ದೇವನೂರರ “ಎದೆಗೆ ಬಿದ್ದ ಅಕ್ಷರ” ಓದು ಸರಣಿ -16 // ಶ್ರೀಲಕ್ಷ್ಮೀ ವೈ.ಎಸ್//
[ದೇವನೂರ ಮಹಾದೇವ ಅವರ “ಎದೆಗೆ ಬಿದ್ದ ಅಕ್ಷರ” ಕೃತಿ 14.12.2012 ರಂದು ಪ್ರಕಟವಾಗಿ, ಈ 9 ವರ್ಷಗಳಲ್ಲಿ 24 ಮುದ್ರಣಗಳನ್ನು ಕಂಡಿದೆ. ಹತ್ತನೆಯ ವರ್ಷದ ಕೊಡುಗೆಯಾಗಿ ನಮ್ಮ ಬನವಾಸಿ ಅಂತರ್ಜಾಲ ತಾಣಕ್ಕಾಗಿ “ಎದೆಗೆ ಬಿದ್ದ ಅಕ್ಷರ” ಓದು ಸರಣಿ ಪ್ರಾರಂಭಿಸಲಾಗಿದ್ದು, ಸಂಕಲನದಿಂದ ಆಯ್ದ “ಯಾರಿಗೆ ಯಾವ ಚಿಕಿತ್ಸೆ.” ಬರಹದ ವಾಚನ ಶ್ರೀಲಕ್ಷ್ಮೀ ವೈ.ಎಸ್ ಅವರಿಂದ.]
ಯಾರಿಗೆ ಯಾವ ಚಿಕಿತ್ಸೆ?
ಅಯೋಧ್ಯೆಯ ಘಟನೆ ನಮ್ಮನ್ನು ತತ್ತರಿಸುವಂತೆ ಮಾಡಿತು. ಹಿಂದೂ ಮತಾಂಧತೆ ಮುಸ್ಲಿಮರ ಬಲಿಗೆ ತವಕಿಸಿತು. ಭಿನ್ನಭಾವನೆ ಕೆರಳಿಸಿ ಅದನ್ನೇ ಆರಾಧಿಸುವಂಥ ವಾತಾವರಣ ಉಂಟುಮಾಡಿತು. ಇದು ಹೀಗೇ ಮುಂದುವರೆದರೆ ಅದು ಎಲ್ಲೆಲ್ಲಿಗೆ ಹೋಗಬಹುದು? ಇಂದು ಮುಸ್ಲಿಮರನ್ನು ಗುರಿ ಮಾಡಿಕೊಂಡಿರುವ ಹಿಂದೂ ಮತಾಂಧತೆ ನಾಳೆ ಅಸ್ಪೃಶ್ಯರನ್ನು ಬಲಿ ಕೇಳಬಹುದು. ನಾಳಿದ್ದು ಶೂದ್ರರು. ಇದಾದ ಮೇಲೆ ಪ್ರಗತಿಪರ ಬ್ರಾಹ್ಮಣರೂ ಬಲಿ ವಸ್ತುಗಳಾಗಬೇಕಾಗುತ್ತದೆ. ಮತಾಂಧತೆ ಭಿನ್ನತೆಗಳನ್ನು ವೈಭವೀಕರಿಸಿದಾಗ ಅದು ಎಲ್ಲಿಯವರೆಗೆ ಹೋಗಬಹುದೆಂದರೆ- ಬ್ರಾಹ್ಮಣರ ಉಪಪಂಗಡಗಳನ್ನೆಲ್ಲ ಒಟ್ಟಿಗೆ ವಾಸಿಸುವಂತೆ ಮಾಡಿ ‘ನಾಮ, ಮುದ್ರೆ ಹಾಕುವುದರ ಬಗ್ಗೆ ಒಂದು ನಿರ್ಧಾರಕ್ಕೆ ಬರುವಂತೆ’ ತಿಳಿಸಿದರೆ ಜೀವನಪರ್ಯಂತ ಅವರು ಅದಕ್ಕಾಗಿ ಜಗಳವಾಡುವರು. ತಾನು ಭಿನ್ನ, ತನಗಿಂತ ಭಿನ್ನವಾದುದು ಇರಬಾರದು ಎಂಬ ಅಸಹನೆಯು ಆಳ್ವಿಕೆ ನಡೆಸಿದಾಗ ಇಲ್ಲಿಗೆ ತಂದು ನಿಲ್ಲಿಸುತ್ತದೆ.
