತಾರೆ.