ದೇಮಾನ ಬೇಸಾಯ-ಪ್ರೊ.ಕೆ.ಸುಮಿತ್ರಾಬಾಯಿ
ದೇಮಾ ಅಮೆರಿಕೆಯಿಂದ ವಾಪಸ್ ಬಂದ ಮೇಲೆ ಕೃಷಿ ಕಾರ್ಯಗಳು ಶುರುವಾದವು. ಆರಂಭದಲ್ಲೇ ಮೂಲಂಗಿ ಬೆಳೆದ ದೇಮಾನ ಮೂಲಂಗಿ ಬೇಸಾಯದ ಬಗ್ಗೆ ಹೇಳಲೇಬೇಕಾಗಿದೆ. ಅವನ ಮೂಲಂಗಿ ಬೇಸಾಯದ ವೈಶಿಷ್ಟ್ಯವನ್ನು ವಿವರಿಸಿ ಆಗ ನಾನು ಬರೆದ ಪುಟ್ಟ ವಿಡಂಬನಾತ್ಮಕ ಲೇಖನವೊಂದು ಆಂದೋಲನದಲ್ಲಿ ಪ್ರಕಟವಾಗಿ ಸಿಕ್ಕಾಪಟ್ಟೆ ಮೆಚ್ಚುಗೆ ಪಡೆಯಿತು. ಎಷ್ಟೆಂದರೆ, ಆ ಲೇಖನವನ್ನು ಅನೇಕ ಜಿಲ್ಲಾ ಪತ್ರಿಕೆಗಳು ಪುನರ್ ಮುದ್ರಣ ಮಾಡಿದವು. ಅಂತು ಮಾದೇವನ ಬೇಸಾಯ ನನ್ನನ್ನು ಜನಪ್ರಿಯ ಲೇಖಕಿಯನ್ನಾಗಿ ಮಾಡಿಬಿಟ್ಟಿತು! ಆ ಚೋಟುದ್ದದ ಪುಟ್ಟ ಬರಹ ನಾನು ಬರೆಯಬಹುದು ಎಂಬ ಆತ್ಮವಿಶ್ವಾಸವನ್ನು ನನ್ನೊಳಗೆ ಚಿಗುರಿಸಿತು.
ಹಾಗೂ ಹೀಗೂ ತರಕಾರಿ ಬೆಳೆಯಲು ಹೋಗಿ ವಿಫಲನಾದ ದೇಮಾನ ಕಣ್ಣು ಮುಂದೆ ತೆಂಗು ಮಾವು ಕಡೆಗೆ ಕಣ್ಣು ಬೀಳುತ್ತದೆ. ಹತ್ತಾರು ಕಡೆ ಹುಡುಕೀ ಹುಡುಕಿ ತೆಂಗಿನ ಸಸಿಗಳನ್ನು ತರುತ್ತಾನೆ. ಆಮೇಲೆ ಯಾವ ಮಾವು ಬಾಯಿಗೆ ರುಚಿಯನ್ನು ಮತ್ತು ಕೈಗೆ ಕಾಸನ್ನೂ ನೀಡುತ್ತದೆ ಎಂದು ತಡಕಾಡುತ್ತಿರುವಾಗ ಈ ಮಧುರಗಿತ್ತಿ ಮಲ್ಲಿಕಾ ಬಗ್ಗೆ ದೇಮಾಗೆ ಯಾರೋ ಪುಣ್ಯಾತ್ಮರು ಮಾಹಿತಿ ನೀಡಿದರು. ತಕ್ಷಣವೇ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯಕ್ಕೆ ಧಾವಿಸಿ ಮಲ್ಲಿಕಾ ಮಾವಿನ ಎಳೆ ಸಸಿಗಳನ್ನು
ತಂದು ಮನೆ ತುಂಬಿಸಿಕೊಂಡನು. ಅವುಗಳನ್ನು ಮನೆಯ ತಾರಸಿಯ ಮೇಲೆ ಎಳೆಬಿಸಿಲು ಬೀಳುವ ಕಡೆ ಎಚ್ಚರಿಕೆಯಿಂದ ಇಡಲಾಯಿತು.