ಚರಿತ್ರೆಯ ಏರಿಳಿತ ನೋಡಿದಾಗ ಉಪನಿಷತ್ ಕಾಲದ ಧರ್ಮ ಮಾನವನ ಐಕ್ಯತೆಗೆ ತವಕಿಸಿತ್ತು. ಅಂತರಂಗದ ಉನ್ನತಿಗೆ ಹಾತೊರೆದಿತ್ತು. ಮುಂದೆ ಜಾತಿ ಪದ್ಧತಿಯನ್ನು ವೈಭವೀಕರಿಸಿ ಅದೇ ಧರ್ಮ ಎಂಬಂತಾಯ್ತು. ಈಗ ಚೇತರಿಸಿಕೊಳ್ಳುತ್ತಿರುವ ಕಾಲದಲ್ಲಿ ಆ ಭಿನ್ನತೆ ಮತ್ತೆ ಭುಗಿಲೆದ್ದಿದೆ. ಈ ಹಿಂದೆ ಭಿನ್ನತೆ ಮತಾಂಧತೆಗಳನ್ನು ಆರಾಧಿಸಿದ್ದಾಗ ಏನಾಯ್ತು? ಆಗ ಯಾವ ಸಾಮಾಜಿಕ ವ್ಯವಸ್ಥೆ ಇತ್ತು? ಅಲ್ಲಿಗೆ ಮತ್ತೆ ಹಿಂದುವರೆಯಬೇಕಾಗುತ್ತದೆ. ಅಂದರೆ ಶೂದ್ರರು ಮೇಲಿನವರ ‘ಬಂಟರು’, ‘ಒಕ್ಕಲು’ಗಳಾಗಿ ಸೇವಕರಾಗಿರಬೇಕಾಗುತ್ತದೆ. ಅಸ್ಪೃಶ್ಯರು ಊರಾಚೆ ಎಸೆಯಲ್ಪಡುತ್ತಾರೆ. ಎಲ್ಲರೂ ಭಿನ್ನರಾಗಿ ಛಿದ್ರರಾಗುತ್ತಾರೆ.
ಈ ಭಿನ್ನತೆಯ ಅಂಟುಜಾಡ್ಯ ಯಾವುದನ್ನೂ ಬಿಟ್ಟಿಲ್ಲ. ಸಮಾನತೆಗಾಗಿ ತುಡಿದ ಚಿಂತಕರಲ್ಲೂ ಈ ಭಿನ್ನತೆಯನ್ನು ಕಾಣುತ್ತೇವೆ. ಅವರ ಚಿಂತನೆಗಳಲ್ಲೂ ಭಿನ್ನತೆ ಕಾಣುತ್ತೇವೆ. ಇನ್ನಾದರೂ ನಮ್ಮ ನೋಟ ಬದಲಾಗಬೇಕಾಗಿದೆ. ಯಾವುದೇ ಚಿಂತಕನೂ ಪೂರ್ಣನಲ್ಲ, ಯಾವುದೇ ಚಿಂತನೆಯೂ ಪೂರ್ಣವಲ್ಲ. ಅಂಬೇಡ್ಕರ್, ಗಾಂಧಿ, ಲೋಹಿಯಾ, ಮಾರ್ಕ್ಸ್ ಯಾರೇ ಆಗಿರಲಿ, ಅವರ ನಡುವೆ ಸಾಮ್ಯ ಗುರುತಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕಾಗಿದೆ. ಕಸಿ ಮಾಡುವ ಐಕ್ಯತೆಯ ಕಣ್ಣು ನಮ್ಮದಾಗಬೇಕಾಗಿದೆ.
