ದೇವನೂರರ “ಎದೆಗೆ ಬಿದ್ದ ಅಕ್ಷರ” ಓದು ಸರಣಿ -8 // ಅಹಮದ್ ಹಗರೆ//
ಹೀಗೆ, ಸಾಹಿತ್ಯ ಉಂಟು ಮಾಡಬಲ್ಲಂಥ ಪರಿಣಾಮ ಎಂಥದು ಎನ್ನುವುದಕ್ಕೆ ನಮ್ಮಲ್ಲಿ ಇರುವ ಒಂದು ಜಾನಪದ ಕಥೆಯನ್ನು ನೆನಪಿಸುವೆ. ದಲಿತರಾದ ನಮ್ಮಲ್ಲಿ ಮಾರಮ್ಮನಿಗೆ ಕೋಣ ಬಲಿ ಕೊಡುವ ಪದ್ಧತಿ ಇತ್ತು. ಈ ಪದ್ಧತಿಯ ಹಿಂದೆ ಇರುವ ಕಥೆ ಏನೆಂದರೆ- ಒಬ್ಬ ಅಸ್ಪೃಶ್ಯನು ಬ್ರಾಹ್ಮಣ ಕನ್ಯೆಯನ್ನು ಪ್ರೀತಿಸಿ, ತಾನು ಬ್ರಾಹ್ಮಣ ಎಂದು ಸುಳ್ಳು ಹೇಳಿ ವಂಚಿಸಿ ಆಕೆಯನ್ನು ಮದುವೆಯಾಗುತ್ತಾನೆ. ಮುಂದೆ ತಾನು ಮದುವೆಯಾದಾತ ಅಸ್ಪೃಶ್ಯ ಎಂದು ಆ ಬ್ರಾಹ್ಮಣಿಗೆ ತಿಳಿದಾಗ ಆಕೆ ಕುಪಿತಳಾಗಿ ಅಗ್ನಿ ಪ್ರವೇಶ ಮಾಡುತ್ತಾ ‘ಜಾತಿ ಸುಳ್ಳು ಹೇಳಿ ನನ್ನನ್ನು ಕೆಡಿಸಿದ ಪ್ರಯುಕ್ತ ಆ ಅಸ್ಪೃಶ್ಯ ಕೋಣವಾಗಿ ಹುಟ್ಟಲಿ, ಆ ಕೋಣವನ್ನು ನನಗೆ ಬಲಿ ಕೊಡಲಿ’ ಎಂದು ಶಾಪ ಕೊಡುತ್ತಾಳೆ. ಇದು ಕಥೆ. ಕೋಣವಾದ ತಮ್ಮವನನ್ನೇ ನಮ್ಮವರು ಬಲಿಕೊಡುತ್ತಾ, ಅಷ್ಟೇ ಅಲ್ಲ ತಿಂದು ಬಂದಿದ್ದಾರೆ. ಇಂದು ಕೋಣ ಬಲಿಯು ಮಾಂಸ ಮಾತ್ರವಾಗಿರಬಹುದು, ಆದರೆ ಹಿಂದೆ, ನಮ್ಮವರನ್ನು ನಮ್ಮಿಂದಲೇ ಕೊಲ್ಲಿಸುವುದನ್ನು ಈ ಕತೆ ಮಾಡಿಸಿತ್ತು. ವರ್ಣಸಂಕರವನ್ನು ತಡೆದಿತ್ತು.
