ದೇವನೂರರ “ಎದೆಗೆ ಬಿದ್ದ ಅಕ್ಷರ” ಓದು ಸರಣಿ -15 //ಎಚ್.ಆರ್.ನವೀನ್ ಕುಮಾರ್//
[ದೇವನೂರ ಮಹಾದೇವ ಅವರ “ಎದೆಗೆ ಬಿದ್ದ ಅಕ್ಷರ” ಕೃತಿ 14.12.2012 ರಂದು ಪ್ರಕಟವಾಗಿ, ಈ 9 ವರ್ಷಗಳಲ್ಲಿ 24 ಮುದ್ರಣಗಳನ್ನು ಕಂಡಿದೆ. ಹತ್ತನೆಯ ವರ್ಷದ ಕೊಡುಗೆಯಾಗಿ ನಮ್ಮ ಬನವಾಸಿ ಅಂತರ್ಜಾಲ ತಾಣಕ್ಕಾಗಿ “ಎದೆಗೆ ಬಿದ್ದ ಅಕ್ಷರ” ಓದು ಸರಣಿ ಪ್ರಾರಂಭಿಸಲಾಗಿದ್ದು, ಸಂಕಲನದಿಂದ ಆಯ್ದ “ಕೇವಲ ಮನುಷ್ಯನಾಗುವುದೆಂದರೆ….” ಬರಹದ ವಾಚನ ಎಚ್.ಆರ್.ನವೀನ್ ಕುಮಾರ್ ಅವರಿಂದ.]
ಕೇವಲ ಮನುಷ್ಯನಾಗುವುದೆಂದರೆ….
ಕನ್ನಡ ಕಾದಂಬರಿ ‘ಇಂದಿರಾಬಾಯಿ’ಗೆ ಇಂದಿಗೆ ನೂರು ವರ್ಷ. ಈ ನೂರು ವರ್ಷಗಳಲ್ಲಿ ಶ್ರೇಷ್ಠವಾದ ಕಾದಂಬರಿ ಯಾವುದು ಎಂದು ತಿರುಗಿ ನೋಡಿದಾಗ- ಅದು ‘ಮಲೆಗಳಲ್ಲಿ ಮದುಮಗಳು’. ಈ ಎರಡೂ ಕೃತಿಗಳಿಗೂ ಕೃತಜ್ಞತೆ ಸಲ್ಲಿಸುವುದರ ಮೂಲಕ ಮಂಗಳೂರು ವಿಶ್ವವಿದ್ಯಾಲಯ ಏರ್ಪಡಿಸಿರುವ- ‘ಯಜಮಾನ್ಯ ಮತ್ತು ಪ್ರತಿರೋಧದ ನೆಲೆ’ ಎಂಬ ಈ ವಿಚಾರ ಸಂಕಿರಣವನ್ನು ಉದ್ಘಾಟನೆ ಮಾಡುತ್ತಿದ್ದೇನೆ.
ಒಬ್ಬ ವ್ಯಕ್ತಿಗೆ ಇರುವ ಸೂಕ್ಷ್ಮತೆ, ಅಂತಃಕರಣ, ಸಹಾನುಭೂತಿ, ಕಾಣುವ ಕಣ್ಣು ಹಾಗೂ ಆತ ನಿಂತ ನೆಲೆ ಇವುಗಳಿಂದಾಗಿ ಒಂದೇ ವಸ್ತುವಿಚಾರಗಳು ಹೇಗೆ ಯಜಮಾನ್ಯವೋ, ಪ್ರತಿಭಟನೆಯೋ, ಬಂಡಾಯವೋ ಆಗಿ ಪರಿಣಮಿಸುವ ರೀತಿಯನ್ನು ಒಂದು ಉದಾಹರಣೆಯ ಮೂಲಕ ಮನದಟ್ಟು ಮಾಡಲು ಪ್ರಯತ್ನಿಸುವೆ. ಆ ಉದಾಹರಣೆಯು ಉಡುಪಿಯ ರಥಬೀದಿಯಲ್ಲಿದೆ. ಅಲ್ಲಿ ಕೃಷ್ಣ ದೇವಾಲಯವಿದೆ. ಹೊರಗೆ ಕನಕದಾಸ ಹಾಡುವ ಭಂಗಿಯಲ್ಲಿ ನಿಂತಿದ್ದಾನೆ. ನಡುವೆ ಒಂದು ಕಿಂಡಿ ಇದೆ. ಈ ದೃಶ್ಯ ಯಾರ್ಯಾರಿಗೆ ಹೇಗೆ ಕಾಣಿಸಬಹುದು? ಈ ಕುತೂಹಲದಿಂದ ನನಗೆ ಕಂಡದ್ದು ಹೀಗೆ-
