ದೇವನೂರರ “ಎದೆಗೆ ಬಿದ್ದ ಅಕ್ಷರ” ಓದು ಸರಣಿ -11 //ರಮೇಶ್ ಹಾಸನ್ //
ದೇವನೂರರ “ಎದೆಗೆ ಬಿದ್ದ ಅಕ್ಷರ” ಓದು ಸರಣಿ -11 //ರಮೇಶ್ ಹಾಸನ್ //
[ದೇವನೂರ ಮಹಾದೇವ ಅವರ “ಎದೆಗೆ ಬಿದ್ದ ಅಕ್ಷರ” ಕೃತಿ 14.12.2012 ರಂದು ಪ್ರಕಟವಾಗಿ, ಈ 9 ವರ್ಷಗಳಲ್ಲಿ 24 ಮುದ್ರಣಗಳನ್ನು ಕಂಡಿದೆ. ಹತ್ತನೆಯ ವರ್ಷದ ಕೊಡುಗೆಯಾಗಿ ನಮ್ಮ ಬನವಾಸಿ ಅಂತರ್ಜಾಲ ತಾಣಕ್ಕಾಗಿ “ಎದೆಗೆ ಬಿದ್ದ ಅಕ್ಷರ” ಓದು ಸರಣಿ ಪ್ರಾರಂಭಿಸಲಾಗಿದ್ದು, ಸಂಕಲನದಿಂದ ಆಯ್ದ “ಕೊಳಕು ಎಲ್ಲಿದೆ?” ಬರಹದ ವಾಚನ ರಮೇಶ್ ಹಾಸನ್ ಅವರಿಂದ.]
ಕೊಳಕು ಎಲ್ಲಿದೆ?
ದಲಿತ ಸಂಘರ್ಷ ಸಮಿತಿಯ ಹುಟ್ಟಿಗೂ ಮೊದಲು, 1973ನೇ ಇಸವಿಯಲ್ಲಿ ನಾನು ಎಂ.ಎ ವಿದ್ಯಾರ್ಥಿಯಾಗಿದ್ದಾಗ ಶ್ರೀ ಓ. ಶ್ರೀಧರನ್ ಜೊತೆಗೂಡಿ ಅಶೋಕಪುರಂ ಪಕ್ಕ ಇರುವ ಪೌರಕಾರ್ಮಿಕ ಕಾಲೋನಿಯಲ್ಲಿ ಸಂಘ ಕಟ್ಟುವ ಪ್ರಯತ್ನ ನಡೆಸಿದೆವು ಅಷ್ಟೇ, ಮುಂದುವರಿಸಲಿಲ್ಲ. ಅಲ್ಲೆ ನಾನು ಮೊದಲಿಗೆ ‘ಅಮಾಸ’ ಎಂಬ ಹೆಸರನ್ನು ಕೇಳಿದ್ದು, ಅದು ನನ್ನೊಳಗೆ ಉಳಿಯಿತು. ಆ ಸಂದರ್ಭದಲ್ಲೆ ನಾನು ಬರೆದ ಕತೆಯೊಂದರಲ್ಲಿನ ಹುಡುಗನ ಪಾತ್ರಕ್ಕೆ ಅಮಾಸ ಎಂದೂ ಆ ಕತೆಗೂ ಅಮಾಸ ಎಂದು ಹೆಸರಿಟ್ಟೆ. ಆಮೇಲೆ ದಸಂಸ ಹುಟ್ಟಿ ಬೆಳೆದು ಅದಕ್ಕೊಂದು ಸಂಕೇತ ನಿಶ್ಚಯಿಸುವಾಗ, ಬಂದೂಕು, ಪೆನ್ನು, ಹುಲಿ, ಚಿರತೆ ಇತ್ಯಾದಿಗಳೆಲ್ಲಾ ಎದುರಾದರೂ, ‘ನಿಲ್ಲಿಸಿದ ಪೊರಕೆ’ಯೇ ಸಂಕೇತವಾಗುವಂತೆ ನೋಡಿಕೊಂಡೆ. ಇಂದು ಇದು ನನಗೆ ನೆನಪಾಗುತ್ತಿದೆ.