ತುಂಬಾನೇ ಗೋಜಲಾಗಿರುವ ಭಾರತದ ಸಾಮಾಜಿಕ ವ್ಯವಸ್ಥೆಯನ್ನು ಅವಮಾನಿತ ಹಿನ್ನೆಲೆಯ ಇಲ್ಲಿರುವ ನಾವು ಮುಟ್ಟಲು ಹೊರಟಿದ್ದೇವೆ. ಇಲ್ಲಿ ವಿವೇಕ, ಎಚ್ಚರ ನಮ್ಮ ದಾರಿಯಾಗಬೇಕು. ಐಕ್ಯತೆ ನಮ್ಮ ಗುರಿಯಾಗಬೇಕು. ಇಲ್ಲದಿದ್ದರೆ ಗೋಜಲಿಗೆ ಮತ್ತಷ್ಟು ಗೋಜಲೇ ಸೇರಬಹುದು. ಉದಾಹರಣೆಗೆ- ಬ್ರಾಹ್ಮಣರು ಸಾಂಸ್ಕೃತಿಕವಾಗಿ ಮುಂದುವರೆದವರು ಎಂಬ ಭಾವನೆ ಶೂದ್ರರಿಗೂ ದಲಿತರಿಗೂ ಇದೆ. ಹಾಗೇ ಶೂದ್ರರು ಸಾಮಾಜಿಕವಾಗಿ ಮುಂದುವರೆದವರು ಎಂಬ ಭಾವನೆ ದಲಿತರಲ್ಲಿ ಇದೆ. ಈ ಭಾವನೆ ಇರುವುದರಿಂದಾಗಿ ಬ್ರಾಹ್ಮಣರು ಸಂಸ್ಕೃತಿಯನ್ನೆಲ್ಲಾ ತಮ್ಮಲ್ಲೇ ಗುಡ್ಡೆ ಹಾಕಿಕೊಂಡಿರುವಂತೆ ನಮಗೆ ಕಾಣಿಸುತ್ತದೆ. ಹೀಗೆ ಕಾಣುವುದರಿಂದ ಬ್ರಾಹ್ಮಣರನ್ನು ದ್ವೇಷಿಸಲು ತೊಡಗುತ್ತೇವೆ. ಅಥವಾ ಅವರಂತಾಗಲು ಬಯಸಿ ಅಸೂಯೆ, ಕೀಳರಿಮೆಯ ರೋಗಕ್ಕೆ ತುತ್ತಾಗಿ ನರಳುತ್ತೇವೆ. ಆದರೆ ಅವಮಾನಿತ ದಲಿತರು ತಮ್ಮ ಕೀಳರಿಮೆಯ ರೋಗದಿಂದ ಬಿಡಿಸಿಕೊಂಡು ಒಳಗಣ್ಣಿಂದ ನೋಡತೊಡಗಿದರೆ, ವಸ್ತುಸ್ಥಿತಿ ಬೇರೆಯಾಗೇ ಕಾಣಿಸಲೂಬಹುದು. ಗೋಜಲು ಬಿಡಿಸುವ ಎಳೆ ಸಿಗಲೂಬಹುದು.
ಸ್ಪಷ್ಟತೆಗಾಗಿ ಒಂದೆರಡು ವಿವೇಕಾನಂದರ ಅನಿಸಿಕೆಗಳನ್ನು ಮುಂದಿಡುವೆ- ಬ್ರಾಹ್ಮಣರ “ನಾನೇ ಶುದ್ಧ ಉಳಿದವರೆಲ್ಲಾ ಅಶುದ್ಧ’ ಎಂಬುದು ಮೃಗೀಯ ರಾಕ್ಷಸೀಧರ್ಮ. ಹಿಂದೆ ವಿದ್ಯಾವಂತರೆನ್ನಿಸಿಕೊಂಡವರು ಆಚರಣೆಗಳನ್ನೇ ಧರ್ಮ ಸಂಸ್ಕೃತಿಯನ್ನು ಮಾಡಿಕೊಂಡು ನೀರನ್ನು ಎಡಗೈಯಿಂದ ಕುಡಿಯುವುದೋ ಅಥವಾ ಬಲಗೈಯಿಂದ ಕುಡಿಯುವುದೋ? ಅದನ್ನು