ದೇವನೂರರ “ಎದೆಗೆ ಬಿದ್ದ ಅಕ್ಷರ” ಓದು ಸರಣಿ -2 //ಸಂಘಮಿತ್ರೆ ನಾಗರಘಟ್ಟ//
[ದೇವನೂರ ಮಹಾದೇವ ಅವರ “ಎದೆಗೆ ಬಿದ್ದ ಅಕ್ಷರ” ಕೃತಿ 14.12.2012 ರಂದು ಪ್ರಕಟವಾಗಿ, ಈ 9 ವರ್ಷಗಳಲ್ಲಿ 24 ಮುದ್ರಣಗಳನ್ನು ಕಂಡಿದೆ. ಹತ್ತನೆಯ ವರ್ಷದ ಕೊಡುಗೆಯಾಗಿ ನಮ್ಮ ಬನವಾಸಿ ಅಂತರ್ಜಾಲ ತಾಣಕ್ಕಾಗಿ, “ಎದೆಗೆ ಬಿದ್ದ ಅಕ್ಷರ” ಓದು ಸರಣಿ ಪ್ರಾರಂಭಿಸಲಾಗಿದ್ದು, ಸಂಕಲನದಿಂದ ಆಯ್ದ “ನನ್ನ ದೇವರು” ಬರಹದ ವಾಚನ –ಸಂಘಮಿತ್ರೆ ನಾಗರಘಟ್ಟ ಅವರಿಂದ]
“ನನ್ನ ದೇವರು”
ಕನ್ನಡದ ಪ್ರಸಿದ್ಧ ವಾರಪತ್ರಿಕೆಯೊಂದು ‘ನನ್ನ ದೇವರು’ ಹೆಸರಡಿ ಲೇಖಕರ, ಚಿಂತಕರ ಅನ್ನಿಸಿಕೆಗಳನ್ನು ಪ್ರಕಟಿಸುತ್ತಿತ್ತು. ಅಕಸ್ಮಾತ್ ನನ್ನನ್ನೂ ಕೇಳಿದರೆ ಯಾವುದಕ್ಕೂ ಇರಲಿ ಎಂದು ನಾನು ಬರೆಯಬೇಕಾದುದನ್ನು ಅಂದಾಜಿಸಿಕೊಂಡಿದ್ದೆ. ಆದರೆ ಪತ್ರಿಕೆಯವರು ನನಗೆ ದೇವರಿಲ್ಲ ಎಂದು ನಿರ್ಧರಿಸಿಕೊಂಡೋ ಏನೋ ನನ್ನನ್ನು ಕೇಳಲೇ ಇಲ್ಲ. ನಾನು ಅಂದಾಜಿಸಿಕೊಂಡಿದ್ದ ನನ್ನ ದೇವರು ನನ್ನೊಳಗೇ ಉಳಿಯಿತು.
ನನ್ನ ದೇವರು ನನ್ನೊಳಗೆ ಉಳಿದಿರುವುದು ಹೀಗೆ:
ಕವಿ ಸಿದ್ಧಲಿಂಗಯ್ಯ ಒಮ್ಮೆ ನನಗೆ ಹೇಳಿದ ಕತೆಯಲ್ಲಿ ಮನೆಮಂಚಮ್ಮ ಎಂಬ ಗ್ರಾಮದೇವತೆಯ ಒಳಗಿಂದ ನನ್ನ ದೇವರು ಒಡಮೂಡುತ್ತದೆ- ಒಂದ್ಸಲ ಒಂದು ಗ್ರಾಮದ ಜನರೆಲ್ಲಾ ಸೇರಿ ತಮ್ಮ ದೇವತೆಗೆ ಗುಡಿಕಟ್ಟಲು ಆರಂಭಿಸುತ್ತಾರೆ. ಹೀಗೆ ಕಟ್ತಾ ಚಾವಣಿಮಟ್ಟಕ್ಕೆ ಆ ಗುಡಿ ಬಂದಾಗ ಒಬ್ಬನ ಮೈಮೇಲೆ ಆ ದೇವತೆ ಮಂಚಮ್ಮ ಆವಾಹಿಸಿಕೊಂಡು ‘ನಿಲ್ಸಿ ನನ್ ಮಕ್ಕಳಾ’ ಎಂದು ಅಬ್ಬರ ಮಾಡುತ್ತಾಳೆ. ಆ ಅಬ್ಬರಕ್ಕೆ ಜನ ತಮ್ಮ ಕೆಲ್ಸ ನಿಲ್ಸಿ ಕಕ್ಕಾಬಿಕ್ಕಿಯಾಗಿ ನೋಡುತ್ತಿರಲು ಆ ದೇವತೆ ಹಾಗೂ ಆ ಜನರ ನಡುವೆ ಮಾತುಕತೆ ನಡೆಯುತ್ತದೆ:
‘ಏನ್ರಯ್ಯಾ ಏನ್ ಮಾಡ್ತಾ ಇದ್ದೀರಿ?’
‘ನಿನಗೊಂದು ಗುಡಿಮನೆ ಕಟ್ತಾ ಇದ್ದೀವಿ ತಾಯಿ’
‘ಓಹೋ, ನನಗೇ ಗುಡಿಮನೆ ಕಟ್ತಾ ಇದ್ದೀರೋ? ಹಾಗಾದರೆ ನಿಮಗೆಲ್ಲಾ ಮನೆ ಉಂಟಾ ನನ್ನ ಮಕ್ಕಳಾ?’
‘ನನಗಿಲ್ಲ ತಾಯಿ’- ಅಲ್ಲೊಬ್ಬ ಹೇಳ್ತಾನೆ.
‘ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ’
-ಹೀಗೆಂದ ಮಂಚಮ್ಮದೇವಿ ಮನೆಮಂಚಮ್ಮನಾಗುತ್ತಾಳೆ!
ಛಾವಣಿ ಇಲ್ಲದ ಗುಡಿಯಲ್ಲಿ ತಾಯಿ ಮನೆಮಂಚಮ್ಮ ಇಂದು ಪೂಜಿತಳಾಗುತ್ತಿದ್ದಾಳೆ. ಈ ರೀತಿಯಲ್ಲಿ ಛಾವಣಿ ಇಲ್ಲದ ಗುಡಿಯಲ್ಲಿ ಕಾರುಣ್ಯ ಸಮತೆಯ ಬುದ್ಧನನ್ನು ಇಟ್ಟರೆ ಅದೇ ನನ್ನ ದೇವರಾಗುತ್ತದೆ.