ಜೊತೆಗೆ ಇನ್ನೊಂದು ನೆನಪು- ಒಂದ್ಸಲ ನಮ್ಮ ಮನೆಯ ಕಕ್ಕಸ್ಸು ಕಮೋಡ್ ಕಟ್ಟಿಕೊಂಡಿತ್ತು. ಕಡ್ಡೀಲಿ ಅಲ್ಲಾಡಿಸಿ ಸರಿಮಾಡಲು ನೋಡಿದೆ, ಆಗಲಿಲ್ಲ. ಕೈಗೆ ಪ್ಲಾಸ್ಟಿಕ್ ಚೀಲ ಬಳಸಿ ರಿಪೇರಿ ಮಾಡಲು ನೋಡಿದೆ, ಜಗ್ಗಲಿಲ್ಲ. ಕೊನೆಗೆ ಸೋತು ‘ಅಯ್ಯೋ ನನ್ನ ಮಕ್ಕಳದಲ್ಲವೆ’ ಎಂಬ ಭಾವನೆ ತಂದುಕೊಂಡು ಕೈಯಲ್ಲೆ ಸರಿಮಾಡಿದೆ. ಈ ಭಾವನೆ ಬಾರದಿದ್ದರೆ ನಾನು ಕೈಹಾಕುತ್ತಿರಲಿಲ್ಲ. ಇಲ್ಲಿ ಸೋಲು ಮತ್ತು ಆ ಭಾವನೆ ಎರಡೂ ಇದೆ. ಮುಂದೆ ನನಗೆ ಆಶ್ಚರ್ಯ ಕಾದಿತ್ತು. ನನ್ನ ಪತ್ನಿ ಸುಮಿತ್ರಾ ತನ್ನ ಸಂಶೋಧನೆಗಾಗಿ ಒಬ್ಬ ಪೌರಕಾರ್ಮಿಕ ಹಿರಿಯರನ್ನು ‘ನಿಮಗೆ ಮ್ಯಾನ್‌ಹೋಲ್ ಡ್ರೈನೇಜ್ ಕೆಲ್ಸ ಮಾಡಲು ಕಷ್ಟಕಹಿ ಅಂತ ಅನ್ನಿಸುವುದಿಲ್ಲವೆ?’ ಅಂತ ಪ್ರಶ್ನಿಸಿದ್ದಕ್ಕೆ ‘ಯಾಕ್ರಮ್ಮಾ ಕಷ್ಟಕಹಿ. ನನ್ನ ಮಕ್ಕಳದು ಅಂತ ಅಂತ್ಕಡ್ರಾಯ್ತು’ ಅಂದರಂತೆ. ಅಸಹಾಯಕತೆ ಸೋಲಿನ ನಡುವೆಯೂ ಈ ದೊಡ್ಡ ಮನಸ್ಸೂ ಇಲ್ಲದಿದ್ದರೆ ಈ ಕೆಲ್ಸ ಮಾಡುವುದು ಕಷ್ಟ. ಆದರೆ ಇಂಥ ದೊಡ್ಡ ಮನಸ್ಸನ್ನೆ ಸಮಾಜ ಕೊಳಕು ಅಂತ ಗಣಿಸಿದೆ. ಇದು ಸಮಾಜವೇ ಕೊಳಕಾಗಿರುವುದರ ಲಕ್ಷಣ, ಅಷ್ಟೆ.
