ದೇವನೂರರ “ಎದೆಗೆ ಬಿದ್ದ ಅಕ್ಷರ” ಓದು ಸರಣಿ -5 // ಜೀವಿತಾ ದೇವನೂರು//
ದೇವನೂರರ “ಎದೆಗೆ ಬಿದ್ದ ಅಕ್ಷರ” ಓದು ಸರಣಿ -5 // ಜೀವಿತಾ ದೇವನೂರು//
[ದೇವನೂರ ಮಹಾದೇವ ಅವರ “ಎದೆಗೆ ಬಿದ್ದ ಅಕ್ಷರ” ಕೃತಿ 14.12.2012 ರಂದು ಪ್ರಕಟವಾಗಿ, ಈ 9 ವರ್ಷಗಳಲ್ಲಿ 24 ಮುದ್ರಣಗಳನ್ನು ಕಂಡಿದೆ. ಹತ್ತನೆಯ ವರ್ಷದ ಕೊಡುಗೆಯಾಗಿ ನಮ್ಮ ಬನವಾಸಿ ಅಂತರ್ಜಾಲ ತಾಣಕ್ಕಾಗಿ “ಎದೆಗೆ ಬಿದ್ದ ಅಕ್ಷರ” ಓದು ಸರಣಿ ಪ್ರಾರಂಭಿಸಲಾಗಿದ್ದು, ಸಂಕಲನದಿಂದ ಆಯ್ದ “ಹೆಣ್ಣು ಜಾತಿ ಮತ್ತು ದಲಿತ ಜಾತಿ” ಬರಹದ ವಾಚನ ಜೀವಿತಾ ದೇವನೂರು ಅವರಿಂದ.]
“ಹೆಣ್ಣು ಜಾತಿ ಮತ್ತು ದಲಿತ ಜಾತಿ”
ಮುಂದೆ ಹೇಳುವಂಥವುಗಳು ದಿನಕ್ಕೆ ಎಷ್ಟಾಗುತ್ತವೊ ಏನೋ. ಈಗ ಒಂದು ನೆನಪಾಗುತ್ತಿದೆ. ನಮಗೆ ಪರಿಚಿತ ಹುಡುಗಿಯೊಬ್ಬಳು ಪ್ಯಾಂಟ್ ಹಾಕಿಕೊಂಡು ಬಂದಳು. ಇದನ್ನು ಕಂಡಾಗ ನನ್ನ ಗೆಳೆಯರನೇಕರಿಗೆ ಒಳಗೊಳಗೇ ಕಸಿವಿಸಿಯಾಯಿತು. ಒಬ್ಬ ಹೊಟ್ಟೆಯೊಳಗಿನದನ್ನು ಹೊರಕ್ಕೆ ಕಕ್ಕಿದ- ‘ಬಹಳ ಧಿಮಾಕಿನವಳು’ ಎಂದು. ಅನೇಕರು ಆ ಹುಡುಗಿಯನ್ನು ವಕ್ರ ವಕ್ರವಾಗಿ ನೋಡಿದರು. ಆ ಹುಡುಗಿ ಪ್ಯಾಂಟ್ ಹಾಕಿಕೊಂಡು ಬಂದದ್ದಕ್ಕೆ ಹುಡುಗರು ತಮ್ಮದು ಏನೋ ಕಳೆದುಹೋದಂತೆ ವರ್ತಿಸಿದರು. ಏನಿಲ್ಲ ಎತ್ತಿಲ್ಲ ಆ ಹುಡುಗಿ ಪ್ಯಾಂಟ್ ಹಾಕಿದ್ದಕ್ಕೆ ಯಾಕೆ ಧಿಮಾಕಿನವಳು? ಹುಡುಗರಿಂದ ಏನು ಕಳೆದು ಹೋಯಿತು? ಎಷ್ಟು ಹುಡುಕಿದರೂ ನನಗೆ ಏನೂ ಕಾಣಲಿಲ್ಲ.
