ದೇವನೂರರ “ಎದೆಗೆ ಬಿದ್ದ ಅಕ್ಷರ” ಓದು ಸರಣಿ- 7- //ಸಂತೋಷ ಗುಡ್ಡಿಯಂಗಡಿ//
(ದೇವನೂರ ಮಹಾದೇವ ಅವರ “ಎದೆಗೆ ಬಿದ್ದ ಅಕ್ಷರ” ಕೃತಿ 14.12.2012 ರಂದು ಪ್ರಕಟವಾಗಿ, ಈ 9 ವರ್ಷಗಳಲ್ಲಿ 24 ಮುದ್ರಣಗಳನ್ನು ಕಂಡಿದೆ. ಹತ್ತನೆಯ ವರ್ಷದ ಕೊಡುಗೆಯಾಗಿ ನಮ್ಮ ಬನವಾಸಿ ಅಂತರ್ಜಾಲ ತಾಣಕ್ಕಾಗಿ “ಎದೆಗೆ ಬಿದ್ದ ಅಕ್ಷರ” ಓದು ಸರಣಿ ಪ್ರಾರಂಭಿಸಲಾಗಿದ್ದು, ಸಂಕಲನದಿಂದ ಆಯ್ದ “ಇಂಗ್ಲಿಷ್ ನೊಡನೆ ಗುದ್ದಾಟದಲಿ” ಬರಹದ ವಾಚನ ಸಂತೋಷ ಗುಡ್ಡಿಯಂಗಡಿ ಅವರಿಂದ.)
“ಇಂಗ್ಲಿಷ್ ನೊಡನೆ ಗುದ್ದಾಟದಲಿ”
ಭಾರತದ ಜಾತಿಪದ್ಧತಿಯಿಂದಾಗಿ ನಮಗೆ ತಾರತಮ್ಯಗಳು ಕಾಣುವುದೇ ಇಲ್ಲ. ಕಂಡರೂ ಆ ತಾರತಮ್ಯಗಳು ಸಹಜ ಅನ್ನಿಸಿ ಅವು ನಮ್ಮನ್ನು ಬೆಚ್ಚಿ ಬೀಳಿಸುವುದೂ ಇಲ್ಲ. ಉದಾಹರಣೆಗೆ, ಪ್ರಾಥಮಿಕ ಶಿಕ್ಷಣದಲ್ಲಿ ಪಂಚವರ್ಣ ಶಿಕ್ಷಣ ಪದ್ಧತಿ ಇದೆ. ಜೊತೆಗೆ ಮಾತೃಭಾಷೆಯು 4ನೇ ತರಗತಿಯವರೆಗೆ ಶಿಕ್ಷಣ ಮಾಧ್ಯಮ ಎಂದು ಹೆಸರಿಗಿದೆ. ಖಾಸಗಿ ಶಾಲೆಗಳು ಕಾನೂನು ವಂಚಿಸಿ ಕದ್ದೂಮುಚ್ಚಿ ಮಾತೃಭಾಷಾ ಮಾಧ್ಯಮದ ಬದಲು ಮಾಮೂಲಿ ಇಂಗ್ಲಿಷ್ ಮಾಧ್ಯಮದಲ್ಲೇ ಹೆಚ್ಚು ಕಮ್ಮಿ ಪಾಠ-ಪ್ರವಚನ ಮಾಡುತ್ತಿವೆ. ಇದಕ್ಕೆಲ್ಲಾ ನಾವು ಸುಮ್ಮನಿದ್ದೇವೆ.
ಪರ ರಾಜ್ಯದಿಂದ ವರ್ಗಾವಣೆಯಾಗಿ ಬರುವ ನೌಕರರ ಮಕ್ಕಳಿಗಾಗಿ ಇರುವ ಕೇಂದ್ರೀಯ ಪಠ್ಯದ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಇಲ್ಲಿನ ರಾಜ್ಯದ ಮಕ್ಕಳೇ ಸೇರುತ್ತಿದ್ದಾರೆ. ಇಂಗ್ಲಿಷ್ ಮಾಧ್ಯಮದ ಮೋಹಕ್ಕಾಗಿ ಕೇಂದ್ರೀಯ ಪಠ್ಯಶಾಲೆ ನುಸುಳುವಿಕೆ ಹೆಚ್ಚಾಗುತ್ತಿದೆ. ಅದರ ಉದ್ದೇಶವೇ ದುರುಪಯೋಗವಾಗುತ್ತಿದೆ. ಆದರೂ ನಾವು ಸುಮ್ಮನಿದ್ದೇವೆ.
