ದೇವನೂರರ ಅಯರ್‌ಲ್ಯಾಂಡಿನಲ್ಲಿ ‘ಡಾಂಬರು ಬಂದುದು’ !- ನಿಖಿಲ್ ಕೊಲ್ಪೆ
[26.7.2022ರಂದು ಪತ್ರಕರ್ತ ನಿಖಿಲ್ ಕೊಲ್ಪೆ ಅವರು ತಮ್ಮ ಫೇಸ್ಬುಕ್ ಪುಟದಲ್ಲಿ ಈ ಬರಹವನ್ನು ಹಂಚಿಕೊಂಡಿದ್ದರು ]
“ನ್ಯಾಯಪಥ”ಕ್ಕಾಗಿ ಯೋಗೇಂದ್ರ ಯಾದವ್ ಅವರು ದೇವನೂರ ಮಹಾದೇವರ ವ್ಯಕ್ತಿತ್ವದ ಬಗ್ಗೆ ಮತ್ತು “ಆರ್‌ಎಸ್‌ಎಸ್ ಆಳ ಅಗಲ” ಪುಸ್ತಕದ ಬಗ್ಗೆ ಬರೆದುದನ್ನು ಅನುವಾದಿಸುವಾಗ ನನ್ನ ಕತ್ತಲ ಮನಸ್ಸಿನಲ್ಲಿ ದೇವನೂರು ಬೆಳಕಿನ ನವಿಲಿನಂತೆ ಕುಣಿಯುತ್ತಿತ್ತು. ಅವರಲ್ಲ; ಅದು. ಅದು ದೇವನೂರ ಮಹದೇವ ಮಾತ್ರವಲ್ಲ. “ಐಕ್ಯತೆಯೇ ದೈವ” ಎಂಬ ನಮ್ಮ ದೇವರ ಊರು- ಕಾಲ್ಪನಿಕ ದೇವನೂರು. ದ್ಯಾವನೂರು. ಅದನ್ನು ದೆವ್ವದೂರಾಗಲು ಬಿಡೆವು. ಅದು ಭಾರತ. ಹಾಗಾಗಿ ಹಿಂದೆ ಬರೆದಿದ್ದ ಬರಹ ಇಲ್ಲಿದೆ. ಓದಿ ನೋಡಿ.
‘ಜನವಾಹಿನಿ’ಯಲ್ಲಿ ವೈವಿಧ್ಯಮಯ ಪುಟಗಳ ಬಗ್ಗೆ ಮತ್ತು ಫೋಟೋ ಕ್ಯಾಪ್ಚರ್ ಸಾಫ್ಟವೇರ್ ಮೂಲಕ ನಾವು ಚಿತ್ರ-ಲೇಖನಗಳನ್ನು ಬರೆಯುತ್ತಿದ್ದ ಬಗ್ಗೆ ಮುಖ್ಯ ಬರಹದಲ್ಲಿ ಬರೆದಿದ್ದೇನೆ.
ಒಮ್ಮೆ ಅಯರ್‌ಲ್ಯಾಂಡಿನಲ್ಲಿ ಒಂದು ದುರದೃಷ್ಟಕರ ಘಟನೆ ನಡೆಯಿತು. ಅಲ್ಲಿ ಕ್ಯಾಥೋಲಿಕ್-ಪ್ರೊಟೆಸ್ಟೆಂಟ್ ವೈಮನಸ್ಸಿನ ಹಿನ್ನೆಲೆಯಲ್ಲಿ ನಡೆದ ಘಟನೆಯದು. ಒಂದು ಪಂಗಡದ ಮೆರವಣಿಗೆಯ ವೇಳೆ ಯಾರೋ ಕಿಡಿಗೇಡಿಗಳು ಇನ್ನೊಂದು ಪಂಗಡದವರ ಒಂದು ಮುಚ್ಚಿದ್ದ ಮನೆಗೆ ಬೆಂಕಿಕೊಟ್ಟಿದ್ದರು. ಮನೆಯೊಳಗೆ ಇಬ್ಬರು ಮಕ್ಕಳಿದ್ದುದು ಬೆಂಕಿಕೊಟ್ಟವರಿಗೂ ಗೊತ್ತಿರಲಿಲ್ಲ. ಅವು ಸುಟ್ಟುಹೋದವು. ನಂತರ ಎಲ್ಲರೂ ಪಶ್ಚಾತ್ತಾಪಪಟ್ಟರು.