ಆ ಹುಡುಗಿ ಪ್ಯಾಂಟ್ ಹಾಕಿಕೊಂಡಿದ್ದಕ್ಕೆ ಸಿಕ್ಕಂಥ ಮೂಗೇಟು ಅಸ್ಪೃಶ್ಯ ಜಾತಿಯವರಿಗೆ ಸ್ವಲ್ಪ ಟಿಪ್ಟಾಪ್ ಆಗಿದ್ದರೆ ಸಿಕ್ಕುತ್ತದೆ. ಒಬ್ಬ ದಲಿತ ಶೋಕಿಯಾಗಿದ್ದರೆ ಅವನಿಗೆ ನೂರೆಂಟು ಕಾಮೆಂಟು ಕಟ್ಟಿಟ್ಟದ್ದು. ಅವನು ಸವರ್ಣೀಯರ ಕಣ್ಣಲ್ಲಿ ಧಿಮಾಕಿನವನಾಗುತ್ತಾನೆ. ಅವನು ಒಳ್ಳೆಯ ಫ್ಯಾಷನ್ ಬಟ್ಟೆ ಹಾಕಿಕೊಂಡರೆ ಅವನ ಯೋಗ್ಯತೆ ಕೆಟ್ಟುಬಿಡುತ್ತದೆ. ಒಬ್ಬ ದಲಿತ ವಿದ್ಯಾರ್ಥಿಗೆ ಅವರ ಪಿನ್ಸಿಪಾಲರು- ‘ಏನ್ರೀ, ಷಡ್ಯೂಲ್ಡ್ ಕ್ಯಾಸ್ಟ್ ಅಂತೀರಿ? ಇಷ್ಟು ಮಾಡ್ರನ್ ಬಟ್ಟೆ ಹಾಕ್ತೀರಲ್ಲಾ!’ ಎಂದರಂತೆ. ಒಟ್ಟಿನಲ್ಲಿ ದಲಿತರು ಯೋಗ್ಯರಾಗಬೇಕಾದರೆ ಅವರು ದೀನರಾಗಿರಬೇಕು. ಹೆಂಗಸೂ ಯೋಗ್ಯಳಾಗಿರಬೇಕಾದರೆ ಅವಳೂ ದೀನಳಾಗಿರಬೇಕು. ಹೆಂಗಸರೂ ದಲಿತರೂ ಸವರ್ಣೀಯರ ಅಧೀನದಲ್ಲಿ ಚಲಿಸಾಡಬೇಕು. ಇದು ತಪ್ಪಿದರೆ ಅವರು ಮುಪ್ಪಾಗಿ ಗೊಣಗುವರು ಅಸಹಾಯಕರಾಗಿ.
ಈ ಒಂದು ಅನ್ನದ ಅಗುಳನ್ನು ಹಿಚುಕಿ ಏನೆಂದು ನೋಡುತ್ತಿರುವೆ. ಹೆಂಗಸರ ದಲಿತರ ಸಮಾನತೆಯನ್ನು ಯಾಕೆ ಸವರ್ಣೀಯ ಮನಸ್ಸು ಸಹಿಸುವುದಿಲ್ಲ ಎನ್ನುವುದಕ್ಕೆ ಇತಿಹಾಸವೇ ಇದೆ. ಇರಲಿ. ಆದರೆ ಮೇಲಿನಂತಹ ಅಸಹನೆಯ ಭಾವನೆಗಳು ಪ್ರಗತಿಪರ ವ್ಯಕ್ತಿ ಹಾಗೂ ಪಕ್ಷಗಳಲ್ಲಿಯೂ ಒಳಗೊಳಗೆ ಇವೆ ಎಂಬ ವಿಷಾದಕ್ಕೆ ಈಗ ಬರೋಣ. ಕೆಲವು ಪ್ರಗತಿಪರ ವ್ಯಕ್ತಿಗಳು, ಪಕ್ಷಗಳು ಹೆಚ್ಚಾಗಿ ವರ್ಗ ಹೋರಾಟ ಪ್ರತಿಪಾದಿಸುವ ಕಮ್ಯುನಿಷ್ಟರು ‘ದಲಿತರ ಬಿಡುಗಡೆ ವರ್ಗ ಹೋರಾಟದಲ್ಲೇ’ ಎಂದು