ಇದರಿಂದಾಗಿ ನಮ್ಮ ಎಳೆ ಮಕ್ಕಳಿಗೆ ನಾವು ಪಾಠದ ಜೊತೆಗೆ ಕೊನೆಗೂ ಕಲಿಸಿದ ನೀತಿಯಾದರೂ ಏನು?- ಕಾನೂನು ವಂಚಿಸುವುದನ್ನು, ಉದ್ದೇಶ ದುರುಪಯೋಗಿಸುವುದನ್ನು. ಇದನ್ನು ಕಲಿತ ಮಗು, ದೊಡ್ಡವನಾದ ಮೇಲೆ ಕಾನೂನು ವಂಚಿಸುವುದನ್ನು, ಉದ್ದೇಶ ದುರುಪಯೋಗಿಸುವುದನ್ನು- ಇಂಥ ವಂಚನೆ ದ್ರೋಹಗಳನ್ನು ಯಾವುದೇ ಅಪರಾಧಿ ಪ್ರಜ್ಞೆ ಇಲ್ಲದೆ ಮಾಡುವುದನ್ನು ಕಲಿಸಿದಂತೂ ಆಗುವುದಿಲ್ಲವೇ? ಈ ಅಳುಕು ನಮಗಿಲ್ಲ. ಇದು ನನಗೆ ಎಲ್ಲಕ್ಕಿಂತ ಹೆಚ್ಚಿನ ಕೇಡಾಗಿ ಕಾಣಿಸುತ್ತಿದೆ.
ಮಕ್ಕಳ ಶಿಕ್ಷಣದಲ್ಲೆ ತಾರತಮ್ಯ ಇರುವ ನಮ್ಮ ಶಿಕ್ಷಣ ಪದ್ಧತಿಯಲ್ಲಿ ಒಟ್ಟಾರೆಯಾಗಿ ಈ ಭಾಷೆ ಆ ಭಾಷೆ ಅನ್ನದೆ ಬಹುತೇಕ ಎಲ್ಲಾ ದೇಸೀಯ ಭಾಷಿಕರೂ, ವಿದ್ಯಾಸಂಸ್ಥೆಗಳೂ ಹಳ್ಳಿದಿಳ್ಳಿ ಅನ್ನದೆ ಇಂಗ್ಲಿಷ್ ಮಾಧ್ಯಮಕ್ಕಾಗಿ ದಾಹ ಪಡುತ್ತಿವೆ. ಅದಕ್ಕಾಗಿ ನಾನಾ ಕಳ್ಳ ಉಪಾಯಗಳನ್ನು ಹುಡುಕುತ್ತಿವೆ. ಇಂಥ ಸಂದರ್ಭದಲ್ಲಿ ಒಂದನೆಯ ತರಗತಿಯಿಂದ ಒಂದು ಭಾಷೆಯಾಗಿ ಇಂಗ್ಲಿಷ್ ಅನ್ನು ಕಲಿಸಬೇಕೆ ಬೇಡವೆ ಎಂದು ಚರ್ಚೆಯಾಗುತ್ತಿದೆ. ಖಾಸಗಿ ಶಾಲೆಗಳು ನರ್ಸರಿಯಿಂದಲೂ ಇಂಗ್ಲಿಷ್ ಕಲಿಸುತ್ತ ಹಾಗೂ ಒಂದನೇ ತರಗತಿಯಿಂದಲೇ ಒಳಗೊಳಗೇ ಕಾನೂನು ವಂಚಿಸಿ ಇಂಗ್ಲಿಷ್ ಮಾಧ್ಯಮದ ಪಾಠ-ಪ್ರವಚನ ಮಾಡುತ್ತಿರುವಾಗ, ಸರ್ಕಾರಿ ಶಾಲೆಗಳು ಒಂದು ಭಾಷೆಯಾಗಿ ಇಂಗ್ಲಿಷನ್ನು ಒಂದನೇ ತರಗತಿಯಿಂದ ಕಲಿಸುವುದಕ್ಕೆ ತಕರಾರು ಯಾಕೆ? ಅರ್ಥ ಮಾಡಿಕೊಳ್ಳಬಹುದಾದ ಒಂದು ಆತಂಕ ಎಂದರೆ ಕೆಲವೆಡೆ ಏಕ ಉಪಾಧ್ಯಾಯ ಶಾಲೆ, ಹಳ್ಳಿಗಳಲ್ಲಿ ಇಂಗ್ಲಿಷ್ ಕಲಿಸುವ ಉಪಾಧ್ಯಾಯರಿಲ್ಲ- ಇತ್ಯಾದಿ. ಈ ಸಮಸ್ಯೆ ಇದೆ ನಿಜ. ಆದರೆ ಅಂಥ ಕಡೆ ಕನ್ನಡವನ್ನೂ ಸರಿಯಾಗಿ ಕಲಿಸುತ್ತಿಲ್ಲ ಎಂಬ ಆರೋಪಗಳೂ ಇವೆ. ಹಾಗಂತ ಕನ್ನಡವೂ ಬೇಡ ಅನ್ನಲಾಗದು. ಈ ಸಮಸ್ಯೆಯೇ ಬೇರೆ. ಇದನ್ನು ಕಲಿಕಾ ನೀತಿಗೆ ಬೆರೆಸಿ ನೋಡಬಾರದು. ಅಗತ್ಯವಿರುವ ತರಬೇತಿ ನೀಡಬೇಕಷ್ಟೇ. ಆದ್ದರಿಂದ ಮಾತೃಭಾಷೆಯು ಶಿಕ್ಷಣ ಮಾಧ್ಯಮ ಆಗುವುದಾದರೆ ಒಂದು ಭಾಷೆಯಾಗಿ ಇಂಗ್ಲಿಷನ್ನು ಒಂದನೇ ತರಗತಿಯಿಂದಲೇ ಕಲಿಸುವುದು ಹೆಚ್ಚು ಉಪಯುಕ್ತ ಎಂದೇ ನನಗನ್ನಿಸುತ್ತದೆ.
ಯಾಕೆಂದರೆ ಈ ಅವಕಾಶ ಇಲ್ಲದಿದ್ದರೆ- ನಮ್ಮ ಸಮಾಜದೊಳಗಿರುವ ಇಂಗ್ಲಿಷ್ ದಾಹವು ಮಾತೃಭಾಷಾ ಶಿಕ್ಷಣ ಮಾಧ್ಯಮವನ್ನೇ ತಿಂದು ಹಾಕಿಬಿಡುವ ಅಪಾಯ ಇದೆ ಅನ್ನಿಸುತ್ತದೆ. ಅಂದರೆ ಇಂಗ್ಲಿಷ್ ಮತ್ತೆ ಪ್ರಾಥಮಿಕ ಹಂತದಲ್ಲಿ ಶಿಕ್ಷಣ ಮಾಧ್ಯಮವಾಗಿ ಕನ್ನಡವು ಕಾಟಾಚಾರಕ್ಕೆ ಕಲಿಯುವ ಭಾಷೆಯಾಗಿ ಉಳಿದುಬಿಡುವ ಒತ್ತಡ ಉಂಟಾಗಬಹುದು. ಆದ್ದರಿಂದ ಇಂಗ್ಲಿಷ್ ಬಾಯಾರಿಕೆಯನ್ನು ಒಂದು ಭಾಷೆಯಾಗಿ ಪ್ರಾಥಮಿಕ ಹಂತದಲ್ಲೇ ಕಲಿಸುತ್ತ ತಣಿಸಿಕೊಂಡು, ಮಾತೃಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿ ಉಳಿಸಿಕೊಂಡು ಮುಂದುವರಿಯುವುದು ಸಮಾನ ಶಿಕ್ಷಣದ ಕಡೆಗೆ ಇಟ್ಟ ಒಂದು ಹೆಜ್ಜೆ ಎಂದು ನನಗನ್ನಿಸುತ್ತದೆ. ಮುಂದೆ ಕನಿಷ್ಠ 10ನೇ ತರಗತಿಯವರೆಗೆ ಹಂತಹಂತವಾಗಿ ಮಾತೃಭಾಷಾ ಶಿಕ್ಷಣ ಮಾಧ್ಯಮಕ್ಕಾಗಿ ಇದರ ಜೊತೆಗೆ ಈಗಿರುವುದಕ್ಕಿಂತಲೂ ಹೆಚ್ಚಿನ ಆದ್ಯತೆ ಕೊಟ್ಟು ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸಿದರೆ ಆಗ ಮಾತ್ರ ಮಾತೃಭಾಷಾ ಶಿಕ್ಷಣ ಮಾಧ್ಯಮ ಉಳಿಯಬಹುದೇನೋ? ಮಾತೃಭಾಷಾ ಶಿಕ್ಷಣ ಮಾಧ್ಯಮದ ಉಳಿವಿಗಾಗಿಯೂ ಈ ರೀತಿಯು ಅಗತ್ಯವಿದೆ ಅನ್ನಿಸುತ್ತದೆ.
