“ದೇಮಾನಂತೆ….”

(ಪ್ರೊ.ಕೆ.ಸುಮಿತ್ರಾಬಾಯಿಯವರ ಬಾಳ ಕಥನ “ಸೂಲಾಡಿ ಬಂದೋ ತಿರುತಿರುಗೀ” ಕೃತಿಯು, 2018ರಲ್ಲಿ ಮೈಸೂರಿನ ಅಭಿರುಚಿ ಪ್ರಕಾಶನದಿಂದ ಮುದ್ರಣಗೊಂಡಿದ್ದು, ಅದರಲ್ಲಿಯ “ನಮ್ಮತ್ತೆ ಮಾವರ ಸೊಮ್ಮು” ಎಂಬ ಅಧ್ಯಾಯದಿಂದ ಆಯ್ದ ಬರಹ ನಮ್ಮ ಓದಿಗಾಗಿ…)
ನಾನು ದೇಮಾನನ್ನು ಏಕವಚನದಲ್ಲಿ ಕರೆಯತೊಡಗಿದಾಗ ನನ್ನ ಅನೇಕ ಗೆಳತಿಯರು, ನೆಂಟರಿಷ್ಟರು, ತೌರುಮನೆಯವರು ಆಕ್ಷೇಪಾರ್ಹವಾಗಿ ಕಾಮೆಂಟು ಮಾಡಿದ್ದಿದೆ.
“ಅಲ್ಲಾ ಮೇಡಂ ನೀವೇ ನಿಮ್ಮ ಗಂಡಂಗೆ ಮರ್ಯಾದೆ ಕೊಡದಿದ್ದರೆ ಬೇರೆಯವರ ದೃಷ್ಠಿಯಲ್ಲಿ ಅವರೇನಾಗಬೇಡ?” ಎಂದು ವೈಚಾರಿಕವಾಗಿ ಮಾತನಾಡುವ ಸ್ನೇಹಿತೆಯೊಬ್ಬಳು ನೇರವಾಗಿ ಕೇಳಿದ್ದಳು.
ಜೊತೆಗೆ ಗಂಡನ ಕಡೆಯವರಿಗೆ ನನ್ನ ಈ ಏಕವಚನದ ಸಂಬೋಧನೆ ಸಿಟ್ಟು ಬರಿಸಿ ನನ್ನ ಬಗ್ಗೆ ಕೇವಲವಾಗಿ ಎಲೆ-ಅಡಿಕೆ ಜಗಿಯುವಂತೆ ಬಾಯಾಡಿಸಿದವರೆಷ್ಟೋ.
ದೇಮಾನ ಸೋದರರು ತಮ್ಮ ಪತ್ನಿಯರನ್ನು ನನ್ನೊಟ್ಟಿಗೆ ಬೆರೆಯದಂತೆ ಎಚ್ಚರಿಕೆ ವಹಿಸುತ್ತಿದ್ದರು.
ಅಷ್ಟೇಕೆ, ನನ್ನ ಒಡಹುಟ್ಟಿದ ಸೋದರರು ಹಾಗೂ ಸಹೋದರಿಯರ ಗಂಡಂದಿರದೂ ಕೂಡ ಇದೇ ನೀತಿಯಾಗಿತ್ತು.
ಅವರವರ ಹೆಂಡತಿಯರು ನನ್ನ ಸ್ವಭಾವವನ್ನು ಅಳವಡಿಸಿ ಕೊಂಡರೇನು ಗತಿ ಎಂಬ ಗಾಬರಿ!
ಸಖತ್ ಬುದ್ದಿವಂತರೂ, ವೈಚಾರಿಕವಾಗಿ ಬೆಳೆದವರೂ ಜೊತೆಗೆ ಕಿಲಾಡಿಗಳು.
ಆದರೂ ದೇಮಾನಂತೆ ಸಮಾನತಾ ಮನೋಭೂಮಿಕೆಯಲ್ಲಿ ಹೆಣ್ಣು-ಗಂಡಿನ ಸಂಬಂಧಗಳನ್ನು ಸ್ವೀಕರಿಸುವ ಬೌದ್ಧಿಕ ಮಟ್ಟ, ಅಂತಃಕರಣ ಅವರಲ್ಲಿ ವಸಿ ದೊಸಿಕಂಡಿರುವುದು ನಿಜ.