ಆಗ ತಾರಸಿಗೆ ಹೋಗಲು ಮೆಟ್ಟಿಲುಗಳಿರಲಿಲ್ಲವಾಗಿ ಹನ್ನೆರಡು ಕಾಲಿನ ಒಂದು ದೊಡ್ಡ ಏಣಿಯನ್ನು ಕೊಂಡುತಂದೆವು. ಒಂದೊಂದು ಗಿಡದಲ್ಲಿ ಹತ್ತಾರು ಎಲೆಗಳು ಇಕ್ಕಿದ್ದವು. ದೇಮಾ ಬೆಳಿಗ್ಗೆಯಿಂದ ಸಂಜೆಯ ತನಕ ಮಲ್ಲಿಕಾಳ ಸೇವೆಯಲ್ಲಿ ಮುಳುಗಿರುತ್ತಿದ್ದನು. ಒಂದು ದಿನ ಮಧ್ಯಾಹ್ನ, ಸದ್ದಿಲ್ಲದೆ ಇವನು ಏನು ಮಾಡುತ್ತಿರಬಹುದೆಂಬ ಕುತೂಹಲದಿಂದ ಮೆಲ್ಲನೆ ಏಣಿ ಹತ್ತಿ ತಾರಸಿಯ ಮೇಲಕ್ಕೆ ಕಣ್ಣು ಹಾಯಿಸಿದೆ. ಅಲ್ಲಿ ಕಂಡ ದೃಶ್ಯ ನನ್ನನ್ನು ಚಕಿತಗೊಳಿಸಿತು. ದೇಮಾ ತಾನು ಉಟ್ಟಿದ್ದ ಬಿಳಿಯ ಪಂಚೆಯಿಂದ ಒಂದೊಂದೇ ಮಾವಿನ ಎಲೆಗಳನ್ನು ಒರೆಸುತ್ತ ನೇವರಿಸುತ್ತಿದ್ದನು! ‘ಏನಪ್ಪಾ ಆ ಗಿಡಗಳನ್ನು ಬೆಳೆಯಗೊಡಿಸುತ್ತೀಯೋ ಇಲ್ಲೋ?’ ಎಂದೆ. ಹುಸಿನಗೆಯೊಂದಿಗೆ- ‘ಈ ಗಿಡಗಳು ತುಂಬಾ ಸೂಕ್ಷ್ಮವಂತೆ, ಇದಕ್ಕೆ ಹೆಚ್ಚು ಬಿಸಿಲು ಇರಬಾರದಂತೆ… ನೀರನ್ನು ಕೂಡ ಹಿತಮಿತವಾಗಿ ಹಾಕಬೇಕು’ ಎಂದನು. `ಯಾವುದೇ ಗಿಡವನ್ನು ನೆಟ್ಟು ಕೆಮ್ಮಣ್ಣು ಗೊಬ್ಬರ ಹಾಕಿ ನೀರುಣಿಸಿದರೆ ಸಾಕು, ಇದಕ್ಕೆ ಇಷ್ಟೆಲ್ಲ ಕೇರ್ಜ್ಗವಾಗಿ ನೋಡಿಕೋಬೇಕಾ? ಇದ್ಯಾವ್ ಸೀಮೆ ಮಾವು ಹಾಗಾದರೆ?’ ಎಂದು ರಾಗ ಎಳೆದೆ. ಊಂ…ಊಂ… ನಾನ್ಹಿಂಗೆ ನೋಡ್ಕೊಳ್ಳದಿದ್ದರೆ ಸೊರಗೋಗ್ತಾವೆ ಅಂದನು. ‘ಶಭಾಸ್! ಹೊತ್ತಾರೆಯಿಂದ ಸಂಜೆಗಂಟ ಬಾಣಂತಿಯರನ್ನು ನೋಡಿಕೊಳ್ಳುವಂತೆ ನೋಡ್ಕೊತಾ ಇದ್ದೀಯ’ ಎಂದು ನಗೆ ಚಟಾಕಿ ಹಾರಿಸಿದೆ. ಹೀಗೆ ಕೆಲ ತಿಂಗಳುಗಳ ಕಾಲ ಮಲ್ಲಿಕಾಳ ಬಾಣಂತನವಾಯ್ತು. ಆ ನಂತರ ಬಹಳ ಜೋಪಾನವಾಗಿ ಬನವಾಸಿಗೆ ಒಯ್ದು ನೆಡೆಸಿದನು. ಗಿಡಗಳನ್ನು ನೆಟ್ಟ ನಂತರದ ಇವನ ಕಾಳಜಿ ಇನ್ನೂ ಹೆಚ್ಚಾಗಿ, ಒಂದೆರಡು ಗಿಡಗಳು ಹರೋಹರವಾದಾಗ, ಎರಡು ಮಲ್ಲಿಕಾ ಸೊತ್ತೋದೊ ಎಂದು ಮುಖ ಬಾಡಿಸಿಕೊಂಡಿದ್ದನು.