ಒಬ್ಬ ದೊರೆ ಅಥವಾ ಸರ್ವಾಧಿಕಾರಿ ತನಗೆ ಇಷ್ಟವಾಗದವರನ್ನು ಗಲ್ಲಿಗೆ ಏರಿಸಬಹುದು ಅಥವಾ ಕೊಲ್ಲಿಸಬಹುದು. ಆದರೆ ಈ ಕತೆ ಯಾವ ಬಲಾತ್ಕಾರವನ್ನು ಮಾಡದೆ ನಮ್ಮನ್ನು ನಮ್ಮ ಕೈಯಾರೆಯೇ ಕೊಲ್ಲಿಸಿದೆ. ಸಾಹಿತ್ಯವನ್ನು ಉಡಾಫೆಯಾಗಿ ನೋಡಬೇಡಿ ಎನ್ನುವುದಕ್ಕೆ ಇಷ್ಟೆಲ್ಲ ಹೇಳುತ್ತಿರುವೆ. ಮತ್ತೂ ಉದಾಹರಣೆಗೆ ನಮ್ಮ ಪಂಚಮ ಪತ್ರಿಕೆಯ ಕೆಲವು ಅನುಭವಗಳನ್ನು ಓದಿ ಸಂವೇದನಾಶೀಲ ಬ್ರಾಹ್ಮಣರೊಬ್ಬರು ಒಂದು ಕಾಗದ ಬರೆದಿದ್ದರು. ಅದರಲ್ಲಿ ಅವರು ‘ಇದುವರೆಗೂ ವಿಚಾರದ ಮಟ್ಟದಲ್ಲಿ ದಲಿತರ ಪರವಿದ್ದೆ. ಈಗ ಪಂಚಮದಲ್ಲಿ ಪ್ರಕಟವಾಗುತ್ತಿರುವ ಅನುಭವ ಓದುತ್ತಾ ಅವು ನನ್ನದೂ ಆದವು. ನಾನೂ ದಲಿತನಾಗಿ ತಳಮಳಿಸುತ್ತಾ ಚಿಂತೆಗೀಡಾದೆ’ ಎಂಬರ್ಥದಲ್ಲಿ ಬರೆದಿರುವರು. ಅಂದರೆ ವಿಚಾರದಿಂದ ದಲಿತರ ಪರ ಆಗುವವನು, ಸಾಹಿತ್ಯ ಉಂಟುಮಾಡುವ ಅನುಭವದಿಂದ ದಲಿತ ಸ್ಥಿತಿಯನ್ನು ಅನುಭವಿಸುತ್ತಾನೆ. ಗಾಯ ಎಂಬುವುದು ವಿಚಾರವಾದರೆ, ಗಾಯದ ಅನುಭವವನ್ನು ಭಾಷೆಯಲ್ಲಿ ಮೂಡಿಸುವುದು ಸಾಹಿತ್ಯವಾಗುತ್ತದೆ. ಈ ಅನುಭವಿಸುವಿಕೆಯು ಸಮೀಪಗೊಳಿಸುತ್ತದೆ. ಹಾಗೂ ಕಲಾವಿದ ಸ್ವಭಾವದಲ್ಲೇ ‘ನಿನ್ನೊಳಕ್ಕೆ ನಾನು ಹೋಗಿ ನಿನ್ನನ್ನು ಅನುಭವಿಸುವ’ ಗುಣವಿರುತ್ತದೆ. ಇದು ಸಮಾಜ ಬದಲಾವಣೆ ಬಯಸುವ ನಮಗೆ ಅತ್ಯಗತ್ಯ.
ಆಮೇಲೆ ಆಗಾಗ ಕೇಳಿಬರುವ ಅನಕ್ಷರಸ್ಥರಾದ ನಮ್ಮ ಜನಕ್ಕೆ ನಮ್ಮ ಸಾಹಿತ್ಯ ತಲುಪುತ್ತಾ? ತಲುಪದಿದ್ದರೆ ಯಾರಿಗಾಗಿ ಬರೆಯಬೇಕು? ಎಂಬ ಪ್ರಶ್ನೆಗೆ ವಚನ ಓದಿ ಎಂದಷ್ಟೆ ಹೇಳಬಯಸುವೆ. ಅಕ್ಷರಸ್ಥರು ಅರ್ಥ ಮಾಡಿಕೊಳ್ಳಲು ಕಷ್ಟಪಡುವ ವಚನಗಳನ್ನು ಅನಕ್ಷರಸ್ಥರು ಅರ್ಥ ಮಾಡಿಕೊಳ್ಳುವುದನ್ನು ಬಲ್ಲೆ. ನಮ್ಮ ಹಳ್ಳಿಗಾಡ ಅನಕ್ಷರಸ್ಥರಲ್ಲಿ ಕಲ್ಪನೆ ರೂಪಕಗಳು ಅಲ್ಲಲ್ಲೆ ಹುಟ್ಟುತ್ತವೆ. ನಾವು ಅಕ್ಷರಸ್ಥರಾಗಿ ನಮ್ಮ ಜನರಿಂದ ಕತ್ತರಿಸಿಕೊಂಡು ಬೇರಿಲ್ಲದವರಾಗಿದ್ದೇವೆ! ಅಕ್ಷರಸ್ಥರಾದ ನಾವು ಬೇರುಗಳನ್ನು ಉಳಿಸಿಕೊಂಡು ವಿದ್ಯಾವಂತರಾಗಬೇಕಾಗಿದೆ.