ಮಾತನಾಡುವರು. ವರ್ಗ ಹೋರಾಟದಲ್ಲಿ ದಲಿತರ ಭಾಗವಹಿಸುವಿಕೆ ಇಲ್ಲದಿದ್ದರೆ, ದಲಿತ ನಾಯಕತ್ವವೂ ಇಲ್ಲದಿದ್ದರೆ ಆ ವರ್ಗ ಹೋರಾಟವೇ ಮುಂದಕ್ಕೆ ನೂಕಲ್ಪಡುತ್ತದೆ ಎಂಬ ನಿಜದ ಅರಿವಿಲ್ಲದವರು ಇಂಥ ಮಾತಾಡುವರು. ಇಂಥಾ ಮಾತನ್ನೇ ಹಿಂದೆ ಚೈನಾದಲ್ಲೂ ಮಾತನಾಡಿದ್ದರು. ಮಹಿಳೆಯರ ಬಿಡುಗಡೆಯ ಪ್ರಶ್ನೆ ಬಂದಾಗ ಅಲ್ಲಿನ ಕೆಲವು ಸಂಪ್ರದಾಯವಾದಿ ಕಮ್ಯುನಿಷ್ಟರು ‘ವರ್ಗ ಹೋರಾಟದೊಡನೆ ಮಹಿಳೆಯರ ಬಿಡುಗಡೆಯೂ ತಂತಾನೇ ಆಗುತ್ತದೆ’ ಎಂದು ಪ್ರತಿಪಾದಿಸಿ ಪ್ರತ್ಯೇಕ ಮಹಿಳಾ ಹೋರಾಟದ ಅಗತ್ಯತೆಯನ್ನು ನಿರಾಕರಿಸಿದ್ದರು. ಈ ವಾದವನ್ನು ನಿಜವಾದ ಕಮ್ಯುನಿಷ್ಟರು ಅಲ್ಲೇ ಅಲ್ಲಗಳೆದು ಇಂಥ ದೃಷ್ಟಿಕೋನವು ‘ಬಹಿರಂಗವಾಗಿ ಪ್ರಗತಿಪರ, ಅಂತರಂಗದಲ್ಲಿ ಪ್ರಗತಿವಿರೋಧಿ’ ಎಂದು ವಿವರಿಸಿ ನಿಜ ಕಾಣಿಸಿದರು.
ಚೀನಾದಲ್ಲಿ ಹೆಂಗಸರ ಬಿಡುಗಡೆಯ ಬಗ್ಗೆ ಸಂಪ್ರದಾಯವಾದಿ ಕಮ್ಯುನಿಷ್ಟರು ತಳೆದಿದ್ದ ಭಾವನೆಗಳಿಗೂ ಇಲ್ಲಿ ಅಂದರೆ ಇಂಡಿಯಾದಲ್ಲಿ ಕಮ್ಯುನಿಷ್ಟರು ತಳೆದಿರುವ ‘ದಲಿತರ ಬಿಡುಗಡೆ ವರ್ಗ ಹೋರಾಟದಲ್ಲೇ’ ಎಂಬ ನಿಲುವೂ ‘ಬಹಿರಂಗವಾಗಿ ಪ್ರಗತಿಪರವಾಗಿದ್ದು ಅಂತರಂಗದಲ್ಲಿ ಪ್ರಗತಿವಿರೋಧಿ’ಯಾಗಿ ಸಂವೇದನೆ ಇಲ್ಲದ್ದಾಗಿರುತ್ತದೆ. ಈ ಪ್ರಗತಿಪರರು ಮೊದಲು ತಮ್ಮ ಪೊರೆ ಕಳಚಿ ಹೊಸ ಹುಟ್ಟು ಪಡೆಯಬೇಕಾಗಿದೆ. ಯಾರ ಪೊರೆ ಕಳಚಲಿ ಬಿಡಲಿ, ಹೆಣ್ಣು ಜಾತಿಯೂ ದಲಿತ ಜಾತಿಯೂ ಕೈ ಕೈ ಹಿಡಿದು ತಮ್ಮ ಬಿಡುಗಡೆಗೆ ಜೊತೆಗೂಡಿ ಮುನ್ನಡೆಯಬೇಕಾಗಿದೆ.