ಮೂರು ಸಲ ತೊಳೆಯುವುದೋ ಅಥವಾ ನಾಲ್ಕು ಸಲ ತೊಳೆಯುವುದೋ? ಬಾಯನ್ನು ಐದು ಸಲ ಮುಕ್ಕಳಿಸುವುದೊ ಅಥವಾ ಆರು ಸಲ ಮುಕ್ಕಳಿಸುವುದೊ ಎಂಬುದನ್ನು ಚರ್ಚಿಸುತ್ತಾ ಕಾಲ ಕಳೆದರು” -ಇದನ್ನು ನೋಡಿದಾಗ ಹೇಗನ್ನಿಸುತ್ತದೆ? ಇದೇನು ಸಂಸ್ಕೃತಿಯೇ? ನಾವು ಇದಾಗಬೇಕೆ? ಇದಕ್ಕಾಗಿ ಯಾಕೆ ಸ್ಪರ್ಧೆ, ಯಾಕಾಗಿ ದ್ವೇಷ ಅಸೂಯೆ ಕೀಳರಿಮೆ ಮೇಲರಿಮೆ? ಅಂತ ಬೆಚ್ಚ ಬೇಕಾಗುತ್ತದೆ. ಹೊರ ನೋಟಕ್ಕೆ ಸಂಸ್ಕೃತಿ ಯಂತೆ ಕಂಡುಬಂದುದು ಒಳಗಣ್ಣಿಗೆ ಸಾಂಸ್ಕೃತಿಕ ಅಧಃಪತನವಾಗಿ ಕಾಣತೊಡಗುತ್ತದೆ. ಮೇಲರಿಮೆಯ ರೋಗದ ಸವರ್ಣೀಯರು ಸಮಾಜವನ್ನು ಸುಡುತ್ತಿದ್ದರೆ, ಕೀಳರಿಮೆ ರೋಗದ ದಲಿತರು ತಮ್ಮನ್ನೇ ತಾವು ಸುಟ್ಟು ಕೊಳ್ಳುತ್ತಿರುವುದು ಕಾಣುತ್ತದೆ. ಐಕ್ಯತೆಯ ಮನಸ್ಸಿಲ್ಲದೆ ಯಾರು ಯಾವುದನ್ನು ಮುಟ್ಟಿದರೂ ಅದು ಧ್ವಂಸವಾಗಿಬಿಡುತ್ತದೆ.
ಚಿಕಿತ್ಸೆ ಯಾರಿಗೆ ಬೇಕಾಗಿದೆ? ಸಗಟಾಗಿ ನೋಡುವುದಾದರೆ ನಮ್ಮ ಸಮಾಜದ ಸ್ವಾಸ್ಥ್ಯಕ್ಕೆ ಅತ್ಯಗತ್ಯವಾಗಿರುವುದು-ಬ್ರಾಹ್ಮಣರಿಗೆ ಸಾಂಸ್ಕೃತಿಕ ಚಿಕಿತ್ಸೆ ಕೊಟ್ಟು ಉದ್ಧಾರ ಮಾಡಬೇಕಾಗಿದೆ. ಹಾಗೆ ಶೂದ್ರರನ್ನು ಸಾಮಾಜಿಕವಾಗಿ ನಾಗರೀಕರನ್ನಾಗಿಸಬೇಕಾಗಿದೆ. ಇಲ್ಲಿ ದಲಿತರಿಗೆ ಆರ್ಥಿಕ ಆಸರೆಯಾಗಬೇಕಾಗಿದೆ. ಇದಕ್ಕೂ ಮೊದಲು ದಲಿತ ಸಂಘಟನೆಗಳು ತಮ್ಮ ‘ಕೀಳುಹುಚ್ಚು ರೋಗ’ದಿಂದ ಬಿಡುಗಡೆ ಪಡೆದು ‘ಮೇಲುಹುಚ್ಚು ರೋಗ’ದವರನ್ನೂ ವಿಮೋಚನೆಗೊಳಿಸಬೇಕಾಗಿದೆ. ಈಗ ಹೇಳಿ! ನಾವು ಆಗಬೇಕಾದ್ದು ರೋಗಿಯೋ ಅಥವಾ ವೈದ್ಯರೋ? ಅದು ನಮ್ಮ ಕೈಲೇ ಇದೆ.