ಜೊತೆಗೆ, ನಾವು ದಲಿತ ಬಂಡಾಯದ ಲೇಖಕರು, ಹೆಚ್ಚು ಕಮ್ಮಿ ಯಾವುದಾದರು ಇಸಂಗೊ ಸಂಘಟನೆಗೂ ಒಲವು ಉಳ್ಳವರೂ ಆಗಿರುತ್ತೇವೆ. ನಮಗೆ ಒಲವು ಇರುವ ಸಂಘಟನೆಯ ವಿಚಾರಗಳು ನಮ್ಮ ಬರವಣಿಗೆಯನ್ನು ನಿರ್ಧರಿಸಬಹುದು. ಸಂಘಟನೆಗಳು ಜೀವನ ಬದಲಾವಣೆಗೆ ಹೊರಟರೆ, ಸಾಹಿತ್ಯ ಜೀವನವನ್ನು ಅನುಭವಿಸುವಂತೆ ಮಾಡಿ ಜೀವನವನ್ನು ಹೆಚ್ಚು ಅರ್ಥಮಾಡಿಸುತ್ತದೆ. ಜೀವನವನ್ನು ಹೆಚ್ಚು ಅರ್ಥ ಮಾಡಿಕೊಂಡರೆ ಬದಲಾವಣೆಯೂ ಹೆಚ್ಚು ಅರ್ಥಪೂರ್ಣವಾಗುವುದು. ಸಂಘಟನೆಗಳು ವಿಚಾರ ಹಿಡಿದುಕೊಂಡು ನಡೆದರೆ, ಸಾಹಿತ್ಯವು ಬದುಕನ್ನೆ ಹಿಡಿದು ನಡೆಯುತ್ತದೆ. ಆದ್ದರಿಂದ ಈ ಎರಡು ನಿಂತಿರುವ ಸ್ಥಳಗಳು ತಲೆ ಪಾದಗಳಂತಿದ್ದರೂ ಜೀವದಲ್ಲಿ ಬೇರೆ ಬೇರೆಯಲ್ಲ. ಮಾವೊ ಹೇಳುತ್ತಾನೆ– ‘ಒಳ್ಳೆಯ ಸಾಹಿತ್ಯವಲ್ಲದ್ದು ಒಳ್ಳೆಯ ರಾಜಕೀಯವೂ ಅಲ್ಲ’. ಯಾವುದೇ ಇಸಂಗೆ ಒಲವಿದ್ದರೂ ಕಲಾವಿದನ ನಿಷ್ಠೆ ಬದುಕಿಗೆ ಆಗಿರಬೇಕೆನಿಸುತ್ತದೆ. ನನ್ನ ಅಮಾಸ ಕತೆಯಲ್ಲಿ ಬರುವ ಗ್ಯಾಂಗ್ಮೆನ್ ಸಿದ್ದಪ್ಪ ಎಂಬ ವ್ಯಕ್ತಿ ಕಮ್ಯುನಿಸಂ ಪದ ಬಳಸುತ್ತಾನೆ. ಆ ಪಾತ್ರದ ಬಾಯಿಂದ ನನ್ನ ಅಪೇಕ್ಷೆಯ ‘ಸಮಾಜವಾದ’ ಎಂದು ಹೇಳಿಸಿದ್ದರೆ ಆ ಪಾತ್ರವೇ ಸುಳ್ಳಾಗುತ್ತಿತ್ತು. ಪರಿಣಾಮವೇ ಇಲ್ಲದಂತಾಗುತ್ತಿತ್ತು.
