ದೇವನೂರರ “ಎದೆಗೆ ಬಿದ್ದ ಅಕ್ಷರ” ಓದು ಸರಣಿ -12 //ಮಧು ಎನ್.ಬಿ //

[ದೇವನೂರ ಮಹಾದೇವ ಅವರ “ಎದೆಗೆ ಬಿದ್ದ ಅಕ್ಷರ” ಕೃತಿ 14.12.2012 ರಂದು ಪ್ರಕಟವಾಗಿ, ಈ 9 ವರ್ಷಗಳಲ್ಲಿ 24 ಮುದ್ರಣಗಳನ್ನು ಕಂಡಿದೆ. ಹತ್ತನೆಯ ವರ್ಷದ ಕೊಡುಗೆಯಾಗಿ ನಮ್ಮ ಬನವಾಸಿ ಅಂತರ್ಜಾಲ ತಾಣಕ್ಕಾಗಿ “ಎದೆಗೆ ಬಿದ್ದ ಅಕ್ಷರ” ಓದು ಸರಣಿ ಪ್ರಾರಂಭಿಸಲಾಗಿದ್ದು, ಸಂಕಲನದಿಂದ ಆಯ್ದ “ಕಣ್ಣು ತೆರೆಸುವ ಮೊದಲ ಕೆಲಸ” ಬರಹದ ವಾಚನ ಮಧು ಎನ್.ಬಿ ಅವರಿಂದ.]