ಕೊನೆಯದಾಗಿ, ರೇಷ್ಮೆಹುಳ ಗೂಡು ಕಟ್ಟುತ್ತೆ. ಆ ಹುಳಗಳ ಬೇಯಿಸಿ ಗೂಡಿನ ನೂಲನ್ನು ಮಡಿ ಬಟ್ಟೆಗಾಗಿ ಬಳಸಲಾಗುತ್ತದೆ. ಪೌರಕಾರ್ಮಿಕರ ಸ್ಥಿತಿಯೂ ಹೆಚ್ಚುಕಮ್ಮಿ ಇಂಥದೇ ಸ್ಥಿತಿ. ನಗರದ ಮಡಿ ಸ್ವಚ್ಛತೆಗಾಗಿ ಪೌರಕಾರ್ಮಿಕರು ಬೇಯಿಸಲ್ಪಡುತ್ತಿದ್ದಾರೆ. ಹಳೆತಲೆಗಳು ಹೋಗಲಿ, ಮಕ್ಕಳಾದರೂ ಚಿಟ್ಟೆಯಾಗಿ ಹಾರಾಡಲಿ. ಪೌರಕಾರ್ಮಿಕನ ಮಕ್ಕಳು ಪೌರಕಾರ್ಮಿಕ ಆಗಲೇಬಾರದು. ದತ್ತು ಶಿಕ್ಷಣ ಈ ಮಕ್ಕಳಿಗೆ ಕಡ್ಡಾಯವಾಗಬೇಕು. ಯಾಕೆಂದರೆ- ಇಂದು ಅಸ್ಪೃಶ್ಯತೆ ನಾನಾ ರೂಪ ತಳೆಯುತ್ತಿದ್ದು, ಅಸ್ಪೃಶ್ಯತೆಯು ಅದರ ಘನರೂಪದಲ್ಲಿ ಉಳಿದಿರುವುದು ಪೌರಕಾರ್ಮಿಕರ ನಡುವೆ ಹಾಗೂ ಕೆಲವು ಕುಗ್ರಾಮಗಳಲ್ಲಿ ಮಾತ್ರ. ಉಳಿದ ಕಡೆ ಅಸ್ಪೃಶ್ಯತೆ ದ್ರವರೂಪದ್ದೋ ಅಥವಾ ಮಾನಸಿಕವಾದ್ದೋ ಇರಬಹುದು. ಪೌರಕಾರ್ಮಿಕರಿಗೆ ವೃತ್ತಿಯ ಜೊತೆಗೇ ಘನ ಅಸ್ಪೃಶ್ಯತೆ ಅಂಟಿದೆ.
ಇದಕ್ಕಾಗಿ ಇತರರಿಗೆ ಪೌರಕಾರ್ಮಿಕ ಕೆಲಸದಲ್ಲಿ 25% ಮೀಸಲಾತಿ ನೀಡುವ ಚಿಂತನೆಯನ್ನೂ ಮಾಡಬೇಕಾಗಿದೆ. ಇದಕ್ಕಾಗಿ ಆಕರ್ಷಕ ಸಂಬಳದ ಜೊತೆಗೆ ಪೌರಕಾರ್ಮಿಕರನ್ನು ಊರಾಚೆ ನೂಕುವ ಸಂಪ್ರದಾಯದ ಬದಲು ನಗರಗಳ ನಡುವೆ ಇರುವ ಬಿಡಿ ನಿವೇಶನಗಳಲ್ಲಿ ವಸತಿ ಏರ್ಪಾಡು ಮಾಡಬೇಕಾಗುತ್ತದೆ. ಬಹಳ ಮುಖ್ಯವಾಗಿ ಸಾರ್ವಜನಿಕ ಸ್ವಚ್ಛತೆಯನ್ನು ಶಾಲಾ ಕಾಲೇಜು ಶಿಕ್ಷಣದ ಭಾಗ ಮಾಡಿ ವಾರದಲ್ಲಿ ಒಂದು ದಿನ ವಿದ್ಯಾರ್ಥಿಗಳು ತೊಡಗುವಂತೆ ಪಠ್ಯದ ಭಾಗವಾಗಬೇಕಾಗಿದೆ. ಭಾರತೀಯ ಮಡಿ ಮನಸ್ಸಿಗೆ ಇದು ಶಿಕ್ಷಣದ ಪಠ್ಯವಾಗುವುದೇ ಒಂದು ದೊಡ್ಡ ಶಿಕ್ಷಣದಂತಾಗುತ್ತದೆ. ಇದರಿಂದ ವಿದ್ಯಾವಂತನಾದವನು ತನ್ನನ್ನು ವಿಶಾಲಗೊಳಿಸಿಕೊಂಡಂತಾಗುತ್ತದೆ. ಇದಾಗುವುದು ಒಂದು ಸರ್ಕಾರ ಮತ್ತು ಸಮಾಜ ತಾನು ಎಷ್ಟು ನಾಗರಿಕ ಎಂಬುದರ ಮೇಲೆ ಅವಲಂಬಿಸಿದೆ.