ಈಗ ನಮ್ಮ ನಮ್ಮಲ್ಲೆ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸುವುದು ಒಂದನೇ ತರಗತಿಯಿಂದಲೋ ಅಥವಾ ಎರಡನೇ ತರಗತಿಯಿಂದಲೋ ಅಥವಾ ಮೂರನೇ ತರಗತಿಯಿಂದಲೋ ಎಂಬುದು ಚರ್ಚಿತವಾಗುತ್ತಿದೆ. ಇದೇನೂ ಭಿನ್ನಾಭಿಪ್ರಾಯವಲ್ಲ. ಒಂದು ಹೆಜ್ಜೆ ಹಿಂದು ಮುಂದು ಅಷ್ಟೆ. ಖಾಸಗಿ ನರ್ಸರಿಗಳಲ್ಲಿ ಕಲಿಸುವ ಇಂಗ್ಲಿಷ್ ಅನ್ನೇ ಸರ್ಕಾರಿ ಶಾಲೆಗಳು ಒಂದು ಮತ್ತು ಎರಡನೇ ತರಗತಿಗಳಲ್ಲಿ ಕಲಿಸಿ ಅದಕ್ಕೆ ‘ಇಂಗ್ಲಿಷ್ ಭಾಷಾ ಪರಿಚಯ’ ಎಂದು ಹೆಸರಿಟ್ಟು, ಮೂರನೇ ತರಗತಿಯಿಂದ ಇಂಗ್ಲಿಷ್ ಭಾಷಾ ಕಲಿಕೆ ಆರಂಭಿಸಿದರೂ ಆಗುತ್ತದೆ. ಭಾಷಾ ಕಲಿಕಾ ಕೌಶಲ್ಯಕ್ಕೆ ಎಳೆತನ, ಬಾಲ್ಯವು ಸಹಜ ಮತ್ತು ಪೂರಕ ಮನಸ್ಥಿತಿ ಎಂಬುದನ್ನು ನಾವು ಇಲ್ಲಿ ಮನಸ್ಸಲ್ಲಿಟ್ಟುಕೊಂಡರೆ ಸಾಕು.
ಆದರೆ ನಾಳೆ, ಪ್ರಾಥಮಿಕ ಶಿಕ್ಷಣದಲ್ಲೇ ಇಂದಿಗಿಂತಲೂ ಹೆಚ್ಚು ಅಸಮಾನತೆಯನ್ನು ಉಂಟು ಮಾಡುವ ಇಂಗ್ಲಿಷ್ ಮಾಧ್ಯಮದ ಕೇಂದ್ರೀಯ ಪಠ್ಯಶಾಲೆಗಳು ಗವಾಕ್ಷಿಯಲ್ಲಿ ಬಂದು ಕೂರುತ್ತಿವೆ. ಮಾತೃಭಾಷಾ ಶಿಕ್ಷಣ ಮಾಧ್ಯಮದ ಬಗ್ಗೆ ನಿಜವಾದ ಬದ್ಧತೆ ಇಲ್ಲದ ಸರ್ಕಾರವು, ಈ ಕಡೆ ಪ್ರಾಥಮಿಕ ಶಿಕ್ಷಣ ಮಾಧ್ಯಮಕ್ಕೆ ಮಾತೃಭಾಷೆ ಎಂದು ತೋರಿಸಿ ಆ ಕಡೆ ಕೇಂದ್ರೀಯ ಪಠ್ಯದ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ‘ಅಭ್ಯಂತರವಿಲ್ಲ’ ಎಂದು ಅನುಮತಿ ನೀಡಿ ವಂಚಿಸುತ್ತಿದೆ. ಈ ಕೈಲಿ ಕೊಟ್ಟಂತೆ ಮಾಡಿ, ಆ ಕೈಲಿ ಕಿತ್ತುಕೊಳ್ಳುತ್ತಿದೆ. ಇದಕ್ಕೂ ನಾವು ಸುಮ್ಮನಿದ್ದೇವೆ. ಒಟ್ಟಿನಲ್ಲಿ ನಾವು ಕನ್ನಡಿಗರು, ಕನ್ನಡ ಹೋರಾಟಗಾರರು ದಡ್ಡರೋ ಅಥವಾ ಮುಗ್ಧರೋ ಅಥವಾ ಇಂಗ್ಲಿಷ್ ಮಾಧ್ಯಮದ ಆಶೆ ನಮ್ಮ ಒಳಗೊಳಗೇ ಇದೆಯೋ ನನಗಂತೂ ಅರ್ಥವಾಗದೇ ಉಳಿದಿದೆ.