ದೇವನೂರರ “ಎದೆಗೆ ಬಿದ್ದ ಅಕ್ಷರ” ಓದು ಸರಣಿ -3 // ಡಾ.ಕೆ.ಜಿ.ಮಹೇಶ್ವರಪ್ಪ//
‘ಮೂರ್ಛಾವಸ್ಥೆಯಲ್ಲಿ ಕಾರುಣ್ಯ’
ಬುದ್ಧನ ಕಾರುಣ್ಯ ನನ್ನ ಮನದೊಳಗೆ ಕೂತ ಬಗೆಯನ್ನು ಒಂದು ಉದಾಹರಣೆಯಿಂದ ಹೇಳಲು ಪ್ರಯತ್ನಿಸುವೆ. ಇತ್ತೀಚೆಗೆ ಶಿವಮೊಗ್ಗದ ಡಾ.ಅಶೋಕ ಪೈ ಅವರು ಮೈಸೂರಿಗೆ ಬಂದಿದ್ದರು. ಅವರು ಮನಸ್ಸಿನ ಬಗ್ಗೆ ನಡೆದಿರುವ ಒಂದು ಸಂಶೋಧನಾ ಸತ್ಯವನ್ನು ಹೇಳಿದರು. ಏನೆಂದರೆ – ಕೆಲವು ಜನ ಒಂದು ಕೊಠಡಿಯಲ್ಲಿ ಕುಳಿತು ಟೆಲಿವಿಷನ್ ನೋಡುತ್ತಿದ್ದಾರೆ ಎಂದಿಟ್ಟುಕೊಳ್ಳೋಣ. ಇನ್ನೊಂದಿಷ್ಟು ಜನ ಇದರ ಅರಿವಿಲ್ಲದೆ ಇನ್ನೊಂದು ಪಕ್ಕದ ಕೊಠಡಿಯಲ್ಲಿ ಇಸ್ಪೀಟ್ ಆಡುತ್ತಲೊ, ಏನೊ ಮಾತುಕತೆಯಾಡುತ್ತಲೊ ಅಲ್ಲಿ ತಮ್ಮಷ್ಟಕ್ಕೆ ತಾವಿರುವರು ಎಂದಿಟ್ಟುಕೊಳ್ಳೋಣ. ಆಗ ಟೆಲಿವಿಷನ್‍ನಲ್ಲಿ ಯಾವುದಾದರೂ ಕೊಲೆ ದೃಶ್ಯ ಬಂದಾಗ ಇಲ್ಲಿ ಇದನ್ನು ನೋಡುತ್ತಿದ್ದವರ ದುಃಖದ ಭಾವನೆಯು ಇದನ್ನು ನೋಡದೆ ಇರುವ ಪಕ್ಕದ ಕೊಠಡಿಯಲ್ಲಿ ತಮ್ಮಷ್ಟಕ್ಕೆ ತಾವೇ ಇಸ್ಪೀಟು ಆಡುತ್ತಿರುವವರ ಮನಸ್ಸಿಗೂ ಮುಟ್ಟಿ ಅವರ ಮನಸ್ಸು ಸ್ವಲ್ಪಮಟ್ಟಿಗೆ ದುಗುಡಗೊಳ್ಳುತ್ತದಂತೆ. ಅದೇ ಟೆಲಿವಿಷನ್‍ನಲ್ಲಿ ಯಾವುದಾದರೂ ನೃತ್ಯ ದೃಶ್ಯ ಬಂದಾಗ ಅದನ್ನು ನೋಡುತ್ತಿದ್ದವರ ಖುಷಿ ಭಾವನೆಯು ಪಕ್ಕದ ಕೊಠಡಿಯಲ್ಲಿ ಇದನ್ನು ನೋಡದ ತಮ್ಮಷ್ಟಕೆ ತಾವೇ ಇಸ್ಪೀಟು ಆಡುವವರ ಮನಸ್ಸಿನ ಮೇಲೂ ಪರಿಣಾಮ ಮಾಡಿ ಸ್ವಲ್ಪಮಟ್ಟಿಗೆ ಸಂತೋಷದ ಭಾವನೆ ಉಂಟಾಗುವುದಂತೆ.
ಈ ಎಳೆ ಹಿಡಿದು ಜಾಗತೀಕರಣವನ್ನೂ ರೂಪಿಸಬೇಕಾಗಿದೆ. ಆಗ ಮಾತ್ರವೇ ಅದು ಜಾಗತೀಕರಣ.