ಒಬ್ಬ ಮಾಧ್ವ ಜನಾಂಗದ ಕಟ್ಟಾ ಸಂಪ್ರದಾಯಸ್ಥ ಕರ್ಮಠನಿಗೆ ‘ಛೇ ಛೇ ಒಬ್ಬ ಹೀನ ಜಾತಿಯವನಿಗಾಗಿ ಭಗವಂತನನ್ನೇ ತಿರುಗಿಸುವುದೆಂದರೇನು’ ಅನ್ನಿಸಬಹುದು. ಆತನ ನಿದ್ದೆ ಕೆಡಬಹುದು. ಅದೇ ಮಾಧ್ವ ಜನಾಂಗದ ಉದಾರವಾದಿ ಧಾರ್ಮಿಕ ಮನುಷ್ಯನಿಗೆ ‘ಕೃಷ್ಣ ಪರಮಾತ್ಮನ ಲೀಲೆಯೇ ಲೀಲೆ, ಭಕ್ತವತ್ಸಲ ಶ್ರೀ ಕೃಷ್ಣನು ಹೀನ ಕುಲದ ಕನಕನಿಗೂ ದರ್ಶನ ಕೊಟ್ಟ! ಧನ್ಯ ಕನಕ ನೀನೇ ಧನ್ಯ’ ಅನ್ನಿಸಬಹುದು. ಈತ ನೆಮ್ಮದಿಯಿಂದ ನಿದ್ದೆ ಮಾಡಬಹುದು. ಅದೇ ಉಡುಪಿಯಲ್ಲಿ ಅದೇ ಮಾಧ್ವ ಜನಾಂಗದಲ್ಲಿ ಸೂಕ್ಷಜ್ಞನಾದ ಮಾನವೀಯ ಪ್ರಜ್ಞಾವಂತನೊಬ್ಬ ಹುಟ್ಟುವುದು ಅಸಂಭವವೇ? ಅಂಥಹವನಿಗೆ ಈ ದೃಶ್ಯ ಹೇಗೆ ಕಾಣಿಸಬಹುದು? ಮಠದೊಳಗಿನ ಕಿಂಡಿ ಹಿಂದೆ ನಿಂತು ಆತ ಹೊರನೋಡಿದರೆ ಕಾಣುವ ಕನಕನನ್ನು ಕಂಡು ಏನನ್ನಿಸಬಹುದು? ‘ನನ್ನ ಪೂರ್ವಜರು ಎಷ್ಟೊಂದು ಪಾಪಿಷ್ಠರು! ದೇವರಿಗೆ ಸಮಾನರಾದ ಸಂತ ಕನಕನನ್ನು ಹೊರಗೆ ನಿಲ್ಲಿಸಿಬಿಟ್ಟಿದ್ದಾರಲ್ಲ! ತನ್ನ ಪೂರ್ವಜರಿಗೆ ಪೂರ್ಣಪ್ರಜ್ಞೆ ಮಾತಿರಲಿ, ಅಲ್ಪಪ್ರಜ್ಞೆಯೂ ಇಲ್ಲದಾಯ್ತಲ್ಲ’ ಎನ್ನಿಸಿ ಈತ ನೆಮ್ಮದಿ ಕಳೆದುಕೊಂಡು ನಿದ್ದೆಗೆಡಬಹುದು. ಕೃಷ್ಣನ ವಿಗ್ರಹವನ್ನು ಹೊರತೆಗೆದು ಕನಕನ ಪದತಲದಲ್ಲಿಟ್ಟು ಹೊಸಗುಡಿ ಕಟ್ಟುವವರೆಗೂ ಸಮಾಧಾನ ಸಿಗದೇ ಹೋಗಬಹುದು. ನಾನು ಇದನ್ನು ಅಸಾಧ್ಯವೆಂದುಕೊಂಡಿಲ್ಲ. ಯಾಕೆಂದರೆ, ಮೇಲು ಕೀಳುಗಳನ್ನು ಮೌಲ್ಯ ಮಾಡಿಕೊಂಡ ಬ್ರಾಹ್ಮಣ ಧರ್ಮದಲ್ಲಿ ಹುಟ್ಟಿದ್ದಕ್ಕಾಗಿ ಜಿಗುಪ್ಸೆಗೊಂಡು ಪರಿತಪಿಸಿದ ಮಹಾನ್ ಮಾನವರಾದ ಶ್ರೀ ಧರ್ಮಾನಂದ ಕೋಸಂಬಿ ಇದೇ ಮಣ್ಣಿನಲ್ಲಿ ಹುಟ್ಟಿದ್ದಾರೆ.