ಮಲ್ಲಿಕಾ ಮೂರು ವರುಷ ತುಂಬಿದ ಕೂಡಲೆ ಅರ್ಧ ಮುಕ್ಕಾಲು ಕೆ.ಜಿ. ತೂಗುವ ಹಣ್ಣುಗಳನ್ನು ಬಿಟ್ಟು ನಮ್ಮನ್ನು ಬೆರಗುಗೊಳಿಸಿದಳು, ಸೊಗಸಿನ ಹಣ್ಣುಗಳು ಮನೆಗೆ ಬಂದ ಸಂತೋಷಕ್ಕೆ ನಮ್ಮ ನೆಂಟರಿಷ್ಟರ ಮನೆಗಳಿಗೆ ಮಲ್ಲಿಕಾಳನ್ನು ಕೊಟ್ಟೆವು. ಕೆಲವರು ಇನ್ನೂ ಪಕ್ವವಾಗದಿರುವಾಗ ಕುಯ್ದು ಅದರ ಹುಳಿಗೆ ತಿನ್ನಲಾಗದೆ ಎಸೆದದ್ದನ್ನು ತಿಳಿಸಿದರು. ಈ ಕಾರಣಕ್ಕೆ ಚೆನ್ನಾಗಿ ಹಣ್ಣಾದ ಮೇಲೆಯೇ ಕೊಡತೊಡಗಿದೆವು. ಅದರ ರುಚಿ, ಅದರ ಗಾತ್ರ ಸಕತ್ ಸುದ್ದಿ ಮಾಡಿತು. ‘ಮೇಡಂ ಇದ್ಯಾವ ಜಾತಿಯ ಮಾವು. ಇದುವರೆಗೂ ನಾನು ತಿಂದೇ ಇಲ್ಲ, ಏನ್ ರುಚಿಯಾಗಿದೆ ಅಂತೀರೀ… ನಾವು ಸಿಪ್ಪೆ ಸಮೇತ ತಿಂದ್ಕಂಡೊ’ ಎಂದವರೆಷ್ಟೋ! ಅಮ್ಮನಿಗೆ ಬೇರೆ ಜಾತಿಯ ಮಾವನ್ನು ತಿಂದರೆ ಹೊಟ್ಟೆ ಕೆಡುತ್ತಿತ್ತು. ಆದರೆ ಮಲ್ಲಿಕಾ ತಿಂದರೆ ಏನೂ ತೊಂದರೆ ಬರುತ್ತಿರಲಿಲ್ಲ. “ನನ್ನಳಿಮಯ್ಯ ಅದೇನ್ ಚೆಂದಾಗಿ ಬೆಳೆದವ್ರ ತಾಯಿ” ಎಂದು ಪ್ರತಿವರ್ಷ ಬಾಯಿ ಚಪ್ಪರಿಸುತ್ತಾ ಮೆಚ್ಚಿಕೆಯಾಡುತ್ತಿದ್ದರು. ‘ನನ್ನಳಿಯನಿಗೆ ಗೊಬ್ಬರಗಾಲು ತಾಯಿ… ಅದಿಕ್ಕೇನೆ ಭೂಮ್ ತಾಯಿ ಒಲೀತಾಳೆ!’ ಎಂದು ಅಳಿಯನ ಬಗ್ಗೆ ಬೆರೆದಿದ್ದೇ ಬೆರೆದಿದ್ದು. ಆದರೆ ದೇಮಾನಿಗಿರುವ ಒಂದೇಒಂದು ಕೊರಗೆಂದರೆ, ನಾನು ಇಂದಿಗೂ ಮಲ್ಲಿಕಾಳಿಗಿಂತ ರಸಪುರಿಯ ಭಕ್ತೆ ಎಂಬುದಾಗಿದೆ. I can’t help it!!