ಸಾಮಾನ್ಯವಾಗಿ ಹಿಂದಲದರ ಬಗ್ಗೆ ಬೇರೆಯದರ ಬಗ್ಗೆ ಕಣ್ಣು ಮುಚ್ಚಿಕೊಳ್ಳುವುದು ನಮ್ಮ ಸ್ವಭಾವವಾಗಿದೆ. ಕಣ್ಣು ಮುಚ್ಚಿಕೊಂಡರೆ ನಮ್ಮ ಕಣ್ಣು ಕಿರಿದಾಗುತ್ತದೆಯೇ ಹೊರತು, ಅಂದರೆ ಅದರ ಪರಿಣಾಮ ನಮ್ಮ ಮೇಲೆಯೇ ಆಗುತ್ತದೆ. ನಾನು ಕಾಳಿದಾಸನ ‘ರಘುವಂಶ’ ಕತೆಯನ್ನು ಕೇಳಿದ್ದೇನೆ. ರಘುವಂಶದಲ್ಲಿ ರಾಜಾದಿsರಾಜರ ಪರಂಪರೆಯು ರಾರಾಜಿಸುತ್ತ ಕೊನೆಯ ರಾಜನಿಗೆ ತೊನ್ನು ಹಿಡಿಯುತ್ತದೆ. ಆ ರಾಜನೂ ತೊನ್ನು ಹಿಡಿಯದ ತನ್ನ ದೇಹದ ಭಾಗಗಳನ್ನು ಮಾತ್ರ ಜನತೆಗೆ ತೋರಿಸಿಕೊಂಡು ಬರುತ್ತಾನೆ. ಕೊನೆಗೆ ತೊನ್ನು ಆ ರಾಜನ ಪಾದವನ್ನು ಮಾತ್ರ ಬಿಟ್ಟು ಇಡೀ ದೇಹವನ್ನು ಆವರಿಸಿಕೊಳ್ಳುತ್ತದೆ. ಆ ರಾಜ ಇಡೀ ದೇಹವನ್ನು ಮುಚ್ಚಿಟ್ಟುಕೊಂಡು ಇನ್ನೂ ತೊನ್ನು ಹಿಡಿಯದ ತನ್ನ ಪಾದವನ್ನು ಮಾತ್ರ ಪ್ರಜೆಗಳಿಗೆ ತೋರಿಸುತ್ತಾನೆ. ಈ ಕತೆಯಲ್ಲಿ ದಲಿತರ, ಬಡವರ ಬದುಕಿಲ್ಲ ಎನ್ನಲು ಆಗುತ್ತದೆಯೆ? ಇಲ್ಲಿನ ದುರಂತ. ವ್ಯವಸ್ಥೆಯ ದುರಂತವಲ್ಲವೆ?
ಕೊನೆಯದಾಗಿ ದಲಿತ ಸಾಹಿತ್ಯ ಬಳಗವು ಬಂಡಾಯ ಸಾಹಿತ್ಯ ಸಂಘಟನೆಯಿಂದ ಪ್ರತ್ಯೇಕಗೊಳ್ಳದೆ, ದನಿ ಇಲ್ಲದೆ ಮಲಗಿರುವವರ ಬದುಕಲ್ಲಿ ದನಿಗಳನ್ನು ಗುರುತಿಸುತ್ತ ನಮ್ಮ ಸಮಾಜದ ಚಲನೆಗೆ ವೇಗವರ್ಧಕದಂತೆ ನಾವಾಗಬೇಕಾಗಿದೆ.