ದೇವನೂರರ “ಎದೆಗೆ ಬಿದ್ದ ಅಕ್ಷರ” ಓದು ಸರಣಿ -10- //ಧನಲಕ್ಷ್ಮಿ ದೇವರಾಜ್//
[ದೇವನೂರ ಮಹಾದೇವ ಅವರ “ಎದೆಗೆ ಬಿದ್ದ ಅಕ್ಷರ” ಕೃತಿ 14.12.2012 ರಂದು ಪ್ರಕಟವಾಗಿ, ಈ 9 ವರ್ಷಗಳಲ್ಲಿ 24 ಮುದ್ರಣಗಳನ್ನು ಕಂಡಿದೆ. ಹತ್ತನೆಯ ವರ್ಷದ ಕೊಡುಗೆಯಾಗಿ ನಮ್ಮ ಬನವಾಸಿ ಅಂತರ್ಜಾಲ ತಾಣಕ್ಕಾಗಿ “ಎದೆಗೆ ಬಿದ್ದ ಅಕ್ಷರ” ಓದು ಸರಣಿ ಪ್ರಾರಂಭಿಸಲಾಗಿದ್ದು, ಸಂಕಲನದಿಂದ ಆಯ್ದ “ನಡೆದು ಬರುವ ಅರಿವು” ಬರಹದ ವಾಚನ ಧನಲಕ್ಷ್ಮಿ ದೇವರಾಜ್ ಅವರಿಂದ.]
“ನಡೆದು ಬರುವ ಅರಿವು”
ಮಹಾಕವಿ ಬೇಂದ್ರೆ ಈ ಸ್ಥಳದಲ್ಲಿ ‘ಹಕ್ಕಿ ಹಾರುತಿದೆ ನೋಡಿದಿರಾ’ ಕವನ ಓದಿದಾಗ ಸಭಿಕರು ಆಕಾಶ ನೋಡಿದ್ದು ನನ್ನ ಕಣ್ಮುಂದೆ ಬರುತ್ತಿದೆ.
ನಾನೇನು ಮಾತಾಡಲಿ? ಮೊನ್ನೆ ಒಂದು ಪುಸ್ತಕ ಓದುತ್ತಾ ಇದ್ದೆ. “ಶಿವಾನುಭವ ಶಬ್ಧಕೋಶ” ಪುಸ್ತಕದ ಹೆಸರು. ಹಳಕಟ್ಟಿಯವರು ಬರೆದ ಪುಸ್ತಕ ಅದು. ಅರಿವು, ಜ್ಞಾನದ ಬಗ್ಗೆ ಅವರು ಹೇಳಿರೋದು ನೋಡಿ ನನಗೆ ಸುಸ್ತಾಗ್ಹೋಯ್ತು. ವಚನಕಾರರ ದೃಷ್ಟಿಯಲ್ಲಿ ಅರಿವು ಅಂದರೆ ತನ್ನಷ್ಟಕ್ಕೆ ತಾನು ಇರುವ ಕೇವಲ ತಿಳಿವಳಿಕೆ, ಜ್ಞಾನ ಮಾತ್ರ ಅಲ್ಲ; ಅದು ಕ್ರಿಯೆಯ ಅನುಭವದಿಂದ ಒಡಮೂಡುವುದು. ಅದು ಕೇಳಿ ತಿಳಿದಿದ್ದಲ್ಲ. ಕ್ರಿಯೆಯಲ್ಲಿ ಮೂಡಿದ ತಿಳಿವಳಿಕೆ, ಅದು ತರ್ಕವಲ್ಲ. ನಡೆಯಿಂದ ನುಡಿ ಹುಟ್ಟಿದರೆ ಅದು ಅರಿವು.
ಈಗ ನನ್ನ ಮನಸ್ಸು ಅರಿವಿಗಾಗಿ ಕಂಡ ಕಂಡ ಕಡೆ, ಇದುವರೆಗೆ ಭಾರತೀಯ ಪರಂಪರೆಯಲ್ಲಿ ಈ ಸುಟ್ಟುಕೊಂಡು ಬರುವ ಅರಿವು ಯಾರ್ಯಾರಿಗಿದೆ? ಎಲ್ಲೆಲ್ಲಿದೆ? ಹುಡುಕಾಡತೊಡಗಿದೆ.
ಮತ್ತೆ ಇನ್ನೊಂದು. ವಚನಕಾರರು ನಮ್ಮ ಸುತ್ತಮುತ್ತ ಇರುವ ದೇವರುಗಳನ್ನು ದೇವರು ಅಂದುಕೊಂಡಿರಲಿಲ್ಲ. ಪ್ರತಿಯೊಬ್ಬ ವಚನಕಾರರಿಗೂ ಅವರವರದೇ ಇಷ್ಟದೈವ. ಅಂದರೆ ಅವರಿಗೆ ಅವರವರ ಪ್ರಜ್ಞೆಯೇ ದೇವರಾಗಿತ್ತು. ಈ ರೀತಿ ಪ್ರಜ್ಞೆಯನ್ನೇ ದೇವರು ಅಂತ ಅಂದುಕೊಂಡರೆ ಸುಡುವ ಬೆಂಕಿಯನ್ನು ನೆತ್ತಿ ಮೇಲೆ ಇಟ್ಟುಕೊಂಡಂತಾಗುತ್ತದೆ. ತಮ್ಮ ಪ್ರಜ್ಞೆ ಮುಂದೆ ಸುಳ್ಳು ಹೇಳಕ್ಕಾಗಲ್ಲ. ಅದೇ ಕಷ್ಟ ಆಗೋದು. ಇತರೆ ದೇವರಿಗಾದರೆ- ಕಾಳಿ ಇರಲಿ, ಯಾವುದೇ ಉಗ್ರ ದೇವತೆ ಇರಲಿ, ಏನೋ ಸ್ವಲ್ಪ ಹೊಟ್ಟೆ ಒಳಕ್ಕೆ ಹಾಕ್ಕೋಂತ ಸುಳ್ಳುಪಳ್ಳು ಹೇಳಿಬಿಡಬಹುದು. ಆದರೆ ಪ್ರಜ್ಞೆ ಮುಂದೆ ಇದು ನಡೆಯದು. ಈ ಇಕ್ಕಟ್ಟಿಗೆ ವಚನಕಾರರು ಮುಖಾಮುಖಿಯಾದರು ಎಂದು ಕಾಣಿಸುತ್ತದೆ. ಅವರು ತಮ್ಮ ಕಷ್ಟ ಸುಖಾನ, ದುಃಖ ದುಮ್ಮಾನಾನ, ಏಳುಬೀಳುಗಳನ್ನು ಅವರ ಉತ್ಕಟ ಇಕ್ಕಟ್ಟುಗಳನ್ನು ಆ ಪ್ರಜ್ಞೆ ಮುಂದೆ ಹೇಳಿಕೊಳ್ಳುತ್ತ ಒದ್ದಾಡುತ್ತಿದ್ದರೆಂದು ಕಾಣುತ್ತದೆ. ಈ ಒದ್ದಾಟಕ್ಕೆ ಅವರು ನುಡಿ ಕೊಟ್ಟರು. ಅವರು ಅಂದು ನುಡಿದದ್ದು ಇಂದು ನುಡಿದಂತೆ ಕೇಳಿಸುತ್ತಿದೆ. ಅದು ತನಗೆ ತಾನೇ ಕಾವ್ಯವಾಗಿಬಿಟ್ಟಿದೆ. ಈ ಬೆಂಕಿಯಂಥ ವಚನ ಸೃಷ್ಟಿಗೆ ಸಾಂತ್ವನದ ಜಾನಪದ ಕಸಿ ಮಾಡಿ ನಾವು ಹುಟ್ಟಬೇಕಾಗಿದೆ, ಹುಟ್ಟುಪಡೆಯಬೇಕಾಗಿದೆ, ಅನ್ನಿಸತೊಡಗಿದೆ.