ಯಾಕೆಂದರೆ ಮಾವಿನ ಹಣ್ಣು ಎಂದ ಕೂಡಲೇ ನನಗೆ ಥಟ್ಟನೆ ನೆನಪಾಗುವುದು ರಸಪುರಿ. 1953-54ರಲ್ಲಿ ಅಪ್ಪ ಮಂಡ್ಯ ರೈಲ್ವೆ ಸ್ಟೇಷನ್ ಮಾಸ್ಟರ್ ಆಗಿದ್ದಾಗ ಮಾವಿನ ಹಣ್ಣಿನ ಕಾಲದಲ್ಲಿ ರಸಪುರಿಯನ್ನು ಬೆಳೆದ ರೈತರು ಬೇರೆ ಊರುಗಳಿಗೆ ಗೂಡ್ಸ್ ಗಾಡಿಯ ಮೂಲಕ ದಿನನಿತ್ಯ ನೂರಾರು ಬುಟ್ಟಿ ಮಾವನ್ನು ಕಳುಹಿಸುತ್ತಿದ್ದರು. ಆಗ ಅಪ್ಪನಿಗೂ ಒಂದೊಂದು ಮಾವು ತುಂಬಿದ ಬುಟ್ಟಿಯನ್ನು ಕೊಡುತ್ತಿದ್ದರು. ಅವುಗಳು ಹಣ್ಣಾಗಲೆಂದು ಬಿದಿರುಬುಟ್ಟಿಯಲ್ಲಿ ನೆಲ್ಲುಲ್ಲಿನ ಕಾವಿಗೆ ಇಟ್ಟಿರುತ್ತಿದ್ದರು. ಮಕ್ಕಳಾದ ನಮಗೆ ರಸಪುರಿ ತಿನ್ನುವ ಆಸೆಯನ್ನು ತಡೆಯಲಾರದೆ ದಿನಾ ಸಂಜೆ ಸ್ಕೂಲಿಂದ ಬಂದ ಕೂಡ್ಲೆ ಮಾವಿನ ಬುಟ್ಟಿಯನ್ನು ತೆಗೆದುನೋಡುತ್ತಿದ್ದೆವು. ಕೆಲವು ಸಲ ಅವು ಬೇಗ ಹಣ್ಣಾಗುತ್ತಿರಲಿಲ್ಲ. ಇನ್ನೂ ಎಷ್ಟು ದಿನ ಬೇಕು ಹಣ್ಣಾಗಲು ಎಂದು ಅಪ್ಪನನ್ನು ಪೀಡಿಸುತ್ತಿದ್ದೆವು. ಪದೇಪದೇ ಬುಟ್ಟಿ ಬಿಚ್ಚಿ ಗಾಳಿಯಾಡುವಂತಾದರೆ ಅವು ಬೇಗ ಹಣ್ಣಾಗುವುದಿಲ್ಲ ಎಂದು ಅಮ್ಮ ರೇಗುತ್ತಿದ್ದರು. ಆದರೂ ನಮ್ಮ ಚಪಲಕ್ಕೆ ಬೇರೆ ಮದ್ದಿರಲಿಲ್ಲವಾಗಿ, ಒಂದು ದಿನ ಅಮ್ಮನಿಗೆ ತಿಳಿಯದಂತೆ ನಾನು ಮತ್ತು ಅಣ್ಣ ಸೇರಿ ಒಂದು ದೊಡ್ಡ ದೋರುಗಾಯಿ ರಸಪುರಿಯನ್ನು ಕುಯ್ದು ಇಬ್ಬರೂ ಒಂದೊಂದು ಚೂರು ಬಾಯಿಗಿಟ್ಟರೆ ಅಯ್ಯಯ್ಯಮ್ಮೋ… ಭಯಂಕರ ಹುಳಿ. ಹಣ್ಣಾದಾಗ ಅಷ್ಟೊಂದು ಸಿಹಿಯಾದ ರಸಪುರಿಯು ದೋರುಗಾಯಿಯಲ್ಲಿ ಇಷ್ಟೊಂದು ಹುಳಿ ಪಂಚೇರ್ ಎಂದು ಊಹಿಸಿರಲಿಲ್ಲ. ಅಂದಿನಿಂದ ಅಮ್ಮನೇ ನಮಗೆ ಹಣ್ಣಾದ ರಸಪುರಿಯನ್ನು ಪರೀಕ್ಷಿಸಿ ತಿನ್ನಲು ಕೊಡುತ್ತಿದ್ದರು. ಆ ತಾಜಾ ರಸಪುರಿ ಮಾವಿನ ರುಚಿಯು ನನ್ನ ನಾಲಿಗೆಯಲ್ಲಿ ಕೂತಿರುವಾಗ ಆಮೇಲೆ ಬಂದ ಮಲ್ಲಿಕಾಳಿಗೆ ಎರಡನೆಯ ಸ್ಥಾನ ತಾನೆ?
ಇವೆಲ್ಲಾ ಇರಲಿ, ನಮ್ಮ ತಾಯಿ ಹೇಳಿದ ಮಾತು- ‘ನನ್ನಳಿಯನಿಗೆ ಭೂಮ್ ತಾಯಿ ಒಲೀತಾಳೆ!’ ಇದು ನಿಜ ಅನಿಸುತ್ತದೆ. ನಮ್ಮ ಭೂಮಿಯಲ್ಲಿ ಏನೇ ಬೆಳೆದರೂ (ಮೂಲಂಗಿ ಹೊರತು ಪಡಿಸಿ!) ಅದಕ್ಕೊಂದು ವಿಶೇಷ ರುಚಿ ಇದ್ದೇ ಇರುತ್ತದೆ.