ಈ ದಾರುಣ ಘಟನೆ ಬಗ್ಗೆ ಚುಟುಕಾಗಿ ಬರೆಯಬೇಕೆಂದಾಗ ನನಗೆ ನೆನಪಾದುದು ಪ್ರಖ್ಯಾತ ಕತೆಗಾರ ದೇವನೂರ ಮಹಾದೇವ ಅವರ ‘ಡಾಂಬರು ಬಂದುದು’ ಕತೆ. ಇಲ್ಲಿಯೂ ಊರವರ ಜಗಳದಲ್ಲಿ ಊರ ರಸ್ತೆಗಾಗಿ ಬಂದಿದ್ದ ಡಾಂಬರನ್ನು ಯಾರೋ ಊರ ಹೊರಗೆ ಚೆಲ್ಲಿರುತ್ತಾರೆ. ಊರಿನ ಮಗುವೊಂದು ಕಾಣೆಯಾಯಿತೆಂದು ಹುಡುಕಿದಾಗ ಅದು ಆಟಕ್ಕೆಂದು ಡಾಂಬರು ತರಲು ಹೋದದ್ದು ಅಲ್ಲಿಯೇ ಸಿಕ್ಕಿಕೊಂಡಿರುತ್ತದೆ. ಆ ಕತೆಯ ಕೊನೆಯ ಸಾಲುಗಳು:
ರಂಗಪ್ಪನ ಹೈದನ ಕಾಲುಗಳನ್ನು ಗುಂಡಿಗೆ ಇಳಿಬಿದ್ದಿದ್ದ ಟಾರು ಹಿಡಿದುಕೊಂಡಿತ್ತು. ಎರಡೂ ಕೈಗಳನ್ನು ಟಾರಿನ ಡ್ರಮ್ಮು ಕಚ್ಚಿಕೊಂಡಿತ್ತು. ಮಯ್ಯಿ ಕಯ್ಯಿ ಮೊಖ ಅನ್ನದೆ ಟಾರು ಟಾರಾಗಿತ್ತು. ಮತ್ತೂ ಹತ್ತಿರ ಹೋಗಿ ನೋಡಿದರೆ ಆ ಹೈದನ ಮಯ್ಯೊಳಗ ಇನ್ನೂ ಜೀವ ಆಡುತ್ತಿತ್ತು…
ನಾನು ಇವೆರಡರ ಸಾಂಕೇತಿಕತೆಯನ್ನು ಸಮೀಕರಿಸಿ ‘ಅಯರ್‌ಲ್ಯಾಂಡಿನಲ್ಲಿ ಡಾಂಬರು ಬಂದುದು’ ಎಂಬ ಶೀರ್ಷಿಕೆ ಕೊಟ್ಟಿದ್ದೆ. ಮುಂದೆ ನಾನು ‘ಜನವಾಹಿನಿ’ ಬಿಟ್ಟು ಮೈಸೂರಿಗೆ ಹೋದಾಗ ಒಂದು ದಿನ ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದ ನನ್ನನ್ನು ನೋಡಿ ದೇವನೂರು ತಮ್ಮ ಮೊಪೆಡ್ ನಿಲ್ಲಿಸಿದರು. ಆಗಲೇ ಪರಿಚಯ ಆಗಿತ್ತು. ತುಂಬಾ ಹೊತ್ತು ಮಾತನಾಡಿದಾಗ, ಅವರು ಈ ಬರಹವನ್ನು ನೆನಪಿಸಿ, ಎರಡನ್ನು ಸಮೀಕರಿಸಿದ್ದನ್ನು ಮೆಚ್ಚಿಕೊಂಡಿದ್ದರು. ಅವರಿಗದು ನೆನಪಿರಲಾರದು. ಆದರೆ ಪ್ರೀತಿಪಾತ್ರ ಹಿರಿಯರ ನೆನಪು ನಮಗೆ ಮರೆಯದಲ್ಲವೆ?
(‘ಆರ್ಸೊ’ ಕೊಂಕಣಿ ಪತ್ರಿಕೆಯ ಕನ್ನಡ ವಿಭಾಗದಲ್ಲಿ ‘ಜನವಾಹಿನಿ’ ನೆನಪು)
ಈ ಸಮೀಕರಣ ಮತ್ತು ಎಲ್ಲಾ ಮಾನವೀಯತೆಗಳನ್ನು ಬೆಸೆಯಬೇಕೆಂದು ಅವರಿಗೆ ಗೊತ್ತಿಲ್ಲದಂತೆಯೇ ನನಗೆ ಕಲಿಸಿದ ಗುರುಗಳು ದೇವನೂರ ಮಹಾದೇವರು. ನನ್ನ ಹಲವು ತೆರೆಮರೆ ಗುರುಗಳಲ್ಲಿ ಒಬ್ಬರಾದ ಪುರುಷೋತ್ತಮ ಬಿಳಿಮಲೆಯವರು ಆರು ವರ್ಷಗಳ ಹಿಂದೆ ಹಾಕಿದ್ದ ಪಟ ಇಲ್ಲಿ ಹಾಕಿದ್ಧೇನೆ. ನಾನು ಮಾತನಾಡಿದಾಗ ಅವರು ಹೀಗಿದ್ದರು.