ದೇವನೂರರ ಮಾತಿನ ನವನೀತ

(‘ದೇವನೂರ ಮಹಾದೇವ ಜೊತೆ ಮಾತುಕತೆ- ಆಯ್ದ ಸಂದರ್ಶನಗಳ ಸಂಕಲನ’ ಕುರಿತು 18.5.2024 ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಕಿರು ಪರಿಚಯ … )
ಕಥೆಗಾರ, ಕಾದಂಬರಿಕಾರ ದೇವನೂರ ಮಹಾದೇವ ಈಚಿನ ವರ್ಷಗಳಲ್ಲಿ ಬರೆಯುತ್ತಿಲ್ಲ. ನಿರಂತರವಾಗಿ ‘ಸಾಹಿತಿ’ ಎಂಬ ಉಪಾಧಿ ಬೇಕೆಂದು ಬರೆಯುವವರೂ ಅವರಲ್ಲ. ಸಾಹಿತ್ಯದ ರಚನೆಗಿಂತ ಹೆಚ್ಚಾಗಿ ವಿಚಾರಗಳತ್ತಲೇ ಅವರ ಒತ್ತು. ಸಮಾಜದ ಓರೆಕೋರೆಗಳಿಗೆ ಚಿಕಿತ್ಸೆಯಾಗಬೇಕು ಎಂಬುದೇ ಅವರ ನಿಲುವು. ಇದು ಅವರ ಜೊತೆಗಿನ ಮಾತುಕತೆಗಳ ನೂತನ ಸಂಕಲನ ‘ದೇವನೂರ ಮಹಾದೇವ ಜೊತೆ ಮಾತುಕತೆ- ಆಯ್ದ ಸಂದರ್ಶನಗಳ ಸಂಕಲನ’ ಕೃತಿಯಲ್ಲಿಯೂ ವ್ಯಕ್ತವಾಗುತ್ತದೆ.
ದೇವನೂರರು ಹೆಚ್ಚಾಗಿ ಬರೆಯುತ್ತಿಲ್ಲ. ಆದರೆ, ಅವರ ವಿಚಾರಗಳು ಸಮಾಜಕ್ಕೆ ಬೇಕು. ಅದಕ್ಕಾಗಿ ಅವರನ್ನು ಆಗೀಗ ಮಾತಾಡಿಸುವ ಪ್ರಯತ್ನ ಆಗುತ್ತಲೇ ಇರುತ್ತದೆ. ಇಂತಹ ಮಾತುಕತೆಗಳನ್ನು ಒಟ್ಟು ಸೇರಿಸಿ ಈ ಕೃತಿ ರೂಪಿಸಲಾಗಿದೆ. ಆರಂಭದಲ್ಲಿ ಎನ್.ಎಸ್.ಪುಷ್ಪಾರ ಒಂದು ಪ್ರಶ್ನೆಯ ಸಂದರ್ಶನದಿಂದ ತೊಡಗಿ, ಅಬ್ದುಲ್ ರಶೀದ್ ಬರೆದ ಕಾಲ್ಪನಿಕ ಸಂದರ್ಶನ, ‘ಆ‌ರ್.ಎಸ್.ಎಸ್ ಆಳ ಮತ್ತು ಅಗಲ’ ಸಂಬಂಧಿತ ಪ್ರಶೋತ್ತರ, ಚಳವಳಿಗಳ ಕುರಿತಾಗಿ ಡಿ.ಎಸ್.ನಾಗಭೂಷಣ, ರಹಮತ್ ತರೀಕೆರೆ, ಓ.ಎಲ್.ನಾಗಭೂಷಣ ಸ್ವಾಮಿ ಮೊದಲಾದ ವಿಚಾರವಂತರು ನಡೆಸಿದ ಸಂದರ್ಶನಗಳು, ರಾಘವೇಂದ್ರ ಪಾಟೀಲ, ಕಿಕ್ಕೇರಿ ನಾರಾಯಣ, ಡಿ.ಎಸ್. ನಾಗಭೂಷಣ, ಅಭಿನವ ರವಿಕುಮಾರ್ ಮೊದಲಾದವರು ಮಾಡಿದ ಕನ್ನಡ ಭಾಷೆ, ಸಾಹಿತ್ಯದ ಕುರಿತ ಸಂದರ್ಶನಗಳು, ಗಾಂಧಿ, ರಾಜಕೀಯ ಇತ್ಯಾದಿಗಳ ಕುರಿತಾಗಿ ವಿವಿಧ ಪತ್ರಕರ್ತರು ಮಾಡಿದ ಸಂದರ್ಶನಗಳು ಇಲ್ಲಿವೆ. ಈ ಎಲ್ಲ ಮಾತುಕತೆಗಳ ಗುಚ್ಛ ಹೇಳುವುದು- ದೇವನೂರರು ಸಮಕಾಲೀನ ಆಗುಹೋಗುಗಳನ್ನು ಎಷ್ಟು ಎಚ್ಚರದಿಂದ ಗಮನಿಸುತ್ತಾರೆ ಮತ್ತು ಚಳವಳಿಗಳ ಕುರಿತಾಗಿ ಎಷ್ಟು ಜವಾಬ್ದಾರಿಯಿಂದ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು.
ಗಾಂಧಿ ಹತ್ಯೆಯ ಬಗೆಗೆ ಎನ್.ಎಸ್.ಶಂಕರ್ ಅವರ ಪ್ರಶ್ನೆಯೊಂದಕ್ಕೆ ದೇವನೂರರು- ‘ನನ್ನ ಪ್ರಕಾರ ಈ ಹತ್ಯೆಯು ಗಾಂಧಿಯನ್ನ ಹೆಚ್ಚಿಗೆ ಕಾಲ ಬದುಕಿಸಿದೆ! ಕ್ರಿಸ್ತನ್ನ ಹೆಂಗೆ ಶಿಲುಬೆಗೇರಿಸಿದ್ದು ಸಹಸ್ರಾರು ವರ್ಷ ಕಾಲ ಬದುಕಿಸಿದೆಯೋ, ಅದೇ ಥರ ಗಾಂಧಿಯನ್ನು ಕೂಡ ಹೆಚ್ಚಿಗೆ ಬದುಕಿಸುತ್ತೆ ಅಂತನೇ ನನಗನಿಸುತ್ತೆ’ ಅನ್ನುತ್ತಾರೆ ಅವರು. ಇಂತಹ ಎಳೆಯೊಂದನ್ನು ಇನ್ನಾರೋ ಆಗಿದ್ದರೆ ಕಾದಂಬರಿ ಮಾಡುತ್ತಿದ್ದರೇನೋ. ಆದರೆ, ದೇವನೂರರು ತಮ್ಮ ಅಭಿಪ್ರಾಯ ಹೇಳಿ ಸುಮ್ಮನಾಗುತ್ತಾರೆ. ಅವರ ಇಂತಹ ಒಳನೋಟಗಳ ಮಾತುಗಳಿಗಾದರೂ ಅವರನ್ನು ಹೆಚ್ಚು ಮಾತನಾಡಿಸುವ ಅಗತ್ಯವಿದೆ. ಇಂತಹ ಸಂಕಲನಗಳು ಮತ್ತಷ್ಟು ಬರಬೇಕಿದೆ.