ದೇಮ…- ವಿಕಾಸ್ ಆರ್ ಮೌರ್ಯ

[ಜನವರಿ 2025ರ ‘ಸಂವಾದ’ ಮಾಸಪತ್ರಿಕೆಯಲ್ಲಿ ಪ್ರಕಟವಾದ ವಿಕಾಸ್ ಆರ್ ಮೌರ್ಯ ಅವರ ಕವಿತೆ. ನಮ್ಮ ಮರು ಓದಿಗಾಗಿ… ]

ದೇಮ ಅಂದರೆ

ದೇವರ ಮಗನಲ್ಲ

ದೇವರಿಗೆ ಛೆ… ಪಾಪ!

ಎನ್ನುವ ದೇವನೂರ ಮಹಾದೇವ

 

ಮುತ್ತುಗಳಿಗೆ ಮಾತು ಪೋಣಿಸಿ

ಮೆಲ್ಲನೆ ಉದುರಿಸುವ ಮಾಯ್ಕಾರ

ಕನಸಿನ ಕೌದಿ ಹೊಲಿಯುವ ಜಾದೂಗಾರ

ಹೆಜ್ಜೆ ಸಪ್ಪಳಕ್ಕೆ‌ ಗೆಜ್ಜೆ ಕಟ್ಟುವ ಕಲೆಗಾರ

ಕಾಲ ಉರುಳಿದಂತೆ ಮಾಗುವ ಮಾಮರ

 

ಯಾರ ಜಪ್ತಿಗೂ ಸಿಗದ ತಮಟೆ

ಸುಕ್ಕುಗಟ್ಟಿದಷ್ಟೂ ಸದ್ದು ಮಾಡುವ ಚರ್ಮ

ಭಾಷಣಕ್ಕೆ ಮುಂಚೆ ಪೈಲ್ವಾನ

ಸಭಿಕರ ಮುಂದೆ ಸಾವಧಾನ

ನೀರಾವಿಯನ್ನಳೆದು ತೂಗುವ ನಾಲಿಗೆ

ಮಳೆಬಿಲ್ಲನೆಳೆದು ಕಟ್ಟುವುದು ವಾಡಿಕೆ

 

ಹೊಗಳಿಕೆಗೆ ಮುಗುಳ್ನಕ್ಕು

ಒಳಗೊಳಗೇ ಹಿಗ್ಗುವ ಚಂದಿರ

ತೆಗಳುವವರು ತೆಗಳಲಿ…

ಮೌನವೇ ಮುಕ್ತ ಉತ್ತರ

ದ್ವೇಷದಲೆಗಳೂ ಕೂಡ

ಮುತ್ತಿಡದೇ ಮರಳಲಾಗದ ತೀರ

 

ಒಳ್ಳೆಯವ ಎನಿಸಿಕೊಳ್ಳುವ

ಚಟವಿರುವ ನೆಲದಲ್ಲಿ

ಇದ್ದದ್ದನ್ನು ಇದ್ದ ಹಾಗೆ

ನುಡಿಯುವ ನುಡಿಕಾರ

ತುದಿಯಲ್ಲಿದ್ದೂ ತಿದ್ದಿಕೊಳ್ಳಲಂಜದ

ಮನುಷ್ಯ, ಬಂಗಾರ

 

ದೇಮ ಎಂಬುದೇ ಆಕಾಶ

ಬೇಸಿಗೆಯ ತಿಳಿ‌ ನೀಲಿ

ಮಳೆಗಾಲದ ಮಿಂಚು ಮೋಡ

ವಸಂತದ ನವ ಚಿಗುರು

ಆಗಾಗ ಉಲ್ಕೆ ಧೂಮಕೇತು

 

ದೇಮ ಹಾಗೆಯೇ

ಎಲ್ಲರೂ ಎದ್ದಾಗ

ಮಲಗುವ ನಿಶಾಚರಿ

ಬಲ್ಲವರೂ ಮಲಗಿದಾಗ

ಏಳುವ ಕಿಂದರಿ

ಸುಲಭಕ್ಕೆ ಕರಗದ

ಕೊರಗದ ದಾರಿ…

 

ದೇಮ ಇಷ್ಟೇ…

ಬಿತ್ತುವವರ ಭೂಮಿ

ಎತ್ತಿಕೊಂಡವರ ಕೂಸು

ಎದೆಗಪ್ಪಿಕೊಂಡವರ ಗೆಳೆಯ

ನುಂಗುವವರ ಬಿಸಿ ಬಾಡು

ಆಗಾಗ ಆಳ ಅಗಲದ ಪ್ರಳಯ

ಅದೆಷ್ಟೇ ಕೂಡಿ ಕಳೆದರೂ

ಪ್ರಿಯ… ಪ್ರೀತಿಯ ಒಡೆಯ