                                                                                                               ಕಣ್ಣು ತೆರೆಸುವ ಮೊದಲ ಕೆಲಸ

ತುಂಬಾ ಹಿಂದಿನ ಮಾತು. ಒಂದು ಹುಡುಗ, ಅಸ್ಪೃಶ್ಯರವನು, ಎಲ್.ಎಸ್ ಪರೀಕ್ಷೆ ಕಟ್ಟಲು ತಾಲೂಕು ಕೇಂದ್ರಕ್ಕೆ ಬರುತ್ತಾನೆ. ಅವ್ವ ಕೊಟ್ಟು ಕಳಿಸಿದ್ದ ಎಂಟಾಣೆ ಹಿಡಿದು ಪರೀಕ್ಷೆ ಕಟ್ಟಲು ಬಂದಿದ್ದಾನೆ ಹುಡುಗ. ಆ ಊರಿನ ಒಂದು ಹಾಸ್ಟೆಲಿನಲ್ಲಿ ಬಿಟ್ಟಿ ಊಟದ ವ್ಯವಸ್ಥೆ ಇದ್ದು ಈ ನಮ್ಮ ಹುಡುಗನೂ ಬರುವಾಗಲೇ ಒಂದು ಸಿಲ್ವರ್ ಊಟದ ತಟ್ಟೆಯನ್ನೂ ಕಂಕುಳಲ್ಲಿ ಸಿಕ್ಕಿಸಿಕೊಂಡು ಬಂದಿದ್ದಾನೆ. ಆದರೆ ನೀರು ಕುಡಿಯಲು ಲೋಟ ಇಲ್ಲ. ಏನು ಮಾಡ್ತಾನೆ, ಅವ್ವ ಕೊಟ್ಟ ಕಾಸಲ್ಲೆ ನೀರು ಕುಡಿಯಲು ತಕ್ಕುದಾದ ಒಂದು ಸಣ್ಣ ಮಣ್ಣಿನ ಮಡಕೆ ತೆಗೆದುಕೊಂಡು ಅದ ಕೈಲಿಡಿದು ಸಿಲ್ವರ್ ತಟ್ಟೆಯ ಕಂಕುಳಲ್ಲಿರಿಕಿ ಹಾಸ್ಟೆಲ್‍ಗೆ ಊಟಕ್ಕೆ ಹಾಜರಾಗುತ್ತಾನೆ.
ಆ ಹಾಸ್ಟೆಲಿನಲ್ಲಿ ಮೇಲು ಅನ್ನಿಸಿಕೊಂಡ ಜಾತಿಯವರಿಗೆಲ್ಲಾ ಒಳಗೆ ಊಟ, ಕೀಳು ಅನ್ನಿಸಿಕೊಂಡ ಜಾತಿಯವರಿಗೆಲ್ಲಾ ದೂರದಲ್ಲಿ ಹೊರಗೆ ಊಟ ಮಾಮೂಲಿಯಾಗಿ. ಈ ಹುಡುಗನೂ ಫುಲ್ ಮೀಲ್ಸ್ ಸಿಗುತ್ತದೆಂಬ ಸಂತಸದಿಂದ ಎಂಜಲೆಲೆ ಇಡುವ ಪಕ್ಕದ ಸಾಲಿನಲ್ಲಿ ಗಾಳಿಯಲ್ಲಿ ತೇಲಾಡುತ್ತಿದ್ದ ಯಾವ ವಾಸನೆಗೂ ಜಗ್ಗದೆ ಊಟಕ್ಕೆ ಕೂರುತ್ತಾನೆ. ಅಲ್ಲಿ ದಲಿತ ಮಕ್ಕಳ ಊಟದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾತ ಎಸ್ಸೆಲ್ಸಿ ಫೇಲಾದ, ಊಟಕ್ಕೆ ಗತಿಯಿಲ್ಲದ ಅಸ್ಪೃಶ್ಯರವನು. ಊಟಕ್ಕಾಗಿ ಆ ಹಾಸ್ಟೆಲಿಗೆ ಸೇರಿಕೊಂಡಿದ್ದನು. ಆತ ಯಾಕೋ ಈ ನಮ್ಮ ಹುಡುಗನನ್ನು ದುರುದುರು ನೋಡುತ್ತಿರುತ್ತಾನೆ. ಈ ಹುಡುಗ ಅದನ್ನು ಗಮನಿಸಿದರೂ, ಕಸಿವಿಸಿಗೊಂಡರೂ ಅವನು ಮಾಡುತ್ತಿದ್ದುದು ಊಟವಾದ ಪ್ರಯುಕ್ತ ಅದಾವುದನ್ನೂ ಲೆಕ್ಕಿಸದೆ ಊಟ ಮುಗಿಸಿ ಮೇಲೇಳುತ್ತಾನೆ. ಮೇಲ್ವಿಚಾರಕ ಇವನನ್ನು ಬಾರೋ ಇಲ್ಲಿ ಎಂದು ಕರೆಯುತ್ತಾನೆ. ಈ ಹುಡುಗ ತನ್ನ ಸಿಲ್ವರ್ ತಟ್ಟೆಯನ್ನು ಕಂಕುಳಲ್ಲಿರಿಕಿ ಕೈಯಲ್ಲಿ ಆ ಮಣ್ಣಿನ ಮಡಕೆ ಹಿಡಿದು ಹಾಜರಾಗುತ್ತಾನೆ. ಮೇಲ್ವಿಚಾರಕ ಕೇಳುತ್ತಾನೆ- ‘ನೀವು ಬಾಳ ಬಡವರೇನೋ?’. ಅದಕ್ಕೆ ಈ ಹುಡುಗ ಅಂತದೆ ‘ಹೌದು ಸಾ’. ಅದಕ್ಕೆ ಮೇಲ್ವಿಚಾರಕ ‘ಸರಿ, ಚೆನ್ನಾಗಿ ಓದು. ನಾಳೆಯಿಂದ ಆ ಮಣ್ಣಿನ ಮಡ್ಕೆ ತರಬೇಡ ಕಣೋ. ಹೊಲೆ ಮಾದಿಗರಿಗೆ ಮಣ್ಣಿನ ಮಡ್ಕೆ ಲಾಯಕ್ಕು ಅಂತ ಬೇರೆಯವರು ಅಂದ್ಕತಾರೆ’ ಅಂತಾನೆ. ಈ ನಮ್ಮ ಹುಡುಗ ಮಿಕಿ ಮಿಕಿ ನೋಡಿ, ಒಳಗೊಳಗೆ ‘ನಾ ತಂದರೆ ಇವನಿಗೇನು’ ಅಂದುಕೊಂಡು ನಾಳೆ ಪರೀಕ್ಷೆಗೆ ಓದಲು ನಡೆದನು. ಮಾರನೆಯ ದಿನವೂ ಈ ನಮ್ಮ ಹುಡುಗ ಮತ್ತೆ ಅದೇ ಮಣ್ಣಿನ ಮಡಕೆಯನ್ನು ಹಿಡಿದು ಊಟಕ್ಕೆ ಬಂದಾಗ ಆ ಮೇಲ್ವಿಚಾರಕ ಆ ಮಣ್ಣಿನ ಮಡಕೆಯನ್ನು ಕಿತ್ತು ದೂರ ಎಸೆದು  ಬಿಡುತ್ತಾನೆ. ಈ ನಮ್ಮ ಹುಡುಗ ಚೂರಾಗುತ್ತಿದ್ದ ಮಣ್ಣಿನ ಮಡಕೆಯನ್ನೇ ನೋಡುತ್ತಾ ಕಣ್ಣಲ್ಲಿ ನೀರು ತುಂಬಿಕೊಂಡು ನಿಲ್ಲುತ್ತಾನೆ.
ಆಗ ಎಲ್.ಎಸ್ ಪರೀಕ್ಷೆ ಕಟ್ಟಲು ಹೋಗಿದ್ದ ಆ ನಮ್ಮ ಹುಡುಗ ದಾವಣಗೆರೆಯ ಡಾ.ತಿಪ್ಪೇಸ್ವಾಮಿಯವರು. ತನ್ನ ಮಣ್ಣಿನ ಮಡಕೆಯನ್ನು ಯಾಕೆ ಮೇಲ್ವಿಚಾರಕ ಕಿತ್ತು ಎಸೆದ ಎಂಬುದು ಬಹಳ ದಿನಗಳವರೆಗೂ ತಮಗೆ ಅರ್ಥವಾಗಿರಲಿಲ್ಲ ಎಂದು ಡಾ.ತಿಪ್ಪೇಸ್ವಾಮಿಯವರು ಹೇಳಿದರು. ‘ಜಾತಿ ಪದ್ಧತಿಗೆ, ಮೇಲುಕೀಳಿಗೆ ಕುದಿಯುತ್ತಿದ್ದ ಆತ ಮಡಕೆ ಚೂರು ಮಾಡುವ ಮೂಲಕ ತನ್ನ ದುಃಖ ವ್ಯಕ್ತಪಡಿಸಿದ’ ಅಂದರು. ‘ಅಂಥ ಕುದಿತವನ್ನು ನಮ್ಮ ಜನರಲ್ಲಿ ಮೊದಲು ಉಂಟುಮಾಡಬೇಕು’ ಎಂದು ಡಾ.ತಿಪ್ಪೇಸ್ವಾಮಿಯವರು ನುಡಿದಾಗ ನಾನೂ  ‘ಹೌದು’ ಅಂದೆ.