ಇತ್ತ ಕನಕನ ಜನಾಂಗಕ್ಕೆ ಸೇರಿದ ಒಬ್ಬನಿಗೆ ‘ನಮ್ಮ ಕನಕ ದೇವರನ್ನೇ ತಿರುಗಿಸಿಬಿಟ್ಟ! ಹೇಗೆ!!’ ಅನ್ನಿಸಿ ಹೆಮ್ಮೆಗೆ ಕಾರಣವಾದರೆ ಇದೇ ದೃಶ್ಯ ಆ ಜನಾಂಗದ ಇನ್ನೊಬ್ಬನಿಗೆ ಕನಕ ಹೊರಗೆ ನಿಂತಿರುವುದು ಎದೆಗೆ ಭರ್ಜಿ ಚುಚ್ಚಿದಂತಾಗಿ ಆ ಮಠವನ್ನೇ ಭೂಮಿ ಮೇಲಿಂದ ಧ್ವಂಸ ಮಾಡಿಬಿಡಬೇಕೆನ್ನಿಸಬಹುದು. ಆದರೆ ಹೊರಗೆ ನಿಂತ ನಮ್ಮ ಕನಕನ ಪ್ರತಿಮೆಗೆ ಜೀವ ಬಂದರೆ ಏನು ಅನ್ನಿಸಬಹುದು? ‘ಮಾಧ್ವ ಕುರುಬ ಇಬ್ಬರೂ ಮೇಲು-ಕೀಳು ಎಂಬ ಜಾತಿಯ ಬಚ್ಚಲಿನಲ್ಲಿ ಹುಳಗಳಾಗಿ ವಿಲವಿಲ ಒದ್ದಾಡುತ್ತಿದ್ದಾರೆ, ನೋಡಲಾರೆ. ಇವರನ್ನು ಮನುಷ್ಯರನ್ನಾಗಿಸು ಪರಮಾತ್ಮ’ -ಹೀಗನ್ನಿಸಬಹುದೇ? ಯಾಕೆಂದರೆ ಈ ಜಾತಿ ಮತ ಮೇಲು ಕೀಳು ಭಾರತದಲ್ಲಿ ಏನೆಲ್ಲಾ ಆಗಬಹುದು, ಆದರೆ ಕೇವಲ ಮನುಷ್ಯನಾಗುವುದು ಬಲು ಕಷ್ಟ. ಅದಕ್ಕಾಗಿ ನಮ್ಮ ಋಷಿಗಳು, ಸಂತರು ಭಿನ್ನಭಾವದ ಊರಿಂದ ದೂರವಾಗಿ ಬೆಟ್ಟಗುಡ್ಡಗಳಲ್ಲಿ ವಾಸಿಸುತ್ತಿದ್ದರೇನೋ! ಅದಕ್ಕಾಗೇ ನಮ್ಮ ಜೋಗಿಗಳು ಭಿನ್ನಭಾವದ ಊರುಗಳಲ್ಲಿ ನೆಲೆಗೊಳ್ಳದೆ ಊರೂರು ಅಲೆಯುತ್ತಿದ್ದರೇನೋ! ಇದನ್ನು ನೋಡಿದಾಗ ಮನುಷ್ಯನಾಗಿ ಹುಟ್ಟಿದ ಮನುಷ್ಯ- ಮನುಷ್ಯನಾಗೇ ಉಳಿಯಲು ಎಷ್ಟೊಂದು ಕಷ್ಟ ಅನ್ನಿಸಿ ಸುಸ್ತಾಗುತ್ತದೆ.